23 ಆಗಸ್ಟ್ 2015

ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ. .

                                         ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ



ಅಡಿಕೆ ಬೆಳೆಗಾರರು  ಕಳೆದ ಹಲವಾರು ಸಮಯಗಳಿಂದ ಸಂಕಟ ಪಡುವುದು  ಕೊಳೆರೋಗಕ್ಕೆ. ಮಳೆಗಾಲ ಶುರುವಾಯಿತು ಅಂದಾಗ ಭಯ ಶುರುವಾಗುತ್ತದೆ.ಕಾರಣ ಇಷ್ಟೇ, ಕೊಳೆರೋಗ ಬಾರದಂತೆ ಔಷಧಿ ಸಿಂಪಡಣೆಯಾಗಬೇಕು, ಆದರೆ ಇದಕ್ಕೆ ಕಾರ್ಮಿಕರ ಕೊರತೆ ಇದೆ.ಇನ್ನು ಕಾರ್ಮಿಕರು ಇದ್ದರೂ ವಿಪರೀತ ಸುಲಿಗೆ, ಕೃಷಿಕರನ್ನೇ ಶೋಷಣೆ. ಇದಕ್ಕೆಲ್ಲಾ ಪರಿಹಾರ ಬೇಕು ಅಂತಲೇ ಯೋಚನೆ ಇತ್ತು.
ಪರಿಸ್ಥಿತಿ ಹೀಗಿರುವಾಗ ನಮ್ಮ ವಾಟ್ಸ್‌ಪ್ ಗ್ರೂಪ್‌ಗೆ ಮಿತ್ರ ಚಿನ್ಮಯ ಒಂದು ಲೈನ್ ಮೆಸೇಜ್ ಪೋಸ್ಟ್ ಮಾಡಿದರು, ಔಷಧಿ ಸಿಂಪಡಣೆಗೆ ಕಾರ್ಮಿಕರ ತಂಡ ಇದೆ ಎಂದು. ಈ ಜಾಡು ಹಿಡಿದು ಪುತ್ತೂರು ತಾಲೂಕಿನ ಪೆರ್ನೆಯ ಕಡೆಗೆ ಹೋದಾಗ ಎಲ್ಲಾ ಸಂಗತಿಯನ್ನು  ಕಾರ್ಮಿಕ ಮುಖಂಡ ಯಶೋಧರ ಬಿಚ್ಚಿಟ್ಟರು. ಆ ಬಳಿಕ ನನಗಂತೂ ದೂರವಾಣಿ ಕರೆಗಳ ಮೇಕೆ ಕರೆಗಳು. ಆಗಲೇ ನನಗೆ ಅನ್ನಿಸಿದ್ದು  ಔಷಧಿ ಸಿಂಪಡಣೆಗೆ ಕಾರ್ಮಿಕರು ಇಷ್ಟೊಂದು ರೀತಿಯಲ್ಲಿ  ಶೋಷಣೆ ಮಾಡುತ್ತಾರಾ ?, ಹೀಗೆಲ್ಲಾ ಹೇಳಲಾಗದ ಸಮಸ್ಯೆಗಳು ಇದೆಯಾ ?.

ಹೀಗಿದೆ ಆ ತಂಡದ ಪರಿಚಯ. .  ..

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪೆರ್ನೆಯ ಯುವಕ ತಂಡ ಗುಂಪಿನ ಮೂಲಕ ಈಗ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದೆ.ಈ ತಂಡದ ನಾಯಕ ಯಶೋಧರ ನಾಯ್ಕ್.ಇವರು ಕಳೆದ 15 ವರ್ಷಗಳಿಂದ ತೋಟಗಳಿಗೆ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದ್ದಾರೆ.ಇವರ ಜೊತೆ ಕಳೆದ ಮಾಧವ ನಾಯ್ಕ್ ಕೂಡಾ ಸಾತ್  ನೀಡುತ್ತಿದ್ದರು.ಇದೀಗ 5 ವರ್ಷಗಳಿಂದ 8 ಜನರ ಯುವಕರ ತಂಡ ಕಟ್ಟಿ ಔಷಧಿ ಸಿಂಪಡಣೆಯ ಕೆಲಸ ಮಾಡುತ್ತಿದ್ದಾರೆ.ಈಗ ತಂಡದಲ್ಲಿ  ದೇವಪ್ಪ  ನಾಯ್ಕ್, ಗಂಗಾಧರ ನಾಯ್ಕ್,ರಾಜೇಶ್ ನಾಯ್ಕ್,ವಿಜಯ ನಾಯ್ಕ್,ಪದ್ಮನಾಭ ಪೂಜಾರಿ ಹಾಗೂ ಮಹೇಶ್ ಶೆಟ್ಟಿ ಇದ್ದಾರೆ. ಈಗಾಗಲೇ ಪೆರ್ನೆ, ಸರಪಾಡಿ, ನೆಲ್ಯಾಡಿ,ಮಂಜೇಶ್ವರ ಸೇರಿದಂತೆ 35 ರಿಂದ 40 ತೋಟಗಳಲ್ಲಿ  ಔಷಧಿ ಸಿಂಪಡಣೆ ಹಾಗೂ ಅಡಿಕೆ ಕಟಾವು ಮಾಡುವ ಹೊಣೆಯನ್ನು  ಹೊತ್ತಿದ್ದಾರೆ. ಶನಿವಾರ ಉಪ್ಪಿನಂಗಡಿ ಬಳಿಯ ಪೆರ್ನೆ ಬಿಳಿಯೂರು ಕಟ್ಟೆಯ ಧನ್ಯಕುಮಾರ್ ಅವರ ತೋಟದಲ್ಲಿ  ಔಷಧಿ ಸಿಂಪಡಿಸುವ ಕಾರ್ಯ  ನಡೆಯುತ್ತಿದ್ದರು.
ಅಡಿಕೆ ತೋಟಕ್ಕೆ ಔಷಧಿ ಸಿಂಪಡಣೆಯ ವೇಳೆ, ಮೋಟಾರು ಸಹಿತ 8 ಜನ ಮನೆಗೆ ಆಗಮಿಸುತ್ತಾರೆ, ಮನೆ ಮಂದಿ ಔಷಧಿ ತಯಾರಿಸಿ  ನೀಡಿದರೆ ಮುಗಿಯಿತು. ಇವರ ಜೊತೆ ಔಷಧಿ ತಯಾರಿಗೆ ಜನ ಬೇಕಾದರೆ ಕೂಡಾ ಇವರೇ ಕರೆದುಕೊಂಡು ಬರುತ್ತಾರೆ. 8 ಜನರಿಗೆ ಕನಿಷ್ಟ 3 ಜನ ಸಹಾಯಕರ ಅಗತ್ಯವಿದೆ ಎನ್ನುವ ಯಶೋಧರ , ಈ ಹೊಣೆಯನ್ನೂ ನಾವು ಹೊತ್ತುಕೊಳ್ಳುತ್ತೇವೆ ಎಂದು  ಹೇಳುತ್ತಾರೆ.ಇಷ್ಟೂ ಜನ ಒಂದು ದಿನದಲ್ಲಿ  6 ರಿಂದ 7 ಸಾವಿರ ಅಡಿಕೆ ಮರಗಳಿಗೆ ಔಷಧಿ ಸಿಂಪಡಿಸುತ್ತಾರೆ.ಮೋಟಾರು ಸಹಿತ ಮನೆಗೆ ಮನೆ ಆಗಮಿಸಿ ಔಷಧಿ ಸಿಂಪಡಣೆಯ ಕಾರ್ಯದಲ್ಲಿ  ನಿರತವಾಗುತ್ತದೆ.ಮನೆ ಮಂದಿ ಔಷಧಿ ತಯಾರಿಸಿ  ನೀಡಿದರೆ ಮುಗಿಯಿತು. ಅಡಿಕೆ ಕಟಾವು ವೇಳೆ ಕೂಡಾ ಜನವನ್ನೂ ವ್ಯವಸ್ಥೆ ಮಾಡಿ ಮನೆಗೆ ಬಂದು ಕೆಲಸ ಮಾಡಿ ತೆರಳುತ್ತಾರೆ.ಇಡೀ ವರ್ಷ ಈ ತಂಡ ಇದೇ ಕೆಲಸ ಮಾಡುತ್ತದೆ.ಮೋಟಾರಿಗೆ ಬಾಡಿಗೆ 2 ಸಾವಿರ ರೂಪಾಯಿ ಪಡೆಯುವ ಈ ತಂಡ ತಮ್ಮ ಕೆಲಸ ಕಾರ್ಯಗಳಿಗೆ ದಿನ ಲೆಕ್ಕದಲ್ಲಿ  ಸಂಬಳವನ್ನು  ಪಡೆಯುತ್ತಾರೆ.ಇವರು  ದಿನಕ್ಕೆ 1200 ರೂಪಾಯಿ ಸಂಬಳ ಪಡೆಯುತ್ತಾರೆ.



ಬದಲಾವಣೆ ಬೇಕು.  .
ಈಗ ಇಲ್ಲಿ  ರಚನೆಯಾದ ತಂಡ ಬಹುಶ: ಶಾಶ್ವತವಾಗಬಹುದು.ಏಕೆಂದರೆ ತಂಡದ ಸದಸ್ಯರು ಬಹುತೇಕ ಮಂದಿ ಸಂಬಂಧಿಕರು.ಒಂದೆರಡು ಮಂದಿ ಮಾತ್ರವೇ ಇತರರು. ಹೀಗಾಗಿ ತಂಡ ಒಡೆಯುವ ಸಾಧ್ಯತೆ ಕಡಿಮೆ.ಒಡೆದರೂ ಮತ್ತೊಂದು ಅಂತಹದ್ದೇ ತಂಡ ರಚನೆಯಾಗಬಹುದು.ಇದು ಕೂಡಾ ಕೃಷಿಕರಿಗೆ ಪ್ರಯೋಜನ. ಇದರ ಜೊತೆಗೇ ಸಹಕಾರಿ ಸಂಘಗಳು ಇಂತಹ ತಂಡ ರಚನೆ ಮಾಡುವ ಬಗ್ಗೆ ಯೋಚಿಸಿದರೆ ಹೆಚ್ಚು ಗಟ್ಟಿಯಾಗಬಹುದು. ಏಕೆಂದರೆ ಆಗ ಸಹಕಾರಿ ಸಂಘಕ್ಕೆ ಬದ್ದತೆ ಇರುತ್ತದೆ. ಕೃಷಿಕರಿಗೂ ಹಾಗೆಯೇ. ಇನ್ನು  ಸಂಬಳದ ಬಗ್ಗೆ ಕೃಷಿಕರು  ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಏಕೆಂದರೆ ಒಂದೇ ದಿನದಲ್ಲಿ  ತೋಟದ ಔಷಧಿ ಸಿಂಪಡಣೆ ಕೆಲಸ ಮುಗಿಯುತ್ತದೆ, ಎಷ್ಟೇ ಮಳೆ ಇದ್ದರೂ ದಿನದಲ್ಲಿ  ಒಂದೆರಡು ಗಂಟೆ ಮಳೆಗೆ ವಿರಾಮ ಇದ್ದೇ ಇರುತ್ತದೆ.ಆಗ ಬಹುಪಾಲು ಸಿಂಪಡಣೆಯೂ ಆಗುತ್ತದೆ.
ಹೊಸ ಪ್ರಕ್ರಿಯೆಗಳು ಆರಂಭವಾದಾಗ ಕೆಲವೊಂದು ಲೋಪಗಳೂ ಇರುತ್ತದೆ. ಆದರೆ ಕೃಷಿಕರು ಎಲ್ಲವೂ ನಾವು ಅಂದುಕೊಂಡತೇ ಈಗ ಆಗಬೇಕು ಎಂದರೂ ಆಗದು.ಹೀಗಾಗಿ ಬದಲಾವಣೆ ಬೇಕು, ಅದನ್ನು  ಒಪ್ಪಿಕೊಳ್ಳಬೇಕು, ತೀರಾ ನಷ್ಟವಾಗುವುದಾದರೆ ಮಾತ್ರವೇ ಯೋಚಿಸಬೇಕು. ಹೀಗಾದಾಗ ಕೃಷಿ ಉಳಿಯಲು, ಬೆಳೆಯಲು ಸಾಧ್ಯವಿದೆ.
.



ಮನಸ್ಸೇ ಬೀಗ ತೆಗೆ. . .


ಅನೇಕ ದಿನಗಳಿಂದ ಈ ಕಡೆಗೆ ಬರಲು ಸಾದ್ಯವೇ ಆಗಿರಲಿಲ್ಲ.ಮನಸ್ಸು ಸದಾ ಇತ್ತ ಹೊರಳುತ್ತಲೇ ಇತ್ತು.ಆದರೆ ಸಾಧ್ಯವಾಗುತ್ತಿರಲಿಲ್ಲ, ಅದಕ್ಕೊಂದು ಬೀಗ ಇತ್ತು.ಈಗಂತೂ ಆ ಬೀಗ ಕಳಚಿ ಬಂದಿದ್ದೇನೆ. .

ಅಂದು ಒಂದು ದಿನ ನಾನು ಮನಸ್ಸಿನ ಸಂಗತಿಗಳನ್ನು  ಮೌನವಾಗಿ ಹೇಳುತ್ತಿದೆ, ಇದೆಲ್ಲವೂ ಇಲ್ಲಿ ದಾಖಲಿಸುತ್ತಲೇ ಇದ್ದೆ.ಅನೇಕ ರೀತಿಯಿಂದ ಸ್ಪೂರ್ತಿ, ಪ್ರೋತ್ಸಾಹ ಇತ್ತು. ಒಂದು ದಿನ ಇದ್ದಕ್ಕಿದ್ದಂತೆ ನನಗೆ ಒತ್ತಡ ಬಂದಿತ್ತು, ಹಿತವಚನ, ಸಲಹೆ ಬಂತು. ಕೊನೆಗೆ ಈ ವೇಗಕ್ಕೆ ಕಡಿವಾಣ ಹಾಕಿದೆ.ಮನಸ್ಸಿನ ಮಾತಿಗೆ ಬೀಗ ಜಡಿದೆ. ಆದರೆ ನನಗೆ ಈಗಲೂ ನೆನಪಿದೆ, ಅಂದು ನನ್ನ ಮನಸ್ಸಿನ ಮೂಲಕ ಬಂದ ಮೌನದ ಮಾತುಗಳು ಇಂದು ದೊಡ್ಡ ಸುದ್ದಿಯಾಗಿದೆ. ಚರ್ಚೆಯಾಗುತ್ತಲೇ ಇದೆ. ಇರಲಿ ನನಗೆ ಅದು ಸಂಬಂಧಪಟ್ಟದ್ದಲ್ಲ. ನನಗೆ ಯಾರ ಬಳಿಯೂ ಬೇಸರವಿಲ್ಲ, ನೋವುಗಳೂ ಇಲ್ಲ. ಯಾರ ವಿರೋಧಿಯಂತೂ ಅಲ್ಲವೇ ಅಲ್ಲ. ಎಲ್ಲರೂ ನನ್ನವರೇ, ನಮ್ಮವರೇ. ಅಂದು ಮನಸ್ಸು ಕೊಂಚ ಮೌನವಾಗಿತ್ತು, ಮೌನಿಯಾಗಿತ್ತು. ಆದರೆ ಈಗ ಹಾಗಿಲ್ಲ. ಎಲ್ಲವೂ ರೈಟ್, ಎಲ್ಲದಕ್ಕೂ ರೈಟ್. ಹಾಗಿದ್ದರೂ ಈ ಬೀಗ ತೆರವು ಮಾಡಲು ಆಗಿರಲಿಲ್ಲ. ಈಗ ತೆರೆದಿದ್ದೇನೆ.
ಇಂದಿನಿಂದಲೇ ಇಲ್ಲಿ  ಶುರು.  ..

13 ಜೂನ್ 2014

ಇದೆಲ್ಲದರ ನಡುವೆ ನಮ್ಮೊಳಗೊಬ್ಬ ಮೋದಿ ಬೆಳೆಯದಿದ್ದರೆ ಹೇಗೆ ?


ಕಳೆದ ಅನೇಕ ದಿನಗಳಿಂದ ನನ್ನನ್ನು  ಕಾಡುತ್ತಲೇ ಇತ್ತು. ಇಂದು ಇಡೀ ದೇಶಕ್ಕೆ ದೇಶವೇ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು  ಹೊಗಳುತ್ತಿದೆ. ಇಷ್ಟೇ ಆದರೆ ಸಾಕೇ ? ದೇಶ ನಂ.1 ಆಗಲು ಸಮರ್ಥವಾಗಿ ತಲೆ ಎತ್ತಲು ಮೋದಿ ಅವರ ಶ್ರಮ ಮಾತ್ರಾ ಸಾಕಾ ? ನಾವು ದಿನವೂ ಮೋದಿ ಅವರನ್ನು  ಹೊಗಳಿಕೊಂಡೇ ಇದ್ದರೆ ಸಾಕೇ ?, ಅಂತ ಅನಿಸುತ್ತಲೇ ಇದೆ.ಹಾಗಾದರೆ ನಾನೇನು ಮಾಡಬಹುದು ?, ನಾನೇಕು ಮಾಡಬೇಕು ಎಂದು  ಯೋಚಿಸಿದಾಗ ನನಗನ್ನಿಸಿದ್ದು , ಮೋದಿ ಅವರ ದಿನ ಚಟುವಟಿಕೆಗೆ ಶೇ.30 ರಷ್ಟು ನನ್ನ  ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು. ಅಷ್ಟು ಸಾಕು. .

                                                                                                    (ಚಿತ್ರ - ಅಂತರ್ಜಾಲ )
                                                     
ಮೋದಿ ಅವರು ಎಷ್ಟು ಪ್ರಭಾವಿಯಾಗಿ ಬೆಳೆದರು ಎಂದರೆ ಪ್ರತಿಯೊಬ್ಬರಲ್ಲೂ ಅವರಿಗೆ ತಿಳಿಯಂದಂತೆಯೇ ಸೇರಿಕೊಂಡಿದ್ದರು,
ಆತ ಅನೇಕ ವರ್ಷಗಳಿಂದ ಮನೆಗೆ ಬಂದಿರಲಿಲ್ಲ, ತನ್ನ ಬೆಳವಣಿಗೆಯ ನಡುವೆ ತಾಯಿಯ ಆಶೀರ್ವಾದ ಪಡೆಯಲೇ ಇಲ್ಲ.ಆದರೆ ಇದ್ದಕ್ಕಿದ್ದಂತೆಯೇ ಆತ ಮನೆಗೆ ಬಂದು ತಾಯಿಯ ಆಶೀರ್ವಾದ ಪಡೆದ.ನಂತರ ಹೇಳಿದ ದೇಶದ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಗೆಲುವು, ತನ್ನ ಅಭೂತಪೂರ್ವ ಗೆಲುವಿನ ನಂತರ ತನ್ನ ತಾಯಿಯ ಆಶೀರ್ವಾದ ಪಡೆದರು, ಆದರೆ ನಾನು ಇದೆಲ್ಲಾ ಮರೆತೇ ಹೋಗಿದ್ದೆ, ಈಗ ಮೋದಿ ಪ್ರೇರಣೆಯಾದರು ಎಂದು ಭಾವಪರವಶನಾದ. .!. ಟೀಕೆಗಳೂ ಏನೇ ಇರಲಿ, ಒಬ್ಬ ವ್ಯಕ್ತಿಯನ್ನು ಧನಾತ್ಮಕವಾಗಿ ಬದಲಿಸಲು ಸಾಧ್ಯವಾಗಿದೆ ಎಂದರೆ ಇಡೀ ದೇಶದ ಮಟ್ಟಿಗೆ ಅದೊಂದು ಒಳ್ಳೆಯ ಬೆಳವಣಿಗೆ.ದೇಶದ ಪ್ರಧಾನಿ ನರೇಂದ್ರ ಮೋದಿ ಕೇವಲ ಪ್ರಧಾನಿಯಾಗಿಲ್ಲ, ಪ್ರತಿಯೊಬ್ಬರ ಬದುಕಿಗೆ ಪ್ರೇರಣೆಯನ್ನೂ ನೀಡುವವರಾಗಿದ್ದಾರೆ.ಬಹುಶ: ದೇಶದ ಇತಿಹಾಸದಲ್ಲೇ ಇದು ಮೊದಲು.

