
ಶಿರಾಡಿ ಈಗಲೂ ಸಕತ್ ಆಗಿದೆ. ಹೇಗೆ ಅಂತನಾ?. ಅಯ್ಯೋ ಅದು ಒಂದು ಕತೆ ರೀ. ಶಿರಾಡಿ 8 ತಿಂಗಳ ನಂತರ ಪ್ರಸಗೊಂಡಾಗ ಅಬ್ಬಾ.. ಎನ್ನುವ ನೆಮ್ಮದಿ. ಅದು "ಆ" ಪ್ರಸಗೊಂಡಾಗ ಆದ ಸಂತಸದಷ್ಟೇ.ಅದುವರೆಗಿನ ನೋವುಗಳೆಲ್ಲಾ ಆ ಕ್ಷಣದಲ್ಲಿ ಮಾಯವಾಗಿತ್ತು.ಆದರೆ ಈಗ ಕತೆ ಅದಲ್ಲ. ಹಾಗೆ ಪ್ರವಸಗೊಂಡು ಇನ್ನೂ 3 ತಿಂಗಳಲಾಗಿಲ್ಲ. ಅದಾಗಲೆ ಇನ್ನೊಂದಕ್ಕೆ ಸಿದ್ಧವಾಗಿ ಬಿಟ್ಟಿದೆ ರೀ...!!!??. ಮತ್ತೊಂದು ನೋವಿಗೆ ಕಾರಣವಾಗುತ್ತಲಿದೆ. ಗಮ್ಮತ್ತು ಗೊತ್ತಾ. ನಾನು ಮತ್ತು ಮಿತ್ರ ಲೋಕೇಶ ಆ ಕಡೆ ಹೋಗಿದ್ದೆವು. ಘಾಟಿಯ ಪೂರ್ತಿಯಲ್ಲ ಮುಕ್ಕಾಲು ಭಾಗ ಹೋಗಿ ಸಂಪೂಣ ವೀಕ್ಷಿಸಿ ಬಂದು ಇನ್ನೇನು ವರದಿಗೆ ಅಂತಿಮ ರೂಪ ಕೊಡಬೇಕಲ್ಲ ಅಂತ ಕ್ಯಾಮಾರಾದ ಮುಂದೆ ನಿಂತಾಗ ಶರ್ಟ್ ಸಂಪೂರ್ಣ ಬಿಳಿ... ಮೀಸೆ .... ತಲೆಗೂದಲೂ ಹಾಗೇ ಬಿಳಿ ಆಗಿತ್ತು. ಆ ನಡುವೆಯೇ ವರದಿಗೆ ಅಂತಿಮ ರೂಪ ನೀಡಿ ಹೊರಟದ್ದೇ. ಮನೆಗೆ ಬಂದು ಸ್ನಾನ ಮಾಡಿ ಮಲಗಿದ ಮೇಲೆ ಎಚ್ಚರವಾದದ್ದು ಬೆಳಗ್ಗೆ 8 ಕ್ಕೆ....
ಶಿರಾಡಿ. ಯಾರಿಗೆ ಗೊತ್ತಿಲ್ಲ ಹೇಳಿ. ಅಂದು ಸುಮಾರು 8 ತಿಂಗಳುಗಳ ಕಾಲ ವಾಹನ ಸಂಚಾರ ಬಂದ್ ಆದ ಸಂದರ್ಭದಲ್ಲಿ ಶಿರಾಡಿಯು ಅತ್ಯಂತ ಹೆಚ್ಚು ಪ್ರಚಾರ ಪಡೆಯಿತು. ಅಂದ ಹಾಗೆ ಶಿರಾಡಿಯು ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಗುಂಡ್ಯದಿಂದ ಮುಂದಿನ ಘಾಟಿ ಪ್ರದೇಶ. ಕಳೆದ ವರ್ಷ ಈ ರಸ್ತೆಯು ತೀರಾ ಹದಗೆಟ್ಟು ಸಂಚಾರವೇ ಕಡಿದು ಹೋಗುವ ವೇಳೆ ಎಚ್ಚೆತ್ತ ಸರಕಾರ ಹಾಗೂ ಜನಪ್ರತಿನಿಧಿಗಳು ದುರಸ್ಥಿಗೆ ಮುಂದಾದರು. ಈ ಘಾಟಿ ರಸ್ತೆಯನ್ನು ಸಂಪೂರ್ಣವಾಗಿ ಸುವ್ಯವಸ್ಥಿತವನ್ನಾಗಿಸಲು ಎರಡು ಹಂತಗಳಲ್ಲಿ ಅನುದಾನವನ್ನು ಹೆಚ್ಚಿಸಲಾಯಿತು. ಹಾಗೆ ಒಟ್ಟು ಅನುದನ 46.42 ಕೋಟಿ ರೂಗಳ ಬೃಹತ್ ಹಣವನ್ನು ಶಿರಾಡಿಯಲ್ಲಿ ಸುರಿಯಲಾಯಿತು. ಅದರಂತೆ ಶಿರಾಡಿಯ 34 ಕಿಮೀ ರಸ್ತೆಯ ಪೂರ್ತಿ ದುರಸ್ಥಿಗೆ ಸಂಬಂಧಿತ ಇಲಾಖೆ ಮುಂದಾಯಿತು. ಆ ಪ್ರಕಾರ ಈ ರಸ್ತೆಯ 13 ತಿರುವುಗಳು, 54 ಮೋರಿಗಳು , ಹಾಗೂ 2 ಸೇತುವೆಗಳನ್ನು ದುರಸ್ಥಿಗೆ ಮುಂದಾಗಿತ್ತು. 13 ಕಾಂಕ್ರೀಟ್ ರಸ್ತೆಗಳ ದುರಸ್ಥಿಯ ಗುತ್ತಿಗೆಯನ್ನು ದಕ್ಷಿಣ ಕನ್ನಡದ ಉಜಿರೆಯ ಭಂಡಾರ್ಕರ್ ಕಂನ್ಟ್ರಕ್ಷನ್ ಅವರಿಗೆ 8.42 ಕೋಟಿ ರೂಗಳಿಗೆ ನೀಡಲಾಗಿತ್ತು. ಮತ್ತು ಇನ್ನೂ ಅನುದಾನಗಳಿಂದ ಚರಂಡಿ ವ್ಯವಸ್ಥೆಗೂ ಇದೇ ಸಂಸ್ಥೆಗೆ ಗುತ್ತಿಗೆಯನ್ನು ನೀಡಲಾಗಿತ್ತು. ಈ ಕಾಂಕ್ರೀಟ್ ರಸ್ತೆಯು 60 ಸೆಂಟೀಮೀಟರ್ ನಷ್ಟು ದಪ್ಪವಾಗಿದೆ.ಒಟ್ಟು 13 ತಿರುವುಗಳು 108 ಕೀ ಮೀ ಅಳತೆಯಾಗುತ್ತದೆ. ಆದರೆ ರಸ್ತೆಯ ಡಾಮರೀಕರಣವನ್ನು ತಮಿಳುನಾಡು ಮೂಲದ ದುರ್ಗಾ ಕಂನ್ಟ್ರಕ್ಷನ್ ನವರಿಗೆ 24 ಕೋಟಿ ರೂಗಳ ವೆಚ್ಚದಲ್ಲಿ ಗುತ್ತಿಗೆಯನ್ನು ನೀಡಲಾಗಿತ್ತು.ಇನ್ನೊಂದು ಕಾಮಗಾರಿಯನ್ನು ರಮೇಶ್ ಕೊಟ್ಟಾರಿ ಕಂನ್ಟ್ರಕ್ಷನ್ ನವರಿಗೆ 5.37ಕೋಟಿ ರೂಗಳ ವೆಚ್ಚದಲ್ಲಿ ನೀಡಲಾಗಿತ್ತು. ಹೀಗಾಗಿ ಈ ಶಿರಾಡಿ ರಸ್ತೆಯ ಸಂಪೂರ್ಣ ದುರಸ್ಥಿ ಮಾಡುವ ಸಲುವಾಗು 2007 ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಗೊಳಿಸಿ ಕಾಮಗಾರಿಯನ್ನು ಶುರುಮಾಡಲಾಗಿತ್ತು. ಸುಮಾರು 8 ತಿಂಗಳ ಬಳಿಕ ಅಂದರೆ 2008 ಎಪ್ರಿಲ್ 30 ರೊಳಗಾಗಿ ಶಿರಾಡಿಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಲಾಗಿತ್ತಾದರೂ ತಾಂತ್ರಿಕ ಕಾರಣಗಳಿಗಾಗಿ ವಿಳಂಬಗೊಂಡು ಜೂನ್ ಮೊದಲವಾರದಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಏಕಾಏಕಿ ಶಿರಾಡಿಗೆ ಆಗಮಿಸಿದ ಕೇಂದ್ರ ಭೂ ಸಾರಿಗೆ ಸಚಿವರು ರಸ್ತೆಯನ್ನು ಮುಕ್ತಗೊಳಿಸಲು ಸೂಚನೆ ನೀಡಿದರು .ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು ಶಿರಾಡಿಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಮಳೆಬೀಳುವ ಪ್ರದೇಶವಾದ್ದರಿಂದ ಮುತುವರ್ಜಿಯಿಂದ ಕೆಲಸ ಮಾದಲಾಗಿದೆ ಎಂದೂ ಹೇಳಿದ್ದರು.ಗುಂಡ್ಯ ಬಿ ಸಿ ರೋಡ್ ರಸ್ತೆಯೂ ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಅಂತಲೂ ಹೇಳಿದ್ದರು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಶಿರಾಡಿಯ ಕತೆ ಮತ್ತದೇ. ಎಲ್ಲೆಲ್ಲೂ ರಾಡಿ ಎದ್ದಿದೆ. ಡಾಮರು ರಸ್ತೆಯೆ ಕಾಣುತ್ತಿಲ್ಲ. ಸರ್ವಂ ಧೂಳು ಮಯಂ.
ಇಂದು ಶಿರಾಡಿಯ ಕೆತೆ ಎನು?. ಎನ್ನುವ ಪ್ರಶ್ನೆಗೆ ಉತ್ತರ ಹುಡುಕ ಹೊರಟರೆ ಗುಂಡ್ಯದಿಂದಲೇ ರಸ್ತೆ ಹದಗೆಡಲು ಆರಂಬಗೊಂಡಿದೆ. ಎಲ್ಲಾ ತಿರುವುಗಳಲ್ಲಿ ಡಾಮರನ್ನು ಹುಡುಕಿತೆಗೆಯಬೇಕಾಗಿದೆ. ಒಂದು ವೇಳೆ ಘನ ವಾಹನಗಳ ಹಿಂದೆ ನಾವೇನಾದರೂ ಹೋದರೆ ಘಾಟಿ ಪ್ರಯಾನ ಮುಗಿದೊಡನೆ ನಮ್ಮ ಬಣ್ಣವೂ ಬದಲಾಗಿರುತ್ತದೆ. ಅಷ್ಟೂ ಧೂಳು ಎದ್ದು ಬರುತ್ತದೆ. ಸುತ್ತಲಿನ ಮರ ಗಿಡಗಳು ತಮ್ಮ ಬಣ್ಣವನೇ ಬದಲಾಯಿಸಿ ಬಿಟ್ಟಿವೆ. ಈವರೆಗೆ ಕಾಂಕ್ರೀಟ್ ರಸ್ತೆಗಳು ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿಲ್ಲ. ಸುಲಭದಲ್ಲಿ ಹೇಳುವುದಾದರೆ ಗುಂಡ್ಯದಿಂದ ಆರಂಭಿಸಿ ಶಿರಾಡಿ ಘಾಟಿ ಪೂರ್ತಿ ಡಾಮರು ರಸ್ತೆಯ ಎಡ್ರೆಸ್ಸೇ ಇಲ್ಲ. ಇನ್ನೂ ಒಂದು ಗಮನಿಸಬೇಕಾದ ಅಂಶವೆಂದರೆ ಕೆಂಪುಹೊಳೆಯಿಂದ ಮೇಲಿನ ಪ್ರದೇಶದಲ್ಲಿ ಇನ್ನೂ ರಸ್ತೆಗೆ ಇಂಟರ್ಲಾಕ್ ಅಳವಡಿಸುವ ಕಾರ್ಯ ಮುಗಿದಿಲ್ಲ. ದುರಂತವೆಂದರೆ ಶಿರಾಡಿ ರಸ್ತೆಯು ವಾಹನ ಸಂಚಾರಕ್ಕೆ ಮುಕ್ತಗೊಂಡು ಇನ್ನೂ 3 ತಿಂಗಳು ಮುಗಿದಿಲ್ಲ ಈ ಮೊದಲೇ ರಸ್ತೆ ಎಕ್ಕುಟ್ಟಿ ಹೋಗಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟು ಶಿರಾಡಿ ದುರಸ್ಥಿಗಾಗಿ ವಿನಿಯೋಗಿಸಿದ್ದ 46.42 ಕೋಟಿ ಎಲ್ಲಿ ಹೋಯಿತು ಎನ್ನುವುದೇ ಒಂದು ಪ್ರಶ್ನೆಯಾದರೆ ಅಂದು ಮಳೆ ಆರಂಭದಲ್ಲೇ ಮಾಡಿದ ಕಾಮಗಾರಿ ಈ ಅವ್ಯವಸ್ಥೆಗೆ ಕಾರಣವೇ ಎಂಬುದು ಇನ್ನೊಂದು ಸಂಶಯ. ಈ ಎಲ್ಲದರ ನಡುವೆ ಸಚಿವರೇ ಈ ಕಾಮಗಾರಿಗೆ ಸರ್ಟಿಫಿಕೇಟ್ ನೀಡಿರುವುದು ಇನ್ನೊಂದು ಸಂಶಯಕ್ಕೆ ಕಾರಣವಾಗಿದೆ.
ಇಲ್ಲಿ ಇನ್ನೂ ಒಂದು ಅಂಶ ಬೆಳಕಿಗೆ ಬರುವುದು ಅದಿರು ಲಾರಿಗಳ ಓಡಾಟ. ಅತ್ಯಧಿಕ ಭಾರದ ಲಾರಿಗಳು ಈ ರಸ್ತೆಯಲ್ಲಿ ಸಾಗುವ ಕಾರಣದಿಂದಾಗಿ ಶಿರಾಡಿ ಇಷ್ಟು ಹದಗೆಡಲು ಕಾರಣವೇ?. ಆದರೆ ಅಧಿಕಾರಿಗಳೇ ಹೇಳಿರುವಂತೆ ಅತ್ಯಂತ ವ್ಯವಸ್ಥಿತವಾದ ರಸ್ತೆ ನಿರ್ಮಾಣ ಮಾಡಿರುವ ಕಾರಣ ಯಾವುದೇ ತೊಂದರೆಯಿಲ್ಲ. ಈ ರಸ್ತೆಯಲ್ಲಿ ಸರಿಸುಮಾರು ಪ್ರತಿನಿತ್ಯ 35 ಸಾವಿರ ವಾಹನಗಳು ಓಡಾಡುತ್ತವೆ.ಈ ಪೈಕಿ ಅದಿರು ಲಾರಿಗಳು 5 ರಿಂದ 10 ಸಾವಿರ ಓಡಾಡುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಅದಿರು ಲಾರಿಗಳ ಸಂಖ್ಯೆ ಕಡಿಮೆಯಾಗಿರುವುದು ಕೂಡಾ ತಿಳಿದುಬರುತ್ತದೆ. ಕಾನೂನು ಪ್ರಕಾರ ಈ ಲಾರಿಗಳೆಲ್ಲಾ ನಿಯಮಿತವಾದ ಭಾರಗಳನ್ನೇ ಹೇರಬೇಕು. 6 ಚಕ್ರದ ಲಾರಿಗಳು 16.2 ಮೆಟ್ರಿಕ್ ಟನ್ , 10 ಚಕ್ರದ ಲಾರಿಯಲ್ಲಿ 25 ಮೆತ್ರಿಕ್ ಟನ್, 22 ಚಕ್ರದ ಲಾರಿಯಲ್ಲಿ 44 ಮೆಟ್ರಿಕ್ ಟನ್ ಭಾರವನ್ನು ಹೇರಿಕೊಂಡು ರಸ್ತೆಯಲ್ಲಿ ಸಾಗಬಹುದಾಗಿದೆ. ಈ ಭಾರಕ್ಕೆ ತಕ್ಕಂತೆ ರಸ್ತೆಯನ್ನು ವಿನ್ಯಾಸಗೊಳಿಸಬೇಕಾಗುತ್ತದೆ. ಆದರೆ ಈ ಭಾರಕ್ಕಿಂತ ಹೆಚ್ಚಿನ ಭಾರವು ಲಾರಿಯಲ್ಲಿ ಹಾಕಿದಾಗ ಅದು ರಸ್ತೆಯ ಮೇಲೂ ಪರಿಣಾಮ ಬೀರುತ್ತದೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಯಾವುದೇ ರಸ್ತೆಯನ್ನು ಆಯಾ ಪ್ರದೇಶ ಮಳೆಯನ್ನು ಆಧರಿಸಿಕೊಂಡು ಅದಕ್ಕೆ ಅನುಗುಣವಾಗಿ ರಸ್ತೆಯನ್ನುವಿನ್ಯಾಸಗೊಳಿಸಿ ಅನುದಾನವನ್ನು ಪಡೆಯಬೇಕು. ಆದರೆ ಶಿರಾಡೀಯಂತಹ ಪ್ರದೇಶದಲ್ಲಿ ವಾರ್ಷಿಕವಾಗಿ ಸರಾಸರಿ 250 ರಿಂದ 400 ಇಂಚು ಮಳೆ ಬೀಳುತ್ತದೆ. ಆದರೆ ಈ ಲೆಕ್ಕವನ್ನು ಮಾಡದೆ ದೂರದಲ್ಲೆಲ್ಲೋ ಎ ಸಿ ಕಚೇರಿಯಲ್ಲಿ ಕುಳಿತು ಲೆಕ್ಕ ಹಾಕಿ ಮಾಡುವ ರಸ್ತೆಗಳು ಶಿರಾಡಿಯಂತಾಗದೇ ಉಳಿದೀತೇ?.ಎನ್ನುವುದು ಕೂಡಾ ಚರ್ಚೆಯಾಗಬೇಕಾದ ವಿಷಯವಾಗಬೇಕಾಗಿದೆ.
ಒಟ್ಟಿನಲ್ಲಿ ಸುಮಾರು 8 ತಿಂಗಳುಗಳ ಕಾಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಶಿರಾಡಿಯನ್ನು ದುರಸ್ಥಿ ಪಡಿಸಿ ಅತ್ತ ಚಾರ್ಮಾಡಿಯನ್ನೂ ದುಸ್ಥಿತಿಗೆ ತಳ್ಳಿ ಇತ್ತ ಮಡಿಕೇರಿಯ ಸಂಪಾಜೆ ಘಾಟಿಯನ್ನೂ ಹಾಳುಗೆಡಹಿ ಇದೀಗ ಮಾಡಿದ ಉದ್ಘಾಟನೆಗೊಂಡು 3 ತಿಂಗಳಲ್ಲೇ ಹಾಳಾಗಿರುವ ಶೀರಾಡಿಯನ್ನು ಇನ್ನೂ ಕೆಲ ತಿಂಗಳುಗಳ ಬಂದ್ ಗೊಳಿಸ ಬೇಕಾದ ದಿನ ದೂರವಿಲ್ಲ. ಆದರೆ ಈಗಾಗಲೆ ಶಿರಾಡಿಯಲ್ಲಿ ವಿನಿಯೋಗಿಸಿದ ಆ ಕೋಟಿ ಹಣ ನೀರಮೇಲಿನ ಹೋಮವೇ? ಎಂಬ ಪ್ರಶ್ನೆಗೆ ಉತ್ತರ ನೀಡುವವರಾರು?.