09 ಜುಲೈ 2008

ಚಿಕೂನ್ ಗುನ್ಯಾ ನಿವಾರಣೆಗೆ "ಯಜ್ಞ"ದ ಮೊರೆಹೋದರು....!!!





ಕರಾವಳಿ ಜಿಲ್ಲೆಯಾದ್ಯಂತ ಚಿಕೂನ್ ಗುನ್ಯಾ ಗುಮ್ಮ ನಲಿದಾಡಿತು.ಇಂದಿಗೂ ಜಿಲ್ಲೆಯಿಡೀ ಚಿಕೂನ್ ಗುನ್ಯಾ ಬಾಧಿಸಿದವರು ನರಳಾಡುತ್ತಲೇ ಇದ್ದಾರೆ. ಬೆಳ್ಳಂಬೆಳಗೆ ಏಳುವಾಗಲೇ ಗಂಟು ನೋವು ಕಾಡುತ್ತದೆ.ವೈದ್ಯಕೀಯವು ಈ ರೋಗದ ವಿಚಾರದಲ್ಲಿ ಸೋತಿದೆ ಎಂತಲೇ ವಿಶ್ಲೇಷಿಸಬೆಕಾಗುತ್ತದೆ.ಯಾವುದೇ ನಿಖರವಾದ ಔಷಧಿ ಚಿಕೂನ್ ಗುನ್ಯಾ ನಿವಾರಣೆಗೂ , ತಡೆಗಟ್ಟಲೂ ಇಲ್ಲ.ಅಲ್ಲಿ ಇಲ್ಲಿ ಹೇಳಿದ್ದೇ ಔಷಧಿ.ಹಾಗಾಗಿ ಜನರಿಗೆ ಮಾನಸಿಕವಾಗಿ ನೆಮ್ಮದಿಯಿಲ್ಲ.ಕಳೆದ 3 - 4 ತಿಂಗಳಿನಿಂದ ವಿಪರೀತವಾದ ನೋವಿನಿಂದ ಬಳಲುತ್ತಲೇ ಇದ್ದಾರೆ. ಈಗ ಬೇರೆ ವಿಧಿಯಿಲ್ಲದೆ ದೈವ ದೇವರುಗಳ ಮೊರೆ ಹೋಗಿದ್ದಾರೆ.ಅಂದು ಕರ್ನಾಟಕದ ಉತ್ತರ ಭಾಗದಲ್ಲಿ ಇಂತಹುದೇ ಕಾಯಿಲೆಯೊಂದು ಬಾಧಿಸಿದಾಗ ಆ ರೋಗಕ್ಕೆ ಕಾರಣವಾದ ವೈರಸನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ಊರಿನಿಂದಾಚೆ ಬಿಟ್ಟಿದ್ದರು.ಈಗ ಕರಾವಳಿಯಲ್ಲೂ ಇಂತಹುದೇ ಇನ್ನೊಂದು ಅವತರಣಿಕೆ ಶುರುವಾಗಿದೆ. ಇದೆಲ್ಲವೂ ಮಾನಸಿಕವಾದ ನೆಮ್ಮದಿಗಾಗಿ , ಊರಿನಿಂದ ಈ ರೋಗ ನಿವಾರಣೆಯಾಗಲಿ , ತನ್ನೊಳಗಿನ ರೋಗ ನಿವಾರಣೆಯಾಗಲಿ ಎಂಬ ಒಂದೇ ಒಂದು ಆಸೆಗಾಗಿ...
ಜಿಲ್ಲೆಯ ವಿವಿದೆಡೆ ಚಿಕೂನ್ ಗುನ್ಯಾ ನಿವಾರಣೆಗಾಗಿ ಯಜ್ಞ, ಯಾಗಾದಿಗಳು , ಪಾರಾಯಣಗಳು ನಡೆದಿವೆ.ಮೊತ್ತ ಮೊದಲ ಬಾರಿಗೆ ಸುಳ್ಯದಲ್ಲಿ ಇಂತಹ ಯಾಗವೊಂದು ಇತ್ತೀಚೆಗೆ ನಡೆಯಿತು. ಈಗ ಪುತ್ತೂರಿನಲ್ಲಿ ಬೃಹತ್ ಮಟ್ಟದಲ್ಲಿ ಜ್ವರ ಶಾಂತಿ ಹೋಮ ಹಾಗೂ ಧನ್ವಂತರಿ ಜಪ ಸಹಿತ ಯಜ್ಞ ನಡೆಯಿತು.ಈ ಯಜ್ಞವು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ವೇದ ಸಂವರ್ಧನ ಪ್ರತಿಷ್ಠಾನ ಪುತ್ತೂರು ಮತ್ತು ವ್ಯಕ್ತಿ ವಿಕಾಸ ಕೇಂದ್ರ ಮಂಗಳೂರು ವಲಯದ ನೇತೃತ್ವದಲ್ಲಿ ನಡೆಯಿತು.

ಯಜ್ಞದ ಉದ್ದೇಶ - ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾನಾ ವಿಧದ ರೋಗ ರುಜಿನಗಳು ತಾಂಡವವಾಡುತ್ತಿದೆ ಜನ ಸಾಮಾನ್ಯರ ಜೀವನವು ಜರ್ಝರಿತವಾಗಿ ಚಿಂತಾಜನಕ ಪರಿಸ್ಥಿತಿ ಉಂಟಾಗಿದೆ.ಆರೋಗ್ಯ ಶಾಸ್ತ್ರದ ವಿವಿಧ ಮಜಲುಗಳ ಪಾರಂಗತ ವೈದ್ಯರೂ ಸೋತಿದ್ದಾರೆ.ಈಗ "ಅನ್ಯಥಾ ಶರಣಂ ನಾಸ್ಥಿ"ಎಂದು ಭಗವಂತ ಮೊರೆ ಹೋಗಿ ಸಮಸ್ಥರಿಗೂ ಸನ್ಮಂಗಲ ಕರುಣಿಸು ಎಂದು ವೈದ್ಯರುಗಳ ದೇವತೆಯಾದ ಧನ್ವಂತರಿಯನ್ನೇ ಅರ್ಚಿಸಿ , ಪೂಜಿಸಿ ತೃಪ್ತಿ ಪಡಿಸಿ ಒಳಿತನ್ನು ಕಾಣಬೇಕಾಗಿದೆ.ಈ ಧನ್ವಂತರೀ ದೇವರ ಅರ್ಚನೆಯಿಂದ ಜ್ವರ , ಮೂಲವ್ಯಾಧಿ,ಹೃದಯದ ರೋಗ, ಕುಷ್ಠ ರೋಗ, ಕಿವಿ,ಕಣ್ಣು, ಆಮ್ಲ ಪಿತ್ತಾತಿಸಾರ, ಮತ್ತಿತರ ಮಾರಕ ರೋಗಗಳು ನಾಶವಾಗುತ್ತವೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆಯಾದ್ದರಿಂದ ಈಗ ಯಜ್ಞವೇ ಅನಿವಾರ್ಯ.
ಆಧುನಿಕ ವೈದ್ಯಕೀಯ ಆವಿಷ್ಕಾರದಲ್ಲಿ ಕೂಡಾ ಚಿಕೂನ್ ಗುನ್ಯಾ , ಡೆಂಗ್ಯೂ,ಇಲಿ ಜ್ವರ ,ಮಂಗನ ಕಾಯಿಲೆ ಇತ್ಯಾದಿಗಳಿಗೆ ನಿರ್ದಿಷ್ಠವಾದ ಹಾಗೂ ಸಪರ್ಪಕವಾದ ಔಷಧಿಗಳಿಲ್ಲ.ಹೀಗಾಗಿ ಈ ನೂತನ ರೋಗಗಳ ನಿವಾರಣೆಗಾಗಿ ಲೋಕಕಲ್ಯಾಣಾರ್ಥವಾಗಿ ಈ ಧನ್ವಂತರೀ ಹಾಗೂ ಜ್ವರಶಾಂತಿ ಹೋಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸುತ್ತಾರೆ.

ಏನಿದು ಧನ್ವಂತರಿ...

ಶ್ರೀ ಧನ್ವಂತರಿಯು ದೇವತೆಗಳ ವೈದ್ಯನು.ಅಮೃತಕ್ಕಾಗಿ ದೇವತೆಗಳೂ ದೈತ್ಯರೂ ಸೇರಿ ಕ್ಷೀರ ಸಮುದ್ರವನ್ನು ಮಂಥನ ಮಾಡಿದಾಗ ಈತನು ಕ್ಷೀರ ಸಮುದ್ರದಿಂದ ಅಮೃತ ಕಲಶವನ್ನು ಹಿದಿದುಕೊಂಡು ಆವಿರ್ಭವಿಸಿದನು.ಧನ್ವಂತರಿಯು ಮಹಾವಿಷ್ಣುವಿನ ಅಂಶಾವಾತಾರವೆಂದು ಭಾಗವತದಲ್ಲಿ ಹೇಳಿದೆ.ಧನ್ವಂತರಿಯು ಭೂಲೋಕದಲ್ಲಿ ಆಯುರ್ವೇದವನ್ನು ಪುನರುಜ್ಜೀವನಗೊಳಿಸಿ ಪ್ರಚಾರಕ್ಕೆ ತಂದವನಾಗಿದ್ದಾನೆ ಎಂಬುದು ಉಲ್ಲೇಖ.ಬ್ರಹ್ಮನು ಆಯುರ್ವೇದವನ್ನು ಮೊದಲು ದಕ್ಷ ಪ್ರಜಾಪತಿಗೆ ಉಪದೇಶಿಸಿದನು ನಂತರ ದಕ್ಷನಿಂದ ಅಶ್ವಿನೀ ದೇವತೆಗಳು ಅಧ್ಯಯನ ನಡೆಸಿದರು ಆ ಬಳಿಕ ವಿವಿಧ ದೇವತೆಗಳೂ ಉಪದೇಶ ಪಡೆದು ಭೂಲೋಕದಲ್ಲಿ ಪ್ರಚಾರವಾಯಿತು ಎಂದು ಗ್ರಂಥಗಳು ಹೇಳುತ್ತವೆ.ಹೀಗೆಯೆ ಬ್ರಂಹ್ಮಾಂಡ ಪುರಾಣವನ್ನು ನೋಡಿದರೆ ಅಲ್ಲಿ ಧನ್ವಂತರಿ ಜಪ , ಹೋಮ, ವೃತ, ಪೂಜಾದಿಗಳಿಂದ ಜ್ವರ, ಮೂಲವ್ಯಾಧಿ, ಹೃದಯ ರೋಗ.ಇತ್ಯಾದಿ ಅನೇಕ ರೋಗಗಳಿಂದ ಬಾಧಿತನಾದ ಮನುಷ್ಯರು ಸಾ ರೋಗದಿಂದ ಮುಕ್ತರಾಗುತ್ತಾರೆ ಎಂದು ಹೇಳಿದೆ.

ಒಟ್ಟಿನಲ್ಲಿ ಇಂದು ಲೋಕದಲ್ಲಿ ವಿವಿಧ ಕಾರಣಗಳಿಗಾಗಿ ಮಾನಸಿಕವಾದ ನೆಮ್ಮದಿ ಕಡಿಮೆಯಾಗಿದೆ. ಈ ನಡುವೆಯೇ ಅಲ್ಲಲ್ಲಿ ಭಯಾನಕ , ಕಡಿಮೆಗೊಳ್ಳದ ರೋಗಗಳು , ಚಿಕೂನ್ ಗುನ್ಯಾದಂತಹ ನಿರಂತರ ಕಾಡುವ ಜ್ವರಗಳೂ ಕಾಣಿಸಿಕೊಂಡ ಕಾರಣ ಜನ ಮಾನಸಿಕವಾಗಿ ಜರ್ಝರಿತರಾಗಿದ್ದಾರೆ.ಹಾಗಾಗಿ ಯಜ್ಞ , ಯಾಗಾದಿಗಳಿಂದಲಾದರೂ ನೆಮ್ಮದಿ ಸಿಗುತ್ತಾ ಅಂತ ಹುಡುಕುತ್ತಿರ ಬಹುದಾ??.

ಕಾಮೆಂಟ್‌ಗಳಿಲ್ಲ: