16 ಆಗಸ್ಟ್ 2008

ಬಾಳಿಗೆ ಶಾಪವಾದ "ಪ್ರಗತಿ ಪರ" ಕೃಷಿ..






ರಾಜ್ಯದಲ್ಲಿ ಕೆಲ ಸಮಯಗಳ ಹಿಂದೆ ರಸಗೊಬ್ಬರಕ್ಕಾಗಿ ಗಲಭೆ , ದೊಂಬಿ , ಸಾವು , ನೋವುಗಳು ಸಂಭವಿಸಿತ್ತು. ಜನ ವಿವಿಧ ಆಯಾಮಗಳಿಂದ ಚರ್ಚೆ ನಡೆಸುತ್ತಲೇ ಇದ್ದರು.ಮಾಧ್ಯಮಗಳೂ ಹಾಗೆಯೇ."ಗೊಬ್ಬರ ಗಲಾಟೆ"ಯನ್ನೇ ಬಿಂಬಿಸಿದ್ದವು. ಆದರೆ ಆ ರಸಗೊಬ್ಬರಕ್ಕೆ ಪರ್ಯಾಯವಾದ ಇನ್ನೊಂದು ಯಾವುದಿದೆ ಎನ್ನುವುದರ ಹಿಂದೆ ಕೃಷಿಕರು ಬಿದ್ದಿರಲಿಲ್ಲ. ಹೀಗೆ ತಲತಲಾಂತರದಿಂದ ರಸಗೊಬ್ಬರ ಕೃಮಿ ನಾಶಕವನ್ನು ಬಳಸಿ ಈಗ ಪಶ್ಚಾತ್ತಾಪ ಪಡುತ್ತಿರುವ ರೈತನೊಬ್ಬನ ಕತೆಯಿಲ್ಲಿದೆ. ಆ ಕಡೆ ಒಮ್ಮೆ ಹೋಗಿ ಬರೋಣ.

ಇತ್ತೀಚೆಗೆ ಮಿತ್ರ ದೂರವಾಣಿಯಲ್ಲಿ ಹೇಳಿದ "ಏ ಮಹೇಶ್ ನಾನು ಒಬ್ಬರನ್ನು ಮೊನ್ನೆ ಭೇಟಿಯಾಗಿದ್ದೆ ,ಅವರು ಕಳೆದ 15 ವರ್ಷದ ಹಿಂದಿನಿಂದ ಗದ್ದೆಗೆ [ಹೊಲಕ್ಕೆ] ಕೀಟಗಳ ನಿಯಂತ್ರಣಕ್ಕೆ ಎಂಡೋಸ್ಫಾನ್ ಸಿಂಪಡಿಸುತ್ತಿದ್ದರಂತೆ ಈಗ ಅದರ ಪರಿಣಾಮ ಗೊತ್ತಾಗಿದೆ.ಮೈ ಮೈಮೇಲೆಲ್ಲಾ ಒಂಥರಾ ಗುಳ್ಳೆಗಳಿವೆ...." ಅಂತ ವಿವರಿಸಿದ್ದರು. ಸರಿ ಅಂತ ಎರಡು ದಿನಗಳ ಬಳಿಕ ಅತ್ತ ಕಡೆ ಹೋಗುವ ವೇಳೆಗೆ ಆ ಮನೆಗೆ ಭೇಟಿ ನೀಡಿದೆವು.
ಇದು ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಮೊಯಿದು ಎಂಬ ಕೃಷಿಕರ ಕತೆ. ಹೈಸಿರು ಕ್ರಾಂತಿಯ ಫಲವಾಗಿ ಇವರು ತಮ್ಮ ಹೊಲದಲ್ಲಿ ವಿವಿಧ ತಳಿಗಳ ಭತ್ತವನ್ನು ಬೆಳೆದಿದ್ದರು ಮಾತ್ರವಲ್ಲ, ಭತ್ತದ ಕೃಷಿಯಲ್ಲಿ ಇವರು ತಾಲೂಕಿನಲ್ಲಿ ಪ್ರಥಮ ಸ್ಥಾನವನ್ನೂ ಪಡೆದಿದ್ದರು. ಆದರೆ ಇದಕ್ಕೆ ಅವರು ಅನುಸರಿಸಿದ ಮಾರ್ಗ ಮಾತ್ರಾ ರಾಸಾಯನಿಕ ಕೃಷಿ. ಹೊಲಕ್ಕೆ ಯಥೇಚ್ಚವಾಗಿ ಗೊಬ್ಬರ ಸುರಿದರು ಸಾಲದೆಂಬಂತೆ ಕೀಟಗಳ ನಿವಾರಣೆಗೆ ಎಂಡೋಸಲ್ಫಾನ್ ಎರೆದರು. ಗರಿಷ್ಠ ಪ್ರಮಾಣದಲ್ಲಿ ಭತ್ತವನ್ನೂ ಪಡೆದರು.ಹೀಗೆಯೇ ಅವರು ಬೆಳೆದದ್ದು 15 ವರ್ಷಗಳ ಕಾಲ. ಆಮೇಲೆ ಅವರಿಗೆ ಅರಿವಾಯಿತು ಇದರ ದುಷ್ಪರಿಣಾಮ. ನಂತರ ಈ ಪರಂಪರೆಗೆ ವಿದಾಯ ಹೇಳಿ ಸಾವಯವ ಕೃಷಿಯತ್ತ ಬಂದರು. ಆದರೆ ಕಾಲ ಮಿಂಚಿತ್ತು. ನಂತರದ ಒಂದೆರಡು ವರ್ಷದಲ್ಲಿ ಅವರಿಗೆ ಕಾಣಿಸಿಕೊಂಡದ್ದು ಎಂಡೋಸಲ್ಫಾನ್ ಪರಿಣಾಮ. ಮೈ ಹಾಗೂ ಕೈಯಲ್ಲಿ ಒಂಥರಾ ಬೊಬ್ಬೆಗಳ ರೀತಿಯಲ್ಲಿ ಕಜ್ಜಿಗಳು ಕಾಣಿಸಿಕೊಂಡಿತು. ವೈದ್ಯರಲ್ಲಿಗೆ ಹೋದರೂ ಕಡಿಮೆಯಾಗಿಲ್ಲ. ನಂತರ ಅರಿವಾಯಿತು ಇದು ಎಂಡೋಸಲ್ಫಾನ್ ಪರಿಣಾಮ ಎಂದು. ಆದರೆ ಕಾಲ ಮಿಂಚಿತ್ತು.

ಇದು ಇವರ ಒಬ್ಬರ ಕತೆಯಲ್ಲ ಅನೆಕ ಕೃಷಿಕರು ಇಂದು ಒಂದಿಲ್ಲೊಂದು ಸಮಸ್ಯೆಯಲ್ಲಿ ಬಳಲುತ್ತಿದ್ದಾರೆ. ಅದು ಮಾತ್ರವಲ್ಲ ಹೀಗೆ ರಾಸಾಯನಿಕ ಮತ್ತು ವಿಷಪೂರಿತ ಔಷಧಿಗಳನ್ನು ಹೊಲಗಳಿಗೆ ಸಿಂಪಡಿಸುವುದರಿಂದ ಆ ವಸ್ತುವನ್ನು ತಿನ್ನುವ ಜನರಿಗೂ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಇಂದು ಮಣ್ಣಿನ ಗುಣಮಟ್ಟ ಕಾಪಾಡಲು ಮತ್ತು ಇಡೀ ಜನರ ಬದುಕನ್ನು ಹಾಗೂ ತನ್ನ ಆರೋಗ್ಯವನ್ನು ಕಾಪಾಡಲು ರೈತರು ಸಾವಯವ ಕೃಷಿಯತ್ತ ಬರಬೇಕಾಗಿದೆ. ಗೊಬ್ಬರ ಗಲಾಟೆಗೆ ವಿದಾಯ ಹೇಳಬೇಕಾಗಿದೆ.

2 ಕಾಮೆಂಟ್‌ಗಳು:

Chamaraj Savadi ಹೇಳಿದರು...

ಎಂಡೋಸಲ್ಫಾನ್‌ ಹೊಡೆತ ಈಗ ಹೇಗಿದೆ ಮಹೇಶ್‌? ಅತ್ಯಂತ ಅಪಾಯಕಾರಿ ಕೀಟನಾಶಕ ಇದು. ಈಗ ಮನುಷ್ಯನ ನಾಶಕ್ಕೆ ಸಿದ್ಧವಾಗಿದೆ. ದಕ್ಷಿಣ ಕನ್ನಡದ ರೈತರು ಇದನ್ನು ಇನ್ನೂ ಬಳಸುತ್ತಿದ್ದಾರಾ?

ಈ ಕುರಿತು ಸಾಧ್ಯವಾದರೆ ನೀವೇ ಒಂದು ಸಮೀಕ್ಷೆ ಥರ ಮಾಡಿ ವರದಿಗಳನ್ನು ಕಳಿಸುವುದಾದರೆ, ಮಾಧ್ಯಮದ ಗಮನ ದರಿದ್ರ ವಿಷಯಗಳಾಚೆ ಹೋಗಲು ಸಾಧ್ಯವಾಗುತ್ತದೆ. ಏಕೆ ಪ್ರಯತ್ನಿಸಬಾರದು?

ದಯವಿಟ್ಟು ಬರೆಯುತ್ತಿರಿ. ಹೊಸ ಹೊಳಹು ಎಲ್ಲರಿಗೂ ಸಿಕ್ಕಲಿ.

- ಚಾಮರಾಜ ಸವಡಿ
http://chamarajsavadi.blogspot.com
http://sampada.net/blog/chamaraj

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಸರ್ ,
ಆ ನಿಟ್ಟಿನಲ್ಲೂ ಒಂದು ಪ್ರಯತ್ನವಾಗುತ್ತಿದೆ.ಎಂಡೋಸಲ್ಫಾನ್ ಮತ್ತು ಅದರ ದುಷ್ಫರಿಣಾಮಗಳ ಬಗ್ಗೆ ಒಂದು ವರದಿಯನ್ನು ತಯಾರಿಸುವವನಿದ್ದೇನೆ.ಆದರೆ ನಾವು ಇತರ ಎಲ್ಲಾ ಮಾಧ್ಯಮಗಳಿಂತ ಭಿನ್ನವಾಗಿ ಅಂದರೆ ಎಂಡೋಸಲ್ಫಾನ್ ಪರಿಣಾಮದ ನಂತರ ಈಗ ಜನ ಏನು ಮಾಡಿತ್ತಿದ್ದಾರ್‍ಎ ಅದೂ ಮುಖ್ಯವಾಗಿ ಕಾಸರಗೊಡಿನ ಪಡ್ರೆಯಂತಹ ಪ್ರದೇಶದಲ್ಲಿ ಎನ್ನುದರ ಬಗ್ಗೆ ಗಮನ ಹರಿಸಲಿದ್ದೇವೆ.
ಕಮೆಂಟಿಸಿದ್ದಾಕ್ಕಾಗಿ ಮತ್ತು ಸಲಹೆಗಾಗಿ ಧನ್ಯವಾದ ,
ಇತೀ ಮಹೇಶ್