31 ಮೇ 2008

ಇದು ಜೀವ ಹಿಂಡುತಿದೆ....



ಆಸ್ಪತ್ರೆ ಹೊರಗೆ ಜನ... ಚಿಂತಾಕ್ರಾಂತರಾಗಿ...





ಚಿಕೂನ್ ಗುನ್ಯಾ....!

ನಮ್ಮ ವೈರಿಗೂ ಬರಬಾರದು ಅಂತ ವೈದ್ಯರೊಬ್ಬರು ಹೇಳುತ್ತಾರೆ.ಅಂದರೆ ಆ ಜ್ವರದ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಬಹುದು.ಸುಳ್ಯ ತಾಲೂಕು ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆ ಈಗ ಅದೇ ಜ್ವರದಿಂದ ಕಂಗೆಟ್ಟಿದೆ.ಕೇಳುವ ಮಂದಿಯೇ ಇಲ್ಲ.!.ಆರೋಗ್ಯ ಇಲಾಖೆ ಕೈಚೆಲ್ಲಿ ಕುಳಿತಿದೆ.ಮಳೆ ಬಂದಾಗ ಕಡಿಮೆಯಾಗುತ್ತದೆ ಎನ್ನುತ್ತಿದೆ, ಹೊಸ ರೋಗಿಗಳಿಲ್ಲ ಅಂತ ಹೇಳುತ್ತದೆ, ನಿಯಂತ್ರಣದಲ್ಲಿದೆ ಅಂತ ಬಡಬಡಾಯಿಸುತ್ತದೆ. ಆದರೂ ಪ್ರತಿದಿನ ಸರಕಾರಿ ಆಶತ್ರೆಯಲ್ಲಿ ಜನ ಸಾಲು ಸಾಲಾಗಿ ನಿಂತಿರುತ್ತಾರೆ . ಕೆಲವರು ಏಳಲಾಗದೆ - ಕೂರಲೂ ಆಗದೆ ಆಸ್ಪತ್ರೆಯಲ್ಲೇ ಮಲಗಿ ,ಎದ್ದು ಔಷಧಿ ಪಡೆದು ಮನೆಗೆ ಹೋಗುತ್ತಾರೆ.ಇನ್ನು ಖಾಸಗಿ ಆಸ್ಪತ್ರೆಯಲ್ಲೂ ಜನ ನಿಂತಿರುತ್ತಾರೆ ಎಲ್ಲರ ಬಾಯಲ್ಲೂ ಜ್ವರ... ಗಂಟು ನೋವು.....

ಈಗಲೇ ಚಿಕೂನ್ ಗುನ್ಯಾ ರಾಜ್ಯದಲ್ಲೆ ಗಮನ ಸೆಳೆದಿದೆ.ದ ಕ ಜಿಲ್ಲೆಗೆ ಎಂಟ್ರಿ ನೀಡಿದ್ದು ಸುಳ್ಯ ತಾಲೂಕಿನಿಂದ.ಕಳೆದ ಜನವರಿ ತಿಂಗಳ ಅಂತ್ಯದಲ್ಲಿ ಈ ಜ್ವರ, ಗಂಟು ನೋವು ಕಾಣಿಸಿಕೊಂಡಿತು.ನಂತರ ವಿಪರೀತವಾಗಿ ಬಾಧಿಸತೊಡಗಿ ಈಗ ಜಿಲ್ಲೆಯಾದ್ಯಂತ ಪಸರಿಸಿದೆ.ಹಾಗೆ ನೋಡಿದ್ರೆ ಇಲಾಖೆ ಎಚ್ಚರವಾದದ್ದು ಇತ್ತೀಚಿನ ಒಂದು ತಿಂಗಳಿನಿಂದ.ಈಗ ಮಳೆ ಬಂದ್ರೆ ನಿಲ್ಲುತ್ತೆ ಅಂತ ಬಡಿಕೊಳ್ಳುತ್ತೆ. ಸದ್ಯಕ್ಕೆ ಕ್ರಮವೂ ಕೈಗೊಂಡಿದೆ, ಇಲ್ಲ ಅಂತಲ್ಲ. ಈ ಜ್ವರ ಈಡಿಸ್ ಇಜಿಪ್ಟೀ ಎಂಬ ಸೊಳ್ಳೆಯಿಂದ ಹರಡುತ್ತೆ ಅಂತ ಇಲಾಖೆ ಹೇಳುತ್ತದೆ.ಕೆಲವು ದಾಖಲೆಗಳಲ್ಲೂ ಹಾಗೆಯೇ ಇದೆ.1952 ರಲ್ಲಿ ಆಫ್ರಿಕಾದಲ್ಲಿ ಈ ಚಿಕೂನ್ ಗುನ್ಯಾ ಆರಂಭವಾಯಿತು ಎಂಬ ಮಾಹಿತಿಯೂ ಇದೆ.ಈ ಜ್ವರ ಬಾಧಿಸಿದವರಿಗೆ ವಿಪರೀತ ಜ್ವರ ,ಕೀಲುನೋವು ಬಾಧಿಸುತ್ತದೆ.ನಡೆದಾಡಲು ಹರಸಾಹಸ ಪಡಬೇಕಾಗುತ್ತದೆ.ಹೀಗಾಗಿ ಎಲ್ಲಾ ಕೆಲಸ ಕಾರ್ಯಗಳಿಗೆ ಬ್ರೇಕ್ ಬೀಳುತ್ತದೆ. ಅಂದಾಜಿನ ಪ್ರಕಾರ ಸುಳ್ಯ ತಾಲೂಕಿನ ಶೇ.70 ರಷ್ಟು ಮಂದಿಗೆ ಚಿಕೂನ್ ಗುನ್ಯಾ ಅಂಟಿಕೊಂಡಿದೆ. ಸದ್ಯದ ಪ್ರಕಾರ ಚಿಕೂನ್ ಗುನ್ಯಾಕ್ಕೆ ಯಾವುದೇ ನಿಖರವಾದ ಔಷಧಿಯಿಲ್ಲ, ತಡೆಗಟ್ಟುವ ಔಷಧಿಯೂ ಇಲ್ಲ.ಹಾಗಾಗಿ ಜನ ಕಂಗಾಲು.
ಈ ಜ್ವರದಿಂದ ಈಗಾಗಲೇ ಜಿಲ್ಲೆಗೆ ಸಾಕಷ್ಟು ಆರ್ಥಿಕವಾದ ಹೊಡೆತ ಬಿದ್ದಿದೆ.

ಈ ಎಲ್ಲದರ ನಡುವೆ ಗ್ರಾಮೀಣ ಜನರ ಚಿಂತನೆ ಬೇರೇಯೆ ಇದೆ. ಚಿಕೂನ್ ಗುನ್ಯಾ ಒಂದು ಮಾಟ ಇದ್ದಂತೆ.ಬಹುಬೇಗನೇ ಜಿಲ್ಲೆಯಾದ್ಯಂತ ಪಸರಿಸಿದೆ. ಇದು ಯಾಕೆ ಭಯೋತ್ಪಾದಕರ ಕೃತ್ಯವಾಗಿರಬಾರದು?. ಹಿಂದೆ ಅಂತ್ರಾಕ್ಸ್, ಸೂರತ್ ನಲ್ಲಿ ಪ್ಲೇಗ್ ಇದ್ದಂತೆ ಇದೂ ಒಂದು ಪ್ರಯೋಗ ಯಾಕಿರಬಾರದು. ಇಂದಿನ ಪರಿಸ್ಥಿತಿ ಹಾಗಿದೆ ಅಂತಾರೆ ಹಳ್ಳಿಯ ಜನ.ಯಾಕೆಂದ್ರೆ ಇದು ಸೊಳ್ಳೆಯಿಂದ ಹರಡುವ ರೋಗ ಅಂತ ಇಲಾಖೆ ಹೇಳುತ್ತದೆ.ಸೊಳ್ಳೆಯಿಂದ ಇಷ್ಟು ಬೇಗನೆ ಸಾಧ್ಯವಾ?... ಹಾಗೆಯೇ ಕೆಲವು ವೈದ್ಯರೂಗಳೂ ಹಳ್ಳಿಗರ ಕೆಲವು ಪ್ರಶ್ನೆಗಳನ್ನು ಪುಷ್ಠೀಕರಿಸುತ್ತಾರೆ.ಭಯೋತ್ಪಾದಕರ ಕೆಲಸವಲ್ಲದಿದ್ದರೂ ಇದು ಭಯ ಹುಟ್ಟಿಸುವುದಂತು ಸತ್ಯ ಅನ್ನುತ್ತಾರೆ.ಜನ ನೋವು ನಿವಾರಣೆಗಾಗಿ ಸದಾ ನೋವು ನಿವಾರಕ ಮಾತ್ರೆಯನ್ನು ತಿನ್ನುತ್ತಾರೆ ಇದರ ಅಡ್ಡಪರಿಣಾಮಗಳ ಬಗ್ಗೆ ಜನ ಈಗ ನೋಡುವುದೇ ಇಲ್ಲ.ಹಾಗಾಗಿ ಈ ಜ್ವರದ ಪರಿಣಾಮ ಮುಂದೆ ಕಾದಿದೆ ಎನ್ನುತ್ತಾರೆ ವೈದ್ಯರುಗಳು.

ಹಾಗಾಗಿ ಚಿಕೂನ್ ಗುನ್ಯಾವು ಒಂದು ಶಂಕಿತ "ಭಯೋತ್ಪಾದಕನೇ" ಅಂತ ಹಳ್ಳಿ ಜನ ಹೇಳುವುದರಲ್ಲಿ ಅರ್ಥವಿದೆ.

ಮುಂದೆ ಏನು ಅಂತ ಗೊತ್ತಿಲ್ಲ. ಈಗಂತೂ ಊರಿಡೀ ಚಿಕೂನ್ ಗುನ್ಯಾದ್ದೇ ಮಾತು.ತೋಟ ,ರಾಜಕೀಯ,ಮೊದಲಾದ ಸುದ್ದಿಳೆಗಲ್ಲಾ ಸ್ವಲ್ಪ ನಂತರದ ಸ್ಥಾನ.ಮೊದಲೇನಿದ್ದರೂ ಗಂಟು ನೋವಿಗೆ ಒಳ್ಳೆಯ ಡಾಕ್ಟ್ರನ್ನು ಹೇಳಿ..........!!?

ಇದು ಸುಳ್ಯ ಮತ್ತು ದಕ್ಷಿಣ ಕನ್ನಡದ ಸ್ಥಿತಿ ......

ಹೇಳುವವರಾರು .....? ಕೇಳುವವರ್ಯಾರು....? ಇಲ್ಲಿಯ ಕತೆಯ?





ಕಾಮೆಂಟ್‌ಗಳಿಲ್ಲ: