21 ಅಕ್ಟೋಬರ್ 2008

ಸಮಸ್ಯೆಯಿಂದ ಹೊರಬಂದು..



ಮತ್ತೆ ಆರಂಭವಾಗಿದೆ ಕೃಷಿಯ ಸಮಸ್ಯೆ.....

ಅದು ಯಾರಿಗೆ?. ಎನ್ನುವುದೇ ಮೊದಲ ಪ್ರಶ್ನೆ. ಕೃಷಿಯ ನಿಜವಾದ ಸಮಸ್ಯೆಯ ಬಗ್ಗೆ ದನಿ ಎತ್ತಿದರೆ ಪರವಾಗಿಲ್ಲ.ಇದೆ ಸಮಸ್ಯೆಯಿದೆ ಎಂದು ದೂರ ಎಲ್ಲೋ ಮಾಯಾನಗರಿಯಲ್ಲಿರುವ ಒಬ್ಬ ವ್ಯಕ್ತಿ ಹೇಗೆ ಹೇಳುತ್ತಾನೆ?ಆತನಿಗೆ ಹಳ್ಳಿಯೊಳಗಿನ ಸಮಸ್ಯೆ ಅರಿವಾಗಲು ಹೇಗೆ ಸಾಧ್ಯ.? ಆತ ಅಲ್ಲಿಂದಲೇ ಹೋ... ಎಷ್ಟು ಚೆನ್ನಾಗಿದೆ ಹಳ್ಳಿ... ಅಂತ ಹೇಳಬಹುದು. ಅಥವಾ ಯಾರೋ ಹೇಳಿದ್ದನ್ನು ಕೇಳಿ ಕಂಠಪಾಠ ಮಾಡಿ ಮತ್ತೆ ಮತ್ತೆ ಅದೇ ರಾಗವನ್ನು ಹಾಡಿಕೊಂಡು "ಹೆಸರನ್ನು" ಗಿಟ್ಟಿಸಿಕೊಳ್ಳಬಹುದು. ಬಿಟ್ಟರೆ ಬೇರೇನೂ ಸಾದ್ಯವಿಲ್ಲ. ನನಗೆ ಇಷ್ಟುಕ್ಕೂ ಏಕೆ ಮೈ ಉರಿಯಿತೆಂದರೆ ಮೊನ್ನೆ ಒಂದು ಪತ್ರಿಕೆಯಲ್ಲಿ "ಒಬ್ಬರು", ರೈತರ ಸಮಸ್ಯೆ ... ಅಲ್ಲಿ ಹಾಗಿದೆ.. ಹೀಗಿದೆ... ಕೂಲಿಕಾರರ ಸಮಸ್ಯೆ... ಹೀಗೆ ಸಮಸ್ಯೆಗಳ ಸುರಿಮಳೆಯನ್ನೇ ಹೇಳುತ್ತಾ.. ಹುಡುಗರಾರು ಅಲ್ಲಿ ನಿಲ್ಲುತ್ತಿಲ್ಲ ಎಂದು ಪರಿಸಮಾಪ್ತಿ ಮಾಡುತ್ತಾರೆ. ಇದು ಹೆಸರನ್ನು ಗಳಿಸಿಕೊಳ್ಳುವ ರೈತ ಪರ ಎನ್ನಿಸಿಕೊಳ್ಳುವ ವ್ಯವಸ್ಥೆ ಅಂತ ಆಗಲೇ ಭಾವಿಸಿದೆ. ಏಕೆ ಗೊತ್ತಾ ?.ಅಲ್ಲೆ ಅವರು ಸಮಸ್ಯೆಗಳನ್ನು ಹೇಳುತ್ತಾ ಯುವಕರಾರು ಹಳ್ಳಿಯಲ್ಲಿ ನಿಲ್ಲುತ್ತಿಲ್ಲ ಎಂದು ಹೇಳುತ್ತಾರೆ. ಅಲ್ಲಾ ಸ್ವಾಮಿ .. ನೀವು ಹೀಗೆ ಸಮಸ್ಯೆಗಳನ್ನೇ ಹೇಳಿದರೆ ಯಾರು ತಾನೆ ಇಲ್ಲಿ ನಿಂತಾರು ಹೇಳಿ?. ಅಲ್ಲಿರುವ ಸಾಧನೆಗಳ ಬಗ್ಗೆ ಹೇಳಿ... ಕೂಲಿಕಾರರರು ಕಷ್ಟದಿಂದಲಾದರೂ ಸಿಗುತ್ತಾರಲ್ಲಾ ಅದನ್ನು ಹೇಳಿ... ಎಲ್ಲೋ ಕೆಲವು ಇಲಾಖೆಗಳು ಕೃಷಿಕರಿಗೆ ಸಮಸ್ಯೆ ಕೊಡುತ್ತಾರಲ್ಲಾ ಆಗ ಅವರ ಪರ ನಿಲ್ಲಿ. ಅದು ಬಿಟ್ಟು ಸಮಸ್ಯೆ ಇದೆ ಎಂದು ಹೇಳಿದರೆ ಏನು ಪ್ರಯೋಜನ. ಏನಾದರೂ ಇದೆಯಾ?. ಹಳ್ಳಿಯನ್ನು ಇನ್ನಷ್ಟು ದೂರವಾಗಿಸುವ ಪ್ರಯತ್ನ ಇದಲ್ಲದೆ ಮತ್ತಿನ್ನೇನು?.

ನಿಜಕ್ಕೂ ಹಳ್ಳಿಯ ಸೊಬಗು ಚೆನ್ನಾಗಿದೆ... ಇಲ್ಲಿ ಸಮಸ್ಯೆ ಇದೆ. ಇಲ್ಲವೇ ಇಲ್ಲ ಅಂತಲ್ಲ. ಈಗ ಅದೆನ್ನೆಲಾ ಎದುರಿಸಲು ಪ್ರಯತ್ನಗಳು ನಡೆಯುತ್ತಿದೆ. ಸಮಸ್ಯೆ ಇದೆ ಎಂದು ಪಲಾಯನ ಮಾಡುವುದು ಸರಿನಾ ಅಂತ ರೈತರಿಗೆ ಧೈರ್ಯ ಹೇಳುವುದು ಬಿಟ್ಟೂ ಅಯ್ಯೋ ಅಲ್ಲಿ ಸಮಸ್ಯೆ ಇದೆ... ಇದೆ ಅಂತ ಹೆದರಿಸಿ ಮತ್ತೆ ಅವರ ಮಾನಸಿಕ ಧೈರ್ಯವನ್ನು ಕುಸಿತಮಾಡುವುದಾ?. ಸಮಸ್ಯೆಯ ಹಿಂದೆ ನಿಂತಾಗ ಸಹಜವಾಗಿಯೇ ರೈತರಿಗೆ ಧೈರ್ಯ ಬರುತ್ತೆ. ಒಂದಷ್ಟು ಜನ ಹಳ್ಳಿಯಲ್ಲೆ ಉಳಿಯುತ್ತಾರೆ. ಇಲ್ಲಾಂದ್ರೆ ಜನ ಮಾಯಾನಗರಿಯನ್ನೆ ಅರಸುತ್ತಾರೆ.

ಈಗ ಇನ್ನೊಂದು ಬೆಳವಣಿಗೆ ಆರಂಬವಾಗುತ್ತಿದೆ. ಇಂದಿನ ಆರ್ಥಿಕ ಅಸ್ಥಿರತೆಯ ,ಆರ್ಥಿಕ ಅಲ್ಲೋಲ ಕಲ್ಲೋಲದಿಂದಾಗಿ ಮಾಯಾನಗರಿಯಲ್ಲಿ ಜೀವನ ಮಟ್ಟವನ್ನು ಸುಧಾರಿಸುವುದು ಕಷ್ಟ ಹಾಗಾಗಿ ಹಳ್ಳಿಯೇ ವಾಸಿ ಎನ್ನುವ ಚರ್ಚೆಗಳು ಹಳ್ಳಿಯಲ್ಲಿ ಆರಂಭವಾಗುತಿದೆ.ಬಹುತೇಕ ಯಾಂತ್ರಿಕ ಕೃಷಿಯಲ್ಲಿ ತೊಡಗಿಕೊಂಡು ನೆಮ್ಮದಿಯ ಬದುಕನ್ನು ಅರಸುವಂತಾಗಿದೆ. ಚಿಕ್ಕದೊಂದು ಉದ್ಯೋಗ ಹಳ್ಳಿಯಲ್ಲೇ ಕೃಷಿಯೊಂದಿಗೆ ಇದ್ದರೆ ಚೆನ್ನ ಎಂಬಂತಾಗಿದೆ. ಹಾಗಾಗಿ ಇದುವರೆಗೆ ಶಾಲಾ ಮೇಷ್ಟುಗಳಾಗಲು ಹಿಂಜರಿಯುತ್ತಿದ್ದವರು ಈಗ ಅದರತ್ತಲೂ ಕಣ್ಣು ಹಾಯಿಸಿದ್ದಾರೆ.

ಹೊಸ ಬದಲಾವಣೆ ಆರಂಭವಾಗಲಿ. ಇದು ಹೆಚ್ಚು ಪ್ರಚಾರವಾಗಲಿ. ಸಮಸ್ಯೆ ಜೊತೆ ಸಾಗಿ ಪರಿಹಾರ ಕಾಣಲಿ. ಪರಿಹಾರ ಕಾಣದ ಸಮಸ್ಯೆಗಳನ್ನೇ ಮತ್ತೆ ಮತ್ತೆ ಕೆದಕುವುದು, ಸಮಸ್ಯೇ .. ಇದು ಸಮಸ್ಯೆ... ಅಂತ ರೈತರಿಗೆ ಹೇರುವುದು ಬೇಡ.

2 ಕಾಮೆಂಟ್‌ಗಳು:

ಹರೀಶ ಮಾಂಬಾಡಿ ಹೇಳಿದರು...

ಬ್ಲಾಗ್ ನಲ್ಲೂ ಅಷ್ಟೆ.ಮೊನ್ನೆ ಯಾರೋ ಒಬ್ಬರು ಮಾಯಾನಗರಿಯಲ್ಲಿದ್ದವರು ಹಳ್ಳಿಯೇ ಹೋಗುತ್ತದೆ. ಎಲ್ಲವೂ ಯಾಂತ್ರಿಕ.. ಹಳ್ಳಿ ಜೀವನವೇ ನಾಶವಾಗುತ್ತಿದೆ ಅಂದೆಲ್ಲಾ ಪರಿತಪಿಸಿದ್ದರು.ಆದರೆ ಅವರು ಬೆಂಗಳೂರು ಬಿಟ್ಟು ಊರಿಗೆ ಬರುತ್ತಾರ? ಸಮಾಧಾನಕರ ಜೀವನ, ಇದ್ದುದರಲ್ಲಿ ತೃಪ್ತಿ ಇದ್ದರೆ ಬೆಂಗಳೂರೂ ಒಂದೇ, ಮಂಗಳೂರು ಒಂದೆ, ಹಳ್ಳಿಯೂ ಒಂದೇ, ಡಿಲ್ಲಿಯೂ ಒಂದೇ. ನನ್ನ ಪ್ರಕಾರ ಹಳ್ಳಿಯಲ್ಲಿ ಅನುಕೂಲವಿದ್ದವರು ಬೆಂಗಳೂರಿಗೆ ಬಂದು ಒದ್ದಾಡುವುದೇ ವೇಸ್ಟು...
ಹಳ್ಳಿಯಾದರೇನು ಶಿವ?
ಸಮಸ್ಯೆ ಎಲ್ಲ ಕಡೆ ಇದೆ.ಅದಕ್ಕೆ ನಗರ, ಹಳ್ಳಿ ಎಂಬ ತಾರತಮ್ಯ ಇಲ್ಲವಲ್ಲ.

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಹೌದು ಮಾಂಬಾಡಿಯವರೇ. ಇಂದು ಹಳ್ಳಿಯಲ್ಲಿ ಅನುಕೂಲವಿದ್ದವರೇ ಹೆಚ್ಚಾಗಿ "ಮಾಯಾನಗರಿ"ಯನ್ನು ಅರಸುತ್ತಿದ್ದಾರೆ.ಏಕೆ ಗೊತ್ತಾ ಇಲ್ಲಿ ಸಮಸ್ಯೆ ಭೂತ ಅವರನ್ನು ಕಾಡುತ್ತಿದೆ.ಮಾತ್ರವಲ್ಲ ಹಳ್ಳಿಯಲ್ಲಿರುವುದೆಂದರೆ ಏನೋ ಒಂದು ಗೀಳು. ಅಲ್ಲಿರುವವರೆಲ್ಲಾ ದಡ್ದರು ಎನ್ನುವ ಮನೋಭಾವ ಬೆಳೆದಿದೆ.ಯಾರಾದರೂ ಒಬ್ಬ "ಓದಿದವ" ಅಂದರೆ ಉನ್ನತ ವ್ಯಾಸಾಂಗ ಮಾದಿದವ ಧೈರ್ಯದಿಂದ ನಾನು ಹಳ್ಳಿಯಲ್ಲಿ ದುಡಿಯುತ್ತೇನೆ ಎನ್ನುತ್ತಾನಾ?. ಇಲ್ಲ. ಆತ ಅರಸುವುದು ಸುಖದ ಸುಪ್ಪತ್ತಿಗೆ.... ನಗರದ ಬಿಗಿಯಪ್ಪುಗೆ... ಅಲ್ಲವೇ?