30 ಜನವರಿ 2008

ದಾರಿ.... ಇದು ದಾರಿ.....



ದಾರಿ.........!!?

"ದಾರಿ"ಗಾಗಿ ಧ್ವನಿಮಾಡಿ.....!

"ನಿಮ್ಮ ಬದುಕಿನ ದಾರಿಯು ಹುಲ್ಲು ಹಾಸಿನಂತಿರಲಿ,ಅಷ್ಟೂ ಮೃದುವಾಗಿರಲಿ,ನಯವಾಗಿರಲಿ,ಕಲ್ಲು-ಮುಳ್ಳು ಇಲ್ಲದಿರಲಿ........ ಪ್ರತಿದಿನವೂ ಪ್ರೀತಿ ಎಂಬ ನೀರಿನ ಸಿಂಚನ ಅಲ್ಲಿರಲಿ......"

ಇದು ನಿಮ್ಮ ಬದುಕಿನ "ದಾರಿ"ಗೆ ನನ್ನ ಹಾರೈಕೆ.

ಆ "ದಾರಿ" ವಿಸ್ತಾರವಾದದ್ದು.ಅದನ್ನು ಒಂದೇ ದಾರಿಯಲ್ಲಿ ವಿವರಿಸುವುದಾದರೂ ಹೇಗೆ?.ಹಾಗಿದ್ದರೂ ಒಂದು ಪ್ರಯತ್ನ.

ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ...! ಆದರೂ ಸದ್ಯ ಈ ದಾರಿ "ಒಂದು ದಾರಿ"ಯ ಕಡೆಗೆ ಸಾಗಿ ಕವಲು ದಾರಿಯಲ್ಲಿ ಹೋಗಿ ಅಂತ್ಯ ಕಾಣಲೂಬಹುದು.ಅಥವಾ ಹೊಸತೊಂದು ದಾರಿಗೆ ಕಾರಣವಾಗಲೂಬಹುದು..!?

ಹಾ... ನಾನು ಹೇಳಲು ಹೊರಟಿರುವುದು,ನಿಮ್ಮೊಂದಿಗೆ ಮಾತನಾಡಲು ಹೊರಟಿದ್ದು, ಏಕಾಂತದ ಆಲೋಚನೆಗೆ ಅಕ್ಷರ ರೂಪ ನೀಡಲು ಹೊರಟಿರುವುದು ಅದೇ.... "ದಾರಿ"ಯ ಬಗ್ಗೆ ..... ಕವಲು ದಾರಿಗಳ ಬಗ್ಗೆ...

ದಾರಿ...

ದಾರಿಯ ಹಲವು ರೂಪಗಳು ನೆನಪಿಗೆ ಬರುತ್ತದೆ.ಮಾತು ಮಾತಿಗೂ ದಾರಿ ಬಂದೇ ಬರುತ್ತದೆ.ದಿನಕ್ಕೆ ಒಮ್ಮೆಯಾದರೂ ದಾರಿಯ ಬಗ್ಗೆ ಮಾತನಾಡದವರು ಇರಲಾರರು.ರಸ್ತೆಯಲ್ಲಿ ಹೋಗುತ್ತಿದ್ದರಂತೂ ಹಾದಿಯುದ್ದಕ್ಕೂ "ದಾರಿ"ಯ ನೆನಪಾಗುತ್ತದೆ.ಏಕೆಂದ್ರೆ ರಸ್ತೆ ಅಷ್ಟೂ ಕೆಟ್ಟಿದೆ.ನಗರದಲ್ಲಾದ್ರೆ "ಎಂಥಾ ಟ್ರಾಫಿಕ್" ಮಾರಾಯ.ಹಳ್ಳಿಯಲ್ಲಾದ್ರೆ : ಎಂಥಾ ರಸ್ತೆ ಮಾರಾಯ"....!. ಇಲ್ಲಿ ಸರಕಾರ ಇದೆಯಾ ಎನಿಸುವಷ್ಟು ದಾರಿ ನೆನಪಾಗಿ ಬಿಡುತ್ತದೆ.ಇದು ನಮ್ಮ ಪ್ರಯಾಣದ ದಾರಿಯಾದ್ರೆ ಅಲ್ಲೂ ಹಲವು ಕವಲುಗಳಿರುತ್ತಲ್ವಾ.. ಆಗ ನಾವು ನಡುದಾರಿಯಲ್ಲಿ ನಿಲ್ಲಿಸಿ "ಸರ್ ಈ ದಾರಿ ಎಲ್ಲೋಗುತ್ತೆ" ಅಂತ ದಾರಿಯಲ್ಲಿ ಸಿಕ್ಕವರನ್ನು ಕೇಳುತ್ತೇವಲ್ಲಾ ಆಗ ಕೆಲವರು "ನಿಮ್ಗೆ ಎಲ್ಲಿಗೆ ಹೋಗ್ಬೇಕು" ಅಂತ ಪ್ರಶ್ನಿಸುತ್ತಾರೆ. ಹಾ.... ಆಗ ನಮಗೆ ನೆನಪಿಗೆ ಬರೋದು ...ನಾವು ಕೇಳಿದ್ದು ಎಡವತ್ತಾಯಿತೆಂದು.ಕವಲು ದಾರಿಯನ್ನು ಬಿಟ್ಟು ಮುಂದೆ ಹೋದರೆ ಮುಖ್ಯ ದಾರಿಗೆ ಎಲ್ಲಾದರೂ ಕೊನೆ ಇದೆಯಾ..!.ಇದು "ಕೊನೆ ಇಲ್ಲದ ದಾರಿ....."

ಇನ್ನು ಒಂದಿದೆ ಯಾರಾದ್ರೂ ದಾರಿ ಕೇಳಿದ್ರೆ ಸುಮ್ಮನೆ ಗೊತ್ತಿದ್ದರೂ "ಈ ದಾರಿ" ಅಲ್ಲಿಗೇ ಹೋಗುತ್ತೆ ಅಂತ ದಾರಿ ಕೇಳಿದ ಆಗಂತುಕನಿಗೆ ಊರಿನ ಹೆಸರು ಹೇಳಿ ಇಲ್ಲೇ ಹೋಗಿ ಅಂತ "ದಾರಿಯಲ್ಲಿ ಸಿಕ್ಕವರು" ದಾರಿ ತಪ್ಪಿಸಿ ಬಿಡುವುದೂ ಇದೆ.ಹಾಗೆ ಹೋದಾಗ ಅದು ತಪ್ಪು ದಾರಿಯಾದಾಗ ಶಫಿಸುವುದು ನಾವೇ ಅಲ್ವಾ...ಇದೆಲ್ಲಾ ದಾರಿಯ ಕತೆಗಳು..

ಇನ್ನು ಮುಖ್ಯ ದಾರಿಯಿಂದ ಕವಲೊಡೆದು ಮನೆಮನೆಗೆ,ಹಳ್ಳಿಗಳಿಗೆ ಸಾಗುವ ದಾರಿಯನ್ನು "ಕವಲು ದಾರಿ"ಎನ್ನಬಹುದೇ? ಈ ಕವಲು ದಾರಿಗಳ ಬಗ್ಗೆ ಹೇಳುವುದೇ ಒಂದು ಮರುಕ.ಅಲ್ಲಲ್ಲಿ ಹೊಂಡ,ಸರಿಯಾದ ಮಾರ್ಗವಿಲ್ಲ ನಗರಗಳ ಕವಲು ದಾರಿಗಳ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ.ಅಲ್ಲಾ ಈ ದಾರಿಗಾಗಿ ಏನೆಲ್ಲಾ ನಡೆಯುತ್ತೆ.ಅಣ್ಣ-ತಮ್ಮಂದಿರೊಳಗೆ ಜಗಳ, ನ್ಯಾಯಾಲಯದ ಮೆಟ್ಟಿಲೇರಿದ ಘಟನೆಗಳು,ಕತ್ತಿಯೇಟು,ಪೊಲೀಸ್ ಠಾಣೆ ಮೆಟ್ಟಿಲೇರಿದ್ದೂ ಇದೇ ರಸ್ತೆಗಾಗಿ ಆಲ್ವಾ...ಇದೆಲ್ಲಾ ನಡೆದದ್ದು ಕವಲು ದಾರಿಯಲ್ಲಿ ಅಲ್ವಾ?

ದಾರಿಗೆ ಎಂತಹ ಮಹತ್ವ ......!

ಇದು ಬದುಕಿನ ದಾರಿ...

ನಮ್ಮ ಬದುಕಲ್ಲೂ ಅಂತಹ ದಾರಿಯೊಂದಿದೆ ಅಲ್ವಾ? ಜೀವನದ ಪಥದಲ್ಲೂ ಈ ದಾರಿ ಮುಖ್ಯ ಎನಿಸಿದೆ.ಪುಟ್ಟ ಮಗುವಿನ ಶೈಕ್ಷಣಿಕ ದಾರಿಯಿಂದ ಆರಂಭಿಸಿ ಇತರೆಲ್ಲಾ ವಿಚಾರಗಳು ಉತ್ತಮವಾಗಿದ್ದರೆ ಆತನ ಮುಂದಿನ "ಹಾದಿ"ಯೂ ಉತ್ತಮವಾಗಿರುತ್ತದೆ.ಅಂದರೆ ಮುಖ್ಯ ದಾರಿ ಉತ್ತಮವಾಗಿದ್ದರೆ (ಹೊಂಡ-ಗುಂಡಿಗಳಿಲ್ಲದಿದ್ದರೆ) ಆತನ ಕವಲು ದಾರಿಗಳೂ (ಉದ್ಯೋಗ ,ಕೃಷಿ,ಇತ್ಯಾದಿ) ಉತ್ತಮವಾಗಿರುತ್ತದಲ್ವಾ..?.ಇಲ್ಲೋಂದು ಖುಷಿ ಇದೆ ನಿಧಾನವಾಗಿ ಯೋಚಿಸಿದಾಗ ತಿಳಿಯುತ್ತೆ...!. ಇಲ್ಲಿ ಹೇಳಿದ ಎಲ್ಲಾ ದಾರಿಗೂ ಒಂದು ಅಂತ್ಯ ಇದ್ದೇ ಇದೆ.ಬದುಕಿನ ದಾರಿಯೂ ಅದರಲ್ಲಿ ಸೇರಿ ಹೋಗಿದೆ. ಆದರೆ ವಿದ್ಯೆಯ ದಾರಿಗೆ.....!? ನಿಜಕ್ಕೂ ಇದು ಮುಖ್ಯ.

ಹಾಗಾಗಿ ನಾವು ಬದುಕಿನ ದಾರಿಯಲ್ಲಿ ಸಾಗುತ್ತಿರುವಂತೆಯೇ ಅದು ಕೊನೆಗೊಂದು ದಿನ ಮಂಜಾಗಿ ದಾರಿ ಮಸುಕಾಗುವ ವೇಳೆ ನಾವು ಆವರೆಗೆ ನಡೆದುಕೊಂಡ ದಾರಿ ಮುಖ್ಯವಾಗಿಬಿಡುತ್ತದೆ.ನಮ್ಮ ದಾರಿ ಉತ್ತಮವಾಗಿದ್ದರೆ ನಮ್ಮದೇ ಹಾದಿಯಲ್ಲಿ ಇನ್ನೂ ಹತ್ತಾರು ಮಂದಿ ಬರುತ್ತಾರೆ.ಇಲ್ಲವಾದರೆ ಒಂಟಿ ದಾರಿ...! ಕಾಡಿನ ಮಧ್ಯೆ ಇರುವ ಹಾದಿಯಂತೆ...! ಹೀಗಾದರೆ ಒಂದೆರಡು ವರ್ಷದ ನಂತರ ಆ ದಾರಿಯ ನೆನಪೂ ಇರೋದಿಲ್ಲ...! ಎಂತಹ ಅಚ್ಚರಿ ಅಲ್ವಾ..!?

ಹಳ್ಳಿಯೊಳಗೆ ಒಂದು ಮನೆ.ಅಲ್ಲಿ ಇನ್ನೊಂದು ಮನೆಗೆ ಹೋಗಲು ಕಾಲು ದಾರಿ.. ನಗರದಲ್ಲಿ ರಸ್ತೆಯ ಪಕ್ಕದಲ್ಲಿ ಹೋಗಲು ಫುಟ್ ಪಾತ್ ಇರುತ್ತಲ್ವಾ ಇದು ನನಗೆ ಇಷ್ಟವಾಗುತ್ತೆ.ಏಕೆ ಗೊತ್ತಾ ಎಲ್ಲರಿಗೂ ಒಂದೇ ದಾರಿ... ಬಡವ... ಶ್ರೀಮಂತ ... ಎಂಬುದು ಅಲ್ಲಿಲ್ಲ.ದಾರಿ ಎಲ್ಲರಿಗೂ ಒಂದೇ..ಬೀದಿಯ ಪಕ್ಕದಲ್ಲಿ ಅಂಗಡಿಗಳಿವೆ. ಆದ್ರೆ ನೋಡಿ ಮುಖ್ಯ ರಸ್ತೆಯಲ್ಲಿ ಬಡವನಿಗೆ ಜಾಗವೇ ಇಲ್ಲ.!.ಸಾರ್ವಜನಿಕ ಬಸ್ಸೇ ಆತನ "ದಾರಿ"ಯಲ್ಲಿ ಮುಖ್ಯವಾದರೆ ಶ್ರೀಮಂತನಿಗೆ ಲಕ್ಷ ಲಕ್ಷ ಬೆಲೆ ಬಾಳುವ ಕಾರು "ದಾರಿ"ಯ ಮಾರ್ಗದರ್ಶಕವಾಗಿರುತ್ತೆ ಅಲ್ವಾ.?

ಮತ್ತೆ ಮತ್ತೆ ನನಗನ್ನಿಸುವುದು ನಮ್ಮ ಬದುಕಿನ ದಾರಿ ಫುಟ್ "ಪಾತ್"ನಂತಹ ಓಣಿ ಆಗಿದ್ರೆ, ಅಲ್ಲಿ ಎಲ್ಲರೂ ಸಿಕ್ತಾರೆ...ಅಕ್ಕಪಕ್ಕದಲ್ಲಿ ನೆಂಟ್ರು.. ಫ್ರೆಂಡ್ಸ್... ಉದ್ಯೋಗ.. ಸಿಹಿ... ಕಹಿ... ಕಷ್ಟ.... ಸುಖ... ಮಾತನಾಡಲು ಜನ.... ಚರ್ಚಿಸಲು ಒಂದಿಷ್ಟು ಮಂದಿ.... ಹೀಗೆ ಎಲ್ಲವೂ ಸಿಕ್ರೆ, ಮುಖ್ಯ ದಾರಿಯಲ್ಲಿ ಸಾಗಿದ್ರೆ ಇವರಾರೂ ಸಿಗಲ್ಲ. ಒಂದೇ ದಾರಿ. ಅದೇ ಮುಖ. ಅದು ಬಿಟ್ರೆ ಬೇರೆ ಮಾತೇ ಇಲ್ಲ...! ಅಂತೂ ಇದ್ರೆ ಒಂದೆರಡು ಮಂದಿ ಮಾತ್ರಾ... ನಮ್ಮ ಬದುಕಿನ ದಾರಿಯ ಮಧ್ಯೆ ನಾವೆಲ್ಲಾದ್ರು ನಿಂತ್ರೆ ಅವರಾರೂ ನಮ್ಮೊಂದಿಗೆ ನಿಂತು ಮಾತೂ ಆಡಲ್ಲ.. ನಮ್ಮನ್ನು ನೋಡೋದೂ ಇಲ್ಲ, ಮುಂದೆ ಹೋಗಿಯೇ ಬಿಡುತ್ತಾರೆ ಏಕೆ ಗೊತ್ತಾ ಇಂದು ಸ್ಪರ್ಧೆ ಇದೆ...!

ಬದುಕಿನ ದಾರಿಯಲ್ಲಿ ಎಲ್ರೂ ಬೇಕಲ್ವಾ.... ನಮ್ಮ ಪ್ರಯಾಣದ ದಾರಿ ಹಾಗಲ್ಲ ಬೇಗ ಬೇಗನೆ ತಲಪಿಬಿಡಬೇಕು.ಹಾಗಾಗಿ ಈ ಎರಡೂ ದಾರಿಗಳೂ ನಮಗೆ ಮುಖ್ಯ ದಾರಿಗಾಳಾಗಿ ಬಿಟ್ಟಿವೆ ಉಳಿದವೆಲ್ಲಾ ಇವೆಯಲ್ಲಾ ಅದೆಲ್ಲಾ ಕವಲುದಾರಿಗಳು ಅದಕ್ಕೆಲ್ಲಾ ಒಂದು ಕೊನೆ ಇದೆ... .! ಹಾಗೇ ಪ್ರಯಾಣದ "ದಾರಿ" ಹಾಗಲ್ಲ ಉತ್ತಮವಾದ ದಾರಿಯಲ್ಲಿ ಸಾವಿರಾರು ಮಂದಿ ಪ್ರತಿದಿನ ಪ್ರಯಾಣಿಸುತ್ತಾರೆ. ನಿತ್ಯವೂ ಆ ದಾರಿ ನೆನಪಾಗುತ್ತದೆ.ನಮ್ಮ ಬದುಕಿನ ದಾರಿಯೂ ಉತ್ತಮವಾಗಬೇಕು ಎನ್ನುವ ಪ್ರಯತ್ನ ನಮ್ಮದಾಗಿರಬೇಕಲ್ವಾ..? ಆಗ ನಾವು ಬದುಕಿದ ದಾರಿ ,ನಮ್ಮ ನಡತೆಯ ದಾರಿಯಲ್ಲಿ ಹತ್ತಾರು ಮಂದಿ ಸಾಗುತ್ತಾರೆ..... ಆದರ್ಶವಾಗಿ ಬಿಡುತ್ತದೆ.. ಹೇಗೆ ಇಂದು ಅಬ್ದುಲ್ ಕಲಾಂ , ವಾಜಪೇಯಿ, ಸಚಿನ್ ತೆಂಡೂಲ್ಕರ್, ರತನ್ ಟಾಟಾ, ಅಂಬಾನಿ....... ಇವರೆಲ್ಲರ ದಾರಿ ಮಾದರಿಯಾಗಿ ಬಿಡುತ್ತೋ ಹಾಗೆ.....

ಏನ0ತೀರಿ...? ಇದೇ ಅಲ್ವಾ ನಮ್ಮ ವಿವಿಧ ದಾರಿಗಳ .... ಕವಲು ದಾರಿಗಳ ಒಳನೋಟಗಳು....

ಕಾಮೆಂಟ್‌ಗಳಿಲ್ಲ: