26 ಜುಲೈ 2008

ಕಳಚಿಕೊಂಡಿದೆ ಸಂಪರ್ಕದ ಕೊಂಡಿ...




ನಮ್ಮ ಹಳ್ಳಿಗಳು ಎಷ್ಟು ಸಂಕಷ್ಟವನ್ನು ಎದುರಿಸುತ್ತಿವೆ ಎಂಬುದನ್ನು ಇಲ್ಲಿ ನೋಡಿ. ಆದರೆ ಇಲ್ಲಿಯ ಜನ ಇದೊಂದು ಸಮಸ್ಯೆಯೇ ಅಲ್ಲ ಎಂಬ ರೀತಿಯಲ್ಲಿ ಬದುಕುತ್ತಾರೆ.ನಗರದಿಂದ ಬರುವ ಮಂದಿ ಒಂದು ಸಣ್ಣ ತೋಡು ದಾಟಲು ಹೆಣಗಾಡುತ್ತಾರೆ.ಆದರೆ ಈ ಜನ ನೋಡಿ. ಎಂತಹ ದೊಡ್ಡ ನದಿಯಿರಲಿ, ಹೊಳೆಯಿರಲಿ ಅದನ್ನು ದಾಟಿ ಹೋಗುತ್ತಾರೆ.ನೆಮ್ಮದಿಯ ಬದುಕು ಸಾಗಿಸುತ್ತಾರೆ. ಆದರೂ ನಮ್ಮ ಕಣ್ಣೋಟದಲ್ಲಿ ಕಂಡದ್ದು ಅಲ್ಲಿಯ ಸಮಸ್ಯೆಯೇ.ಅದನ್ನು ಇಲ್ಲಿ ಚಿತ್ರಿಸಿದ್ದೇನೆ.ಪರಿಹಾರ ಸಿಗುತ್ತೆ ಎಂಬ ಭರವಸೆಯಿಂದಲ್ಲ. ನನ್ನ ನೆಮ್ಮದಿಗಾಗಿ.

ನಗರದ ತಂತ್ರಜ್ಞಾನಗಳು ಹಳ್ಳಿಗೆ ತಲುಪಬೇಕು ಹಳ್ಳಿಯಿಂದ ಜೀವನಾವಶ್ಯಕ ವಸ್ತುಗಳು ನಗರಕ್ಕೆ ಬರಬೇಕು ಇದು ಸಾಮಾನ್ಯವಾದ ಒಂದು ಕಲ್ಪನೆ ಮತ್ತು ಚಿಂತನೆ.ಆದರೆ ಇಂದು ಬಹುತೇಕ ಹಳ್ಳಿಗಳು ನಗರವನ್ನು ಸಂಪರ್ಕಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ.ಅದಕ್ಕೆ ಉತ್ತಮ ನಿದರ್ಶನ ಸುಳ್ಯ ತಾಲೂಕಿನ ಅರಂತೋಡಿನಲ್ಲಿದೆ.ಮಳೆಗಾಲದ ಪೂರ್ತಿ ಅವರ ಬದುಕು ತೀರಾ ಕಷ್ಟದಾಯಕವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡು ಪಂಜ ಊರು ಪಂಜ ಎಂಬ ಊರಿದೆ.ಇಲ್ಲಿ ಸುಮಾರು 80 - ರಿಂದ 100 ರಷ್ಟು ಮನೆಗಳಿವೆ.ಈ ಊರಿನ ಜನತೆಗೆ ಅತ್ಯಂತ ಹತ್ತಿರದ ಪೇಟೆಯೆಂದರೆ ಕಲ್ಲುಗುಂಡಿ.ಇಲ್ಲಿ ಸಮಸ್ಯೆಯಾಗುವುದು ಮಳೆಗಾಲದ 6 ತಿಂಗಳುಗಳ ಕಾಲ.ಕಲ್ಲುಗುಂಡಿ ಮತ್ತು ಕಾಡುಪಂಜ ಊರುವನ್ನು ಸಂಪರ್ಕಿಸಲುವ ಮುನ್ನ ನದಿಯೊಂದು ಹರಿಯುತ್ತದೆ. ಮಳೆಗಾಲ ಪೂರ್ತಿ ಈ ನದಿ ತುಂಬಿ ಹರಿಯುವ ಕಾರಣ ಇಲ್ಲಿನ ಜನರಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಸುಮಾರು 10 ವರ್ಷಗಳ ಹಿಂದೆ ತಾತ್ಕಾಲಿಕ ತೂಗು ಸೇತುವೆಯನ್ನು ನಿರ್ಮಿಸಲಾಗಿತ್ತು.ಆದರೆ ಅದು ಕಳೆದ ಒಂದೆರಡು ವರ್ಷದಿಂದ ತುಂಡಾಗಿ ಬಿದ್ದು ನಡೆದಾಡಲು ಸಾಧ್ಯವಾಗುತ್ತಿಲ್ಲ.ಹಾಗಾಗಿ ಇಲ್ಲಿನ ಜನ ಕೆಲ ಅಂತರದ ದೂರವನ್ನು 10 ರಿಂದ 15 ಕಿ ಮೀ ದೂರ ಸುತ್ತಿ ಬಳಸಿ ಬರುವಂತಾಗಿದೆ.ಶಾಲಾ ವಿದ್ಯಾರ್ಥಿಗಳಿಗೂ ಇದರಿಂದಾಗಿ ತೊಂದರೆಯಾಗಿದೆ.

ಈ ಕಾಲು ಸೇತುವೆ ದುರಸ್ಥಿಗಾಗಿ ಸ್ಥಳೀಯ ಪಂಚಾಯತ್ ಪ್ರತೀ ವರ್ಷದ ಮಳೆಗಾಲದ ಆರಂಭಕ್ಕೆ ಮುನ್ನ ಕೊಂಚ ಹಣ ಮೀಸಲಿಟ್ಟು ದುರಸ್ಥಿ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತಿದ್ದರೂ ಶಾಶ್ವತ ಪರಿಹಾರ ಇದುವರೆಗೆ ಸಾಧ್ಯವಾಗಿಲ್ಲ.ಮಳೆಗಾಲ ಹೋಗುವ ಮುನ್ನವೇ ಮತ್ತೆ ಸೇತುವೆ ಮುರಿದು ಬಿಡುತ್ತದೆ. ಇದರಿಂದಾಗಿ ಕಾಡುಪಂಜ ಊರುಪಂಜದ ಜನತೆ ಮಳೆಗಾಲದ 6 ತಿಂಗಳುಗಳ ಕಾಲ ಸಂಪೂರ್ಣ ದ್ವೀಪದ ಬದುಕು ಸಾಗಿಸಬೇಕಾಗಿದೆ.

ಒಟ್ಟಿನಲ್ಲಿ ಗ್ರಾಮೀಣ ಪ್ರದೇಶವು ಒಂದಿಲ್ಲೊಂದು ಸಮಸ್ಯೆಗಳನ್ನು ಅನುಭವಿಸುತ್ತಲೇ ಇದೆ.ಯಾವುದೇ ಸರಕಾರಗಳು ಬರಲಿ ಹಳ್ಳಿಗಳ ಅಭಿವೃದ್ಧಿ ಮರೀಚಿಕೆಯಾಗಿದೆ ಎಂಬುದು ಈಗ ಜನಜನಿತವಾಗಿದೆ. ಹಾಗಾಗಿ ಈಗ ಮತ್ತೆ ಹಳ್ಳಿಗಳತ್ತ ಸರಕಾರ ಕಣ್ಣೂ ಹಾಯಿಸಬಹುದೇ ಕಾಡುಪಂಜ ಊರು ಪಂಜದ ಜನತೆಯ ಬಹುದಿನ ಬೇಡಿಕೆ ಈಡೇರಿತೇ ಎಂಬುದನ್ನು ಕಾದು ನೋಡಬೇಕಾಗಿದೆ.

ಇದಿಷ್ಟು ನನ್ನ ಕ್ಯಾಮಾರದ ಮುಂದೆ ಕಂಡದ್ದು ಮತ್ತು ಸಮಸ್ಯೆಯ ವರದಿ.

ನಾನು ಮತ್ತು ನನ್ನ ಮಿತ್ರ ಈ ಜಾಗಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಕೆಲಸ ಮಾಡುತ್ತಿದ್ದರು. ಹೋ..! ಇಲ್ಲಿ ಕೆಲಸ ಶುರುವಾಗಿದೆ ಅಂತ ನಾವು ಅಂದು ಕೊಂಡೆವು. ಹೊಳೆಯ ಅತ್ತ ಕಡೆ ಕೆಲಸದಲ್ಲಿ ತೊಡಗಿದ್ದವರಲ್ಲಿ ಏರು ಧ್ವನಿಯಲ್ಲಿ ಮಾತನಾಡಿದೆವು. ನಾವು ಮೀಡಿಯಾದವರು ಅಂತ ಗೊತ್ತಾದ ಮೇಲೆ ಆತ ನಮ್ಮ ಕಡೆ ಹೆಜ್ಜೆ ಹಾಕಿದ.ಇನ್ನೂ ಹಲವರು ಬಂದರು. ಬಳಿಕ ನಮ್ಮ ಹಲವಾರು ಪ್ರಶ್ನೆಗಳಿಗೆ ಉತ್ತರಿಸುತ್ತಾ " ನಾನು ಇದರ ಗುತ್ತಿಗೆದಾರ. ಈ ಸೇತುವೆಯ ಪುನರ್ ನಿರ್ಮಾಣದ ಕೆಲಸ ಮಾಡುತ್ತೇನೆ " ಎಂದೆಲ್ಲಾ ಹೇಳಿದ. ನಮಗನಿಸಿತು, ಈತನಿಗೆ ಇದರಲ್ಲಿ ಬಂಪರ್ ಲಾಭ ಪ್ರತೀವರ್ಷ ಪಂಚಾಯತ್ ಹಣ ಕೊಡುತ್ತದೆ ಇವನಿಗೂ ಪಂಚಾಯತ್ ನವರಿಗೂ ಸಮಪಾಲು - ಸಮಬಾಳು ಎಂಬ ನಿರ್ಧಾರಕ್ಕೆ ಬರುವಷ್ಟರಲ್ಲೇ ಆತ ಹೇಳಿದ " ಅಣ್ಣಾ ನೋಡಿ ಇದರಲ್ಲಿ ನನಗೇನೂ ಲಾಭವಿಲ್ಲ. ನನ್ನ ಕೈಯಿಂದಲೇ ಹಣ ಖಾಲಿಯಾಗುತ್ತದೆ.ನೀವು ಏನಾದರೂ ಮಾಡಿ ಇದನ್ನು ದುರಸ್ಥಿಯಾಗುವಂತೆ ಮಾಡಿ. ಶಾಶ್ವತ ಪರಿಹಾರ ಮಾಡಿ ಅಂತ ಹೇಳತೊಡಗಿದ.ಮತ್ತೆ ನೋಡಿದರೆ ಆತ ಅದೇ ಊರಿನ ವ್ಯಕ್ತಿ. ತನ್ನ ಗ್ರಾಮಕ್ಕಾಗಿ ಆತ ಪಂಚಾಯತ್ ನೀಡುವ ಕೊಂಚ ಹಣದಿಂದ ದುರಸ್ಥಿ ಮಾಡುತ್ತಾನೆ. ಪ್ರತೀ ವರ್ಷದಲ್ಲೂ ಆತನಿಗೆ ಇದೇ ಗತಿಯಂತೆ. ಹೀಗಾಗಿ, ಇನ್ನು ನನಗೆ ಈ ಕೆಲಸ ಬೇಡ ನಾನು ಏನಾದರು ಮಾಡಿ ಹೋಗುತ್ತೇನೆ ಎನ್ನುತ್ತಾನೆ.

ನನಗೆ ಅನ್ನಿಸಿದ್ದು ಅದಲ್ಲ.ಅಲ್ಲಿ ಕೋಟಿ ಕೋಟಿ ಲಾಭ ಹೊಡೆಯುವ ಜನರಿದ್ದರೆ ಇಲ್ಲಿ ಈತ ತನ್ನ ಕೈಯಿಂದಲೆ ಹಣ ಸುರಿದು ಊರಿನ ಸೇತುವೆ ನಿರ್ಮಾಣ ಮಾಡುತ್ತಾನಲ್ಲ. ಈತನಿಗೆ ಹಳ್ಳಿಯ ಬಗ್ಗೆ ಕಾಳಜಿ ಇದೆ ಅಂತಲ್ಲ, ಹಳ್ಳಿಗಾಗಿ ಕೆಲಸ ಮಾಡುತ್ತಾನಲ್ಲಾ. ಆ ಗುತ್ತಿಗೆದಾರನಿಗೆ ನಿಜಕ್ಕೂ ಒಂದು ಥ್ಯಾಂಕ್ಸ್.
ಗುತ್ತಿಗೆದಾರರು ಅಂದಾಕ್ಷಣ ಒಂದಷ್ಟು ಲಾಭವನ್ನು ಮಾಡುವುದಕ್ಕಾಗಿ ಕಳಪೆ ಕಾಮಗಾರಿ ಮಾಡುತ್ತಾರೆ ಎನ್ನುವ ಕಲ್ಪನೆಯನ್ನೇ ಜನ ಸಾಮಾನ್ಯರಲ್ಲಿ ಮಾತ್ರವಲ್ಲ ನನ್ನಂಥವರಲ್ಲಿ ಸದಾ ಗಟ್ಟಿಯಾಗುವಂತೆ ಮಾಡಿದ್ದ ಸಂಗತಿಯೊಂದಕ್ಕೆ ಇದು ಇನ್ನೊಂದು ಮಜಲನ್ನೂ , ಇನ್ನೊಂದು ಮುಖವನ್ನೂ ತೋರಿಸಿತು.

ಕಾಮೆಂಟ್‌ಗಳಿಲ್ಲ: