06 ನವೆಂಬರ್ 2008

ಕಾನೂನು ..

ಎಲ್ಲವೂ ಇರುವುದು ಪರರಿಗಾಗಿ. ನನಗಿರುವುದು ಏನೂ ಇಲ್ಲ. ಯಾವುದೂ ಇಲ್ಲ, ಯಾವುದೂ ಅಲ್ಲ.ಇದೇನೂ ಆಧ್ಯಾತ್ಮವೂ ಅಲ್ಲ, ವೈರಾಗ್ಯವೂ ಅಲ್ಲ. ಒಂದು ಮಾಮೂಲು ಡೈಲಾಗ್. ಇದೆಲ್ಲವೂ ಹೇಳುವುದಕ್ಕೆ ಮಾತ್ರಾ ಅನುಸರಿಸಲು ಅಲ್ಲ ಎನ್ನುವ ಸತ್ಯ ಎಲ್ಲರಿಗೂ ಗೊತ್ತಿದೆ. ಹಾಗಾಗಿ ,ಹೇಗೆ ಬೇಕಾದರೂ ಹೇಳಬಹುದು.

ಮೊನ್ನೆ ಇಂತಹುದ್ದೇ ಒಂದು ಕತೆ ನಡೆದಿತ್ತು. ಲಾರಿಯೊಂದರ ಹಿಂದೆ ದಾರಿಗಾಗಿ "ಧ್ವನಿ ಮಾಡಿ" ಎಂದು ಬರೆದಿತ್ತು. ಆದರೆ ದಾರಿ ಬೇಕೆಂದು ಧ್ವನಿ ಮಾಡಿದರೆ ದಾರಿಯೇ ಸಿಗಲ್ಲ. ಇನ್ನೊಂದು "ಅತಿ ವೇಗ ಆಪಘಾತಕ್ಕೆ ಕಾರಣ" ಎಂದಿರುತ್ತದೆ. ಆದರೆ ಆ ವಾಹನದ ವೇಗ ಅದಕ್ಕಿಂತಲೂ ಹೆಚ್ಚಿರುತ್ತದೆ. ಅಂದರೆ ಆ ವಾಕ್ಯಗಳೆಲ್ಲೆವೂ ನನಗಲ್ಲ ನನ್ನ ಹಿಂದಿನವರಿಗೆ ಎಂಬುದನ್ನು ಇನ್ನೂ ಸಾರಿ ಹೇಳಬೇಕೆಂದೇನೂ ಇಲ್ಲವಲ್ಲ. ಇಂದಿನ ಪರಿಸ್ಥಿತಿಯೂ ಅದೇ. ನಾನು ಏನು ಮಾಡಿದರೂ ಸರಿ. ಆಗ ಕಾನೂನುಗಳಾವುದೂ ಅನ್ವಯಿಸುವುದಿಲ್ಲ. ಅದೇ ಇನ್ನೊಬ್ಬನ ಬಗ್ಗೆಯಾದರೆ ತಪ್ಪಿ ನಡೆದಿದ್ದಾನೆ ಎನ್ನುವ ಬೊಟ್ಟು..! ಹಾಗಾಗಿ ಕಾನೂನುಗಳೆಲ್ಲವೂ ಇರುವುದು, ಇನ್ನೊಬ್ಬರಿಗೆ ಹೇಳಲು ಹೊರತು ಅನುಸರಿಸಲ್ಲ ಎನ್ನುವ ಹೊಸತೊಂದು ಮಾತು ಹುಟ್ಟಿಕೊಳ್ಳಬೇಕಾಗಿದೆ.
ಅನೇಕ ಸಂದರ್ಭಗಳಲ್ಲಿ ನಡೆದಿರುತ್ತದೆ ..ನಡೆಯುತ್ತದೆ .. ಮತ್ತು ನಡೆಯುತ್ತಲೇ ಇರುತ್ತದೆ... ನಾವು ಇನ್ನೊಬ್ಬರನ್ನು ಅದು ತಪ್ಪು ಅಂತ ಹೇಳಿರುತ್ತೇವೆ. ಆದರೆ ಮತ್ತೆ ಹೇಗೆ ಮಾಡಬೇಕಿತ್ತು ಅಂತ ನಮ್ಮ ಮನಸ್ಸಿನೊಳಗಾದರೂ ಒಮ್ಮೆಯಾದರೂ ಯೋಚಿಸಿದ್ದೇವಾ? ಖಂಡಿತಾ ಇಲ್ಲ. [ಇದರಲ್ಲಿ ನಾನೂ ಸೇರಿಕೊಂಡಿದ್ದೇನೆ].ಇವತ್ತು ನೋಡಿ ಎಲ್ಲೆಲ್ಲೂ ನಮ್ಮ ಯುವಕರು ದಾರಿ ತಪ್ಪಿದ್ದಾರೆ .. ಅದು ಸರಿಯಾದ ದಾರಿಯಲ್ಲ.. ಎಂದು ಬೊಬ್ಬಿಡುತ್ತಲೇ ಇದ್ದಾರೆ. ಆದರೆ ಯಾವುದು ಸರಿಯಾದ ಹಾದಿ..? ಎನ್ನುವುದಕ್ಕೆ ಎಲ್ಲಿದೆ ಉತ್ತರ?. ಅವರು ನಿಮಗೆ ಮಾದರಿ ಎನ್ನುವ ಜನ ಯಾರಿದ್ದಾರ್ ನಮ್ಮ ಮುಂದೆ.?. ಯಾರೋ 50 - 60 ವರ್ಷಗಳ ಹಿಂದಿನ ಜನರನ್ನು ನಮಗೆ ಅವರು ಮಾದರಿ ಎನ್ನುವುದಕ್ಕಿಂತ, ಈಗ ಬದುಕಿ ನಮಗೆ ಹತ್ತಿರವಾದರು ಮಾದರಿ ಎನ್ನುವುದು ಹೆಚ್ಚು ಸೂಕ್ತ. ಹಾಗಾಗಿ ಇಂದು ಎಲ್ಲವೂ , ಕಾನೂನು ಇರಬಹುದು,ನಮ್ಮ ನಡುವೆ ಪ್ರತಿದಿನ ನಡೆಯುವ ಘಟನೆಗಳಿರಬಹುದು , ನಮಗಾಗುವ ಅನುಕ್ಷಣದ ಅನುಭವಗಳಿರಬಹುದು, ಹೇಳುವ ವಿಚಾರಗಳಿರಬಹುದು ಅದು ಹೇಳುವುದಕ್ಕೆ ಮಾತ್ರಾ ಅನುಸರಿಸುವುದಕ್ಕಲ್ಲ..... ಎಂದು ಇಂದು ದಾಖಲಿಸಿದರೆ ತಪ್ಪಾಗಲಾರದು ಅಲ್ವೇ...?

ಕಾಮೆಂಟ್‌ಗಳಿಲ್ಲ: