11 ನವೆಂಬರ್ 2008

ಒಂದು ನಿಧಿಯ ಸುತ್ತ...



ಜೀವನದಲ್ಲಿ ಹೇಗಾದ್ರೂ ಸರಿ ಶ್ರೀಮಂತರಾಗಬೇಕು ಎನ್ನುವ ಯೋಚನೆ ಯಾವ ಮನುಷ್ಯನ ತಲೆಯೊಳಗೆ ಇಲ್ಲ ಹೇಳಿ. ಆ ಯೋಚನೆಯ ಹಿಂದೆ ಹಲವಾರು ದಾರಿಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಆ ಹಾದಿಯಲ್ಲಿ ಸಾಗಲು ಮನಸ್ಸು ಪ್ರೇರೇಪಿಸುತ್ತಲೆ ಇರುತ್ತದೆ. ಅದು ನ್ಯಾಯವಾ ...ಅನ್ಯಾಯವಾ... ಧರ್ಮವಾ....ಅಧರ್ಮವ... ಸರಿಯಾ ... ತಪ್ಪಾ.... ಅಂತೆಲ್ಲಾ ಯೋಚಿಸುವ ತಾಳ್ಮೆಯನ್ನು ಮನಸ್ಸು ಮಾಡುವುದಿಲ್ಲ. ಕೊನ್ಗೆ ಮಾನ ಹರಾಜಾಗುತ್ತದೆ ಎನ್ನುವ ಜ್ಞಾನವೂ ಬಾರದೆ. ಕೆಲಸಕ್ಕೆ ಇಳಿದೇ ಬಿಡುತ್ತದೆ.. ಅದರ ಪರಿಣಾಮ ಗೊತ್ತಾದಾಗ ಅಯ್ಯೋ ದುಡ್ಡೇ.... ನೀ ಹೀಂಗೇನಾ ... ಅಂಥ ಪರಿತಪಿಸುವುದು ಇದ್ದದ್ದೇ... ಅಂತಹ ದುಡ್ಡು ಮಾಡುವ ಕೆಲಸವೊಂದಕ್ಕೆ, ಸುಬ್ರಹ್ಮಣ್ಯದ ಬಳಿಯಲ್ಲಿ ಒಂದೈದು ಮಂದಿ ಇಳಿದಿದ್ದರು. ಆದರೆ ಮತ್ತೆ ಸುದ್ದಿಯಾದದ್ದು ಇನ್ನೊಂದು ಬ್ರೇಕಿಂಗ್ ನ್ಯೂಸ್....!!. ಮೂಢತನವೇ..?? ಎಂದು ಯಾರಾದರೂ ಹೇಳಿಯಾರು.

ಕುಕ್ಕೆ ಸುಬ್ರಹ್ಮಣ್ಯದ ಬಳಿಯಲ್ಲಿ ಕುಲ್ಕುಂದ ಎನ್ನುವ ಹೆಸರಿನ ಚಿಕ್ಕ ಊರಿದೆ. ಊರು ಎನ್ನುವುದಕ್ಕಿಂತಲೂ ಐತಿಹಾಸಿಕ ಪ್ರದೆಶ. ಇಲ್ಲಿ ಇದ್ದಕ್ಕಿದ್ದಂತೆಯೇ ಒಂದು ಸುದ್ದಿ ಬಂದಿತ್ತು. ಆಗ ತಾನೆ ಕೋಳಿ ಕೂಗಿರಬಹುದು. ಫೋನು ರಿಂಗಾಯಿತು. ಶಿರಾಡಿಯ ರಾಡಿಯಲ್ಲಿ ಒಂದು ಗಂಟೆಗಳ ಟ್ರಾಫಿಕ್ ಜಾಮ್ ನಿಂದ ತತ್ತರಿಸಿ ಹೋಗಿ ಬೆಂಗಳುರಿನಿಂದ ಆಗ ತಾನೆ ಬಂದಿಳಿದದ್ದಷ್ಟೇ..! ಆದರೂ ಸುದ್ದಿಯ ವಾಸನೆ ಬಡಿದದ್ದೇ ಹೊರಡಬೇಕಾಯಿತು. ಬರೀ ಫೋನು ರಿಂಗಾದರೆ ಯಾರು ಹೋಗ್ತಾರೆ??. ನಾನು ಹೇಗೂ....... ಅಲ್ಲ. ಆ ಫೋನಲ್ಲಿ ಬಂದ ವಿಷ್ಯ ಕುಲ್ಕುಂದದಲ್ಲಿ ನಿಧಿ ತೆಗೆಯಲು ಬಂದಿದ್ದಾರೆ.. ಇಬ್ಬರನ್ನು ಹಿಡಿಯಲಾಗಿದೆ... ಈಗ ಅಲ್ಲಿ ಕಾಳಿಂಗ ಸರ್ಪ ಇದೆ. ಅಲ್ಲೆ ಸುತ್ತಾಡುತ್ತಲೇ ಇದೆ... ಎಂದಿತು ಮಾಹಿತಿ. ಆದರೆ ಅಲ್ಲಿ ಹಾವು [ಕಾಳಿಂಗ] ಇದೆ ಎಂದರೆ ಸ್ವಲ್ಪ ಕುತೂಹಲವೇ..! ಹೀಗೂ ಉಂಟೇ..!! ಎಂದೆಲ್ಲಾ ಯೋಚನೆಯ ಹಿನ್ನೆಲೆಯಲ್ಲಿ ಬೈಕ್ ಸ್ಟಾರ್ಟ್ ಆಯಿತು. ಹೋದಾಗ ಜನ ಸೇರಿದ್ದರು. ನನ್ನ ಮಿತ್ರ ಇದ್ದ. ಕ್ಯಾಮಾರ ಆನ್ ಆಯಿತು.ಸುತ್ತ ಮುಳ್ಳು ಗಂಟಿಗಳ ಪ್ರದೇಶ. ಅದರ ನಡುವೆ ಇದೆ ಎನ್ನಲಾಗುವ ನಿಧಿ. ಆ ನಿಧಿಯಲ್ಲಿ ಏನಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ.ಆದರೆ ಯಾರು ತೆಗೆಯುತ್ತಾರೆ ಅವರಿಗೇ ಗೊತ್ತು..!?. ಹಾಗೆ ಆ ಪೊದೆಯ ನಡುವೆ ಹಾವಿನ ಕೊಂಚ ಬಾಲ ಕಾಣುತ್ತದೆ. ಕ್ಯಾಮಾರ ಕಣ್ಣಲ್ಲಿ ಸೆರೆ ಹಿಡಿಯುವುದು ಅಸಾಧ್ಯವಾಗಿತ್ತು. ಆದರೂ ವಿಚಿತ್ರದ ಬಗ್ಗೆ ಇನ್ನೂ ಆಸಕ್ತಿ. ಈ ನಡುವೆ ಊಹಾ ಪೂಹಗಳು. ಇಲ್ಲಿ ಸ್ವಲ್ಪ ಸಮಯದ ಹಿ0ದೆ ಹೀಗೆಯೆ ಬಂದಿದ್ದರು, ಅದನ್ನು ಎಳ್ಳಲು ನೋಡಿದ್ದರು..ಆಗ ಅವರನ್ನು ಹಾವು ಓಡಿಸಿತ್ತು...ಹೀಗೆ ನಿಧಿ ಇರುವ ಜಾಗದಲ್ಲಿ ಕಾಳಿಂಗ ಸರ್ಪ ಇದ್ದೇ ಇರುತ್ತದೆ... ಕಳ್ಳರು ಇಲ್ಲಿಗೆ ಬಂದಿದ್ದಾಗ ನಾವು ಕೂಡಾ ಓಡಿಸಿದ್ದೆವು... ಅಲ್ಲಿ ಚಪ್ಪಲಿ ಹಾಕಬಾರದು... ಹಾವನ್ನು ನೋಡಬಾರದು... ಇಲ್ಲಿಗೆ ಬಂದವರು ಮಂತ್ರವಾದಿಗಳು ಅವರು ಹಾವನ್ನು ಮಂತ್ರದ ಮೂಲಕ ಕಟ್ಟಿ ಹಾಕಿದ್ದಾರೆ ಹಾಗೆ ಹಾವು ಓಡುವುದೇ ಇಲ್ಲ ಅಲ್ಲೇ ಇದೆ ಎನ್ನುವ ಮಾತುಗಳಿಗೆ ಕೊರತೆಯಿರಲಿಲ್ಲ. ಆದರೆ ಬಿಸಿಲಿನ ಪೆಟ್ಟು ಬೀಳುತ್ತಿದ್ದಂತೆಯೇ ಹಾವಿನ ಮಿಸುಕಾಟ ಆರಂಭವಾಯಿತು. ಹಾವು ಅತ್ತಿಂದಿತ್ತ ಚಲಿಸಿತು. ಕ್ಯಾಮಾರಕ್ಕೆ ಕಂಡಿತು.... ಅದು ಹೆಬ್ಬಾವು.....!!!. ಆದರೆ ಜನ ಅಲ್ಲ ಮಾರಾಯರ್ರೇ ಅದು ಕಾಳಿಂಗ ಸರ್ಪ... ಇಲ್ಲಿಗೆ ಹೆಬ್ಬಾವು ಬರಲು ಸಾಧ್ಯನೇ ಇಲ್ಲ. ಆಗ ಅದು ಕಾಳಿಂಗವಾಗಿತ್ತು.. ಈಗ ಅದುವೇ ಹೆಬ್ಬಾವಾಗಿದೆ.. ಅಲ್ಲ ಇನ್ನೊಂದು ಹಾವೂ ಇದೆ... ಅಂತೆಲ್ಲಾ ಮತ್ತೆ ಕಂತೆಗಳನ್ನು ಪೋಣಿಸಿದರು. ಆದರೆ ನಮಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಅಂತೂ ನಿಧಿ ಅಗೆಯಲು ಬಂದವರಲ್ಲಿ ಇಬ್ಬರಿಗೆ ಸಿಕ್ಕಿದ್ದು ಎರಡೆರಡು ಗೂಸಾ... ಮತ್ತೆ ಮೂವರು ಪರಾರಿ.

ಜನರಿಗೆ ನಂಬಿಕೆ ಅಲ್ಲಿ ನಿಧಿ ಇದೆ... ಕಾಳಿಂಗವಿದೆ... ಇಲ್ಲ ಅಲ್ಲಿ ಕಾಳಿಂಗವಿಲ್ಲ.. ಎಂದರೆ ಇದೆ ... ಎಂದು ವಾದಿಸುವಷ್ಟರ ಮಟ್ಟಿಗೆ ತಲೆಯೊಳಗೆ ತುಂಬಿಸಿಕೊಂದಿದ್ದಾರ್. ಕೊನೆಗೆ ಒಬ್ಬರು ಹೇಳಿದರು ಇದು ನಾಗ ನಿಧಿ ಇದನ್ನು ಬಲ್ಲಾಳ ಅರಸ ಹುಗಿದಿಟ್ಟದ್ದು ಹಾಗಾಗಿ ಇದು ಕಾರಣಿಕ. ಯಾವ ಬಲ್ಲಾಳ ಗೊತ್ತಿದೆಯೇ ಅಂತ ಮಿತ್ರ ಕೇಳಿದ.. ಇಲ್ಲ ಅದು ಬಲ್ಲಾಳ ಎಂದೇ ಪ್ರತ್ಯುತ್ತರ. ಆ ನಿಧಿಯಲ್ಲಿ ವಿಪರೀತ ಒಡವೆಗಳು , ಹಣ ಇರುತ್ತದೆ. ಹಾಗಾಗಿ ಕಳ್ಳರು ಅದನ್ನು ಎಳ್ಳಲು ಬರುತ್ತಾರೆ ಎನ್ನುತ್ತವೆ ಆಧ್ಯಾತ್ಮದ ಮನಸ್ಸುಗಳು.ಹಾಗಾಗಿ ಹಣ ಮಾಡುವ ಉದ್ದೇಶದಿಂದ ಎಳ್ಳುವ ಪ್ರಯತ್ನಕ್ಕೆ ಕೈಹಾಕಿದರು ಕಳ್ಳರು.

ಅತ್ಯಂತ ಸ್ವಾರಸ್ಯಕರ ಹಾಗೂ ತಿರುವು ಪಡೆಯಲಿದ್ದ ಸುದ್ದಿಯೊಂದು ಇನ್ನೊಂದು ರೂಪ ಪಡೆದುಕೊಂದಿತು.

2 ಕಾಮೆಂಟ್‌ಗಳು:

ಹರೀಶ ಮಾಂಬಾಡಿ ಹೇಳಿದರು...

ಘಳಿಗೆಗೊಂದು ಬಾರಿ ಹಾವು ಬೇರೆ ಬೇರೆ ರೂಪದಲ್ಲಿದ್ದದ್ದು ವಿಚಿತ್ರ...ಈ ಕುತೂಹಲಕಾರಿ ಘಟನೆಯ ಕೊನೆ ಏನಯ್ತು ಮಾರಾಯ್ರೆ?

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಅಯ್ಯೋ ಸರ್, ಅದೆಲ್ಲಾ ಒಂದು ವಾಕ್ಯದಲ್ಲಿ ಹೇಳಿ ಮುಗಿಸಲು ಸಾಧ್ಯವೇಯಿಲ್ಲ.ಜನಕ್ಕೆ ಅದು ಹೆಬ್ಬಾವು ಅಂತ ಗೊತ್ತಾದ ಮೇಲೂ ಅದು ಕಾಳಿಂಗವೇ . .. ಅದು ಮಾತ್ರಾ ಬಿಳಿ ಕಾಳಿಂಗ ಅಂತ ಹೇಳಿದರು. ಹಾವು ಮರುದಿನ ಬೆಳಗ್ಗೆ ಅಲ್ಲಿಂದ ಕಣ್ಮರೆಯಾಯಿತು. ನನಗೆ ಮತ್ತೆ ಮರುದಿನ ಒಂದು ಕರೆಬಂದಿತ್ತು ಅಲ್ಲಿ ನಿಜವಾದ ನಾಗರಹಾವಿದೆ ಅಂತ..!!. ಅದರ ಮರುದಿನ ಇನ್ನೊಂದು ಕರೆ ಬಂತು ಮೊನ್ನೆ ಕಂಡ ಹೆಬ್ಬಾವು ಮನೆಯೊಂದರ ಬಳಿ ಸತ್ತಿದೆ ಅಂತ. ಹಾಗಾದ್ರೆ ಅಲ್ಲಿ ಜನ ನಂಬುವುದು ಯಾವುದನ್ನು??. ಅಲ್ಲಿ ಕಂಡದ್ದು ಕಾಳಿಂಗವೇ.. ನಾಗರವೇ... ಹೆಬ್ಬಾವೇ...??? ಅಂತೂ ವಿಚಿತ್ರ. ಆದರೆ ನಾನು ಮತ್ತೆ ತಲೆಕೆಡಿಸಿಕೊಂಡಿಲ್ಲ... ಆ ಘಟನೆಯ ನಂತರ ವಿವಿಧ ಊಹಾಪೋಹಗಳು ಹುಟ್ಟುತ್ತಲೇ ಇದ್ದವು.