07 ಸೆಪ್ಟೆಂಬರ್ 2010

ಇದು ಹೆದ್ದಾರಿ . .!

ಅಯ್ಯಾ ಎಂದರೆ ಸ್ವರ್ಗ ; ಎಲವೋ ಎಂದರೆ ನರಕವಂತೆ , ಆದ್ರೆ ಈ ರಸ್ತೆಯಲ್ಲಿ ಹೋಗೋವಾಗ ಏನ್ ಹೇಳ್ಬೇಕೋ ಅಂತಾನೇ ಗೊತ್ತಾಗಲ್ಲ.ಇದು ನಮ್ಮ ಹೆದ್ದಾರಿ. ಎನ್‌ಎಚ್ 48, ಶಿರಾಡಿ ಘಾಟ್ !. ಘಾಟಿ ತುಂಬಾ ವಾಹನ ಚಾಲಕರು ಇನ್ನಿಲ್ಲದ ಪಡಿಪಾಟಲು ಅನುಭವಿಸಬೇಕಾಗಿದೆ ಈಗ.ಇಡೀ ರಸ್ತೆ ರಾಡಿ ಎದ್ದಿದೆ.ಮೊನ್ನೆ ಮೊನ್ನೆ ಕಾಮನ್‌ವೆಲ್ತ್ ಕ್ಲೀನ್ಸ್ ಬ್ಯಾಟನ್ ರಿಲೇ ಇದೇ ಮಾರ್ಗದಲ್ಲಿ ಬಂದಿತ್ತು. ಆ ಪ್ರಯುಕ್ತ ಗುಂಡ್ಯಕ್ಕೆ ಹೋಗಿದ್ದಾಗ ಶಿರಾಡಿಯತ್ತಲೂ ಹೆಜ್ಜೆ ಹಾಕಿದಾಗ ಇದೆಲ್ಲಾ ಕಂಡಿತು.






ರಾಷ್ಟ್ರೀಯ ಹೆದಾರಿ 48 ರ ಶಿರಾಡಿ ಘಾಟ್ ರಸ್ತೆಯು ಪ್ರತೀ ವರ್ಷದಂತೆ ಈ ಬಾರಿಯೂ ರಾಡಿಯಾಗಿದೆ. ಹೀಗಾಗಿ ವಾಹನ ಓಡಾಟ ತೀರಾ ತ್ರಾಸವಾಗಿದೆ. ಹಾಗಿದ್ದರೂ ತಕ್ಷಣದ ದುರಸ್ಥಿ ಇಲ್ಲಿ ನಡೆದೇ ಇಲ್ಲ. ಇದರಿಂದಾಗಿ ವಾಹನ ಪ್ರಯಾಣಿಕರು ಅಯ್ಯೋ. . ., ಅಂತ ಸೊಂಟಕ್ಕೆ ಕೈ ಹಿಡಿದರೆ ವಾಹನ ಮಾಲೀಕರು ತಲೆಗೇ ಕೈಹೊತ್ತು ಕೂರುವಂತಾಗಿದೆ


ರಾಷ್ಟ್ರೀಯ ಹೆದಾರಿ 48 ರಲ್ಲಿ ಬರೋ ಶಿರಾಡಿ ಘಾಟ್ ರಸ್ತೆ. ಹೇಳುವುದಕ್ಕೆ ಇದು ರಾಷ್ಟ್ರೀಯ ಹೆದ್ದಾರಿಯಾದರೂ ತೀರಾ ಲೋಕಲ್ ರಸ್ತೆಯ ಹಾಗಿದೆ ಇದರ ಅವಸ್ಥೆ.ಕೆಲವೊಮ್ಮೆ ಅದಕ್ಕಿಂತ ಹಳ್ಳಿ ರಸ್ತೇನಾದ್ರೂ ಪರವಾಗಿಲ್ಲ ಅಂತ ಅನಿಸುತ್ತದೆ. ಬೇಸಗೆಯಲ್ಲಿ ರಿಪೇರಿ , ಮಳೆಗಾಲದಲ್ಲಿ ಹೊಂಡ ಗುಂಡಿ ಇದು ಶಿರಾಡಿ ರಸ್ತೆಯ ಪ್ರತೀ ವರ್ಷದ ಬಯೋಡೇಟಾ. ಬದವಾಲವಣೆ ಇಲ್ಲ ಹೊಸ ಕೋರ್ಸ್‌ಗಳೂ ಇಲ್ಲ. ಏನಿದ್ದರೂ ಭರವಸೆಗಳು ಮಾತ್ರಾ. ಶಿರಾಡಿ ಮೂಲಕ ಮಂಗಳೂರು , ಬೆಂಗಳೂರು ಮಾತ್ರವಲ್ಲ ಪುಣ್ಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಗಳಿಗೆ ಹೋಗುವ ನೂರಾರು ಪ್ರಯಾಣಿಕರಿಗೆ ಅನ್ಯ ಮಾರ್ಗವಿಲ್ಲ. ಇದೇ ಮಾರ್ಗದಲ್ಲೇ ಸಂಚರಿಸಬೇಕಿದೆ. ಮಾತ್ರವಲ್ಲ ನೂರಾರು ಘನವಾಹನಗಳು ಇದೇ ಮಾರ್ಗವಾಗಿ ಸಂಚರಿಸಲೇ ಬೇಕಾಗಿದೆ..ಆದ್ರೂ ಕೂಡಾ ತಾತ್ಕಾಲಿಕ ದುರಸ್ಥಿ ಕಂಡಿಲ್ಲ ಎಂಬುದು ಸಾರ್ವಜನಿಕರ ದೂರು.


ಕಳೆದ ಹಲವಾರು ವರ್ಷಗಳಿಂದ ನಾದುರಸ್ಥಿಯಲ್ಲಿದ್ದ ಈ ಶಿರಾಡಿ ಘಾಟ್ ರಸ್ತೆಯಲ್ಲಿನ 13 ತಿರುವುಗಳನ್ನು 3 ವರ್ಷದ ಹಿಂದೆ 42 ಕೋಟಿ ರುಪಾಯಿ ವೆಚ್ಚದಲ್ಲಿ ಹೊಂಡ ಗುಂಡಿಗೆ ಮೋಕ್ಷ ಕಲ್ಪಿಸುವ ಕೆಲಸ ಮಾಡಲಾಗಿತ್ತಾದರೂ , ಇದು ಒಂದೇ ವರ್ಷದಲ್ಲಿ ತಿರುವು ರಸ್ತೆ ಹೊರತುಪಡಿಸಿ ಉಳಿದವೆಲ್ಲಾ ನೀರುಪಾಲಾಗಿತ್ತು. ಒಟ್ಟು 36 ಕಿಲೋ ಮೀಟರ್ ಉದ್ದ ಘಾಟಿ ರಸ್ತೆಯಲ್ಲಿ ಈಗ ಉಳಿದ 26 ಕಿಲೋ ಮೀಟರ್ ರಸ್ತ್ತೆ ದುರಸ್ಥಿಗಾಗಿ 115 ಕೋಟಿ ರುಪಾಯಿಯ ಪ್ರಾಜೆಕ್ಟ್ ತಯಾರು ಮಾಡಲಾಗಿದೆ.ಇದರಲ್ಲಿ ಕಾಂಕ್ರೀಟ್ ರಸ್ತೆಗಾಗಿ 99.84 ಕೋಟಿ ರುಪಾಯಿಯ ನೀಲನಕಾಶೆ ತಯಾರಿಸಲಾಗಿದೆ.ಉಳಿದ ಮೊತ್ತದಲ್ಲಿ ರಸ್ತೆಯ ಚರಂಡಿ ವ್ಯವಸ್ಥೆ ತಯಾರಾಗಲಿದೆ. ಆದರೆ ಪ್ರತೀ ವರ್ಷದ ಮಳೆಗಾಲ ಶಿರಾಡಿ ರಾಡಿಯಾಗುವ ಈ ರಸ್ತೆಯಿಂದಾಗಿ ವಾಹನಗಳ ಓಡಾಟವೇ ಕಷ್ಟವಾಗಿದೆ.ಪ್ರತಿ ದಿನ ಇದೇ ರಸ್ತೆಯಲ್ಲಿ ಓಡಾಡುವ ಮಂದಿಗೆ ಇನ್ನೂ ಕಷ್ಟವಾಗಿದೆ ಅಂತಾರೆ ಜನ.ಹೀಗಾಗಿ ಈ ಘಾಟಿ ರಸ್ತೆಗೆ ಶಾಶ್ವತ ಪರಿಹಾರ ಶೀಘ್ರದಲ್ಲೇ ಸಿಗಬೇಕು.ವಾಹನ ಮಾಲೀಕರಂತೂ ಉಸ್ಸಪ್ಪ ಅಂತಾರೆ.ಲೋಡ್ ವಾಹನಗಳು ಒಂದು ಹೊಂಡಕ್ಕೆ ಬಿದ್ದು ಮೇಲೇಳುವಾಗ ಜೀವ ಹೋಗಿ ಬಂದಂತಾಗುತ್ತದೆ ಅಂತಾರೆ. ಲಾರಿ ಮೈಂಟೆನೆನ್ಸ್‌ಗೇ ಬಾಡಿಗೆ ಸಾಕಾಗೋಲ್ಲ ಅಂತಾರೆ ಅವ್ರು.







ಒಟ್ಟಿನಲ್ಲಿ ಹಲವು ವರ್ಷಗಳ ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಇನ್ನೂ ಸಿಕ್ಕಿಲ್ಲ. ನೂತನ ಕಾಂಕ್ರೀಟ್ ರಸ್ತೆಗೆ ಅನುಮೋದನೆ ಸಿಕ್ಕಿದೆ ಎಂಬ ಭರವಸೆಗಳು ಸಿಗುತ್ತದೇ ವಿನಹ ಪರಿಹಾರ ಮಾತ್ರಾ ಸಿಕ್ಕಿಲ್ಲ. ಆದಷ್ಟು ಬೇಗನೆ ಕಾರ್ಯಗತವಾಗಲಿ ಎಂಬುದೇ ಎಲ್ಲರ ಆಶಯ.

ಕಾಮೆಂಟ್‌ಗಳಿಲ್ಲ: