01 ಡಿಸೆಂಬರ್ 2023

ಹಿಂದುತ್ವ ಮತ್ತು ಕರಾವಳಿ...!

 ಕರಾವಳಿ ಎಂದರೆ ಹಿಂದುತ್ವ. ಈಚೆಗೆ ಅದು ಮತ್ತೆ ಮತ್ತೆ ಸಾಬೀತಾಗುತ್ತಿದೆ.  ಆದರೆ ಕಳೆದ ಕೆಲವು ಸಮಯಗಳಿಂದ ಕರಾವಳಿ ಜಿಲ್ಲೆಯಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲೆಯಲ್ಲಿ‌ ಒಂಥರಾ ಒಳಜಗಳ. ಅಂದರೆ ಹಿಂದುತ್ವದ ಗುಂಪುಗಳಲ್ಲೇ ಒಳಜಗಳ. ಕಳೆದ ಬಾರಿಯ ಚುನಾವಣೆಯಲ್ಲಿ ಪುತ್ತೂರಿನಲ್ಲಿ ಅದರ ಫಲಿತಾಂಶ ಪ್ರಕಟವಾಯಿತು. ಈಗಲೂ ಮತ್ತೆ ಮಂಗಳೂರು ಕ್ಷೇತ್ರದಲ್ಲಿ ಅದೇ ವಾತಾವರಣ ಸೃಷ್ಟಿಯಾಗುತ್ತಿದೆ. ಕಾರಣ ಏನು..? 

ಕೆಲವು ಸಮಯದ ಹಿಂದೆ ಒಂದು ಖಾಸಗಿ ಸಂಸ್ಥೆ, ಅವರದೇ ಕಾರಣಕ್ಕೆ  ರಾಜಕೀಯ ಕಾರಣಕ್ಕೆ ಸಮೀಕ್ಷೆ ನಡೆಸಿತು. ಆಗ ಅವರ ರಾಜಕೀಯ ಹಾಗೂ ಆಂತರಿಕ ಕಾರಣದಿಂದ ಸಮೀಕ್ಷೆ ನಡೆಸಿದ್ದರಿಂದ ಗೌಪ್ಯವಾಗಿಟ್ಟಿತ್ತು. ಕರಾವಳಿ ಹಾಗೂ ಅಭಿವೃದ್ಧಿ ಎನ್ನುವ ಕಾರಣದಿಂದ ನನ್ನಲ್ಲೂ ಖಾಸಗಿಯಾಗಿ ಮಾತನಾಡಿದ್ದ ಕಾರಣದಿಂದ ಇದರ ಫಲಿತಾಂಶದ ಬಗ್ಗೆ ಆಗಾಗ ಕೇಳುತ್ತಲೇ ಇದ್ದೆ,  ಒಂಚೂರು ಮಾಹಿತಿ ನೀಡಿದ್ದರು.

ಕರಾವಳಿ ಜಿಲ್ಲೆ ಎನ್ನುವುದು ಹಿಂದುತ್ವದ ಹೆಸರಿನಲ್ಲಿಯೇ ಗೆಲ್ಲುತ್ತದೆ. ಇಲ್ಲಿ ಅಭಿವೃದ್ಧಿಗಿಂತಲೂ ಮುಖ್ಯವಾಗಿ ಹಿಂದುತ್ವವೇ ಮುಖ್ಯವಾಗುತ್ತದೆ. ಇದಕ್ಕಾಗಿ ಸಣ್ಣ ಸಣ್ಣ ಸಂಗತಿಯೂ ಇಲ್ಲಿ ಬಹುಮುಖ್ಯವಾಗುತ್ತದೆ. ಇಲ್ಲಿ ಜಾತಿಯ ಹೆಸರಿನಲ್ಲಿ ಗೆಲ್ಲುವುದು ಸಾಧ್ಯವಿಲ್ಲ. ಹಿಂದುತ್ವ ಮಾತ್ರವೇ ಸಾಕಾಗುತ್ತದೆ, ಅಭಿವೃದ್ಧಿ ಕಡಿಮೆ ಇದ್ದರೂ ಪರವಾಗಿಲ್ಲ. ಅದಕ್ಕಾಗಿಯೇ ಕೆಲವು ಘಟನೆ ನಡೆಯುತ್ತದೆ, ಬೆಳೆಯುತ್ತದೆ ಎಂದಿದ್ದರು.  ಇಲ್ಲಿ ಯಾವ ಪಕ್ಷವೇ ಆಗಲಿ, ಹಿಂದುತ್ವ ಬಿಟ್ಟು ಇಲ್ಲಿ ಗೆಲ್ಲುವುದು ಕಷ್ಟ. ಆದರೆ ಈಚೆಗೆ ಇಲ್ಲಿ ಟ್ರೆಂಡ್‌ ಬದಲಾಗುತ್ತಿದೆ ಹಿಂದುತ್ವದ ಹೆಸರಿನ ರಾಜಕೀಯ ಸಾಮಾನ್ಯರಿಗೂ ತಿಳಿಯುತ್ತಿದೆ, ಹೀಗಾಗಿ ಬದಲಾವಣೆ ಸಾಧ್ಯತೆ ಇದೆ  ಎನ್ನುವುದು ಆ ಸಮೀಕ್ಷಾ ವರದಿ ಹೇಳಿತ್ತು.ಅದರ ಸಣ್ಣ ರಿಸಲ್ಟ್‌ ಪುತ್ತೂರು ಚುನಾವಣೆ. ಇದು ಕರಾವಳಿ ಜಿಲ್ಲೆಯ, ಅದರಲ್ಲೂ ಮಂಗಳೂರು ಜಿಲ್ಲೆಯ ಭವಿಷ್ಯದ ಕನ್ನಡಿ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವಕ್ಕೆ  ಪುತ್ತೂರು ಮತ್ತೆ ಪ್ರಯೋಗ ಶಾಲೆಯಾಯಿತು. ಕರಾವಳಿ ಜಿಲ್ಲೆಯಲ್ಲಿ ಸುಳ್ಯ ಹಾಗೂ ಪುತ್ತೂರು ಹಿಂದುತ್ವದ ಪ್ರಯೋಗಶಾಲೆಯ ಹಾಗೆ. ಇಂದು ಇದೆರಡೂ ಕ್ಷೇತ್ರದಲ್ಲಿ ಹಿಂದುತ್ವವೇ ಮತ್ತೆ ಮತ್ತೆ ಎದ್ದು ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಹಿಂದುತ್ವದ ಹೆಸರಿನಲ್ಲಿ ಗೆದ್ದರು, ಶಾಸಕನಾಗಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಗೆದ್ದರೂ ಹಿಂದೂ ವಿರುದ್ಧವಾದ ಯಾವ ಚಟುವಟಿಕೆಯೂ ಮಾಡಿಲ್ಲ, ಹೀಗಾಗಿ ಅವರಿಗೆ ಈಗ ಪ್ಲಸ್‌ ಆಗಿದೆ..!.ಆದರೆ ಬಿಜೆಪಿ, ಸಂಘಪರಿವಾರ ಇನ್ನಷ್ಟು ಕುಸಿದಿದೆ. ಯಾಕೆ ಕುಸಿದಿದೆ...?.ಯಾವತ್ತೂ ಇಷ್ಟೊಂದು ಕುಸಿದಿರಲಿಲ್ಲ. ಅಂದು ಶಕುಂತಳಾ ಶೆಟ್ಟಿ ಅವರು ಸ್ವಾಭಿಮಾನಿಯಾಗಿ ಸ್ಫರ್ಧೆ ಮಾಡಿದಾಗಲೂ ಬಿಜೆಪಿ-ಸಂಘಪರಿವಾರ ತನ್ನ ಸಾಮರ್ಥ್ಯವನ್ನು ಪ್ರದರ್ಶನ ಮಾಡಿತ್ತು.ಅದು ನಿಜಕ್ಕೂ ಪ್ರಯೋಗಶಾಲೆಯೂ ಆಗಿತ್ತು.


ಈಚೆಗೆ ಅರುಣ್‌ ಕುಮಾರ್‌ ಪುತ್ತಿಲ ಅವರ ನೇತೃತ್ವದಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಬಗ್ಗೆ ಪೂರ್ವಬಾವಿ ಸಭೆ ನಡೆದಿತ್ತು. ಪ್ರೀತಿಯಿಂದ ಸಭೆಗೆ ಆಹ್ವಾನಿಸಿದ್ದರು, ಹೋಗಿದ್ದೆ. ಸಭೆಯಲ್ಲಿ ಅಧಿಕ ಪ್ರಮಾಣದಲ್ಲಿ ಜನರು ಸೇರಿದ್ದರು. ನನಗೆ ಅಚ್ಚರಿ ಆಗಿತ್ತು. ಆ ನಂತರ ವಿಚಾರಿಸಿದೆ, ಒಂದು ದಿನದ ಮುಂದೆ ಕರೆ ಮಾಡಿ ಆಹ್ವಾನಿಸಿದ ಸಭೆ ಅದು. ಚುನಾವಣೆ ಮುಗಿದ ಬಳಿಕವೂ ಅಷ್ಟೊಂದು ಪ್ರಮಾಣದಲ್ಲಿ ಸೇರಿದ ಜನರು ಹಾಗೂ ಭಾಗವಹಿಸಿದ ಬಹುತೇಕ ಜನರು ಕೂಡಾ ಸಿದ್ಧಾಂತದ, ಹಿಂದುತ್ವ ಎನ್ನುತ್ತಿದ್ದವರೇ ಇದ್ದರು. ಅಚ್ಚರಿ ಆಯ್ತು, ಚುನಾವಣೆ ಮುಗಿದ ನಂತರವೂ ಅದೇ ಪ್ರಮಾಣದಲ್ಲಿ ಪುತ್ತಿಲ ಅವರ ಬೆಂಬಲಿಗರು, ಜನರು ಅಭಿಮಾನಿಗಳಾಗಿದ್ದಾರೆ ಎಂದರೆ... ?. ಒಬ್ಬರನ್ನು ಕೇಳಿದೆ, ಏನು ಕತೆ ಅಂತ... ಅವರು ಹೇಳಿದ ಸಂಗತಿ ಬಹಳ ಕುತೂಹಲ ಮೂಡಿಸಿತು..

ಅರುಣ್‌ ಕುಮಾರ್‌ ಅವರು ಏಕೆ ರಾಜಕೀಯ ಪ್ರವೇಶ ಮಾಡಬಾರದು..?.ಅನೇಕ ಸಮಯಗಳಿಂದ ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದೊಂದೇ ಕಾರಣ ಅಲ್ಲ ಎಂದೂ ಹಲವು ಕಾರಣ ಹೇಳಿದರು. ನನಗೆ ಇದು ವಿಶೇಷ ಅಂತ ಅನಿಸಲಿಲ್ಲ. 

ಮುಂದೆ ಹೇಳುತ್ತಾ ಅವರು ಹೇಳಿದರು, ನಮಗೆ ಸಭೆಯಲ್ಲಿ ಮಾತನಾಡುತ್ತಾ ಹೇಳುತ್ತಾರೆ, ಭ್ರಷ್ಟಾಚಾರ ನಿಲ್ಲಿಸಬೇಕು, ಹಿಂದುತ್ವವೇ ಉಸಿರಾಗಬೇಕು, ಅನ್ಯರೊಂದಿಗೆ ವ್ಯವಹಾರ ಮಾಡಬಾರದು, ಜಾತಿ ಸಂಘಟನೆಗಳಲ್ಲಿ ಕಾಣಿಸಬಾರದು..... ಹೀಗೇ ಹತ್ತಾರು ಸಂಗತಿಗಳನ್ನು ಹೇಳುತ್ತಾರೆ. ಆದರೆ ಕೆಲವು ದಿನ ಕಳೆದು ನೋಡಿದರೆ ಹೀಗೆ ಹೇಳಿದ ಪ್ರಮುಖರೆಲ್ಲಾ ಅದನ್ನೇ ಮಾಡುತ್ತಿರುತ್ತಾರೆ. ಭ್ರಷ್ಟಾಚಾರದಲ್ಲಿ ಎದ್ದು ಕಾಣುತ್ತಾರೆ, ಜಾತಿ ಸಂಘಟನೆಯ ಒಳಗೆ ಇರುತ್ತಾರೆ, ಅನ್ಯರೊಂದಿಗೆ ಕದ್ದು ವ್ಯವಹಾರ ಮಾಡುತ್ತಾರೆ...!, ಜಾತಿ ಸಂಘಟನೆಯಲ್ಲಿ ಇರಬಾರದು ಎನ್ನುತ್ತಾ ಜಾತಿಗಳನ್ನು ಒಡೆಯುತ್ತಾರೆ, ಮತ್ತೆ ಜಾತಿಗಳಿಗೇ ಮಣೆ ಹಾಕುತ್ತಾರೆ...ಹಾಗಿದ್ದರೆ ಹಿಂದುತ್ವ ಎಲ್ಲಿದೆ... .?.  ಹೀಗೇ ಪಟ್ಟಿ ಬೆಳೆಸುತ್ತಾ..., ಏನಿಲ್ಲದೇ ಇದ್ದರೆ ಅರುಣಣ್ಣ ಕಾರ್ಯಕರ್ತನ ಜೊತೆಗೆ ಇರುತ್ತಾರೆ. ಅವರ ಮೇಲೂ ಆರೋಪ ಮಾಡುತ್ತಾರೆ, ರಾಜಕೀಯ ಮಾಡುತ್ತಾರೆ. ಆದರೆ ಅದು ವ್ಯಕ್ತಿಗತ ಆರೋಪ. ಆಗದೇ ಇದ್ದವರನ್ನೆಲ್ಲಾ ಇದೇ ರೀತಿ ಮಾಡುವುದು,.. ಎನ್ನುತ್ತಾ... ಹಲವು ಘಟನೆಗಳನ್ನು ವಿವರಿಸಿದರು...

ಇಂದು ಬಹುತೇಕ ಜನರು ಅರುಣ್‌ ಕುಮಾರ್‌ ಪುತ್ತಿಲ ಅವರ ಜೊತೆಗೆ ಇರುವ ಕಾರಣ ಇದು. ಹಿಂದುತ್ವಕ್ಕಾಗಿ ಅಷ್ಟೇ. ಇದು ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ಧ ಇರುವ ಆಕ್ರೋಶದ ಧ್ವನಿ ಅಷ್ಟೇ. ಇವರಿಗೆಲ್ಲಾ ಅನ್ಯ ಪಕ್ಷಗಳ ಜೊತೆ ಹೋಗಲು ಮನಸ್ಸಿಲ್ಲ, ಅವರೆಲ್ಲಾ ಹಿಂದುತ್ವ ಎನ್ನುವ ಕಾರಣಕ್ಕೆ ಅರುಣ್‌ ಕುಮಾರ್‌ ಪುತ್ತಿಲ ಜೊತೆ ಇದ್ದಾರೆ. ಹಿಂದುತ್ವ ಹೇಳುತ್ತಾ, ಹಿಂದೂ ಸಮಾಜ ಎನ್ನುತ್ತಾ ಒಳ ಒಪ್ಪಂದ, ತಮಗೆ ಕಪ್ಪ ಕೊಡುವವರಿಗೇ ಮಣೆ ಹಾಕುವುದು, ಕಮಿಶನ್‌ ಪಡೆಯುವುದು.... ಇದೆಲ್ಲಾ ಎಲ್ಲಾ ಕಾರ್ಯಕರ್ತರಿಗೆ ಇಂದಿನ ಡಿಜಿಟಲ್‌ ಮಾಧ್ಯಮದ ಯುಗದಲ್ಲಿ ತಕ್ಷಣವೇ ತಿಳಿಯುತ್ತದೆ. 

ಚುನಾವಣೆಗಳಲ್ಲಿ ಬರುವ ಫಂಡ್‌ ಎಲ್ಲೆಲ್ಲಿಗೋ ರವಾನೆಯಾಗುವುದು, ಮಿತಿಗಿಂತ ಜಾಸ್ತಿ ಖರ್ಚು ತೋರಿಸುವುದು ಇದೆಲ್ಲಾ ಕಾರ್ಯಕರ್ತರಿಗೆ ತಕ್ಷಣವೇ ತಿಳಿಯುತ್ತದೆ. ಇಂದು ಇಂತಹ ಸಂಗತಿಗಳು ಕಾರ್ಯಕರ್ತರಿಗೆ ತಿಳಿದ ಕಾರಣದಿಂದಲೇ ಅಸಮಾಧಾನದ, ನೊಂದ ಮತಗಳೆಲ್ಲಾ ಪುತ್ತಿಲ ಪರವಾಗಿಯೋ, ತಿಮರೋಡಿ ಪರವಾಗಿಯೋ, ಸತ್ಯಜಿತ್‌ ಪರವಾಗಿಯೋ ವಾಲುತ್ತದೆ. ಗಮನಿಸಿ ನೋಡಿ, ಇವರೆಲ್ಲಾ ಹಿಂದುತ್ವಕ್ಕಾಗಿಯೇ ಹಿಂದೆ , ಈಗಲೂ ಕೆಲಸ ಮಾಡುವವರು. ಇವರ ಮೇಲೆ ವಿರೋಧ ಇರಬಹುದು, ಆದರೆ ಜನರು ಈ ವಿರೋಧ, ಆರೋಪಗಳನ್ನು ಒಪ್ಪುತ್ತಿಲ್ಲ. ಯುವ ಕಾರ್ಯಕರ್ತರೆಲ್ಲರೂ ಹಿಂದುತ್ವದ ಇಂತಹ ನಾಯಕರ ಪರವಾಗಿಯೇ ಇರುವುದು ಗಮನಿಸಬೇಕಾದ ಅಂಶ. ಇದರ ಪರಿಣಾಮವೇ ಗ್ರಾಪಂ ಚುನಾವಣೆಯ ಫಲಿತಾಂಶ, ಮತ್ತೆ ಮತ್ತೆ ದೊಡ್ಡ ಪ್ರಮಾಣದಲ್ಲಿ ಸೇರುವ ಯುವ ಕಾರ್ಯಕರ್ತರು...!. ಈಚೆಗೆ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಪೂರ್ವಬಾವಿ ಸಭೆಗಳಲ್ಲಿ ಕಾಣುವ ಉತ್ಸಾಹ, ಸಂಘಟನೆಯೇ ಇದಕ್ಕೆಲ್ಲಾ ಉತ್ತರಗಳು.

ಆದರೆ ಇಂದು ಪುತ್ತಿಲ, ಸತ್ಯಜಿತ್‌, ತಿಮರೋಡಿ ಅವರಂತಹ ಅನೇಕರನ್ನು ವಿರೋಧ ಮಾಡುವವರನ್ನು ಗಮನಿಸಿ. ಒಂದಿಲ್ಲೊಂದು ಸಂಘಟನೆಯಲ್ಲಿ, ಒಂದಿಲ್ಲೊಂದು ವ್ಯವಹಾರದಲ್ಲಿ ಇರುತ್ತಾರೆ, ಯಾರದೋ ಹಿಂಬಾಲಕರು ಆಗಿರುತ್ತಾರೆ. ಇದೆಲ್ಲಾ ಸಾಮಾನ್ಯರಲ್ಲಿ ಸಾಮಾನ್ಯನೂ ಈಗ ಅರ್ಥ ಮಾಡಿಕೊಳ್ಳದಷ್ಟು ದಡ್ಡನಲ್ಲ.

ಹಿಂದೆ, ಸಭೆಯಲ್ಲಿ ಸಲಹೆ, ಸೂಚನೆ ನೀಡುತ್ತಿದ್ದ ಹಿರಿಯರು,  ಸ್ವತ: ಅವರೂ ಹಾಗೆಯೇ ನಡೆದುಕೊಳ್ಳುತ್ತಿದ್ದರು. ಈ ಕಾರಣದಿಂದ ಗೌರವ ಉಳಿಸಿಕೊಳ್ಳುತ್ತಿದ್ದರು. ಇಡೀ ವ್ಯವಸ್ಥೆಯನ್ನು ಈ ಕಾರಣದಿಂದಲೇ ನಿರ್ವಹಿಸುತ್ತಿದ್ದರು, ನಿಯಂತ್ರಣಕ್ಕೆ ತರುತ್ತಿದ್ದರು. ಯಾವ ಅಸಮಾಧಾನಗಳು ಇದ್ದರೂ ಒಂದೇ ಮಾತಿನಲ್ಲಿ ನಿಯಂತ್ರಣ ಮಾಡುತ್ತಿದ್ದರು. ಅಂದರೆ ಒಳಗೂ-ಹೊರಗೂ ಒಂದೇ ಆಗಿದ್ದರು. ಇಂದಿಗೂ ಸಂಘಪರಿವಾರದಲ್ಲಿ, ಬಿಜೆಪಿಯಲ್ಲಿ ಅಂತಹವರು ಇದ್ದಾರೆ. ಆದರೆ ಅವರೆಲ್ಲಾ ಮೌನವಾಗಿದ್ದಾರೆ. ಕೆಲವರು ಹತಾಶರಾಗಿದ್ದಾರೆ. ನೊಂದಿದ್ದಾರೆ. ಖಾಸಗಿಯಾಗಿ ಮಾತನಾಡಿಸಿದರೆ "ದೊಡ್ಡ ಮಾಹಿತಿ" ನೀಡುತ್ತಾರೆ.

 ಈಗಿನ ಬಹುತೇಕ ಜನರ ಜೊತೆ ಅದರಲ್ಲೂ ಕರಾವಳಿಯ ಸಂಘಪರಿವಾರದ "ಹಿರಿಯರ" ಜೊತೆ ಒಬ್ಬ ಬೆಂಬಲಿಗ ಇರುತ್ತಾನೆ. ಎಲ್ಲಾ ಕಡೆಯೂ ಅವರ ಹಿಂದೆಯೇ...!. ಹೀಗಾಗಿ ಅವನೇ ಎಲ್ಲಾ ವಿಭಾಗಕ್ಕೂ..!. ಬಿಜೆಪಿಯಿಂದಲೂ ಸ್ಫರ್ಧೆ, ಸಹಕಾರ ಭಾರತಿಯಿಂದಲೂ ಸ್ಫರ್ಧೆ, ಧಾರ್ಮಿಕ ಕ್ಷೇತ್ರದಿಂದಲೂ ಕಣಕ್ಕೆ , ಕೆಲವು ನಿಗಮಗಳಿಗೆ ಸ್ಫರ್ಧೆ...!. ಇನ್ನೊಬ್ಬ ಯುವ ಕಾರ್ಯಕರ್ತನಿಗೆ ಬೆಳೆಯುವುದಕ್ಕೆ ಅವಕಾಶವೇ ಇಲ್ಲ. ವ್ಯಕ್ತಿ ನಿರ್ಮಾಣದ ಉದ್ದೇಶವೇ ತಪ್ಪಿ ಹೋದಂತಿದೆ ಕರಾವಳಿ ಜಿಲ್ಲೆಯಲ್ಲಿ..!. ಭ್ರಷ್ಟರ ಕೂಟವಾಗಿ ಬೆಳೆಯುತ್ತಿದೆ ಈಗ. ತುಳಿಯುವುದೇ ಉದ್ದೇಶವಾಗಿದೆ.

ಈಗ ಅರುಣ್‌ ಕುಮಾರ್‌ ಪುತ್ತಿಲ ಅವರನ್ನು ಮಾತುಕತೆ ನಡೆಸಿ ಮತ್ತೆ ಬಿಜೆಪಿ ಅಥವಾ ಸಂಘಪರಿವಾರದ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆಗಳು ಆದಾಗ, ಕೆಲವರು ಹೇಳಿದ್ದಿದೆಯಂತೆ, " ಅವರು ಮಾಡಿರುವ ಡ್ಯಾಮೇಜ್‌ ಸರಿಯಾಗ್ತದಾ" ಎಂದು...!

ಅನೇಕರಿಗೆ ಗೊತ್ತಿಲ್ಲ, ಪುತ್ತಿಲ ಅವರ ಜೊತೆಗೆ ಇರುವ ಬಹುತೇಕ ಯುವಕರು ಹೇಳುವುದು, ಹಿಂದುತ್ವಕ್ಕೆ ನಿಮ್ಮಿಂದ ಡ್ಯಾಮೇಜ್‌ ಆಗಿದೆ, ಪುತ್ತಿಲ, ಸತ್ಯಜಿತ್‌ ಅವರಂತಹವರಿಂದ ಆಗಿಲ್ಲವೆಂದು ಹೇಳುತ್ತಿರುವವರೇ...!., ಇದಕ್ಕಾಗಿಯೇ ಇಂದು ಪುತ್ತಿಲ ಅವರ ಜೊತೆ, ಸತ್ಯಜಿತ್‌ ಅವರ ಜೊತೆ, ತಿಮರೋಡಿ ಅವರ ಜೊತೆ ಯುವಕರು ಸೇರುತ್ತಾರೆ. 

ಕಳೆದ ಬಾರಿಯ ಪುತ್ತೂರು ಚುನಾವಣೆ ಗಮನಿಸಿ, ಚುನಾವಣೆಯ ವೇಳೆ ಅರುಣ್‌ ಪುತ್ತಿಲ ಮೇಲೆ ಇನ್ನಿಲ್ಲದ ಅಪಪ್ರಚಾರ ಮಾಡಿದರು. ಯಾವುದೂ ಸಾಮಾಜಿಕವಾಗಿ ಸದ್ದು ಮಾಡಲಿಲ್ಲ, ಸೋಶಿಯಲ್‌ ಮೀಡಿಯಾದಲ್ಲಿ ವೈಯಕ್ತಿಕವಾಗಿ ತೇಜೋವಧೆ ಮಾಡಿದರು. ಅದಕ್ಕೆ ಜನರು ಸೊಪ್ಪು ಹಾಕಲಿಲ್ಲ. ಅಂದರೆ ಯಾವುದೋ ಒಂದು ಘಟನೆಯನ್ನು ಇರಿಸಿಕೊಂಡು ಅದನ್ನು ಮುನ್ನೆಲೆಗೆ ತರಲು ಪ್ರಯತ್ನ ಮಾಡಿದರು. ಸಾಕಷ್ಟು ಪತ್ರಿಕಾಗೋಷ್ಟಿ ಮಾಡಿದರು...!. ಇದನ್ನೇ ಇನ್ನೂ ಹಲವರು ಮಾಡಿಲ್ಲವೇ..? ಚುನಾವಣೆಯ ಹಣವನ್ನು ಏನೆಲ್ಲಾ ಮಾಡಿದ್ದರು..? ದೇವಸ್ಥಾನದಲ್ಲಿ ಡಬಲ್‌ ಟೆಂಡರ್‌ ಮಾಡಿಸಿಲ್ಲವೇ..? , ಜಮೀನು ಖರೀದಿ ಮಾಡಿಲ್ಲವೇ, ಕೆಲವು ಪ್ರಕರಣಗಳಲ್ಲಿ ಮಾತುಕತೆ ನಡೆಸಿ "ಡೀಲ್"‌ ಮಾಡಿಲ್ಲವೇ..  ಎಂದು ಮರುಪ್ರಶ್ನೆ ಮಾಡುವ ಮಟ್ಟಕ್ಕೆ ಈಗ ಜನರೂ, ಹಿಂದೂ ಕಾರ್ಯಕರ್ತರು ಮಾಹಿತಿ ಕಲೆ ಹಾಕಿದ್ದಾರೆ. ಅದಕ್ಕಾಗಿಯೇ ಕಳೆದ ಬಾರಿ ಅರುಣ್‌ ಪುತ್ತಿಲ ಅವರ ಮೇಲೆ ಮಾಡಿರುವ ಆರೋಪಗಳೂ ಕೆಲಸ ಮಾಡಿಲ್ಲ. ಈಗಲೂ ಇಂತಹ ಆರೋಪ, ಅಪವಾದಗಳು ಕೆಲಸ ಮಾಡದು. ಎಲ್ಲವೂ "ವೈಟ್"‌ ಆಗಿರುವ ಕಾರಣದಿಂದ ಈಗಲೂ ಇಂತಹ ಅಪವಾದಗಳು ಇನ್ನಷ್ಟು ಗಟ್ಟಿಯಾಗಲು ಕಾರಣವಾಗುತ್ತಿದೆ.

ಈಗ ಕರಾವಳಿಯಲ್ಲಿ ಬಿಜೆಪಿ, ಸಂಘಪರಿವಾರ ಆಂತರಿಕವಾಗಿ ಸೋಲು ಕಂಡಿದ್ದರೆ ಅದು ಇಲ್ಲಿನ ನಾಯಕರ ಕಾರಣದಿಂದ. ಒಳಒಪ್ಪಂದದ ಕಾರಣದಿಂದ, ಭ್ರಷ್ಟಾಚಾರದಿಂದ, ಕಪ್ಪಕಾಣಿಕೆಯ ಕಾರಣದಿಂದ, ಹಿಂದುತ್ವ ಎನ್ನುತ್ತಾ ಜಾತಿಯನ್ನು ಒಡೆದಿರುವ ಕಾರಣದಿಂದ, ನಡೆಯೊಂದು ನುಡಿಯೊಂದು ಆಗಿರುವ ಕಾರಣದಿಂದ...

ಈಗ  ಲೋಕಸಭಾ ಚುನಾವಣೆಯ ಸಮಯದಲ್ಲೂ ಅದೇ ಕಾಣುತ್ತಿದೆ.. ಅನೇಕ ಕಾಣಿಕೆಗಳ ಪ್ರಭಾವ ಈಗಲೇ ಕಾಣಲು ಆರಂಭವಾಗಿದೆ. ಕಪ್ಪಕಾಣಿಕೆಯ ಪ್ರಭಾವಕ್ಕೆ ಕರಾವಳಿಯಲ್ಲಿ ಜನರು ಸೊಪ್ಪು ಹಾಕುವುದಿಲ್ಲ ಎಂದು ಪುತ್ತೂರಿನಲ್ಲಿ ಸಂದೇಶ ನೀಡಿದ್ದಾರೆ. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಕರಾವಳಿ ಸರಿಯಾಗುವ ಲಕ್ಷಣಗಳು ಇಲ್ಲ. ಹೀಗಾಗಿ ಇದೇ ವೇಳೆ ಕಾಂಗ್ರೆಸ್‌ ಹಿಂದುತ್ವ ಪರವಾಗಿರುವ ಸಮರ್ಥನನ್ನು ಅಭ್ಯರ್ಥಿಯಾಗಿ ಇಳಿಸಿದರೆ ಕರಾವಳಿಯಲ್ಲಿ "ಕೈ"ಎತ್ತುವುದು ಖಚಿತ... ಆದರೆ ಅಲ್ಲೂ "ರಾಜಕೀಯ" ಮೇಳೈಸುತ್ತಿದೆ...!.

ಚುನಾವಣೆಯ ಹೊತ್ತಿಗೆ ಇನ್ನು ಕಾಣುವುದು ಮೋದಿ ಹವಾ..!. ಯಾವ ವ್ಯಕ್ತಿಯೂ, ಯಾವ ಪಕ್ಷವೂ ತನ್ನ ನಾಯಕನ ಹಾದಿಯಲ್ಲಿ, ನಾಯಕ ಮಾದರಿ ಅನುಸರಿಸಿದರೆ ಮಾತ್ರವೇ ಗ್ರಾಮೀಣ ಮಟ್ಟಕ್ಕೂ ನಾಯಕನ ಉದ್ದೇಶ ತಲುಪಲು ಸಾಧ್ಯ. ಆದರೆ ಇಂದು ದಕ್ಷಿಣ ಕನ್ನಡದಲ್ಲೇ ಗಮನಿಸಿದರೆ ಸ್ವಚ್ಛ ಭಾರತ್..‌, ಗ್ರಾಮೀಣ ಪ್ರದೇಶದಲ್ಲೂ ಡಿಜಿಟಲ್‌ , ಯುವಕರಿಗೆ ಉದ್ಯೋಗ, ಕೃಷಿ ಬೆಳವಣಿಗೆ ಸೇರಿದಂತೆ ಮೋದಿ ಅವರ ಉದ್ದೇಶಗಳನ್ನು ತಲುಪಿಸಲು ಕೆಲಸ ಮಾಡಿದ ನಾಯಕರು ಎಷ್ಟು..!? ಇಂದೂ ಕಸದ ರಾಶಿ ಬೀಳುತ್ತಿದೆ..!. ನೀವು ಗಮನಿಸಿ ಅದೇ ಮೋದಿ ಹೆಸರು ಹೇಳುವ ನಾಯಕರ ಕಟ್ಟಡದ ಸುತ್ತಲೂ ಬೇಕಾದರೆ ಕಸ ಇರುತ್ತದೆ...!. ಹಾಗಾಗಿ ಮೋದಿ ಹೆಸರಿನಲ್ಲಿ ಬರುವವನೂ ಅಂತಹ ಕೆಲಸದ ಆಸಕ್ತಿ ಉಳ್ಳವನೂ ಆಗಿರಬೇಕು...!

ಈ ರಾಜಕೀಯದ ನಡುವೆ ಅಪಾಯ ಹಾಗೂ ಭಯ ಏನೆಂದರೆ ಚುನಾವಣೆಗೂ ಮುನ್ನ ಗಲಭೆಗಳಾದೀತಾ....!!?