31 ಡಿಸೆಂಬರ್ 2023

ಈ ವರ್ಷ ಮುಗಿದೇ ಬಿಟ್ಟಿತು.....!, 2023 ಕಲಿಸಿದ ಬದುಕಿನ ಪಾಠ....!



ನನಗಂತೂ 2023 ಬದುಕಿನ ಪಾಠ ಕಲಿಸಿದ ವರ್ಷ. ಅಪ್ಪನೂ-ಅಮ್ಮನೂ ಇಲ್ಲದ ಈ ವರ್ಷ. 2018 ರಿಂದ ಅಪ್ಪನಿಲ್ಲದಿದ್ದರೂ ಕಳೆದ ವರ್ಷದವರೆಗೆ ಅಮ್ಮ ಇದ್ದರು. ಮೊನ್ನೆ ಮೊನ್ನೆಯವರೆಗೆ ಅಮ್ಮನಿಲ್ಲದಿದ್ದರೂ ಪ್ರತೀ ತಿಂಗಳು ಅಮ್ಮನ ನೆನಪು. ಆ ನಂತರ ವರ್ಷದ ಕಾರ್ಯಕ್ರಮ. ಹೀಗಾಗಿ ಅಮ್ಮ ಜೊತೆಗೇ ಇದ್ದಾರೆ ಅನಿಸುತ್ತಿತ್ತು. ಆ ಬಳಿಕ ಅಮ್ಮನಿಲ್ಲದ ದಿನಗಳು... ನೆನಪಾಗುವ ದಿನಗಳು... ಈ ಇಡೀ ವರ್ಷ ಅಮ್ಮನೇ ಹೇಳಿದ, ಅಪ್ಪ ಹೇಳುತ್ತಿದ್ದ ಮಾತುಗಳು ಪ್ರಾಕ್ಟಿಕಲ್‌ ಬದುಕಿಗೆ ಪಾಠವಾಯಿತು. ಅಂದು ಅಪ್ಪ ಹೇಳುತ್ತಿದ್ದಾಗ, ಅಮ್ಮ ಎಚ್ಚರಿಸುತ್ತಿದ್ದಾಗ, ಅದೆಲ್ಲಾ ಸುಮ್ಮನೆ ಹಾಗಿಲ್ಲ... ಎಂದು ಹೇಳುತ್ತಿದ್ದ ದಿನಗಳು ಗಟ್ಟಿಯಾಗಿ ನೆನಪಾದ್ದು ಈ ವರ್ಷ. ಅಪ್ಪ ಯಾಕೆ ಹಾಗಿದ್ದರು ಎಂದು ಅರ್ಥವಾದ ವರ್ಷ. ಬದುಕಿನ ಪಾಠಗಳು ಹಾಗೇ...  ತಡವಾಗಿಯೇ ಅರ್ಥವಾಗುತ್ತದೆ.  ಈಗ ನಾನೂ ಅಪ್ಪನಾಗಿ ಮಕ್ಕಳಿಗೆ ಅದನ್ನೇ ಹೇಳುವಾಗಲೂ, ಪ್ರತಿಕ್ರಿಯೆ ಬರುವಾಗಲೂ ನನ್ನ ಬಾಲ್ಯ,ಯೌವನ ನೆನಪಾಗುತ್ತದೆ.... 

ಎರಡು ವರ್ಷದಿಂದ ಆರ್ಥಿಕವಾಗಿಯೂ ಸವಾಲಿನ ವರ್ಷ. ಅಮ್ಮನ ಚಿಕಿತ್ಸೆ, ಅಮ್ಮನ ಸೇವಾ ಕಾರ್ಯ. ಆ ಬಳಿಕ ಅಮ್ಮ ಇಲ್ಲವಾದ ನಂತರದ ಇಡೀ ವರ್ಷದ ಕಾರ್ಯ.ವರ್ಷದ ಕಾರ್ಯ. ಈ ನಡುವೆ ಕೃಷಿ ಕಾರ್ಯದಲ್ಲಿ ಹವಾಮಾನದ ಕಾರಣದಿಂದ ಕಳೆದ ವರ್ಷ ಅಡಿಕೆ ಬೆಳೆಗೂ ಹಾನಿ. ಈ ನಡುವೆ ಕೆಲವು ಆರ್ಥಿಕ ಒತ್ತಡಗಳು, ಕೆಲವು ಹಳೆ ಬಾಕಿಗಳು, ಮಕ್ಕಳಿಗೆ ಅಗತ್ಯಕ್ಕೆ ಬೇಕಾದ ವಸ್ತುಗಳು, ಬೇಕೋ ಬೇಡದೆಯೋ ಕೆಲವು ಕಾರ್ಯಗಳು, ಖರೀದಿಗಳು, ಮಕ್ಕಳ ಖುಷಿಯನ್ನೂ ಕಡಿಮೆ ಮಾಡುವುದು ಹೇಗೆ.... !,  ಕೃಷಿ ಕಾರ್ಯದ ಕೆಲಸ,  ಹಾಗಿದ್ದರೂ ಇಡೀ ವರ್ಷ ಹೇಗೆ ನಿಭಾಯಿಸಿದ್ದೋ..! ಗೊತ್ತಿಲ್ಲ. ಈ ವರ್ಷದ ಕೊನೆಗೆ ಆರ್ಥಿಕವಾಗಿ ಹರಸಾಹಸ ಪಡಬೇಕಾದೀತೋ ಏನೋ ಅಂತ ಅಂದು ಭಯವಾಗಿತ್ತು. ಆದರೆ ಈ ವರ್ಷದ ಕೊನೆಯ ದಿನದವರೆಗೂ ಅಡಿಕೆ ಉಳಿದುಕೊಂಡಿದೆ. ಹೊಸ ಅಡಿಕೆ ಯಾವಾಗ ಒಣಗುತ್ತದೋ ಎಂದು ಕಾಯಬೇಕಾಗಿ ಬರಲಿಲ್ಲ.... ಮೊನ್ನೆ ಅನಿಸಿತು, ಪಿತೃ ಕಾರ್ಯ ಹಾಗೂ ದೇವಕಾರ್ಯಗಳು ಬಹುಶ: ಬಲ ನೀಡಿತು ಅಂತ ಅನಿಸಿತು. ಬೇರೆ ಯಾವ ಶಕ್ತಿಯೂ ನನ್ನ ಜೊತೆ ಈ ವರ್ಷ ಇರಲಿಲ್ಲ...

ಈ ನಡುವೆ ಕೆಲವು ಸಮಯದ ಹಿಂದೆ , ಯಾವ ಕಾರಣವೂ ಇಲ್ಲದೆ ವಿಷಾದ ತುಂಬಿ ಹೋಯ್ತು. ಅನೇಕ ಬಾರಿ ಬಾತ್‌ರೂಂ ವಿಷಾದವನ್ನು ಕಳೆಯಲು ಒಳ್ಳೆಯ ಗೆಳೆಯನಾಗಿತ್ತು. ಮನೆಯ ಮುಖ್ಯಸ್ಥನೇ ವಿಷಾದ ತುಂಬಿದರೆ ಹೇಗೆ ಅಂತ ಆಗಾಗ ಅನಿಸುತ್ತಿತ್ತು. ನನಗೆ  ಆಪ್ತರಾದ ಒಂದಿಬ್ಬರು ಇದ್ದಾರೆ. ಅವರ ಜೊತೆ ಆಗಾಗ ಅನೇಕ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದೆ... ಅವರು ಯಾವತ್ತೂ ಮನಸ್ಸಿನಲ್ಲಿ ಕೆಟ್ಟದ್ದು ಯೋಚನೆ ಮಾಡದೇ ನೀಡುವ ಒಳ್ಳೆಯ ಸಲಹೆ... ಆಗಾಗ ರೀಫ್ರೆಶ್‌ ಮಾಡುತ್ತಿತ್ತು. ಅದಾದ ಬಳಿಕ ಈಚೆಗೆ ಮಕ್ಕಳ ಶಾಲೆಗೆ ಹೋಗಿದ್ದಾಗ ಭಗವದ್ಗೀತೆಯ ಬಗ್ಗೆ ಡಾ.ಶ್ರೀಶಕುಮಾರ್‌ ಮಾತನಾಡಿದ್ದರು. ಭಗವದ್ಗೀತೆಯ ಸಾರವು ಮತ್ತೆ ಮನಸ್ಸನ್ನು ರೀಫ್ರೆಶ್‌ ಮಾಡಿತು. ವಿಷಾದ ಭಾವದಿಂದ ಹೊರಬರುವಂತೆ ಮಾಡಿತು. ಅದರ ಜೊತೆಗೇ ಒಂದಷ್ಟು ಗೆಳೆಯರೂ ಸಕಾರಾತ್ಮಕವಾಗಿ ಮಾತನಾಡಿದರು. ಮೆಟ್ಟಿಲಾಗುವುದು ಯಾವತ್ತೂ ಒಳ್ಳೆಯದೇ, ಹಾಗೆಂದು ಯಾವತ್ತೂ ಮೆಟ್ಟಿಲಾಗಬಾರದು.! ಎನ್ನುವುದೂ ಈ ವರ್ಷ ಕಲಿತ ಬಹುಮುಖ್ಯ ಪಾಠ. 

ಅನೇಕರನ್ನು ಎತ್ತಿ ಹಿಡಿದದ್ದು ಇದೆ, ಅವರ ಒಳ್ಳೆಯ ತನ ನೋಡಿ ಎತ್ತಿ ಹಿಡಿದದ್ದು ಇದೆ. ಅವರ ರಕ್ಷಣೆ ಮಾಡಿದ್ದು ಇದೆ. ಅಂದರೆ ಅವರ ಏಳಿಗೆಗೆ ಮೆಟ್ಟಿಲಾದ್ದು ಇದೆ. ಆದರೆ ಕೊನೆಗೆ ಅವರೇ "ಬತ್ತಿ" ಇರಿಸಿದ್ದು ಬಹುದೊಡ್ಡ ತಿರುವು ಈ ವರ್ಷದ್ದು. ಯಾವ ಕಾರ್ಯವೂ ತಿಳಿದವನಿಗೆ ಇಡೀ ಪಾಠ ಮಾಡಿ ಕೊನೆಗೇ ತಿರುಗು ಬಾಣವಾದ್ದು ಈ ವರ್ಷದ ಇನ್ನೊಂದು ಪಾಠ.

ಯಾರೋ ಕೆಲವರು ಅವರಿಗೆ ಬೇಕಾದ ಹಾಗೆ ಬಳಸಿಕೊಂಡದ್ದು ಇನ್ನೊಂದು. ನಂಬಿ ಕೆಡುವುದು ಹೇಗೆ ಎಂದು ಈ ವರ್ಷ ತಿಳಿಯಿತು...!.  ನಾನು ಬರೆಯಬೇಕು ಎಂದು ಅಂದುಕೊಂಡೆ, ಆದರೆ ಬರೆಯಲಿಲ್ಲ, ಡಿಲೀಟು ಮಾಡಿದೆ, ಯಾಕೆ ಸುಮ್ಮನೆ ನಿಷ್ಟೂರು..!. ನೀನು ಬರೆದಿದ್ದು ಒಳ್ಳೆಯದೇ, ಮಾತನಾಡಿದ್ದು ಸೂಪರ್‌  ಅಂತ ಹೇಳಿದವರು ಹಲವರು....! ಆದರೆ ಅದೇ ವಿರೋಧ ಅಂತ ಆದಾಗ, ವಾಸ್ತವ ವಿಷಯ ಅದು ಅಂತ ತಿಳಿದರೂ ಆ ಕಡೆಯಲ್ಲಿ ಹೋಗಿ "ಅವ ಸರಿ ಇಲ್ಲ.."  ಎಂದದ್ದದೂ ತಿಳಿದುಕೊಂಡದ್ದು ಇನ್ನೊಂದು ಬಹುಮುಖ್ಯ ಪಾಠ..!. 

ಬದುಕು ಎಂದರೆ ಹಾಗೇ ಅಲ್ಲವೇ, ಅನೇಕರು ಮಾತನಾಡುತ್ತಾ ಸಲಹೆ ಕೇಳುತ್ತಾರೆ, ಪ್ರಾಮಾಣಿಕವಾದ, ಯಾವ ಕಲ್ಮಶವೂ ಇಲ್ಲದ ಸಲಹೆಗಳೇ ವಿರೋಧ ಅಂತ ಆಗಿ ಬಿಟ್ಟಿತು...!. ಅಂದರೆ ಈ ಸಲಹೆಯೇ ಮತ್ಸರದ ಸಲಹೆ ಅಂತ ಅನಿಸಿ ಬಿಟ್ಟದ್ದು ಈಗಲೂ ಸಹಿಸಿಕೊಳ್ಳಲಾಗದ ನೋವು.  ಆ ದಿನದಿಂದಲೇ ಸಲಹೆಯನ್ನೇ ನಿಲ್ಲಿಸಿ ಬಿಡುವುದು ಮಾತ್ರವಲ್ಲ ಕೇಳಿದರೂ ಮೌನವೇ  ಉತ್ತರ ಅಥವಾ ಹೆಚ್ಚಿನ ಮಾಹಿತಿ ಇಲ್ಲ ಅಂತಲೇ ಹೇಳಿಬಿಡುವುದು ಕ್ಷೇಮ ಅಂತ ಈ ವರ್ಷದ ಅನಿಸಿ ಬಿಟ್ಟಿದೆ. ಈ ವಿಷಾದದ ವೇಳೆ ಮಾತೊಂದು ಮತ್ತೆ ನನಗೆ ಸ್ಫೂರ್ತಿ ನೀಡಿತು, "ಮರದ ಹುಳ ಮರವನ್ನೇ ತಿನ್ನುವುದು", ಹಾಗಾಗಿ ಪ್ರಾಮಾಣಿಕವಾದ, ಯಾವ ಮತ್ಸರವೂ ಇಲ್ಲದೆ ನೀಡಿದ ಸಲಹೆ ಆದ್ದರಿಂದ ಯಾವ ವಿಷಾದವೂ ಬೇಕಿಲ್ಲ. 

ಪೂಜೆ ಮಾಡುವುದೇ ಹೃದಯದಿಂದ ದೇವರನ್ನು ತಂದು. ಅಂದರೆ ಆತ್ಮದ ಪರಿಶುದ್ಧತೆಯೇ ಪೂಜೆ. ಮನಸ್ಸು, ಆತ್ಮದ ಪರಿಶುದ್ಧತೆ ಇದ್ದರೆ, ಈ ಕಾಲದಲ್ಲಿ ಯಾವ ಪೂಜೆಯೂ ಬೇಕಾಗಿಲ್ಲ. ಹಾಗಾಗಿಯೇ ಇನ್ನೊಬ್ಬರ ಅವನತಿ ಬಯಸಿದರೆ "ಮರದ ಹುಳ ಮರವನ್ನೇ ತಿನ್ನುವುದು" ಎಂದು ಓದಿದ ಮಾತುಗಳು ಮತ್ತೆ ಮತ್ತೆ ಸಮಾಧಾನ ಪಡಿಸಿತು. ಆದರೆ ಬದುಕಿಗೆ ಎಚ್ಚರಿಕೆ ನೀಡಿದ ಪಾಠ ಎಂದರೆ , ಯಾವತ್ತೂ  ಸಲಹೆ ನೀಡಬೇಕಾದ್ದು ನಿನ್ನ ಅರಿತವರಿಗೆ ಮಾತ್ರಾ...!

ಕೃಷಿಯಲ್ಲಿ ಸೋಲು ಗೆಲುವುಗಿಂತಲೂ ಮುಖ್ಯ ಪ್ರಯತ್ನ. ಅಪ್ಪ ಯಾವತ್ತೂ ಕೃಷಿಯಲ್ಲಿ ಪ್ರಯತ್ನ ಮಾಡುತ್ತಲೇ ಇದ್ದರು. ಯಾವತ್ತೂ ಕುಗ್ಗಿರಲಿಲ್ಲ. ಹೊಸತು ... ಹೊಸತು. ಹಾಗಾಗಿ ಕೃಷಿ ಯಾವತ್ತೂ ಸೋಲಲು ಬಿಡಲಿಲ್ಲ.ಈಗಲೂ ಕೂಡಾ.... 

ನನಗೂ ನೆನಪಿತ್ತು... ಮೊನ್ನೆ ನಮ್ಮ ಮನೆಯ ಮಿತ್ರ ಹೇಳುತ್ತಿದ್ದರು, ಅಂದೆಲ್ಲಾ ನವೆಂಬರ್‌ ತಿಂಗಳಲ್ಲ್ಲಿ ಬಿದ್ದ ಅಡಿಕೆಯನ್ನು ಗೂಡಲ್ಲಿ ಹಾಕಿ ಒಣಗಲು ಹಾಕಿ, ಒಣಗಿಸಿ ಡಿಸೆಂಬರ್‌ ಮೊದಲ ವಾರದಿಂದಲೇ ಮಾರಾಟ ಮಾಡಬೇಕಿತ್ತು. ಅಂದರೆ ಊಟಕ್ಕೆ, ಕೃಷಿ ಕಾರ್ಯಕ್ಕೆ ಹಣ ಬೇಕಾಗಿತ್ತು. ಈಚೆಗೆ ಎರಡು ವರ್ಷದ ನಿರಂತರ ಪ್ರಯತ್ನದ ನಡುವೆಯೂ ಈ ವರ್ಷದ ಕೊನೆಗೂ ಆರ್ಥಿಕ ಪರಿಸ್ಥಿತಿ ಕೈಕೊಡಬಹುದೇ ಅಂತ ಅಂದುಕೊಂಡಿದ್ದೆ, ಆದರೆ ಹಾಗೆ ಆಗಲಿಲ್ಲ. 

ಅಪ್ಪ‌ ಪಟ್ಟ ಶ್ರಮ, ಅಮ್ಮ ಪಟ್ಟ ಶ್ರಮ ನೆನಪಿತ್ತು, ಸ್ವಲ್ಪ ಎಚ್ಚರ ವಹಿಸಿಕೊಂಡೆ. ಈ ವರ್ಷ ಅದುವೇ ಪಾಠ ಆಯ್ತು. ಅಮ್ಮ ಹೇಳುತ್ತಿದ್ದ ಮಾತು ನೆನಪಾಯ್ತು, ಪೇಟೆಯಲ್ಲಿ ಎಲ್ಲವೂ ಬೇಕಾದ್ದೇ, ಆದರೆ ನಮಗೆ ಯಾವುದು ಅಗತ್ಯ, ಅತೀ ಅಗತ್ಯ ಅದನ್ನು ಮಾತ್ರಾ ಖರೀದಿ ಮಾಡು ಎಂದ ಮಾತು ನೆನಪಾಯ್ತು. ಅಪ್ಪ ಬರೆಯುತ್ತಿದ್ದ ಲೆಕ್ಕದ ಪುಸ್ತಕ ಈಚೆಗೆ ಸಿಕ್ಕಿತು. ಅದರಿಂದ ಲೆಕ್ಕದ ಶಿಸ್ತು ಸಿಕ್ಕಿತು. ಒಂದು ರೂಪಾಯಿ ಖರ್ಚಾದರು ಅದು ಯಾವುದಕ್ಕೆ ಖರ್ಚಾಯಿತು ಎಂಬ ಲೆಕ್ಕ ನನಗೂ ಎಚ್ಚರಿಸಿತು.. ಇದಕ್ಕಾಗಿಯೇ ಈ ವರ್ಷ ಬದುಕಿನ  ಲೆಕ್ಕದ ಪಾಠದ ವರ್ಷ.

ಇಷ್ಟೂ ವರ್ಷ ಒಂದು ಉದ್ದೇಶ, ಒಂದು ಸಿದ್ದಾಂತ ಅಂತ ಓಡಾಡಿದ್ದು ಹೌದು. ಹೀಗೇ ಓಡಾಡುತ್ತಿದ್ದಾಗ ಅಪ್ಪ ಅಂದೇ ಎಚ್ಚರಿಸಿದ್ದು..!. ಆದರೂ ಓಡಾಡಿದ್ದೂ ಸತ್ಯ.  ಸಿದ್ದಾಂತದ ಕಾರಣಕ್ಕೆ ಕೆಲವೊಂದು ಅವಕಾಶ ತಪ್ಪಿದ್ದು ಹೌದು. ಕೆಲವು ಕಾರಣಗಳು , ನನ್ನದೇ ಆದ ನಿಲುವುಗಳು ನನಗೆ ಕೈಕೊಟ್ಟದ್ದು ಹೌದು. ನಾನು ಕಲಿತಿರುವ ಮೂಲ ಸಂಗತಿಗಳನ್ನು ತಪ್ಪಿ ಎಂದೂ ನಡೆದಿಲ್ಲ ಎನ್ನುವ ಸಮಾಧಾನ ಇದೆ. ಈ ಖುಷಿಯೇ ಮತ್ತೆ ಮತ್ತೆ ಕೆಲಸ ಮಾಡುವಂತೆ ಪ್ರೇರೇಪಣೆ ನೀಡುತ್ತದೆ. ನಾವು ಕಾಲಕ್ಕೆ ತಕ್ಕ ಹಾಗೆ ಅಪ್ಡೇಡ್‌ ಆಗಬೇಕು ಎನ್ನುವ ಪಾಠ ಸರಿಯಾದ್ದು. 

ಅಪ್ಪ ಅಮ್ಮ ಇಲ್ಲದ ಮೇಲೆ ಅವರ ಕನಸುಗಳನ್ನು ಬೆಳೆಸಬೇಕು, ಅದೂ ಸಕಾರಾತ್ಮಕವಾಗಿ. ಅಪ್ಪ ಬಹಳಷ್ಟು ಸಿಟ್ಟಾಗುತ್ತಿದ್ದರು, ಅಮ್ಮ ಬಹಳಷ್ಟು ಸಮಾಧಾನ ಮಾಡುತ್ತಿದ್ದರು. ಅಪ್ಪ ಯಾಕೆ ವಿಪರೀತ ಸಿಟ್ಟಾಗುತ್ತಿದ್ದರು ಅಂತ ಈಗ ಅರಿವಾಗಿದೆ. ಅಮ್ಮ ಯಾಕೆ ಸಮಾಧಾನ ಆಗಿದ್ದರು ಎಂದು  ಅರಿವಾಗಿದೆ. ಅಪ್ಪ ಹೇಳಿದ ಮಾತುಗಳನ್ನು ಈಚೆಗೆ ನಮ್ಮ ಮನೆಯ ಮಿತ್ರ ಹೇಳಿದ್ದರು. "ಇವನು ಮನೆ, ಈ ಜಾಗವನ್ನು ಉಳಿಸಿಕೊಂಡಾನೇ, ಹೀಗೆ ಮಾಡಿದರೆ ನೆಕ್ಕಿ ತಿಂದಾರು, ಇವನನ್ನು ಬಿಡಲಿಕ್ಕಿಲ್ಲ" ಅಂತ ಹೇಳಿದ್ದರಂತೆ..!. ಅವರು ಹೇಳಿರುವ ಭಾವವು ಈ ವರ್ಷ ಅರ್ಥವಾಯಿತು..!. 

ಅಪ್ಪನಿಲ್ಲದ 4 ವರ್ಷ ಅಮ್ಮ ಇದೆಲ್ಲವನ್ನೂ ಅರ್ಥ ಮಾಡಿಸಲು ಪ್ರಯತ್ನಪಟ್ಟರೂ ಅರ್ಥ ಆಗಲಿಲ್ಲ. ಅನೇಕ ಬಾರಿ ಯಾರದ್ದೋ ಸುದ್ದಿ ಮಾತನಾಡುವಾಗ ಅಮ್ಮ ಎಚ್ಚರಿಸಿದ್ದು, ಅದರಿಂದ ಏನು ಪ್ರಯೋಜನ, ಅವರೇನಾದರೂ ಮಾಡಲಿ, ನಮ್ಮ ಕೆಲಸ ಮಾಡಿದರಾಯಿತು, ಜಗಳ ಬೇಡ ಎಂದು  ಸಮಾಧಾನವೇ ಬದುಕಿಗೆ ಮುಖ್ಯ ಎನ್ನುತ್ತಾ ಕೊನೆಯವರೆಗೂ ಎಲ್ಲಾ ನೀವನ್ನೂ ಸಹಿಸಿಕೊಂಡು, ಚೆನ್ನಾಗಿ ನೋಡಿದ್ದೀರಿ ಎನ್ನುತ್ತಾ ಇಲ್ಲವಾದರು. ಇದರ ಮಹತ್ವ ಈ ವರ್ಷ ತಿಳಿದುಕೊಂಡೆ... ಸಮಾಧಾನವೇ ಬದುಕು..., ನಾಳೆಯ ಭರವಸೆಯೇ ಬದುಕು.. 

ಈಚೆಗೆ ಕಾರ್ಯಕ್ರಮ ಒಂದರಲ್ಲಿ ಇದ್ದೆ, ಒಬ್ಬರು ನನ್ನ ಪುಟ್ಟ ಮೀಡಿಯಾದ ಬಗ್ಗೆ, ಮಾಡುವ ಕೆಲಸಗಳ ಬಗ್ಗೆ ಬಹಳ ಖುಷಿಯಿಂದ ಮಾತನಾಡಿದರು. ನನಗೇ ಗೊತ್ತಿಲ್ಲದ ಹಾಗೆ ಅವರು ಬಹಳ ಪ್ರೇರಣೆ ನೀಡಿದರು.  ಈ ವರ್ಷದ ಕೊನೆಗೆ ಸಿಕ್ಕಿರುವ ಈ ಖುಷಿ , ಮುಂದಿನ ಹೆಜ್ಜೆ ಬಹಳ ಸಹಕಾರಿ. ಅದಕ್ಕಾಗಿಯೇ ಇದುವರೆಗೂ ಸಹಕಾರ ಮಾಡಿರುವ ಎಲ್ಲರನ್ನೂ ನೆನೆದುಕೊಳ್ಳುತ್ತಾ, ಮುಂದಿನ ವರ್ಷ ಸಕಾರಾತ್ಮಕ ವರ್ಷವಾಗಿಸಬೇಕು. 

ಬದುಕು ಇನ್ನಷ್ಟು ಸುಂದರವಾಗಲಿ ಮುಂದಿನ ವರ್ಷ.... ಕೆಲವು ಜವಾಬ್ದಾರಿಗಳು ಇವೆ. ಕೆಲವು ಕೊಡಲು ಇದೆ, ಕೆಲವು ಬರಲು ಇದೆ ಎನ್ನುವ ಎಚ್ಚರಿಕೆ ಇದೆ. ಇದೆಲ್ಲವೂ ಈ ವರ್ಷ ಸೊನ್ನೆಯಾಗಿ.. "ರಾಮ" ಈ ಬಾರಿ ದೇಶದಲ್ಲಿ ಪ್ರತಿಷ್ಟಾಪನೆಯಾದಂತೆ ಇಡೀ ವರ್ಷದ ಕಾರ್ಯದಲ್ಲೂ ರಾಮನ ಆದರ್ಶವೇ ಇರಲಿ ಎನ್ನುವ ಆಶಯ..


14 ಡಿಸೆಂಬರ್ 2023

ಭದ್ರತಾ ವೈಫಲ್ಯ ಹಾಗೂ ರಾಜಕೀಯ..!

ನಿನ್ನೆ ಸಂಸತ್ತಿನ ಒಳಗೆ ಇಬ್ಬರು ನುಗ್ಗಿ ಅಲ್ಲಿ ನಡೆಸಿದ ದಾಂಧಲೆಯ ಬಗ್ಗೆ ಸುದ್ದಿಯಾಯಿತು. ನಿಜಕ್ಕೂ ಅದು ಭದ್ರತಾ ವೈಫಲ್ಯ, ಎರಡು ಮಾತೇ ಇಲ್ಲ. ಇಡೀ ದೇಶದ ಹೃದಯಭಾಗ ಅದು, ಅಲ್ಲಿನ ನಡೆಯುವ ಸಣ್ಣ ವೈಫಲ್ಯವೂ ಬಹುದೊಡ್ಡ ಸಂಗತಿಯೇ ಆಗಿದೆ. ಆದರೆ ಈ ಘಟನೆ ನಡೆದ ಕೆಲವೇ ಹೊತ್ತಲ್ಲಿ ಅದೊಂದು ತೇಲಿ ಹೋದ ಸಂಗತಿಯಾಯಿತು..!. ರಾಜಕೀಯ ದಾಳಿಯಾಗಿ ಬಿಟ್ಟಿತು. ಇದು ಈ ದೇಶದ ವೈಫಲ್ಯ, ಈ ದೇಶದ ಜನರ ದೌರ್ಭಾಗ್ಯ.



ಈಚೆಗೆ ಕ್ಯಾಪ್ಟನ್‌ ಪ್ರಾಂಜಲ್‌ ಹುತಾತ್ಮರಾದರು. ನನ್ನ ಕಣ್ಣ ಮುಂದೆ ಈಗ ಈ ಘಟನೆ ಬಂದು ನಿಂತಿತು. ಹೀಗೆಲ್ಲಾ ಭದ್ರತಾ ವೈಫಲ್ಯಗಳು ನಡೆದಾಗಲೂ ರಾಜಕೀಯ ಮಾಡುತ್ತಿರುವಾಗ, ಮೊನ್ನೆ ಮೊನ್ನೆ ಹುತಾತ್ಮರಾದ ಪ್ರಾಂಜಲ್‌ ಅಂತಹವರ ಬಲಿದಾನಗಳನ್ನು , ಆ ಕುಟುಂಬ.. ತಂದೆ, ತಾಯಿ, ಪತ್ನಿ ಬಂದು ಸೆಲ್ಯೂಟ್‌ ಮಾಡುವ ಸ್ಥಿತಿ.. ಇದೆಲ್ಲಾ ಒಂಥರಾ ನೋವು. 

ಸಂಸತ್ತಿನ ಒಳಗಿನ ಘಟನೆಯ ನಂತರ ಗಮನಿಸಿ, ಎಲ್ಲಾ ಸಂಸದರು ಓಡಿದರು, ರಾಹುಲ್‌ ಗಟ್ಟಿಯಾಗಿ ನಿಂತರು...!, ಎಲ್ಲಾ ಸಂದರು ಓಡಿದರು ನಳಿನ್‌ ಸಹಿತ ಇತರರು ಹಿಡಿದರು..!. ಇವರನ್ನೆಲ್ಲಾ ಏಕೆ, ಗಡಿಭಾಗಕ್ಕೆ ಕಳುಹಿಸಬಾರದು.? ವೈಫಲ್ಯವನ್ನು ಮುಚ್ಚಲು ಇವರು ರಾಜಕೀಯವಾಗಿ ಹೀಗೆ ಚರ್ಚೆ ಮಾಡಿವಾಗ, ಟ್ರೋಲ್‌ ಮಾಡುವಾಗ ಹೀಗೆ ಅನಿಸುತ್ತದೆ. ಇದನ್ನೂ ರಾಜಕೀಯ ಮೈಲೇಜ್‌ ಪಡೆಯಲು ಯತ್ನಿಸುವ ಇಂತವರಿಗೂ ನಾವೆಲ್ಲಾ ಓಟು ಹಾಕುವ ಮೂರ್ಖರು ಅಲ್ವೇ...?.

ಹೌದು, ಇವರಿಗೆಲ್ಲಾ ಮುಂದೆ ಅಧಿಕಾರ ಮುಖ್ಯ. ಈ ಅಧಿಕಾರಕ್ಕಾಗಿ ಭದ್ರತಾ ವೈಫಲ್ಯವೂ ಸಂಗತಿಯೇ ಅಲ್ಲ, ಅದನ್ನೂ ರಾಜಕೀಯ ದಾಳವಾಗಿ ಎಸೆದು ಬಿಡುವ ಈ ದೇಶವನ್ನು, ಅವರ ಹಿಂಬಾಲಕರನ್ನು ಏನು ಅಂತ ಹೇಳುವುದು ಎನ್ನುವ ಯೋಚನೆಯಲ್ಲಿ ಇರುವಾಗಲೇ, ನನ್ನ ಸಣ್ಣ ಮಗ ಕೆಲವು ಸಮಯಗಳಿಂದ ನನಗೂ ಈ ದೇಶದ ಸೇನೆಯ ಕ್ಯಾಪ್ಟನ್‌ ಆಗಬೇಕು, ಟೆರರಿಸ್ಟ್‌ಗಳನ್ನು ಸಾಯಿಸಬೇಕು ಅಂತ ಹೇಳುತ್ತಿದ್ದ, ಮೊನ್ನೆ ಕ್ಯಾಪ್ಟನ್‌ ಪ್ರಾಂಜಲ್‌ ಹುತಾತ್ಮರಾದಾದ ಆ ವಿಡಿಯೋವನ್ನು ನೋಡುತ್ತಾ ಛೆ... ಛೆ ಎನ್ನುತ್ತಿದ್ದ ಹಾಗೂ ದೇಶ ಸೇವೆ ಇತ್ಯಾದಿಗಳ ವಿಡಿಯೋ  ಆತ ನೋಡುತ್ತಿದ್ದ.. ಆತನಿಗೆ ಏನೆನ್ನಿಸಿತೋ ಗೊತ್ತಿಲ್ಲ, ನಾನೂ ಕೇಳಿಲ್ಲ. ನನಗಂತೂ ಈ ವ್ಯವಸ್ಥೆಯಲ್ಲಿ ಬೇರೆ ಮಾದರಿಯ ದೇಶ ಸೇವೆ ಮಾಡಿಸಬಹುದು ಅಂತ ಅನಿಸಿದೆ..!.

ಹದಗೆಟ್ಟ ವ್ಯವಸ್ಥೆಗೆ ರಾಜಕೀಯವೇ ಕಾರಣ. ಅದರಲ್ಲೂ ದೇಶ , ಸೇವೆ ಎನ್ನುವವರೂ ಕಡು ಭ್ರಷ್ಟವಾಗುತ್ತಿರುವುದು ಇನ್ನೂ ವಿಷಾದ..!.


10 ಡಿಸೆಂಬರ್ 2023

ಮೌನವಾದವರ ಮನಸಿನ ಮಾತು ಕೇಳುವವರು ಯಾರು.. ..?


ಕಲ್ಲಡ್ಕಕ್ಕೆ ಕುಮಾರಸ್ವಾಮಿ ಭೇಟಿ ನೀಡಿದರು. ಸ್ವಾಗತಾರ್ಹ ಸಂಗತಿ. ಯಾರನ್ನೇ ಆದರೂ ಬದಲಾವಣೆಗೆ, ತಪ್ಪುಗಳ ಬಗ್ಗೆ ಅರಿವಾಗಿ ಮನಪರಿವರ್ತನೆಯಾದರೆ ಸ್ವಾಗತಿಸಬೇಕಾದ್ದು  ನಮ್ಮ ಧರ್ಮ. ಹೀಗಾಗಿ ಕುಮಾರಸ್ವಾಮಿ ಅವರ ಮನಸ್ಸು ಬದಲಾದ್ದಕ್ಕೆ, ಅವರಿಗೆ ತಪ್ಪು ಮಾಹಿತಿ ನೀಡಿರುವುದು, ತಪ್ಪು ಮಾಹಿತಿ ತಿಳಿದುಕೊಂಡದ್ದಕ್ಕೆ ಅವರಿಗೂ ವಿಷಾದವಿದೆ. ಈಗ ಎಲ್ಲವನ್ನೂ ಒಪ್ಪಿಕೊಂಡು ಶಾಲೆಗೆ ಭೇಟಿ ನೀಡಿರುವುದು ಸ್ವಾಗತಾರ್ಹ. 

ಕಲ್ಲಡ್ಕ ಶಾಲೆಯ ಬಗ್ಗೆಯೂ ಎರಡು ಮಾತಿಲ್ಲ. ಸಂಸ್ಕೃತಿ, ಪರಂಪರೆ ಸೇರಿದಂತೆ ನಮ್ಮ‌ ಮೌಲ್ಯಗಳನ್ನು ಎತ್ತಿ ತೋರಿಸುವ ಶಿಕ್ಷಣ ಸಂಸ್ಥೆ. ಇಲ್ಲಿನ ಎಲ್ಲಾ ಚಟುವಟಿಕೆಗಳೂ ಮಕ್ಕಳ ಬೆಳವಣಿಗೆಗೆ ಧನಾತ್ಮಕ ಪರಿಣಾಮ ಬೀರುತ್ತದೆ.


ಕುಮಾರಸ್ವಾಮಿ ಅವರು ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವುದರಲ್ಲಿ ಯಾವ ವಿಶೇಷತೆಯೂ ಇಲ್ಲ. ಆದರೆ ವಿಭಿನ್ನವಾದ ಚಿಂತನೆಗಳನ್ನು ಇರಿಸಿಕೊಂಡು, ಶಿಕ್ಷಣ ಸಂಸ್ಥೆಯ ಚಟುವಟಿಕೆಯನ್ನು ವಿರೋಧಿಸಿಕೊಂಡು ಈಗ ಅದೇ ಶಾಲೆಗೆ ಬಂದಿರುವುದು ಮಾತ್ರಾ ಚರ್ಚೆಯಾದ್ದು ಅಷ್ಟೇ. ಏಕೆಂದರೆ ವ್ಯಕ್ತಿ ನಿರ್ಮಾಣ, ವ್ಯಕ್ತಿಯ ಚಿಂತನೆಗಳನ್ನು ಭಾರತೀಯತೆಯ ಕಡೆಗೆ ಬದಲಾಯಿಸುವುದೇ ಇಷ್ಟೂ ವರ್ಷಗಳ ಕಾಲ ಅನೇಕರು ಮಾಡಿಕೊಂಡು ಬಂದಿರುವುದು, ಕಲ್ಲಡ್ಕದ ಶಿಕ್ಷಣ ಸಂಸ್ಥೆ ಕೂಡಾ ಅದನ್ನೇ ಮಾಡುತ್ತಿದೆ.

ಇಲ್ಲಿ ಅತ್ಯಂತ ಗಮನಾರ್ಹವಾದ ಸಂಗತಿ ಎಂದರೆ, ಅಷ್ಟೂ ವರ್ಷಗಳ ಕಾಲ ಅಂದರೆ ಎಳವೆಯಿಂದಲೇ ಮೂಲ ಚಿಂತನೆಯಲ್ಲಿ ಅಂದರೆ ಭಾರತ, ದೇಶ, ರಾಷ್ಟ್ರೀಯತೆ ಎಂದು ಹೇಳುತ್ತಾ ಊರಿಡೀ ಓಡಾಡಿದವರು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಇತ್ಯಾದಿಗಳಿಂದ ದೂರ ಇದ್ದು ಸಂಘಟನೆ ಮಾಡುತ್ತಾ ಸಾಗಿದ ಅನೇಕರು ಇಂದು ಕರಾವಳಿ ಜಿಲ್ಲೆಯಲ್ಲಿ ಮೌನವಾಗುತ್ತಾ ಸಾಗುತ್ತಿದ್ದಾರಲ್ಲಾ...!. ಇದಕ್ಕೆ ಕಾರಣ ಏನು ಎಂಬುದು ಬಹಳ ಮುಖ್ಯವಾಗಿದೆ. ಈ ಸಂಖ್ಯೆ ಬೆಳೆಯುತ್ತಿದೆ. ಕೆಲವರು ಬೇರೆಡೆ ಸಾಗಿದ್ದಾರೆ. ಇನ್ನೂ ಕೆಲವರು ಮೌನವಾಗಿದ್ದಾರೆ. ಇಂತಹ ಕೆಲವರನ್ನೂ ಟೀಕಿಸುವುದಿದೆ. ಯಾವತ್ತೂ ಹೊಸಬರ ಸ್ವಾಗತದ ಜೊತೆಗೆ ಅನೇಕ ವರ್ಷಗಳಿಂದ ಸಕ್ರಿಯವಾಗಿದ್ದವರನ್ನು ಮತ್ತೆ ಸಕ್ರಿಯ ಮಾಡುವ ಕೆಲಸ ಬಹುದೊಡ್ಡದು. ಇದು ಶಕ್ತಿ ನೀಡುವ ಕಾರ್ಯ. ಕುಮಾರಸ್ವಾಮಿ ಅವರು ರಾಜಕೀಯ ಫಿಗರ್‌ ಆಗಿರಬಹುದು, ತಪ್ಪು ಅರಿವಾಗಿ ಬದಲಾದವರು ಆಗಿರಬಹುದು. ರಾಜಕೀಯದಲ್ಲಿ ಈ ತಪ್ಪುಗಳ ಅರಿವಾಗುವುದು ಏಕೆ ಎಂಬುದು ಎಲ್ಲರಿಗೂ ತಿಳಿದಿರುವ ವಾಸ್ತವ.  

ಆದರೆ ನಿಜವಾಗಿಯೂ ಬದುಕನ್ನು ತೇಯ್ದವರು, ಸಮಯ ನೀಡಿದವರು, ಸಮಯ ಕಳಕೊಂಡವರು, ಮನೆಯವರ ಜೊತೆಗೆ ಸಮಯ ಕೊಡಲಾಗದೆ ಸಂಘಟನೆ ಎಂದು ಓಡಾಡಿದವರು, ಏನೂ ತಪ್ಪು ಮಾಡದೆ ಮೌಲ್ಯಗಳ ಜೊತೆ ಬದುಕಿದವರ ಮನಸಿನ ಮಾತನ್ನು ಕೇಳುವವರು ಯಾರು, ಅವರ ಮೆಲುದನಿಗೆ ಧ್ವನಿ ಆಗುವವರು ಯಾರು...?


09 ಡಿಸೆಂಬರ್ 2023

ಅಡಿಕೆ ಬೆಳೆಗಾರರ ಸಮಸ್ಯೆ ಹಾಗೂ ಅಧಿವೇಶನ |

 ಅಡಿಕೆ ಹಳದಿ ಎಲೆರೋಗ ಹಾಗೂ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು. ಸ್ವಾಗತಾರ್ಹ. ಅಧಿವೇಶನದಲ್ಲಿ  ಮಾತನಾಡುವುದಷ್ಟೇ ಅಲ್ಲ, ಅದರ ಫಾಲೋಅಪ್‌ ಕೂಡಾ ಅಗತ್ಯ ಇದೆ. ಅದನ್ನೂ ಶಾಸಕರು ಮಾಡಬಹುದು ಎನ್ನುವ ನಿರೀಕ್ಷೆ ಇರಿಸಿಕೊಳ್ಳೋಣ. 




ಅಡಿಕೆ ಹಳದಿ ಎಲೆರೋಗ ಬಹಳ ಗಂಭೀರವಾದ ಸಮಸ್ಯೆ. ಈಚೆಗೆ ಒಂದು ಮನೆಗೆ ಭೇಟಿ ನೀಡಿದ್ದೆ, ಅವರಿಗೆ 60 ಕಂಡಿ ಅಡಿಕೆಯಾಗುತ್ತಿತ್ತು, ಅದು ಸೊನ್ನೆಗೆ ತಲುಪಿದ್ದಷ್ಟೇ ಅಲ್ಲ, ಅವರೇ ಹೇಳುವ ಹಾಗೆ ನೆಗೆಟಿವ್‌ ತಲಪಿದೆ. ಅಂದರೆ ಅಡಿಕೆ ತಿನ್ನಲೂ ಬೇರೆ ಕಡೆಯಿಂದ ತರುವ ಸ್ಥಿತಿ ಇತ್ತು. ಇದರ ಗಂಭೀರತೆ ದೂರದಿಂದ ನೋಡಿ, ಹೇಳಿದ ಯಾರಿಗೂ ಅರ್ಥವಾಗದು. ಹೀಗಾಗಿ ಈಗ ಹಳದಿ ಎಲೆರೋಗ ಎಂದು ಹೇಳಿದ ತಕ್ಷಣವೇ ಈ ರೋಗ ತೋಟದಲ್ಲಿ ಕಾಡಿದ ಹಲವು ಕೃಷಿಕರಿಗೆ ನಿರುತ್ಸಾಹ , ಇನ್ನೂ ಆರಂಭದ ಹಂತದಲ್ಲಿ‌ ಇರುವ ಕೃಷಿಕರಿಗೆ ಅದೇನೋ ನಿರೀಕ್ಷೆ. ಇದನ್ನೇ ಬಂಡವಾಳ ಮಾಡಿಕೊಳ್ಳುವವರೂ ಈ ನಡುವೆ ಇದ್ದಾರೆ...!. ಈ ಎಲ್ಲದರ ನಡುವೆ ಪುತ್ತೂರು ಕ್ಷೇತ್ರದ ಶಾಸಕರು ಸದಸನದಲ್ಲಿ  ಮಾತನಾಡಿರುವುದು  ಸ್ವಾಗತಾರ್ಹ.

ಇದರ ಜೊತೆಗೆ ಸಿಪಿಸಿಆರ್‌ಐ ಬಗ್ಗೆ ಅವರಿಗೆ ಮಾಹಿತಿ ಇಲ್ಲದಿರುವುದು, ತಪ್ಪು ಮಾಹಿತಿ ಇರುವುದು  ತಿಳಿಯಿತು. ಈ ಹಿಂದಿನ ಪುತ್ತೂರು ಶಾಸಕರು ಸಿಪಿಸಿಆರ್‌ಐ ಕೇರಳದ ಸಂಸ್ಥೆ ಎಂದು ಸದನದಲ್ಲಿ ಹೇಳಿದ್ದರು. ಈಗಿನ ಶಾಸಕ ಅಶೋಕ್‌ ಕುಮಾರ್‌ ಅವರು ಸಿಪಿಸಿಆರ್‌ಐ ರೈತರಿಗೆ ಬೇಕಾದ ಕೆಲಸ ಮಾಡುತ್ತಿಲ್ಲಎಂದು ಹೇಳಿರುವುದು ವಿಡಿಯೋದಲ್ಲಿ ನೋಡಿದೆ. ಸಿಪಿಸಿಆರ್‌ಐ ವಿಜ್ಞಾನಿಗಳು ಈಗ ಕೃಷಿಕರಿಗಾಗಿ ಕೆಲಸ ಮಾಡುತ್ತಿದ್ದಾರೆ. ರೈತ ಪರವಾಗಿರುವ ನಿರ್ದೇಶಕರೂ  ಇದ್ದಾರೆ. ಈ ಹಿಂದೆ ಕೆಲವು ಅಪವಾದಗಳು ಇದ್ದವು ನಿಜ. ಆದರೆ ಈಗ ಆ ಸ್ಥಿತಿ ಇಲ್ಲ. ಹೊಸ ಹೊಸ ಅನ್ವೇಷಣೆಯನ್ನು ಮಾಡುತ್ತಿದ್ದಾರೆ. ಅಡಿಕೆ ಹಾನಿಕಾರಕ ಅಲ್ಲ ಎಂಬ ವಿಷಯದ ಮೇಲೂ, ಕಾರ್ಬನ್‌ ಸೀಕ್ವೆಸ್ಟ್ರೇಶನ್‌ ಬಗ್ಗೆಯೂ ಮಾತ್ರವಲ್ಲ ಅಡಿಕೆ ಹಳದಿ ಎಲೆರೋಗದ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದಾರೆ. ಈಗ ಅಡಿಕೆ ರೋಗ ನಿರೋಧಕ ತಳಿಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡುತ್ತಿದ್ದಾರೆ, ತಳಿ ಅಭಿವೃದ್ಧಿ ಆಗುತ್ತಿದೆ. ಹೀಗಾಗಿ ಸಿಪಿಸಿಆರ್‌ಐ ಬಗ್ಗೆ ಈಗ ತೀರಾ ನೆಗೆಟಿವ್‌ ಆಗಿ , ವಿಜ್ಞಾನಿಗಳ ಬಗ್ಗೆ ಕಳಪೆಯಾಗಿ ಮಾತನಾಡುವುದು  ಕೃಷಿಕರಿಗೇ ಒಳ್ಳೆಯದಲ್ಲ. ಏಕೆಂದರೆ ಒಳ್ಳೆಯ ಕೆಲಸ ಮಾಡುವ ವೇಳೆ ನೆಗೆಟಿವ್‌ ಆಗಿ ಮಾತನಾಡಿದರೆ ಅವರ ಉತ್ಸಾಹಕ್ಕೆ ಭಂಗವಾದಂತೆ ಎಚ್ಚರಿಕೆ ವಹಿಸಬೇಕಿದೆ. 

ಈ ಹಿಂದೆ ನಾವು ಕೆಲವು ಮಂದಿ ಅಡಿಕೆ ಹಳದಿ ಎಲೆರೋಗ ಹಾಗೂ ಅಡಿಕ ಸಮಸ್ಯೆಗಳ ಬಗ್ಗೆ ಕೆಲವು ಶಾಸಕರ ಬಳಿ ಹೋಗಿ ದಾಖಲೆ ಸಹಿತ ಮಾತನಾಡಿದ್ದಿದೆ.  ಹೆಚು ಪ್ರಯೋಜನವಾಗದೇ ಇದ್ದಾಗ ಜೋರಾದ ಚರ್ಚೆ ಆರಂಭಿಸಿದಾಗ "ಸರ್ಕಾರ ವಿರೋಧಿ" ಎಂದು ಕೇಳಿಸಿಕೊಂಡದ್ದು ಇದೆ. ಇದೆಲ್ಲಾ ಸಮಸ್ಯೆ ಇಲ್ಲ. ವಾಸ್ತವ ಸಂಗತಿಯನ್ನು ಮಾತನಾಡದೇ ಇರುವುದೇ ಸಮಸ್ಯೆ.

ಏನೇ ಆಗಲಿ, ಈಗ ಅಡಿಕೆ ಬೆಳೆಗಾರರ ಪರವಾಗಿ ಶಾಸಕ ಅಶೋಕ್‌ ಕುಮಾರ್‌ ರೈ ಅವರು ಮಾತನಾಡುತ್ತಿದ್ದಾರೆ. ಅವರಿಗೆ ಅಭಿನಂದನೆ. ಈಗ ಹಳದಿ ಎಲೆರೋಗ ಪೀಡಿತ ಪ್ರದೇಶದ ಶಾಸಕರು, ಅಡಿಕೆ ಬೆಳೆಗಾರರ ಪರವಾಗಿರುವ ಇತರ ಶಾಸಕರೂ ಮಾತನಾಡಬೇಕಿದೆ. ಈಗಲೂ ಅವರು ಮೌನ...!

06 ಡಿಸೆಂಬರ್ 2023

ವಾಸ್ತವ.. ಆದರೆ ಕಹಿ...!

ಈ ವಾರದಲ್ಲಿ ಎರಡು ಘಟನೆಗಳು ನಡೆದವು. ಎರಡೂ ಘಟನೆಗಳೂ ರಾಜಕೀಯವಾಗಿಯೇ ಚರ್ಚೆ ಆಯಿತು..!. ವಾಸ್ತವದ ಕಡೆಗೆ ನೋಡಬೇಕಿತ್ತು.

ಭವಾನಿ ರೇವಣ್ಣ ಅವರ ಕಾರಿಗೆ ಬೈಕ್‌ ಡಿಕ್ಕಿಯಾಯಿತು. ಘಟನೆಯ ನಂತರ ಭವಾನಿ ಅವರು ಅತ್ಯಂತ ಕೆಟ್ಟದಾಗಿ ನಡೆದುಕೊಂಡರು ಎನ್ನುವುದು ಹಾಗೂ ಅಹಂಕಾರದ ಪರಮಾವಧಿ ಅಂತ ಎಲ್ಲರೂ ಹೇಳಿದರು. ಅದು ನಿಜವೂ ಹೌದು. ಜವಾಬ್ದಾರಿ ಹುದ್ದೆಯಲ್ಲಿ ಇರುವವರು ಹಾಗೆ ಮಾತನಾಡಬಾರದು. ಘಟನೆಯ ನಂತರ ನಡದುಕೊಳ್ಳುವ ರೀತಿಯೂ ಬಹುಮುಖ್ಯ.

ಆದರೆ, ಈ ಘಟನೆಯ ಆಚೆಗೆ ನೋಡಿದರೆ, ನಮ್ಮ ತಪ್ಪೇ ಇಲ್ಲದ ಸಂದರ್ಭ ಯಾವ ವ್ಯಕ್ತಿಯಾದರೂ ಸಿಟ್ಟಾಗುತ್ತಾನೆ. ಬೈಕ್‌ ಸವಾರ ರಾಂಗ್‌ ಸೈಡಲ್ಲಿ ಬಂದು ಡಿಕ್ಕಿ ಹೊಡೆದ ಎನ್ನುವುದು  ಆ ವಿಡಿಯೋದ ಮೂಲಕ ತಿಳಿಯುತ್ತದೆ. ಸಹಜವಾಗಿಯೇ ನಮಗೂ ಸಿಟ್ಟು ಬರುತ್ತದೆ. ನಾನೂ ಕೂಡಾ ನನ್ನ ವಾಹನಕ್ಕೆ ಹಿಂದಿನಿಂದ  ಇನ್ನೊಂದು ವಾಹನ ಡಿಕ್ಕಿ ಹೊಡೆದಾಗವೂ ಮಾಡಬೇಕಾದ ಕೆಲಸ ಮಾಡಿದ್ದಿದೆ. ಅದು ಬಿಡಿ, ಸ್ವಲ್ಪ ಅಡ್ಡ ಬಂದರೆ ಕಾರಿನ ಗ್ಲಾಸ್‌ ಬಂದ್‌ ಮಾಡಿ ಬೈಯುವವರು ಎಷ್ಟು ಜನ  ಇಲ್ಲ. ಇಲ್ಲೂ ಹಾಗೇ ಸಣ್ಣ ವಾಹನದ್ದು ತಪ್ಪಿಲ್ಲ..!. ಏನೇ ಆದರೂ ಶಿಕ್ಷೆ ದೊಡ್ಡ ವಾಹನಕ್ಕೆ...!. ದೊಡ್ಡವರಿಗೇ...!.  ಈಗಲೂ ದ್ವಿಚಕ್ರ ವಾಹನದಲ್ಲಿ ಹೋಗುವವರು ಎಡಕ್ಕೆ ಸಿಗ್ನಲ್‌ ಹಾಕಿ ಬಲಕ್ಕೆ ಹೋಗುವವರು ಇದ್ದಾರೆ...! ಹೈವೇಯಲ್ಲಿ ಎಲ್ಲಿ ಹೋಗಬೇಕು ಎಂದು ಇನ್ನೂ ಅರಿವು ಇಲ್ಲದವರು ಇದ್ದಾರೆ. ದ್ವಿಚಕ್ರ ಮಾತ್ರ ಅಲ್ಲ, ಇತರ ವಾಹನದಲ್ಲೂ ಚಾಲಕ ಬಿಟ್ಟು ಇತರ ಎಲ್ಲರೂ ಸಿಗ್ನಲ್‌ ನೀಡುವುದು ಕಂಡಿದ್ದೇವೆ...!. ಆದರೆ ಇಲ್ಲಿ ಭವಾನಿ ಅವರ ವಾಹನ ತಪ್ಪಿಲ್ಲ. ಸಹಜವಾಗಿಯೇ ತಪ್ಪಿಲ್ಲದ ಕಾರಣ ಸಿಟ್ಟಾಗಿದ್ದಾರೆ. ಆ ಸಿಟ್ಟಿನಲ್ಲಿ ವಾಹನ ಬೆಲೆ, ಅದು ಇದು ಎಲ್ಲಾ ಬಂದಿದೆ..!. ಅದೊಂದು ಬೇಡ ಇತ್ತು. ಅಹಂಕಾರ ಅಷ್ಟೇ... ಆದರೆ ವಾಸ್ತವ ವಿಷಯ...! ಅದು ಅಲ್ಲಿಗೇ ತಣ್ಣಗಾಯಿತು..!. ರಾಂಗ್‌ ಸೈಡಿಂದ ಬಂದದ್ದು...!!?

ಈಗ ಗೂಳಿಹಟ್ಟಿ ಶೇಖರ್‌ ಅವರದು..!. ಜಾತಿಯ ಲಿಂಕ್‌ನ್ನು ತಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಂದೆ ತಂದಿರಿಸಿದ್ದು, ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಹೇಳಿಕೆ ಕೊಡುವ ಹಾಗೆ ಮಾಡಿದ್ದು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹತ್ತಿರದಿಂದ ತಿಳಿದಿರುವ ಎಲ್ಲರಿಗೂ ಗೊತ್ತಿದೆ, ಅಲ್ಲಿ ಜಾತಿ ಕೇಳಿ ಕೆಲಸ ಇಲ್ಲ ಎಂದು. ಆದರೆ ಗೂಳಿಹಟ್ಟಿ ಅವರು ಬಿಜೆಪಿ ಜೊತೆ ಲಿಂಕ್‌ ಮಾಡಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೋಡಿದರೆ ಅವರಿಗೆ ಹಾಗೆ ಕಂಡದ್ದು ತಪ್ಪಲ್ಲ..!. ಅಲ್ಲದೇ ಇದ್ದರೆ ಅಲ್ಲಿ ಜಾತಿಯ ವಿಷಯವೇ ಇರುವುದಿಲ್ಲ. ಕೆಲವು ಕಡೆ ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದೇ ಎನ್ನುವ ಪರಿಸ್ಥಿತಿ ಇರುವುದು  ಹೀಗಾಗಲು ಕಾರಣ ಎಂದು ಈಚೆಗೆ ಮಾತನಾಡುತ್ತಿದ್ದ ಹಿರಿಯರೊಬ್ಬರು ಹೇಳಿದ್ದರು. ಅದು ಸತ್ಯವಾದ ವಿಷಯ.


04 ಡಿಸೆಂಬರ್ 2023

ಮಾದರಿಯಾದ ಸುಳ್ಯದ ನಾಮಾಮಿ ಕಾರ್ಯ

ಸುಳ್ಯದ ನಾಮಾಮಿ ಬಳಗವು ಕೃಷಿ ವಲಯಕ್ಕೆ, ಗಿಡ ಆಸಕ್ತರಿಗೆ ಮಾದರಿಯಾಗುವಂತಹ ಕೆಲಸವೊಂದನ್ನು ಮಾಡಿದೆ. ಒಂದು ಅಳಿದು ಹೋಗುವ ಗಿಡದ ರಕ್ಷಣೆಯಲ್ಲಿ ಮಾಡಿರುವ ಕೆಲಸ ದಾಖಲಾಗಬೇಕು.

ನಾಮಾಮಿ ಬಳಗವು ಅಪರೂಪದ ಗಿಡಗಳ ಉಳಿಸುವ ಕೆಲಸ ಮಾಡುತ್ತಿತ್ತು. ಈಚೆಗೆ ಹೀಗೇ ಮಾತನಾಡಿವ ವೇಳೆ "ನಾಯಿಕಿತ್ತಳೆ" ಬಗ್ಗೆ ಯಾರೋ ಮಾತನಾಡಿದರು. ಈಗ ಅದು ಕಾಣೆಯಾಗುತ್ತಿದೆ ಎಂದೂ ಚರ್ಚೆಯಾಯಿತು. ತಕ್ಷಣವೇ ಕೆಲಸ ಶುರು ಮಾಡಿದ ತಂಡವು ನಾಯಿ ಕಿತ್ತಳೆ ಗಿಡಗಳನ್ನು ಹುಡುಕಲು ಆರಂಭಿಸಿತು. ಜೊತೆಗೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರೂ ಜೊತೆಯಾದರು. ಕಿತ್ತಳೆಯ ಹಿಂದೆ ಹೋದಂತೆಯೇ ಅನೇಕ ಮಾಹಿತಿಗಳು ದೊರೆತವು. ಅಪರೂಪದ ತಳಿಗಳು ಇರುವುದು  ತಿಳಿಯಿತು. ಈ ಎಲ್ಲಾ ಆಯ್ಕೆಯ ನಂತರ ಸಿಹಿಯಾಗಿರುವ ನಾಯಿಕಿತ್ತಳೆ ಹಣ್ಣಿನ ಮರಗಳನ್ನು ಹುಡುಕಿ ಕಸಿ ಕಟ್ಟಿ ಗಿಡ ಅಭಿವೃದ್ಧಿ ಮಾಡಿದರು. ಇದೆಲ್ಲಾ ಮೂರು ತಿಂಗಳಿನಲ್ಲಿ ನಡೆದ ಕೆಲಸ...!. ಈಗ ಈ ಗಿಡಗಳ ಲೋಕಾರ್ಪಣೆ ನಡೆಯಿತು.ನಾನೂ ಈ ಕಾರ್ಯಕ್ರಮದಲ್ಲಿ ಕೇಳುಗನಾಗಿ, ಗಿಡ ಪಡೆಯುವ ಕೃಷಿಕನಾಗಿ ಭಾಗವಹಿಸಿದೆ. ಅಂದರೆ ಒಂದಷ್ಟು ಮನೆಗಳಲ್ಲಿ ನಾಯಿಕಿತ್ತಳೆ ಗಿಡ ಬೆಳೆಯಲು ಆರಂಭವಾಗುತ್ತಿದೆ. ಒಂದು ಪುಟ್ಟ ಬಳಗ ಮಾಡಿರುವ ಬಹುದೊಡ್ಡ ಕೆಲಸ ಇದು. 



ಇನ್ನೂ ಬಹಳ ಆಸಕ್ತಿ ಇದೆ ಇಲ್ಲಿ. ಗಿಡ ಲೋಕಾರ್ಪಣೆಯ ವೇಳೆ ಬಹುತೇಕ ಆಸಕ್ತರು ಬಂದಿದ್ದರು. ಒಬ್ಬರು ಸಿಟ್ರಸ್‌ ವಿಭಾಗದಲ್ಲಿ ಅದರೆ ಕಿತ್ತಳೆ ವಿಭಾಗದಲ್ಲಿ ಅನೇಕ ವೆರೈಟಿ ಇರುವು ಬಗ್ಗೆ ಮಾತನಾಡಿದರು. ವಿದೇಶದಲ್ಲಿದ್ದ ಅವರು ಈಗ ಕೃಷಿಯಲ್ಲಿದ್ದಾರೆ, ಇಂತಹ ಆಸಕ್ತಿಗಳನ್ನು ಮುಂದುವರಿಸಿದ್ದಾರೆ. ಇನ್ನೊಬ್ಬರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ, ಸದ್ಯ ವರ್ಕ್‌ ಫ್ರಂ ಹೋಂ. ಅವರೂ ಈ ನಾಯಿಕಿತ್ತಳೆ ಗಿಡಕ್ಕಾಗಿ ದೂರದಿಂದ ಬಂದಿದ್ದರು..!. ಇಷ್ಟೇ ಅಲ್ಲ, ನಾಮಾಮಿ ತಂಡದ ಪ್ರಮುಖ ಸದಸ್ಯ ಜಗದೀಶ 74 ವರ್ಷದ ಸಕ್ರಿಯ ಯುವಕ...!. ನಮ್ಮಂತಹ ಯುವಕರಿಗೆ ಉತ್ಸಾಹ ತುಂಬುವ, ಇನ್ನಷ್ಟು ಕೆಲಸ ಕೃಷಿ ಬೆಳವಣಿಗೆಯಲ್ಲಿ ಮಾಡಬೇಕು ಎನ್ನುವ ಆಸಕ್ತಿಯನ್ನು ಹೆಚ್ಚಿವ ಹಾಗಿದೆ ಅವರ ಕೆಲಸಗಳು...

ಇಂತಹ ತಂಡಗಳು ಅಲ್ಲಲ್ಲಿ ಇನ್ನಷ್ಟು ಹೆಚ್ಚಾಗಬೇಕು, ಇಲ್ಲಿ ಜನ ಮುಖ್ಯ ಅಲ್ಲ, ಕೇವಲ ಐದು ಜನ ಇದ್ದರೂ ಸಾಕು, ಯಶಸ್ಸು ಇರುವುದು ಸಕ್ರಿಯ ಪಾಲ್ಗೊಳ್ಳುವಿಕೆಯಲ್ಲಿ. ನಮಗೂ ಇಂತಹ ತಂಡ ಜೊತೆ ಇರುವುದಕ್ಕೆ, ಕೃಷಿ ಬೆಳವಣಿಗೆಯ ಬಗ್ಗೆ, ಹೊಸ ಸಾಧ್ಯತೆಗಳ ಬಗ್ಗೆ ಚರ್ಚಿಸುವುದಕ್ಕೆ ಆಸಕ್ತಿ...


01 ಡಿಸೆಂಬರ್ 2023

ಹಿಂದುತ್ವ ಮತ್ತು ಕರಾವಳಿ...!

 ಕರಾವಳಿ ಎಂದರೆ ಹಿಂದುತ್ವ. ಈಚೆಗೆ ಅದು ಮತ್ತೆ ಮತ್ತೆ ಸಾಬೀತಾಗುತ್ತಿದೆ.  ಆದರೆ ಕಳೆದ ಕೆಲವು ಸಮಯಗಳಿಂದ ಕರಾವಳಿ ಜಿಲ್ಲೆಯಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲೆಯಲ್ಲಿ‌ ಒಂಥರಾ ಒಳಜಗಳ. ಅಂದರೆ ಹಿಂದುತ್ವದ ಗುಂಪುಗಳಲ್ಲೇ ಒಳಜಗಳ. ಕಳೆದ ಬಾರಿಯ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಅದರ ಫಲಿತಾಂಶ ಪ್ರಕಟವಾಯಿತು. ಈಗಲೂ ಮತ್ತೆ ಮಂಗಳೂರು ಕ್ಷೇತ್ರದಲ್ಲಿ ಅದೇ ವಾತಾವರಣ ಸೃಷ್ಟಿಯಾಗುತ್ತಿದೆ. ಕಾರಣ ಏನು..? 

ಕೆಲವು ಸಮಯದ ಹಿಂದೆ ಒಂದು ಖಾಸಗಿ ಸಂಸ್ಥೆ, ಅವರದೇ ಕಾರಣಕ್ಕೆ  ರಾಜಕೀಯ ಕಾರಣಕ್ಕೆ ಸಮೀಕ್ಷೆ ನಡೆಸಿತು. ಆಗ ಅವರ ರಾಜಕೀಯ ಹಾಗೂ ಆಂತರಿಕ ಕಾರಣದಿಂದ ಸಮೀಕ್ಷೆ ನಡೆಸಿದ್ದರಿಂದ ಗೌಪ್ಯವಾಗಿಟ್ಟಿತ್ತು. ಕರಾವಳಿ ಹಾಗೂ ಅಭಿವೃದ್ಧಿ ಎನ್ನುವ ಕಾರಣದಿಂದ ನನ್ನಲ್ಲೂ ಖಾಸಗಿಯಾಗಿ ಮಾತನಾಡಿದ್ದ ಕಾರಣದಿಂದ ಇದರ ಫಲಿತಾಂಶದ ಬಗ್ಗೆ ಆಗಾಗ ಕೇಳುತ್ತಲೇ ಇದ್ದೆ,  ಒಂಚೂರು ಮಾಹಿತಿ ನೀಡಿದ್ದರು.

ಕರಾವಳಿ ಜಿಲ್ಲೆ ಎನ್ನುವುದು ಹಿಂದುತ್ವದ ಹೆಸರಿನಲ್ಲಿಯೇ ಗೆಲ್ಲುತ್ತದೆ. ಇಲ್ಲಿ ಅಭಿವೃದ್ಧಿಗಿಂತಲೂ ಮುಖ್ಯವಾಗಿ ಹಿಂದುತ್ವವೇ ಮುಖ್ಯವಾಗುತ್ತದೆ. ಇದಕ್ಕಾಗಿ ಸಣ್ಣ ಸಣ್ಣ ಸಂಗತಿಯೂ ಇಲ್ಲಿ ಬಹುಮುಖ್ಯವಾಗುತ್ತದೆ. ಇಲ್ಲಿ ಜಾತಿಯ ಹೆಸರಿನಲ್ಲಿ ಗೆಲ್ಲುವುದು ಸಾಧ್ಯವಿಲ್ಲ. ಹಿಂದುತ್ವ ಮಾತ್ರವೇ ಸಾಕಾಗುತ್ತದೆ, ಅಭಿವೃದ್ಧಿ ಕಡಿಮೆ ಇದ್ದರೂ ಪರವಾಗಿಲ್ಲ. ಅದಕ್ಕಾಗಿಯೇ ಕೆಲವು ಘಟನೆ ನಡೆಯುತ್ತದೆ, ಬೆಳೆಯುತ್ತದೆ ಎಂದಿದ್ದರು.  ಇಲ್ಲಿ ಯಾವ ಪಕ್ಷವೇ ಆಗಲಿ, ಹಿಂದುತ್ವ ಬಿಟ್ಟು ಇಲ್ಲಿ ಗೆಲ್ಲುವುದು ಕಷ್ಟ. ಆದರೆ ಈಚೆಗೆ ಇಲ್ಲಿ ಟ್ರೆಂಡ್‌ ಬದಲಾಗುತ್ತಿದೆ ಹಿಂದುತ್ವದ ಹೆಸರಿನ ರಾಜಕೀಯ ಸಾಮಾನ್ಯರಿಗೂ ತಿಳಿಯುತ್ತಿದೆ, ಹೀಗಾಗಿ ಬದಲಾವಣೆ ಸಾಧ್ಯತೆ ಇದೆ  ಎನ್ನುವುದು ಆ ಸಮೀಕ್ಷಾ ವರದಿ ಹೇಳಿತ್ತು.ಅದರ ಸಣ್ಣ ರಿಸಲ್ಟ್‌ ಪುತ್ತೂರು ಚುನಾವಣೆ. ಇದು ಕರಾವಳಿ ಜಿಲ್ಲೆಯ, ಅದರಲ್ಲೂ ಮಂಗಳೂರು ಜಿಲ್ಲೆಯ ಭವಿಷ್ಯದ ಕನ್ನಡಿ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವಕ್ಕೆ  ಪುತ್ತೂರು ಮತ್ತೆ ಪ್ರಯೋಗ ಶಾಲೆಯಾಯಿತು. ಕರಾವಳಿ ಜಿಲ್ಲೆಯಲ್ಲಿ ಸುಳ್ಯ ಹಾಗೂ ಪುತ್ತೂರು ಹಿಂದುತ್ವದ ಪ್ರಯೋಗಶಾಲೆಯ ಹಾಗೆ. ಇಂದು ಇದೆರಡೂ ಕ್ಷೇತ್ರದಲ್ಲಿ ಹಿಂದುತ್ವವೇ ಮತ್ತೆ ಮತ್ತೆ ಎದ್ದು ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಹಿಂದುತ್ವದ ಹೆಸರಿನಲ್ಲಿ ಗೆದ್ದರು, ಶಾಸಕನಾಗಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೂ ಹಿಂದೂ ವಿರುದ್ಧವಾದ ಯಾವ ಚಟುವಟಿಕೆಯೂ ಮಾಡಿಲ್ಲ, ಹೀಗಾಗಿ ಅವರಿಗೆ ಈಗ ಪ್ಲಸ್‌ ಆಗಿದೆ..!.ಆದರೆ ಬಿಜೆಪಿ, ಸಂಘಪರಿವಾರ ಇನ್ನಷ್ಟು ಕುಸಿದಿದೆ. ಯಾಕೆ ಕುಸಿದಿದೆ...?.ಯಾವತ್ತೂ ಇಷ್ಟೊಂದು ಕುಸಿದಿರಲಿಲ್ಲ. ಅಂದು ಶಕುಂತಳಾ ಶೆಟ್ಟಿ ಅವರು ಸ್ವಾಭಿಮಾನಿಯಾಗಿ ಸ್ಫರ್ಧೆ ಮಾಡಿದಾಗಲೂ ಬಿಜೆಪಿ-ಸಂಘಪರಿವಾರ ತನ್ನ ಸಾಮರ್ಥ್ಯವನ್ನು ಪ್ರದರ್ಶನ ಮಾಡಿತ್ತು.ಅದು ನಿಜಕ್ಕೂ ಪ್ರಯೋಗಶಾಲೆಯೂ ಆಗಿತ್ತು.


ಈಚೆಗೆ ಅರುಣ್‌ ಕುಮಾರ್‌ ಪುತ್ತಿಲ ಅವರ ನೇತೃತ್ವದಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಬಗ್ಗೆ ಪೂರ್ವಬಾವಿ ಸಭೆ ನಡೆದಿತ್ತು. ಪ್ರೀತಿಯಿಂದ ಸಭೆಗೆ ಆಹ್ವಾನಿಸಿದ್ದರು, ಹೋಗಿದ್ದೆ. ಸಭೆಯಲ್ಲಿ ಅಧಿಕ ಪ್ರಮಾಣದಲ್ಲಿ ಜನರು ಸೇರಿದ್ದರು. ನನಗೆ ಅಚ್ಚರಿ ಆಗಿತ್ತು. ಆ ನಂತರ ವಿಚಾರಿಸಿದೆ, ಒಂದು ದಿನದ ಮುಂದೆ ಕರೆ ಮಾಡಿ ಆಹ್ವಾನಿಸಿದ ಸಭೆ ಅದು. ಚುನಾವಣೆ ಮುಗಿದ ಬಳಿಕವೂ ಅಷ್ಟೊಂದು ಪ್ರಮಾಣದಲ್ಲಿ ಸೇರಿದ ಜನರು ಹಾಗೂ ಭಾಗವಹಿಸಿದ ಬಹುತೇಕ ಜನರು ಕೂಡಾ ಸಿದ್ಧಾಂತದ, ಹಿಂದುತ್ವ ಎನ್ನುತ್ತಿದ್ದವರೇ ಇದ್ದರು. ಅಚ್ಚರಿ ಆಯ್ತು, ಚುನಾವಣೆ ಮುಗಿದ ನಂತರವೂ ಅದೇ ಪ್ರಮಾಣದಲ್ಲಿ ಪುತ್ತಿಲ ಅವರ ಬೆಂಬಲಿಗರು, ಜನರು ಅಭಿಮಾನಿಗಳಾಗಿದ್ದಾರೆ ಎಂದರೆ... ?. ಒಬ್ಬರನ್ನು ಕೇಳಿದೆ, ಏನು ಕತೆ ಅಂತ... ಅವರು ಹೇಳಿದ ಸಂಗತಿ ಬಹಳ ಕುತೂಹಲ ಮೂಡಿಸಿತು..

ಅರುಣ್‌ ಕುಮಾರ್‌ ಅವರು ಏಕೆ ರಾಜಕೀಯ ಪ್ರವೇಶ ಮಾಡಬಾರದು..?.ಅನೇಕ ಸಮಯಗಳಿಂದ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದೊಂದೇ ಕಾರಣ ಅಲ್ಲ ಎಂದೂ ಹಲವು ಕಾರಣ ಹೇಳಿದರು. ನನಗೆ ಇದು ವಿಶೇಷ ಅಂತ ಅನಿಸಲಿಲ್ಲ. 

ಮುಂದೆ ಹೇಳುತ್ತಾ ಅವರು ಹೇಳಿದರು, ನಮಗೆ ಸಭೆಯಲ್ಲಿ ಮಾತನಾಡುತ್ತಾ ಹೇಳುತ್ತಾರೆ, ಭ್ರಷ್ಟಾಚಾರ ನಿಲ್ಲಿಸಬೇಕು, ಹಿಂದುತ್ವವೇ ಉಸಿರಾಗಬೇಕು, ಅನ್ಯರೊಂದಿಗೆ ವ್ಯವಹಾರ ಮಾಡಬಾರದು, ಜಾತಿ ಸಂಘಟನೆಗಳಲ್ಲಿ ಕಾಣಿಸಬಾರದು..... ಹೀಗೇ ಹತ್ತಾರು ಸಂಗತಿಗಳನ್ನು ಹೇಳುತ್ತಾರೆ. ಆದರೆ ಕೆಲವು ದಿನ ಕಳೆದು ನೋಡಿದರೆ ಹೀಗೆ ಹೇಳಿದ ಪ್ರಮುಖರೆಲ್ಲಾ ಅದನ್ನೇ ಮಾಡುತ್ತಿರುತ್ತಾರೆ. ಭ್ರಷ್ಟಾಚಾರದಲ್ಲಿ ಎದ್ದು ಕಾಣುತ್ತಾರೆ, ಜಾತಿ ಸಂಘಟನೆಯ ಒಳಗೆ ಇರುತ್ತಾರೆ, ಅನ್ಯರೊಂದಿಗೆ ಕದ್ದು ವ್ಯವಹಾರ ಮಾಡುತ್ತಾರೆ...!, ಜಾತಿ ಸಂಘಟನೆಯಲ್ಲಿ ಇರಬಾರದು ಎನ್ನುತ್ತಾ ಜಾತಿಗಳನ್ನು ಒಡೆಯುತ್ತಾರೆ, ಮತ್ತೆ ಜಾತಿಗಳಿಗೇ ಮಣೆ ಹಾಕುತ್ತಾರೆ...ಹಾಗಿದ್ದರೆ ಹಿಂದುತ್ವ ಎಲ್ಲಿದೆ... .?.  ಹೀಗೇ ಪಟ್ಟಿ ಬೆಳೆಸುತ್ತಾ..., ಏನಿಲ್ಲದೇ ಇದ್ದರೆ ಅರುಣಣ್ಣ ಕಾರ್ಯಕರ್ತನ ಜೊತೆಗೆ ಇರುತ್ತಾರೆ. ಅವರ ಮೇಲೂ ಆರೋಪ ಮಾಡುತ್ತಾರೆ, ರಾಜಕೀಯ ಮಾಡುತ್ತಾರೆ. ಆದರೆ ಅದು ವ್ಯಕ್ತಿಗತ ಆರೋಪ. ಆಗದೇ ಇದ್ದವರನ್ನೆಲ್ಲಾ ಇದೇ ರೀತಿ ಮಾಡುವುದು,.. ಎನ್ನುತ್ತಾ... ಹಲವು ಘಟನೆಗಳನ್ನು ವಿವರಿಸಿದರು...

ಇಂದು ಬಹುತೇಕ ಜನರು ಅರುಣ್‌ ಕುಮಾರ್‌ ಪುತ್ತಿಲ ಅವರ ಜೊತೆಗೆ ಇರುವ ಕಾರಣ ಇದು. ಹಿಂದುತ್ವಕ್ಕಾಗಿ ಅಷ್ಟೇ. ಇದು ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ಧ ಇರುವ ಆಕ್ರೋಶದ ಧ್ವನಿ ಅಷ್ಟೇ. ಇವರಿಗೆಲ್ಲಾ ಅನ್ಯ ಪಕ್ಷಗಳ ಜೊತೆ ಹೋಗಲು ಮನಸ್ಸಿಲ್ಲ, ಅವರೆಲ್ಲಾ ಹಿಂದುತ್ವ ಎನ್ನುವ ಕಾರಣಕ್ಕೆ ಅರುಣ್‌ ಕುಮಾರ್‌ ಪುತ್ತಿಲ ಜೊತೆ ಇದ್ದಾರೆ. ಹಿಂದುತ್ವ ಹೇಳುತ್ತಾ, ಹಿಂದೂ ಸಮಾಜ ಎನ್ನುತ್ತಾ ಒಳ ಒಪ್ಪಂದ, ತಮಗೆ ಕಪ್ಪ ಕೊಡುವವರಿಗೇ ಮಣೆ ಹಾಕುವುದು, ಕಮಿಶನ್‌ ಪಡೆಯುವುದು.... ಇದೆಲ್ಲಾ ಎಲ್ಲಾ ಕಾರ್ಯಕರ್ತರಿಗೆ ಇಂದಿನ ಡಿಜಿಟಲ್‌ ಮಾಧ್ಯಮದ ಯುಗದಲ್ಲಿ ತಕ್ಷಣವೇ ತಿಳಿಯುತ್ತದೆ. 

ಚುನಾವಣೆಗಳಲ್ಲಿ ಬರುವ ಫಂಡ್‌ ಎಲ್ಲೆಲ್ಲಿಗೋ ರವಾನೆಯಾಗುವುದು, ಮಿತಿಗಿಂತ ಜಾಸ್ತಿ ಖರ್ಚು ತೋರಿಸುವುದು ಇದೆಲ್ಲಾ ಕಾರ್ಯಕರ್ತರಿಗೆ ತಕ್ಷಣವೇ ತಿಳಿಯುತ್ತದೆ. ಇಂದು ಇಂತಹ ಸಂಗತಿಗಳು ಕಾರ್ಯಕರ್ತರಿಗೆ ತಿಳಿದ ಕಾರಣದಿಂದಲೇ ಅಸಮಾಧಾನದ, ನೊಂದ ಮತಗಳೆಲ್ಲಾ ಪುತ್ತಿಲ ಪರವಾಗಿಯೋ, ತಿಮರೋಡಿ ಪರವಾಗಿಯೋ, ಸತ್ಯಜಿತ್‌ ಪರವಾಗಿಯೋ ವಾಲುತ್ತದೆ. ಗಮನಿಸಿ ನೋಡಿ, ಇವರೆಲ್ಲಾ ಹಿಂದುತ್ವಕ್ಕಾಗಿಯೇ ಹಿಂದೆ , ಈಗಲೂ ಕೆಲಸ ಮಾಡುವವರು. ಇವರ ಮೇಲೆ ವಿರೋಧ ಇರಬಹುದು, ಆದರೆ ಜನರು ಈ ವಿರೋಧ, ಆರೋಪಗಳನ್ನು ಒಪ್ಪುತ್ತಿಲ್ಲ. ಯುವ ಕಾರ್ಯಕರ್ತರೆಲ್ಲರೂ ಹಿಂದುತ್ವದ ಇಂತಹ ನಾಯಕರ ಪರವಾಗಿಯೇ ಇರುವುದು ಗಮನಿಸಬೇಕಾದ ಅಂಶ. ಇದರ ಪರಿಣಾಮವೇ ಗ್ರಾಪಂ ಚುನಾವಣೆಯ ಫಲಿತಾಂಶ, ಮತ್ತೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಸೇರುವ ಯುವ ಕಾರ್ಯಕರ್ತರು...!. ಈಚೆಗೆ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಪೂರ್ವಬಾವಿ ಸಭೆಗಳಲ್ಲಿ ಕಾಣುವ ಉತ್ಸಾಹ, ಸಂಘಟನೆಯೇ ಇದಕ್ಕೆಲ್ಲಾ ಉತ್ತರಗಳು.

ಆದರೆ ಇಂದು ಪುತ್ತಿಲ, ಸತ್ಯಜಿತ್‌, ತಿಮರೋಡಿ ಅವರಂತಹ ಅನೇಕರನ್ನು ವಿರೋಧ ಮಾಡುವವರನ್ನು ಗಮನಿಸಿ. ಒಂದಿಲ್ಲೊಂದು ಸಂಘಟನೆಯಲ್ಲಿ, ಒಂದಿಲ್ಲೊಂದು ವ್ಯವಹಾರದಲ್ಲಿ ಇರುತ್ತಾರೆ, ಯಾರದೋ ಹಿಂಬಾಲಕರು ಆಗಿರುತ್ತಾರೆ. ಇದೆಲ್ಲಾ ಸಾಮಾನ್ಯರಲ್ಲಿ ಸಾಮಾನ್ಯನೂ ಈಗ ಅರ್ಥ ಮಾಡಿಕೊಳ್ಳದಷ್ಟು ದಡ್ಡನಲ್ಲ.

ಹಿಂದೆ, ಸಭೆಯಲ್ಲಿ ಸಲಹೆ, ಸೂಚನೆ ನೀಡುತ್ತಿದ್ದ ಹಿರಿಯರು,  ಸ್ವತ: ಅವರೂ ಹಾಗೆಯೇ ನಡೆದುಕೊಳ್ಳುತ್ತಿದ್ದರು. ಈ ಕಾರಣದಿಂದ ಗೌರವ ಉಳಿಸಿಕೊಳ್ಳುತ್ತಿದ್ದರು. ಇಡೀ ವ್ಯವಸ್ಥೆಯನ್ನು ಈ ಕಾರಣದಿಂದಲೇ ನಿರ್ವಹಿಸುತ್ತಿದ್ದರು, ನಿಯಂತ್ರಣಕ್ಕೆ ತರುತ್ತಿದ್ದರು. ಯಾವ ಅಸಮಾಧಾನಗಳು ಇದ್ದರೂ ಒಂದೇ ಮಾತಿನಲ್ಲಿ ನಿಯಂತ್ರಣ ಮಾಡುತ್ತಿದ್ದರು. ಅಂದರೆ ಒಳಗೂ-ಹೊರಗೂ ಒಂದೇ ಆಗಿದ್ದರು. ಇಂದಿಗೂ ಸಂಘಪರಿವಾರದಲ್ಲಿ, ಬಿಜೆಪಿಯಲ್ಲಿ ಅಂತಹವರು ಇದ್ದಾರೆ. ಆದರೆ ಅವರೆಲ್ಲಾ ಮೌನವಾಗಿದ್ದಾರೆ. ಕೆಲವರು ಹತಾಶರಾಗಿದ್ದಾರೆ. ನೊಂದಿದ್ದಾರೆ. ಖಾಸಗಿಯಾಗಿ ಮಾತನಾಡಿಸಿದರೆ "ದೊಡ್ಡ ಮಾಹಿತಿ" ನೀಡುತ್ತಾರೆ.

 ಈಗಿನ ಬಹುತೇಕ ಜನರ ಜೊತೆ ಅದರಲ್ಲೂ ಕರಾವಳಿಯ ಸಂಘಪರಿವಾರದ "ಹಿರಿಯರ" ಜೊತೆ ಒಬ್ಬ ಬೆಂಬಲಿಗ ಇರುತ್ತಾನೆ. ಎಲ್ಲಾ ಕಡೆಯೂ ಅವರ ಹಿಂದೆಯೇ...!. ಹೀಗಾಗಿ ಅವನೇ ಎಲ್ಲಾ ವಿಭಾಗಕ್ಕೂ..!. ಬಿಜೆಪಿಯಿಂದಲೂ ಸ್ಫರ್ಧೆ, ಸಹಕಾರ ಭಾರತಿಯಿಂದಲೂ ಸ್ಫರ್ಧೆ, ಧಾರ್ಮಿಕ ಕ್ಷೇತ್ರದಿಂದಲೂ ಕಣಕ್ಕೆ , ಕೆಲವು ನಿಗಮಗಳಿಗೆ ಸ್ಫರ್ಧೆ...!. ಇನ್ನೊಬ್ಬ ಯುವ ಕಾರ್ಯಕರ್ತನಿಗೆ ಬೆಳೆಯುವುದಕ್ಕೆ ಅವಕಾಶವೇ ಇಲ್ಲ. ವ್ಯಕ್ತಿ ನಿರ್ಮಾಣದ ಉದ್ದೇಶವೇ ತಪ್ಪಿ ಹೋದಂತಿದೆ ಕರಾವಳಿ ಜಿಲ್ಲೆಯಲ್ಲಿ..!. ಭ್ರಷ್ಟರ ಕೂಟವಾಗಿ ಬೆಳೆಯುತ್ತಿದೆ ಈಗ. ತುಳಿಯುವುದೇ ಉದ್ದೇಶವಾಗಿದೆ.

ಈಗ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಮಾತುಕತೆ ನಡೆಸಿ ಮತ್ತೆ ಬಿಜೆಪಿ ಅಥವಾ ಸಂಘಪರಿವಾರದ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆಗಳು ಆದಾಗ, ಕೆಲವರು ಹೇಳಿದ್ದಿದೆಯಂತೆ, " ಅವರು ಮಾಡಿರುವ ಡ್ಯಾಮೇಜ್‌ ಸರಿಯಾಗ್ತದಾ" ಎಂದು...!

ಅನೇಕರಿಗೆ ಗೊತ್ತಿಲ್ಲ, ಪುತ್ತಿಲ ಅವರ ಜೊತೆಗೆ ಇರುವ ಬಹುತೇಕ ಯುವಕರು ಹೇಳುವುದು, ಹಿಂದುತ್ವಕ್ಕೆ ನಿಮ್ಮಿಂದ ಡ್ಯಾಮೇಜ್‌ ಆಗಿದೆ, ಪುತ್ತಿಲ, ಸತ್ಯಜಿತ್‌ ಅವರಂತಹವರಿಂದ ಆಗಿಲ್ಲವೆಂದು ಹೇಳುತ್ತಿರುವವರೇ...!., ಇದಕ್ಕಾಗಿಯೇ ಇಂದು ಪುತ್ತಿಲ ಅವರ ಜೊತೆ, ಸತ್ಯಜಿತ್‌ ಅವರ ಜೊತೆ, ತಿಮರೋಡಿ ಅವರ ಜೊತೆ ಯುವಕರು ಸೇರುತ್ತಾರೆ. 

ಕಳೆದ ಬಾರಿಯ ಪುತ್ತೂರು ಚುನಾವಣೆ ಗಮನಿಸಿ, ಚುನಾವಣೆಯ ವೇಳೆ ಅರುಣ್‌ ಪುತ್ತಿಲ ಮೇಲೆ ಇನ್ನಿಲ್ಲದ ಅಪಪ್ರಚಾರ ಮಾಡಿದರು. ಯಾವುದೂ ಸಾಮಾಜಿಕವಾಗಿ ಸದ್ದು ಮಾಡಲಿಲ್ಲ, ಸೋಶಿಯಲ್‌ ಮೀಡಿಯಾದಲ್ಲಿ ವೈಯಕ್ತಿಕವಾಗಿ ತೇಜೋವಧೆ ಮಾಡಿದರು. ಅದಕ್ಕೆ ಜನರು ಸೊಪ್ಪು ಹಾಕಲಿಲ್ಲ. ಅಂದರೆ ಯಾವುದೋ ಒಂದು ಘಟನೆಯನ್ನು ಇರಿಸಿಕೊಂಡು ಅದನ್ನು ಮುನ್ನೆಲೆಗೆ ತರಲು ಪ್ರಯತ್ನ ಮಾಡಿದರು. ಸಾಕಷ್ಟು ಪತ್ರಿಕಾಗೋಷ್ಟಿ ಮಾಡಿದರು...!. ಇದನ್ನೇ ಇನ್ನೂ ಹಲವರು ಮಾಡಿಲ್ಲವೇ..? ಚುನಾವಣೆಯ ಹಣವನ್ನು ಏನೆಲ್ಲಾ ಮಾಡಿದ್ದರು..? ದೇವಸ್ಥಾನದಲ್ಲಿ ಡಬಲ್‌ ಟೆಂಡರ್‌ ಮಾಡಿಸಿಲ್ಲವೇ..? , ಜಮೀನು ಖರೀದಿ ಮಾಡಿಲ್ಲವೇ, ಕೆಲವು ಪ್ರಕರಣಗಳಲ್ಲಿ ಮಾತುಕತೆ ನಡೆಸಿ "ಡೀಲ್"‌ ಮಾಡಿಲ್ಲವೇ..  ಎಂದು ಮರುಪ್ರಶ್ನೆ ಮಾಡುವ ಮಟ್ಟಕ್ಕೆ ಈಗ ಜನರೂ, ಹಿಂದೂ ಕಾರ್ಯಕರ್ತರು ಮಾಹಿತಿ ಕಲೆ ಹಾಕಿದ್ದಾರೆ. ಅದಕ್ಕಾಗಿಯೇ ಕಳೆದ ಬಾರಿ ಅರುಣ್‌ ಪುತ್ತಿಲ ಅವರ ಮೇಲೆ ಮಾಡಿರುವ ಆರೋಪಗಳೂ ಕೆಲಸ ಮಾಡಿಲ್ಲ. ಈಗಲೂ ಇಂತಹ ಆರೋಪ, ಅಪವಾದಗಳು ಕೆಲಸ ಮಾಡದು. ಎಲ್ಲವೂ "ವೈಟ್"‌ ಆಗಿರುವ ಕಾರಣದಿಂದ ಈಗಲೂ ಇಂತಹ ಅಪವಾದಗಳು ಇನ್ನಷ್ಟು ಗಟ್ಟಿಯಾಗಲು ಕಾರಣವಾಗುತ್ತಿದೆ.

ಈಗ ಕರಾವಳಿಯಲ್ಲಿ ಬಿಜೆಪಿ, ಸಂಘಪರಿವಾರ ಆಂತರಿಕವಾಗಿ ಸೋಲು ಕಂಡಿದ್ದರೆ ಅದು ಇಲ್ಲಿನ ನಾಯಕರ ಕಾರಣದಿಂದ. ಒಳಒಪ್ಪಂದದ ಕಾರಣದಿಂದ, ಭ್ರಷ್ಟಾಚಾರದಿಂದ, ಕಪ್ಪಕಾಣಿಕೆಯ ಕಾರಣದಿಂದ, ಹಿಂದುತ್ವ ಎನ್ನುತ್ತಾ ಜಾತಿಯನ್ನು ಒಡೆದಿರುವ ಕಾರಣದಿಂದ, ನಡೆಯೊಂದು ನುಡಿಯೊಂದು ಆಗಿರುವ ಕಾರಣದಿಂದ...

ಈಗ  ಲೋಕಸಭಾ ಚುನಾವಣೆಯ ಸಮಯದಲ್ಲೂ ಅದೇ ಕಾಣುತ್ತಿದೆ.. ಅನೇಕ ಕಾಣಿಕೆಗಳ ಪ್ರಭಾವ ಈಗಲೇ ಕಾಣಲು ಆರಂಭವಾಗಿದೆ. ಕಪ್ಪಕಾಣಿಕೆಯ ಪ್ರಭಾವಕ್ಕೆ ಕರಾವಳಿಯಲ್ಲಿ ಜನರು ಸೊಪ್ಪು ಹಾಕುವುದಿಲ್ಲ ಎಂದು ಪುತ್ತೂರಿನಲ್ಲಿ ಸಂದೇಶ ನೀಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಕರಾವಳಿ ಸರಿಯಾಗುವ ಲಕ್ಷಣಗಳು ಇಲ್ಲ. ಹೀಗಾಗಿ ಇದೇ ವೇಳೆ ಕಾಂಗ್ರೆಸ್‌ ಹಿಂದುತ್ವ ಪರವಾಗಿರುವ ಸಮರ್ಥನನ್ನು ಅಭ್ಯರ್ಥಿಯಾಗಿ ಇಳಿಸಿದರೆ ಕರಾವಳಿಯಲ್ಲಿ "ಕೈ"ಎತ್ತುವುದು ಖಚಿತ... ಆದರೆ ಅಲ್ಲೂ "ರಾಜಕೀಯ" ಮೇಳೈಸುತ್ತಿದೆ...!.

ಚುನಾವಣೆಯ ಹೊತ್ತಿಗೆ ಇನ್ನು ಕಾಣುವುದು ಮೋದಿ ಹವಾ..!. ಯಾವ ವ್ಯಕ್ತಿಯೂ, ಯಾವ ಪಕ್ಷವೂ ತನ್ನ ನಾಯಕನ ಹಾದಿಯಲ್ಲಿ, ನಾಯಕ ಮಾದರಿ ಅನುಸರಿಸಿದರೆ ಮಾತ್ರವೇ ಗ್ರಾಮೀಣ ಮಟ್ಟಕ್ಕೂ ನಾಯಕನ ಉದ್ದೇಶ ತಲುಪಲು ಸಾಧ್ಯ. ಆದರೆ ಇಂದು ದಕ್ಷಿಣ ಕನ್ನಡದಲ್ಲೇ ಗಮನಿಸಿದರೆ ಸ್ವಚ್ಛ ಭಾರತ್..‌, ಗ್ರಾಮೀಣ ಪ್ರದೇಶದಲ್ಲೂ ಡಿಜಿಟಲ್‌ , ಯುವಕರಿಗೆ ಉದ್ಯೋಗ, ಕೃಷಿ ಬೆಳವಣಿಗೆ ಸೇರಿದಂತೆ ಮೋದಿ ಅವರ ಉದ್ದೇಶಗಳನ್ನು ತಲುಪಿಸಲು ಕೆಲಸ ಮಾಡಿದ ನಾಯಕರು ಎಷ್ಟು..!? ಇಂದೂ ಕಸದ ರಾಶಿ ಬೀಳುತ್ತಿದೆ..!. ನೀವು ಗಮನಿಸಿ ಅದೇ ಮೋದಿ ಹೆಸರು ಹೇಳುವ ನಾಯಕರ ಕಟ್ಟಡದ ಸುತ್ತಲೂ ಬೇಕಾದರೆ ಕಸ ಇರುತ್ತದೆ...!. ಹಾಗಾಗಿ ಮೋದಿ ಹೆಸರಿನಲ್ಲಿ ಬರುವವನೂ ಅಂತಹ ಕೆಲಸದ ಆಸಕ್ತಿ ಉಳ್ಳವನೂ ಆಗಿರಬೇಕು...!

ಈ ರಾಜಕೀಯದ ನಡುವೆ ಅಪಾಯ ಹಾಗೂ ಭಯ ಏನೆಂದರೆ ಚುನಾವಣೆಗೂ ಮುನ್ನ ಗಲಭೆಗಳಾದೀತಾ....!!?

ಆದರ್ಶ ಗ್ರಾಮದಲ್ಲಿ ಅನುದಾನಕ್ಕೆ "ಭಗೀರಥ ಪ್ರಯತ್ನ " | ಇದುವೇ ಐದು ವರ್ಷದ ಮಾರ್ಕ್‌ ಕಾರ್ಡ್....!‌ |

ಪ್ರಧಾನಿಗಳ ಕನಸಿನ ಕೂಸು ಎಂಬಂತೆ,  ಪ್ರತೀ ಸಂಸದರಿಂದ ಆದರ್ಶ ಗ್ರಾಮದ ಆಯ್ಕೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಳ್ಪ ಆದರ್ಶ ಗ್ರಾಮ.

ಪ್ರಧಾನಿಗಳ ಕನಸು ಹೇಗಿತ್ತೆಂದರೆ, ಪ್ರತೀ ಸಂಸದರು ತಮ್ಮ ಸ್ವಂತ ನಿಧಿಯನ್ನು ಹೊರತುಪಡಿಸಿ ಪ್ರತ್ಯೇಕವಾದ ಅನುದಾನ  ಈ ಗ್ರಾಮಗಳಿಗೆ ತರಬೇಕು. ಅಂದರೆ ಖಾಸಗಿ ಕಂಪನಿಗಳ ಜೊತೆ ಆ ಕ್ಷೇತ್ರದ ಸಂಸದ ಮಾತುಕತೆ ನಡೆಸಿ ಅವರಿಂದ ಸಿಎಸ್‌ಆರ್‌ ಫಂಡ್‌ ತರುವುದು. ಅಭಿವೃದ್ಧಿಯ ಹೊರತಾಗಿ ಅಂದರೆ ಭೌತಿಕ ಅಭಿವೃದ್ಧಿ ಹೊರತಾಗಿ , ಸಾಮುದಾಯಿಕ ಅಭಿವೃದ್ಧಿ ಬೇರೆಯೆ ಇರುತ್ತದೆ. ಅದು ಜನರ ಚಿಂತನಾ‌ ಮಟ್ಟದ ಬೆಳವಣಿಗೆ, ಸಾಮಾಜಿಕ‌ ಬದ್ಧತೆ ಇತ್ಯಾದಿಗಳೂ ನಡೆಸುವುದು.ಹಾಗೆಂದು ನಾನು ಆದರ್ಶ ಗ್ರಾಮದ ಬಗ್ಗೆ ತಿಳಿದುಕೊಂಡದ್ದು. ಎಂತಹ ಅದ್ಭುತವಾದ ಐಡಿಯಾ. ಹಾಗೇ ಆ ಗ್ರಾಮ ಎಲ್ಲಾ ಆಯಾಮಗಳ ಮೂಲಕವೂ ಆದರ್ಶ ಆಗಬೇಕು.‌ಅದಕ್ಕಾಗಿ ಆಯ್ಕೆ ಆಗಬೇಕಿರುವುದು ತೀರಾ ಹಿಂದುಳಿದ ಗ್ರಾಮ ದಕ್ಷಿಣ  ಕನ್ನಡ ಜಿಲ್ಲೆಗೆ ಆಯ್ಕೆಯಾದ್ದು ಬಳ್ಪ ಗ್ರಾಮ.‌ ಬಹುಪಾಲು ಅರಣ್ಯ‌ಇರುವ ಗ್ರಾಮ.‌ಒಂದು ಕಾಲದಲ್ಲಿ ‌ವಿಪರೀತ ಮಂಗನಕಾಯಿಲೆ ಕಾಡಿದ ಗ್ರಾಮ. ಈಗಲೂ ಚಿರತೆ,‌ಕಾಡುಪ್ರಾಣಿಗಳ‌ ಹಾವಳಿ ಇರುವ ಊರು.‌ ಇಂತಹ ಊರಲ್ಲಿ ಸಹಜವಾಗಿಯೇ ಅಭಿವೃದ್ಧಿಯ ಪಟ್ಟಿ ದೊಡ್ಡದೇ ಇರುತ್ತದೆ.

ನಾನು ನಿತ್ಯವೂ ಬರುವುದು,‌ಓಡಾಡುವುದು ಇದೇ  ಬಳ್ಪದ ಮೂಲಕ. ಬಳ್ಪ ಎಂಬ ಆದರ್ಶ ಗ್ರಾಮಕ್ಕೆ ಈಗ ಸಾಕಷ್ಟು ಅನುದಾನ ಬಂದಿದೆ..!. 

ಇಲ್ಲಿ ಬಳ್ಪದ ಸರ್ಕಾರಿ ಶಾಲೆಯನ್ನು ಸುಸಜ್ಜಿತವಾಗಿ ಮಾಡಲಾಗಿದೆ, ರಿಂಗ್‌ ರಸ್ತೆ ಮಾಡಲಾಗಿದೆ, ಬೋಗಾಯನಕೆರೆ ಅಭಿವೃದ್ಧಿ ಮಾಡಲಾಗಿದೆ, ಕೆಲವು ಹಳ್ಳಿ ರಸ್ತೆ ದುರಸ್ತಿ ಆಗಿದೆ, ಪಂಚಾಯತ್‌ ಕಟ್ಟಡ ಆಗಿದೆ... ಹೀಗೇ ಕೆಲವು ಕೆಲಸ ಆಗಿದೆ. ಇನ್ನೂ ಪಟ್ಟಿ ಇದೆ...ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ರಿಯೆ. ಹಾಗಾಗಿ ಅದರ ಪಟ್ಟಿ ಇನ್ನೂ.... ಅದು ಮುಗಿಯದ್ದು, ಮುಗಿಯಲೂ ಬಾರದು... 

ಈ ಎಲ್ಲದರ ನಡುವೆ ಸರ್ಕಾರದ ಐದು ವರ್ಷ ಅವಧಿ ಪೂರೈಸುತ್ತಾ ಬರುತ್ತಿದ್ದಂತೆಯೇ ಈಚೆಗೆ ಕೆಲವು ದಿನಗಳಿಂದ ಆದರ್ಶ ಗ್ರಾಮ ಬಳ್ಪದ ಅಲ್ಲಲ್ಲಿ ಬ್ಯಾನರ್‌ ಕಾಣುತ್ತಿದೆ... 

ಅದರಲ್ಲಿ ಅನುದಾನದ ಪಟ್ಟಿ, ಅನುದಾನ ತರಲು ಶ್ರಮಿಸಿದ ಯುವಕರೊಬ್ಬರನ್ನೂ ಉಲ್ಲೇಖಿಸಲಾಗಿದೆ. ಈಗ ಇರುವುದು ಪ್ರಶ್ನೆ. ಹಾಗಿದ್ದರೆ ಆದರ್ಶ ಗ್ರಾಮ ವೈಫಲ್ಯವಾಗಿದೆ ಎಂದು ಹೇಳಲು ಕಾರಣವೇನು..? ಸಂಸದರು ಅಥವಾ ಪ್ರಧಾನಿಗಳ ಪಕ್ಷದ ಪ್ರಮುಖರು ಯಾರೊಬ್ಬರೂ ಆದರ್ಶ ಗ್ರಾಮದ ಬಗ್ಗೆ ಯೋಚನೆ ಮಾಡಿಲ್ಲವೇ...? ಗ್ರಾಮದ ಅಭಿವೃದ್ಧಿಗೆ, ಆದರ್ಶ ಗ್ರಾಮಕ್ಕಾಗಿ ಅನುದಾನ ತರಲು ಪ್ರಯತ್ನಿಸಿದ ಯುವಕ ಒಬ್ಬನೇ ಎಷ್ಟು ಪ್ರಯತ್ನ ಮಾಡಬಲ್ಲ...?. ಒಂದು ಗ್ರಾಮದ ಅಭಿವೃಧ್ಧಿಗೆ ಒಬ್ಬ ಯುವಕ ಮಾತ್ರಾ ಸಾಕಾಗದು. ಒಂದು ಕಡೆ "ಭಗೀರಥ ಪ್ರಯತ್ನ" ಎಂದು‌ ಉಲ್ಲೇಖಿಸಲಾಗಿದೆ. ಆದರ್ಶ ಗ್ರಾಮದ ಅಭಿವೃದ್ಧಿಗೆ ಭಗೀರಥ‌ ಪ್ರಯತ್ನದ ಮೂಲಕ ಅನುದಾನ ಬಂದಿದೆ ಎಂದು‌ ಫಲಾನುಭವಿ ಜನರೇ ಹೇಳುತ್ತಾರಾದರೆ , ದೂರದಿಂದ ನಿಂತ ಯಾರೂ ಮಾತನಾಡಬೇಕಾಗಿಲ್ಲ...!. ಅದರ ರಿಸಲ್ಟ್ ಕಾರ್ಡ್ ಇಲ್ಲೇ ಇದೇ...!



ಅಷ್ಟೇ ಅಲ್ಲ, ಇಲ್ಲಿ ಅಷ್ಟೊಂದು ಪಂಚಾಯತ್‌ ಸದಸ್ಯರು ಪ್ರಧಾನಿಗಳ ಕನಸಿಗೆ ಪ್ರಯತ್ನವೇ ಮಾಡಿಲ್ಲವೇ...?. ಹಾಗಿದ್ದರೆ, ಇಲ್ಲಿ ಒಂದು ವೇಳೆ ಆದರ್ಶ ಗ್ರಾಮ ವೈಫಲ್ಯವಾಗಿದ್ದರೆ ಅದು ಸಂಸದರಿಂದ, ಪ್ರಧಾನಿಗಳ ಕಾರಣದಿಂದ ಅಲ್ಲ, ಸಕ್ರಿಯ ಯುವಕರ ಕೊರತೆಯಿಂದ. ಪ್ರಧಾನಿಗಳ ಪಕ್ಷದ ಕಾರಣದಿಂದ, ಇದುವರೆಗೂ ಇದ್ದ ಈ ಕ್ಷೇತ್ರದ ಶಾಸಕರ ಕಾರಣದಿಂದಲೇ...!?

ಅಂದು ಕೆಲವು ಸಮಯ ನಾನು ಪತ್ರಿಕೆಯಲ್ಲಿ ಬರೆಯುವ ಮೂಲಕ ರಾಷ್ಟ್ರಜಾಗೃತಿ ಮಾಡುತ್ತಿದ್ದೆ. ನನಗೆ ಗೊತ್ತಿದೆ, ಜನರೇ ಮಾಡಿದ ಹಳ್ಳಿಯ ಒಂದು ಕಟ್ಟವನ್ನೂ ಆದರ್ಶ ಎಂದು ಬರೆದಿದ್ದೆ. ಹಾಲು ಸೊಸೈಟಿ ಇಡೀ ಗ್ರಾಮದಲ್ಲಿ ಗೋಬರ್ ಗ್ಯಾಸ್ ಮಾಡುವ, ಹೈನುಗಾರಿಕೆ ಮಾಡುವ ಕನಸನ್ನೂ ಬರೆದಿದ್ದೆ, ಕೇಸು ರಹಿತ ಗ್ರಾಮದ ಕನಸನ್ನೂ ಬರೆದಿದ್ದೆ...! ಅದೆಲ್ಲಾ ಆಗಿದೆಯೋ ಇಲ್ಲವೋ ಗೊತ್ತಿಲ್ಲ.

ಇನ್ನೂ ಒಂದು ಕನಸು ಇಲ್ಲಿ ಇದೆ, ಪ್ರತೀ ಊರು ಅಭಿವೃದ್ಧಿ ಆಗಲು, ಅನುದಾನ ತರಿಸಬಲ್ಲ ಸಾಕಷ್ಟು ಯುವಕರು, ಸಕ್ರಿಯ ಕಾರ್ಯಕರ್ತರು ಅಗತ್ಯ ಇದೆ ಎನ್ನುವುದಕ್ಕೆ ಬಳ್ಪವೇ ಸಾಕ್ಷಿ. ಒಬ್ಬ ಯುವಕ ಭಗೀರಥ ಪ್ರಯತ್ನದಿಂದ ಅನುದಾನ ತರಿಸಿರುವ ಬಗ್ಗೆ ಜನರು ಮಾತನಾಡುತ್ತಾರಾದರೆ, ಅಂತಹ ಯುವಕರು ಪ್ರತೀ ಗ್ರಾಮದಲ್ಲಿ ಬೆಳೆಯಬೇಕಿದೆ.ಗ್ರಾಮದ ಅಭಿವೃದ್ಧಿಗೆ...! , ಅದಕ್ಕೆ ಬಳ್ಪ ಆದರ್ಶ...!‌

ಬಳ್ಪದಂತಹ ಆದರ್ಶ ಗ್ರಾಮಕ್ಕೆ ಭಗೀರಥ ಪ್ರಯತ್ನದ ಮೂಲಕ ಅನುದಾನ ತರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಹಾಗೂ ಜನರು ಇದನ್ನು ಬಹಿರಂಗವಾಗಿ ಹೇಳುತ್ತಾರೆ ಎನ್ನುವುದೇ ಐದು ವರ್ಷದ ಆದರ್ಶ ಗ್ರಾಮದ ಮಾರ್ಕ್‌ ಕಾರ್ಡ್...!

ಕುಲ್ಕುಂದ ಜಾನುವಾರು ಜಾತ್ರೆ...!

ಒಂದು ಸಂಪ್ರದಾಯ, ಒಂದು ಸಂಸ್ಕೃತಿ, ಒಂದು ಇತಿಹಾಸ...

ನಾವೆಲ್ಲಾ ಸಂಸ್ಕೃತಿ ಉಳಿಸುವ ಬಗ್ಗೆ ಮಾತನಾಡುತ್ತಲೇ ಇರಬೇಕಾದರೆ , ಸದ್ದಿಲ್ಲದೇ ಒಂದು ಸಂಸ್ಕೃತಿ , ಒಂದು ಐತಿಹಾಸಿಕ ಘಟನೆಯೊಂದು ಮರೆಯಾಗಿ ಬಿಟ್ಟಿತು. ಕೇವಲ ಸಾಂಕೇತಿಕವಾಗಿ ಉಳಿದುಕೊಂಡಿತು.

ಸುಮಾರು 10 ವರ್ಷಗಳ ಹಿಂದೆ ಅಂದರೆ , ಅದು 2012. ಅಂದು ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಚರ್ಚೆ, ಗದ್ದಲ. ಎಲ್ಲಾ ಮೀಡಿಯಾಗಳೂ ಅಲ್ಲೇ ಇದ್ದವು ಕೆಲವು ದಿನ...!.

ಕುಲ್ಕುಂದ ಜಾನುವಾರು ಜಾತ್ರೆ ಮೂಲಕ ಕಸಾಯಿಖಾನೆಗೆ ಗೋವುಗಳು ಸಾಗಾಟ ಮಾಡಲಾಗುತ್ತದೆ. ಇದಕ್ಕಾಗಿ ಈ ಆಚರಣೆ ನಿಲ್ಲಬೇಕು ಎಂಬುದು ಚರ್ಚೆಯ ಸಾರಂಶವಾಗಿತ್ತು. ಈ ಚರ್ಚೆಗೆ ನಿಜವಾಗಿಯೂ ಅಂದು ಅರ್ಥ ಇತ್ತು. ಕಸಾಯಿಖಾನೆಗೆ ಎತ್ತುಗಳು, ಕೋಣಗಳು ಸಾಗಾಟ ಆಗುತ್ತಿತ್ತು ಕೂಡಾ.

ಆದರೆ ಇದರ ತಡೆ ಹೇಗೆ ? ಈ ಬಗ್ಗೆ ಚರ್ಚೆ ಆಯಿತು. ಆಗ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಿಂದಲೇ ವ್ಯವಸ್ಥೆ ಮಾಡಿಸಿಕೊಂಡು, ಈ ಸಂಪ್ರದಾಯ ಉಳಿಯಬೇಕು, ಸಂಸ್ಕೃತಿ ಉಳಿಯಬೇಕು ಹಾಗೂ ಗೋವುಗಳು ಕುಲ್ಕುಂದಲ್ಲಿ ಇರಬೇಕು, ಬರಬೇಕು ಎಂದು ಯೋಚಿಸಿಕೊಂಡು , ಜಾನುವಾರು ಜಾತ್ರೆಯ ಸಮಯದಲ್ಲಿ ಗೋತಳಿ ಪ್ರದರ್ಶನ ಹಾಗೂ ಗೋವಿಗೆ ಸಂಬಂಧಿಸಿದ ಕಾರ್ಯಗಳು, ಸಮ್ಮೇಳನ ಇತ್ಯಾದಿ ನಡೆಸುವುದು ಹೆಚ್ಚು ಸೂಕ್ತ ಎಂದು ನಿರ್ಧರಿಸಲಾಗಿತ್ತು.  ಆ ಪ್ರಕಾರ ಕೆಲವು ಸಮಯ ಹಾಗೇ ನಡೆಯಿತು.

ಆದರೆ‌ ಜಾನುವಾರು ಜಾತ್ರೆ‌ ನಡೆಸುವ ಜವಾಬ್ದಾರಿ ಪಂಚಾಯತ್ ಮೇಲೆ ಇದೆ ಎಂದೂ ಅಂದು ಚರ್ಚೆಯಾಗಿತ್ತು. ಸಂಪ್ರದಾಯ ಉಳಿಸುವ ನೆಲೆಯಲ್ಲಿ ದೇವಸ್ಥಾನದ ವತಿಯಿಂದ ನಡೆಸುವುದು ಸೂಕ್ತ ಎಂದು ಅಂದು ಅಲಿಖಿತವಾದ ಮಾತುಕತೆ ನಡೆದಿತ್ತು‌,‌"ಹಿರಿಯರ" ಮುಂದೆ...!. ಈಗ ಅದೆಲ್ಲವೂ ಮಾಯವಾಗಿದ್ದೇಕೆ ಎಂಬುದು ಗೊತ್ತಿಲ್ಲ. ಮುಂದಿನ ಬೆಳವಣಿಗೆ‌ ಗೊತ್ತಿಲ್ಲ. 

ಈ ಚಿತ್ರ 2011 ರಲ್ಲಿ ತೆಗೆದದ್ದು


ಈಗ ಮುಖ್ಯವಾಗಿ ಕುಕ್ಕೆ ಕ್ಷೇತ್ರದಲ್ಲಿ ಬಹುಶ: ಇಂತಹ ಆಚರಣೆ ನಡೆಸುವುದಕ್ಕೆ ಅನುದಾನದ ಕೊರತೆ ಇರಲಿಕ್ಕಿಲ್ಲ. ಇದೊಂದು ಐತಿಹಾಸಿಕ ಘಟನೆ, ಇತಿಹಾಸ ಕೂಡಾ ಇದೆ. ನಾವು ಯಾವುದೋ ಜಯಂತಿ ಆಚರಣೆ ಮಾಡುವುದಕ್ಕೆ ವಿರೋಧ ಮಾಡುತ್ತೇವೆ, ನಾವು ಗೋವುಗಳ ರಕ್ಷಣೆ ಬಗ್ಗೆ ಮಾತನಾಡುತ್ತೇವೆ, ನಾವು ಗೋವು ಸಾಕುವಂತೆ ಒತ್ತಾಯ ಮಾಡುತ್ತೇವೆ... ಈ ಎಲ್ಲಾ ಗದ್ದಲಗಳ ನಡುವೆ, ನಮ್ಮದೇ ಒಂದು ಆಚರಣೆಯನ್ನು ನಡೆಸುವುದಕ್ಕೆ ನಮಗೆ ಮರೆತೇ ಹೋಯಿತೇ....!?.

ಗೋವು ಉಳಿಸುವುದರಿಂದ, ಗೋವಿನ ಪ್ರೀತಿ ಬೆಳೆಸುವುದರಿಂದ ಯಾವ "ರಾಜಕೀಯ" ಲಾಭವೂ ಇಲ್ಲ...!, ಅದೇ ಗೋವು ಕಸಾಯಿಖಾನೆಗೆ ಸಾಗಾಟವಾದರೆ, ಅದರಿಂದ ಮಾತ್ರವೇ "ರಾಜಕೀಯ" ಲಾಭ ಇದೆ...!. ಇಷ್ಟೇ ಇಂದಿನ ಜಗತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ...!

05 ನವೆಂಬರ್ 2022

ಅಡಿಕೆ ಹಳದಿ ಎಲೆರೋಗದ ಸಭೆ | ಕಾರಣಗಳನ್ನು ಹುಡುಕುತ್ತಲೇ ಹೋದರೆ ಹೇಗೆ ? | ಒಂದು ಹೆಜ್ಜೆ ಮುಂದೆ ಹೋಗುವುದು ಯಾವಾಗ ? |

 


ಕ್ಯಾಂಪ್ಕೋ ನೇತೃತ್ವದಲ್ಲಿ ನಡೆದ ಅಡಿಕೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕೆ ರೋಗದ ಬಗ್ಗೆ ನಡೆದ ಸೆಮಿನಾರ್‌ನಲ್ಲಿ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ನೆಲೆಯಲ್ಲಿ ಭಾಗವಹಿಸಿದೆ. ಮೊದಲ ಬಾರಿಗೆ ಈ ವಿಷಯಕ್ಕೆ ಸಂಬಂಧಿಸಿ ಕೃಷಿ ತಜ್ಞರು, ಎಲ್ಲಾ ಇಲಾಖೆಯ ವಿಜ್ಞಾನಿಗಳು ಜೊತೆಯಾದರು. ಕೆಲವು ವಿಭಾಗವು ಹಳದಿ ಎಲೆರೋಗಕ್ಕೆ ಪೈಟೋಪ್ಲಾಸ್ಮಾ ಎಂಬ ವೈರಸ್‌ ಕಾರಣ ಎಂದಿದ್ದರು, ಅದನ್ನೇ ಈಗಲೂ ಹೇಳಲಾಗುತ್ತಿದೆ. ಈ ನಡುವೆಯೇ ಫೈಟೋಪ್ಲಾಸ್ಮಾ ಒಂದೇ ಕಾರಣವಲ್ಲ, ಗೊಬ್ಬರ ನಿರ್ವಹಣೆ, ಕೃಷಿ ನಿರ್ವಹಣೆಯೂ ಕಾರಣವಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಇದೆರಡೂ ಅಭಿಪ್ರಾಯಗಳು ಇನ್ನು ಒಂದಾಗಿ ಮುಂದೆ ಸಾಗಬೇಕಿದೆ. ಈ ಕೆಲಸ ಎಂದೋ ಆಗಬೇಕಿತ್ತು. ಫೈಟೋಪ್ಲಾಸ್ಮಾಕ್ಕೆ ಪರಿಹಾರ ರೋಗ ನಿರೋಧಕ ತಳಿ ಅಭಿವೃದ್ಧಿ ಮಾತ್ರಾ. ಇದರ ಜೊತೆಗೆ ಗೊಬ್ಬರ ನಿರ್ವಹಣೆಯೂ ಅಗತ್ಯವಾಗಿದೆ.  ಈ ದಿಕ್ಕಿನಲ್ಲಿ ಎಲ್ಲಾ ಚಿಂತನೆಗಳು ಒಂದೇ ವೇದಿಕೆ ಅಡಿಗೆ ಈಗ ಬಂದವು. ಇದಕ್ಕಾಗಿ ಕ್ಯಾಂಪ್ಕೋಗೆ ಧನ್ಯವಾದ ಹೇಳಬೇಕು.

ಈಗ ಇರುವ ಪ್ರಶ್ನೆ ಎಂದರೆ, ಅಡಿಕೆ ಎಲೆಚುಕ್ಕಿ ರೋಗದಲ್ಲಿಯೂ ವಿಜ್ಞಾನಿಗಳು ಕಾರಣ ಪತ್ತೆ ಮಾಡಿದ್ದಾರೆ, ಅದಕ್ಕೆ ಬೇಕಾದ ಔಷಧಿಯನ್ನೂ ಹೇಳಿದ್ದಾರೆ. ಹಳದಿ ಎಲೆರೋಗದಲ್ಲಿಯೂ ಈಗ ಕಾರಣ ಸಿಕ್ಕಿದೆ, ಅದಕ್ಕೆ ಬೇಕಾದ ಪರಿಹಾರ ಮಾರ್ಗಗಳು ಇನ್ನೂ ಸಿಕ್ಕಿಲ್ಲ. ದಾರಿಗಳು ಇದೆ, ಅವು ದೀರ್ಘ ಕಾಲಿಕ.  ಆದರೆ ಇದುವರೆಗೂ ಈ ದಾರಿ ಚಾಲನೆಗೆ ಬಂದಿಲ್ಲ. ವಿಜ್ಞಾನಿಗಳ ಕೆಲಸ ರೋಗದ ಪತ್ತೆ ಹಾಗೂ ಅದಕ್ಕೆ ಪರಿಹಾರ ಮಾರ್ಗ. ಪರಿಹಾರಗಳನ್ನು ಅನುಷ್ಟಾನ ಮಾಡುವ ಕೆಲಸ ಸಂಸ್ಥೆಗಳಿಗೆ, ಸರ್ಕಾರಗಳಿಗೆ, ಆಡಳಿತಕ್ಕೆ.

ಅಡಿಕೆ ಬೆಳೆಗಾರರಿಗೆ ಈಗ ಬೇಕಾದ್ದು ಅಡಿಕೆ ಹಳದಿರೋಗಕ್ಕೆ ಪರಿಹಾರ ಇದೆಯೋ ಇಲ್ಲವೋ ? ಇದ್ದರೆ ಏನು ಮಾಡಬಹುದು ? ಇಲ್ಲದೇ ಇದ್ದರೆ ಬದುಕಿಗೆ ಪರ್ಯಾಯ ಏನು ? ಇದಿಷ್ಟೇ ಈಗ ರೈತರು ಬಯಸುವುದು. ಇದರಲ್ಲಿ ವಿಳಂಬ ಆದಷ್ಟು ಕೃಷಿಕರಿಗೇ ಸಮಸ್ಯೆಯಾಗುತ್ತದೆ. ಹೀಗಾಗಿ ಯಾವ ಸಭೆಗಳು ನಡೆದರೂ ಅತಿ ಶೀಘ್ರದಲ್ಲಿಯೇ ಉತ್ತರವೂ ಸಿಗಬೇಕಿದೆ. ಮುಂದೆ ಅಡಿಕೆ ಸಮಸ್ಯೆಯ ಬಗ್ಗೆ ಇಷ್ಟರಲ್ಲೇ ಚರ್ಚಿಸುತ್ತಾ, ಸಂಶೋಧನೆ ಮಾಡುತ್ತಾ ಕೂತರೆ ಹೇಗೆ ? ಅಡಿಕೆ ಹಾನಿಕಾರಕ, ಅಡಿಕೆ ಆಮದು, ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಭವಿಷ್ಯ ಹೀಗೇ ಹಲವಾರು ಸಂಗತಿಗಳು ಮುಂದಿನ ದಿನಗಳಲ್ಲಿ ಚರ್ಚೆಯ ವಿಷಯ ಆಗಲಿದೆ. ಈ ಬಗ್ಗೆ ಸಾಮಾಹಿಕ ಚಿಂತನೆ, ಚರ್ಚೆ ನಡೆಯಬೇಕಾಗುತ್ತದೆ. ಇದರ ಜೊತೆಗೇ ಅಡಿಕೆ ಭವಿಷ್ಯದ ಬಗ್ಗೆಯೇ ಗಂಭೀರವಾದ ಚಿಂತನೆ ಅಗತ್ಯ ಇದೆ. 

ನಾವು ಅನೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗಲೂ ಇದೆಲ್ಲಾ ಪಿಪಿಟಿ ನೋಡಿ, ಕೇಳಿ ಸಾಕಾಗಿದೆ. ಆದರೆ ಅದಕ್ಕಿಂತ ಆಚೆಗೆ ಯಾವ ಫಲಿತಾಂಶವೂ, ಪ್ರಯೋಗದ ಫಲಿತಾಂಶವೂ ಲಭ್ಯವಾಗುತ್ತಿಲ್ಲ. ಇನ್ನೂ ಸಂಶೋಧನೆಯ ಹಾದಿಯಲ್ಲಿಯೇ ಉಳಿದುಕೊಂಡರೆ ಹೇಗೆ? ಹಳದಿ ಎಲೆರೋಗ ಕಾಣಿಸಿಕೊಂಡು ವರ್ಷಗಳು ಅನೇಕ ಉರುಳಿದರೂ ಪರಿಹಾರ ಕಾಣದೇ ಇರುವುದು  ಈ ದೇಶ ಗಂಭೀರ ವಿಷಯ ಆಗಬೇಕು. ಪ್ರತೀ ಬಾರಿಯೂ ನಾವು ಹಳದಿ ಎಲೆರೋಗದ ಪಿಪಿಟಿ ನೋಡಿ, ಕಾರಣ ಪೈಟೋಪ್ಲಾಸ್ಮಾ ಎಂದು ತಿಳಿದುಕೊಂಡು ಬಂದರೆ ಹೇಗೆ? ಇನ್ನು ಒಂದು ಹೆಜ್ಜೆಯಾದರೂ ಮುಂದೆ ಹೋಗಬೇಕು. ನಿನ್ನೆಯ ಸಭೆಯಲ್ಲೂ ಕಾರಣಗಳನ್ನು ಎಲ್ಲರೂ ಹೇಳಿದರು. ಪರಿಹಾರದ ಕಡೆಗೆ ಬರುವಾಗ ಮೌನವಾಗುತ್ತದೆ, ಚರ್ಚೆ ಹೆಚ್ಚಾಗುತ್ತದೆ, ಟೀಕೆ, ವಿರೋಧ, ಅಸಮಾಧಾನಗಳು ಕಾಣುತ್ತದೆ. ಇನ್ನು ಅನುದಾನಗಳು ಸಿಗುತ್ತವೆ ಎಂದಾಗ ಇನ್ನೊಂದಿಷ್ಟು ಪ್ರಾಜೆಕ್ಟ್‌ ಗಳು ತಯಾರು ಮಾಡುವವರು ಇದ್ದಾರೆ. ಇದರಿಂದ ಕೃಷಿಕರಿಗೇ ಸಮಸ್ಯೆ ಹೊರತು ಬೇರೆ ಪ್ರಯೋಜನವೇ ಇಲ್ಲ. ಎಲ್ಲಾ ಪರಿಹಾರ ಮಾರ್ಗಗಳೂ ದೀರ್ಘ ಕಾಲಿಕ, ಕೊರೋನಾ ಮಾದರಿಯಲ್ಲಿ ತಕ್ಷಣದ ಪರಿಹಾರಗಳು ಇಲ್ಲವೇ ಇಲ್ಲ.  

ಅಡಿಕೆಯ ಹಳದಿ ಎಲೆರೋಗದ ಬಗ್ಗೆ 2000 ಇಸವಿಯ ನಂತರ ಯಾವ ಸಂಶೋಧನೆಗಳು ನಡೆದಿಲ್ಲ ಎನ್ನುವುದು ನಿನ್ನೆಯ ಸಭೆಯಲ್ಲಿ ಕೊಟ್ಟ ಮಾಹಿತಿ ಪತ್ರದಲ್ಲಿ ಉಲ್ಲೇಖ ಇತ್ತು. ಈಚೆಗೆ ಸರ್ಕಾರವೂ ಅಡಿಕೆ ಎಂದರೆ ಕಡತಗಳನ್ನು ಬದಿಗೆ ಸರಿಸುತ್ತಿದೆ.ಏಕೆಂದರೆ ಅಡಿಕೆ ಹಾನಿಕಾರಕ ಎಂಬ ಕಾರಣದಿಂದ. 

ಈಗ ನಡೆದ ಸಭೆಯಲ್ಲೂ ಎಲ್ಲಾ ವಿಜ್ಞಾನಿಗಳು ಪಿಪಿಟಿ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಇದುವರೆಗೆ ನೀಡಿದ ಎಲ್ಲಾ ಮಾಹಿತಿಗಳನ್ನೂ ಮತ್ತೆ ಹೇಳಿದ್ದಾರೆ.   ಇನ್ನು ಅದರ ಫಾಲೋಅಪ್‌ ಮಾಡುವ ಕೆಲಸ ಮಾತ್ರಾ. ಅದರ ನೇತೃತ್ವ ಇರುವುದು ಈಗ ಅಷ್ಟೇ.

ಇದರ ಜೊತೆಗೆ ಈಚೆಗೆ ನನಗೆ ಅನಿಸುತ್ತಿದೆ, ಅಡಿಕೆ ಹಳದಿ ಎಲೆರೋಗ, ಅಡಿಕೆ ಎಲೆಚುಕ್ಕಿ ರೋಗ ಸೇರಿದಂತೆ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೃಷಿಕರೆಲ್ಲಾ ಸಂಘಟಿತರಾಗಲೇಬೇಕಿದೆ. ಇಲ್ಲದಿದ್ದರೆ ಇನ್ನೂ ಈ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಈಗಾಗಲೇ ಸಂಘಟನೆಯ ನೆಲೆಯಲ್ಲಿ ನಾವೂ ಒಂದು ಹೆಜ್ಜೆ ಮುಂದಕ್ಕೆ ಯೋಚಿಸುತ್ತಿದ್ದೇವೆ. ಎಲ್ಲರೂ ಜೊತೆಯಾದರೆ ಪರಿಹಾರ ಬೇಗನೆ ಸಾಧ್ಯವಿದೆ. ಚಿಂತನೆಗಳಲ್ಲಿ ವ್ಯತ್ಯಾಸ ಇರಬಹುದು, ಟೀಕೆಗಳು ಇರಬಹುದು, ಖಾರವಾಗಿ ಹೇಳುವವರೂ ಇದ್ದಾರೆ, ವಿಷಾದಿಸುವವರೂ ಇರುತ್ತಾರೆ, ಹತಾಶೆಗೆ ಒಳಗಾದವರೂ ಇದ್ದಾರೆ. ಇವರೆಲ್ಲರೂ ಜೊತೆ ಇದ್ದರೆ ಮಾತ್ರವೇ ಬಹುಬೇಗನೆ ಪರಿಹಾರದ ಮಾರ್ಗ ಸಾಧ್ಯವಿದೆ.