12 ಫೆಬ್ರವರಿ 2008

ಗುರುವಿನ ಗುಲಾಮರು.... ಪ್ರತಿಭಟನೆಯ ಸುಲ್ತಾನರು..........





"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎನ್ನುವ ಕಾಲ ಈಗ ಮುಗಿದುಹೋಗಿದೆ.

ಈಗೇನಿದ್ದರೂ ಗುರುವಿಗೇ ತಿರುಮಂತ್ರ..!.ಈಗ ಅದೂ ಅಲ್ಲ ಗುರುವಿನ ವಿರುದ್ದವೇ ಪ್ರತಿಭಟನೆ...!ಅದೂ ಏಕವಚನದಲ್ಲಿ..!ಹೌದು ಇದು ನಡೆದಿದೆ.

ಹಾಗೆಂದು ಪೂರ್ಣ ವಿದ್ಯಾರ್ಥಿಗಳದ್ದೇ ತಪ್ಪು ಅಂತ ಅಲ್ಲ ಅವರನ್ನು ಅಲ್ಲಿ ಬೆಳೆಸಿದ್ದೇ ಹಾಗೇ..!ಅದರ ಒಂದು ರೂಪ ಈಗ ವ್ಯಕ್ತವಾಗಿದೆ ಅಷ್ಟೇ..!.

ನನಗೀಗಲೂ ನೆನಪಿದೆ.ಆಗ ನಾನು 7 ನೇ ತರಗತಿಯಲ್ಲಿದ್ದೆ.ನನ್ನ ಮಿತ್ರ ಕೃಷ್ಣಪ್ರಸಾದ ಸಹಿತ 5 ಮಂದಿ ಒಂದೇ ಬೆಂಚಲ್ಲಿದ್ದೆವು.ಒಮ್ಮೆ ಅಧ್ಯಾಪಕರೊಬ್ಬರು ನಾವು ಗಲಾಟೆ ಮಾಡಿದೆವೆಂಬ ಕಾರಣಕ್ಕೆ ಹೊಡೆದಿದ್ದರು.ಅದರಿಂದ ನನ್ನ ಮಿತ್ರರಿಗೆ ಹಾಗೂ ನನಗೂ ತೀವ್ರ ಗಾಯವೂ ಆಗಿತ್ತು.ಆಗ ನಾವಾರು ಅದನ್ನು ಮನೆಯಲ್ಲೂ ಹೇಳಿರಲಿಲ್ಲ.ಪ್ರತಿಭಟನೆಯ ಬಗ್ಗೆಯೂ ಚಿಂತಿಸಿರಲಿಲ್ಲ.ಅಂದರೆ ನಾವು ಪುಕ್ಕಲರು ಅಂತಲ್ಲ. ಅದು ಹೊಡೆದದ್ದು ಮೇಸ್ಟ್ರು ಅಂತ ಸುಮ್ಮನಿರುತ್ತಿದ್ದೆವು.ಆದರೆ ಈಗ ನೊಡಿ 5 ತರಗತಿಯವನು ಅಧ್ಯಾಪಕರನ್ನೇ ಗದರಿಸುತ್ತಾನೆ..!.ಅದಲ್ಲ ನಮಗೆ ಹೊಡೆದಿದ್ದ ಮೇಸ್ಟ್ರು ಈಗಲೂ ಸಿಕ್ಕಾಗ ಮಾತನಾಡುತ್ತಾ ಹೇಳುತ್ತಾರೆ "ನೀವಿದ್ದಷ್ಟು ಉತ್ತಮ ಬ್ಯಾಚ್ ಗಳು ಈಗಿಲ್ಲ" ಅವರೇ ನೆನಪಿಸಿ ನಾವು ಹೊಡೆದದ್ದು ನಿಮ್ಮ ಒಳ್ಳೆಯದಕ್ಕೇ ಅನ್ನುತ್ತಾರೆ. ನಾವು ಅದನ್ನು ಮರೆತಿದ್ದೀವಲ್ಲ ಸಾರ್ ಎಂದಾಗ ಅವರು ಹೌದಾ.... ಅಂತಾರೆ.ಮಂಗಳವಾರ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ನೋಡಿದ ನನಗೆ ನನ್ನ ಬಾಲ್ಯವೊಮ್ಮೆ ನೆನಪಾಗಿ ಬಿಟ್ಟಿತು.ವಿಷಯ ಅದಲ್ಲ......

ಇದು ನಡೆದದ್ದು ಸುಳ್ಯ ತಾಲೂಕಿನ ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ.ಅದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು.ರಾಜರಸ್ತೆ ಬದಿಯ ಕಾಲೇಜಿನ ಮಹಾದ್ವಾರದ ಬಳಿ ಕುಳಿತು "ಇದು ಅಧ್ಯಾಪಕರ" ವಿರುದ್ದದ ಪ್ರತಿಭಟನೆ ಎಂಬ ಬೋರ್ಡೊಂದನ್ನು ಹಾಕಿ ಸುಮಾರು 18 ವಿದ್ಯಾರ್ಥಿಗಳು ಧಿಕ್ಕಾರ ಕೂಗುತ್ತಿದ್ದರು.ಅವರಲ್ಲಿ ಒಬ್ಬ ನಾಯಕನಲ್ಲಿ ಕೇಳಲಾಯಿತು.. ಏನು ವಿಷಯ..?. ಆತ ಒಂದು ಜೆರಾಕ್ಸ್ ಪ್ರತಿಯನ್ನು ನೀಡಿದ.ಅದರಲ್ಲಿ ಸುಮಾರು 8 ಅಂಶಗಳಿದ್ದವು.ಆತ ಹೇಳಿದ,ನಮಗೆ ಈ ಶೈಕ್ಷಣಿಕ ವರ್ಷದಲ್ಲಿ ಅಧ್ಯಾಪಕರಿಂದ ಅನ್ಯಾಯವಾಗಿದೆ..... . ಆದರೆ ಆ 8 ಅಂಶಗಳಲ್ಲಿ ಪಾಠ-ಪ್ರವಚನಗಳ ಬಗ್ಗೆ ನೋಡಿದರೆ ಕಾಣಿಸಿದ್ದು ಕೇವಲ ಒಂದು ಮಾತ್ರಾ..!?. ಹಾಗಾದರೆ ಏನು ವಿಷಯ..?. ನಿಮಗೆ ಕುತೂಹಲವಿದ್ದರೆ ಇದನ್ನು ಓದಿ ನಂತರ ಅದರ ಕೆಳಗೆ ಓದಿ....

* ಕಾಲೇಜಿನ ಪ್ರಾಂಶುಪಾಲರು ಕಾಲೇಜಿಗೆ ಖಾಯಂ ಪ್ರಾಂಶುಪಾಲರಾಗಿದ್ದರೂ ವಾರದಲ್ಲಿ 2 ದಿವಸ ಮಾತ್ರಾ ಇಲ್ಲಿ ಕೆಲಸ ಮಾಡುತ್ತಾರೆ.

*ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾದ ಕೂಸಪ್ಪ ಇವರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಬೇಕಿದ್ದು ಕೇವಲ 2 ದಿವಸ ಕೆಲಸ ಮಾಡುತ್ತಾರೆ.

* ಈ ಶೈಕ್ಷಣಿಕ ವರ್ಷ ಫೆಬ್ರವರಿ 25 ಕ್ಕೆ ಮುಗಿಯಲಿದ್ದು ಯಾವುದೇ ಪಾಠ-ಪಠ್ಯೇತರ ಚಟುವಟಿಕೆಗಳನ್ನು ಸರಿಯಾಗಿ ಮುಗಿಸದೆ 15 ದಿವಸ ಮುಂಚಿತವಾಗಿ ತರಗತಿ ಕೊನೆಗೊಳಿಸಿದ್ದಾರೆ.

*ಈ ವರುಷ ಶಾಲಾ ಕ್ಯಾಲೆಂಡರ್ ಗೆ ಎಂದು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಕ್ಯಾಲೆಂಡರ್ ಕೂಡಾ ಕೊಡದೇ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ.

*ಪ್ರೌಡಶಾಲಾ ವಿಭಾಗದ ಶಿಕ್ಷಕರಾದ ನೀಲಪ್ಪ ಇವರು ಸ್ವಾತಂತ್ರ್ಯ ದಿನಾಚರಣೆಗೆ ವಿದ್ಯಾರ್ಥಿಗಳಿಂದ ತಲಾ 30 (500 ವಿದ್ಯಾರ್ಥಿ) ಸಂಗ್ರಹಿಸಿ ಕೇವಲ ಒಂದು ಲಾಡು ಕೊಟ್ಟು ಹಣ ನುಂಗಿ ಹಾಕಿರುತ್ತಾರೆ.

* ಪ್ರೌಡಶಾಲಾ ಶಿಕ್ಷಕ ನೀಲಪ್ಪ ಕಾಲೇಜಿನ ವಿಚಾರದಲ್ಲಿ ಮೂಗು ತೂರಿಸಿಕೊಂಡು ವಿದ್ಯಾರ್ಥಿಗಳಿಗೆ ಸದಾ ಬೈಯುವ ಕಾಯಕ ವಿದ್ಯಾರ್ಥಿನಿಯರ ಜೊತೆ ಮೈಮುಟ್ಟಿ ಮಾತನಾಡುವ ಕಾಮುಕ.

*ನಮ್ಮ ಕಾಲೇಜಿಗೆ ಕನ್ನಡ ಪಠ್ಯ ವಿಷಯಕ್ಕೆ ಸ್ವ ಇಚ್ಚೆಯಿಂದ ಬಂದ ಗೌರವ ಶಿಕ್ಷಕಿಯನ್ನು ನೀಲಪ್ಪ ಮಾಸ್ಟರ್ ಬೆದರಿಸಿ ಹಿಂದಕ್ಕೆ ಕಳುಹಿಸಿದ್ದಾರೆ.

* ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಭಾರತಿಯವರು ಕ್ಲಾಸಿನಲ್ಲಿ ಪ್ರವಚನಕ್ಕಿಂತ ಬೈಗುಳ ಸುರಿಮಳೆ ಸುರಿಸುತ್ತಾರೆ.

ಇದು ವಿದ್ಯಾರ್ಥಿಗಳ ಅನ್ಯಾದ ಪಟ್ಟಿ...!?.

ಈಗ ಈ ವಿವಾದ ಬರಲು ಕಾರಣವೇನು ಗೊತ್ತಾ ... ಅದನ್ನು ವಿದ್ಯಾರ್ಥಿಗಳು ವಿವರಿಸುವುದು ಹೀಗೆ...

ಈ ಶೈಕ್ಷಣಿಕ ವರ್ಷದಲ್ಲಿ ಇಷ್ಟೆಲ್ಲಾ ಅನ್ಯಾಯಗಳನ್ನು ಸಹಿಸಿಕೊಂಡ ನಾವು ಶೈಕ್ಷಣಿಕ ವರ್ಷದ ಬೇಡಿಕೆಯಾದ ಶಾಲಾ ವಾರ್ಷಿಕೋತ್ಸವ ,ಕ್ರೀಡೋತ್ಸವ ಮಾಡದೇ ನಮ್ಮ ಕೊನೆಯ ಬೇಡಿಕೆಯಾದ ಬೀಳ್ಕೊಡುಗೆ ಸಮಾರಂಭ ಮತ್ತು ಫೋಟೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಬೇಡಿಕೊಂಡೆವು ಅದನ್ನು ಮಾಡದೇ ನಮ್ಮನ್ನು ಕೆಟ್ಟ ರೀತಿಯಲ್ಲಿ ಬೈದು ಮನೆಗೆ ಅಟ್ಟಿದರು.ಹಾಗಾಗಿ ಈಗ ಪ್ರಾಂಶುಪಾಲರು ,ಉಪನ್ಯಾಸಕ ಕೂಸಪ್ಪ ,ಹಾಗೂ ಅಧ್ಯಾಪಕ ನೀಲಪ್ಪ ಇವರ ಧೋರಣೆ ವಿರುದ್ದ ನಮ್ಮ ಪ್ರತಿಭಟನೆ ಎನ್ನುವ ವಿದ್ಯಾರ್ಥಿಗಳು ನಮ್ಮ ಬೇಡಿಕೆ ಈಡೇರುವವರೆಗೂ ಶಾಂತಿಯುತ ಹೋರಾಟವನ್ನು ಮುಂದುವರಿಸುತ್ತೇವೆ ಎನ್ನುತ್ತಾರೆ.

ಇದಿಷ್ಟು ವಿದ್ಯಾರ್ಥಿಗಳ ಆರೋಪ.... ಅವರಿಗಾದ ಅನ್ಯಾಯ...!?.

ಈ ಬಗ್ಗೆ ಕಾಲೇಜನ್ನು ಕೇಳಿದರೆ ಯಥಾಪ್ರಕಾರ ವಿದ್ಯಾರ್ಥಿಗಳ ಮೇಲೇಯೇ ಆರೋಪ.ಅದು ಸರಿ ಬಿಡಿ ಎಲ್ಲೆಡೆಯೂ ಹಾಗೆ.ನಮ್ಮ ತಪ್ಪನ್ನು ನಾವು ಹೇಳುತ್ತೇವಾ...? ಹೇಳಿದ್ದುಂಟಾ...?

ಇಲ್ಲಿನ ಸಂಗತಿಗಳನ್ನು ಗಮನಿಸಿದರೆ,ವಿದ್ಯಾರ್ಥಿಗಳಿಗೆ ಅನ್ಯಾಯವಾದ ಸಂಗತಿಗಳಲ್ಲಿ ಗಂಭೀರವಾದದ್ದು ಕಾಣಿಸುವುದಿಲ್ಲ.ಆದರೂ ಏಕೆ ಪ್ರತಿಭಟನೆ.ಅದು ಏಕೆ ಗೊತ್ತಾ?. ಅಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳನ್ನು ಹಾಗೆ ಬೆಳೆಸಿದ್ದಾರೆ.ಗುರುವಿನ ಮಾರ್ಗದರ್ಶನ ಹೇಗಿರುತ್ತೋ ಹಾಗೇ ಅಲ್ವೇ ವಿದ್ಯಾರ್ಥಿಗಳು ಬೆಳೆಯೋದು.ನನಗೆ ಆತ್ಮೀಯರಾದ ಒಂದಿಬ್ಬರು ಉಪನ್ಯಾಸಕರಿದ್ದಾರೆ.ಅವರು ಗುತ್ತಿಗಾರಿನಲ್ಲಿ ಅಲ್ಲ.ಅದು ಪುಣ್ಯ. ಆ ಉಪನ್ಯಾಸಕರಿಗೆ ಇಂದಿಗೂ ವಿದ್ಯಾರ್ಥಿಗಳು ಎಂತಹ ಗೌರವ ನೀಡುತ್ತಾರೆ. ಒಬ್ಬ ವಿದ್ಯಾರ್ಥಿ ಅವರ ಬಗ್ಗೆ ಹೇಳುತ್ತಾನೆ, ಅವರು ನಿಜವಾದ "ಗುರುಗಳು"..! . ಅಂದರೆ ಅವರು ಪಾಠದ ಜೊತೆಗೆ ಇತರ ವಿಷಯಗಳ ,ತಮ್ಮ ಅನುಭವಗಳನ್ನು ಹೇಳುತ್ತಾರೆ.ಅದು ಸರಿಯಾಗೂ ಇರುತ್ತದೆ.ವಿದ್ಯಾರ್ಥಿಗಳಿಗೆ ಅದು ದಾರಿ ದೀಪವಾಗುತ್ತದೆ.

ಆದರೆ ಇಲ್ಲಿ ಹಾಗಲ್ಲ.ಅದಕ್ಕಾಗೆ ಗುತ್ತಿಗಾರಿನಲ್ಲಿ ಅಧ್ಯಾಪಕರ ವಿರುದ್ದವೇ ಪ್ರತಿಭಟನೆ.

ನಿಜವಾಗಲೂ ವಿದ್ಯಾರ್ಥಿಗಳು ಗಮನಿಸಬೇಕು.2 ವರ್ಷ ಪಾಠ ಹೇಳಿದ(ಅವರು ಮಾರ್ಗದರ್ಶನ ಮಾಡಿರದೇ ಇರಲಿ) ಗುರುಗಳನ್ನು ಹಾಗೆ ಬೀದಿ ಬದಿಯಲ್ಲಿ ಧಿಕ್ಕಾರ ಕೂಗುವುದು,ಏಕವಚನದಲ್ಲಿ ಕೂಗುವುದು ನಮ್ಮ ಸಂಸ್ಕೃತಿಯಲ್ಲ.ಅಧ್ಯಾಪಕರು ಸಂಸ್ಕೃತಿಯ ಪಾಠ ಮಾಡದೇ ಇರಲಿ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು.

ನಿಜವಾಗಲೂ ಒಂದು 10 ವರ್ಷದ ಹಿಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ಎಂತಹ ಅಜಗಜಾಂತರ...!? ಅಂದು ಗುರುವಿಗೆ ಕಲಿಸಬೇಕೆನ್ನುವ ಮನಸ್ಸಿತ್ತು. ಇಂದು ಹಣ ಮಾಡಬೇಕೆನ್ನುವ ಮನಸ್ಸಿದೆ....! ಹಾಗಾಗಿ ಈಗ ಆತಂಕವಾಗುತ್ತಿದೆ ನಮ್ಮ ಶಿಕ್ಷಣ ವ್ಯವಸ್ಥೆ ಎತ್ತೆ ಸಾಗುತ್ತಿದೆ, ಏನಾಗುತ್ತಿದೆ.ಇದಕ್ಕೆ ಕಾರಣರಾರು..?.ಇದಕ್ಕೇನು ಪರಿಹಾರ..?.ವಿದ್ಯಾರ್ಥಿಗಳ ಇಂದಿನ ಮನಸ್ಥಿತಿಯೇ....? ಸಮಾಜವಾ....?.ಉತ್ತರ ಮಾತ್ರಾ ಸಿಗುತ್ತಿಲ್ಲ...!.

ಕೊನೆಯ ಮಾತು : ಒಂದು ಸಂಸ್ಥೆಯ ಒಳಗಿನ ಗುಟ್ಟು ಗೊತ್ತಾಗುವುದು ಹೇಗೆ?.ಅಲ್ಲಿನ ಸಿಬ್ಬಂದಿಗಳೊಳಗೆ ಅಸಮಾಧಾನವಿದ್ದಾಗ ಮಾತ್ರಾ ತಾನೆ?.ಅದು ಶಿಕ್ಷಣ ಸಂಸ್ಥೆಗಳಲ್ಲೂ ಕಂಡುಬಂದರೆ ... ವ್ಯಕ್ತವಾಗುವುದು ವಿದ್ಯಾರ್ಥಿಗಳ ಮೂಲಕ ತಾನೆ..?. ಅದನ್ನೇ ವಿದ್ಯಾರ್ಥಿಗಳೂ ಮಾಡುವುದಲ್ಲವೇ. ಗುತ್ತಿಗಾರಿನ ಪ್ರತಿಭಟನೆಯಲ್ಲಿ ಸ್ವಲ್ಪ ಆ ಅಂಶವೂ ಕಂಡುಬಂತು.ಆದರೆ ಕ್ಲಾಸಿನಲ್ಲಿದ್ದ 58 ವಿದ್ಯಾರ್ಥಿಗಳ ಪೈಕಿ ಪ್ರತಿಭಟನೆಯಲ್ಲಿದ್ದದ್ದು ಕೇವಲ 18 ಮಂದಿ ಮಾತ್ರಾ..? ಹುಡುಗಿಯರಾರೂ ಇರಲಿಲ್ಲ..! ಈ 18 ಮಂದಿಗೆ ಮಾತ್ರಾ ಅನ್ಯಾಯವಾದದ್ದಾ.... ಅಂತ ಒಂದು ಅನುಮಾನ..

1 ಕಾಮೆಂಟ್‌:

Unknown ಹೇಳಿದರು...

if the students of that college read this article they will turn thier strike against you!!!!!
jagrathe mahesh puchchppady......