23 ಏಪ್ರಿಲ್ 2010

ಎಲ್ಲವೂ ಕಲುಷಿತ . . .!




ಬೇಸಗೆಯ ಈ ಸಮಯದಲ್ಲಿ ಎಲ್ಲೆಲ್ಲೂ ಕುಡಿಯುವ ನೀರಿಗೆ ತತ್ವಾರ.ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಹೊಳೆಯು ಇದ್ದಕ್ಕಿದ್ದಂತೆ ಕಲುಷಿತವಾಗಿ ಹರಿಯುವುದಕ್ಕೆ ಶುರುವಾಗಿದೆ.ಜನ ನೀರಿಗಾಗಿ ಪರದಾಟ ನಡೆಸುವಂತಾಗಿದೆ.ಈ ತೊಂದರೆಗೆ ಕಾರಣರದವರು ಗುಂಡ್ಯ ವಿದ್ಯುತ್ ಯೋಜನೆಯವರು.ಇದೀಗ ಈ ಸಮಸ್ಯೆಗೆ ಮುಕ್ತಿಯೇ ಇಲ್ಲವಾಗಿದೆ.

ಇಲ್ಲಿನ ನದಿಯಲ್ಲಿ ನೀರು ಹೀಗೆ ಕೆಂಪು ಕೆಂಪಾಗಿ ಹರೀತಾ ಇದೆ.ಇದು ಮಳೆ ಬಂದ ಕಾರಣದಿಂದಾಗಿ ಅಂತ ನೀವು ಭಾವಿಸಿದ್ರೆ ತಪ್ಪಾದೀತು.ಈ ಬಿರು ಬೇಸಗೆಯಲ್ಲಿ ಹೀಗೆ ಕೃತಕವಾಗಿ ಮಳೆ ಲಕ್ಷಣ ಸೃಷ್ಢಿಯಾಗೋದಿಕ್ಕೂ ಕಾರಣಾನೂ ಇದೆ.ಅಷ್ಟಕ್ಕೂ ಇಂತಹ ಕಲುಷಿತ ನೀರು ಹರೀತಾ ಇರೋದು ದಕ್ಷಿಣ ಕನ್ನಡ ಜಿಲ್ಲೆಯ ಗುಂಡ್ಯ ಹೊಳೆಯಲ್ಲಿ. ಪಶ್ಚಿಮ ಘಟ್ಟದ ಸಾಲಿನಿಂದ ಶುಭ್ರವಾಗಿ ಜಲಧಾರೆಯಾಗಿ ಹರಿದು ಬರೋ ಗುಂಡ್ಯ ನದಿಗೆ ನಿರ್ಮಿಸಿರೋ ಗುಂಡ್ಯ ವಿದ್ಯುತ್ ಯೋಜನೆಯ ಕೆಂಪುಹೊಳೆ ಹಾಗೂ ಐಪಿಸಿ‌ಎಲ್ ಕಂಪನೆಯ ವಿದ್ಯುತ್ ಯೋಜನೆಯಗಳು ಈ ಅವಾಂತರವನ್ನು ಮಾಡ್ತಿವೆ. ಸಾರ್ವಜನಿಕರಿಗೆ ಕಿರುಕುಳವನ್ನು ಕೊಡ್ತಿವೆ.ಸದ್ಯ ಡ್ಯಾಂ ಬರಿದಾಗಿರೋ ಕಾರಣದಿಂದ ಕಾಡಿನಿಂದ ಬರೋ ಶುಭ್ರ ನೀರನ್ನು ಬಳಸಿಕೊಂಡು ವಿದ್ಯುತ್ ಯೋಜನೆಯ ಡ್ಯಾಂನಲ್ಲಿ ಅಪಾರವಾಗಿ ತುಂಬಿರೋ ಹೂಳನ್ನು ತೆಗೆಯೋ ಕೆಲ್ಸ ಮಾಡ್ತಿವೆ.ಇದಕ್ಕಾಗಿ ಹಿಟಾಚಿ ಯಂತ್ರವನ್ನು ಬಳಸಲಾಗಿದೆ.ಡ್ಯಾಂನಲ್ಲಿರೋ ಹೂಳನ್ನು ನೀರಿನೊಂದಿಗೆ ಮಿಶ್ರ ಮಾಡಿ ಕಳೆದ ಇಪ್ಪತ್ತು ದಿನಗಳಿಂದ ನದಿಯಲ್ಲಿ ಬಿಡಲಾಗುತ್ತಿದೆ.ಹೀಗಾಗಿ ಇಡೀ ನೀರು ಕಲುಷಿತಗೊಂಡಿದೆ. ಹೀಗಾಗಿ ಕುಡಿಯುವ ನೀರಿಗೆ , ಕೃಷಿಗೆ ಇದೇ ನದಿಯನ್ನು ಆಶ್ರಯಿಸಿರೋ ಗುಂಡ್ಯದ ಜನ ಪರದಾಟ ನಡೆಸುವಂತಾಗಿದೆ. ಈ ಕಲುಷಿತ ನೀರು ಗುಂಡ್ಯದಿಂದ ಆರಂಭಗೊಂಡು ಸುಮಾರು 25 ಕಿಲೋ ಮೀಟರ್ ದೂರದವರೆಗೆ ಸಾಗುತ್ತಿದೆ.ಇಡೀ ನೀರು ಮಣ್ಣು ಹಾಗು ಕೆಸರಿನಿಂದ ಕೂಡಿದೆ.ಕಳೆದ ವರ್ಷವೂ ಇದೇ ರೀತಿ ಈ ವಿದ್ಯುತ್ ಯೋಜನೆಯ ಸಿಬ್ಬಂದಿಗಳು ಮಾಡಿದ್ದಾರೆ.ಹೀಗಾಗಿ ಆಕ್ರೋಶಿತರಾದ ಜನ ಒಂದೋ ಡ್ಯಾಂನವರು ಹೀಗೆ ಉಪದ್ರ ಕೊಡಬಾರದು.ಇನ್ನೂ ಹೀಗೇನೇ ಮಾಡಿದ್ರೆ ಡ್ಯಾಂಗೆ ಡ್ಯಾಮೇಜ್ ಮಾಡುವುದಾಗಿ ಹೇಳಿದ್ದಾರೆ.


ಇಲ್ಲಿನ ಅಣೆಕಟ್ಟಿನದ್ದು ಒಂದೆರಡು ಸಮಸ್ಯೆಯಲ್ಲ.ಪದೇ ಪದೇ ಇಂತಹ ಕಿರುಕುಳ ಇಲ್ಲಿನ ಜನ್ರಿಗೆ ಆಗ್ತಾ ಇರುತ್ತೆ.ಇತ್ತೀಚೆಗೆ ಹೀಗೆ ಕಲುಷಿತ ನೀರನ್ನು ಬಿಟ್ಟಾಗ ಇದು ಕುಡಿಯೋ ನೀರು ಎಂದು ಜನ ಎಚ್ಚರಿಕೆ ಮನವಿ ಮಾಡಿದ್ರು.ಆದ್ರೂ ಯೋಜನೆಯವ್ರು ಕ್ಯಾರೇ ಅಂದಿಲ್ಲ.ಇನ್ನು ನೀರನ್ನು ಮಳೆಗಾಲದಲ್ಲಿ ಹಠಾತ್ ಆಗಿ ಡ್ಯಾಂನಿಂದ ಬಿಡೋದು ಕೂಡಾ ನಡೆಯುತ್ತಿದೆ.ಇದರಿಂದಾಗಿ ಜನರಿಗೆ ತೊಂದರೆಯಾಗುತ್ತದೆ. ಒಂದೆರಡು ಜೀವಹಾನಿಕೂಡಾ ಇಲ್ಲಿ ನಡೆದಿದೆಯಂತೆ.ಆದ್ರೆ ಈಗ ನೀರನ್ನು ಕಲುಷಿತ ಮಾಡಿ ಬಿಡೋದ್ರಿಂದ ಕುಡಿಯೋಕೆ ಮಾತ್ರವಲ್ಲ ಜಲಚರಗಳಿಗೂ ತೊಂದರೆಯಾಗಿದೆ.ಮೀನು , ಕಪ್ಪೆಗಳು ಕೂಡಾ ಸಾಯ್ತಾ ಇವೆ. ಕಾಡು ಪ್ರಾಣಿಗಳಿಗೂ ಕುಡಿಯಲು ನೀರಿಲ್ಲದೆ ಸಾಯುವ ಸ್ಥಿತಿಗೆ ಬರುತ್ತಿದೆ.

ಒಟ್ಟಿನಲ್ಲಿ ಗುಂಡ್ಯ ಈ ಪ್ರದೇಶದ ಜನ್ರಿಗೆ ಈಗ ಕಲುಷಿತ ನೀರು ಕುಡಿಯೋದು ಅನಿವಾರ್ಯವಾಗಿದೆ. ಮತ್ತೆ ಮತ್ತೆ ನೀರನ್ನು ಕಲುಷಿತ ಮಾಡಿ ಗುಂಡ್ಯ ಯೋಜನೆಯಿಂದ ಕೆಳಗಡೆ ಬಿಡಲಾಗುತ್ತಿದೆ.ಇದರಿಂದಾಗಿ ಕೆಲವೆಡೆ ಜ್ವರ ಬಾಧೆ ಸೇರಿದಂತೆ ಇನ್ನಿತರ ರೋಗ ಬಾಧೆಯ ಭೀತಿ ಎದುರಾಗಿದೆ.ಹೀಗಾಗಿ ಸಂಬಂಧಿತರು ಎಚ್ಚೆತ್ತುಕೊಳ್ಳಬೇಕಾಗಿದೆ.

ಕಾಮೆಂಟ್‌ಗಳಿಲ್ಲ: