13 ಫೆಬ್ರವರಿ 2008

ಚಿಲ್ಲರೆ ಇಲ್ಲಾರಿ.....



ಚಿಲ್ಲರೆ ಸಮಸ್ಯೆ...!!!

ಚಿಲ್ಲರೆ ಇಲ್ಲಾಂದ್ರೆ ಆತ ತೋರಿಸುವುದು "ಚಿಲ್ಲರೆ" ಬುದ್ದಿಯನ್ನೇ.ಹಾಗಾಗಿ ನಾವೂ "ಚಿಲ್ಲರೆ"ಗಳಾಗುವ ಮೊದಲು ನಮ್ಮಲ್ಲಿ ಚಿಲ್ಲರೆ ರೆಡಿಯಾಗಿರುವುದು ಒಳ್ಳೆಯದಲ್ವಾ..!

ಮೊನ್ನೆ ಹಾಗೇ ಆಯಿತು.ಪತ್ರಿಕೆಯೊಂದನ್ನು ಪಡೆಯಲು 5 ರೂ ನೀಡಿದೆ.ಪತ್ರಿಕೆಗೆ 2.50 ರೂ ಅಲ್ವಾ.. ಅಂಗಡಿಯಾತ ನನಗೆ 2 ರೂ ನೀಡಿ 50 ಪೈಸೆಯ ಒಂದು ಚಾಕೋಲೇಟ್ ನೀಡಿದ.ಇದೇನು ಅಂತ ನಾನು ಕೇಳಿದೆ.ಆತ ಹೇಳಿದ "ಸಾರ್ ಚಿಲ್ಲರೆ ಇಲ್ಲ.." . ಹಾ.. ಸರಿ ಎಂದು ಸ್ವಲ್ಪ ಈ ಕಡೆ ಬಂದು ಪತ್ರಿಕೆ ನೋಡುತ್ತಾ ಚಿಂತಿಸಿದೆ.ಚಿಲ್ಲರೆಗೆ ಚಾಕೋಲೇಟ್... ಇದನ್ನು ಯಾರಿಗಪ್ಪಾ ನೀಡೋದು..? ಹೀಗೆ ವಿವಿಧ ಆಯಾಮಗಳಲ್ಲಿ ನೋಡಿದೆ. ನನಗೆ ಅಧಿಕಪ್ರಸಂಗ.ಸುಮ್ಮನೆ ತಲೆ ಹಾಳು ವಿಷಯಕ್ಕೆ ಯೋಚನೆಯೇಕೆ..? ಪತ್ರಿಕೆಯನ್ನು ಗಂಭೀರವಾಗಿ ಓದಿದೆ... ಹಾಗೇ "ಬಾಯಿ ಸಿಹಿ" ಮಾಡುತ್ತಾ....

ಮರುದಿನ ಅದೇ ಅಂಗಡಿಗೆ ಹೋಗಿ ಪತ್ರಿಕೆ ಪಡೆಯುವಾಗ 2 ರೂ ನೀಡಿ ಒಂದು ಚಾಕೋಲೇಟ್ ನೀಡಿದೆ. ಆತ ಇದೇನು ಇನ್ನು 50 ಪೈಸೆ......? ಎಂದು ರಾಗ ಎಳೆದ.ನಾನು "ಚಿಲ್ಲರೆ ಇಲ್ಲ.." ಎಂದೆ.ಆದ್ರೆ ಆತ ಒಪ್ಪ ಬೇಕೇ..? ಆದು ಆಗಲ್ಲ ಅಂತಾನೆ.ಹಾಗಿದ್ರೆ ನೀವು ನಿನ್ನೆ ಹೀಗೇ ಕೊಟ್ರಲ್ಲ ಎಂದರೆ.ಅದೂ.... ಇದೂ... ಅನ್ನುತ್ತಾ... ಚಿಲ್ಲರೆ ಇಲ್ಲಾಂದ್ರೆ ಪತ್ರಿಕೆ ಇಲ್ಲಾ ಅನ್ನುತ್ತಾನೆ...! ಏನಿದು ಅವಸ್ಥೆ..!?

ಕಾಲವೇ ಹಾಗೆ.ನನಗೊಂದು ನ್ಯಾಯ....... ನಿನಗೊಂದು ನ್ಯಾಯ...... ಅಲ್ವಾ..?

ಈ ಅಂಗಡಿಯವರು ಚಿಲ್ರೆ ಇದ್ರೂ ಒಂದು ಚಾಕೋಲೇಟ್ ಕೊಡುತ್ತಾರೆ.ಆಗ ಒಂದು ಪತ್ರಿಕೆಯ ಜೊತೆ ಒಂದು ಚಾಕೋಲೇಟ್ ಉಚಿತ ಎಂದರೂ ಪೈಸೆ 50..! ಆದರೆ ಅಂಗಡಿಯವನಿಗೆ 3 ರೂ ವ್ಯಾಪಾರ.ಒಟ್ಟು ಲಾಭ ಏನಿಲ್ಲವೆಂದರೂ 1 ರೂ..! ಹೇಗಿದೆ ವ್ಯವಹಾರ!.ಭಾನುವಾರ ಮತ್ತು ಶುಕ್ರವಾರ ಅಂಗಡಿಯಾತನಿಗೆ ನಷ್ಟವಂತೆ.ಅಂದು ಪತ್ರಿಕೆಗೆ 3 ರೂ ಅಲ್ವಾ..! ಈ ಚಿಲ್ಲರೆ ಬುದ್ದಿಯನ್ನು ಹೇಳಿದ್ದು ಇನ್ನೊಬ್ಬ ಅಂಗಡಿಯಾತ...! ಜನ ಹೆಚ್ಚಾಗಿ ಸುಮ್ಮನಿರುತ್ತಾರಂತೆ.ಯಾಕೆ ಗೊತ್ತಾ ಈ 50 ಪೈಸೆ ಏಕೆ ಚರ್ಚೆ?ಹೇಗಿದ್ರೂ ಒಂದು ಚಾಕೋಲೇಟ್ ನೀಡಿದ್ದಾನೆ ಇನ್ನೂ ಎರಡು ಪಡಕೊಂಡ್ರೆ ಮನೆ ಮಕ್ಕಳಿಗೆ ಆಗುತ್ತೇ ಅಂತ ಇನ್ನೆರಡು ಕೊಡಿ ಅಂತಾರೆ.ಹಾಗಾಗಿ ವ್ಯಾಪಾರ 5 ರೂ...!?. ಇದು ತಪ್ಪಲ್ಲ.ಅಂಗಡಿ ಹಾಕಿದ್ದು ವ್ಯಾಪರಕ್ಕಲ್ವಾ.ಅದರಲ್ಲಿನ Technic ಗೊತ್ತಿರಬೇಕಷ್ಟೆ...! ಹೀಗೆ....

ಚಿಲ್ಲರೆ ಅಂದಾಗ ಇನ್ನು ನೆನಪಾಗುವುದು ಬಸ್ ಕಂಡಕ್ಟರ್.ಸಾರ್ ಚಿಲ್ರೆ ಇಲ್ಲ ಇಳಿಯುವಾಗ ತಗೊಳ್ಳಿ ಅಂತ ಟಿಕೆಟ್ ಹಿಂದೆ ಬರೆಯುತ್ತಾನೆ.ನಮಗೂ ನೆನಪಿಲ್ಲ.ಆತನಿಗೆ ನೆನಪಿದ್ರೂ ನಮ್ಮನ್ನು ನೋಡುವಾಗ ಮರೆತಿರುತ್ತದೆ..!.ಬಸ್ಸಿಳಿದು ಮನೆಗೆ ಬಂದಾಗ ನೆನಪಾಗುತ್ತದೆ ಚಿಲ್ಲರೆ.ಇಂತಹ ಹತ್ತಾರು ಸಂಗತಿಗಳು,ಜಗಳಗಳೂ ನಡೆದದ್ದಿದೆ.ಅದೆಲ್ಲವೂ "ಚಿಲ್ಲರೆ"ಗಾಗಿ.ಹಾಗಾಗಿಯೇ ಸ್ವಲ್ಪ ಚಿಲ್ಲರೆ ನಿಮ್ಮಲ್ಲಿ ಸದಾ ಇರಲಿ.ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಚಿಲ್ಲರೆಯಾಗಿ ಯೋಚಿಸಿದ್ದು....! ಹೀಗೆ....!

ಕಾಮೆಂಟ್‌ಗಳಿಲ್ಲ: