15 ಜುಲೈ 2010

ಒಂದು ರಹಸ್ಯದ ಸುತ್ತ . . . .

ಅದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ಎಂಬ ಪುಟ್ಟ ಊರು. ಅಡಿಕೆ, ರಬ್ಬರ್ ಕೃಷಿಯಿಂದ ಬದುಕೋ ಜನ ಇಲ್ಲಿಯವ್ರು. ಕೊಲೆ ದರೋಡೆ ಅಂದ್ರೆ ಅಬ್ಬಾ . . !!. ಅಂತ ಹುಬ್ಬೇರಿಸುವ ಮುಗ್ದರು. ಅಂತಹ ಹಳ್ಳಿಯಿಂದ ಅದೇನೋ ಒಂದು ಭಯಾನಕ ಸುದ್ದಿಯೊಂದು ಹೊರಬಂತು.7 ವರ್ಷಗಳ ಕಾಲ ಊರೊಳಗೇ ಸುತ್ತಾಡುತ್ತಿದ್ದ ವ್ಯಕ್ತಿಗಳು ಈಗ ಕೊಲೆಗಾರರಾಗಿ ಕಂಡುಬಂದಿದ್ದಾರೆ.ನಿಜಕ್ಕೂ ಅದೊಂದು ರೋಚಕ ಕತೆ. . . .

ಮೊನ್ನೆ ಆ ಕಮಿಲದ ಹಳ್ಳಿಯಿಂದ ಭಯಾನಕ ಸುದ್ದಿಯೊಂದು ಕೇಳಿಬರುತ್ತಲೇ ಇತ್ತು ಅಲ್ಲಿನ ಜನ ಹಾಗಂತೆ. . ಹೀಗಂತೆ ಅಂತ ಮಾತಾಡ್ತಾ ಇದ್ರು.ಅದು ನಿಜವೂ ಆಯ್ತು. ಆ ಸುದ್ದಿ ಮಾತ್ರಾ ಕಮಿಲದ ಜನ್ರನ್ನು ಬೆಚ್ಚಿ ಬೀಳಿಸಿತ್ತು. ಯಾಕೆ ಗೊತ್ತಾ. . .? .ಅದು ಹಂತಕರ ಕತೆ. ಅವರಿಬ್ಬರು ಕೊಲೆ ಮಾಡಿದ್ದು ಇಂದಲ್ಲ , ನಿನ್ನೆಯಲ್ಲ. . . ಬರೋಬ್ಬರಿ 7 ವರ್ಷಗಳ ಹಿಂದೆ. ಕೊಂದ ಸುಳಿವು ಕೂಡಾ ಸಿಗದಂತೆ ಬಾಡಿಯನ್ನು ಫಿನಿಶ್ ಮಾಡಿದ್ದರು. ಅವರು ಆ ಕೊಲೆ ಮಾಡಿ ರಾಜಾರೋಷವಾಗಿ ಊರಿಡೀ ಸುತ್ತಾಡುತ್ತಿದ್ದರು. ಒಂದೇ ಒಂದು ಸಣ್ಣ ಕ್ಲೂ . . . ಕೂಡಾ ಅವರತ್ತ ಇದ್ದಿರಲಿಲ್ಲ. ಹಿಂದೊಮ್ಮೆ ಇವರೇ ಕೊಲೆಗಾರರು ಎಂಬ ಅನುಮಾನದಿಂದ ಪೊಲೀಸರು ಟಾಯ್ಲೆಟ್ ಗುಂಡಿ ತೆರೆದಿದ್ದರು , ಅದರಿಂದ ವಾಸನೆ ಬಂದದ್ದು ಬಿಟ್ಟರೆ ಬೇರೇನೂ ಸಾಕ್ಷಿ ಅಲ್ಲಿ ಸಿಕ್ಕಿರಲಿಲ್ಲ. ಆದರೆ ಆ ಕೊಲೆಗಾರರು ಮತ್ತೆ ಹೇಗೆ ಪೊಲೀಸರ ಬಲೆಗೆ ಬಿದ್ದರು ಎನ್ನುವುದೇ ಇಂಟೆರೆಸ್ಟಿಂಗ್. ಕೊಲೆಗೆ ಕಾರಣವೂ ಹಾಗೆ ಕೇವಲ ಒಂದು ಎಕ್ರೆ ಜಾಗದ ವಿಷಯ. ಅದೊಂದೇ ವಿಷ್ಯ ಹೌದೇ. . ? ಅಥವಾ ಇನ್ನೇನಾದರೂ ಕಾರಣ ಇತ್ತೇ ಎನ್ನುವುದು ಕೂಡಾ ಗೊತ್ತಿಲ್ಲ. ಅಂತೂ ಕೊಲೆಗಾರರು ಈಗ ಪೊಲೀಸರ ಅತಿಥಿಯಾಗಿದ್ದಾರೆ ಅನ್ನೋದು ಊರ ಜನ್ರಿಗೆ ಸಮಾಧಾನ.ಇಷ್ಠೇ ಅಲ್ಲ ಕೊಲೆಗಡುಕರಿಗೆ ಶಿಕ್ಷೆಯೂ ಆಗ್ಬೇಕು ಅಂತಾರೆ ಆ ಜನ.

* * * * * * * * * * * * * * *

ಅಂದು 2003 ಮೇ 2 ಅದೆಲ್ಲಿಗೋ ಹೋದ ಆ ಮನೆಯ "ಯಜಮಾನ" ಇದ್ದಕ್ಕಿದ್ದಂತೆ ನಾಪತ್ತೆಯಾಗ್ತಾನೆ.ಎಲ್ಲಿಗೆ ಹೋದ . . ಏನಾದ . . ?ಅನ್ನೋದೇ ನಿಗೂಢವಾಗುತ್ತದೆ. ಯಾರಿಗೂ ಗೊತ್ತಿಲ್ಲ. . . ಆ "ಯಜಮಾನನ" ಜೊತೆಗೆ ಹೋದ ಆತನ ಹೆಂಡತಿಯ "ಅಕ್ಕನ ಗಂಡ"ನೂ ನನಗೆ ಗೊತ್ತಿಲ್ಲ ಅಂತಾನೆ.ಆದ್ರೆ ಒಂದು ಕ್ಲೂ ಇದೆ.ಸಮೀಪದ ಗುತ್ತಿಗಾರಿನಿಂದ ಅವರಿಬ್ಬರೂ ಜೊತೆಯಾಗೇ ಅಟೋದಲ್ಲಿ ಬಂದಿದ್ದಾರೆ.ಆದ್ರೆ ಇಲ್ಲಿ ನೋಡಿದ್ರೆ ನನಗೆ ಗೊತ್ತಿಲ್ಲ ಅಂತಾನೆ "ಅಕ್ಕನ ಗಂಡ".ಸಂಶಯಗೊಂಡ "ಯಜಮಾನನ ಪತ್ನಿ " ಪೊಲೀಸರಿಗೆ ದೂರು ನೀಡಿ "ಪತಿ" ನಾಪತ್ತೆಯಾಗಿದ್ದಾರೆ. "ಭಾವ"ನ ಜತೆ ಗುತ್ತಿಗಾರಿನಿಂದ ಅವರ ಮನೆಗೆ ಹೋಗಿದ್ದಾರೆ ಎಂಬ ಸುದ್ದಿ ಇದೆ ಹಾಗಾಗಿ "ಭಾವ"ನನ್ನು ವಿಚಾರಣೆಯಾಗಬೇಕು ಎನ್ನುತ್ತಾರೆ. ಪೊಲೀಸ್ರೂ ಈ ಕುರಿತು "ಭಾವ"ನನ್ನು ಓರಲ್ ಆಗಿ ವಿಚಾರಣೆ ಮಾಡುವಾಗ ನನಗೆ ಏನೂ ಗೊತ್ತಿಲ್ಲ, ನನ್ನ ಮನೆಗೆ ಆತ ಆತ ಬಂದೇ ಇಲ್ಲ. ಕಮಿಲ ಪೇಟೆಗೆ ಹೋಗಲಿದೆ ಎಂದು ಹೋಗಿದ್ದಾರೆ ಎಂದು ಪೊಲೀಸರಿಗೆ ಹೇಳಿದ. ಇನ್ನು ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿಲ್ಲ. ಇದೊಂದು ಫ್ಯಾಮಿಲಿ ಮ್ಯಾಟರ್ ಅಂತ ಅವರೂ ಸುಮ್ಮನಾದ್ರು. ದಿನ ಕಳೆದು ದಿನವಾಯಿತು .. . ಇದೂ ನಾಪತ್ತೆ ಪ್ರಕರಣದಡಿಗೆ ಸೇರಿಹೋಯಿತು.ವರ್ಷಗಳು ಉರುಳಿತು .. ಇನ್ನೊಂದು ವರ್ಷ ಕಳೆಯಿತು. . . "ಯಜಮಾನ"ನ ಸುದ್ದಿಯೇ ಇಲ್ಲ. .ಸುಳಿವೇ ಇಲ್ಲ. . ಹುಡುಕಾಟದ ಶಕ್ತಿಯೂ ಕುಂದಿತು. ಮಂತ್ರ, ದೇವರು , ಜ್ಯೋತಿಷ್ಯ ಹೀಗೆ ಎಲ್ಲವೂ ಮುಗಿಯಿತು.

ಈ ನಡುವೆ ನಾಪತ್ತೆಯಾದ 4 ವರ್ಷದ ಬಳಿಕ ಮತ್ತೊಂದು ಸುದ್ದಿ ಊರ ತುಂಬೆಲ್ಲಾ ಹರಡಿಕೊಂಡಿತು."ಭಾವ" ಮತ್ತು "ಇನ್ನೊಬ್ಬ" ಸೇರಿಕೊಂಡು "ಯಜಮಾನ"ನನ್ನು ಕೊಲೆ ಮಾಡಿ "ಭಾವ"ನ ಶೌಚಾಲಯ ಗುಂಡಿಗೆ ಹಾಕಿದ್ದಾರೆ ಎಂಬ ಸುದ್ದಿ ಹರಡಿಕೊಂಡಿದ್ದ ಕಾರಣ "ಯಜಮಾನನ ಪತ್ನಿ " ಮತ್ತೆ ಪೊಲೀಸರಿಗೆ ದೂರು ನೀಡಿ ತನ್ನ ಅನುಮಾನ ಪರಿಹರಿಸಬೇಕೆಂದು ಒತ್ತಾಯಿಸಿದರು.ಇದಕ್ಕೂ ಪೊಲೀಸರು ಮುಂದಾದರು. ಅಂದು 2007 ಜೂನ್ 25. . . . ಸುಳ್ಯದ ಆಗಿನ ತಹಶಿಲ್ದಾರ್ ಸಹಿತ ಊರ ಜನರ ಸಮ್ಮುಖದಲ್ಲಿ "ಭಾವ"ನ ಟಾಯ್ಲೆಟ್ ಪಿಟ್ ಅಗೆತವೂ ಶುರುವಾಯಿತು.ಆಗಲೂ "ಭಾವ"ನ ಮುಖದಲ್ಲಿ ಯಾವೊಂದು ಭಾವನೆಯೂ ಇರದೆ ತಾನೊಬ್ಬ ಕೊಲೆಗಾರ ಎಂಬ ಸಂಶಯ ಅಲ್ಲಿ ಸೇರಿದ್ದ ಯಾರಿಗೂ ಅರಿವಾಗದಂತೆ ಚೆನ್ನಾಗೇ ಫೋಸು ಕೊಟ್ಟ.ಒಳಗೊಳಗೆ ನಗುತ್ತಲೂ ಇದ್ದ.ಇನ್ನು ಪೊಲೀಸ್ನೋರು ಹಾಗೆ , ವಿಶೇಷ ವಿಚಾರಣೆ ಮಾಡಿಯೂ ಇಲ್ಲ. ಅಂತೂ ಟಾಯ್ಲೆಟ್ ಪಿಟ್ ಅಗೆತದ ಬಳಿಕ ಯಾವೊಂದು ಕುರುಹೂ ಸಿಗದ ಕಾರಣ ಮಣ್ಣು ಪರೀಕ್ಷೆಗೆ ಒಳಪಡಿಸಲಾಯಿತಾದರೂ ಫಲಿತಾಂಶ ಶೂನ್ಯ.

ಹೀಗೇ ಆಗ ಸುದ್ದಿಯಾಗಿದ್ದ ಈ ನಾಪತ್ತೆ ಪ್ರಕರಣ ಮತ್ತೆ ಹಾಗೇ ಸದ್ದಿಲ್ಲದೇ ಇತ್ತು. ಆರ್ಥಿಕವಾಗಿ ಅಷ್ಟೊಂದು ಗಟ್ಟಿಯಿಲ್ಲದ "ಯಜಮಾನನ ಪತ್ನಿ"ಗೆ ಈ ಪ್ರಕರಣ ಬೆನ್ನು ಹತ್ತಲು ಅಷ್ಟೊಂದು ಸುಲಭವೂ ಇದ್ದಿರಲಿಲ್ಲ. ಹಾಗಾಗಿ ಈ ನಾಪತ್ತೆ ಪ್ರಕರಣ ಹಾಗೆಯೇ ಉಳಿದುಕೊಂಡಿತು. ಫೈಲ್ ಕ್ಲೋಸ್ ಅಂತ ಊರ ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು.

2003 ರ ನಾಪತ್ತೆ ಪ್ರಕರಣ 2007 ರಲ್ಲಿ ಜೀವಪಡೆದು ಸತ್ತಿತು ಎಂದು ಅಂದುಕೊಂಡಿರುವಾಗಲೇ ಕೊನೆಯ ಪ್ರಯತ್ನ ನಡೆಯಿತು. ಅವರು ನೇರವಾಗಿ ಈ ಕೇಸನ್ನು ಮಂಗಳೂರು ಅಪರಾಧ ಪತ್ತೆ ದಳಕ್ಕೆ ದೂರು ನೀಡಿ ತನ್ನ ಅನುಮಾನಗಳನ್ನೆಲ್ಲಾ ಪತ್ತೆದಳಕ್ಕೆ ತಿಳಿಸಿದರು. ಇದಾಗಿ ಕೆಲ ದಿನಗಳ ಬಳಿಕ ಮೊನ್ನೆ ಇದ್ದಕ್ಕಿದ್ದಂತೆ ಬಯಲಾಯಿತು.ನೈಜ ಆರೋಪಿ ಅದೇ "ಭಾವ "ಎಲ್ಲವನ್ನೂ ಪೊಲೀಸರಿಗೆ ತಿಳಿಸಿದ.ಕೊಲೆ ಮಾಡಿದ್ದು ಒಪ್ಪಿಕೊಂಡ.

* * * * * * * * * * * * * * *


ಅಂದ ಹಾಗೆ ಅವ್ರು ಕೊಲೆ ಮಾಡಿದ್ದು ಹೇಗೆ ಅನ್ನೋದೇ ಒಂದು ಇಂಟೆರೆಸ್ಟಿಂಗ್ .. .

ಪೊಲೀಸ್ ಠಾಣೆಯಿಂದ ಗುತ್ತಿಗಾರಿಗೆ ಆ "ಭಾವ " ಬಂದಾಗ ಅಲ್ಲಿ "ಇನ್ನೊಬ್ಬ" ಸಂಬಂಧಿ ಸಿಗ್ತಾನೆ. ಕುಶಲೋಪರಿ ಮಾತನಾಡಿ ಆ ದಿನದ ಘಟನೆಯನ್ನು ವಿವರಿಸುತ್ತಾ ಇಬ್ಬರೂ ಒಂದು ಸ್ಕೆಚ್ ರೂಪಿಸಿದರು. ಆಗಲೇ ಗುತ್ತಿಗಾರಿಗೆ ಬಂದಿದ್ದ "ಯಜಮಾನ"ನೂ ಸಿಗ್ತಾನೆ. ತಡ ಮಾಡದೆ 3 ಜನ ರಿಕ್ಷಾದಲ್ಲಿ "ಭಾವ"ನ ಮನೆಗೆ ಬಂದಾಗ ಸಂಜೆ ಗಂಟೆ ಸುಮಾರು 6.30. ಆ ಬಳಿಕ ಜೊತೆಯಾಗೇ ಟೀ ಕುಡಿದು "ಯಜಮಾನ"ನ ತಲೆಗೆ ಹೊಡೆದಾಗ ಆತ ಕೆಳಗುರುಳಿದ. ಸಾವು ಖಚಿತ ಪಡಿಸಿದ ಬಳಿಕ ಬೆಡ್ ಶೀಟ್‌ನಲ್ಲಿ ಮೃತ ದೇಹವನ್ನು ಸುತ್ತಿ ಮನೆಯ ಪಕ್ಕದ ಗುಡ್ಡದಲ್ಲಿಟ್ಟರು. ಸಮಯ ಉರುಳಿತು.. . . . ಆಗ ಗಂಟೆ ರಾತ್ರಿ ಸುಮಾರು 10 ಗಂಟೆ. ಮೃತ ದೇಹವನ್ನು ಉದ್ದದ ಮರದ ತುಂಡಲ್ಲಿ ಕಟ್ಟಿಕೊಂಡು ಇಬ್ರೂ ಹೊತ್ತುಕೊಂಡು ಮನೆಯ ಹಿಂಬದಿ ನಡೆದುಕೊಂಡು ನಿರ್ಜನ ರಕ್ಷಿತಾರಣ್ಯಕ್ಕೆ ಸುಮಾರು 4-5 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲೇ ಹೊತ್ತುಕೊಂಡು ಸಾಗಿದರು. ಹೀಗೆ ಅರಣ್ಯಕ್ಕೆ ತಲುಪಿದಾಗ ಗಂಟೆ ರಾತ್ರಿ ಸುಮಾರು 12. ಅಲ್ಲಿ ಮೊದಲೇ ನೋಡಿದ್ದ ಕಾಡು ಹಂದಿ ವಾಸ ಮಾಡುವ ಗುಹೆಯೊಳಗೆ ದೇಹವನ್ನು ತುರುಕಿದರು. ಅಲ್ಲೇ ಇದ್ದ ಓಟೆಯ ಹಿಂಡಿನಿಂದ ಕೆಲ ಮರದ ತುಂಡುಗಳನ್ನು ಸೇರಿಸಿಕೊಂಡು "ಯಜಮಾನ"ನ ಚಪ್ಪಲಿ , ಬಟ್ಟೆ ಇತ್ಯಾದಿಗಳ ಜೊತೆಗೆ ದೇಹವನ್ನು ಕರಕಲು ಮಾಡಿ ಮಣ್ಣು ಸುರಿದು ಹಿಂತಿರುಗುವಾಗ ಮುಂಜಾನೆಯಾಗಿತ್ತು. ಆ ನಂತರ ಸುಮಾರು 10-15 ದಿನಗಳ ಬಳಿಕ ಮತ್ತೆ ಅದೇ ಗುಹೆಯ ಬಳಿಗೆ ಇಬ್ಬರೂ ರಾತ್ರಿ ಹೋಗಿ ಕೊಳೆತ ಶವದಿಂದ ಎಲ್ಲಾ ಎಲುಬುಗಳನ್ನು ಹೆಕ್ಕಿ ತೆಗೆದು ಗುಹೆಯಿಂದ ಸುಮಾರು 2 ಕಿಲೋ ಮೀಟರ್ ದೂರದ ಇನ್ನಷ್ಟು ದುರ್ಗಮ ಹಾದಿಯಲ್ಲಿ ಸಾಗಿ ನಿರ್ಜನ ಕಾಡಿನಲ್ಲಿ ಮರವೊಂದನ್ನು ಬೀಳಿಸಿ ಕಟ್ಟಿಗೆ ಮಾಡಿ ಶವದಿಂದ ಹೆಕ್ಕಿದ ಎಲುಬುಗಳನ್ನು ರಾಶಿ ಹಾಕಿ ಕಟ್ಟಿಗೆ ಇಟ್ಟು ಸೀಮೆಣ್ಣೆ ಸುರಿದು ಬೆಂಕಿ ಹಾಕಿದರು. ಹೀಗೇ ಎಲ್ಲವನ್ನೂ ಎಳೆ ಎಳೆಯಾಗಿ ವಿವರಿಸ್ತಿದ್ದ ಅವ್ರು ಮುಂದುವರಿಸ್ತಾ ಇದ್ರು . . . ಇಡೀ ಎಲುಬು ಹೊತ್ತಿ ಉರಿಯುವವರೆಗೆ ಕಾದು ಕುಳಿತರಂತೆ.ಆಗ ಕೋಳಿ ಕೂಗುವ ಹೊತ್ತಾಗ್ತಾ ಬಂತು.ಬೆಂಕಿಯ ಉರಿಯೂ ಕಡಿಮೆಯಾಗ್ತಾ ಬಂತು.ಈ ಆರೋಪಿಗಳು ಮನೆಗೆ ಹೋಗಿ ಮಲಕ್ಕೊಂಡ್ರು.ಎಲ್ಲಾ ಮುಗೀತು ಅಂತ ನೆಮ್ಮದಿಯಿಂದ 7 ವರ್ಷ ಕಾಲ ಕಳೆದ್ರು.ಯಾವೊಂದು ಪಾಪಪ್ರಜ್ಞೆ ಇಲ್ಲದೆಯೇ.. . .!!!

ಆದರೆ ಕಾಲ ಹಾಗೇ ಉಳಿಯೋದಿಲ್ಲ ಅಲ್ವಾ. . ?. ಕಾಲ ಕೂಡಿಬಂತು ಆರೋಪಿಗಳು ಅತಿಥಿಗಳಾದ್ರು. ಒಳ್ಳೆಯ ಸತ್ಕಾರ ಸ್ವೀಕರಿಸಿದ್ರು.ಕೊನೆಗೂ ಸತ್ಯ ಗೆದ್ದಿತು . . . ರಹಸ್ಯ ಹೊರಬಂತು

ಕಾಮೆಂಟ್‌ಗಳಿಲ್ಲ: