17 ಫೆಬ್ರವರಿ 2008

ಭವಿಷ್ಯದ ವಿಷ್ಯ ಏನು..?



ಮೊನ್ನೆ ಮೊನ್ನೆಯ ಘಟನೆ.

ನೆನಪಿನ್ನೂ ಹಾಗೇ ಇದೆ...

ಇಂತಹ ಹಲವು ಘಟನೆಗಳು ಭಾರತದಾದ್ಯಂತ ಮಾತ್ರವಲ್ಲ ವಿಶ್ವದಾದ್ಯಂತ ನಡೆದಿದೆ.ಅದರಿಂದ ನಾವಾದರೂ ಕಲಿತ ಪಾಠ ಏನು?.ಆ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ?.

ದಾವಣಗೆರೆಯ ಹೊನ್ನಾಳಿಯಲ್ಲಿ ಇಬ್ಬರು ಬೈಕ್ ಚೋರರು ಸೆರೆಸಿಕ್ಕರು.ನಂತರ ಅವರಿಗೆ ಜಾಮೀನು ಸಿದ್ದಗೊಂಡಿತು.ಜೈಲ್ ಅಧಿಕಾರಿಗಳು ಸೂಕ್ಷ್ಮವಾಗಿ ಅವರನ್ನು ಗಮನಿಸಿದ ಕಾರಣದಿಂದಾಗಿ ಆರೋಪಿಗಳ ಹಿಂದಿನ ಸತ್ಯ ಬಯಲಾಯಿತು.ಅವರಿಬ್ಬರೂ "ಉಗ್ರ"ರು ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿತು.ನಂತರದ ಸಂಗತಿಗಳು ದಿನನಿತ್ಯದ ಪತ್ರಿಕೆಗಳಲ್ಲಿ ಬರುತ್ತಿದೆ.ಅವರ ಬಂಧನದ ನಂತರ ಹತ್ತು ಹಲವು ವಿಚಾರಗಳು ಹೊರಬಂದವು. ಐ ಟಿ ಕಂಪನಿಗಳಿಂದ ಹಿಡಿದು ನಮ್ಮ ಆರ್ಥಿಕ ವ್ಯವಸ್ಥೆ ,ಜನ ಸಾಮಾನ್ಯರ ನೆಮ್ಮದಿಗೆ ಭಂಗ ತರುವ ಹಲವು ವಿಚಾರಗಳು ಪೊಲೀಸರ ತನಿಖೆಯಿಂದ ಬಹಿರಂಗವಾಗುತ್ತಾ ಸಾಗಿ ಅವರ ಬೇರುಗಳ ಜಾಲಾಟ ನಡೆಯುತ್ತದೆ.ಇಂತಹ ಪ್ರಕರಣಗಳು ನಮ್ಮಲ್ಲಿ ಇದು ಮೊದಲಲ್ಲ.ಅಂತಹ ಆರೋಪಿಗಳಿಗೆ ಏಕೆ ಕಠಿಣ ಶಿಕ್ಷೆಯಾಗಬಾರದು?. ಆದರೂ ಏಕೆ ಶಿಕ್ಷೆಯಾಗುತ್ತಿಲ್ಲ?.ಸಂಸತ್ ಭವನದ ಮೇಲೇ ಧಾಳಿ ಮಾಡಿದವರ ಜೀವ ರಕ್ಷಿಸಿದ "ಪುಣ್ಯಾ"ತ್ಮರು ನಾವಲ್ಲವೇ?. ಹಾಗಿರುವಾಗ ಇಂದಿನ ಪ್ರಕರಣಕ್ಕೆ ಶಿಕ್ಷೆಯಾದೀತೆಂಬ ವಿಶ್ವಾಸ ಹೇಗೆ ಬರಲು ಸಾಧ್ಯ?. ಆದರೂ ಪೊಲೀಸರು ಶ್ರಮ ಪಟ್ಟು ಕೆಲಸ ನಿರ್ವಹಿಸುತ್ತಾರಲ್ಲಾ ಅದು ಗ್ರೇಟ್.

ಹೀಗೆ ಅನೇಕ "ಧಾಳಿ" ಪ್ರಕರಣಗಳು ನಮ್ಮ ಮುಂದೆ ಇರುವಾಗ.... ನಡೆದಿರುವಾಗ.... ನಮ್ಮ ಜನ ಏಕೆ ಇನ್ನೂ ಎಚ್ಚೆತ್ತುಕೊಂಡಿಲ್ಲ.?.ನಮ್ಮ ನಡುವೆ ಸಂಶಯಿತ ವ್ಯಕ್ತಿಗಳು ಸುಳಿದಾಡುತ್ತಿರುವಾಗ ನಾವೇ ಸ್ವತಹ ತನಿಖೆಗೆ ಮುಂದಾಗಿದ್ದೇವಾ..? ಏಕೆಂದರೆ ನಮಗಿನ್ನೂ ಎಚ್ಚರಿಕೆ ಬಂದಿಲ್ಲ.ಇಂದು ದಾವಣಗೆರೆಯ ಪ್ರಕರಣದಲ್ಲಿ ಯಾರೊಬ್ಬರಿಗೂ ಆಸಕ್ತಿ ಇದ್ದಂತೆ ತೋರುತ್ತಿಲ್ಲ. ಅಂತಹ "ಉಗ್ರ"ರು ಮಾಡಬಹುದಾಗಿದ್ದ ಪ್ರಕರಣಗಳನ್ನು ಗಮನಿಸಿದರೆ ಮುಂದಿನ ಭವಿಷ್ಯ ಅಷ್ಟು ಸುಲಭವಿಲ್ಲ ಎಂಬುದು ಗೋಚರವಾಗುತ್ತದೆ.

ಹೀಗಾಗಿ ನಮ್ಮ ಮುಂದಿನ ಬದುಕು ಭದ್ರ ಎನಿಸುವುದಿಲ್ಲ ಏಕೆ ಗೊತ್ತಾ.ಮನೆಯಿಂದ ಪೇಟೆಯ ಕಡೆಗೆ ಹೋದ ನಮ್ಮ ಅಣ್ಣಂದಿರು , ಅಕ್ಕಂದಿರು, ತಂದೆ, ತಾಯಿ ಮತ್ತೆ ಸುಭದ್ರವಾಗಿ ಮನೆಗೆ ಸೇರಬಹುದೆಂಬ ನಂಬಿಕೆ ಇಲ್ಲವಾಗಿದೆ.ನಗರದ ಯಾವುದೇ ಕಡೆಗಳಲ್ಲಿ ಅವಘಡಗಳು ನಡೆಯಬಹುದು. ಈಗ ಅದೂ ಅಲ್ಲ ಹಳ್ಳಿ ಹಳ್ಳಿಗಳೂ ಮುಂದೆ ಉಗ್ರರ ತಾಣವಾಗುಬಹುದು ಎನ್ನುವ ಆತಂಕ ಜನರಿಗೆ ಕಾಡಿದರೆ ಅಚ್ಚರಿಯಿಲ್ಲ.

ಇಂತಹ "ಉಗ್ರ" ಘಟನೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕಾನೂನು ಕ್ರಮ ಅಗತ್ಯವಿತ್ತು.ಒಮ್ಮೆ ಜಾರಿಯಾಗಿತ್ತು ಕೂಡಾ.ಆದರೆ ಅದಕ್ಕೆ ರಾಜಕೀಯ ಸ್ಪರ್ಶ ಸೋಂಕಿ ಆ ಕಾನೂನು ಇಲ್ಲವಾಯಿತು.ಇಂತಹ ರಾಜಕೀಯ ವಿಚಾರಗಳೇ "ಉಗ್ರ"ರೂಪಕ್ಕೆ ಕಾರಣವಾಗುತ್ತಿದೆ ಎಂದರೆ ತಪ್ಪಿಲ್ಲ.ಹೀಗಾಗಿ ಜನಸಾಮಾನ್ಯರಿಗೆ ನೆಮ್ಮದಿ ಇಲ್ಲವಾಗಿದೆ.ನಾವು ನಿರೀಕ್ಷಿಸದೇ ಬರುವ ಅವಘಡಗಳು ಒಂದೆಡೆಯಾದರೆ ಇವುಗಳೆಲ್ಲಾ ನಾವೇ ಬರಿಸಿಕೊಳ್ಳುವ ಅವಘಡಗಳೆಂದರೆ ತಪ್ಪಾಗಲಾರದು. ಹೀಗಾಗಿ ಮುಂದಿನ ಬದುಕು ನಿರೀಕ್ಷಿಸಿದಷ್ಟು ಸುಲಭವಿಲ್ಲ ಎನ್ನುವುದು ಗ್ಯಾರಂಟಿ.

ಬದುಕಿನ ಭದ್ರತೆಯ ಬಗ್ಗೆ ಮಾತನಾಡುವಾಗ ಇನ್ನೊಂದು ವಿಚಾರ ನೆನಪಿಗೆ ಬರುತ್ತಿದೆ.ಈಗ ನಗರದಲ್ಲಿ ಐಟಿ ಉದ್ಯಮಗಳಿಗೆ ಹೊಡೆತ ಆರಂಭವಾಗಿದೆ.ನಮ್ಮ ಎಲ್ಲಾ ಐಟಿ ಕಂಪನಿಗಳು ವಿದೇಶವನ್ನು ಅವಲಂಬಿಸಿರುವ ಕಾರಣ ಅಲ್ಲಿ ಆರ್ಥಿಕ ಪರಿಸ್ಥಿತಿಯು ನಮಗೆ ಹೊಡೆತವನ್ನುಂಟು ಮಾಡಿದೆ. ಇಗ ಡಾಲರ್ ಮೌಲ್ಯವು ಕುಸಿದ ಕಾರಣದಿಂದ ವಿದೇಶಿ ಕಂಪೆನಿಗಳಿಗೆ ಭಾರತದಲ್ಲಿ ನಷ್ಟವಾಗುತ್ತಿದೆ.ಇದರ ಪರಿಣಾಮ ಐಟಿ ಉದ್ಯೋಗಿಗಳಿಗೆ ಭೀತಿ ಆರಂಭವಾಗಿದೆ.ಈಗಾಗಲೇ ಪ್ರತಿಷ್ಠಿತ ಕಂಪನಿಯೊಂದು ಸುಮಾರು ೫೦೦ ಉದ್ಯೋಗಿಗಳನ್ನು ಕೆಲಸದಿಂದ ತಾತ್ಕಾಲಿಕವಾಗಿ ಬಿಡುಗಡೆ ಮಾಡಿದೆ. ಇನ್ನೂ ೩೦೦೦ ಮಂದಿಗೆ ಅಭದ್ರತೆ ಕಾಡಿದೆ.ಮುಂದೆ ಐಟಿ ಕಂಪನಿಗಳ ಭವಿಷ್ಯ ಹೀಗೆ ಮುಂದುವರಿಯುತ್ತಾ... ಅಥವಾ ಸುಧಾರಿಸುತ್ತಾ... ಎನ್ನುವ ಆತಂಕ ಇದ್ದೇ ಇದೆ. ಇಂತಹ ಘಟನೆಗಳು ನಮ್ಮ ಆರ್ಥಿಕ ವ್ಯವಸ್ಥೆ ಧಕ್ಕೆಯುಂಟು ಮಾಡುವ ಸಂದರ್ಭಗಳೂ ಇರುವುದರಿಂದ ಈಗಲೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.

ಹೀಗಾಗಿ ಮುಂದಿನ ಭವಿಷ್ಯವು ನಾವು ನೆನೆಸಿದಷ್ಟು ಸುಲಭವಾಗಿಲ್ಲ ಎನ್ನುವುದು ಈಗಲೇ ಗೋಚರವಾಗುತ್ತಿದೆ. ಹಳ್ಳಿಯ ಮಂದಿಯೂ ಚಿಂತಿಸಬೇಕಾದ ಕಾಲ ಬಂದಿದೆ.ಹಳ್ಳಿಯಲ್ಲಿ ಈಗ ನೆಮ್ಮದಿಯಿದ್ದರೂ ಮುಂದಿನ ದಿನಗಳ ಬಗ್ಗೆ ಯೋಚಿಸಬೇಕಾಗಿದೆ. ನಗರದ ಮಂದಿಗಂತೂ ಇತರ ಹತ್ತಾರು ತಲೆನೋವಿನ ನಡುವೆ ಈಗ ಉದ್ಯೋಗ ,ಉಗ್ರರ ಬಗ್ಗೆಯೂ ಚಿಂತಿಸಬೇಕಾದ ಅನಿವಾರ್ಯತೆಯಿದೆ.

1 ಕಾಮೆಂಟ್‌:

jomon varghese ಹೇಳಿದರು...

ನಮಸ್ತೆ,

ಮಹೇಶ್ ನಿಮ್ಮ ಬ್ಲಾಗ್ ಸೊಗಸಾಗಿದೆ. ಲೇ ಔಟ್ ಮತ್ತು ಚಿತ್ರಗಳು ಇಷ್ಟವಾದವು. ಬರೆಯುತ್ತಲಿರಿ..

ಧನ್ಯವಾದಗಳು.

ಜೋಮನ್.