15 ಆಗಸ್ಟ್ 2008

ಈ ಯೋಜನೆಗಳು ಎಷ್ಟು ಸುರಕ್ಷಿತ...



ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿಯಲ್ಲಿರುವ ನೀರಕಟ್ಟೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವಿದ್ಯುತ್ ಉತ್ಪಾದನಾ ಕೇಂದ್ರದಿಂದಲ್ಲಿ ಭಾರೀ ದುರಂತ ಸಂಭವಿಸಿರುವ ಹಿನ್ನೆಲೆಯಲ್ಲಿ ಈಗ ಕರಾವಳಿ ಜಿಲ್ಲೆಯ ಇತರ ವಿದ್ಯುತ್ ಯೋಜನೆಗಳು ಎಷ್ಟು ಸುರಕ್ಷಿತ ಎನ್ನುವುದರ ಬಗ್ಗೆ ಗಮನಹರಿಸಬೇಕಾಗಿದೆ. ಈ ಸ್ಥಾವರಗಳ ಬಳಿಯಲ್ಲಿರುವ ಹಾಗೂ ನದಿಯ ಪಕ್ಕದಲ್ಲಿ ವಾಸಿಸುತ್ತಿರುವ ಜನರ ದೈನಂದಿನ ಜೀವನವು ಭಯದಿಂದ ಕೂಡಿದೆ.ಈ ಬಗ್ಗೆ ಒಂದು ಅವಲೋಕನ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಬಳಿಯ ನೀರಕಟ್ಟೆಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿರು ವಿದ್ಯುತ್ ಘಟಕವು ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಆಗಷ್ಟ್ 15 ರಂದು ಪ್ರಾಯೋಗಿಕವಾಗಿ ಉದ್ಘಾಟನೆಯಾಗಬೇಕಿತ್ತು. ಈ ಘಟಕವನ್ನು ಆಂಧ್ರ ಮೂಲದ ಸಾಗರ್ ಪವರ್ ಪ್ರಾಜೆಕ್ಟ್ ಸುಮಾರು 100 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣ ಕಾರ್ಯ ನಡೆಸಿತ್ತು.ಇಲ್ಲಿ ಸುಮಾರು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿತ್ತಲ್ಲದೆ ಇಲ್ಲಿ ತಯಾರಾಗುವ ವಿದ್ಯುತ್ ಇಲ್ಲಿನ ಆಸುಪಾಸಿನ ಪ್ರದೇಶಗಳಿಗೆ ವಿತರಿಸಲಾಗುವುದು ಎಂಬ ವಿಚಾರವನ್ನು ಹೇಳಲಾಗಿತ್ತು. ಆದರೆ ಅದಕ್ಕೂ ಮುನ್ನ ಸುರಿದ ಭಾರೀ ಮಳೆಯಿಂದ ನೇತ್ರಾವತಿ ನದಿ ತುಂಬಿ ಹರಿದು ಮಿನಿ ವಿದ್ಯುತ್ ಸ್ಥಾವರದ ಅಣೆಕಟ್ಟು ತುಂಬಿದ ಕಾರಣ ಕ್ರೆಸ್ಟ್ ಗೇಟನ್ನು ತೆರೆಯಲು ರಾತ್ರಿ ಪಾಳಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕ ತೆರಳಿದ.ಇದರಿಂದಾಗಿ ಹೊರಬಂದ ನೀರಿನ ರಭಸಕ್ಕೆ ಅಣೆಕಟ್ಟು ಬಿರುಕು ಬಿಟ್ಟು ನೀರು ಒಮ್ಮೆಲೇ ಹೊರಚೆಲ್ಲಿ ಅಲ್ಲೆ ಕೆಲಸ ಮಾಡುತ್ತಿದ್ದ 6 ಮಂದಿ ನೀರುಪಾಲಾದರು. ಈ ಘಟನೆಗೆ ಅಣೆಕಟ್ಟಿನ ಕಳಪೆ ಕಾಮಗಾರಿಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುತ್ತಿತ್ತು. ಹೀಗಾಗಿ ಇಂತಹ ಯೋಜನೆಗಳ ಕಳಪೆ ಕಾಮಗಾರಿಯಿಂದಾಗಿ ನೀರಿನ ಒತ್ತಡಕ್ಕೆ ಒಂದು ವೇಳೆ ಇಡೀ ಅಣೆಕಟ್ಟು ಬಿರುಕು ಬಿಟ್ಟರೆ ನದಿ ಪಾತ್ರದ ಜನತೆಯ ಬದುಕಿನ ಮೇಲೆ ಪರಿಣಾಮ ಬೀರಲಿದೆ.ಈ ಕಾಮಗಾರಿಯನ್ನು ಆರಂಭಿಸುವಾಗಲೇ ಇಲ್ಲಿನ ಜನರ ವಿರೋಧವಿತ್ತು. ಆಗ ಇದೇ ಕಂಪೆನಿಯು ಅನೇಕರಿಗೆ ಕಿರು ಪರಿಹಾರವನ್ನು ನೀಡಿ ಕೈಚೆಲ್ಲಿ ಕುಳಿತಿತ್ತು. ನಂತರ ಊರಿನ ಯಾವೊಬ್ಬನಿಗೂ ಅಲ್ಲಿಗೆ ಪ್ರವೇಶ ಇದ್ದಿರಲಿಲ್ಲ.ಹಾಗಾಗಿ ಸ್ಥಳೀಯರಾರೂ ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಮಾತ್ರಾ ಇಂತಹ ಕಿರು ಜಲ ವಿದ್ಯುತ್ ಘಟಕಗಳನ್ನು ಮತ್ತೆ ನೋಡುವಂತೆ ಮಾಡಿದೆ. ಇದೇ ನೇತ್ರಾವತಿ ನದಿಯ ಪಕ್ಕದಲ್ಲಿ ಅಣೆಕಟ್ಟಿನ ಕೆಳಭಾಗದಲ್ಲಿ ಸಾವಿರಾರು ಮನೆಗಳಿವೆ ,ನೂರಾರು ಎಕ್ರೆ ಕೃಷಿ ಭೂಮಿಯಿದೆ ಒಂದು ವೇಳೆ ಮುಂದೆಯೂ ಇಂತಹ ಘಟನೆ ನಡೆದರೆ ನದಿ ಭಾಗದ ಜನತೆ ಆತಂಕವನ್ನು ಎದುರಿಸಬೇಕಾಗಿದೆ.ಹಾಗೆ ನೋಡಿದರೆ ನೀರಕಟ್ಟೆ ಜಲವಿದ್ಯುತ್ ಘಟಕವನ್ನು 1976ರಲ್ಲಿ ಕರ್ನಾಟಕ ಪವರ್ ಕಾರ್ಪೋರೇಷನ್ ಸರ್ವೆ ನಡಿಸಿತ್ತು ನಂತರ 1998-1999 ರ ಸುಮಾರಿಗೆ ಈ ಯೋಜನೆಯನ್ನು ಖಾಸಗಿ ಕಂಪನಿಯಾದ ಸಾಗರ್ ಪವರ್ ಕಾರ್ಪೋರೇಷನ್ ಗೆ ಹಸ್ತಾಂತರಿಲಾಗಿತ್ತು.ನಂತರ 2004ರಲ್ಲಿ ಇಲ್ಲಿ ಕಾಮಗಾರಿ ಆರಂಭಿಸಲಾಗಿತ್ತು.



ಇಂದು ವಿದ್ಯುತ್ ಅನಿವಾರ್ಯವಾಗಿದೆ. ಆದರೆ ಇಂತಹ ಕಿರುಜಲವಿದ್ಯುತ್ ಘಟಕಗಳ ಮೇಲೆ ಅತ್ಯಂತ ನಿಗಾ ಅಗತ್ಯವಾಗಿದೆ. ವಿದ್ಯುತ್ ಹೆಸರಿನಲ್ಲಿ ನಡೆಯಬಹುದಾದ ಅನಾಹುತಗಳಿಗೆ ಹೊಣೆಗಾರರಾಗಲೂ ಯಾರೂ ತಯಾರಿರದೆ ಸಂತ್ರಸ್ತ ಜನರು ಅತಂತ್ರ ಸ್ಥಿತಿ ಎದುರಿಸುತ್ತಿರುವುದರಿಂದ ಇಂದು ಇಂತಹ ಜಲವಿದ್ಯುತ್ ಗಳಿಗೆ ಸಾರ್ವಜನಿಕರಿಮ್ದ ವಿರೋಧ ಬರುತ್ತಿದೆ.ಇಂದು ಇಂತಹ ಕಂಪನಿಗಳು ನದಿಯಲ್ಲಿ ಜಲವಿದ್ಯುತ್ ನಿರ್ಮಾಣ ಮಾಡಲು ಸ್ಥಳೀಯ ಗ್ರಾಮ ಪಂಚಾಯತ್ ಗಳಿಂದ ಅನುಮತಿ ಪಡೆದರೆ ಸಾಕು.ನಂತರ ಆ ಪ್ರದೇಶಗಳಿಗೆ ಯಾರೊಬ್ಬನಿಗೂ ಪ್ರವೇಶವೇ ಇಲ್ಲ.ಕಾಮಗಾರಿಯ ಪರಿಶೀಲನೆಗೂ ಅವಕಾಶವಿಲ್ಲ.ಕೊನೆಗೆ ನದಿಯ ನೀರನ್ನು ಅಣೆಕಟ್ಟೆಯಲ್ಲಿ ಸಂಗ್ರಹಿಸುವ ವಿಚಾರದಲ್ಲೂ ಕಂಪನಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ , ನೀರನ್ನು ಬಿಡಲೂ ಅಷ್ಟೇ ಯಾವುದೆ ಸೂಚನೆಯೂ ಬೇಕಾಗಿಲ್ಲ. ಇದರಿಂದಾಗಿ ನದಿಯ ಇಕ್ಕೆಲೆಗಳಲ್ಲಿ ಕೃತಕ ನೆರೆ ಹಠಾತ್ ಆಗಿ ಕಾಣಿಸಿಕೊಳ್ಳುತ್ತದೆ.ಜನಜೀವನ ಅಸ್ತವ್ಯಸ್ಥಗೊಳ್ಳುತ್ತದೆ.ಇತ್ತೀಚೆಗೆ ಗುಂಡ್ಯ ನದಿಗೆ ಕಟ್ಟಲಾಗಿರುವ ಗುಂಡ್ಯ ಜಲವಿದ್ಯುತ್ ಘಟಕದ ಕತೆಯೂ ಇದೆ. ಅಲ್ಲಿ ಹಠಾತ್ ಆಗಿ ನೀರನ್ನು ಬಿಡುವ ಕಾರಣದಿಂದಾಗಿ ಪುತ್ತೂರು ಸಮೀಪದ ಹೊಸಮಠ ಸೇತುವೆ ಜವಾವೃತವಾಗಿ 3 -4 ದಿನಗಳ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ. ಇಂತಹ ತೊಂದರೆಗಳಿಗೆ ಕಂಪನಿಗಳು ಬಾದ್ಯರಾಗದೇ ಇರುವುದು ಇಂದಿನ ದುರಂತಗಳಿಗೆ ಕಾರಣವಾಗಿದೆ. ಇಂದು ವಿದ್ಯುತ್ ಅನಿವಾರ್ಯವಾಗಿರುವ ಸಂದರ್ಭದಲ್ಲಿ ಸರಕಾರವು ಇಂತಹ ಕಿರುಜಲವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ನಿಯಮಗಳನ್ನು ಹಾಕಬೇಕಾಗಿದೆ.


ಇಂದು ಕರಾವಳಿ ಜಿಲ್ಲೆಯಲ್ಲಿ ನೀರಕಟ್ಟೆಯಂತಹ ಹಲವಾರು ಕಿರು ಜಲವಿದ್ಯುತ್ ಯೋಜನೆಗಳು ತಲೆ ಎತ್ತುತ್ತಿವೆ. ಆದರೆ ಅವುಗಳಿಗಾವುದಕ್ಕೂ ಗುಣಮಟ್ಟ ಪರೀಕ್ಷೆಯ ಕಾರ್ಯಾವಿಧಾನಗಳೇ ಇಲ್ಲ. ಈಗಾಗಲೇ ನೀರಕಟ್ಟೆಯ ದುರಂತವು ಇಂತಹ ಅಣೆಕಟ್ಟಿನ ಇಕ್ಕೆಲಗಳಲ್ಲಿರುವ ಜನತೆಗೆ ಆತಂಕವಾಗಿದೆ.ಕೇವಲ ವಿದ್ಯುತ್ ಉತ್ಪಾದನೆಯ ಹೆಸರಲ್ಲಿ ಕಾನೂನು , ನಿಯಮಗಳನ್ನು ಗಾಳಿಗೆ ತೂರಿ ಜನಸಾಮಾನ್ಯರ ನೆಮ್ಮದಿಗೆ ಭಂಗ ತರುವ ಕೆಲಸ ತರವಲ್ಲ. ಅಲ್ವೇ?

ಕಾಮೆಂಟ್‌ಗಳಿಲ್ಲ: