10 ಡಿಸೆಂಬರ್ 2023

ಮೌನವಾದವರ ಮನಸಿನ ಮಾತು ಕೇಳುವವರು ಯಾರು.. ..?


ಕಲ್ಲಡ್ಕಕ್ಕೆ ಕುಮಾರಸ್ವಾಮಿ ಭೇಟಿ ನೀಡಿದರು. ಸ್ವಾಗತಾರ್ಹ ಸಂಗತಿ. ಯಾರನ್ನೇ ಆದರೂ ಬದಲಾವಣೆಗೆ, ತಪ್ಪುಗಳ ಬಗ್ಗೆ ಅರಿವಾಗಿ ಮನಪರಿವರ್ತನೆಯಾದರೆ ಸ್ವಾಗತಿಸಬೇಕಾದ್ದು  ನಮ್ಮ ಧರ್ಮ. ಹೀಗಾಗಿ ಕುಮಾರಸ್ವಾಮಿ ಅವರ ಮನಸ್ಸು ಬದಲಾದ್ದಕ್ಕೆ, ಅವರಿಗೆ ತಪ್ಪು ಮಾಹಿತಿ ನೀಡಿರುವುದು, ತಪ್ಪು ಮಾಹಿತಿ ತಿಳಿದುಕೊಂಡದ್ದಕ್ಕೆ ಅವರಿಗೂ ವಿಷಾದವಿದೆ. ಈಗ ಎಲ್ಲವನ್ನೂ ಒಪ್ಪಿಕೊಂಡು ಶಾಲೆಗೆ ಭೇಟಿ ನೀಡಿರುವುದು ಸ್ವಾಗತಾರ್ಹ. 

ಕಲ್ಲಡ್ಕ ಶಾಲೆಯ ಬಗ್ಗೆಯೂ ಎರಡು ಮಾತಿಲ್ಲ. ಸಂಸ್ಕೃತಿ, ಪರಂಪರೆ ಸೇರಿದಂತೆ ನಮ್ಮ‌ ಮೌಲ್ಯಗಳನ್ನು ಎತ್ತಿ ತೋರಿಸುವ ಶಿಕ್ಷಣ ಸಂಸ್ಥೆ. ಇಲ್ಲಿನ ಎಲ್ಲಾ ಚಟುವಟಿಕೆಗಳೂ ಮಕ್ಕಳ ಬೆಳವಣಿಗೆಗೆ ಧನಾತ್ಮಕ ಪರಿಣಾಮ ಬೀರುತ್ತದೆ.


ಕುಮಾರಸ್ವಾಮಿ ಅವರು ಶಿಕ್ಷಣ ಸಂಸ್ಥೆಗೆ ಭೇಟಿ ನೀಡುವುದರಲ್ಲಿ ಯಾವ ವಿಶೇಷತೆಯೂ ಇಲ್ಲ. ಆದರೆ ವಿಭಿನ್ನವಾದ ಚಿಂತನೆಗಳನ್ನು ಇರಿಸಿಕೊಂಡು, ಶಿಕ್ಷಣ ಸಂಸ್ಥೆಯ ಚಟುವಟಿಕೆಯನ್ನು ವಿರೋಧಿಸಿಕೊಂಡು ಈಗ ಅದೇ ಶಾಲೆಗೆ ಬಂದಿರುವುದು ಮಾತ್ರಾ ಚರ್ಚೆಯಾದ್ದು ಅಷ್ಟೇ. ಏಕೆಂದರೆ ವ್ಯಕ್ತಿ ನಿರ್ಮಾಣ, ವ್ಯಕ್ತಿಯ ಚಿಂತನೆಗಳನ್ನು ಭಾರತೀಯತೆಯ ಕಡೆಗೆ ಬದಲಾಯಿಸುವುದೇ ಇಷ್ಟೂ ವರ್ಷಗಳ ಕಾಲ ಅನೇಕರು ಮಾಡಿಕೊಂಡು ಬಂದಿರುವುದು, ಕಲ್ಲಡ್ಕದ ಶಿಕ್ಷಣ ಸಂಸ್ಥೆ ಕೂಡಾ ಅದನ್ನೇ ಮಾಡುತ್ತಿದೆ.

ಇಲ್ಲಿ ಅತ್ಯಂತ ಗಮನಾರ್ಹವಾದ ಸಂಗತಿ ಎಂದರೆ, ಅಷ್ಟೂ ವರ್ಷಗಳ ಕಾಲ ಅಂದರೆ ಎಳವೆಯಿಂದಲೇ ಮೂಲ ಚಿಂತನೆಯಲ್ಲಿ ಅಂದರೆ ಭಾರತ, ದೇಶ, ರಾಷ್ಟ್ರೀಯತೆ ಎಂದು ಹೇಳುತ್ತಾ ಊರಿಡೀ ಓಡಾಡಿದವರು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಇತ್ಯಾದಿಗಳಿಂದ ದೂರ ಇದ್ದು ಸಂಘಟನೆ ಮಾಡುತ್ತಾ ಸಾಗಿದ ಅನೇಕರು ಇಂದು ಕರಾವಳಿ ಜಿಲ್ಲೆಯಲ್ಲಿ ಮೌನವಾಗುತ್ತಾ ಸಾಗುತ್ತಿದ್ದಾರಲ್ಲಾ...!. ಇದಕ್ಕೆ ಕಾರಣ ಏನು ಎಂಬುದು ಬಹಳ ಮುಖ್ಯವಾಗಿದೆ. ಈ ಸಂಖ್ಯೆ ಬೆಳೆಯುತ್ತಿದೆ. ಕೆಲವರು ಬೇರೆಡೆ ಸಾಗಿದ್ದಾರೆ. ಇನ್ನೂ ಕೆಲವರು ಮೌನವಾಗಿದ್ದಾರೆ. ಇಂತಹ ಕೆಲವರನ್ನೂ ಟೀಕಿಸುವುದಿದೆ. ಯಾವತ್ತೂ ಹೊಸಬರ ಸ್ವಾಗತದ ಜೊತೆಗೆ ಅನೇಕ ವರ್ಷಗಳಿಂದ ಸಕ್ರಿಯವಾಗಿದ್ದವರನ್ನು ಮತ್ತೆ ಸಕ್ರಿಯ ಮಾಡುವ ಕೆಲಸ ಬಹುದೊಡ್ಡದು. ಇದು ಶಕ್ತಿ ನೀಡುವ ಕಾರ್ಯ. ಕುಮಾರಸ್ವಾಮಿ ಅವರು ರಾಜಕೀಯ ಫಿಗರ್‌ ಆಗಿರಬಹುದು, ತಪ್ಪು ಅರಿವಾಗಿ ಬದಲಾದವರು ಆಗಿರಬಹುದು. ರಾಜಕೀಯದಲ್ಲಿ ಈ ತಪ್ಪುಗಳ ಅರಿವಾಗುವುದು ಏಕೆ ಎಂಬುದು ಎಲ್ಲರಿಗೂ ತಿಳಿದಿರುವ ವಾಸ್ತವ.  

ಆದರೆ ನಿಜವಾಗಿಯೂ ಬದುಕನ್ನು ತೇಯ್ದವರು, ಸಮಯ ನೀಡಿದವರು, ಸಮಯ ಕಳಕೊಂಡವರು, ಮನೆಯವರ ಜೊತೆಗೆ ಸಮಯ ಕೊಡಲಾಗದೆ ಸಂಘಟನೆ ಎಂದು ಓಡಾಡಿದವರು, ಏನೂ ತಪ್ಪು ಮಾಡದೆ ಮೌಲ್ಯಗಳ ಜೊತೆ ಬದುಕಿದವರ ಮನಸಿನ ಮಾತನ್ನು ಕೇಳುವವರು ಯಾರು, ಅವರ ಮೆಲುದನಿಗೆ ಧ್ವನಿ ಆಗುವವರು ಯಾರು...?


ಕಾಮೆಂಟ್‌ಗಳಿಲ್ಲ: