01 ಫೆಬ್ರವರಿ 2008

ಮೂಕ ಪ್ರಾಣಿಯ ವೇದನೆ....

ನೀನಾರಿಗಾದೆಯೋ ಎಲೆ ಮಾನವ....





ಸಮಯ ಸಂಜೆ ಗಂಟೆ 5.30 ಕಳೆದಿತ್ತು.

ಕೆಲಸದವರು ಮನೆಗೆ ತೆರಳುವ ಹೊತ್ತಾಗಿತ್ತಾದರೂ ನಿಂತಿದ್ದರು.ಯಾವುದೇ ಪಶುವೈದ್ಯರು ದೂರವಾಣಿ ಸಂಪರ್ಕಕ್ಕೆ ಸಿಗುತ್ತಿಲ್ಲ.ಅಂತೂ 5.35 ಕ್ಕೆ ಒಬ್ಬರು ವೈದ್ಯರು ಸಿಕ್ಕರು."ಸರ್ ..... ಕೂಡಲೇ ಬನ್ನಿ ಹಸುವಿಗೆ ಹುಷಾರಿಲ್ಲ ........ "ಎಂದು ದೂರವಾಣಿಯಲ್ಲಿ ಹೇಳಿ ಫೋನು ಕುಕ್ಕಿಯಾಯಿಗಿತ್ತು. ಮತ್ತೆ ನೆನಪಾಯಿತು.ಡಾಕ್ಟರ್ ಅವರ ಬೈಕ್ ಇಂದಿಲ್ಲ...! ಕೂಡಲೇ ಮತ್ತೆ ದೂರವಾಣಿ ರಿಂಗಿಸಿದಾಗ ಅತ್ತ ಕಡೆಯಿಂದ ಉತ್ತರವಿರಲಿಲ್ಲ.ಹಾಗಾಗಿ ಬೈಕ್ ಏರಿ ಹೊರಟಾಯಿತು.ಶಾಪಿಗೆ ತಲಪಿದಾಗ ಅವರು ಇನ್ನೊಂದು ಕಡೆ ಹೋಗಿಯಾಗಿತ್ತು...!?.ಅಂತೂ 5 ನಿಮಿಷ ಉದ್ವೇಗದಿಂದ ನಿಂತಿದ್ದಾಗ ವೈದ್ಯರು ಬಂದರು.ತಕ್ಷಣವೇ ಡಾಕ್ಟರ್ ಬೇರೆಯವರ ಬೈಕಲ್ಲಿ ಹೊರಟರು.ಹಸು ಆಗಲೂ ಮಲಗಿಕೊಂಡೆ ಇತ್ತು.ಹಟ್ಟಿಗೆ ಬಂದ ಡಾಕ್ಟರ್ ಟ್ರೀಟ್ ಮಾಡಲು ಆರಂಭಿಸಿದರು.ಒಂದು 5 ನಿಮಿಷವಾಗಿರಬಹುದು,ಕ್ಯಾಲ್ಸಿಯಂ ನೀಡುತ್ತಲೇ ಇದ್ದರು ಹಸು ಒಮ್ಮೆ ಅಂಬಾ..... ಎಂದಿತು.....!!. ವೈದ್ಯರು ಆಗಲೂ ಇನ್ನೊಂದು ಔಷಧಿಗೆ ತಯಾರಿ ನಡೆಸುತ್ತಿದ್ದರು.ನಮ್ಮ ಆಪ್ತ [ಕಾರ್ಯದರ್ಶಿ] ಕೆಲಸಗಾರ ಶ್ರೀಧರ ಕಣ್ಣ ಸನ್ನೆ ಮಾಡಿದ. ವೈದ್ಯರು ಹಸುವಿನ ಹೊಟ್ಟೆ,ಎದೆಯನ್ನು ಅಲುಗಾಡಿಸಿದರು...... ಮುಖ ನೋಡಿ ಛೆ....!! ಅಂದರು. ಮತ್ತೆ ಹೇಳಿದರು no more..! ಇಲ್ಲಿಗೆ ಹಸುವಿನ ಜೀವ ಹಾರಿಯಾಗಿತ್ತು. ವೈದ್ಯರ ಮುಖದಲ್ಲಿ ನೋವಿನ ಛಾಯೆ ... ತಂದೆಯವರು ಆಗ ತಾನೆ ಹೇಳಿದ್ದರು "ಹಸು ಈಗ ಎದ್ದು ನಿಲ್ಲುತ್ತೆ..." ಅಷ್ಟೂ ವಿಶ್ವಾಸವಿತ್ತು.. ಮನೆಮಂದಿಗೆ, ಕೆಲಸಗಾರರ ಮುಖದಲ್ಲೂ ವಿಷಾದದ ಛಾಯೆ.

ನಾನು ಇಷ್ಟೆಲ್ಲಾ ಹೇಳಿದ್ದು ಒಂದು "ಮೂಕ ಪ್ರಾಣಿ"ಯ ವೇದನೆಯೊಂದರ ಕತೆ.ನಮ್ಮ ಮನೆಯಲ್ಲೇ ಈ ಘಟನೆ ನಡೆದಿತ್ತು.ಆ ನೋವು ಈಗಲೂ ಮನಸ್ಸಿನಲ್ಲಿದೆ.ಏಕೆಂದರೆ ನಾವೆಲ್ಲಾ ಮಾತನಾಡುವ ಪ್ರಾಣಿಗಳು... ಅವುಗಳು ಪಾಪ ....! ಎಷ್ಟು ನೋವು ಅವುಭವಿಸಿರ ಬಹುದಲ್ವಾ..? ಅದು pregnent ಹಸು ಬೇರೆ. ಆ ಹಸು ಸತ್ತಾಗ ನಮಗೆಲ್ಲಾ ಅನಿಸಿದ್ದು .. ಛೆ ಅದು ಇದ್ದಿದ್ದರೆ .. ಅಷ್ಟು ಹಾಲು ಸಿಗುತ್ತಿತ್ತು..... ಇಷ್ಟು ಲಾಭ ಆಗುತ್ತಿತ್ತು... ಅಂತ ... ಅದು ಸಹಜವೇ. ನಾವು ಮನುಷ್ಯರಲ್ವಾ.!. ಆದ್ರೆ ಆ ದನದ ನೋವಿನ ಬಗ್ಗೆ....!?.

ಆ ಮೂಕ ಪ್ರಾಣಿಗೆ ಸಾಯುವ 3 ದಿನದ ಹಿಂದೆ ಜ್ವರ ಕಾಣಿಸಿಕೊಡಿತು.ತಕ್ಷಣವೇ ಪ್ರಮುಖ ಪಶು ವೈದ್ಯರೊಬ್ಬರನ್ನು ಕರೆಯಿಸಿ ಚಿಕಿತ್ಸೆ ನೀಡಲಾಗಿತ್ತು.ನಂತರ ಜ್ವರ ಕಡಿಮೆಯಾಗಿತ್ತಾದರೂ ತುಂಬಾ ನಿಶ್ಯಕ್ತಿಯಿಂದ ಬಳಲುತ್ತಿತ್ತು. ಆದರೂ ಚಿಕಿತ್ಸೆ ನೀಡುತ್ತಲೇ ಇತ್ತು.ಹಾಗೇ ದಿನ 3 ಆಗಿತ್ತು.ಕೊನೆಗೆ ಸಾವು ಸಂಭವಿಸಿತು.ಆಗ ತಿಳಿದದ್ದು ಅದಕ್ಕೆ "ಬೆಬಿಸಿಯಾ" ಎನ್ನುವ ಜ್ವರ.ಇದು ಉಣ್ಣಿಯಿಂದ ಹರಡುವ ಜ್ವರ.ಮಲೆನಾಡಿನ ಭಾಗದಲ್ಲಿ ಈ ಜ್ವರವಿದೆ ಅಂತ ನಮಗೂ ತಿಳಿದಿತ್ತು. ಈ ಮೊದಲು ನಮ್ಮಲ್ಲೆಲ್ಲಾ ಹಸುಗಳಿಗೆ ಬಂದಿತ್ತು... ನಾನೂ ಆ ಬಗ್ಗೆ ಲೇಖನವನ್ನೂ ಬರೆದಿದ್ದೆ. ಆದರೆ ಏನು ಈ ಬಾರಿ ನಮಗೆ ಆ ಜ್ವರದ ಲಕ್ಷಣಗಳೇ ತಿಳಿಯಲಿಲ್ಲ...!?.

ಪಾಪ ಹಸುಗಳು..!ಮೂಕಪ್ರಾಣಿಗಳ ವೇದನೆ ಏನಿರಬಹುದು?.ತಮ್ಮ ನೋವು ನಲಿವುಗಳನ್ನು ಅವು ಹಂಚಿಕೊಳ್ಳುವ ರೀತಿ.... ನೋವು ಅವುಭವಿಸುವ ರೀತಿ ..? ಅವುಗಳು ಪಡುವ ಯಾತನೆ..?.ವೈದ್ಯರುಗಳು Trail and error method ನಲ್ಲಿ ಔಷಧಿಯನ್ನು ನೀಡಬೇಕು.ಅವರ ಪ್ರತಿದಿನದ ಅನುಭವವನ್ನು ಪ್ರಯೋಗಿಸಿ ನೋಡಬೇಕು..!ಕೊನೆಗೆ ಯಾವುದಾದರೊಂದು ಔಷಧಿಯಲ್ಲಿ ಗುಣವಾಗುತ್ತದೆ.ಗೋವುಗಳು ನಮಗೆ ಮಾತೃಸಮಾನ ಅವಳು "ದೇವತೆ" ಅವಳಿಗೆ ಹೀಗೆ ನೋವುಗಳು ಬರಬಾರದು ಅಂತ ನಾವೆಲ್ಲಾ ಮನಸ್ಸಿನಲ್ಲಿ ಧ್ಯಾನಿಸುತ್ತೇವೆ... ಆದರೂ ಹೀಗೆಲ್ಲಾ ಒಮ್ಮೊಮ್ಮೆ ಆಗಿ ಬಿಡುತ್ತದೆ...?

ನಾವಾದರೂ ಮಾನವರು ನಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳಲು ಭಗವಂತ ಎಷ್ಟೊಂದು ಮಾಧ್ಯಮಗಳನ್ನು ,ಅವಕಾಶಗಳನ್ನು ಒದಗಿಸಿದ್ದಾನೆ...! ಆದರೂ ನಾವೇಕೆ ಹೀಗೆ..? ಆ ನೋವು-ನಲಿವುಗಳ ಅಭಿವ್ಯಕ್ತದ ನಡುವೆ ಮದ-ಮತ್ಸರಗಳು ನಮ್ಮ ನಡುವೆಯೇ ತಾಂಡವವಾಡುತ್ತವೆ..?ಇನ್ನೊಬ್ಬನ ಅವನತಿಯಲ್ಲೇ ಏಕೆ ಸಂತೋಷ ಪಡುತ್ತೇವೆ.. ಏಕೆ ಅವನ ಕಾಲೆಳೆಯುವ ಪ್ರಯತ್ನ ನಡೆಸುತ್ತೆವೆ.ಇದನ್ನೆಲ್ಲಾವೀಕ್ಷಿಸುವ ಭಗವಂತ ಅಂದರೆ"ಸೃಷ್ಠಿ" ನಮ್ಮನ್ನೆಲ್ಲಾ "ಗೋವು"ಗಳಂತೆ ಮೂಕರನ್ನಾಗಿಸಿದರೆ..?ಗೋವುಗಳಿಗೆ ಮಾತು ನೀಡಿದರೆ..?ಹೀಗೆ ನನ್ನಲ್ಲಿ ಚಿಂತನೆ ಹುಟ್ಟಿದ್ದು ನಮ್ಮನೆಯ ಗೋವೊಂದು ಸತ್ತಾಗ.ಆದರೆ ಆ ಚಿಂತನೆ ಕಾರ್ಯರೂಪಕ್ಕೆ ಬರದು ಎನ್ನುವ ಕಲ್ಪನೆ ನನಗಿದೆ.ಆದರೂ ಅತ್ಯಂತ ಶ್ರೇಷ್ಠ ಜೀವಿಯಾಗಿರುವ ಮನುಷ್ಯ ಏಕೆ ಹೀಗೆ ಎನ್ನುವ ನನ್ನ ಏಕಾಂತದ ಧ್ಯಾನಕ್ಕೆ ಉತ್ತರವೇ ಸಿಕ್ಕಿಲ್ಲ.

ನನಗಂತೂ ನನ್ನ ಕುಟುಂಬದವರು,ನನ್ನ ಮಿತ್ರರು,ನನ್ನ ಬಂಧುಗಳು ಎತ್ತರೆಕ್ಕೆ ಬೆಳೆದಷ್ಟು ,ಉನ್ನತ ಹುದ್ದೆಯಲ್ಲಿ ಸಾಗಿದಷ್ಟು ಖುಷಿಯಾಗ್ತಿದೆ.ಅವರೆಲ್ಲಾ "ನನ್ನವರಲ್ಲಾ" ಎನ್ನುವ ಅವ್ಯಕ್ತ ಭಾವನೆ ನನ್ನಲ್ಲಿದೆ.ಆದರೆ ಅದುವೇ ದೂರವಾದಾಗ ವೇದನೆಯಾಗುತ್ತದೆ.ಗೋವಿನ ವಿಚಾರದಲ್ಲೂ ನನಗಾದದ್ದೂ ಅದೇ.. ಛೇ ಹಾಗಾಗಬಾರದಿತ್ತು.ಆದರೆ ಇನ್ನೇನು....!?

2 ಕಾಮೆಂಟ್‌ಗಳು:

Unknown ಹೇಳಿದರು...

ಮಹೇಶ್ ಅವರೇ, ನೀವು ಹೇಳಿದಂತೆ ಪ್ರತಿ ಬಾರಿಯೂ ಪಶುವೈದ್ಯರು ಟ್ರಯಲ್ ಮತ್ತು ಎರರ್ ಪದ್ಧತಿಯಲ್ಲಿ ನೀಡುವುದಿಲ್ಲ. ಬಬೇಸಿಯ ರೋಗದ ಪತ್ತೆಯನ್ನು ರೋಗ ಚಿಹ್ನೆ ಹಾಗೂ ರಕ್ತ ಮಾದರಿಯ ಪರೀಕ್ಷೆಯ ಮೂಲಕ ಸುಲಭವಾಗಿ ಮಾಡಬಹುದು.ಯಾಕೆಂದರೆ ನಾನೂ ಒಬ್ಬ ಪಶುವೈದ್ಯ. ಆದರೆ ರಕ್ತ ಮಾದರಿ ಪರೀಕ್ಷೆ ಸರಳವಾದರೂ ಸೌಲಭ್ಯ ಬಹಳ ಕಡಿಮೆ ಸ್ಥಳಗಳಲ್ಲಿ ಲಭ್ಯವಿದೆ.
ಡಾ. ನವೀನ್ ಕುಮಾರ್ ಜಿ.ಟಿ.
drnaveengt@gmail.com

Unknown ಹೇಳಿದರು...

Namma hasuvige saleyagide yenu maadabeku