28 ಸೆಪ್ಟೆಂಬರ್ 2010

ಕೆಂಪು ಸಂಕ -2

ಕೆಂಪುಸಂಕವು ಮಳೆಯ ಅಬ್ಬರಕ್ಕೆ ಕಾಡಿನಿಂದ ಹರಿದು ಬರೋ ನೀರಿನಿಂದಾಗಿ ತುಂಬಿ ಹರಿಯುತ್ತಿತ್ತು.ಕಾಡಿನ ನಡುವಿನ ಆ ಹಾಳು ಡಾಮರು ರಸ್ತೆಯಲ್ಲಿ ಇರೋ ಈ ಸಂಕದ ಸುತ್ತಲೂ ಜೀರುಂಡೆಗಳ ಸದ್ದು ಹಾಗೆಯೇ ಇತ್ತು.ಅದೆಷ್ಟೂ ವಾಹನಗಳು ಆ ದಾರಿಯಾಗಿ ಸಾಗುತ್ತಲೇ ಇತ್ತು. ಅದರೊಳಗಿನ ಜನ ಮಾತ್ರಾ ಯಾವಾಗಲೂ ಭಯದಿಂದ ಸಾಗುತ್ತಲೇ ಇದ್ದರು.ಒಂದೊಂದು ವಿಚಾರ ನೆನಪು ಮಾಡುತ್ತಲೇ ಹೋಗುವಾಗಲೂ ಮತ್ತ ಮತ್ತೆ ಆ ಸಂಕ ನೆನೆಪಾಗುತ್ತಲೇ ಇತ್ತು.ಅಂತೂ ಕಮಿಲದಲ್ಲಿ ಮಾತೆತ್ತಿದರೆ ಅದೇ ಕೆಂಪು ಸಂಕದ ಸುದ್ದಿ. ಮೊನ್ನೆ ಅಲ್ಲಿ ಹೋಗೋವಾಗ ಅವರಿಗೆ ಹೀಗಾಗಿದೆಯಂತೆ ಹೌದಾ. .?.

* * * * * * * * * * * * * * * *

ಮೊನ್ನೆ ಗಂಗಾ ಭಟ್ಟರು ಮತ್ತು ಚಂದ್ರಾ ಭಟ್ಟರು ಪಂಜಕ್ಕೆ ಹೋಗುವಾಗ ಕೆಂಪು ಸಂಕದಲ್ಲಿ ನಡೆದ ಸಂಗತಿಯನ್ನು ಅವರು ಕಮಿಲದಲ್ಲಿ ಹೇಳಿರಲಿಲ್ಲ.ಆದರೆ ಅವರಿಗಾದ ಅನುಭವವನ್ನು ಅವರು ಮನೆಯಲ್ಲಿ ಬಂದು ಹೇಳಿದ್ದರು.ಮನೆಗೆ ಕೆಲಸಕ್ಕೆ ಬರೋ ಗಿರಿಯಪ್ಪ ,ಚಂದಪ್ಪನಲ್ಲೂ ಹೇಳಿದ್ದರು.ಅದು ಸಾಕಿತ್ತು,ಇಡೀ ಕಮಿಲದಲ್ಲಿ ಅದೊಂದು ಸುದ್ದಿ ಎರಡು ದಿನಗಳ ಕಾಲ ಹರಿದಾಡುತ್ತಲೇ ಇತ್ತು.

ಈ ಸುದ್ದಿಯನ್ನು ಕೇಳಿದ ನಂತರ ಆ ಕಾಡು ದಾರಿಯಾಗಿ ಕಮಿಲದ ಕೆಲ ಜನರನ್ನು ಬಿಟ್ಟು ಮತ್ಯಾರು ಅಲ್ಲಿ ಹೋಗುತ್ತಿರಲಿಲ್ಲ. ಆದರೂ ಕೆಲವೊಮ್ಮೆ ಅನಿವಾರ್ಯ ಹೋಗಲೇಬೇಕು.ಮನೆಗೆ ಬೇಕಾದ ದಿನಸಿ ಸಾಮಾಗ್ರಿ ಕಮಿಲದಲ್ಲಿ ಸಿಗದು ಹಾಗಾಗಿ ಬಳ್ಪಕ್ಕೆ ಹೋಗಲೇ ಬೇಕು.ಆದ್ದರಿಂದ ಕೆಲ ಜನರು ಸೇರಿಕೊಂಡು ಜೊತೆಯಾಗಿ ಬಳ್ಪಕ್ಕೆ ಹೋಗುತ್ತಿದ್ದರು. ಅಂದು ಕಮಿಲದಿಂದ ವೆಂಕಪ್ಪ ,ನೀಲಪ್ಪ , ಲಕ್ಷ್ಮಣ ಜೊತೆಯಾಗಿ ಬಳ್ಪಕ್ಕೆ ದಿನಸಿ ಸಾಮಾಗ್ರಿಗೆ ಹೋದರು, ಕೆಲಸ ಬಿಡುವಾಗಲೇ ಅವತ್ತು ಹೊತ್ತಾಗಿತ್ತು, ಕತ್ತಲೂ ಆವರಿಸಿತ್ತು.ಅಂದು ಅಮವಾಸ್ಯೆಯೂ ಬೇರೆ.ತಿಂಗಳ ಬೆಳಕೂ ಇಲ್ಲ.ದನಿಗಳ ಕೈಯಿಂದ 100 ರುಪಾಯಿ ಪಡಕೊಂಡಿದ್ದ ಮೂವರೂ ಅಕ್ಕಿ ತರಲು ಹೊರಟಿದ್ದಾರೆ.ಆಗಂತೂ ಅಕ್ಕಿಗೆ ಇದ್ದದ್ದು 3 ರುಪಾಯಿ. ರಾತ್ರಿಯಾದರೂ ಅಂದು ಅಕ್ಕಿ ತರದೆ ಉಪಾಯವೂ ಇಲ್ಲ. ಅಂತೂ ಮೊಂಡು ಧೈರ್ಯದಲ್ಲಿ ಈ ಮೂವರು ಹೊರಟಿದ್ದರು.ಹಾಗೇ ಕಮಿಲದಿಂದ ಸಾಗಿದ ಅವರು ಕಾಡಲ್ಲಿ ಬೊಬ್ಬೆ ಹಾಕುತ್ತಾ ಹೆಜ್ಜೆ ಹಾಕಿದರು.ಕೆಂಪು ಸಂಕವೂ ಬಂತು, ದಾಟಿ ಮುಂದೆಯೂ ಹೋದರು.ಏನೂ, ಸದ್ದೂ ಇಲ್ಲ ,ಮಣ್ಣೂ ಇಲ್ಲ.ಇದೆಲ್ಲಾ ಸುಮ್ಮನೆ ಆ ಭಟ್ರು ರೈಲು ಬಿಟ್ಟದ್ದು ಅಂತ ಮಾತಾಡಿಕೊಂಡು ಮುಂದೆ ಸಾಗಿ ಬಳ್ಪ ತಲಪಿ ಅಕ್ಕಿ , ಚಾಪುಡಿ, ಸಕ್ರೆ ಹೀಗೆ ಎಲ್ಲಾ ಕಾಮತ್ತರ ಅಂಗಡಿಯಿಂದ ಪಡೆದುಕೊಂಡು ಹೊರಡಲು ಅನುವಾದರು.ಕೈಯಲ್ಲಿ ಚಿಕ್ಕದಾದ ಮಿಣಿ ಮಿಣಿ ಲೈಟು ಅಷ್ಟೆ. ಇದೆಲ್ಲಾ ಹಿಡಿದುಕೊಂಡು ಹೊರಡುವಾಗ ನೀಲಪ್ಪನಿಗೆ ಕೊಂಚ ಬಿಸಿ ಮಾಡಿದ್ರೆ ಹೇಗೆ ಅಂತ ಅನಿಸಿತು.ಉಳಿದ ಇಬ್ಬರಲ್ಲೂ ಕೇಳಿದ, ಹಾಗೇ ಮೂವರೂ ಅಲ್ಲೇ ಇದ್ದ ಗಡಂಗ್‌ಗೆ ಹೋಗಿ ಎರಡೆರಡು ತೊಟ್ಟೆ ಏರಿಸಿ ಬಳ್ಪದಿಂದ ಹೆಜ್ಜೆ ಹಾಕಿದರು.ವಾಹನ ಹೇಗೂ ವಿರಳ.ಆಗ ಕೆಲ ಶ್ರೀಮಂತರಲ್ಲಿ ಮಾತ್ರಾ ಜೀಪು ಇತ್ತು.ಅವರು ಯಾರನ್ನೂ ಹತ್ತಿಸಿಕೊಳ್ಳುತ್ತಿರಲಿಲ್ಲ.ಆದುದರಿಂದ ವಾಹನಕ್ಕಾಗಿ ಕಾದು ಪ್ರಯೋಜನವಿಲ್ಲ. ಹಾಗಾಗಿ ಮತ್ತೆ ಕಾಲ್ನಡಿಯೇ ಗತಿ. ಮೂವರೂ ಊರಿನ ಒಂದೊಂದು ಸಂಗತಿಗಳ ಬಗ್ಗೆ ಮಾತನಾಡುತ್ತಾ ಬಳ್ಪ ಕ್ರಾಸ್ ಕಳೆದು ಕಾಡಿನ ದಾರಿಯತ್ತ ಹೆಜ್ಜೆ ಹಾಕಿದವರು.ಅದರಲ್ಲಿ ವೆಂಕಪ್ಪನಿಗೆ ದೂರದಲ್ಲಿ ಏನೋ ಸುಳಿದಾಡಿದಂತೆ ಭಾಸವಾಯಿತು. ಆದ್ರೂ ಹೇಳಲಿಲ್ಲ. ಎಲ್ಲರಿಗೂ ಹೀಗೆ ಒಂದೊಂದು ಅನುಭವವಾಯಿತು.ಆದರೂ ಯಾರೂ ಯಾರಿಗೂ ಹೇಳಲಿಲ್ಲ. ಒಂದು ಕ್ಷಣ ಮಾತು ನಿಲ್ಲಿಸಿ ಹಾಗೆ ಮೌನ ಹೆಜ್ಜೆ ಬಿಟ್ಟರೆ ಏನೂ ಇಲ್ಲ.ನಿಧಾನವಾಗಿ ಹೆಜ್ಜೆ ಮುಂದಕ್ಕೆ ಮುಂದಕ್ಕೆ ಹೋಯಿತು.ಹೇಗೂ ಸ್ವಲ್ಪ ಏರಿಸಿದ್ದರ ಪವರ್ ಕೂಡಾ ಇದೆ.ಹಾಗೆ ಕೆಂಪು ಸಂಕದ ಬಳಿ ಸಾಗುತ್ತಿದ್ದಾಗ ನೀರಿ ಸದ್ದಿನ ಜೊತೆಗೆ ದೂರದಿಂದ ಅದೇನೋ ಅಳುತ್ತಿರುವ ಸದ್ದು ಕೇಳಿತು.ವೆಂಕಪ್ಪ ಅಂದ ಅದೇನೋ ಸದ್ದು . . ! , ನೀಲಪ್ಪ ಸದ್ದು ಆಲಿಸಿದ . . ! , ಲಕ್ಷ್ಮಣ ಹೌದು . . ಹೌದು . . ಅಂತ ಹೇಳಿದ. ಏನದು . ? ಏನದು . ? ಎಲ್ಲರಲ್ಲೂ ಪ್ರಶ್ನೆ ಮೂಡಿತು. ನೀಲಪ್ಪ ತಕ್ಷಣವೇ ಅದಕ್ಕಿಂತ ದೊಡ್ಡದಾದ ಒಂದು ಸದ್ದು ಮಾಡಿದ.ಅತ್ತ ಕಡೆಯಿಂದ ಆ ಸದ್ದು ಕಡಿಮೆ ಆಗಲಿಲ್ಲ.ಇನ್ನಷ್ಟು ಜೋರಾಗಿ ಕೇಳಿತು. ಮೂವರಲ್ಲಿ ಮುಖದಲ್ಲಿ ಬೆವರ ಹನಿಗಳು ಕಾಣಿಸಿಕೊಂಡಿತು. ಎರಡು ದಿನಗಳ ಹಿಂದ ಕಮಿದಲ್ಲಿ ಮಾತನಾಡಿದ ಎಲ್ಲಾ ಸಂಗತಿಗಳು ನೆನಪಾದವು.ಸದ್ದು ಕೇಳುತ್ತಲೇ ಇದೆ.ಸರಿಯಾಗಿ ಆಲಿಸಿದರೆ ಕು0ಯ್ . . ಅನ್ನೋ ಸದ್ದು ಅದು.ಲೈಟು ಬೇರೆ ಸರಿ ಇಲ್ಲ.ಮೂವರಿಗೂ ಎದೆ ಬಡಿತ ಹೆಚ್ಚಾಯಿತು.ಬಳ್ಪದಲ್ಲಿ ಏರಿಸಿದ್ದ 2 ಪ್ಯಾಕೇಟ್‌ನ ಪವರ್ ಕಡಿಮೆ ಆಯಿತೇನೋ ಅಂತ ಅನ್ನಿಸಿತು.ಆದರೂ ಬಿಡಲಿಲ್ಲ . . ಜೋರಾಗಿ ಬೊಬ್ಬೆ ಹಾಕಿದರು ಇವರು. ಲಕ್ಷ್ಮಣ ಮತ್ತು ವೆಂಕಪ್ಪ ಹೇಳಿದರು ಅದು “ರಣ”. ಬೇಡ ಬೊಬ್ಬೆ ಹಾಕೋದು ಬೇಡ ಅದೆಲ್ಲಾದರು ಇತ್ತ ಬಂದರೆ ನಮ್ಮ ರಕ್ತವನ್ನು ಹೀರೀತು,ಕೊಂದೇ ಹಾಕಿತು , ಅದು ಹಕ್ಕಿಯಂತೆ ಹಾರಾಡುತ್ತಾ ಬರುತ್ತದೆ, ಹಾಗಾಗಿ ಸದ್ದಿಲ್ಲದೆ ನಾವೊಮ್ಮೆ ಬೇಗ ಹೋಗೋಣ ಎನ್ನುತ್ತಾ ಕೆಂಪು ಸಂಕ ದಾಟಿ ಮುಂದೆ ಬಂದರು. ಬೇಗ ಬೇಗ ಕಮಿಲದತ್ತ ಹೆಜ್ಜೆ ಹಾಕಿದರು.ಅಂತೂ ಸದ್ದೂ ಕಡಿಮೆಯಾಯಿತು. ಹಾಗೆ ಅವರು ಕಮಿಲಕ್ಕೆ ತಲಪುವಾಗ ಗಂಟೆ ರಾತ್ರಿ 9.30.ಕಮಿಲಕ್ಕೆ ಬಂದಾಗ ಇದ್ದ ಅಂಗಡಿಗಳೆಲ್ಲಾ ಬಂದ್ ಆಗಿದ್ದವು. ಜನವೂ ಇರಲಿಲ್ಲ. ಹಾಗಾಗಿ ಬಸ್ ಸ್ಟ್ಯಾಂಡಲ್ಲಿ ಕುಳಿತ ಈ ಮೂವರು ಅಬ್ಬಾ ಎನ್ನುತ್ತಾ ಹಣೆಯನ್ನು ಒಮ್ಮೆ ಒರಸಿಕೊಂಡ ಅವರು ನಾಳೆ ಮಾತನಾಡೋಣ ಅಂತ ಮನೆ ಕಡೆಗೆ ಹೆಜ್ಜೆ ಹಾಕಿದರು. ಆಗಲೂ ಈ ಮೂವರಿಗೆ ಕಾಡುತ್ತಿದ್ದುದು ಅದೇನು ಕೆಂಪು ಸಂಕದ ಬಳಿಯಲ್ಲಿ ಕೇಳಿಬಂದ ಸದ್ದು. ಈ ಸುದ್ದಿಯೂ ಹಾಗೆ ಮರುದಿನ ಕಮಿಲದಲ್ಲಿ ಸುದ್ದಿಯಾಯಿತು.

ಇನ್ನಷ್ಟು ರೆಕ್ಕೆ ಪುಕ್ಕಗಳು ಅಲ್ಲಿ ಹುಟ್ಟಿಕೊಂಡವು.ಇನ್ನಷ್ಟು ಸಂಗತಿಗಳು ಕೆಂಪುಸಂಕದಲ್ಲಿ ನಡೆದವು.

1 ಕಾಮೆಂಟ್‌:

Nanda Kishor B ಹೇಳಿದರು...

ಅದೇನೋ ಅರ್ಥವಾಗಲಿಲ್ಲ.. ಬರಹ ಇಷ್ಟವಾಯ್ತು. ಈ ಭೂತ ಪ್ರೇತ ಮುಂತಾದುವನ್ನು ನಾನು ನಂಬದಿರುವ ಕಾರಣ ನಿಮ್ಮ ಬರಹ ಬಹಳ ಮಜವಾಗಿತ್ತು ಓದಲು ಖುಷಿಯಾಯ್ತು..