02 ಜೂನ್ 2008

ಶಿರಾಡಿ ರೆಡಿ.....!



ಅಬ್ಬಾ ಇನ್ನು ಶಿರಾಡಿ ತಲೆ ಬಿಸಿ ಇಲ್ಲ...!.

ಅಂತ ಬಸ್ಸು ಚಾಲಕರೊಬ್ಬರು ಹೇಳುತ್ತಿದ್ದುದು ನೋಡಿದರೆ ಅವರಿಗೆ ಸ್ವರ್ಗವೇ ಸಿಕ್ಕಂತಾಗಿತ್ತು.ಅಲ್ಲ ಅದಲ್ಲ ,ಮೊನ್ನೆಯಿಂದಲೇ ಅದೇ ದಾರಿಯಲ್ಲಿ ಬರುತಿದ್ರಲ್ಲಾ, ಅಂತ ಕೇಳಿದ್ರೆ ಇನ್ನು ಅಧಿಕೃತ ಅಲ್ವಾ ಅಂತಾರೆ.....

ಹೌದು ಶಿರಾಡಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ... ಸೋಮವಾರದಿಂದ ಶಿರಾಡಿ ಘಾಟ್ ರಸ್ತೆಯನ್ನು ಅಧಿಕೃತವಾಗಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.ಕೇಂದ್ರ ಭೂಸಾರಿಗೆ ಮಂತ್ರಿ ಎಚ್.ಮುನಿಯಪ್ಪ ಈ ವಿಷಯವನ್ನು ತಿಳಿಸಿದರು.

ಅವರೇ ಸ್ವತ: ಕಾಮಗಾರಿಯನ್ನು ಪರಿಶೀಲಿಸಿದರಂತೆ ಹಾಗೆಂದು ಸುದ್ದಿಗಾರರೆದುರು ಹೇಳಿದರು.ಹಾಗೆ ಪರಿಶೀಲನೆಗೆಂದು ಬಂದವರು [ ಕುಟುಂಬ ಸಮೇತರಾಗಿ ] ಧರ್ಮಸ್ಥಳ , ಸುಬ್ರಹ್ಮಣ್ಯ , ಅಳಿಕೆ ಶಾಲೆಗಳಿಗೆ ಹೋದರು.ನಂತರ ಇನ್ನೊಂದು ಪತ್ರಿಕಾಗೋಷ್ಠಿ ಹಮ್ಮಿಕೊಳ್ಳುವರಂತೆ.

ಹಾಗೆ ಮಾತನಾಡಿದ ಅವರು, ಶಿರಾಡಿಯಲ್ಲಿ ಇನ್ನು ಚರಂಡಿ ವ್ಯವಸ್ಥೆ , ಇಂಟರ್ ಲಾಕ್ ಅಳವಡಿಕೆ ವ್ಯವಸ್ಥೆಯಾಗಬೇಕಿದೆಯಷ್ಟೆ, ಅದನ್ನು 15 ದಿನಗಳೊಳಗಾಗಿ ಮಾಡಿಮುಗಿಸುವಂತೆ ಸೂಚಿಸಲಾಗಿದೆ ಅಂತ ಹೇಳಿದರು.

ನಂತರ ಎಂದಿನಂತೆ ಈ ಕಾಮಗಾರಿಗೆ ಒಟ್ಟು 33.5 ಕೋಟಿ ಬಿಡುಗಡೆಯಾಗಿದೆ,ನಂತರ ಗುಂಡ್ಯ - ಬಿ ಸಿ ರೋಡ್ ಅಭಿವೃಧಿಗೆ 25.5 ಕೋಟಿ ರೂ ಬಿಡುಗಡೆಯಾಗಿದೆ ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಆರಂಬವಾಗುತ್ತದೆ ಅಂದಾಗ " ಇನ್ನು ಮಳೆಗಾಲವಲ್ಲ ಸಾರ್" ಎಂಬ ಪ್ರಶ್ನೆಗೆ ಹೌದು ... ಮಳೆಗಾಲದ ಮುನ್ನ ಮುಗಿಸಬೆಕು ಅಂದಿದ್ದೆ ಎಂದು ಸಚಿವರು ಹೇಳಿ ಮಾತು ಬದಲಿಸಿ ಚತುಷ್ಪಥ ರಸ್ತೆಯತ್ತ ಹೊರಟರು ಕರಾವಳಿ ತೀರದ ರಾಷ್ಟ್ರೀಯ ಹೆದ್ದಾರಿಯನ್ನು ಪೂರ್ತಿ ಚತುಷ್ಪಥ ರಸ್ತೆಯನ್ನಾಗಿಸಲಾಗುವುದು ಎಂದರು.ಈಗಾಗಲೆ ಒಟ್ಟಾಗಿ 650 ಕಿಮೀ ರಸ್ತೆಯನ್ನು ಚತುಷ್ಪಥಕ್ಕೆ ಚಾಲನೆ ನೀದಲಾಗಿದೆ ಮುಂದೆ 650 ಕಿ ಮೀ ಗೆ ಸರ್ವೆ ಆಗಿದೆ ಅಂತ ಹೇಳಿದರು.

ರಾಜಕೀಯದ ಬಗ್ಗೆ ಮಾತನಾಡಿದಾಗ ಕರ್ನಾಟಕದ ಸರಕಾರಕ್ಕೆ ಸ್ನಾವು ಅಭಿವೃದ್ಧಿಯ ದೃಷ್ಠಿಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಒಟ್ಟಿನಲ್ಲಿ ಅನೇಕ ದಿನಗಳ ಬಳಿಕ ಶಿರಾಡಿ ರೆಡಿಯಾಯಿತು.

ಗದ್ದಲಗಳು ಇಲ್ಲದೆ ನೆಮ್ಮದಿಯಾಗಿದ್ದ ಶಿರಾಡಿಯಲ್ಲಿ ಇಂದಿನಿಂದ ಅಧಿಕೃತವಾಗಿ ಹಕ್ಕಿಗಳ ಕಲರವದ ನಡುವೆ ವಾಹನಗಳ ಸದ್ದು ಮೊಳಗಲಿದೆ. ಸೈಲೆಂಟ್ ವ್ಯಾಲಿಯಂತಿದ್ದ ಶಿರಾಡಿಯಲ್ಲಿನ್ನು ಹಾಗಿರುವುದಿಲ್ಲ ಚಿರಿ ಚಿರಿ ಆರಂಭವಾಗುತ್ತದೆ, ಡಾಬಾಗಳಿಗೆ , ಗೂಡಂಗಡಿಗಳಿಗೆ , ಹೂಮಾರುವ ಮಂದಿಗೆ ಮತ್ತೆ ವ್ಯಾಪಾರ ಆರಂಭವಾಗುವ ಸಂತಸದ ಕ್ಷಣ ಶುರುವಾಗಿದೆ. ಮಳೆಗಾಲದ ತಯಾರಿಯೂ ನಡೆಯುತ್ತಿದೆ.

ಇನ್ನು ಇದೇ ರಸ್ತೆ ಅದಿರು ಲಾರಿಗಳ "ಹೆದ್ದಾರಿ"ಯಾಗಬಹುದೇ....??

2 ಕಾಮೆಂಟ್‌ಗಳು:

ಬಾನಾಡಿ ಹೇಳಿದರು...

ಅಸಮರ್ಥತೆ ಎಂಬುದಕ್ಕೆ ಶಿರಾಡಿಘಾಟ್ ರಸ್ತೆ ಉದಾಹರಣೆ. ಅಸಮರ್ಥತೆ - ನಮ್ಮದು. ಅಂದರೆ ರಸ್ತೆಯನ್ನು ಉಪಯೋಗಿಸುವವರದು, ರಸ್ತೆಯ ಮತ್ತು ಅದರ ಕಾಮಗಾರಿಯ ಕುರಿತು ತನಿಖಾವರದಿ ಬರೆಯಲಾಗದ ಮಾಧ್ಯಮದವರದು, ಆಡಳಿತಶಾಹಿಯದು, ರಾಜಕಾರಣಿಗಳದು. ಇನ್ನು ಒಂದು ತಿಂಗಳೊಳಗೆ ಕಾಮಗಾರಿ ಆರಂಭವಾಗುತ್ತದೆ ಎಂಬ ವಿಷಯ ತಿಳಿದು ಅಳು ಬರುತ್ತದೆ. ಮಳೆಗಾಲ ಇಲ್ಲಿ ಜೂನ್ ಮೊದಲವಾರದಿಂದ ಆರಂಭವಾಗುತ್ತದೆ! ಒಳ್ಳೆಯ ತಂತಜ್ಞರನ್ನು ಕರೆದು ರಸ್ತೆಯನ್ನು ಶಾಶ್ವತೆವಾಗಿ ಉತ್ತಮ ರೀತಿಯಲ್ಲಿರುವಂತಹ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಇಲ್ಲೊಂದು ರಸ್ತೆ ಇತ್ತು ಎಂಬುದನ್ನು ಮರೆತು ಬಿಡೋಣ. ಅಭಿವೃದ್ಧಿಯನ್ನು ಒಂದು ಸವಾಲಾಗಿ ನಾವ್ಯಾಕೆ ತೆಗೆದುಕೊಳ್ಳುವುದಿಲ್ಲ.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಬಾನಾಡಿಯವರೇ,
ನಿಮ್ಮ ಅತ್ಯುತ್ಸಾಹದ ಪ್ರತಿಕ್ರಿಯೆಗೆ ಧನ್ಯವಾದ.ಬಹುಶ: ನೀವು ಶಿರಾಡಿಯನ್ನೊಂದನ್ನೇ ಕೇಂದ್ರೀಕರಿಸಿ ಪ್ರತಿಕ್ರಿಯಿಸಿಲ್ಲ ಅಂದುಕೊಂಡಿದ್ದೇನೆ.ಇಂದಿನ ಅನೇಕ ಕಾಮಗಾರಿಗಳೂ ನೀವು ಹೇಳಿದಂತೆ ಆಗುತ್ತಿದೆ.ನಿನ್ನೆ ಸಚಿವರೂ ಹಾಗೆಯೇ ಅಂದಿದ್ದರು.ಇನ್ನು ಒಂದು ತಿಂಗಳಲ್ಲಿ ಶಿರಾಡಿಯಿಂದ ಮುಂದೆ ರಸ್ತೆ ದುರಸ್ಥಿಯಾಗುತ್ತದೆ ಎಂದು ಬೊಗಳೆ ಬಿಡುವಾಗ ನಾವು ಪ್ರಶ್ನಿಸಿದ್ದೆವು.ಅದಕ್ಕೆ ಅವರು ನುಣುಚಿಕೊಂಡದ್ದು " ಮಳೆಗಾಲಕ್ಕೆ ಮುನ್ನ ಮುಗಿಸಬೇಕು ಅಂತ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ತಿಳಿಸಿದ್ದೆ" ಎಂದು ಹೇಲಿ ನಂತರ ಕೂಡಲೇ ಮಾತು ಬದಲಿಸಿ ಎಲ್ಲೆಂದೆಲ್ಲಿಗೋ ಹೋದರು. ನಿಜಕ್ಕೂ ತನಿಖಾ ವರದಿಗಳು ನಡೆಯಬೇಕು, ಫಲಾನುಭವಿಗಳು ಎಚ್ಚರವಾಗಬೇಕು, ಮಾಧ್ಯಮಗಳೂ ಅಲ್ಲಿ ಕಣ್ಣೀಟ್ಟಿರಬೇಕು. ಹೀಗಾದಾಗ ಮಾತ್ರಾ ಅಭಿವೃದ್ಧಿಗಳು ಹೆಚ್ಚು ಸಮಯ ನೆನಪಾಗಿ ಉಳಿದೀತು.ಇಲ್ಲವಾದಲ್ಲಿ ಒಂದೇ ವರುಷಕ್ಕೆ ಸೀಮಿತವಾದೀತು. ಶಿರಾಡಿ ವಿಚಾರದಲ್ಲಿ ಮಾಧ್ಯಮಗಳು ಎಚ್ಚರವಾಗಿತ್ತು ಅಂತ ನನ್ನ ಭಾವನೆ.
ಈಗ ನೋಡಿ ಚಿಕೂನ್ ಗುನ್ಯಾ ಜ್ವರ ಜಿಲ್ಲೆಯಾದ್ಯಂತ ಹಬ್ಬುತ್ತಿದೆ. ಕಳೆದ ಜನವರಿಯಲ್ಲೇ ಇದು ಆರಂಭವಾಗಿತ್ತು. ಆದರೆ ಮಾಧ್ಯಮಗಳು ಇತ್ತೀಚೆಗೆ ಗಮನಹರಿಸಿತು.ಜನ ಮಾತನಾಡಿಯೇ ಇಲ್ಲ.
ಇತೀ,
ಮಹೇಶ್