15 ಜನವರಿ 2008

ಸುಬ್ರಹ್ಮಣ್ಯದಲ್ಲಿ ಧರ್ಮಸಮ್ಮೇಳನ.....



ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರದಂದು ಸಂಜೆ 'ಧರ್ಮ ಸಮ್ಮೇಳನ ' ಕಾರ್ಯಕ್ರಮ ನಡೆಯಿತು.ಕಿರುಷಷ್ಟಿ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಜಾತ್ರೆ,ದೇವರ ಉತ್ಸವಗಳನ್ನು ಭಕ್ತರು ವೀಕ್ಷಿಸುತ್ತಿರುವಂತೆಯೇ ಧರ್ಮದ ಮರ್ಮವನ್ನು ಅರಿಯುವುದು,ಸಾಧು ಸಂತರ ಹಿತನುಡಿಗಳನ್ನು ಆಲಿಸುವುದು ಈ ಸಮ್ಮೇಳನದ ಉದ್ದೇಶ.

ಸೋಮವಾರದಂದು ನಡೆದ ಧರ್ಮಸಮ್ಮೇಳನದಲ್ಲಿ ಸಂಸ್ಕಾರ ಭಾರತಿಯ ಅಧ್ಯಕ್ಷ ಕುಂಬಳೆ ಸುಂದರ್ ರಾವ್ ಉಪನ್ಯಾಸ ನೀಡುತ್ತಾ ಎಲ್ಲವನ್ನೂ ಹಣದಿಂದಲೇ ಅಳೆಯುವ ಇಂದಿನ ಸಮಾಜದಲ್ಲಿ ಮನುಷ್ಯನ ಧಾರ್ಮಿಕ ಚಿಂತನೆ ಬೆಳೆಸಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮಟ- ಮಂದಿರಗಳು ನಮಗೆ ನ್ಯಾಯ,ಶಾಂತಿ ಒದಗಿಸುವ ಕೇಂದ್ರಗಳಾಗಿದ್ದವು ಇಂದು ಅದೇ ಮಟ-ಮಂದಿರಗಳೊಳಗೆ ಕಚ್ಚಾಟ ,ಅಧಿಕಾರಕ್ಕಾಗಿ ನ್ಯಾಯಾಲದ ಮೆಟ್ಟಿಲೇರುತ್ತಿರುವುದು ನಮ್ಮ ವಿಪರ್ಯಾಸ ಎಂದು ಹೇಳಿದ್ದು ಅತ್ಯಂತ ಸಕಾಲಿಕವಾಗಿತ್ತು.

ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಟದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಭಾರತ ಕರ್ಮ ಭೂಮಿ ಏಕೆಂದರೆ ಇಲ್ಲಿ ಏಕೆಂದರೆ ಇಲ್ಲಿ ದೇಹ ನಿಷ್ಟ ಹಾಗೂ ಆತ್ಮ ನಿಷ್ಟ ಸಂಸ್ಕೃತಿಯಿಂದ ಜನಜೀವನ ಬೆಳೆದಿದೆ ಹಾಗಾಗಿಯೇ ಈ ದೇಶವು ಶಾಂತಿಯ ನೆಲ ಮಾತ್ರವಲ್ಲ ಇಡೀ ಪ್ರಪಂಚವು ಮನೆಯಾದರೆ ಭಾರತವು ದೇವರ ಮನೆ ಎಂದು ಹೇಳಿದ್ದು ಭಾರತದ ವೈಭವವನ್ನು ಮತ್ತೆ ನೆನಪಿಸಿತು.

ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಭಟ್ ವಹಿಸಿದ್ದರು. ಯಥಾಪ್ರಕಾರ ನಾವು ...ನಮ್ಮದು...ಧರ್ಮ ...ಹಿಂದು ಎಂದು ವಿವರಿಸಿದರು.ವೇದಿಕೆಯಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಿದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಪರಮೇಶ್ವರಿ ಅಮ್ಮ,ದಾಸಪ್ಪ ಗೌಡ,ಸುಬ್ರಾಯ ಭಟ್, ಅಂಗಾರೆ, ಹಾಗು ಕೃಷ್ಣೇ ಗೌಡರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.

ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನ.ಸೀತಾರಾಮ ಸ್ವಾಗತಿಸಿದರು.ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ವರದಿ ವಾಚಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲ ದಿನೇಶ್ ಕಾಮತ್ ವಂದಿಸಿದರು.ಉಪನ್ಯಾಸಕ ಎನ್.ಎಸ್.ಗೋವಿಂದ ಕಾರ್ಯಕ್ರಮ ನಿರ್ವಹಿಸಿದರು.

ಕಾಮೆಂಟ್‌ಗಳಿಲ್ಲ: