24 ಜನವರಿ 2008

ನನ್ನಜ್ಜಿಯೂ.... ಸ್ವಾಭಿಮಾನವೂ...



ನನ್ನ ಅಜ್ಜಿ ಚಿಕ್ಕಪ್ಪನಲ್ಲಿರುವುದು.

ಮೊನ್ನೆ ಸುಮ್ಮನೆ ಅಜ್ಜಿಯೊಂದಿಗೆ ಹರಟಲು ಹೋಗಿದ್ದೆ.ಈಗ ಅವರಿಗೆ ೮೩ ವರ್ಷ.ಸಂಸಾರದಲ್ಲಿ ೬೩ ಜನರಿದ್ದಾರೆ.ಹೇಗೆ ಗೊತ್ತಾ? ೫ ಜನ ಗಂಡು ೫ ಜನ ಸೊಸೆಯಂದಿರು ,೩ ಜನ ಮಗಳು ೩ ಜನ ಅಳಿಯಂದಿರು ಅವರಲ್ಲಿ ಒಬ್ಬರು ಈಗಿಲ್ಲ.೨೬ ಜನ ಮೊಮ್ಮಕ್ಕಳು ೨೨ ಜನ ಮರುಮಕ್ಕಳು(ಪುಳ್ಳಿಯ ಮಕ್ಕಳು).ಹೀಗೆ ೬೩ ಜನರ ಭವ ಬಂಧನ.

ನನಗೀಗಲೂ ಅಜ್ಜಿ ಏಕೆ ಅನುಕರಣೀಯರು ಎಂದರೆ ಸ್ವಾಭಿಮಾನಕ್ಕಾಗಿ.ಅವರ ಸ್ವಾಭಿಮಾನದ ಬದುಕಿಗಾಗಿ.ಯಾವತ್ತೂ ಕೂಡಾ ಇನ್ನೊಬ್ಬರಿಗೆ ತೊಂದರೆ ನೀಡಿದವರಲ್ಲ.ಇಷ್ಟು ಬೃಹತ್ ಸಂಸಾರದ ಕೊಂಡಿಗಳಿರುವಾಗಲೂ ಯಾರೊಬ್ಬರಿಂದಲೂ ತನ್ನ ಸೇವೆಯನ್ನು ನೀನು ಮಾಡು ಎಂದು ಹೇಳಿದ್ದಿರರಲಿಕ್ಕಿಲ್ಲ. ಹಾ.. ಚೆನ್ನಾಗಿರು ಅಂತಲೇ ಪ್ರತೀ ದಿನವೂ ಅಂತಲೇ ಹಾರೈಸುವ ಅಜ್ಜಿ ಚಿಕ್ಕಪ್ಪ-ಚಿಕ್ಕಮ್ಮನಲ್ಲೂ ಸೇವೆ ಮಾಡಿಸಿಕೊಳ್ಳದೆ ತನ್ನ ಕಾರ್ಯಗಳನ್ನು ತಾನೇ ಮಾಡಿಕೊಳ್ಳುತ್ತಾರೆ.ಉಪಕಾರಕ್ಕೆ ಹೋದ್ರೆ ಬೇಡ...ಬೇಡ ಅಂತಾನೇ ಹೇಳ್ತಾರೆ.

ಕೆಲವು ಸಮಯಗಳ ಹಿಂದೆ ಒಂದು ಘಟನೆ ನಡೆಯಿತು.ಅಜ್ಜಿಗೆ ಪ್ರಾಯ ಆಗಿತ್ತಲ್ಲಾ ಕಂಬಳಿ ಬೇಕೇ ಬೇಕು.ಮಲಗುವಾಗ ಕಂಬಳಿ ಹೊದ್ದೇ ಮಲಗುತ್ತಾರೆ. ಅವರಲ್ಲಿರುವ ಕಂಬಳಿ ಹರಿದಿತ್ತು.ಆದ್ರೂ ಅದುವೇ ಆಗಬೇಕೆನ್ನುವ ಹಠ.ಒಮ್ಮೆ ಅದನ್ನು ನೋಡಿದ ಅತ್ತೆ (ಅಜ್ಜಿಯ ಮಗಳು) ಕಂಬಳಿ ಕೊಡುವ ಯೋಚನೆ ಮಾಡಿ ಚಿಕ್ಕಪ್ಪನಲ್ಲಿ ಕಳುಹಿಸಿಕೊಟ್ಟರು.ಅಜ್ಜಿ ಅದನ್ನು ನೋಡಿ ಅಚ್ಚರಿಪಟ್ಟ್ರು.ನಾನು ಹೇಳ್ಲಿಲ್ಲಲ್ವಾ ಮತ್ಯಾಕೆ? ಅಂತ ಚಿಕ್ಕಪ್ಪನಲ್ಲಿ ಕೇಳಿದ್ರು.ನಂತರ ಅದನ್ನು ನೋಡಿ ಬೇಡ ಇದು ನಂಗೆ ಬೇಡ ವಾಪಾಸು ಅದನ್ನು ಕೊಡು ಬೇಕಿದ್ರೆ ನಾವು ಅಂಗಡಿಯಿಂದ ತರೋಣ ಅಂದೇ ಬಿಟ್ರು.ಯಾಕೆ ಗೊತ್ತಾ ಅದು ನಮ್ಮದಲ್ಲ... ಪುಕ್ಕಟೆ ಬೇಡ..ಎಂಬ ಸ್ವಾಭಿಮಾನ. ಮತ್ತೆ ದಿನವಿಡೀ ಚಿಕ್ಕಪ್ಪನನ್ನು ಕರೆದು "ನೋಡು ಗಂಗಾಧರ ಅದು ಕೊಡು...." ಎಂದು ಹೇಳುತ್ತಲೇ ಇದ್ದರು. ಚಿಕ್ಕಪ್ಪನಿಗೆ ಹೇಗೆ ಅಕ್ಕನಲ್ಲಿ ಹೇಳುವುದು ಎನ್ನುವ ಚಿಂತೆ.ಆದ್ರೆ ಅಜ್ಜಿಗೆ ಅದು ಬೇಡ.ಚಿಕ್ಕಪ್ಪ ಆಯಿತು ಕೊಡೋಣ ಅಂದ್ರು...ಆ ದಿನಕ್ಕೆ ಅದು ಹಾಗೆ ಮುಗಿದಿತ್ತು.ಮರುದಿನ ಮತ್ತೆ ಅದೇ ಪ್ರಶ್ನೆ ಅಜ್ಜಿ ಕೇಳಿದರೆ ಕೊಟ್ಟಾಗಿದೆ ಅಂದು ಬಿಟ್ಟರು ಚಿಕ್ಕಪ್ಪ.ಹಾಗಾಗಿ ಅಜ್ಜಿಗೆ ನೆಮ್ಮದಿಯಾಗಿತ್ತು.

ಅಜ್ಜಿಯ ಸ್ವಾಭಿಮಾನಕ್ಕೆ ಇದೊಂದು ಉದಾಹರಣೆ ಮಾತ್ರ.

ನನಗೆ ಅನಿಸಿದ್ದು ಅದಲ್ಲ.ಅಜ್ಜಿಯ ಈ ಸ್ವಾಭಿಮಾನದ ಅಂಶಗಳು ನನ್ನಲ್ಲಿ,ಆಸುಪಾಸಿನ ಜನರಲ್ಲಿ.ದೇಶದ ಮಂದಿಯಲ್ಲಿ ಇದ್ದಿದ್ದರೆ?.ನಾವು ಈ ಮಣ್ಣಿನ ಮಕ್ಕಳು ಅದರ ಋಣ ತೀರಿಸಬೇಕೆನ್ನುವ ಸ್ವಾಭಿಮಾನ ನಮಗೆ ಇರಬೇಕಿತ್ತಲ್ವಾ...?.ನಮ್ಮ ದೇಶದ ಮೇಲೆ ಇಂದಿಗೂ ಅಷ್ಟೊಂದು ಆಕ್ರಮಣಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಆದ್ರೂ ನಮ್ಮಲ್ಲಿ ಸ್ವಾಭಿಮಾನ ಕಿಡಿ ಬೆಳಗಿಲ್ಲಲ್ವಾ? ನಾವೆಲ್ಲಾ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ಸುಮ್ಮನೆ ಹರಟುವುದನ್ನು ಬಿಟ್ಟು ಗಂಭೀರವಾಗಿ ಚಿಂತಿಸಿದ್ದು ಇದೆಯಾ.

ಮೊನ್ನೆ ಪ್ರತಾಪ್ ಸಿಂಹ ಇಸ್ರೇಲ್ ದೇಶದ ಬಗ್ಗೆ ತುಲನೆ ಮಾಡುತ್ತಾ ಹೇಳಿದ್ದೂ ಅದನ್ನೇ.ಆ ದೇಶದ ಮಂದಿಯ ಸ್ವಾಭಿಮಾನ,ದೇಶದ ಮೇಲಿನ ಅಭಿಮಾನವನ್ನು ಎಳೆ ಎಳೆಯಾಗಿ ಬಿಡಿಸಿದ್ದರು.ಇಲ್ಲಿ ಈಗ ಎಲ್ಲದಕ್ಕೂ ರಾಜಕೀಯದ ದೃಷ್ಠಿ ,ಲಾಭದ ದೃಷ್ಠಿಯನ್ನೇ ಗಮನಿಸುವ ಮಂದಿ ಹೆಚ್ಚುತ್ತಿರುವ ಕಾರಣದಿಂದಲೇ.ಆತ "ನಮಸ್ಕಾರ" ಎಂದರೂ ಇದರಲ್ಲೇನಾದರೂ ಇದೆಯಾ ಎಂದು ವಾಸ್ತವನ್ನು ಅರಿಯಬೇಕಾದ ಕಾಲದಲ್ಲಿ ನಾವಿದ್ದೇವೆ ಎಂದು ಅನಿಸುತ್ತಿದೆ.ಇದು ಬದಲಾಗಿ ನಿರ್ಮಲ ಮನಸ್ಸುಗಳು ಇಂದು ಬೆಳೆಯಬೇಕು.

ನಮ್ಮಲ್ಲಿ ಹೇಗಾಗಿದೆ ಅಂದ್ರೆ ಒಂದು ಸಂಸ್ಥೆಯಲ್ಲಿ ದುಡಿಯುವ ವ್ಯಕ್ತಿ ಆ ಸಂಸ್ಥೆಗೆ ಉತ್ತಮವಾದ್ದನ್ನು ಕೊಡದಿದ್ದರೆ ಪರವಾಗಿಲ್ಲ ಕೆಟ್ಟದ್ದನ್ನು ಬಯಸುವ, ಹೇಗಾದ್ರು ಮಾಡಿ ನನ್ನ ಹೆಸರು ಬರಬೇಕು ಆದ್ರೆ ಅನ್ನ ಕೊಟ್ಟ ಸಂಸ್ಥೆಗೆ ಮಸಿ ಬಳಿಯಬೇಕು ಎಂದು ಯೋಚಿಸುವ ಮಂದಿಯೇ ಬೆಳೆಯುತ್ತಿದ್ದಾರೆ.ಇತ್ತೀಚೆಗೆ ಅದೇ ನಡೆಯಿತು ಗೌರವಾನ್ವಿತರೆನಿಸಿಕೊಂಡವರೊಬ್ಬರು ತಾನು ದುಡಿಯುವ ಸಂಸ್ಥೆಯನ್ನು ನಡೆಸುವ ದೇವಸ್ಥಾನದ ಹೆಸರನ್ನು ಕೆಡಿಸುವ ದಾರಿಗೆ ಮಾರ್ಗದರ್ಶಕರಾದರು.ಅಲ್ಲಿ ಇಲ್ಲದ್ದನ್ನು ಇದೆ ಎಂದರು.ಆಗ ನನಗಂತೂ ಅನ್ನಿಸಿತು ನಿಜವಾಗಲೂ ನಾವು ಎಲ್ಲಿದ್ದೇವೆ.ಎಷ್ಟು ಕೃತಜ್ನರು ಅಲ್ವಾ?.ಸ್ವಾಭಿಮಾನದ ಚಿಕ್ಕ ಕಿಡಿ ಇದ್ದಿದ್ದರೆ ಅಂತಹ ಮನಸ್ಥಿತಿ ಇರುತ್ತಿತ್ತಾ?.

ಹಾಗೇ ಇನ್ನೊಬ್ಬರು ನೋಡಿ.ತನಗೆ ಉದ್ಯೋಗ ದೊರಕಿಸಿಕೊಟ್ಟು ಇಂಗ್ಲಿಷ್ನಲ್ಲಿ ಸುಲಲಿಲವಾಗಿ ಮಾತನಾಡಲಾಗದೇ ಇದ್ದಾಗಲೂ ಉಪನ್ಯಾಸಕರಾಗಿ ಬೆಳೆಯಲು ಸಹಾಯ ಮಾಡಿದವರನ್ನು ಟೀಕಿಸುತ್ತಾರೆ ,ಮತ್ತೆ ಅದೇ ಸಂಸ್ಥೆಯನ್ನು ದೂರುತ್ತಾರೆ.!?.ಹೇಗಿದೆ ಸಂಸ್ಥೆಯ ಮೇಲೇ ಅಭಿಮಾನ. ಇವೆರಡು ಸಂಗತಿಗಳು ನಾನು ಅತ್ಯಂತ ಗೌರವಿಸುವ ಫೀಲ್ಡ್ ನಿಂದಲೇ ಕಂಡು ಬಂದದ್ದು ನನಗೆ ಬೇಸರವೆನಿಸಿದ ಕಾರಣಕ್ಕಾಗಿ ಅಜ್ಜಿ ನೆನಪಾದರು.ಅಜ್ಜಿಯ ಸ್ವಾಭಿಮಾನ ನೆನಪಾಯಿತು.

ಇವರನ್ನೆಲ್ಲಾ ಗಮನಿಸಿದರೆ ಇಂದು ಹೊಲದಲ್ಲಿ ಬೆಳೆ ಬೆಳೆಸುವ ರೈತ ಹಾಗು ಅವನೊಂದಿಗೆ ದುಡಿಯುವ ಕೂಲಿಯಾಳುಗಳಿಗೆ ಈ ದೇಶದ ಮೇಲೆ , ಯಜಮಾನನ ಮೇಲೆ ,ದೇಶದ ಮೇಲೆ ಎಷ್ಟೊಂದು ಅಭಿಮಾನ.ಅದೆಲ್ಲಾ ಬಿಡಿ ಈ ಮಣ್ಣಿನ ಮೇಲೂ ಕೂಡಾ..!.ಏಕೆಂದ್ರೆ ನಾನು ನನ್ನ ದೇಶದ ಜನರಿಗೆ ಅನ್ನವನ್ನು ನೀಡಬೆಕು ಎನ್ನುವ ಕನಿಷ್ಟ ಚಿಂತನೆಯಾದ್ರು ಇದೆಯಲ್ಲಾ.ಒಂದು ವೇಳೆ ಆತನೂ ಇವರಂತೆ ಚಿಂತಿಸಿದ್ದರೆ ಹೇಗಿರುತ್ತಿತ್ತು..?
ಒಮ್ಮೊಮ್ಮೆ ನನಗೆ ಅನಿಸುವುದಿದೆ ನಾವು ವಿದ್ಯಾವಂತರಾದಷ್ಟು ಕುಬ್ಜರಾಗಿ ಬಿಡುತ್ತಿದ್ದೆವಾ? ಹಳ್ಳಿ ರೈತ ಅಷ್ಟೊಂದು ವಿದ್ಯಾವಂತನಲ್ಲದಿದ್ದರೂ ಆತನಿಗೆ ನಾವು-ನಮ್ಮವರು ಎಂಬ ಭಾವನೆಯೊಂದಿಗೆ ಸ್ವಾಭಿಮಾನವೂ ಇದೆ.ನಾವು ನಿಜವಾಗಲೂ ವಿದ್ಯಾವಂತರಾದಂತೆ ಬಾಗುವುದನ್ನು ಕಲಿಯಬೇಕಲ್ವೇ..ಭತ್ತದ ಪೈರಿನಂತೆ.. ಮಾಗಿದ ಹಣ್ಣಿನಂತೆ... ಅದೆಲ್ಲವನ್ನೂ ಅರಿಯಲು ಹಳ್ಳಿಯ ನಿಷ್ಕಲ್ಮಶ ಹೃದಯ ,ಗಾಳಿ ವಾತಾವರಣದಿಂದ ಮಾತ್ರ ಸಾಧ್ಯ.
ಅಂತಹ ಜನರಿಗೆಲ್ಲಾ ನನ್ನ ಅಜ್ಜಿ ಸಾಟಿಯಲ್ಲ ಬಿಡಿ.ನನ್ನ ಅಜ್ಜಿಯು ಸ್ವಾಭಿಮಾನದ ಬಗ್ಗೆ ನೆನಪಿಸುವಾಗ ಕಂಬಳಿಯ ವಿಚಾರ ನೆನಪಿಗೆ ಬಂತು. ಅಜ್ಜಿಯಂತಹ ಅನೇಕರು ಸಮಾಜದಲ್ಲಿದ್ದಾರೆ.ಅವರೆಲ್ಲಾ ಹಳೆಬೇರುಗಳಾಗಿದ್ದರೆ ಹೊಸಚಿಗುರುಗಳು...? ಎಲ್ಲಿದೆ.ನಾವು ನಮ್ಮತನವನ್ನು ಕಳೆದುಕೊಂಡು "ಎಲೆ ಉದುರಿದ" ಮರದಂತಾಗುತ್ತಿದ್ದೇವಾ ಅಂತ ನಿಮಗೆ ಅನ್ಸಲ್ವಾ..?

1 ಕಾಮೆಂಟ್‌:

Hari ಹೇಳಿದರು...

Every thing is fine, but it is not true when you compare with an MNC, there is a proverb saying "LOve your job but don't fall in love with your company. You never come to know when Comapany leaves you"

Hope this would create sense!!