01 ಮಾರ್ಚ್ 2008

ರೈತರ ಬಾಳಿಗೆ ಸಿಹಿ... ಈಗ ದಿಲ್ ಗೂ ಖುಷಿ...



ರೈತರ ಸಾಲ ಮನ್ನಾ...!?. ನೇಗಿಲ ಯೋಗಿಗೆ ನಿಟ್ಟುಸಿರು ಬಿಡುವ ಸಮಯ....?

ಯಾಕೆ ಅಚ್ಚರಿ ಅಂತ ಕೇಳುವಿರಾ?.ಈಗಲಾದರೂ ಸರಕಾರಗಳಿಗೆ ರೈತರೇ ದೇಶದ ಆಸ್ಥಿ ಅಂತ ಅರಿವಾಯಿತಲ್ಲಾ.ಇದರ ಹಿಂದೆ ವೋಟ್ ಬ್ಯಾಂಕ್ ತಂತ್ರವಿರಬಹುದು.ಇರಲಿ ಪರವಾಗಿಲ್ಲ. ರೈತರೇ ರಾಜಕೀಯ ಪಕ್ಷಗಳ ,ರಾಜಕೀಯ ನಾಯಕರುಗಳ ಭವಿಷ್ಯವನ್ನು ನಿರ್ಧರಿಸುವವರು ಎಂಬುದು ಈಗಲಾದರೂ ಸಾಬೀತಾಯಿತಲ್ಲ.

ಈಗ ಹಳ್ಳಿ ಹಳ್ಳಿಯೊಳಗಿನ ರೈತರಿಗೆ ಸಿಹಿ ಸುದ್ದಿಯದ್ದೇ ಮಾತು.ತರಕಾರಿ ,ದಿನಸಿ ಅಂಗಡಿಗಳಲ್ಲಿ ,ಪತ್ರಿಕೆಯ ಅಂಗಡಿಯ ಮುಂದೆ ಹೀಗೆ ಎಲ್ಲೆಡೆ ಸಾಲ ಮನ್ನಾದ್ದೇ ಚರ್ಚೆ.ಸಾಲ ಮನ್ನಾ ನಮಗೂ ಇದೆಯಾ.. ಅದು ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಮಾಡಿದವರಿ ಮಾತ್ರವಂತೆ... ಅಲ್ಲಾ ವಾಣಿಜ್ಯ ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೂ ಇದೆಯಂತೆ ನಿಮಗೇನಾದರೂ ಗೊತ್ತಾ?.. ಹೀಗೇ ಚರ್ಚೆ ನಡೆಯುತ್ತಿತ್ತು.ಅಂತೂ ನಮ್ಮ ಸಾಲ ಮುಗಿಯುತ್ತಲ್ಲಾ ಎಂಬ ಹರ್ಷ ಹಳ್ಳಿಯ ರೈತರದ್ದು.

ಶುಕ್ರವಾರ ಪ್ರಕಟವಾದ ಕೇಂದ್ರ ಆರ್ಥಿಕ ಬಜೆಟ್ ನಲ್ಲಿ ಮಂಡಿಸಲಾದ ಅಂಶಗಳಲ್ಲಿ ರೈತರ ಸಾಲ ಮನ್ನಾ ಅತ್ಯಂತ ಗಮನ ಸೆಳೆದಿದೆ.ಅದಕ್ಕೆ 64 ಸಾವಿರ ಕೋಟಿ ರೂ ಗಳನ್ನು ಮೀಸಲಿಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.ಇದರ ಪ್ರಕಾರ 5 ಎಕ್ರೆಗಿಂತ ಕಡಿಮೆ ಹಿಡುವಳಿದಾರರಿಗೆ ಸಾಲಮನ್ನಾ ಹಾಗೂ ಉಳಿದ ರೈತರು ಏಕಕಾಲದಲ್ಲಿ ಸಾಲದ ಶೇ 75 ನ್ನು ಬ್ಯಾಂಕ್ ಗೆ ಪಾವತಿಸಿದರೆ ಶೇ 25 ಸಾಲ ಮನ್ನಾವೆಂಬ ವಿಷಯ ಮಂಡಿಸಲಾಗಿತ್ತು.ಹಾಗಾಗಿ ಹಲವು ವರ್ಷಗಳಿಂದ ಸಾಲದಿಂದ ಬಳಲುತ್ತಿದ್ದ ದೇಶದ ರೈತರಿಗೆ ಖುಷಿಯಾಗಿದೆ.ಇನ್ನಾದರೂ ನೆಮ್ಮದಿ ಸಿಗಬಹುದಾ?

ಆದರೆ ಇದು ಚುನಾವಣಾ ಬಜೆಟ್ ಎಂಬುದಕ್ಕೆ ಬೇರೆ ಮಾತೇ ಇಲ್ಲ.ಈಗ ಇಡೀ ರಾಜಕಾರಣಿಗಳ ಭವಿಷ್ಯ ರೈತರ ಕೈಯಲ್ಲಿದೆ ಎಂಬ ಸತ್ಯ ರಾಜಕಾರಣಿಗಳಿಗೆ ಹಾಗೂ ರಾಜಕೀಯ ಪಕ್ಷಗಳಿಗೆ ಅರ್ಥವಾಗಿದೆ.ಹಾಗಾಗಿ ಇನ್ನು ದೇಶದ ರೈತರು ಹೆದರಬೇಕಿಲ್ಲ ಎಂಬುದು ಹಳ್ಳಿಯಲ್ಲಿ ತಿಳಿಯಬೇಕಾಗಿರುವ ಸಂಗತಿ.
ಈ ಸಾಲಮನ್ನಾದಿಂದ ದೇಶದ ಆರ್ಥಿಕ ಸ್ಥಿತಿಗೆ ಧಕ್ಕೆಯಾಗಲಿದೆಯೇ,ಬ್ಯಾಂಕ್ ಗಳಿಗೆ ಹೊರೆಯಾಗಲಿದೆಯೇ ಎಂಬದನ್ನು ತಜ್ಞರು ನಿರ್ಧರಿಸಿ ವಿವರಿಸಲಿದ್ದಾರೆ.ಆದರೆ ಅನೇಕ ವರ್ಷಗಳಿಂದ ಸಾಲದಿಂದ ಕಂಗಾಲಾಗಿರುವ ರೈತರು ಬೆಳೆಗಳಿಗೆ ಉತ್ತಮ ಧಾರಣೆಯೂ ಸಿಗದೆ ಪರಿತಪಿಸುತ್ತುರುವ ವೇಳೆ ಇಂದಿನ ಸಾಲಮನ್ನಾ ರೈತರಿಗೆ ವರದಾನವೇ ಸರಿ.ಮೊನ್ನೆ ಕರ್ನಾಟಕದಲ್ಲೂ ಕೂಡಾ ರೈತರಿಗೆ ಸಾಲಮನ್ನಾದ ಖುಷಿ ಸಿಕ್ಕಿತ್ತು.

ರೈತರ ಸಾಲಮನ್ನಾಕ್ಕೂ ಆತ್ಮಹತ್ಯೆಗೂ ಸಂಬಂಧವಿದೆಯಾ ಎಂಬುದನ್ನು ಇನ್ನು ನೋಡಬೇಕಷ್ಟೆ.ಸಾಲದ ಶೂಲಕ್ಕೆ ಸಿಕ್ಕು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಾದರೆ ಮುಂದೆ ಅದು ಗಣನೀಯವಾಗಿ ಕಡಿಮೆಯಾಗಬೇಕು.

ಇನ್ನೊಂದು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಂತಹ ಸಾಲಮನ್ನಾ ಯೋಜನೆಗಳಿಂದ ಕೆಲವು ಶ್ರೀಮಂತ ರೈತರು ಇನ್ನಷ್ಟು ಸಿರಿವಂತರಾಗಿದ್ದಾರೆ.ಕೆಲವು ರೈತರು ತಾವು ಬ್ಯಾಂಕ್ ಗಳಿಂದ ಶೇ 4 ಅಥವಾ ಶೇ 9 ಬಡ್ಡಿದರದಲ್ಲಿ ಸಾಲವನ್ನು ಮಾಡಿ ಉಳಿತಾಯ ಖಾತೆ ಅಥವಾ ನಿರಖು ಠೇವಣಿಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ.ಅಂತಹವರಿಗೆ ಈಗ ಬಂಪರ್ ಲಾಭ..! ಹಾಗಾಗಿ ಸರಕಾರವು ಭೂಮಿ ಆಧಾರದಲ್ಲಿ ಸಾಲಮನ್ನಾ ಮಾಡುವ ಬದಲು ಇತರ ಆಧಾರದಲ್ಲಿ ಸಾಧ್ಯವಿದ್ದರೆ ಸಾಲಮನ್ನಾ ಮಾಡಬೇಕಾಗಿದೆ.ಆಗ ನಿಜವಾದ ಬಡ ರೈತನಿಗೆ ಸಾಲದ ಹೊರೆ ತಪ್ಪಬಹುದು, ಸರಕಾರವೂ ಪ್ರಾಮಾಣಿಕವಾದ ಕಾರ್ಯ ನಡೆಸಿದಂತಾಗಬಹುದೇ ಎಂದು ಚರ್ಚೆ ನಡೆಯಬೇಕು.ಒಟ್ಟಿನಲ್ಲಿ ಈಗ ರೈತರ ದಿಲ್ ಕುಶ್... ಎಷ್ಟು ದಿನ.. ಅಂತ ಸಾಲ ಮನ್ನಾ ಆದ ಬಳಿಕವೇ ನಿಜವಾದ ಸಂಗತಿ ತಿಳಿಯಬೇಕು.

ಕೊನೆಯ ಮಾತು : ಈ ಸಾಲಮನ್ನಾ ಯೋಜನೆಯ ಪ್ರಸ್ತಾಪ ಬರುತ್ತಿದ್ದಂತೆಯೇ ಬ್ಯಾಂಕ್ ನೌಕರರೊಬ್ಬರು ಆತಂಕ ತೋಡಿಕೊಳ್ಳುತ್ತಿದ್ದರು. ಇನ್ನು ಬ್ಯಾಂಕ್ ಗತಿ ಏನಪ್ಪಾ?.ಹಿಂದೆ ಹೀಗೇ ಸಾಲಮನ್ನಾ ಆಗಿ ಬ್ಯಾಂಕ್ ಈಗ ಸುಧಾರಿಸುತ್ತಿದೆ ಮತ್ತೆ ಹೀಗಾದರೆ ಬ್ಯಾಂಕ್....? ಸರಕಾರದಿಂದ ಸಹಾಯಧನ ಬರುವಾಗ ಬ್ಯಾಂಕ್ ಮುಳುಗುತ್ತದೆ ಎನ್ನುತ್ತಾರೆ.ಅದು ಹೇಗೆ ಎಂದು ವಿವರವಾಗಿ ಹೇಳುವ ತಾಳ್ಮೆ ಅವರಿಗಿರಲಿಲ್ಲ.

ಕಾಮೆಂಟ್‌ಗಳಿಲ್ಲ: