10 ಫೆಬ್ರವರಿ 2008

ತುಳುನಾಡಿನಲ್ಲೀಗ "ಕೆಡ್ಡಸ"ದ ನೆನಪುಗಳು...

ಕೆಡ್ಡಸದ ಮಹತ್ವವನ್ನು ಹೇಳುತ್ತಾ ಮನೆ ಮನೆಗೆ ಸಾಗುವ ಭೂತನರ್ತಕ





ತುಳುನಾಡಿನ ಆಚರಣೆಗಳೆಲ್ಲವೂ ವಿಶೇಷ.ಮಳೆಗಾಲದಲ್ಲಿ ಆಟಿಯ ಸೊಬಗು,ಅದರ ವೈಜ್ಞಾನಿಕ ಹಿನ್ನೆಲೆಯು ಅತ್ಯಂತ ಸಕಾಲಿಕವಾಗಿ ಕಂಡುಬಂದರೆ ಈಗ "ಕೆಡ್ಡಸ"ವೂ ಕೂಡಾ ಅಷ್ಟೇ ಮಹತ್ವವನ್ನು ಪಡೆಯುತ್ತದೆ.ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕೆಡ್ಡಸ ಆಚರಣೆಯು ನಡೆಯುತ್ತಿದೆ.ಈಗ ಕೆಡ್ಡಸವು ಭಾನುವಾರದಿಂದ ಆರಂಭಗೊಂಡು ೩ ದಿನಗಳ ಕಾಲ ನಡೆಯುತ್ತದೆ.

ಪ್ರತೀ ಬಾರಿಯೂ ಜನವರಿ-ಫೆಬ್ರವರಿ ತಿಂಗಳಲ್ಲಿ ಬರುವ ಈ ಆಚರಣೆಯು ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಮಹತ್ವ ಪಡೆದಿದೆ.ಜಾನಪದ ಕಲೆಗಳ ತವರೂರು ಎನಿಸಿದ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಇಂದಿಗೂ ಈ ಆಚರಣೆಗೆ ಅತ್ಯಂತ ಮಹತ್ವವಿದೆ.ಕೆಡ್ಡಸ ಆರಂಭವಾಗುವ ಕೆಲ ದಿನಗಳ ಮೊದಲು ಊರಿನ ಜಾನಪದ ಹಾಗೂ ಭೂತನರ್ತನದ ಪ್ರಮುಖರು ಮನೆ ಮನೆಗೆ ತೆರಳಿ ಕೆಡ್ಡಸದ ಪಾಡ್ಡನವನ್ನು ಹೇಳಿ ಮನೆ ಮಂದಿ ನೀಡುವ ಹುಳಿ-ಮೆಣಸು ಹಾಗೂ ಇನ್ನಿತರ ವಸ್ತುಗಳನ್ನು ಪಡೆಯುತ್ತಾರೆ.ಮನೆಗಳಲ್ಲಿ ಹೇಳುವ ಪಾಡ್ಡನದಲ್ಲಿ ಕೆಡ್ಡಸದಂದು ನಡೆಯುವ ಊರಿನ ಕಟ್ಟುಪಾಡುಗಳನ್ನು ವಿವರಿಸುತ್ತಾರೆ. ಅದರಲ್ಲಿ ಊರಿನ ಭೂತಸ್ಥಾನದ ಬಾಗಿಲು ತೆರೆಯುವುದರಿಂದ ಆರಂಭಿಸಿ ಊರಿನ ಮಂದಿ ಶಿಕಾರಿಗೆ ತೆರಳುವುದು ,೩ ದಿನಗಳ ಕಾಲ ಹಸಿ,ಒಣಗಿದ ಮರಗಳನ್ನು ಮುರಿಯಬಾರದು, ಭೂಮಿ ಅದುರಬಾರದು ಎಂದು ವಿವರಿಸುತ್ತಾರೆ.ಆ ಪ್ರಕಾರ ೩ ದಿನಗಳ ಕಾಲ ಊರಿನ ಮಂದಿ ನಡೆದುಕೊಳ್ಳಬೇಕು ಎನ್ನುವುದು ವಾಡಿಕೆ.

"ಕೆಡ್ಡಸ"ವನ್ನು ಗ್ರಾಮೀಣರು ವಿವರಿಸುವುದು ಹೀಗೆ. ಆ ೩ ದಿನಗಳ ಕಾಲ ಭೂದೇವಿಯು ಋತುಮತಿಯಾಗಿರುತ್ತಾಳೆ.ಅಷ್ಟು ದಿನಗಳ ಕಾಲ ಭೂಮಿಯಲ್ಲಿರುವ ನಾವು ಸದ್ದಿಲ್ಲದೆ ಕುಳಿತುಕೊಳ್ಳಬೇಕು, ಭೂಮಿ ತಾಯಿಗೆ ಅರಶಿನ, ಎಣ್ಣೆ ಹಾಕಬೇಕು... ಎಂದು ಹೇಳುತ್ತಾರೆ.

ಆದರೆ ಈ ಆಚರೆಣೆಯ ಹಿಂದೆ ಒಂದು ತಾತ್ತ್ವಿಕವಾದ ಕಾರಣವಿರಬಹುದು. ವೈಜ್ಞಾನಿಕವಾಗಿ ಯೋಚಿಸಿದರೆ ವರ್ಷವಿಡೀ ಭೂಮಿಯಿಂದ ಲಾಭ ಪಡೆಯುವ ನಾವು ಕನಿಷ್ಟ ೩ ದಿನಗಳ ಕಾಲ ಭೂಮಿಗೆ ಸಮರ್ಪಿಸಬೇಕೆನ್ನುವ ಚಿಂತನೆಯಿರಬಹುದು.ಇನ್ನು ಊರಿನ ಜನತೆ ಶಿಕಾರಿಗೆ ಹೋಗಬೇಕು ಎನ್ನುವ ಕಲ್ಪನೆಯ ಹಿಂದೆ ನೋಡಿದರೆ ಕೃಷಿಗೆ ಹಾನಿಮಾಡುವ ಕಾಡು ಪ್ರಾಣಿಗಳನ್ನು ವರ್ಷಕ್ಕೊಂದು ಬಾರಿ ಇಡೀ ಊರೇ ಒಟ್ಟಾಗಿ ಕಾಡು ಪ್ರಾಣಿಯ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶವಿದ್ದಿರಬಹುದು.ಏಕೆಂದರೆ ಈಗಿನಂತೆ ತಾಂತ್ರಿಕ ಬೇಲಿಗಳು ಅಂದು ಇದ್ದಿರಲಿಲ್ಲ.ಇಂದು ಕಾಡು ಪ್ರಾಣಿಗಳು ತೀರಾ ವಿರಳವಾದ್ದರಿಂದ ಶಿಕಾರಿಯ ಮಾತು ಬರುವುದಿಲ್ಲ.

ಇಂತಹ ಆಚರಣೆಗಳು ಸಾಂಘಿಕ ಕಾರ್ಯಕ್ರಮಗಳು ಇಡೀ ಊರಿನ ಸಾಮರಸ್ಯಕ್ಕೆ ಕಾರಣವಾಗುತ್ತಿದ್ದವು.ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬನೂ ತುರ್ತಿನಲ್ಲಿರುವ ಕಾರಣ ಕೆಡ್ಡಸದಂತಹ ಸಾಂಘಿಕ ಆಚರೆಣೆಗಳು ನೆಲೆ ಕಳೆದುಕೊಳ್ಳುತ್ತಿವೆ.ಆದರೆ ಅಂತಹ ಆಚರಣೆಗಳನ್ನು ಮಾತ್ರವಲ್ಲ ಜಾನಪದೀಯ ಕಲೆಗಳನ್ನು ಇಂದಿಗೂ ಮೊಗ್ರದಂತಹ ಊರಿನಲ್ಲಿ ಬೆಳೆಸಿಕೊಂಡುಬಂದಿರುವುದು ನಿಜಕ್ಕೂ ಶ್ಲಾಘನೀಯ.

ಕಾಮೆಂಟ್‌ಗಳಿಲ್ಲ: