10 ಜೂನ್ 2008

ಆ ಭಾವನೆಗಳು...."ನೋ ಮೋರ್"




ಅಂದು ಸಮುದಾಯವೊಂದರ ಖಾಸಗೀ ಸಮಾರಂಭವೊಂದು ದೇವಸ್ಥಾನದ ವಠಾರದಲ್ಲಿ ಏರ್ಪಾಡಗಿತ್ತು. ಸಮಯ ಬೆಳಗ್ಗೆ 9.30 ರ ಆಜುಬಾಜು. ಅಲ್ಲಿದ್ದ ಕಾಯಿನ್ ಫೋನ್ ಬೂತಿಗೆ ಕರೆಯೊಂದು ಬಂತು.ಅದು ಆ ದೇವಸ್ಥಾನದ ಅರ್ಚಕರ ಮನೆಯಿಂದ ಬಂದ ಕರೆ.ಅತ್ತ ಕಡೆಯಿಂದ ಅಳು ಮಿಶ್ರಿತ ಧ್ವನಿ,ತಕ್ಷಣವೇ ಅರ್ಚಕರು ಮನೆಗೆ ಬರುವಂತೆ ಬುಲಾವ್ , ಆ ಕ್ಷಣದ ಮಾಹಿತಿ " ಮಗುವಿನ ಮೇಲೆ ಬಿಸಿನೀರು ಬಿದ್ದಿದೆ".

ತಕ್ಷಣವೇ ಫೋನ್ ಕುಕ್ಕಿ ಅತ್ತಿತ್ತ ನೋಡಿದಾಗ ,ಕಾರ್ಯಕ್ರಮ ಸಂಘಟಕರೊಬ್ಬರ ಕಾರು ಕಾರ್ಯಕ್ರಮದ ಸಿದ್ಧತೆಗಾಗಿ ಬೇರೆಲ್ಲಿಗೋ ಹೊರಡಲು ಸಿದ್ಧವಾಗಿತ್ತು. ಕಾರು ತಕ್ಷಣವೆ ಅರ್ಚಕರ ಮನೆಯ ಕಡೆ ಹೊರಟಿತು. ದಡ ದಡನೆ ಕಾರಿನಿಂದ ಇಳಿದು ಮನೆಯೊಳಗೆ ಹೊರಡಲು ಸಿದ್ಧವಾಗುತ್ತಿರುವಂತೆಯೇ 3 ವರ್ಷದ ಮಗುವಿನ ಚೀರಾಟ ಕೇಳುತ್ತಿತ್ತು.ಒಳ ಹೋಗಿ ನೋಡಿದಾಗ ಮಗುವನ್ನು ನೀರತೊಟ್ಟಿಯಲ್ಲಿ ಕುಳ್ಳಿರಿಸಲಾಗಿತ್ತು ಅಲ್ಲಿಂದಲೇ ಮಗು ಚೀರಾಡುತ್ತಲೇ ಇತ್ತು.
ತಕ್ಷಣವೇ ಸಮೀಪದ ಪೇಟೆಯ ವೈದ್ಯರಿಗೆ ಕರೆ ಮಾಡಲಾಯಿತು. ಆ ವೈದ್ಯರ ದೂರವಾಣಿ ರಿಂಗಿಣಿಸಿದರೂ ಆವರು ಫೋನ್ ತೆಗೆಯಲೇ ಇಲ್ಲ.ಹಕ್ಕದ ಅಂಗಡಿಗೆ ಕೇಳಿದಾಗ ಅವರು ರಜೆಯಲ್ಲಿರುವ ಸುದ್ಧಿ ಬಂತು ಅತ್ತ ಕಡೆಯಿಂದ. ಆ ಸಂದರ್ಭದಲ್ಲೇ ಅರ್ಚಕರ ಮನೆಗೆ ಹಿತೈಷಿಯೊಬ್ಬರು ಬೇರೆ ವೈದ್ಯರೊಬ್ಬರನ್ನು ಮಾತನಾಡಿ ತಕ್ಷಣವೇ ಹೊರಡುವಂತೆ ವಿನಂತಿಸಿದ್ದರು. ಆದರೆ ಅದು ಹಳ್ಳಿಯಾದ್ದರಿಂದ ಅಷ್ಟು ಸುಲಭದಲ್ಲಿ ಅಲ್ಲಿಗೆ ತಲಪುವಂತಿರಲಿಲ್ಲ ಪೇಟೆಯಿಂದ ಏನಿಲ್ಲವೆಂದರೂ 4 - 5 ಕಿ ಮೀ ದೂರವಿದೆ.ತಕ್ಷಣಕ್ಕೆ ವಾಹನವೂ ದೊರೆಯದು. ಆದರೂ ವೈದ್ಯರು ಪ್ರಯತ್ನಿಸುವೆ ಎಂದಿದ್ದರು. ಇದೇ ವೇಳೆ ಅಲ್ಲಿಗೆ ಮೊದಲಿಗೆ ಬಂದಿದ್ದ ಕಾರ್ಯಕ್ರಮದ ಸಂಘಟಕರು ತಮ್ಮ ವಾಹನದಲ್ಲಿ ಇನ್ನೊಬ್ಬ ನುರಿತ ಚಾಲಕರನ್ನು ಸಂಪರ್ಕಿಸಿ ದೂರದ ಆಸ್ಪತ್ರೆಗೆ ಮುಂಜಾಗ್ರತೆಗಾಗಿ ಸಾಗಿಸುವ ಬಗ್ಗೆ ಯೋಚಿಸಿ ಹೊರಡಲು ಹೇಳಿ ಸಮೀಪದ ವೈದ್ಯರನ್ನು ಕರೆತರಲು ಹೊರಟರು. ಆದರೆ ಪೇಟೆ ತಲಪಲು 5 ರಿಂದ 7 ನಿಮಿಷ ಬೇಕು. ಆ ವೇಳೆಗೆ ವೈದ್ಯರು ಇನ್ನೊಂದು ಜೀಪಿನಲ್ಲಿ ಹೊರಟು ಬರುತ್ತಿದ್ದರು. ಆ ಕ್ಷಣವೇ ಕಾರಿನಲ್ಲಿ ದೇವಸ್ಥಾನದಲ್ಲಿ ನಡೆಯಬೇಕಾಗಿರುವ ಸಭಾಕಾರ್ಯಕ್ರಮಕ್ಕೆ ಅಗತ್ಯ ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ಖರೀದಿಸಿ ಮತ್ತೆ ಮನೆಯತ್ತ ಕಾರು ಹೊರಟಿತು.ನುರಿತ ಚಾಲಕರೂ ಜೊತೆ ಸೇರಿದರು.ವೇಗವಾಗಿ ಸಾಗಿದ ಕಾರು ದೇವಸ್ಥಾನದಲ್ಲಿ ವಸ್ತುಗಳನ್ನು ಇಳಿಸಿ ಮತ್ತೆ ಮನೆಯತ್ತ ಸಾಗಿದಾಗ ವೈದ್ಯರು ಮಗುವನ್ನು ಬಾಳೆ ಎಲೆಯಲ್ಲಿ ಮಲಗಿಸಿ ಶುಶ್ರೂಷೆ ಮಾಡುತ್ತಿದ್ದರು, ಮಗು ಆಳು ನಿಲ್ಲಿಸಿರಲೇ ಇಲ್ಲ. ಹೊಟ್ಟೆಯ ಭಾಗಶ:, ಹೊಟ್ಟೆಯಿಂದ ಕೆಳಗೆ ಮೂತ್ರ ನಾಳ , ಕಾಲು ..... ಬಿಸಿನೀರು ಬಿದ್ದು ಬೊಬ್ಬೆಗಳಾಗಿ ಚರ್ಮ ಎದ್ದು ಬಂದಿತ್ತು.

ಆದದ್ದೇನು ? ಆ ಮಗುವಿಗೆ ಇನ್ನೂ 3 ವರ್ಷ ಪ್ರಾಯ. ಆಟದ ಸಮಯ,ತುಂಟಾಟದ ಹೊತ್ತು.ಅತ್ಯಂತ ಜಾಗ್ರತೆ ಇರಬೇಕಾದ ಸಂದರ್ಭ. ಮಗುವಿನ ಅಮ್ಮ ಒಲೆಯ ಮೇಲಿನಿಂದ ನೀರಿ ಬಿಸಿಯಾದದ್ದನ್ನು ಕೆಳಗಿರಿಸಿ ಇನ್ನೊಂದು ಪಾತ್ರವನ್ನು ಸ್ಟೌವ್ ಮೇಲೆ ಇಡುವ ತಯಾರಿಯಲ್ಲಿದ್ದರು , ಅದುವರೆಗೆ ಹೊರಗಡೆ ಇದ್ದ ಮಗು ಒಳಗಡೆ ಬಂದ ತಕ್ಷಣ ಬಿಸಿನೀರಿನ ಪಾತ್ರವನ್ನು ಎಳೆದುಕೊಡಿತು.ಬಿಸಿನೀರು ಮಗುವಿನ ಮೇಲೆಲ್ಲಾಚೆಲ್ಲಿತು.

ವೈದ್ಯರು ತಕ್ಕ ಮಟ್ಟಿನ ಚಿಕಿತ್ಸೆ ಮಾಡುತ್ತಿದ್ದಾಗಲೇ ಮಗು ಅಳು ನಿಲ್ಲಿಸಿರಲೇ ಇಲ್ಲ ಹೊರಗಡೆ ಕೆಲ ಜನ ಜಮಾಯಿಸಿ ಹಳ್ಳಿ ಔಷಧಿಯ ಬಗ್ಗೆ ಮಾತನಾಡುತ್ತಾ "ಬೆಂಕಿ ತೆಗೆಸುವ" ಬಗ್ಗೆ ಚಿಂತಿಸುತ್ತಿದ್ದರು.ಚಿಕಿತ್ಸೆಯ ಸಂದರ್ಭದಲ್ಲೇ ಅರ್ಚಕರ ಬಳಿಗೆ ಬಂದ ವೈದ್ಯರು ನಿಮಗೆ ಧೈರ್ಯ ಇದ್ದರೆ ನಾನೆ ಚಿಕಿತ್ಸೆ ನೀಡುವೆ , ಪ್ರಾಣಕ್ಕೆ ಅಪಾಯವೇನಿಲ್ಲ..... ಬೇಕುಂತಲೆ ಇದ್ದರೆ ಒಂದು ದಿನ ಎಡ್ಮಿಟ್ ಆಗಿ ಅಂತ ಹೇಳಿ ಮತ್ತೆ ಚಿಕಿತ್ಸೆಯ ಕಡೆಗೆ ಹೋದರು , ಆಗ ಬಂದ ಜನ ಅವರು ಒಮ್ಮೆ ಹೋಗಲಿ , ನಂತರ ನಾವು ನೋಡೋಣ ಅಂತ ಅರ್ಚಕರಲ್ಲಿ ಹೇಳತೊಡಗಿದರು... ಈ ನಡುವೆ ಮಗುವಿಗೆ ಸಿಯಾಳವನ್ನೂ ನೀಡಲಾಯಿತು. ಕೊನೆಗೆ ವೈದ್ಯರು ಚಿಕಿತ್ಸೆಯನ್ನು ಮುಗಿಸಿ ಸಂಜೆಯವರೆಗೆ ಮೂತ್ರ ಹೋಗಿಲ್ಲವಾದರೆ ತಿಳಿಸಿ , ಕ್ಲಿನಿಕಿಗೆ ಮತ್ತೆ ಬನ್ನಿ ಮಾತ್ರೆ ಕೊಡುತ್ತೇನೆ ಎಂದು ಹೋದರು.

ನಂತರ ಮಾತನಾಡಿದ ಅರ್ಚಕರು ಮತ್ತು ಬಂದ ಜನ ಬೆಂಕಿ ತೆಗೆಯುವ ಪರಿಣಿತರತ್ತ ಸಾಗಿದರು....

ಈ ನಡುವೆ ಕಾರ್ಯಕ್ರಮ ನಡೆಯುವುದಿತ್ತು.... ಅರ್ಚಕರನ್ನು ಬಿಟ್ಟೂ ಎಲ್ಲರೂ ಅಲ್ಲಿಗೆ ತೆರಳಿದರು.

ಮಧ್ಯಾಹ್ನದ ವೇಳೆಗೆ "ಬೆಂಕಿ ತೆಗೆಯುವ" ಪರಿಣಿತರು ಬಂದು ಅದೇನೋ ಮಾಡಿ ಬೆಂಕಿ ತೆಗೆದರು.... ಕಾಕ ತಾಳೀಯವೋ ಗೊತ್ತಿಲ್ಲ ಮಗು ನಂತರ ಚೆನ್ನಾಗಿ ನಿದ್ದೆ ಮಾಡಿತಂತೆ..... ಆ ಬಳಿಕ ಔಷಧಿಯನ್ನೂ , ಲೇಪವನ್ನೂ ಮಗುವಿಗೆ ಹಚ್ಚಲಾಯಿತು. ಸಂಜೆ ಮತ್ತೆ ಅರ್ಚಕರಲ್ಲಿ ಕೇಳಿದಾಗ "ಈಗ ಮಗು ಪರವಾಗಿಲ್ಲ" ಎಂಬ ಉತ್ತರ.

ಆದರೆ ಅರ್ಚಕರ ಆತ್ಮವಿಶ್ವಾಸವೋ ಗೊತ್ತಿಲ್ಲ.. ಬೇರೆ ವೈದ್ಯರಲ್ಲಿಗೂ ಹೋಗಿಲ್ಲ..... ಬಂದ ವೈದ್ಯರಲ್ಲಿಂದ ಔಷಧಿಯನ್ನೂ ತಂದಿಲ್ಲ..... ಅದು.. ಇದು ಅಂತ ಔಷಧಿಯನ್ನು ಮಾಡಿದರು....

ಆದಾಗಿ ಸರಿಯಾಗಿ 3 ದಿನ ಕಳೆದು 4ನೇ ದಿನದ ಬೆಳಗ್ಗೆ ಮಗು ಹುಷಾರಾಗಿತ್ತು.ಅರ್ಚಕರು ಪೂಜೆ ಮುಗಿಸಿ ಮನೆಗೆ ಬಂದಿದ್ದರು ಇನ್ನೇನು ಊಟ ಮಾಡಬೇಕು ಅಂತ ಕುಳಿತಿರುವಾಗ ಮಗುವನ್ನು ಕೊಂಛ ನೋಡಿ ಬರುವುದಾಗಿ ಹೋದಾಗ ಅನುಮಾನ ಬಂದು ವೈದ್ಯರಿಗೆ ರಿಂಗಿಸಲಾಯಿತು.ವೈದ್ಯರು ಬಂದು ನೋಡುವಾಗಲೆ ಅನುಮಾನ ಹುತ್ತ ಕಾಡಿತ್ತು.... ಮಗುವನ್ನು ನೋಡಿದ ವೈದ್ಯರು ವಿಷಾದದ ಭಾವದಿಂದ ಹೇಳಿದರು No more.....

ಶಾಕ್.... ಅಯ್ಯೋ....... ಮತ್ತೆ ಆಕ್ರಂದನ......

ಊರೆಲ್ಲಾ ಛೆ.. ಹೀಗಾಗಬಾರದಾಗಿತ್ತು ಎಂಬ ವಿಷಾದದ ಮಾತು.

ಆದರೆ ಏನು ಪ್ರಯೋಜನ...!?. ತಪ್ಪು ಯಾರದ್ದು?.ಏನು ಮಾಡಬೇಕಿತ್ತು?. ಏನಾಯಿತು? .ಮತ್ತೆ ವಿಶ್ಲೇಷಣೆ ಶುರುವಾಯಿತು. ಅನಗತ್ಯ.....!?

ಈ ಘಟನೆ ನನ್ನನ್ನು ಅನೇಕ ದಿನಗಳ ಕಾಲ ಕಾಡಿತ್ತು.... ಅದನ್ನು ಇಂದಾದರೂ ಹೊರಹಾಕಿಬಿಡೋಣ ಅಂತ ಅನ್ನಿಸಿತು.ಇನ್ನು ಆ ಭಾವನೆಗಳೂ No more....

ಕಾಮೆಂಟ್‌ಗಳಿಲ್ಲ: