10 ಮೇ 2010

ಇಲ್ಲಿ ಬ್ಯಾಲೆಟ್ ಪ್ರಯೋಜನಕ್ಕೇ ಬಂದಿಲ್ಲ. . . .!!

ಊರಿನಲ್ಲಿ ಏನೇ ಅಭಿವೃದ್ದಿ ಆಗಿಲ್ಲಾಂದ್ರೆ ಅದ್ಕೆ ಜನ ಉತ್ತರ ನೀಡೋದು ಬ್ಯಾಲೆಟ್ನಲ್ಲಿ ಅಂತ ಒಂದು ಮಾತಿದೆ. ಆದ್ರೆ ಇಲ್ಲೊಂದು ಸ್ಟೋರಿ ಇದೆ. ಈ ಊರಿನ ಜನ್ರಿಗೆ ಆ ಬ್ಯಾಲೆಟ್ ಉತ್ತರದಲ್ಲೂ ಪರಿಹಾರ ಸಿಕ್ಕಿಲ್ಲ. . .!!

ಗ್ರಾಮ ಪಂಚಾಯತ್ ಅಂದ್ರೆ ಅದು ಗ್ರಾಮದ ಸರಕಾರ.ಈ ಸರಕಾರಕ್ಕೆ ಜನ ಆಗಾಗ್ಗೆ ಬರ‍ಬೇಕು. ಗ್ರಾಮ ಸರಕಾರದಲ್ಲಿ ಸಿಗೋ ಸೌಲಭ್ಯಗಳ ಬಗ್ಗೆ ತಿಳ್ಕೋಬೇಕು.ಆದ್ರೆ ನಮ್ದೇ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಎಳನೀರು ಎಂಬೊಂದು ಊರಿದೆ.ಆ ಊರಿನ ಜನರಿಗೆ ತಮ್ಮ ಗ್ರಾಮದ ಸರಕಾರಕ್ಕೆ ಬರಬೇಕಾದ್ರೆ ಬರೋಬ್ಬರಿ 120 ಕಿಲೋ ಮೀಟರ್ ದೂರ ಸುತ್ತು ಬಳಸಿ ಬರಲೇಬೇಕು. ಇದು ಇವರಿಗೆ ಅನಿವಾರ್ಯ ಕೂಡಾ.ಆದ್ರೂ ಅವ್ರು ಚುನಾವಣೆಗೆ ಹೋಕ್ತಾರೆ ಮತ ಹಾಕ್ತಾರೆ.

ನಮ್ಮೂರಲ್ಲಿ ಅದ್ಯಾವುದೋ ರಸ್ತೆಯಲ್ಲಿ ಒಂದೇ ಒಂದು ಹೊಂಡ ಬಿದ್ರೆ , ನಲ್ಲಿಯಲ್ಲಿ ಒಂದೇ ಒಂದು ದಿನ ನೀರು ಬರದೇ ಇದ್ರೆ ಸಾಕು ನಾವು ಚುನಾವಣೆಗೇ ಬರೋದಿಲ್ಲ ಅಂತ ಚುನಾವಣೆ ಹತ್ತಿರ ಬ‍ರುತ್ತಿದ್ದಂತೆ ಜನ ಹೇಳಿ ಬಿಡ್ತಾರೆ.ಆದ್ರೆ ಇಲ್ಲೊಂದು ಊರಿದೆ ಈ ಜನ ಪ್ರತೀ ಚುನಾವಣೆಗೆ ಓಟು ಹಾಕ್ತಾರೆ ಒಂದೇ ಒಂದು ಸೌಲಭ್ಯ ಈ ಊರಿಗೆ ಸಿಕ್ಕಿಲ್ಲ. ಈ ಊರ್ ‍ಯಾವುದು ಅಂತ ಗೊತ್ತಾ. .?. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮಪಂಚಾಯತ್‌ನ ಒಂದನೇ ವಾರ್ಡ್ “ಎಳನೀರು”.ಈ ಊರಿನ ಹೆಸರೇನೋ ಚೆನ್ನಾಗಿದೆ.ಆದ್ರೆ ಊರ ಒಳಹೊಕ್ಕರೆ ಸಮಸ್ಯೆಗಳ ನೀರೇ ಹರಿತಾ ಇದೆ.ಮಲವಂತಿಗೆ ಗ್ರಾಮಪಂಚಾಯತ್‌ನಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿದೆ ಈ ಎಳನೀರು ಎಂಬ ಊರು.ಆದ್ರೆ ಮಲವಂತಿಗೆ ಗ್ರಾಮಪಂಚಾಯತ್ ಸಂಪರ್ಕಿಸುವುದಕ್ಕೆ ಸರಿಯಾದ ರಸ್ತೆಯಿಲ್ಲ. ಹಾಗಾಗಿ ಇಲ್ಲಿನ ಜನ ತಮ್ಮ ಗ್ರಾಮಪಂಚಾಯತ್ ಕಾಣಬೇಕಾದ್ರೆ 120 ಕಿಲೋ ಮೀಟರ್ ದೂರ ಸುತ್ತುಬಳಸಿ ಬರಬೇಕು.ಮಲವಂತಿಗೆ ಹಾಗೂ ಎಳನೀರಿನ ನಡುವೆ ಮೀಸಲು ಅರಣ್ಯ ಪ್ರದೇಶ ಬರುವುದೇ ಈ ಊರಿನ ಅಭಿವೃದ್ದಿ ಹಿನ್ನಡೆಯಾಗುವುದಕ್ಕೆ ಕಾರಣವಾಗಿದೆ.ಇದೇ ಕಾರಣದಿಂದಾಗಿ ಈ ಊರಿಗೆ ಸರಿಯಾದ ರಸ್ತೆಯಿಲ್ಲ. ಕಡತಗಳಲ್ಲಿ ರಸ್ತೆ ಇದೆ ಅಂತ ಇದ್ರೆ ಅರಣ್ಯ ಇಲಾಖೆ ಕಾನೂನು ಪ್ರಕಾರ ಬಿಡೋಕೆ ಆಗಲ್ಲ ಅಂತಿದೆ.ಅಭಿವೃದ್ದಿಗಾಗಿ ಕಾನೂನನ್ನು ಸ್ವಲ್ಪ ಸಡಿಲಗೊಳಿಸಿದರೆ ಸುಬ್ರಹ್ಮಣ್ಯ - ಧರ್ಮಸ್ಥಳ - ಹೊರನಾಡಿಗೆ ಅತ್ಯಂತ ಸಮೀಪದ ಸಂಪರ್ಕ ರಸ್ತೆ ಇದಾಗಲಿದೆ ಮಾತ್ರವಲ್ಲ ಅತ್ಯಂತ ಸುಲಭದ ಘಾಟಿ ರಸ್ತೆಯೂ ಇದಾಗಲಿದೆ ಅನ್ನೋ ಒಂದು ಸಲಹೆಯೂ ಇದೆ. ಅರಣ್ಯವೂ ಇಲ್ಲಿ ಅಷ್ಟೊಂದು ನಾಶವಾಗೋ ಸಾಧ್ಯತೆ ಇಲ್ಲ.ಇನ್ನು ಈ ಘಾಟಿ ಪ್ರದೇಶದಲ್ಲಿ ಕಾಡುಪ್ರಾಣಿಗಳ ವಾಸವೂ ಕಡಿಮೆ ಇರೋದ್ರಿಂದ ರಸ್ತೆ ನಿರ್ಮಾಣಕ್ಕೆ ಅನುಕೂಲ.ಆದ್ರೆ ಇಚ್ಚಾ ಶಕ್ತಿ ಬೇಕು ಅಷ್ಟೇ. ಈ ಎಲ್ಲಾ ಸಮಸ್ಯೆಗಳು ಎಳನೀರಿನ ಜನರಿಗೆ ಮಾನಸಿಕ ಹಿಂಸೆ ನೀಡ್ತಿದ್ರೆ ವಿದ್ಯುತ್ ಕೂಡಾ ಇಲ್ಲದೇ ಇರೋದು ಇಲ್ಲಿನ ಜನರಿಗೆ ಇನ್ನಷ್ಟು ಹಿಂಸೆಯಾಗಿದೆ.


ಹಾಗೆಂದ ಕೂಡಲೇ ಇಲ್ಲಿ ಚುನಾವಣೆನೇ ನಡೀತಾ ಇಲ್ಲ ಅಂತಲ್ಲ.ಕಳೆದ ಬಾರಿಯ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದೆ.ಈ ಬಾರಿ ಗ್ರಾಮಪಂಚಾಯತ್ ಚುನಾವಣೆಯೂ ನಡೀತಾ ಇದೆ.ಎಳನೀರಿನ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ.ಈ ಎಳನೀರಿನ ಪ್ರದೇಶಕ್ಕೆ ಒಂದು ಪ್ರತ್ಯೇಕ ಚುನಾವಣಾ ಬೂತ್ ಕೂಡಾ ತೆರೆಯಲಾಗಿದೆ.ಈ ಊರಿನಲ್ಲಿ ಸುಮಾರು 125 ಕುಟುಂಬಗಳಿದ್ದು ಸುಮಾರು 500 ಜನ ಮತದಾರರಿದ್ದಾರೆ.ಇಲ್ಲಿಯೇ ಬೂತ್ ಇರುವ ಕಾರಣ ಇಲ್ಲಿನ ಜನರಿಗೆ ಮತದಾನಕ್ಕೆ ಕಷ್ಠ ಇಲ್ಲ.ಚಿಂತೆ ಇರುವುದು ಊರಿನ ಅಭಿವೃದ್ದಿಯದ್ದು ಮಾತ್ರಾ.ಅದರಲ್ಲೂ ಮುಖ್ಯವಾದ ಅಂಶವೆಂದರೆ ಈ ಪ್ರದೇಶಕ್ಕೆ ಇದುವರೆಗಿನ ಸಂಸದರು , ಶಾಸಕರು ಬಂದೇ ಇಲ್ಲವಂತೆ. ಶಾಸಕರು ಮತಯಾಚನೆಗೆ ಒಮ್ಮೆ ಬಂದರೆ ಸಂಸದರು ಅದಕ್ಕೂ ಬಂದಿಲ್ಲವಂತೆ.ಚುನಾವಣೆ ಹತ್ತಿರ ಬಂದಾಗ ಪಕ್ಷಗಳ ಬೆಂಬಲಿಗರ ಮನೆ ಮನೆಗೆ ಬರ್‍ತಾರೆ , ಓಟ್ ಕೊಡಿ ಅಂತ ಕೇಳ್ತಾರೆ , ಜನ ಬೈತಾರೆ .. ಮತದಾನದ ದಿನ ಬರುತ್ತೆ ಅದ್ಯಾವುದೋ ಒಂದು ಪಕ್ಷದ ಅಭ್ಯರ್ಥಿ ಗೆಲ್ತಾರೆ.ಅಲ್ಲಿಗೆ ಆ ಊರಿನ ಸಮಸ್ಯೆ ಹಾಗೆಯೇ ಉಳಿದುಕೊಂಡಿತು.ಜನಪ್ರತಿನಿಧಿಗಳಿಗೆ ಈ ಊರು ಕಡೆಗಣನೆ ಯಾಕೆ ಅಂತ ಅಲ್ಲಿನ ಜನ್ರನ್ನ ಕೇಳಿದ್ರೆ ಅವ್ರು ಹೇಳ್ತಾರೆ “ ಇಲ್ಲಿ ಓಟ್ ಇರೋದೇ 400-500. ಹಾಗಾಗಿ ಇಲ್ಲಿನ ಓಟ್ ಅವ್ರಿಗೆ ಸಿಕ್ಕಿದ್ರೇನು ಬಿಟ್ರೇನು..?.ಅವ್ರು 10 ಸಾವಿರ 20 ಸಾವಿರ ಓಟ್‌ನಲ್ಲಿ ಗೆಲ್ಲೋವಾಗ ಈ 400 - 500 ಓಟ್‌ನ ಬೆಲೆ ಅವ್ರಿಗೆ ಏನು ಗೊತ್ತು. .” ?. ಇನ್ನು ಪತ್ರಿಕೆ , ಟಿವಿಯಲ್ಲೂ ನಮ್ಮ ಊರಿನ ಸಮಸ್ಯೆ ಹಾಕಿಸಿ ಸಾಕಾಗಿ ಹೋಯ್ತು .. ಅದ್ರಿಂದಲೂ ಸಹಾಯ ಆಗಿಲ್ಲ ಅಂತಾನು ಗೊಣಗ್ತಾರೆ ಆ ಊರಿನ ಜನ.. .!!.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯೇ ಪ್ರಮುಖ ಅಸ್ತ್ರ.ಮತಹಾಕಿ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ತಮ್ಮ ಊರನ್ನು ಅಭಿವೃದ್ದಿಯ ಹಾದಿಯಲ್ಲಿ ನಡೆಯುವಂತೆ ಮಾಡುವ ಪ್ರಯತ್ನ ನಡೀತೀರುವಾಗ ಎಳನೀರಿನ ಜನಕ್ಕೆ ಮಾತ್ರಾ ಇದ್ಯಾವುದೂ ಅನ್ವಯಿಸುವುದೇ ಇಲ್ಲ.ಮೂಲಭೂತ ವ್ಯವಸ್ಥೆ ಪಡೆದುಕೊಳ್ಳೊದಿಕ್ಕೆ ಅವ್ರಿಂದ ಸಾಧ್ಯಾನೇ ಆಗಿಲ್ಲ.ನಮ್ಮ ಶಾಸಕರು, ಜನಪ್ರತಿನಿಧಿಗಳು, ಆಡಳಿತ ವ್ಯವಸ್ಥೆ ಆ ಊರಿನ ಅಭಿವೃದ್ದಿಯತ್ತಲೂ ಗಮನಹರಿಸಿಲ್ಲ ಎಂಬುದೇ ವಿಪರ್ಯಾಸ.

ಕಾಮೆಂಟ್‌ಗಳಿಲ್ಲ: