09 ಡಿಸೆಂಬರ್ 2023

ಅಡಿಕೆ ಬೆಳೆಗಾರರ ಸಮಸ್ಯೆ ಹಾಗೂ ಅಧಿವೇಶನ |

 ಅಡಿಕೆ ಹಳದಿ ಎಲೆರೋಗ ಹಾಗೂ ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಅಧಿವೇಶನದಲ್ಲಿ ಧ್ವನಿ ಎತ್ತಿದ್ದರು. ಸ್ವಾಗತಾರ್ಹ. ಅಧಿವೇಶನದಲ್ಲಿ  ಮಾತನಾಡುವುದಷ್ಟೇ ಅಲ್ಲ, ಅದರ ಫಾಲೋಅಪ್‌ ಕೂಡಾ ಅಗತ್ಯ ಇದೆ. ಅದನ್ನೂ ಶಾಸಕರು ಮಾಡಬಹುದು ಎನ್ನುವ ನಿರೀಕ್ಷೆ ಇರಿಸಿಕೊಳ್ಳೋಣ. 




ಅಡಿಕೆ ಹಳದಿ ಎಲೆರೋಗ ಬಹಳ ಗಂಭೀರವಾದ ಸಮಸ್ಯೆ. ಈಚೆಗೆ ಒಂದು ಮನೆಗೆ ಭೇಟಿ ನೀಡಿದ್ದೆ, ಅವರಿಗೆ 60 ಕಂಡಿ ಅಡಿಕೆಯಾಗುತ್ತಿತ್ತು, ಅದು ಸೊನ್ನೆಗೆ ತಲುಪಿದ್ದಷ್ಟೇ ಅಲ್ಲ, ಅವರೇ ಹೇಳುವ ಹಾಗೆ ನೆಗೆಟಿವ್‌ ತಲಪಿದೆ. ಅಂದರೆ ಅಡಿಕೆ ತಿನ್ನಲೂ ಬೇರೆ ಕಡೆಯಿಂದ ತರುವ ಸ್ಥಿತಿ ಇತ್ತು. ಇದರ ಗಂಭೀರತೆ ದೂರದಿಂದ ನೋಡಿ, ಹೇಳಿದ ಯಾರಿಗೂ ಅರ್ಥವಾಗದು. ಹೀಗಾಗಿ ಈಗ ಹಳದಿ ಎಲೆರೋಗ ಎಂದು ಹೇಳಿದ ತಕ್ಷಣವೇ ಈ ರೋಗ ತೋಟದಲ್ಲಿ ಕಾಡಿದ ಹಲವು ಕೃಷಿಕರಿಗೆ ನಿರುತ್ಸಾಹ , ಇನ್ನೂ ಆರಂಭದ ಹಂತದಲ್ಲಿ‌ ಇರುವ ಕೃಷಿಕರಿಗೆ ಅದೇನೋ ನಿರೀಕ್ಷೆ. ಇದನ್ನೇ ಬಂಡವಾಳ ಮಾಡಿಕೊಳ್ಳುವವರೂ ಈ ನಡುವೆ ಇದ್ದಾರೆ...!. ಈ ಎಲ್ಲದರ ನಡುವೆ ಪುತ್ತೂರು ಕ್ಷೇತ್ರದ ಶಾಸಕರು ಸದಸನದಲ್ಲಿ  ಮಾತನಾಡಿರುವುದು  ಸ್ವಾಗತಾರ್ಹ.

ಇದರ ಜೊತೆಗೆ ಸಿಪಿಸಿಆರ್‌ಐ ಬಗ್ಗೆ ಅವರಿಗೆ ಮಾಹಿತಿ ಇಲ್ಲದಿರುವುದು, ತಪ್ಪು ಮಾಹಿತಿ ಇರುವುದು  ತಿಳಿಯಿತು. ಈ ಹಿಂದಿನ ಪುತ್ತೂರು ಶಾಸಕರು ಸಿಪಿಸಿಆರ್‌ಐ ಕೇರಳದ ಸಂಸ್ಥೆ ಎಂದು ಸದನದಲ್ಲಿ ಹೇಳಿದ್ದರು. ಈಗಿನ ಶಾಸಕ ಅಶೋಕ್‌ ಕುಮಾರ್‌ ಅವರು ಸಿಪಿಸಿಆರ್‌ಐ ರೈತರಿಗೆ ಬೇಕಾದ ಕೆಲಸ ಮಾಡುತ್ತಿಲ್ಲಎಂದು ಹೇಳಿರುವುದು ವಿಡಿಯೋದಲ್ಲಿ ನೋಡಿದೆ. ಸಿಪಿಸಿಆರ್‌ಐ ವಿಜ್ಞಾನಿಗಳು ಈಗ ಕೃಷಿಕರಿಗಾಗಿ ಕೆಲಸ ಮಾಡುತ್ತಿದ್ದಾರೆ. ರೈತ ಪರವಾಗಿರುವ ನಿರ್ದೇಶಕರೂ  ಇದ್ದಾರೆ. ಈ ಹಿಂದೆ ಕೆಲವು ಅಪವಾದಗಳು ಇದ್ದವು ನಿಜ. ಆದರೆ ಈಗ ಆ ಸ್ಥಿತಿ ಇಲ್ಲ. ಹೊಸ ಹೊಸ ಅನ್ವೇಷಣೆಯನ್ನು ಮಾಡುತ್ತಿದ್ದಾರೆ. ಅಡಿಕೆ ಹಾನಿಕಾರಕ ಅಲ್ಲ ಎಂಬ ವಿಷಯದ ಮೇಲೂ, ಕಾರ್ಬನ್‌ ಸೀಕ್ವೆಸ್ಟ್ರೇಶನ್‌ ಬಗ್ಗೆಯೂ ಮಾತ್ರವಲ್ಲ ಅಡಿಕೆ ಹಳದಿ ಎಲೆರೋಗದ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದಾರೆ. ಈಗ ಅಡಿಕೆ ರೋಗ ನಿರೋಧಕ ತಳಿಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡುತ್ತಿದ್ದಾರೆ, ತಳಿ ಅಭಿವೃದ್ಧಿ ಆಗುತ್ತಿದೆ. ಹೀಗಾಗಿ ಸಿಪಿಸಿಆರ್‌ಐ ಬಗ್ಗೆ ಈಗ ತೀರಾ ನೆಗೆಟಿವ್‌ ಆಗಿ , ವಿಜ್ಞಾನಿಗಳ ಬಗ್ಗೆ ಕಳಪೆಯಾಗಿ ಮಾತನಾಡುವುದು  ಕೃಷಿಕರಿಗೇ ಒಳ್ಳೆಯದಲ್ಲ. ಏಕೆಂದರೆ ಒಳ್ಳೆಯ ಕೆಲಸ ಮಾಡುವ ವೇಳೆ ನೆಗೆಟಿವ್‌ ಆಗಿ ಮಾತನಾಡಿದರೆ ಅವರ ಉತ್ಸಾಹಕ್ಕೆ ಭಂಗವಾದಂತೆ ಎಚ್ಚರಿಕೆ ವಹಿಸಬೇಕಿದೆ. 

ಈ ಹಿಂದೆ ನಾವು ಕೆಲವು ಮಂದಿ ಅಡಿಕೆ ಹಳದಿ ಎಲೆರೋಗ ಹಾಗೂ ಅಡಿಕ ಸಮಸ್ಯೆಗಳ ಬಗ್ಗೆ ಕೆಲವು ಶಾಸಕರ ಬಳಿ ಹೋಗಿ ದಾಖಲೆ ಸಹಿತ ಮಾತನಾಡಿದ್ದಿದೆ.  ಹೆಚು ಪ್ರಯೋಜನವಾಗದೇ ಇದ್ದಾಗ ಜೋರಾದ ಚರ್ಚೆ ಆರಂಭಿಸಿದಾಗ "ಸರ್ಕಾರ ವಿರೋಧಿ" ಎಂದು ಕೇಳಿಸಿಕೊಂಡದ್ದು ಇದೆ. ಇದೆಲ್ಲಾ ಸಮಸ್ಯೆ ಇಲ್ಲ. ವಾಸ್ತವ ಸಂಗತಿಯನ್ನು ಮಾತನಾಡದೇ ಇರುವುದೇ ಸಮಸ್ಯೆ.

ಏನೇ ಆಗಲಿ, ಈಗ ಅಡಿಕೆ ಬೆಳೆಗಾರರ ಪರವಾಗಿ ಶಾಸಕ ಅಶೋಕ್‌ ಕುಮಾರ್‌ ರೈ ಅವರು ಮಾತನಾಡುತ್ತಿದ್ದಾರೆ. ಅವರಿಗೆ ಅಭಿನಂದನೆ. ಈಗ ಹಳದಿ ಎಲೆರೋಗ ಪೀಡಿತ ಪ್ರದೇಶದ ಶಾಸಕರು, ಅಡಿಕೆ ಬೆಳೆಗಾರರ ಪರವಾಗಿರುವ ಇತರ ಶಾಸಕರೂ ಮಾತನಾಡಬೇಕಿದೆ. ಈಗಲೂ ಅವರು ಮೌನ...!

ಕಾಮೆಂಟ್‌ಗಳಿಲ್ಲ: