03 ಏಪ್ರಿಲ್ 2008

ದೇವರ "ಧ್ಯಾನ"ದಲ್ಲಿ.....



"ದೇವರು"......!!. ಇದು ಕಾಣದ ಸತ್ಯ...!?

ಈ ಜಗತ್ತಿನ ಪ್ರತಿಯೊಬ್ಬ ಕೂಡಾ ಮಾನಸಿಕ ನೆಮ್ಮದಿಗಾಗಿ ಒಂದಿಲ್ಲೊಂದು ಕೆಲಸವನ್ನು ಮಾಡುತ್ತಾನೆ. ಅದು ಭಕ್ತಿಯ ರೂಪದಲ್ಲಿ , ಕಾಯಕದ ರೂಪದಲ್ಲಿ , ಪ್ರೀತಿಯ ರೂಪದಲ್ಲಿ ಹೀಗೆ ಒಂದಿಲ್ಲೊಂದು ರೂಪದಲ್ಲಿ ಹೊರಹೊಮ್ಮುತ್ತದೆ.

ಸಂಕಟ ಬಂದಾಗ,ಮಾನಸಿಕವಾಗಿ ಬಳಲಿದಾಗ ಯಾವಾಗಲೂ ನೆನಪಾಗುವುದು "ದೇವರು" ಎಂಬ ಕಣ್ಣಿಗೆ ಕಾಣದ ಸತ್ಯ [ಮಾಯೆ] ಮತ್ತು ಆತನ "ಗುಡಿ". ಹೀಗಾಗಿ ಅನೇಕ ಮಂದಿ ನೆಮ್ಮದಿಯ ಅರಸುತ್ತಾ ದೇವಾಲಯಗಳಿಗೆ ಸಾಗುತ್ತಾರೆ ಅಲ್ಲಿ ವಿವಿಧ ಸೇವೆಗಳನ್ನು ಮಾಡಿಸುತ್ತಾರೆ. ಅದಕ್ಕೆ ತಕ್ಕಂತೆ ದೇವಾಲಯಗಳಲ್ಲಿ ಜನವೂ ಇರುತ್ತಾರೆ. ಅವರ "ಸೇವೆ"ಗಳನ್ನೂ ಮಾಡುತ್ತಾರೆ. ಕೊನೆಗೆ ಮಾನಸಿಕ ನೆಮ್ಮದಿಗಾಗಿ ಬಂದ ವ್ಯಕ್ತಿ ಮತ್ತೆ ಅಲ್ಲಿಂದ ಹಿಂದಿರುಗುವಾಗ ಮಾನಸಿಕ "ಭಾರ"ವನ್ನು ಹೊತ್ತುಕೊಂಡೇ ಹೋಗುತ್ತಾನೆ. ಇದ್ಯಾಕೆ ಹೀಗೆ? ಉತ್ತರ ಹುಡುಕಹೊರಟರೆ ಅದು ಕೈಗೆ ನಿಲುಕದು ತುಂಬಾ ದೂರದಲ್ಲಿದೆ.

ಅನೇಕ ಬಾರಿ ನನಗೆ ಅನ್ನಿಸಿದ್ದಿದೆ. ದೇವರು ನಿಜಕ್ಕೂ ಇದ್ದಾನಾ?.

ಈ ಸಮಾಜದಲ್ಲಿ ಎಷ್ಟು ಅನಾಚಾರ , ಮೋಸ, ವಂಚನೆ, ಕೊಲೆ, ಸುಲಿಗೆ,...... ಹೀಗೆ ನಡೆಯುತ್ತಲೇ ಇರುತ್ತದೆ. ಅನ್ಯಾಯ ಮಾಡಿದ ವ್ಯಕ್ತಿ ಮತ್ತೆ ಮರುದಿನ ರಾಜಾರೋಷವಾಗಿ ಸುತ್ತಾಡುತ್ತಾನೆ. ಇನ್ನೊಂದೆಡೆ ಯಾವುದೇ ಅನ್ಯಾಯವನ್ನು ಮಾಡದ ವ್ಯಕ್ತಿ ಕಷ್ಟದ ಬದುಕನ್ನು ಸಾಗಿಸುತ್ತಾನೆ. ದೇವರು ಇದ್ದಿದ್ದರೆ ಆ ಅನ್ಯಾಯಗಳಿಗೆ ಯಾಕೆ ಶಿಕ್ಷೆ ನೀಡುತ್ತಿಲ್ಲ?. ಮತ್ತೆ ನನ್ನೊಳಗೆ ಅಂದುಕೊಂಡೆ ನಾನು ಯಾವುದು ಅನ್ಯಾಯವೆಂದು ತಿಳಿದುಕೊಂಡಿದ್ದೇನೆ ಅದು ಇಂದು ಅನ್ಯಾಯವಲ್ಲವೇನೋ?. ಹಾಗಾಗಿ ಭಗವಂತ ಅವರಿಗೆಲ್ಲ ಸುಖವನ್ನೇ ಕರುಣಿಸಿದ್ದಾನೆ ಎಂದು ನನ್ನೊಳಗೇ ಮತ್ತೆ ಮತ್ತೆ ಸಮಾಧಾನಿಸಿಕೊಳ್ಳುತ್ತೇನೆ.

ಹಾಗಂತ ನನಗೆ ದೇವರಿಲ್ಲ ಅಂತ ಸಂಪೂರ್ಣವಾಗಿ ಹೇಳಲು ಧೈರ್ಯವಿಲ್ಲ.ದ್ವಂದದಲ್ಲಿದ್ದೇನೆ.!! ಅದೂ ಅಲ್ಲದೆ ನಮ್ಮದು "ದೇವರನ್ನು" ಆರಾಧಿಸುವ ಕುಟುಂಬ. ನನ್ನ ಮಿತ್ರರೊದಿಗೆ ಯಾವಾಗಲೂ ನಾನು ಅಂದುಕೊಳ್ಳುತ್ತೇನೆ "ಎಲ್ಲಾದರೂ ದೇವರಿದ್ದರೆ.."!?. ಈ ಪ್ರಕೃತಿಯಲ್ಲಿ ಮನುಷ್ಯ ಏನೇ ವಿಜ್ಞಾನದ ತಂತ್ರ ಮಾಡಿದರೂ ಅದೊಂದು ಶಕ್ತಿಯ ಪರಿಣಾಮವಾಗಿ ಎಲ್ಲಾ ವಿಚಾರಗಳು ತಲೆಕೆಳಗಾಗುತ್ತವೆ. ಹಾಗಾಗಿ ಒಂದು ಶಕ್ತಿಯಿದೆ ಅದು ಮಾತ್ರಾ ಕಣ್ಣಿಗೆ ಕಾಣದ್ದು , ವಿವರಿಸಲಾಗದ್ದು ಅಂತ ನನಗೆ ಅನಿಸಿತು.ಹಾಗಾಗಿ ಮತ್ತೆ ದೇವರ ಮೊರೆ ಹೋಗಬೇಕಾಗುತ್ತದೆ.

ನನಗನ್ನಿಸುವ ಇನ್ನೊಂದು ಸಂಗತಿಯೆಂದರೆ ದೇವಸ್ಥಾನಗಳಲ್ಲಿ , ಮನೆಗಳಲ್ಲಿ ಸಾವಿರ , ಲಕ್ಷ ರೂಪಾಯಿಗಳನ್ನು ವ್ಯಯಿಸಿ ಸೇವೆಗಳನ್ನು ಮಾಡಿಸಿಕೊಳ್ಳುವ ಅನೇಕ ಭಕ್ತರಿರುತ್ತಾರೆ.ಆದರೆ ದುರಂತವೆಂದರೆ ಅವರು ಅದೇ ಕಾರ್ಯದಿಂದ ಹೊರಬಂದು ಅಲ್ಲೇ ಸಾಗುವ ಬಡವ, ಆರ್ತನಿಗೆ ಒಂದು ಕಿಂಚಿತ್ ಕೂಡಾ ಸಹಾಯ ಮಾಡುವ ಮನಸ್ಸು ಬರುವುದಿಲ್ಲ , ಯಾರನ್ನು ಎಲ್ಲಿ ಹೇಗೆ ಸೋಲಿಸುವುದು, "ಗುಂಡಿ"ಗೆ ಇಳಿಸುವುದು ಎಂಬುದೇ ಚಿಂತೆಯಾಗಿರುತ್ತದೆ.ಅಲ್ಲಿ ಸೇವೆಯ ಹೆಸರಲ್ಲಿ ಎಷ್ಟು ಬೇಕಾದರೂ ಸುರಿಯಲು ತಯಾರಿರುವ ಜನ ಆರ್ತನಿಗೆ ಸಹಾಯ ಮಾಡುವಲ್ಲಿ ನೆಮ್ಮದಿಯನ್ನು ಕಾಣುವುದಿಲ್ಲ,ಒಂದು ಒಳ್ಳೆಯ ಚಿಂತನೆಯನ್ನು ತಲೆಯಲ್ಲಿ ಹಾಕಿಕೊಳ್ಳುವುದಿಲ್ಲ. ನಿಜವಾಗೂ ಭಗವಂತನಿಗೆ ಅಂತಹ ಸೇವೆಗಳಲ್ಲಿ,ಚಿಂತನೆಗಳಲ್ಲಿ ತೃಪ್ತಿಯೆನಿಸಿತೇನೋ.?.ಇದೇ ವೇಳೆ ಮನುಷ್ಯನು ತನ್ನ ಕಾರ್ಯದಲ್ಲಿ , ಸೇವೆಗಳಲ್ಲಿ ಭಗವಂತನನ್ನು ಕಾಣಬೇಕು ಅಂತ ಸ್ವಾಮೀಜಿಯೊಬ್ಬರು ಹೇಳಿದ್ದು ನನಗೆ ಅತ್ಯಂತ ಆಪ್ಯಾಯಮಾನವಾದ ವಿಚಾರವಾಗಿತ್ತು. ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಈ ಎಲ್ಲಾ ಸಂಗತಿಗಳು ನೆನಪಾದದ್ದು ಹೇಗೆಂದರೆ ಇತ್ತೀಚೆಗೆ ದೇವಸ್ಥಾನಗಳಲ್ಲಿ ಸೇವೆಯ ಹೆಸರಲ್ಲಿ ನಡೆಯುತ್ತಿರುವ ಸುಲಿಗೆ , ಭಕ್ತರನ್ನು ವಂಚಿಸುವ ಪರಿಯನ್ನು ನಾನು ಹತ್ತಿರದಿಂದ ಕಂಡು ದಂಗಾಗಿ ಹೋಗಿದ್ದೆ. ಆಗ ನನಗನ್ನಿಸಿದ್ದು ದೇವಸ್ಥಾನಗಳಲ್ಲೇ ಹೀಗೆ ನಡೆದರೆ ಹೇಗೆ?. ನಮ್ಮನ್ನು ಮಾನಸಿಕವಾಗಿ ಉದ್ದೀಪನಗೊಳಿಸುವ ಕೇಂದ್ರಗಳಲ್ಲವೇ?ಅದು.

ಈ ಸಂಗತಿಗಳು ಗೊತ್ತಿದ್ದರೂ ನಾನೂ ದೇವರಿಗೆ ಇನ್ನೊಮ್ಮೆ ನಮಸ್ಕರಿಸುತ್ತೇನೆ...... ಭಗವಂತ ಅವರಿಗೆಲ್ಲಾ ಒಳ್ಳೆಯದನ್ನೇ ಮಾಡು.......

ಕಾಮೆಂಟ್‌ಗಳಿಲ್ಲ: