26 ಫೆಬ್ರವರಿ 2008

ಹಳ್ಳಿಗಾಡಿನ "AC" ಮನೆಗಳು.....



ಹಳ್ಳಿಗಾಡಿನ ಎಸಿ ಮನೆಗಳು..!?

ಇದೇನು ಹೊಸದು ಅಂತ ಅಂದು ಕೊಂಡ್ರಾ?.ಇಲ್ಲ ಖಂಡಿತಾ ಇಲ್ಲ.ಹಳ್ಳಿಗಳಲ್ಲಿ ಕಾಣಸಿಗುವ ಮನೆಯಿದು.ಆದರೆ ಎಂಥಾ ಬೇಸಗೆಯಲ್ಲೂ ಈ ಮನೆಯೊಳಗೆ ತಂಪು... ಮಳೆ ,ಚಳಿಯಲ್ಲಿ ಬಿಸಿ..!.ಇದುವೇ ಹುಲ್ಲಿನ ಮನೆ.

ಹಳ್ಳಿಯೊಳಗೇ ಇರುವ ನಾನು ಮೊನ್ನೆ ಇನ್ನೊಂದು ಹಳ್ಳಿಯೊಳಗೆ ವಿಶೇಷ ವರದಿಯೊಂದರ ಹುಡುಕಾಟದಲ್ಲಿ ಸಾಗುತ್ತಿದ್ದಾಗ ಆಕಸ್ಮಿಕವಾಗಿ ಮನೆಯೊಂದು ಸಿಕ್ಕಿತು.ತಕ್ಷಣ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದು,ಮನೆಯ ಸನಿಹಕ್ಕೆ ಹೋದಾಗ ಅಜ್ಜಿಯೊಬ್ಬರು ಬಂದು "ದಾನೆ ಬತ್ತಾರ್..." [ಏನು ಬಂದಿರಿ..] ಎಂದು ವಿಚಾರಿಸಿದರು.ಮನೆ ಬಗ್ಗೆ ಕೇಳಿದೆ ಸುಮಾರು 15 ವರ್ಷ ಆಗಬಹುದು ಅಂದರು.ನಾನು ಹಾಗೆ ಮುಂದಕ್ಕೆ ಸಾಗಿದೆ....

ಅಲ್ಲಾ ಸ್ವಾಮಿ... ಆಫೀಸಲ್ಲಿ ,ಪೇಟೆ ಮನೆಯಲ್ಲಿ ಒಂದು ನಿಮಿಷ ಫ್ಯಾನ್ ತಿರುಗುವುದು ನಿಂತು ಬಿಟ್ರೆ ಏನು ಸೆಕೆಯಪ್ಪಾ... ಸೆಕೆ... ಉಸ್... ಅಂತ ಹೇಳುವ ಬದುಕು.ವಿದ್ಯುತ್ ಆಧರಿತ ಸಲಕರಣೆಗಳು ದಿನನಿತ್ಯದ ದಿನನಿತ್ಯದ ಬದುಕಿನಲ್ಲಿ ಅನುಕ್ಷಣದ ಅನಿವಾರ್ಯತೆಯಾಗಿ ಬಿಟ್ಟಿದೆ.ಹಾಗಾಗಿ ಎಲ್ಲೆಲ್ಲೂ ಸಲಕರಣೆಗಳದ್ದೇ ಸದ್ದು ಗದ್ದಲ.ಕನಿಷ್ಠ ಏರ್ ಕೂಲರ್ ಗಳಾದರೂ ಬೇಕೇ ಬೇಕು.ಫ್ಯಾನ್ ಇಲ್ಲದೆ ಬದುಕೇ ಇಲ್ಲವಾಗಿದೆ.

ಆದರೆ ಹಳ್ಳಿ ಜೀವನದಲ್ಲಿ ಮನೆ ಮಂದಿಗೆ "ಫ್ಯಾನ್" ಎನ್ನುವ ಬದುಕು ಇಲ್ಲವೇ ಇಲ್ಲ.ಯಾಕಂದ್ರೆ ಅಲ್ಲಿ ತಂಪೇ ತಂಪು..... ಅಲ್ಲಿ ವಿದ್ಯುತ್ ಸಲಕರಣೆಗಳ ಸದ್ದು ಗದ್ದಲದ ಬದಲು ಹಕ್ಕಿಗಳ ಕಲರವ,ಮಿಡತೆಗಳ ಇಂಪಾದ ಹಾಡುಗಳು...... ಒಟಗುಟ್ಟುವ ಕಪ್ಪೆಗಳು... ಇದಕ್ಕೆ ಅನುಗುಣವಾಗಿ ಮನೆಯ ವಿನ್ಯಾಸಗಳು, ಹುಲ್ಲಿನ ಛಾವಣಿ, ಮಣ್ಣಿನ ಗೋಡೆ, ಸೆಗಣಿ ಸಾರಿಸಿದ ನೆಲ,.... ಇದು ಹಳ್ಳಿಯ ಸೊಗಡನ್ನು ಹೆಚ್ಚಿಸುತ್ತದೆ.ಹಳ್ಳಿಯ ಕಲ್ಪನೆಗೆ ವಿಸ್ತಾರವಾದ ಮಜಲು ಸಿಗುತ್ತದೆ...

ನಗರದಲ್ಲಿ ಒಂದು ನಿಮಿಷ ಕರೆಂಟ್ ಇಲ್ಲದೆ ಇದ್ದರೆ ,ಎಸಿ ಇಲ್ಲದೇ ಹೋದರೆ ಬದುಕುವುದೇ ಕಷ್ಟವಾಗಿದೆ.ಆಫೀಸಲ್ಲಿ ಎಸಿ ಬೇಕೇ.. ಬೇಕು..
ನನಗೀಗಲೂ ನೆನಪು ಬರುತ್ತೆ.ನಾವು ಚಿಕ್ಕವರಿದ್ದಾಗ ಅಂತಹುದೇ ಮನೆ ನಮಗೂ ಇತ್ತು.ಛಾವಣೀ ಪೂರ್ತಿ ಹುಲ್ಲು,ಅದರ ಕೆಳಗೆ ಬಿದಿರಿನ ಛಾವಣಿ , ಸಲಾಕೆಗಳು.ಆ ಹುಲ್ಲಿಗಾಗಿ ಅಲೆದಾಟ, ಹುಲ್ಲು ಸಿಕ್ಕಿದ ನಂತರ ಛಾವಣಿಗೆ ಹುಲ್ಲು ಹಾಸುವ ಸಂಭ್ರಮ.ಅದಾದ ಬಳಿಕ ಶಿಖರದಲ್ಲಿ ತೆಂಗಿನ ಕಾಯಿ ಒಡೆಯುವುದು,ಮತ್ತೆರಡು ದಿನ ನೀರಿನ ಸಿಂಪಡಣೆ ... ಹೀಗೆ ನೆನಪಿನ ಬುತ್ತಿ ವಿಸ್ತಾರವಾಗುತ್ತಾ ಹೋಯಿತು. ಅದಕ್ಕೆ ಕಾರಣವಾದದ್ದು ಮೊನ್ನೆ ನನಗೆ ಕಾಣಸಿಕ್ಕ ಆ ಮನೆ.

ಆದರೆ ಈಗ ಅಂತಹ ಮನೆಗಳು ಹಳ್ಳಿಯಲ್ಲಿ ಬಲು ಅಪರೂಪ.ನಗರದಂತೆ ಹಳ್ಳಿಗಳಲ್ಲೂ ಕಾಂಕ್ರೀಟ್ ಕಾಡುಗಳು ಬೆಳೆಯುತ್ತಿದೆ.ಇದಕ್ಕೆ ನಾವು ಕೂಡಾ ಹೊರತಲ್ಲ.ಈ ಬಗ್ಗೆ ಇನ್ನೊಂದು ಮಗ್ಗುಲಲ್ಲಿ ಚಿಂತಿಸಿದರೆ ಕಾಂಕ್ರೀಟ್ ಕಟ್ಟಡಗಳು ಹಳ್ಳಿಗಳಲ್ಲಿ ಅನಿವಾರ್ಯ ಕೂಡಾ. ಮರ ಮಟ್ಟುಗಳ ಕೊರತೆ, ಹುಲ್ಲಿನ ಕೊರತೆ, ... ಹೀಗೆ ಸಮಸ್ಯೆಗಳು ಇದ್ದೇ ಇದೆ.ಹಾಗಾಗಿ ಕಾಂಕ್ರೀಟ್ ಕಾಡು ಎಂದರೂ ಇಂದಿಗೆ ಅದುವೇ ಪ್ರಸ್ತುತವಾಗಿದೆ.ಆದರೆ ಹಳ್ಳಿ ಸೊಗಡಿನ ಬಗ್ಗೆ ಚಿಂತಿಸಿದರೆ..... ದೇಹದಾರೋಗ್ಯದ ಬಗ್ಗೆ ನೋಡಿದರೆ....... ಸುಖ, ನೆಮ್ಮದಿಯ ಬಗ್ಗೆ ಗಮನಿಸಿದರೆ..... ಹಳ್ಳಿ ಹಳ್ಳಿಯಾಗಿ ಉಳಿಯುತ್ತಿಲ್ಲ ಅಂತ ಅನ್ಸುತ್ತೆ ಅಲ್ವಾ..?

ಕಾಮೆಂಟ್‌ಗಳಿಲ್ಲ: