03 ಜೂನ್ 2008

ಶಾಲೆ ಹೊರೆಟೆವು ನಾವು...



ಶಾಲೆಗಳೆಲ್ಲಾ ಮತ್ತೆ ಶುರುವಾಗಿದೆ.

ಅತ್ಯಂತ ಉತ್ಸಾಹದಿಂದ ಮಕ್ಕಳೆಲ್ಲಾ ಶಾಲೆಗೆ ಹೊರಟಿದ್ದಾರೆ.ಶಾಲಾ ಬಸ್ಸುಗಳಿಗೆ ಇನ್ನು ಬಿಡುವಿಲ್ಲದ ಕೆಲಸ ಆರಂಭವಾಗಿದೆ.ಅಧ್ಯಾಪಕರಿಗೂ ಹೊಸ ವಿಷಯಗಳತ್ತ ನೋಡುವ ಸಮಯ ಬಂದಿದೆ.

ಸರಿ... ,ಇದೆಲ್ಲಾ ನಗರ ಪ್ರದೇಶಗಳಲ್ಲಿ ಅಂದಿನಿಂದಲೂ ನಡೆದುಕೊಂಡು ಬರುತ್ತಿತ್ತು,ಗ್ರಾಮೀಣ ಭಾಗಗಳಲ್ಲಿ ಶಾಲಾ ವಾಹನ,ಶಾಲಾ ಆರಂಭಕ್ಕೆ ಮುನ್ನ ಅತ್ಯಂತ ಭರದ ಸಿದ್ಧತೆ ಇದ್ದಿರಲೇ ಇಲ್ಲ.ಆದರೆ ಇಂದು ನೋಡಿದರೆ ನಗರಕ್ಕಿಂತ ಮುನ್ನವೇ ಗ್ರಾಮೀಣ ಭಾಗಗಳಲ್ಲಿ ಶಾಲೆಯ ತಯಾರಿ ನಡೆಯುತ್ತದೆ.ಯಾವ ಶಾಲೆ,ಯಾವ ಶಾಲಾ ಬಸ್ಸು ನಮ್ಮ ಮನೆಯ ಪಕ್ಕ ಬರುತ್ತದೆ,ಇಂಗ್ಲಿಷ್ ಎಲ್ಲಿ ಚೆನ್ನಾಗಿ ಕಲಿಸುತ್ತಾರೆ, ಯಾವ ಬಟ್ಟೆ....... ಹೀಗೆ ಹತ್ತಾರು ವಿಷಯಗಳು ಚರ್ಚೆಯಾಗುತ್ತದೆ.ನಗರದ ಭಾಗಗಳಲ್ಲಿ ಇಂತಹ ಪ್ರಸಂಗ ನಡೆಯುವಾಗ ನಗಾಡುತ್ತಿದ್ದ ಹಳ್ಳಿಯಲ್ಲೇ ಈಗ ಅಂತಹದೊಂದು ಬೆಳವಣಿಗೆ ಶುರುವಾಗಿ ಬಿಟ್ಟಿದೆ..
ಕಾಲ ಬದಲಾದಾಗ ಕೋಲವೂ ಬದಲಾಗಬೇಕು ಅಂತಾರಲ್ಲಾ ಅದಕ್ಕಾಗಿ ಈ ಬದಲಾವಣೆಯೇ?. ಅಥವಾ ನಿಜವಾದ ಜೀವನ ಶೈಲಿ ಬದಲಾವಣೆಗಾಗಿಯೋ ಎಂಬುದು ಅರ್ಥವಾಗದ ಸಂಗತಿಯಾಗಿದೆ.

ಒಂದೆರಡು ದಶಕಗಳ ಹಿಂದೆ ನೋಡಿದರೆ... ಶಾಲೆ ಆರಂಭವೆಂದರೆ ಮಳೆಗಾಲದ ಮುನ್ನುಡಿ.ಮೊದಲ ದಿನವೇ ಶಾಲೆಗೆ ಹೋಗುವಾಗ ಮಳೆ. ಶಾಲಾ ಬಸ್ಸುಗಳಿಲ್ಲ.ಬೆಳಗ್ಗೆ 7 ರಿಂದ 8 ಗಂಟೆಯ ಹೊತ್ತಿಗೆ ಶಾಲೆಗೆ ಹೊರಡಲು ಅಣಿಯಾಗಬೇಕು ನಂತರ ಕೊಡೆ ಹಿಡಿದು ಪ್ಲಾಸ್ಟಿಕ್ ಚೀಲವನ್ನು [ಆ ಚೀಲ ಈಗ ಮಾರುಕಟ್ಟೆಯಲ್ಲೇ ಇಲ್ಲ] ಹೆಗಲಿಗೆ ಹಾಕಿ ಕೈಯಲ್ಲಿ ಬುತ್ತಿ ಹಿಡಿದು ನಾಲ್ಕಾರು ಮಂದಿ ಊರಿನ ಮಿತ್ರರೊಂದಿಗೆ ಒಂದು ಮೂರ್ನಾಕು ಕಿ ಮೀ ನಡೆದುಕೊಂಡು 9 ರಿಂದ 9.30 ರಳೊಳಗಾಗಿ ಸೇರುವ ಆ ಖುಷಿ ನೀಡುತ್ತಿತ್ತು. ಶಾಲೆಗೆ ಬಿಡಲು ಜೊತೆಯಲ್ಲಿ ಅಮ್ಮ ಅಥವಾ ಇನ್ನಾರು ಕೂಡಾ ಬರುತ್ತಿರಲಿಲ್ಲ ಮನೆಯಿಂದಲೆ ಒಂಟಿ ಪ್ರಯಾಣ. ರಸ್ತೆಯಲ್ಲಿ ಮಿತ್ರರೊಂದಿಗೆ ಮತ್ತೆ ನಡಿಗೆ.ಸಂಜೆ ಬಂದು ಮನೆಯಲ್ಲಿ ಆ ದಿನದ ವರದಿಯನ್ನು ಅಮ್ಮನಲ್ಲಿ ಒಪ್ಪಿಸುವುದು, ಟಿ ವಿ ಸೇರಿದಂತೆ ಇನ್ನಾವುದೇ ಆಟಿಕೆಗಳಿಲ್ಲದ ಕಾರಣ ಮಣ್ಣೀನಲ್ಲೇ ಆಟ. ಸೂರ್ಯ ಮುಳುಗಿದ ನಂತರ ಸ್ನಾನಾದಿಗಳನ್ನು ಮುಗಿಸಿ ಅಮ್ಮನೊಂದಿಗೆ ಪಾಠ, ವಾರಗಳ ಹೆಸರನ್ನು ಹೇಳುವುದು ,ಲೆಕ್ಕ ಹೇಳುವುದು, ಹಿಂದು ವಾರ ,ನಕ್ಷತ್ರಗಳನ್ನು ಹೇಳುವುದು...... ಹೀಗೇ ತರಗತಿಯಲ್ಲೂ ಮೊದಲಿಗನಾಗಿರುವುದು ನಡೆದುಕೊಂಡು ಬರುತ್ತಿದ್ದ ಸಂಗತಿ.ಬಾಲ್ಯ ಕಳೆದುಹೋಗಿ ಈಗ ನೆನಪಾಗಿ ಉಳಿದಿದೆ.

ಆದರೆ ಕಾಲ ನೋಡಿ ಹೇಗೆ ಬದಲಾಯಿತು...!

ಒಮ್ಮೊಮ್ಮೆ ದಿಗಿಲು ಹುಟ್ಟಿಸುತ್ತದೆ...!. ಇಂದು ಮನೆಯಿಂದ ಅಂಗಳಕ್ಕೆ ಇಳಿದೊಡನೆ ವಾಹನದಲ್ಲಿ ಸಾಗಿ ರಾಜ ರಸ್ತೆಯಿಂದ ಶಾಲಾ ಬಸ್ಸಿಗೆ ಮನೆಯಿಂದ ಬಿಟ್ಟು ಆ ಬಸ್ಸಿನಲ್ಲಿ ನಿಗದಿತವಾದ ಒಂದು ಆಸನದಲ್ಲಿ ಕೂತು ಶಾಲೆಯ ಬಾಗಿಲಿನಲ್ಲಿ ಇಳಿದು ಸಂಜೆ ಯಥಾಪ್ರಕಾರ ಹಾಗೆಯೇ ಮನೆಗೆ...!. ಅಲ್ಲಿ ಯಾರೊಂದಿಗೂ ಮಾತಿಲ್ಲ ಕತೆಯಿಲ್ಲ. ಶಾಲಾ ಬಸ್ಸಿನಲ್ಲೊಮ್ಮೆ ಸುಮ್ಮನೆ ನೀವು ಹೋಗಿ ನೋಡಿ ಮಕ್ಕಳೆಲ್ಲಾ ಅವರದೇ ಲೋಕದಲ್ಲಿರುತ್ತಾರೆ. ಪಕ್ಕದ ಮಿತ್ರನೊಂದಿಗೆ ಕೆಲಕಾಲ ಮಾತನಾಡಿ ಮತ್ತೆ ಮೌನ..!.ಹಾಗೆಂದು ಅಂಕ ಉತ್ತಮವಾಗಿರುತ್ತದೆ.ಎಲ್ಲರಿಗೂ 70 ರಿಂದ 99 ಶೇಕಡಾ.

ನಗರ ಪ್ರದೇಶಗಳಲ್ಲಿ ಅಂದಿನಿಂದಲೇ ಈ ಪದ್ಧತಿಯಿತ್ತು ನಿಜ.ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದು ವಿಪರೀತ ಮಟ್ಟಕ್ಕೆ ಹೋಗಿದೆ.ಹೀಗಾಗಿ ನಾವು ಗಮನಿಸಬಹುದು. ಇಂದಿನ ಗ್ರಾಮೀಣ ಮಕ್ಕಳು ಎಲ್ಲೋ ಒಂದು ಕಡೆ ಸಾಮೂಹಿಕವಾದ ಚಿಂತನೆಯನ್ನು ಮರೆತು ಬಿಡುತ್ತಿದ್ದಾರೆ.ನಾನು ನನ್ನದು ಬಿಟ್ಟರೆ ಬೇರೆ ಯಾವುದು ಕೂಡಾ ಅವರ ಅರಿವಿಗೆ ಬರುವುದೇ ಇಲ್ಲ.ನಡೆದು ಕೊಂಡು ನಾಲ್ಕಾರು ಕಿ ಮೀ ಹೋಗುವ ವೇಳೆ ಹತ್ತಾರು ಮಂದಿ ಮಿತ್ರರು ದಾರಿ ಮಧ್ಯೆ ಸಿಗುತ್ತಾರೆ.ಅವರೊಂದಿಗೆ ಹರಟುತ್ತಾ ಸಾಗಿ ಅವರ ಸುಖ-ದು:ಖಗಳು ಅರಿಗಾಗಿ ಮನಸ್ಸಿನ ಒಂದು ಮೂಲೆಯಲ್ಲಿ ಕನಿಕರದ ಭಾವ ಜಾಗೃತವಾಗುತ್ತಿತ್ತು ಮಾತ್ರವಲ್ಲ ಹತ್ತು ಹಲವು ವಿಚಾರಗಳು ಅವರದೇ ಲೋಕದಲ್ಲಿ ಚರ್ಚೆಯಾಗುತ್ತಿತ್ತು ಅದು ಸೃಜನಾತ್ಮಕ ರೂಪ ಪಡೆದು ಹೊಸದೊಂದು ಚಿಂತನೆಗೆ ಅವಕಾಶ ಮಾಡಿಕೊಡುತ್ತಿತ್ತು.ಜಾತಿಯ ಬೇದವಿಲ್ಲ ,ಕೂಡಿ ಬಾಳುವ ಚಿಂತನೆಯಿತ್ತು,ಹಂಚಿ ತಿನ್ನುವ ಗುಣ ಬೆಳೆಯುತ್ತಿತ್ತು. ಈಗ ಇಲ್ಲ ಅಂತಲ್ಲ.ಅಂದಿನ ಮಟ್ಟಕೆ ಹೋಲಿಸಿದರೆ ಇದೆಲ್ಲವೂ ಅತ್ಯಂತ ನಗಣ್ಯ..

ಕಾಲ ಬದಲಾಗಿದೆ.ಕೆಲವೊಂದು ಮಾರ್ಪಾಡುಗಳನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗಿದೆ. ಆದರೆ ಇದೆಲ್ಲದರ ನಡುವೆ ಎಳೆಯರಿಗೆ ಸಾಮಾಜಿಕವಾದ ಒಂದಷ್ಟು ಚಿಂತನೆಯ ಅರಿವು ಬೆಳೆದರೆ ಚೆನ್ನಾಗಿರುತ್ತದಲ್ವಾ.ಇಲ್ಲವಾದರೆ ಅವರು ಅವರದೇ ಲೋಕದಲ್ಲಿರುತ್ತಾರೆ ಎಲ್ಲರಿಂದ ದೂರವಾಗಿರುತ್ತಾರೆ ಅಲ್ಲವೇ.

ಇದೆಲ್ಲಾ ನೆನಪಾದದ್ದು ಶಾಲಾ ಬಸ್ಸೊಂದನ್ನು ನೋಡಿ. ಹಾಗೆ ಸುಮ್ಮನೆ ನಮ್ಮ ಬಾಲ್ಯ ನೆನಪಾಯಿತು.ತುಲನೆ ಮಾಡಿದೆ.ಇಲ್ಲಿ ದಾಖಲಿಸಿದೆ.ಇದನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲವಲ್ಲ........

ಕಾಮೆಂಟ್‌ಗಳಿಲ್ಲ: