01 ಡಿಸೆಂಬರ್ 2023

ಕುಲ್ಕುಂದ ಜಾನುವಾರು ಜಾತ್ರೆ...!

ಒಂದು ಸಂಪ್ರದಾಯ, ಒಂದು ಸಂಸ್ಕೃತಿ, ಒಂದು ಇತಿಹಾಸ...

ನಾವೆಲ್ಲಾ ಸಂಸ್ಕೃತಿ ಉಳಿಸುವ ಬಗ್ಗೆ ಮಾತನಾಡುತ್ತಲೇ ಇರಬೇಕಾದರೆ , ಸದ್ದಿಲ್ಲದೇ ಒಂದು ಸಂಸ್ಕೃತಿ , ಒಂದು ಐತಿಹಾಸಿಕ ಘಟನೆಯೊಂದು ಮರೆಯಾಗಿ ಬಿಟ್ಟಿತು. ಕೇವಲ ಸಾಂಕೇತಿಕವಾಗಿ ಉಳಿದುಕೊಂಡಿತು.

ಸುಮಾರು 10 ವರ್ಷಗಳ ಹಿಂದೆ ಅಂದರೆ , ಅದು 2012. ಅಂದು ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಚರ್ಚೆ, ಗದ್ದಲ. ಎಲ್ಲಾ ಮೀಡಿಯಾಗಳೂ ಅಲ್ಲೇ ಇದ್ದವು ಕೆಲವು ದಿನ...!.

ಕುಲ್ಕುಂದ ಜಾನುವಾರು ಜಾತ್ರೆ ಮೂಲಕ ಕಸಾಯಿಖಾನೆಗೆ ಗೋವುಗಳು ಸಾಗಾಟ ಮಾಡಲಾಗುತ್ತದೆ. ಇದಕ್ಕಾಗಿ ಈ ಆಚರಣೆ ನಿಲ್ಲಬೇಕು ಎಂಬುದು ಚರ್ಚೆಯ ಸಾರಂಶವಾಗಿತ್ತು. ಈ ಚರ್ಚೆಗೆ ನಿಜವಾಗಿಯೂ ಅಂದು ಅರ್ಥ ಇತ್ತು. ಕಸಾಯಿಖಾನೆಗೆ ಎತ್ತುಗಳು, ಕೋಣಗಳು ಸಾಗಾಟ ಆಗುತ್ತಿತ್ತು ಕೂಡಾ.

ಆದರೆ ಇದರ ತಡೆ ಹೇಗೆ ? ಈ ಬಗ್ಗೆ ಚರ್ಚೆ ಆಯಿತು. ಆಗ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಿಂದಲೇ ವ್ಯವಸ್ಥೆ ಮಾಡಿಸಿಕೊಂಡು, ಈ ಸಂಪ್ರದಾಯ ಉಳಿಯಬೇಕು, ಸಂಸ್ಕೃತಿ ಉಳಿಯಬೇಕು ಹಾಗೂ ಗೋವುಗಳು ಕುಲ್ಕುಂದಲ್ಲಿ ಇರಬೇಕು, ಬರಬೇಕು ಎಂದು ಯೋಚಿಸಿಕೊಂಡು , ಜಾನುವಾರು ಜಾತ್ರೆಯ ಸಮಯದಲ್ಲಿ ಗೋತಳಿ ಪ್ರದರ್ಶನ ಹಾಗೂ ಗೋವಿಗೆ ಸಂಬಂಧಿಸಿದ ಕಾರ್ಯಗಳು, ಸಮ್ಮೇಳನ ಇತ್ಯಾದಿ ನಡೆಸುವುದು ಹೆಚ್ಚು ಸೂಕ್ತ ಎಂದು ನಿರ್ಧರಿಸಲಾಗಿತ್ತು.  ಆ ಪ್ರಕಾರ ಕೆಲವು ಸಮಯ ಹಾಗೇ ನಡೆಯಿತು.

ಆದರೆ‌ ಜಾನುವಾರು ಜಾತ್ರೆ‌ ನಡೆಸುವ ಜವಾಬ್ದಾರಿ ಪಂಚಾಯತ್ ಮೇಲೆ ಇದೆ ಎಂದೂ ಅಂದು ಚರ್ಚೆಯಾಗಿತ್ತು. ಸಂಪ್ರದಾಯ ಉಳಿಸುವ ನೆಲೆಯಲ್ಲಿ ದೇವಸ್ಥಾನದ ವತಿಯಿಂದ ನಡೆಸುವುದು ಸೂಕ್ತ ಎಂದು ಅಂದು ಅಲಿಖಿತವಾದ ಮಾತುಕತೆ ನಡೆದಿತ್ತು‌,‌"ಹಿರಿಯರ" ಮುಂದೆ...!. ಈಗ ಅದೆಲ್ಲವೂ ಮಾಯವಾಗಿದ್ದೇಕೆ ಎಂಬುದು ಗೊತ್ತಿಲ್ಲ. ಮುಂದಿನ ಬೆಳವಣಿಗೆ‌ ಗೊತ್ತಿಲ್ಲ. 

ಈ ಚಿತ್ರ 2011 ರಲ್ಲಿ ತೆಗೆದದ್ದು


ಈಗ ಮುಖ್ಯವಾಗಿ ಕುಕ್ಕೆ ಕ್ಷೇತ್ರದಲ್ಲಿ ಬಹುಶ: ಇಂತಹ ಆಚರಣೆ ನಡೆಸುವುದಕ್ಕೆ ಅನುದಾನದ ಕೊರತೆ ಇರಲಿಕ್ಕಿಲ್ಲ. ಇದೊಂದು ಐತಿಹಾಸಿಕ ಘಟನೆ, ಇತಿಹಾಸ ಕೂಡಾ ಇದೆ. ನಾವು ಯಾವುದೋ ಜಯಂತಿ ಆಚರಣೆ ಮಾಡುವುದಕ್ಕೆ ವಿರೋಧ ಮಾಡುತ್ತೇವೆ, ನಾವು ಗೋವುಗಳ ರಕ್ಷಣೆ ಬಗ್ಗೆ ಮಾತನಾಡುತ್ತೇವೆ, ನಾವು ಗೋವು ಸಾಕುವಂತೆ ಒತ್ತಾಯ ಮಾಡುತ್ತೇವೆ... ಈ ಎಲ್ಲಾ ಗದ್ದಲಗಳ ನಡುವೆ, ನಮ್ಮದೇ ಒಂದು ಆಚರಣೆಯನ್ನು ನಡೆಸುವುದಕ್ಕೆ ನಮಗೆ ಮರೆತೇ ಹೋಯಿತೇ....!?.

ಗೋವು ಉಳಿಸುವುದರಿಂದ, ಗೋವಿನ ಪ್ರೀತಿ ಬೆಳೆಸುವುದರಿಂದ ಯಾವ "ರಾಜಕೀಯ" ಲಾಭವೂ ಇಲ್ಲ...!, ಅದೇ ಗೋವು ಕಸಾಯಿಖಾನೆಗೆ ಸಾಗಾಟವಾದರೆ, ಅದರಿಂದ ಮಾತ್ರವೇ "ರಾಜಕೀಯ" ಲಾಭ ಇದೆ...!. ಇಷ್ಟೇ ಇಂದಿನ ಜಗತ್ತು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ...!

ಕಾಮೆಂಟ್‌ಗಳಿಲ್ಲ: