25 ಜುಲೈ 2010

ಮಳೆಗಾಲದ ಅತಿಥಿ ಬಂದಿದ್ದಾನೆ. . . . ..

ನಮ್ಮಲ್ಲೀಗ ಆಟಿ ತಿಂಗಳು.ಮಳೆ ಜೋರಾಗೇ ಬರಬೇಕಿತ್ತು.ಆದ್ರೆ ಕಾಲ ಬದ್ಲಾಗಿದೆ ಅಲ್ವಾ. ಅಷ್ಟೊಂದು ಜೋರಾದ ಮಳೆ ಇಲ್ಲ.ಮಳೆ ಆದ್ರೂ ನೀರ ವರತೆ ಇನ್ನೂ ಆಗಿಲ್ಲ.ಈ ನಡುವೆ ಆಟಿ ತಿಂಗಳ ಕೆಲ ಸಂಪ್ರದಾಯಗಳು ಮಳೆ ಹಾಗೇನೇ ಕಟಿಮೆ ಆಗ್ತಾ ಇದೆ.ಅಂತಹದ್ದರಲ್ಲಿ ಆಟಿ ಕಳೆಂಜವೂ ಒಂದು.ಅದೀಗ ನಮ್ಮೂರಲ್ಲೇನೋ ನಡೀತಾ ಇದೆ.ಅದರ ಸುತ್ತ ಕೆಲ ಹೊತ್ತು. . .






ಅಲ್ಲೆಲ್ಲಾ ಹೇಳುವ ಆಷಾಡ ಮಾಸವನ್ನು ನಮ್ಮೂರಲ್ಲಿ ಆಟಿ ತಿಂಗಳು ಅಂತ ಕರೀತಾರೆ. ಆಟಿ ತಿಂಗಳು ಅಂದ್ರೆ ತಂಗಳು ಅನ್ನಕ್ಕೂ ತತ್ತ್ವಾರದ ಸಮಯ.ಅಂದ್ರೆ ಅಷ್ಟೂ ಕಷ್ಟದ ಸಮಯ ಅಂತ ಹಿಂದೊಂದು ಕಾಲದಲ್ಲಿ ವಾಡಿಕೆ ಇತ್ತಂತೆ. ಹಿರಿಯರು ಆ ಬಗ್ಗೆ ಒಂದೊಂದು ಕತೆ ಹೇಳ್ತಾರೆ. ಕೆಲವು ಕಡೆ ಊಟ ಮಾಡದೇ ಕಾಡಲಲಿ ಸಿಗೋ ವಸ್ತುಗಳ್ಲಲೇ ಕಾಲ ಕಳೆದವ್ರೂ ಇದ್ರಂತೆ.ಇದ್ರ ಜತೆಗೆ ರೋಗಗಳ ಭಯ ಬೇರೆ.ಹೀಗಾಗಿ ಜನ ಹೆದರುವ ಕಾಲವಂತೆ ಅದು.ಅದಕ್ಕಾಗಿ ಈ ಆಟಿ ತಿಂಗಳಿನಲ್ಲಿ ವಿವಿದ ಆಚರಣೆಗಳು ಇರುತ್ತದೆ.ಒಂದು ಕಡೆ ಧೋ... ಸುರಿಯುವ ಮಳೆ ಇನ್ನೊಂದು ಕಡೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಸಹಜವಾಗಿಯೇ ರೋಗಗಳು ಬಾಧಿಸುತ್ತದೆ. ಅದಕ್ಕಾಗಿ ಊರ ಮಾರಿ ಓಡಿಸುವುದು ಮತ್ತು ಊರಿನ ಮಾರಿ ಕಳೆಯಲು ಆಟಿ ಕಳೆಂಜ ಬರುತ್ತಾನೆ.ಈ ಮೂಲಕ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲಾಗುತ್ತಿತ್ತು.

ಆಟಿ ತಿಂಗಳಲ್ಲಿ ಕಾಡೋ ಆ ಭಯವನ್ನು ನಿವಾರಿಸಲು ಊರ ಮಾರಿ ಓಡಿಸುವ ಪದ್ದತಿ ಇತ್ತಂತೆ. ಊರ ಜನರೆಲ್ಲಾ ಒಂದೆಡೆ ಸೇರಿ ಊರಿಗೆ ಬಂದ ಮಾರಿಯನ್ನು ಓಡಿಸಲು ಒಂದು ದಿನ ನಿಗದಿ ಮಾಡುತ್ತಾರೆ. ಅಂದು ರಾತ್ರಿ ವೇಳೆ ಊರಿನ ಪ್ರತೀ ಮನೆಯಿಂದ ಒಬ್ಬೊಬ್ಬರಂತೆ ತೆಂಗಿನ ಗರಿಗಳಿಂದ ಮಾಡಿದ ಬಲಿಯನ್ನು ತರುತ್ತಾರೆ. ಹೀಗೆ ಮನೆಯಿಂದ ಬರುವ ಜನರೆಲ್ಲಾ ಊರ ರಸ್ತೆಯಲ್ಲಿ ರಾತ್ರಿ ವೇಳೆ ಜೊತೆಯಾಗಿ ಮಾರಿಯನ್ನು ಓಡಿಸಿ ಎಂದು ಬೊಬ್ಬಿಡುತ್ತಾ ಡಾಮರು ರಸ್ತೆಯಲ್ಲಿ ಸಾಗಿ ನಿಗದಿತ ಸ್ಥಳದಲ್ಲಿ ಅಂದರೆ ಊರಿನ ಗಡಿಯಲ್ಲಿ ಎಲ್ಲರೂ ತೆಂಗಿನ ಬಲಿಯಲ್ಲಿಟ್ಟು ಅಲ್ಲಿ ಪೂಜೆ ಮಾಡಲಾಗುತ್ತದೆ.ಇದೇ ವೇಳೆ ಕೆಲ ಜನ ತರುವ ಕೋಳಿಯನ್ನು ಅಲ್ಲೇ ಬಲಿ ನೀಡಲಾಗುತ್ತದೆ.. ನಂತರ ಈ ಊರಿನಿಂದ ಮುಂದಿನ ಊರಿಗೆ ಮಾರಿಯನ್ನು ಓಡಿಸಲಾಗುತ್ತದೆ.






ಇದು ಮಾತ್ರಾ ಅಲ್ಲ ಇದರ ಜೊತೆಗೆ ಊರಿನ ಮಾರಿಯನ್ನು ಕಳೆಯಲು ಆಟಿ ಕಳೆಂಜನೂ ಬರುತ್ತಾನೆ.ಮಳೆಗಾಲದಲ್ಲಿ ಸುರಿಯುವ ಅಗಾಧವಾದ ಮಳೆಯಿಂದ ಜನ ಮಾನಸಿಕವಾಗಿ ನೊಂದುಕೊಳ್ಳುವ ಈ ಸಮಯದಲ್ಲಿ ತುಳುನಾಡಿನಲ್ಲಿ ಆಟಿ ಕಳೆಂಜ ಮನೆ ಮನೆಗೆ ತೆರಳಿ ಜನರ ಭಯವನ್ನು ನಿವಾರಿಸುತ್ತಾನೆ. ತುಳು ನಾಡಿನಲ್ಲಿ ಮಳೆಗಾಲದಲ್ಲಿ ಎಡೆಬಿಡದೆ ಸುರಿಯುವ ಮಳೆಗೆ ಕೂಲಿಕಾರರಿಗೆ , ಕೃಷಿಕರಿಗೆ ಯಾವುದೇ ಕೆಲಸ ಮಾಡಲಾಗದೇ ಸಂಪಾದಿಸಲೂ ಸಾದ್ಯವಾಗದೇ ಇರುವ ಸಂದರ್ಭದಲ್ಲಿ ಬೇಸಗೆಯಲ್ಲಿ ಕೂಡಿಟ್ಟ ಆಹಾರ, ಧವಸ ಧಾನ್ಯಗಳೇ ಹೊಟ್ಟೆ ಹೊರೆಯಲು ಜೀವನಾಧಾರ.ಆದರೆ ಅದು ಕೂಡಾ ಈ ಆಟಿಯ ಸಮಯದಲ್ಲಿ ಮುಗಿಯಲು ಆರಂಭವಾಗುತ್ತದೆ. ಇದೇ ವೇಳೆ ಊರಿನಲ್ಲಿ ರೋಗರುಜಿನಗಳು ಕಾಣಿಸಿಕೊಳ್ಳುತ್ತವೆ.ಜನ ಭಯಭೀತರಾಗುತ್ತಾರೆ.ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಊರಿನಲ್ಲೆಲ್ಲಾ ಕಂಗಾಲಾಗಿರುವ ಈ ಸಮಯದಲ್ಲಿ ಜನರ ಕಷ್ಟವನ್ನು ನಿವಾರಿಸಲು ಜಾನಪದ ಆಚರಣೆಯ ಮೂಲಕ ಆಟಿ ಕಳೆಂಜ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಮನೆ ಒಡತಿ ನೀಡುವ ಹುಳಿ, ತೆಂಗಿನಕಾಯಿ, ಬಟ್ಟೆ, ತೆಂಗಿನ ಎಣ್ಣೆ ಇತ್ಯಾದಿಗಳನ್ನು ಪಡೆದು ತೋಟದಿಂದ ಫಲವಸ್ತುವನ್ನು ಪಡೆದು ಮನೆಗೆ ಬಂದ ಮಾರಿಯನ್ನು ಕಳೆಂಜ ಕಳೆಯುತ್ತಾನೆ ಎಂಬ ನಂಬಿಕೆಯಿದೆ.ಆಟಿ ಕಳೆಂಜಕ್ಕೆ ಕಿನ್ನಿ ಎಂಬ ಇನ್ನೊಂದು ವೇಷವೂ ಸಾಥಿಯಾಗುತ್ತದೆ. ಊರಿನಲ್ಲಿ ಭೂತ ನರ್ತನ ಮಾಡುವ ಕಲಾವಿದರು ಈ ಕಳೆಂಜ ವೇಷವನ್ನು ಹಾಕುತ್ತಾರೆ. ತೆಂಗಿನ ಸಿರಿ , ಸುಣ್ಣ , ಬಣ್ಣಗಳಿಂದ ಅಲಂಕಾರಗೊಂಡ ಬಳಿಕ ಊರಿನ ಮನೆ ಮನೆಗಳಿಗೆ ತೆರಳುತ್ತಾರೆ. ತೆಂಬರೆಯ ಹಿಮ್ಮೇಳಕ್ಕೆ ಆಟಿ ಕಳೆಂಜನು ಮನೆಯಂಗಳದಲ್ಲಿ ಛತ್ರಿಯನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಿಸುತ್ತಾ ಕುಣಿಯುತ್ತಾನೆ.ಹಿಮ್ಮೇಳದವರು ಜಾನಪದ ಪಾಡ್ಡನವನ್ನು ಹೇಳುತ್ತಾ ಕಳೆಂಜನ ಇತಿಹಾಸವನ್ನು ವಿವರಿಸುತ್ತಾರೆ. ಕೊನೆಗೆ ತೋಟಕ್ಕೆ ತೆರಳಿ ಫಲ ವಸ್ತುವನ್ನು ಕೊಂಡೊಯ್ಯುವ ಪದ್ದತಿ ಇದೆ.ಇದರಿಂದಾಗಿ ಕೃಷಿಗೆ ತಟ್ಟಿದ ರೋಗಗಳೂ ಹೋಗುತ್ತವೆ ಎನ್ನುವ ನಂಬಿಕೆ ಇದೆ.ಇದೆಲ್ಲಾ ಒಂದು ಕತೆ.ಹೀಗೇ ಬೆಳೆದು ಬಂದ ಒಂದು ಆಚರಣೆ ಇಂದಿಗೂ ಜೀವಂತವಾಗಿ ಉಳಿದುಕೊಂಡಿದೆ.ಆದ್ರೆ ಆಧುನಿಕವಾದ ಈ ಕಾಲದಲ್ಲಿ ಅದೆಲ್ಲಾ ಮೂಲೆಗುಂಪಾಗುತ್ತಿರುವುದು ಒಪ್ಪಲೇ ಬೇಕಾದ ಸತ್ಯ.





ಅದರಲ್ಲೂ ನಮ್ಮೂರಲ್ಲಿ ಇನ್ನೂ ಈ ಆಟಿ ಕಳೆಂಜ ಉಳಿದುಕೊಂಡಿದೆ ಅನ್ನೋದೇ ನನಗೆ ಸಂತಸ.

ಕಾಮೆಂಟ್‌ಗಳಿಲ್ಲ: