16 ಸೆಪ್ಟೆಂಬರ್ 2008

ಶಾಂತಿಯ ನಾಡಲ್ಲಿ..


ಇದು ನ್ಯಾಯವೇ..? ಇದೆಲ್ಲವೂ ಕ್ಯಾಮಾರದಿಂದಾದ ಅನಾಹುತಗಳು....! ಇತ್ತೀಚೆಗೆ ಯಾಕ್ರೀ ಹೀಗಾಗುತ್ತೇ?. ಜನ ಇದನ್ನು ಒಪ್ಕೊಳ್ತಾರ್ರೇನ್ರಿ..?

ಇದೇನು ಪ್ರಶ್ನೆಗಳೇ ಪ್ರಶ್ನೆಗಳು ಅಂತ ಯೋಚಿಸಬೇಡಿ. ಇಂದು ಕಲ್ಲಡ್ಕದಲ್ಲಿ ಎಸ್.ಐ.ಯೊಬ್ಬರು ಕೇಳುವ ಪ್ರಶ್ನೆ. ಕಳೆದ 2 ದಿನಗಳಿಂದ ಮಂಗಳೂರು ಜಿಲ್ಲೆ ಪ್ರಕ್ಷುಬ್ದ ವಾತಾವರಣದಿಂದ ಕೂಡಿತ್ತು. ಇದು ಒಮ್ಮೆ ತಣ್ಣಗಾದರೂ ಮತ್ತೆ ಮತ್ತೆ ಮರುಕಳಿಸಿತು. ಇದಕ್ಕೆ ಕ್ಯಾಮಾರಗಳೇ ಕಾರಣ ಎನ್ನುವುದನ್ನು ಆ ಎಸ್.ಐ ಹಾಗೆ ವಿಶ್ಲೇಷಿದರು. ಅದು ಹೌದಾ ಅಥವಾ ಬೇರೆಯೇ ಕಾರಣಾನಾ ಅಂತ ವಿಶ್ಲೇಷಿಸುವ ಅಗತ್ಯವಿಲ್ಲ. ಈಗ ಆ ಬಗ್ಗೆ ಎಲ್ಲರಿಗೂ ಅರಿವಿದೆ.

ಮೊನ್ನೆಯ ಘಟನೆಯನ್ನೇ ನೋಡಿದರೆ. ಕಾರಣ ಕ್ಷುಲ್ಲಕ ಅಂತ ಅನ್ನಿಸಿ ಬಿಡಬಹುದು. ಧರ್ಮದ ಹೆಸರಿನಲ್ಲಿ ಕಚ್ಚಾಟ ಬೇಕೇ ಬೇಡವೇ ಎನ್ನುವ ಪ್ರಶ್ನೆಗಳು, ವೈರುಧ್ಯಗಳು ಕಾನಿಸಿಕೊಳ್ಳಬಹುದು. ಯಾರೇ ಒಬ್ಬ ವ್ಯಕ್ತಿಗೆ ತನ್ನ ಧರ್ಮ , ಜಾತಿ , ಮಠ , ಮಂದಿರ ಅಥವಾ ತನ್ನ ಭಾವನಾತ್ಮಕ ವಿಚಾರಗಳಿಗೆ ಸಂಬಂಧಿಸಿದ ವಿಷಯದಲ್ಲಿ ಘಾಸಿಯಾದಾಗ ಮನಸ್ಸು ರೊಚ್ಚಿಗೇಳುವುದು ಸಹಜ. ಆ ಕ್ಷಣದಲ್ಲಾಗುವ ಅನಾಹುತಗಳು ಏನು ಬೇಕಾದರೂ ಮಾಡಿಸಬಹುದು ಅಥವಾ ನಡೆದು ಹೋಗಬಹುದು.ಇದನ್ನೇ ಒಂದು ವಿಷಯವನ್ನಾಗಿಸಿಕೊಂಡು ದಿನವಿಡೀ ಕ್ಯುದು ವಿಷವಾಗಿಸಿದರೆ ಹೇಗೆ?. ಅಲ್ಲಿ ಕಲ್ಲು .. ಇಲ್ಲಿ ಕಲ್ಲು ಇಷ್ಟೇ ಆರಂಭದ ವಿಷಯ. ಇಂತಹ ವಿಷಯಗಳು ದೂರದಲ್ಲಿರುವ ಅಂತಹುದೇ ಭಾವನಾತ್ಮಕ ತೊಳಲಾಟದ ವ್ಯಕ್ತಿ ಇಲ್ಲಿಯೂ ಕೂಡಲೇ ಏನಾದರೊಂದು ಅನಾಹುತವನ್ನು ನಡೆಸುತ್ತಾನೆ. ತನ್ನೊಂದಿಗೆ ಇತರರನ್ನೂ ಸೇರಿಸಿಕೊಳ್ಳುತ್ತಾನೆ. ಗಲಭೆ ಹಬ್ಬಿಬಿಡುತ್ತದೆ. ಇಂದು ನಾವು ಹೇಳುವುದು ಸುಲಭ.ಒಂದು ಧರ್ಮದ ಹೆಸರಿನಲ್ಲಿ ಯಾಕೆ ಕಚ್ಚಾಡಬೇಕು?. ಜಾತಿ ಮತ ಬೇದವನ್ನು ಮರೆತು ಏಕೆ ಬದುಕಬಾರದು ಅಂತೆಲ್ಲಾ ಹೇಳಬಹುದು. ಆದರೆ ಅದು ಸುಲಭದ ಮಾತಾ?. ಯಾವುದೇ ಧರ್ಮದವನಾಗಿರಲಿ ಆತನಿಗೆ ತನ್ನ ಧರ್ಮದ ಬಗ್ಗೆ ಒಂದಿಷ್ಟಾದರೂ ಮಮತೆ ಇದ್ದೇ ಇರುತ್ತದೆ. ಅದನ್ನು ನಾವು ಹೊರಪ್ರಪಂಚಕ್ಕೆ ಹಾಗೇನಿಲ್ಲಾ ಅಂತ ಅಂದರೂ ಒಳಮನಸ್ಸು ಅದನ್ನೇ ಹೇಳುತ್ತದೆ.ಹಾಗಾಗಿ ಇಂತಹ ಧರ್ಮ ಸಂಬಂಧಿ, ಭಾವನಾತ್ಮಕವಾದ ಸಂಗತಿಗಳ ಬಗ್ಗೆ ಎಚ್ಚರದಿಂದ ಇರಬೇಕಾದುದೇ ಮಾನವಧರ್ಮ ಅಂತ ನಾನು ಭಾವಿಸಿಕೊಂಡಿದ್ದೇನೆ.

ಇಂದು ನಾವು ಕೂಡಾ ಕಲ್ಲಡ್ಕದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾಹಿತಿಗಾಗಿ ತೆರಳಿದ್ದಾಗ ಇಡೀ ಪೇಟೆ ಬಿಕೋ ಎನ್ನುತ್ತಿತ್ತು. ಜನ ಬೀದಿಗೆ ಇಳಿಯುತ್ತಿರಲಿಲ್ಲ. ಸಾಲಾ ಮಕ್ಕಳು ಮನೆಗೆ ತೆರಳುತ್ತಿದ್ದರು. ಕೆಲವು ಮಂದಿ ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಮಾತನಾಡಲು ಸಿಕ್ಕ ಆ ಎಸ್.ಐ. ಮಾತಿಗೆ ಆರಂಬಿಸಿದ್ದೇ ಹಾಗೆ. ಆ ಬಳಿಕ ನಮ್ಮ ಉತ್ತರದಿಂದಾಗಿ ಎಸ್,ಐ,ಗೂ ಸಮಾಧಾನವಾದಂತೆ ಕಂಡುಬಂದಿರಲಿಲ್ಲ.

ಇನ್ನಾದರೂ ಗಲಭೆ ನಡೆಯದಿರಲಿ. ಸಹಜ ಸ್ಥಿತಿ ಏರ್ಪಡಲಿ ... ಶಾಂತ ಸ್ಥಿತಿಯಿರಲಿ ಅಂತ ಪ್ರಾರ್ಥಿಸೋಣ..

ಕಾಮೆಂಟ್‌ಗಳಿಲ್ಲ: