26 ಡಿಸೆಂಬರ್ 2010

ನಂಬಿಕೆಯ ಪಾಠ . .

ಈ ವಿಶಾಲವಾದ ಆಗಸ , ಹರಿಯುವ ನೀರು , ಜಗದ ಸತ್ಯ, ಮನುಷ್ಯನ ಆದಿ-ಅಂತ್ಯ, ಸೂರ್ಯ-ಚಂದ್ರರ ಉದಯ, . . . ಹೀಗೇ ಎಲ್ಲದಕ್ಕೂ ಕೂಡಾ ಒಂದು ನಾಶ ಅಂತ ಇದೆಯಾ?.ಅಂತ್ಯ ಅಂತ ಇದೆಯಾ?. ಇದನ್ನು ಕಂಡವರಿದ್ದಾರಾ?,ಇದಕ್ಕೆಲ್ಲಾ ಸಾವು ಅಂತ ಇದೆಯಾ?,ಇದೆಲ್ಲಾ ಹೇಗೆ ಸೃಷ್ಠಿಯಾಯಿತು ?. ಹೀಗೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟುತ್ತಾ ಸಾಗಿದಂತೆ ಉತ್ತರವಿಲ್ಲ. ಮೌನವೇ ಕೊನೆಗೆ ಉತ್ತರ. ಆ ಮೌನದ ಹಿಂದೆ ನಿಂತಿರುವುದೇ ಆ ನಂಬಿಕೆ. ನಾವು ಎಲ್ಲಾ ವಾದಗಳನ್ನು ಮಾಡುತ್ತಾ ಹೋಗುವುದರ ಹಿಂದೆ ಕೂಡಾ ಅದೇ ನಂಬಿಕೆ ಇದೆ. ನಾವು ಈಗ ಹೇಳುತ್ತಿರುವ ವೈಜ್ಞಾನಿಕ ಸತ್ಯಗಳನ್ನು ನಾವು ಕಂಡಿಲ್ಲ.ನಮ್ಮ ಹಿಂದಿನ ಅದ್ಯಾರೋ ಕಂಡುಹಿಡಿದರಂತೆ , ಅದನ್ನು ದಾಖಲಿಸಿದ್ದಾರಂತೆ ಅನ್ನುವುದು ಬಿಟ್ಟು ಬೇರೇನನ್ನು ಹೇಳುವುದಕ್ಕೆ ನಾವು ಈಗ ಅಸಮರ್ಥರು. ಯಾಕೆಂದರೆ ನಾವು ನೋಡಿಲ್ಲ , ಕಂಡಿಲ್ಲ. ಹೀಗಂತೆ ಎನ್ನವುದರ ಹಿಂದೊಂದು ನಂಬಿಕೆ ಮಾತ್ರಾ. ಹಾಗಾಗಿ ಆ ನಂಬಿಕೆ ಅನ್ನೋದೇ ಮನುಷ್ಯನನ್ನು ಇಷ್ಟು ಬೆಳೆಸಿದೆ.ಬೆಳೆಸುತ್ತಿದೆ.

ಅಂತಹ ನಂಬಿಕೆಗಳು ಇರುವವರೆಗೆ ಈ ಜಗತ್ತು ಇರುತ್ತದೆ.ಅದೇನೇ ಆಗಲಿ “ಆ ಶಕ್ತಿ” ನಮ್ಮ ಜೀವಕ್ಕೆ ಧೈರ್ಯ ತುಂಬುತ್ತದೆ.ಬದುಕಿಗೆ ಸ್ಪೂರ್ತಿ ನೀಡುತ್ತದೆ. ಒಂದು ಆಸ್ಪತ್ರೆ ಹೋಗೋವಾಗಲೂ ಅಲ್ಲಿ ನಂಬಿಕೆ ಮುಖ್ಯ. ದೇವರು ಅನ್ನೋ ಒಂದು ನಂಬಿಕೆ ಮತ್ತು ವೈದ್ಯ ಅನ್ನೋ ಮನುಷ್ಯನ ಮೇಲಿನ ನಂಬಿಕೆ. ಇದೆರಡೂ ಇಲ್ಲದೇ ಹೋದರೆ ಆ ಕಾಯಿಲೆ ವಾಸಿಯಾಗೋದೂ ಕಡಿಮೆ.

ಇಂತಹ ಸನ್ನಿವೇಶದಲ್ಲಿ ದೇವರು ಅನ್ನೋ ನಂಬಿಕೆಯ ಮೇಲೆ ಹೊಡೆತ ನೀಡೋ ಮಂದಿ ಈ ಮನುಷ್ಯ ಕುಲದ ಮೇಲೆ ಹೊಡೆತ ಕೊಡುತ್ತಿದ್ದಾರೆ ಅಂತಾನೇ ಅರ್ಥ ಅಂತ ಹಿರಿಯರೊಬ್ಬರು ಮೊನ್ನೆ ಮೊನ್ನೆ ಉಸುರುತ್ತಿದ್ದರು. ಅದು ನಿಜಾನೂ ಹೌದು.ಯಾಕಂದ್ರೆ ಇಲ್ಲಿ ನಂಬಿಕೆಯೇ ಅಡಗಿಯೋಯಿತೆಂದರೆ ಕುರುಡು ಬದುಕಾಗುತ್ತದೆ.ಅಂತಹ ಕುರುಡು ಪ್ರಪಂಚ ಏನು ಮಾಡಬಲ್ಲುದು ಮತ್ತು ಏನನ್ನು ಸಾಧಿಸಬಲ್ಲುದು?. ಹಾಗಾಗಿ ಒಂದು ನಂಬಿಕೆಯ ಮೇಲೆ ಅಟ್ಯಾಕ್ ಮಾಡೋವಾಗ ಯೋಚಿಸಬೇಕಲ್ಲಾ?. ಹಾಗಂತ ಮನುಷ್ಯನೇ ಮಾಡಿಕೊಂಡ ಕೆಲವು ಕಟ್ಟುಪಾಡುಗಳು , ಅದರ ಹಿಂದಿರುವ ದುರುದ್ದೇಶಪೂರಿತ ಯೋಜನೆಗಳು , ಹಿಡನ್‌ಅಜೆಂಡಾಗಳ ಬಗ್ಗೆ ಯಾವತ್ತೂ ಜಾಗೃತವಾಗಿರಬೇಕಾಗುತ್ತದೆ.ಆದರೆ ಇವತ್ತು ಇಂತಹವುಗಳ ಬಗ್ಗೆ ನಾವು ಮಾತಾಡೊಲ್ಲ.ನಮ್ಮದೇ ದೃಷ್ಠಿಕೋನವನ್ನು ಇನ್ನೊಬ್ಬನ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದೇವೆ.

ಹೀಗೇ ನಂಬಿಕೆಯ ಬಗ್ಗೆ ಮಾತಾಡೋವಾಗ ನನಗೆ ನನ್ನ ಆತ್ಮೀಯರೊಬ್ಬರು ನೆನಪಾಗುತ್ತಾರೆ.ಅವರು ಉದ್ಯೋಗ ಮಾಡುತ್ತಿರುವ ಕ್ಷೇತ್ರವನ್ನು ಅತ್ಯಂತ ಪ್ರೀತಿಯಿಂದ ಕಂಡವರು.ಅಲ್ಲಿ ಸೇವೆ ಮಾಡುವ ಎಲ್ಲರನ್ನೂ ಪ್ರೀತಿಯಿಂದ ಕಂಡವರು , ಎಲ್ಲರಲ್ಲೂ ನಂಬಿಕೆ ಇರಿಸಿದವರು.ಆದರೆ ಯಾಕೋ ಏನೋ ಅವರು ನಂಬಿಕೆ ಇರಿಸಿಕೊಂಡ ಮನುಷ್ಯರೇ ಅವರಿಗೇ ತಿರುಗುಬಾಣವಾದರು.ನಂಬಿದ ಮನುಷ್ಯರೇ ಒಳಗೊಳಗೇ ಕತ್ತಿ ಮಸೆದರು. ಕೊನೆಗೆ ಅವರು ಅಲ್ಲಿಂದ ಹೊರಬರಲೇಬೇಕಾಯಿತು. ಆದರೂ ತನ್ನ ಕ್ಷೇತ್ರದ ಮೇಲಿನ ನಂಬಿಕೆ ಬಿಟ್ಟಿರಲಿಲ್ಲ, ಪ್ರೀತಿ ಇತ್ತು ಆ ಕ್ಷೇತ್ರದಲ್ಲಿ. ಸತ್ಯ , ಪ್ರಾಮಾಣಿಕರಾಗಿಯೇ ಉಳಿದರು.

ಆ ನಂಬಿಕೆ ಅನ್ನೋ ಶಕ್ತಿ ಮತ್ತೆ ಕಣ್ತೆರೆಯಿತು , ಸತ್ಯಕ್ಕೆ ಗೆಲುವಾಯಿತು.ಈಗ ಮತ್ತೆ ಅವರು ಅದೇ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನನ್ನ ಪ್ರಕಾರ ಇದೂ ಕೂಡಾ ನಂಬಿಕೆಗೆ ಸಿಕ್ಕ ಜಯ. ಒಂದು ವೇಳೆ ಈ “ಮನುಷ್ಯ” ಬುದ್ದಿಯಿಂದಾಗಿ ಅವರು ಆ ಕ್ಷೇತ್ರದ ಮೇಲೆ ನಂಬಿಕೆಯೇ ಕಳಕೊಂಡಿದ್ದರೆ? , ಅವರಲ್ಲಿ ದ್ವೇಷ ಹುಟ್ಟಿಕೊಂಡಿದ್ದರೆ?. ಆದರೆ ಹಾಗಾಗಿಲ್ಲ ಪ್ರೀತಿ ಮತ್ತು ನಂಬಿಕೆ ಇವೆರಡೂ ಕೂಡಾ ಇಂದು ಅವರನ್ನು ಮತ್ತೆ ಕರೆಯಿಸಿಕೊಂಡಿದೆ. ಹೀಗಾಗಿ ನಂಬಿಕೆ ಅನ್ನೋ ಶಕ್ತಿ ನಿಜಕ್ಕೂ ಶಕ್ತಿಶಾಲಿ.

ಕಾಮೆಂಟ್‌ಗಳಿಲ್ಲ: