04 ಜುಲೈ 2010

ಇವರಿಗೆ ಇಲ್ಲಿ ಮಣ್ಣಿನ ಪಾಠ . . . . .

ಈ ಶಾಲೆ ಅದ್ಯಾಕೋ ಢಿಫರೆಂಟ್ . . ಅಲ್ಲಿ ಆಟ ಪಾಠದ ಜೊತೆಗೆ ಮಣ್ಣಿನ ಪಾಠವೂ ಇದೆ.ಅಲ್ಲಿ ಅನ್ನದಾತನೂ ಟೀಚರ್ ಆಗ್ತಾನೆ.ಮಕ್ಳು, ಅವ್ರ ಶಿಕ್ಷಕರೆಲ್ಲರೂ ಅಂದು ವಿದ್ಯಾರ್ಥಿಗಳಾಗುತ್ತಾರೆ.ನೇಗಿಲಯೋಗಿಯ ಪಾಠ ಕೇಳ್ತಾರೆ.





ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ - ಕೊಡಗು ಗಡಿಭಾಗದ ಪೆರಾಜೆ ಕುಂಬಳಚೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು. ಎಲ್ಲಾ ಶಾಲೆಗಳಲ್ಲಿ ಆಟ-ಪಾಠಗಳಂತೆ ಇಲ್ಲೂ ಅದರ ಜೊತೆಗೆ ಮಣ್ಣಿನ ಪಾಠವೂ ಇದೆ.ಆದ್ರೆ ಈ ಪಾಠ ಮಾಡುವುದಕ್ಕೆ ಶಿಕ್ಷಕನಾದ್ದು ಮಾತ್ರಾ ನೇಗಿಲಯೋಗಿ. ಬಹುಶ: ಇಡೀ ರಾಜ್ಯದಲ್ಲೇ ಇದೊಂದು ವಿಶೇಷ ಪ್ರಯೋಗ.ಈ ಮಕ್ಕಳಿಗೆ ಇದು ಸ್ಪೆಶಲ್ ಪ್ರಾಕ್ಟಿಕಲ್ ಶಿಬಿರ.ಬೆಳಗಿನಿಂದಲೇ ಶಾಲಾ ಮಕ್ಕಳು ಹೊಲಕ್ಕೆ ಆಗಮಿಸಿ ಭತ್ತದ ಪೈರನ್ನು ನೆಡುವ ಎಲ್ಲಾ ವಿವಿದ ಹಂತಗಳನ್ನು ತಿಳಿದುಕೊಂಡರು.ಇದ್ಯಾಕೆ ಅಂತ ಶಾಲಾ ಶಿಕ್ಷಕರಲ್ಲಿ ಕೇಳಿದ್ರೆ ಮಕ್ಳಿಗೆ ಈ ಮಣ್ಣಿನ ಪಾಠ ಕೂಡಾ ಬೇಕು ಅಂತಾರೆ.ಸ್ಥಳೀಯ ಜನ್ರೂ ಕೂಡಾ ಇದೊಳ್ಳೆಯ ಪಾಠ ಅಂತಾರೆ.ಎಲ್ಲಾ ಕಡೆಯೂ ಇದು ಬೇಕು ಅಂತಾನೂ ಹೇಳ್ತಾರೆ.

ಈ ಮಕ್ಳು ಹೊಲವನ್ನು ಊಳುವ ಟಿಲ್ಲರ್ ಹಿಂದೆಯೇ ಓಡುತ್ತಾ ರೈತನ ಒಡಲಿನಿಂದ ಮಾಹಿತಿ ಪಡೀತಾರೆ.ಹೇಗೆ ಹೊಲವನ್ನು ಹದ ಮಾಡುತ್ತಾರೆ ಅಂತ ಮಳೆಯಲ್ಲೂ ಖುಷಿಯಿಂದ ತಿಳೀತಾರೆ.ಅಷ್ಟಕ್ಕೆ ಮುಗಿದಿಲ್ಲ.ನಾಟಿ ಮಾಡೋದನ್ನೂ ನೋಡ್ತಾರೆ. ನೇಗಿಲಯೋಗಿಯ ಜೊತೆಗೆ ಹೆಜ್ಜೆ ಹಾಕುತ್ತಾ ಗದ್ದೆಯ ಒಳಗಡೆ ಇಳಿದು ಕೆಸರನ್ನು ಮೆತ್ತಿಕೊಂಡು ನಾಟಿನೂ ಮಾಡ್ತಾರೆ.ಅದೂ ಅಲ್ಲ ಪೈರನ್ನು ಕಿತ್ತು ಅದನ್ನು ಮತ್ತೆ ಹೇಗೆ ನಾಟಿ ಮಾಡ್ತಾರೆ ಅಂತನೂ ತಿಳ್ಕೋತಾರೆ ಈ ಶಾಲಾ ಮಕ್ಕಳು.ಇದಿಷ್ಟೇ ಆದ್ರೆ ಪರವಾಗಿಲ್ಲ.ಆ ಗದ್ದೆಯ ಕಿರುದಾದ ಓಣಿಯಲ್ಲಿ ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತಾ ಹೋಗ್ತಾರೆ ಈ ಮಕ್ಳು.ಈ ಎಲ್ಲಾ ತರಬೇತಿ ಮಕ್ಕಳಿಗಂತೂ ಖುಷಿ ನೀಡಿದೆ.ಹಳ್ಳಿ ಮಕ್ಳು ಇವ್ರಾದ್ರೂ ಇದುವರೆಗೆ ಗದ್ದೆಗೆ ಇಳಿಯದ ಈ ಮಕ್ಕಳು ಮೊದಲ ಬಾರಿ ಗದ್ದೆಗೆ ಇಳಿದು ನೇಗಿಲಯೋಗಿಯ ಪಾಠ ಕೇಳಿ ಸಂಭ್ರಮಿಸಿದರು.

ಶಾಲಾ ಮಕ್ಕಳು ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಗದ್ದೆಗೆ ಇಳಿದು ಸಂಭ್ರಮಿಸಿ ನೇಗಿಲಯೋಗಿಯಿಂದ ಮಣ್ಣಿನ ಪಾಠ ಕೇಳಿದ ಮಕ್ಕಳ ಕುರಿತು ರೈತ ಖುಷಿಪಟ್ಟ. ಈ ಮಕ್ಳಾದ್ರೂ ಮಣ್ಣಿನ ಪಾಠ ಕೇಳೋದಿಕ್ಕೆ ಬಂದ್ರಲ್ಲಾ ಅಂತ ನಿಟ್ಟುಸಿರು ಬಿಟ್ಟ.ಯಾಕ್ ಗೊತ್ತಾ. .? ಇವ್ರೆಲ್ಲಾ ಹಳ್ಳಿ ಮಕ್ಳಾದ್ರೂ ಹೊಲ ಎಂದ್ರೇನೂ ಅಂತಾನೇ ಗೊತ್ತಿರೋದೇ ಇಲ್ಲ. ಮಾತ್ರವಲ್ಲ ಇಂದಿನ ಯಾವ ಮಕ್ಳಿಗೂ ಅಕ್ಕಿ ಎಲ್ಲಿ ಬೆಳೆಯುವುದು ಎಂತಾನೇ ಗೊತ್ತಿಲ್ಲದ ಈ ಸಮಯದಲ್ಲಿ ಇದೊಂದು ವಿಶೇಷವಾದ ಪಾಠ.ಭತ್ತ ಬೆಳೆಯುವ ಎಲ್ಲಾ ಹಂತಗಳನ್ನು ಮಕ್ಕಳಿಗೆ ಈ ರೈತ ತಿಳಿಸಿಕೊಟ್ಟ.ಹೀಗಾಗಿ ಇದೊಂದು ಅಪೂರ್ವವಾದ ಕೆಲಸ ಎಲ್ಲಾ ಮಕ್ಳಿಗೂ ಇದೊಂದು ನಿತ್ಯ ಪಾಠವಾಗಲಿ ಅಂತಾನೆ ರೈತ.

ಅಂತೂ ಈಗ್ಲಾದ್ರೂ ಶಾಲಾ ಮಕ್ಳಿಗೆ ಮಣ್ಣಿನ ಪಾಠ ಹೇಳೋದಿಕ್ಕೆ ಮೇಷ್ಟ್ರಾದ್ರೂ ಮುಂದಾದ್ರಲ್ಲಾ ಅನ್ನೋದೇ ಒಂದು ಖುಷಿ.ಇದೇ ದೊಡ್ಡ ಸಾಧನೆ ಅಂತಲ್ಲ.ಇದ್ರಿಂದಲ್ಲೇ ಜಗವೆಲ್ಲಾ ಬದಲಾಗುತ್ತೆ ಅಂತಲ್ಲ.ಅಂತೂ ಮಕ್ಳಿಗೆ ಇಷ್ಟಾದ್ರೂ ತಿಳಿತಲ್ಲಾ ಅನ್ನೋದೇ ಸಮಾಧಾನ. .

1 ಕಾಮೆಂಟ್‌:

ಸೀತಾರಾಮ. ಕೆ. / SITARAM.K ಹೇಳಿದರು...

ಉಪಯುಕ್ತ ಅವಶ್ಯ ಪ್ರಯೋಗ. ಎಲ್ಲ ಕಡೆಗೂ ಅಳವಡಿಕೆಯಾಗಬೇಕು. ಮಾಹಿತಿಎ ಧನ್ಯವಾದಗಳು.