01 ಡಿಸೆಂಬರ್ 2023

ಆದರ್ಶ ಗ್ರಾಮದಲ್ಲಿ ಅನುದಾನಕ್ಕೆ "ಭಗೀರಥ ಪ್ರಯತ್ನ " | ಇದುವೇ ಐದು ವರ್ಷದ ಮಾರ್ಕ್‌ ಕಾರ್ಡ್....!‌ |

ಪ್ರಧಾನಿಗಳ ಕನಸಿನ ಕೂಸು ಎಂಬಂತೆ,  ಪ್ರತೀ ಸಂಸದರಿಂದ ಆದರ್ಶ ಗ್ರಾಮದ ಆಯ್ಕೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಳ್ಪ ಆದರ್ಶ ಗ್ರಾಮ.

ಪ್ರಧಾನಿಗಳ ಕನಸು ಹೇಗಿತ್ತೆಂದರೆ, ಪ್ರತೀ ಸಂಸದರು ತಮ್ಮ ಸ್ವಂತ ನಿಧಿಯನ್ನು ಹೊರತುಪಡಿಸಿ ಪ್ರತ್ಯೇಕವಾದ ಅನುದಾನ  ಈ ಗ್ರಾಮಗಳಿಗೆ ತರಬೇಕು. ಅಂದರೆ ಖಾಸಗಿ ಕಂಪನಿಗಳ ಜೊತೆ ಆ ಕ್ಷೇತ್ರದ ಸಂಸದ ಮಾತುಕತೆ ನಡೆಸಿ ಅವರಿಂದ ಸಿಎಸ್‌ಆರ್‌ ಫಂಡ್‌ ತರುವುದು. ಅಭಿವೃದ್ಧಿಯ ಹೊರತಾಗಿ ಅಂದರೆ ಭೌತಿಕ ಅಭಿವೃದ್ಧಿ ಹೊರತಾಗಿ , ಸಾಮುದಾಯಿಕ ಅಭಿವೃದ್ಧಿ ಬೇರೆಯೆ ಇರುತ್ತದೆ. ಅದು ಜನರ ಚಿಂತನಾ‌ ಮಟ್ಟದ ಬೆಳವಣಿಗೆ, ಸಾಮಾಜಿಕ‌ ಬದ್ಧತೆ ಇತ್ಯಾದಿಗಳೂ ನಡೆಸುವುದು.ಹಾಗೆಂದು ನಾನು ಆದರ್ಶ ಗ್ರಾಮದ ಬಗ್ಗೆ ತಿಳಿದುಕೊಂಡದ್ದು. ಎಂತಹ ಅದ್ಭುತವಾದ ಐಡಿಯಾ. ಹಾಗೇ ಆ ಗ್ರಾಮ ಎಲ್ಲಾ ಆಯಾಮಗಳ ಮೂಲಕವೂ ಆದರ್ಶ ಆಗಬೇಕು.‌ಅದಕ್ಕಾಗಿ ಆಯ್ಕೆ ಆಗಬೇಕಿರುವುದು ತೀರಾ ಹಿಂದುಳಿದ ಗ್ರಾಮ ದಕ್ಷಿಣ  ಕನ್ನಡ ಜಿಲ್ಲೆಗೆ ಆಯ್ಕೆಯಾದ್ದು ಬಳ್ಪ ಗ್ರಾಮ.‌ ಬಹುಪಾಲು ಅರಣ್ಯ‌ಇರುವ ಗ್ರಾಮ.‌ಒಂದು ಕಾಲದಲ್ಲಿ ‌ವಿಪರೀತ ಮಂಗನಕಾಯಿಲೆ ಕಾಡಿದ ಗ್ರಾಮ. ಈಗಲೂ ಚಿರತೆ,‌ಕಾಡುಪ್ರಾಣಿಗಳ‌ ಹಾವಳಿ ಇರುವ ಊರು.‌ ಇಂತಹ ಊರಲ್ಲಿ ಸಹಜವಾಗಿಯೇ ಅಭಿವೃದ್ಧಿಯ ಪಟ್ಟಿ ದೊಡ್ಡದೇ ಇರುತ್ತದೆ.

ನಾನು ನಿತ್ಯವೂ ಬರುವುದು,‌ಓಡಾಡುವುದು ಇದೇ  ಬಳ್ಪದ ಮೂಲಕ. ಬಳ್ಪ ಎಂಬ ಆದರ್ಶ ಗ್ರಾಮಕ್ಕೆ ಈಗ ಸಾಕಷ್ಟು ಅನುದಾನ ಬಂದಿದೆ..!. 

ಇಲ್ಲಿ ಬಳ್ಪದ ಸರ್ಕಾರಿ ಶಾಲೆಯನ್ನು ಸುಸಜ್ಜಿತವಾಗಿ ಮಾಡಲಾಗಿದೆ, ರಿಂಗ್‌ ರಸ್ತೆ ಮಾಡಲಾಗಿದೆ, ಬೋಗಾಯನಕೆರೆ ಅಭಿವೃದ್ಧಿ ಮಾಡಲಾಗಿದೆ, ಕೆಲವು ಹಳ್ಳಿ ರಸ್ತೆ ದುರಸ್ತಿ ಆಗಿದೆ, ಪಂಚಾಯತ್‌ ಕಟ್ಟಡ ಆಗಿದೆ... ಹೀಗೇ ಕೆಲವು ಕೆಲಸ ಆಗಿದೆ. ಇನ್ನೂ ಪಟ್ಟಿ ಇದೆ...ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ರಿಯೆ. ಹಾಗಾಗಿ ಅದರ ಪಟ್ಟಿ ಇನ್ನೂ.... ಅದು ಮುಗಿಯದ್ದು, ಮುಗಿಯಲೂ ಬಾರದು... 

ಈ ಎಲ್ಲದರ ನಡುವೆ ಸರ್ಕಾರದ ಐದು ವರ್ಷ ಅವಧಿ ಪೂರೈಸುತ್ತಾ ಬರುತ್ತಿದ್ದಂತೆಯೇ ಈಚೆಗೆ ಕೆಲವು ದಿನಗಳಿಂದ ಆದರ್ಶ ಗ್ರಾಮ ಬಳ್ಪದ ಅಲ್ಲಲ್ಲಿ ಬ್ಯಾನರ್‌ ಕಾಣುತ್ತಿದೆ... 

ಅದರಲ್ಲಿ ಅನುದಾನದ ಪಟ್ಟಿ, ಅನುದಾನ ತರಲು ಶ್ರಮಿಸಿದ ಯುವಕರೊಬ್ಬರನ್ನೂ ಉಲ್ಲೇಖಿಸಲಾಗಿದೆ. ಈಗ ಇರುವುದು ಪ್ರಶ್ನೆ. ಹಾಗಿದ್ದರೆ ಆದರ್ಶ ಗ್ರಾಮ ವೈಫಲ್ಯವಾಗಿದೆ ಎಂದು ಹೇಳಲು ಕಾರಣವೇನು..? ಸಂಸದರು ಅಥವಾ ಪ್ರಧಾನಿಗಳ ಪಕ್ಷದ ಪ್ರಮುಖರು ಯಾರೊಬ್ಬರೂ ಆದರ್ಶ ಗ್ರಾಮದ ಬಗ್ಗೆ ಯೋಚನೆ ಮಾಡಿಲ್ಲವೇ...? ಗ್ರಾಮದ ಅಭಿವೃದ್ಧಿಗೆ, ಆದರ್ಶ ಗ್ರಾಮಕ್ಕಾಗಿ ಅನುದಾನ ತರಲು ಪ್ರಯತ್ನಿಸಿದ ಯುವಕ ಒಬ್ಬನೇ ಎಷ್ಟು ಪ್ರಯತ್ನ ಮಾಡಬಲ್ಲ...?. ಒಂದು ಗ್ರಾಮದ ಅಭಿವೃಧ್ಧಿಗೆ ಒಬ್ಬ ಯುವಕ ಮಾತ್ರಾ ಸಾಕಾಗದು. ಒಂದು ಕಡೆ "ಭಗೀರಥ ಪ್ರಯತ್ನ" ಎಂದು‌ ಉಲ್ಲೇಖಿಸಲಾಗಿದೆ. ಆದರ್ಶ ಗ್ರಾಮದ ಅಭಿವೃದ್ಧಿಗೆ ಭಗೀರಥ‌ ಪ್ರಯತ್ನದ ಮೂಲಕ ಅನುದಾನ ಬಂದಿದೆ ಎಂದು‌ ಫಲಾನುಭವಿ ಜನರೇ ಹೇಳುತ್ತಾರಾದರೆ , ದೂರದಿಂದ ನಿಂತ ಯಾರೂ ಮಾತನಾಡಬೇಕಾಗಿಲ್ಲ...!. ಅದರ ರಿಸಲ್ಟ್ ಕಾರ್ಡ್ ಇಲ್ಲೇ ಇದೇ...!



ಅಷ್ಟೇ ಅಲ್ಲ, ಇಲ್ಲಿ ಅಷ್ಟೊಂದು ಪಂಚಾಯತ್‌ ಸದಸ್ಯರು ಪ್ರಧಾನಿಗಳ ಕನಸಿಗೆ ಪ್ರಯತ್ನವೇ ಮಾಡಿಲ್ಲವೇ...?. ಹಾಗಿದ್ದರೆ, ಇಲ್ಲಿ ಒಂದು ವೇಳೆ ಆದರ್ಶ ಗ್ರಾಮ ವೈಫಲ್ಯವಾಗಿದ್ದರೆ ಅದು ಸಂಸದರಿಂದ, ಪ್ರಧಾನಿಗಳ ಕಾರಣದಿಂದ ಅಲ್ಲ, ಸಕ್ರಿಯ ಯುವಕರ ಕೊರತೆಯಿಂದ. ಪ್ರಧಾನಿಗಳ ಪಕ್ಷದ ಕಾರಣದಿಂದ, ಇದುವರೆಗೂ ಇದ್ದ ಈ ಕ್ಷೇತ್ರದ ಶಾಸಕರ ಕಾರಣದಿಂದಲೇ...!?

ಅಂದು ಕೆಲವು ಸಮಯ ನಾನು ಪತ್ರಿಕೆಯಲ್ಲಿ ಬರೆಯುವ ಮೂಲಕ ರಾಷ್ಟ್ರಜಾಗೃತಿ ಮಾಡುತ್ತಿದ್ದೆ. ನನಗೆ ಗೊತ್ತಿದೆ, ಜನರೇ ಮಾಡಿದ ಹಳ್ಳಿಯ ಒಂದು ಕಟ್ಟವನ್ನೂ ಆದರ್ಶ ಎಂದು ಬರೆದಿದ್ದೆ. ಹಾಲು ಸೊಸೈಟಿ ಇಡೀ ಗ್ರಾಮದಲ್ಲಿ ಗೋಬರ್ ಗ್ಯಾಸ್ ಮಾಡುವ, ಹೈನುಗಾರಿಕೆ ಮಾಡುವ ಕನಸನ್ನೂ ಬರೆದಿದ್ದೆ, ಕೇಸು ರಹಿತ ಗ್ರಾಮದ ಕನಸನ್ನೂ ಬರೆದಿದ್ದೆ...! ಅದೆಲ್ಲಾ ಆಗಿದೆಯೋ ಇಲ್ಲವೋ ಗೊತ್ತಿಲ್ಲ.

ಇನ್ನೂ ಒಂದು ಕನಸು ಇಲ್ಲಿ ಇದೆ, ಪ್ರತೀ ಊರು ಅಭಿವೃದ್ಧಿ ಆಗಲು, ಅನುದಾನ ತರಿಸಬಲ್ಲ ಸಾಕಷ್ಟು ಯುವಕರು, ಸಕ್ರಿಯ ಕಾರ್ಯಕರ್ತರು ಅಗತ್ಯ ಇದೆ ಎನ್ನುವುದಕ್ಕೆ ಬಳ್ಪವೇ ಸಾಕ್ಷಿ. ಒಬ್ಬ ಯುವಕ ಭಗೀರಥ ಪ್ರಯತ್ನದಿಂದ ಅನುದಾನ ತರಿಸಿರುವ ಬಗ್ಗೆ ಜನರು ಮಾತನಾಡುತ್ತಾರಾದರೆ, ಅಂತಹ ಯುವಕರು ಪ್ರತೀ ಗ್ರಾಮದಲ್ಲಿ ಬೆಳೆಯಬೇಕಿದೆ.ಗ್ರಾಮದ ಅಭಿವೃದ್ಧಿಗೆ...! , ಅದಕ್ಕೆ ಬಳ್ಪ ಆದರ್ಶ...!‌

ಬಳ್ಪದಂತಹ ಆದರ್ಶ ಗ್ರಾಮಕ್ಕೆ ಭಗೀರಥ ಪ್ರಯತ್ನದ ಮೂಲಕ ಅನುದಾನ ತರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಹಾಗೂ ಜನರು ಇದನ್ನು ಬಹಿರಂಗವಾಗಿ ಹೇಳುತ್ತಾರೆ ಎನ್ನುವುದೇ ಐದು ವರ್ಷದ ಆದರ್ಶ ಗ್ರಾಮದ ಮಾರ್ಕ್‌ ಕಾರ್ಡ್...!

ಕಾಮೆಂಟ್‌ಗಳಿಲ್ಲ: