30 ಸೆಪ್ಟೆಂಬರ್ 2010

ಕೃಷಿಕನ ಆತ್ಮಹತ್ಯೆ . . .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರ ಆತ್ಮಹತ್ಯೆ ಮುಂದುವರಿದೆ.ಕಳೆದ ವಾರವಷ್ಟೇ ಸುಳ್ಯದಲ್ಲಿ ಅಡಿಕೆ ಬೆಳೆಗಾರನೊಬ್ಬ ಆತ್ಮಹತ್ಯೆ ಮಾಡಿದ ಸಂಗತಿ ಹಸಿಯಾಗಿರುವಾಗಲೇ ಸುಳ್ಯದ ಎಡಮಂಗದಲ್ಲಿ ಇನ್ನೊಬ್ಬ ಅಡಿಕೆ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಕುರುಡು ಸರಕಾರಕ್ಕೆ ಇದಾದರೂ ಕೇಳಿಸೀತೇ ?.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಎಡಮಂಗಲದಲ್ಲಿ ಮೂರು ಎಕ್ರೆ ಜಾಗ ಹೊಂದಿರೋ ಒಬ್ಬ ಸಾಮಾನ್ಯ ಕೃಷಿಕ ಶೇಷಪ್ಪ ಗೌಡ. ಇರೋ ಭೂಮಿಯಲ್ಲಿ ಒಂದೂವರೆ ಎಕರೆ ಅಡಿಕೆ ತೋಟ ಇದೆ.ತನ್ನ ಕೃಷಿ ಅಭಿವೃದ್ದಿ ಮಾಡುವುದಕ್ಕಾಗಿ 2006 - 07 ನೇ ಸಾಲಿನಲ್ಲಿ ಎಡಮಂಗಲದ ಸಹಕಾರಿ ಬ್ಯಾಂಕ್‌ನಿಂದ 4.90 ಲಕ್ಷ ಕೃಷಿ ಸಾಲ ಮಾಡಿದ್ದರು.ದುರದೃಷ್ಠವಶಾತ್ ಆ ವರ್ಷದಿಂದಲೇ ಅಡಿಕೆ ಬೆಲೆ ಕುಸಿಯಲಾರಂಭಿಸಿತು.ಸಾಲ ಮರುಪಾವತಿ ಕಷ್ಠವಾಯಿತು.ಆ ಸಾಲವನ್ನು ತೀರಿಸುವುದಕ್ಕೆ ಇನ್ನೊಂದು ಸಾಲ ಮಾಡಿದ.ಹೀಗೇ ಸಾಲ ಬೆಳೆದು 7 ಲಕ್ಷ ತಲಪಿತು.ಈಗ ಅದರ ಬಡ್ಡಿ ಸೇರಿ 11 ಲಕ್ಞ ರುಪಾಯಿ ಆಗಿದೆ. ಈ ಸಾಲವನ್ನು ಕೂಡಲೇ ಮರುಪಾವತಿ ಮಾಡಬೇಕೆಂದು ಸಹಕಾರಿ ಬ್ಯಾಂಕ್ ಶೇಷಪ್ಪ ಗೌಡರಿಗೆ ನೋಟೀಸ್ ಮಾಡಿತು.ಭೂಮಿ ಹರಾಜಿಗೂ ಮುಂದಾಯಿತು.ಡಿಕ್ರಿಯೂ ಆಯಿತು.ಈ ವರ್ಷ ಸಾಲ ಮರುಪಾವತಿ ಮಾಡಬೇಕೆಂಬ ನಿರ್ಧಾರಕ್ಕೂ ಬಂದಿದ್ದರು.ಆದ್ರೆ ಅಡಿಕೆ ಕೊಳೆ ರೋಗದಿಂದ ಬೆಳೆಯೂ ನಷ್ಠವಾಯಿತು. ಇದರಿಂದಾಗಿ ಮಾನಸಿಕವಾಗಿ ನೊಂದ ಶೇಷಪ್ಪ ಗೌಡ ಎರಡು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿದರು.ಈಗ ಮನೆಯಲ್ಲಿ ಪತ್ನಿ ಅವರ ಇಬ್ಬರು ಪುತ್ರರು ಶೇಷಪ್ಪ ಗೌಡರ ಸಾವಿನ ಚಿಂತೆಯಲ್ಲಿದ್ದಾರೆ.ಈಗ ಸಾಲದ ಹೊರೆ ಇವರ ಮೇಲೆ ಬಿದ್ದಿದೆ.

ಕಳೆದ ವಾರವಷ್ಟೇ ಸುಳ್ಯದ ಸಂಪಾಜೆಯಲ್ಲಿ ಅಡಿಕೆ ಬೆಳೆಗಾರನೊಬ್ಬ ಅಡಿಕೆ ಹಳದಿ ರೋಗದಿಂದ ಕೃಷಿ ನಾಶವಾಗಿ ಕೃಷಿಗೆ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ.ಇದೇ ರೀತಿಯಾಗಿ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೧೫ ಕೃಷಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈತ ಸಂಘ ಹೇಳಿದೆ. ಕಳೆದ ಎರಡು ವರ್ಷದಿಂದ ಅಡಿಕೆ ಬೆಲೆ ಕುಸಿತವೇ ಇದಕ್ಕೆಲ್ಲಾ ಕಾರಣವಾಗಿರಬಹುದಾ?. ಅಂತೂ ಕೃಷಿಕರ ಆತ್ಮಹತ್ಯೆ ಮುಂದುವರಿಯುತ್ತಿದೆ ಅನ್ನೋದು ದು:ಖದ ಸಂಗತಿ.

ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೃಷಿಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದುದರಿಂದ ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಮುಂದಿನ ದಿನ ಇನ್ನಷ್ಟು ಪ್ರಕರಣಗಳು ದಾಖಲಾದರೂ ಅಚ್ಚರಿ ಇಲ್ಲ.

2 ಕಾಮೆಂಟ್‌ಗಳು:

Nanda Kishor B ಹೇಳಿದರು...

ದುಃಖಕರ :(

shivu.k ಹೇಳಿದರು...

ಲೇಖನವನ್ನು ಓದಿ ಮನಸ್ಸಿಗೆ ಬೇಸರವಾಯಿತು...