02 ಫೆಬ್ರವರಿ 2008

ವೀರಪ್ಪ ಮೊಯಿಲಿಯವರಿಂದ "ಪುಣ್ಯ"ಕೋಟಿಯ "ಕತೆ".....




ಇದು ದ.ಕ ಜಿಲ್ಲಾ ಮಟ್ಟದ ಯುವಜನ ಮೇಳ 2007-08 ರ ಉದ್ಘಾಟನಾ ಸಮಾರಂಭ.

ನಡೆದದ್ದು ಸುಳ್ಯ ತಾಲೂಕಿನ ದುಗ್ಗಲಡ್ಕದ ಸರಕಾರಿ ಪ್ರೌಢಶಾಲಾ ವಠಾರ.ಫೆ.2 ರಂದು ಶನಿವಾರ.ಸಮಯ ಬೆಳಗ್ಗೆ 11 ರ ಹೊತ್ತು.

ಯುವಜನ ಮೇಳವನ್ನು ಉದ್ಘಾಟಿಸಿದ್ದು ಕರ್ನಾಟಕದ ಮಾಜಿ ಮುಖ್ಯಮಂತ್ರಿ,ಭಾರತ ಸರಕಾರದ ಆಡಳಿತ ಸುಧಾರಣ ಆಯೋಗದ ಅಧ್ಯಕ್ಷ ವೀರಪ್ಪ ಮೊಯಿಲಿಯವರು.ನಂತರ ಅತ್ಯಂತ ಮೋಡಿಯ ಮಾತುಗಳನ್ನಾಡಿದರು.ಹೌದು..ಹೌದು.. ಎಂಬಂತೆ ಜನ ತಲೆದೂಗಿದರು.ಇಡೀ ಭಾಷಣ ಇದ್ದದ್ದು 13 ನಿಮಿಷ.ಭಾಷಣದುದ್ದಕ್ಕೂ ಅವರ ಮಾತಿನಲ್ಲಿ ಶಬ್ದಗಳೊಂದಿಗಿನ ಚೆಲ್ಲಾಟ ಖುಷಿಯಾಗಿತ್ತು.ನಡು ನಡುವೆ ಕೆಲವು ತತ್ತ್ವಗಳನ್ನು ಹೇಳಿದರು.ಕೊನೆಗೆ ಅವರು ಸಭೆಯ ಮುಂದೆ ತೆರೆದಿಟ್ಟದ್ದು "ಪುಣ್ಯ"ಕೋಟಿಯ "ಕತೆ".... ಗೋವಿನ ಕತೆ... ಅದರ ಸಾರಾಂಶ ಹೀಗೆ... ಅದನ್ನು ಅವರ ಮಾತಿನಲ್ಲೇ ಹೇಳುವುದಾದರೆ....

ನಾನು ಓದುತ್ತಿದ್ದಾಗ ಪುಣ್ಯಕೋಟಿಯ ಕತೆ ಇತ್ತು.ಈಗ ಉಂಟಾ ಇಲ್ವಾ ಗೊತ್ತಿಲ್ಲ.. ನಾನು ಕತೆಯನ್ನು ಹೀಗೆ ಕಂಡುಕೊಂಡೆ....

ಹುಲಿ - ಆಕಳನ್ನು ಹಿಡಿದು ತಿನ್ನುವುದು ಪ್ರಕೃತಿ : ಆಕಳ ಸತ್ಯವನ್ನು ಹುಲಿ ಮೆಚ್ಚಿರುವುದು ಸಂಸ್ಕೃತಿ

ಆಕಳು ತನ್ನ ಕರುವಿನ ಬಗ್ಗೆ ಹೇಳಿಕೊಂಡದ್ದು ಪ್ರಕೃತಿ ; ಹುಲಿ ಕನಿಕರಿಸಿದ್ದು ಸಂಸ್ಕೃತಿ

ಒಂದನ್ನೊಂದು ತಾನು ತಿಂದು ಬದುಕುವುದು ಸಾವು - ಇದು ನಾಗರೀಕತೆಯ ಸಾವು,ಸಂಸ್ಕೃತಿಯ ನಾಶ

ಒಂದನ್ನೊಂದು ತಿಳಿದು ಬದುಕುವುದು ನಿಜವಾದ ಬದುಕು.........

ಹೀಗೆ ವ್ಯಾಖ್ಯಾನಿಸಿದ ಅವರು ಇಂದು ಕತೆಗಳನ್ನು ಕತೆಗಳಾಗಿ ಅನುಭವಿಸುವುದಲ್ಲ ಅದರಾಚೆಗಿನ ಸತ್ಯವನ್ನು ತಿಳಿಯಬೇಕು.ತಪ್ಪನ್ನು ಮಾಡುವುದು ವಿಕೃತಿ.. ನಾವು ಇದ್ದದ್ದೇ ಸರಿಯಲ್ಲ .. ತಿದ್ದುವುದು ಸಂಸ್ಕೃತಿ.. ಅದು ಇಂತಹ ಸಮಾರಂಭದ ಮೂಲಕ ಯುವಕರು ಅರಿತುಕೊಳ್ಳಬೇಕು ಎನ್ನುತ್ತಾ ಕೊನೆಯಲ್ಲಿ ಭರವಸೆಯೊoದನ್ನು ನೀಡಿ ಭಾಷಣ ಮುಗಿಸಿದರು.ನಂತರ ಸಮಾರಂಭದಿಂದ ನಿರ್ಗಮಿಸಿದರು ಕೂಡಾ.....!

ಮೊಯಿಲಿಯವರಿಗಿಂತ ಮೊದಲು ಅಕಾಡಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಸ್ಥಾಪಕಾಧ್ಯಕ್ಷ ಡಾ.ಕುರುಂಜಿ ವೆಂಕಟ್ರಮಣ ಗೌಡ ಯುವಜನಮೇಳದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ನಂತರ ಮಾತನಾಡಿ ಪಂಚಸೂತ್ರಗಳಿಂದ ಆರಂಭಿಸಿ ವಿದ್ಯೆಯ ಮಹತ್ವವನ್ನು ಹೇಳಿ ತಮ್ಮ ಸಾಧನೆಯನ್ನು ಹೇಳಿದರು.

ಸಭಾಧ್ಯಕ್ಷತೆಯನ್ನು ಜಿ.ಪಂ ಉಪಾಧ್ಯಕ್ಷೆ ಜಯಶ್ರೀ ಕೋಡಂದೂರು ವಹಿಸಿದ್ದರು .ವೇದಿಕೆಯಲ್ಲಿ ಜಿ.ಪಂ ಸದಸ್ಯ ವೆಂಕಟ್ ದಂಬೆಕೋಡಿ,ಭಾಗೀರಥಿ ಮುರುಳ್ಯ,ಸುಳ್ಯ ನಗರ ಪಂಚಾಯತ್ ಸದಸ್ಯ ಚಂದ್ರಕುಮಾರ್,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನ.ಸೀತಾರಾಮ,ಸುಳ್ಯದ ಮೀನಾಕ್ಷಿ ಗೌಡ,ರಾಜ್ಯ ಯುವಪ್ರಶಸ್ತಿ ವಿಜೇತ ಟಿ.ಎಂ.ಶಹೀದ್,ಸುಳ್ಯ ತಾ.ಪಂ ಅಧ್ಯಕ್ಷ ಶಂಕರ್ ಪೆರಾಜೆ,ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ವಿಶ್ವನಾಥ,ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಎಂ.ಸಿ.ರಮೇಶ್, ಮೊದಲಾದವರು ಭಾಗವಹಿಸಿದ್ದರು.

ಕಾರ್ಯಕ್ರಮವು ಭಾನುವಾರವೂ ನಡೆಯುತ್ತದೆ.

ಈ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಪಂಚಾಯತ್,ಯುವಜನ ಸೇವಾ ಕ್ರೀಡಾ ಇಲಾಖೆ,ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಸುಳ್ಯ, ಯುವಜನ ಸಂಯುಕ್ತ ಮಂಡಳಿ ಸುಳ್ಯ,ಮಿತ್ರ ಯುವಕ ಮಂಡಲ ಕೊಯಿಕುಳಿ,ನವೋದಯ ಯುವತಿ ಮಂಡಲಗಳ ಜಂಟಿ ಆಶ್ರಯದಲ್ಲಿ ನಡೆಸಿದ್ದವು.

ಕಾಮೆಂಟ್‌ಗಳಿಲ್ಲ: