10 ಮೇ 2011

ಈ ದಾರಿ .

ಅವನು ಸುಮಾರು 3 ವರ್ಷದ ಬಾಲಕ. ಆ ಮನೆಗೆ ನಾನು ಖಾಯಂ ಅತಿಥಿ. ನನ್ನಲ್ಲಿ ಅತ್ಯಂತ ಸಲಿಗೆಯಿಂದ ಆತ್ಮೀಯತೆಯಿಂದ ಮಾತನಾಡುವ ಆ ಹುಡುಗ ನನಗೆ ಏನಿದ್ದರೂ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದ. ತನ್ನೆಲ್ಲಾ ವಸ್ತುಗಳನ್ನು ಬಿಡಿ ಬಿಡಿಯಾಗಿ ತೋರಿಸಿ ಖುಶಿ ಪಡುತ್ತಿದ್ದ.

ಮೊನ್ನೆ ಯಾಕೋ ಅವನ ಮನೆಗೆ ಹೋಗಿದ್ದಾಗ , ಸ್ನಾನ ಮಾಡುವ ಹೊತ್ತಿಗೆ ಬಚ್ಚಲು ಮನೆಗೆ ಬಂದು , ನೋಡು ನೀನು ಲೈಫ್ಬಾಯಿ ಸೋಪನ್ನೇ ಹಾಕು. ಇದು ಕೆಂಪಗಿನದ್ದು , ಇದನ್ನು ಹಾಕಿದರೆ ಏನಾಗುತ್ತೆ ಗೊತ್ತಾ ? ಅಂತ ಕೇಳಿದ ಆ ೩ ವರ್ಷದ ಬಾಲಕ ಮತ್ತೆ ಹೇಳುತ್ತಾನೆ , ನೋಡು ಇದನ್ನು ಹಾಕಿ ಸ್ನಾನ ಮಾಡಿದರೆ ರೋಗ ಬರೋದಿಲ್ಲ , ಮೈಯಲ್ಲಿರುವ ಹುಳ ಸಾಯುತ್ತೆ , ಗಟ್ಟಿ ಮುಟ್ಟಾದ ದೇಹ ಇರುತ್ತೆ ಅಂತೆಲ್ಲ ಹೇಳಿದ. ಇದನ್ನು ಯಾರು ಹೇಳಿದ್ದು ನಿನಗೆ ಅಂತ ಕೇಳಿದರೆ ಆತ ಹೇಳುತ್ತಾನೆ , ಟಿವಿಯಲ್ಲಿ ಬರುತ್ತಲ್ಲಾ ಅಂತಾನೆ. ಇದಿಷ್ಟೇ ವಿಷಯ.

ಇದು ಒಂದಲ್ಲ ಪ್ರಕರಣ, ಇಂತಹ ಅನೇಕ ಅನುಭವ ಹಲವರಿಗಾಗಿದೆ.ಆಗುತ್ತಲೇ ಇದೆ.ಇದೆಲ್ಲಾ ಟಿವಿ ಪರಿಣಾಮ ಅಂತ ನಾವು ನೇರವಾಗಿ ಹೇಳಿಬಿಡಬಹುದು. ಆದ್ರೆ ಟಿವಿ ನೋಡೋದಿಕ್ಕೆ ನಾವ್ಯಾಕೆ ಬಿಡಬೇಕು ಅಂತ ಇನ್ನೊಂದು ಪ್ರಶ್ನೆಯೂ ಜೊತೆಗೆ ಹುಟ್ಟಿಕೊಳ್ಳುತ್ತದೆ. ಇಂದು ಟಿವಿ ನೋಡಿದ್ದರ ಪರಿಣಾಮವಾಗಿ ಅನೇಕ ಸಂಗತಿಗಳು ಮಕ್ಕಳ ಮನಸ್ಸನ್ನು ಬಹುಬೇಗನೆ ತಲಪುತ್ತದೆ. ಅದರ ಜೊತೆಗೆ ದುಷ್ಪರಿಣಾಮಗಳು ಕೂಡಾ. ಒಂದು ಪರಿಣಾಮದ ಜೊತೆಗೇ ಇದೂ ಕೂಡಾ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಇಂದು ವ್ಯವಸ್ಥೆಯನ್ನು ಹಳಿದು ಪ್ರಯೋಜನ ಇಲ್ಲ. ಒಂದರ ಜೊತೆಗೆ ಇನ್ನೊಂದು ಇದ್ದೇ ಇದೆ. ಆದರೆ ನಮ್ಮ ದೃಷ್ಠಿ ಯಾವುದು ಎನ್ನುವುದರ ಮೇಲೆ ಇಡೀ ದಾರಿ ಕಾಣಿಸುತ್ತದೆ.

ಇದೇ ನೋಡಿ ,
ಇಂದು ಒಂದು ರಾಮಾಯಣದ್ದೋ , ಅಥವಾ ಸಾಮಾಜಿಕ , ವ್ಯಾವಹಾರಿಕ ಸಂಗತಿಯನ್ನೋ ಇದೇ ದೃಶ್ಯದ ಮೂಲಕ ಆ ಮಗು ನೋಡಿದ ತಕ್ಷಣವೇ ಅದು ಗ್ರಹಿಸಿಕೊಳ್ಳುತ್ತದೆ. ಮರುದಿನವೇ ಅದರ ಅನುಷ್ಠಾನದಲ್ಲಿ ಅದು ತೊಡಗಿಕೊಳ್ಳುತ್ತದೆ. ಆ ವಿಚಾರವನ್ನು ಆ ಮಗು ಮತ್ಯಾರಲ್ಲೋ ಕೇಳಿ ಇನ್ನಷ್ಟು ಗಟ್ಟಿ ಮಾಡುತ್ತದೆ. ಎಲ್ಲೂ ಉತ್ತರ ಸಿಕ್ಕಿಲ್ಲ ಅಂದಾಕ್ಷಣ ಅದಕ್ಕೆ ತನ್ನದೇ ನಿರ್ಧಾರಕ್ಕೆ ಬರುತ್ತೆ ಅದು.
ಹಾಗಾಗಿ ಅದ್ಯಾವುದೇ ಹೊಸದು ಬರಲಿ ಅದನ್ನು ಮಗು ಬಲು ಬೇಗನೆ ಕಲಿತು ಬಿಡುತ್ತದೆ. ಈ ಗುಣ ಮಕ್ಕಳಲ್ಲಿ ಬೆಳೆಯಬೇಕು. ಆದರೆ ಅದಕ್ಕೆ ಸರಿಯಾದ ದಾರಿಯನ್ನು ಮಾತ್ರಾ ಜವಾಬ್ದಾರಿಯುತರು ತೋರಿಸಬೇಕಾಗುತ್ತದೆ ಅಷ್ಟೇ.

ಅದಿಲ್ಲದೇ ಹೋದಲ್ಲಿ ಮೊನ್ನೆ ಯಾರೋ ಹೇಳುತ್ತಿದ್ದರು , ಇಂದು ಮೊಬೈಲ್ , ಕಂಪ್ಯೂಟರ್ ಮಕ್ಕಳನ್ನು ಹಾಳು ಮಾಡಿದೆ ಅಂತ. ಅದಲ್ಲ , ಮಕ್ಕಳು ಹಾಳಾಗದಂತೆ ಅಲ್ಲಿ ಎಚ್ಚರ ವಹಿಸಬೇಕಾದ್ದು ಆಯಾ ಘಟ್ಟದ ಜವಾಬ್ದಾರಿಯುತರು. ಮನೆಯಲ್ಲಾದರೆ ಹೆತ್ತವರು , ಹಾಸ್ಟೆಲ್‌ನಲ್ಲಾದರೆ ವಾರ್ಡನ್ , ಶಾಲೆಯಲ್ಲಾದರೆ ಪ್ರಾಂಶುಪಾಲರು ಅಷ್ಟೇ. ಇದು ಮೂರು ಸಂದರ್ಭದಲ್ಲಿ ಎಚ್ಚರವಾಗಿದ್ದರೆ ಎಚ್ಚರ ತಪ್ಪುವವರು ಯಾರು ಹೇಳಿ ?.