ದೇಶದ ಚುನಾವಣೆ ಮುಗಿದು ಅಭೂತಪೂರ್ವ ಗೆಲುವು ಬಿಜೆಪಿ ಪಡೆದುಕೊಂಡಿತು.ಇದರ ಹಿಂದಿನ ಶಕ್ತಿಯಾಗಿ ನರೇಂದ್ರ ಮೋದಿ ಕಾಣಿಸಿಕೊಂಡರು. ದೇಶದ ಪ್ರಧಾನಿಯಾಗಿಯೂ ಆಯ್ಕೆಯಾದರು.ಚುನಾವಣಾ ಪೂರ್ವದಿಂದಲೇ ಸಾಕಷ್ಟು ನಿರೀಕ್ಷೆ ಇರಿಸಿಕೊಂಡೇ ಬಂದಿದ್ದ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದ ಮೂಲಕವೂ ತನ್ನ ಛಾಪನ್ನು  ಬೆಳೆಸಿದರು.ಅಲ್ಲಿ ಜನರ ಸಲಹೆ, ಚರ್ಚೆಯಲ್ಲೂ ಭಾಗವಹಿಸಿದರು.ಹೀಗಾಗಿ ಯುವ ಸಮೂಹವನ್ನು  ತನ್ನೆಡೆಗೆ ಸೆಳೆದುಕೊಂಡರು.ಪರಿಣಾಮ ಇಡೀ ದೇಶದಲ್ಲಿ ಮೋದಿ ಹವಾ ಹೆಚ್ಚಾಯಿತು.ಇಂದು  ಪ್ರತೀ ಉತ್ಪನ್ನದ ಹಿಂದೆಯೂ ಮೋದಿ ಬ್ರಾಂಡ್ ಶುರುವಾಗಿದೆ.ಒಬ್ಬ  ವರ್ತಕರು ಇತ್ತೀಚೆಗೆ ಹೇಳುತ್ತಿದ್ದರು, ಮೋದಿ ಹೆಸರಿನ ಸೋಪು ಅನೇಕ ವರ್ಷಗಳಿಂದ ಹಿಂದಿನಿಂದಲೇ ಇತ್ತು, ಆದರೆ ಇದೀಗ ಈ ಸೋಪಿಗೆ ತೀರಾ ಬೇಡಿಕೆ ಬಂದಿದೆ ಎಂದು.ಅದರ ಜೊತೆಗೆ ಪೇಸ್ಟ್‌ಗಳು, ಬಟ್ಟೆಗಳು, ದೇಶೀ ಉಡುಪು, ಆಹಾರ ಕ್ರಮಗಳು ಸೇರಿದಂತೆ ವಿವಿಧ ರೀತಿಯಲ್ಲಿ ಮೋದಿ, ಬದುಕಿನ ಭಾಗವಾಗಿದ್ದಾರೆ.ಅಂದರೆ ಪ್ರತೀ ವ್ಯಕ್ತಿಯ ಒಳಗಡೆ ಮೋದಿ ಸೇರಿಕೊಂಡಿದ್ದಾರೆ.ಬಹುಶ: ದೇಶದ ಪ್ರಧಾನಿಯೊಬ್ಬ ಇಷ್ಟೊಂದು ಪ್ರಭಾವಿಯಾಗಿ ಬೆಳೆದದ್ದು ಇದೇ ಮೊದಲು.ದೇಶದ ಪ್ರಧಾನಿ ಬಗ್ಗೆ ಮಾಧ್ಯಮಗಳೂ ಈಗ ಅತ್ಯಂತ ಎಚ್ಚರಿಕೆಯಿಂದ ಗಮನಹರಿಸುತ್ತಿವೆ, ದಿನಕ್ಕೆ ಕನಿಷ್ಟ ೫೦ ರಿಂದ ೧೦೦ ಸುದ್ದಿಗಳು ನರೇಂದ್ರ ಮೋದಿ ಅವರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಸಂಬಂಧಿಸಿದ್ದು  ಇದ್ದೇ ಇರುತ್ತವೆ.ಅಂದರೆ ಮೋದಿ ಅವರು  ಅಷ್ಟು ಕ್ರಿಯಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ, ಘಟನೆಯ ಬಗ್ಗೆ ತಕ್ಷಣ ಟ್ವೀಟ್, ಪೇಸ್‌ಬುಕ್ ಮೂಲಕ ಪ್ರತಿಕ್ರಿಯೆ ನೀಡುತ್ತಾರೆ.ಹೀಗಾಗಿ ಮಾಧ್ಯಮಗಳೂ ಸದಾ ಕ್ರಿಯಾಶೀಲವಾಗಿರಬೇಕಾಗಿದೆ,ಸುದ್ದಿಗಳನ್ನು  ಅನಿವಾರ್ಯವಾಗಿ ನೀಡಬೇಕಾಗಿದೆ.ಅಧಿಕಾರಿಗಳೂ ಕೆಲಸ ಮಾಡಲೇಬೇಕಾಗುತ್ತದೆ.ಹಿಂದಿನ ಪ್ರಧಾನಿ ಅತ್ಯಂತ ಮೌನವಾಗಿದ್ದರಿಂದ ಇದೆಲ್ಲಾ ಸಮಸ್ಯೆಯೇ ಇದ್ದಿರಲಿಲ್ಲ.. .!.ಹೀಗಾಗಿ ಮಾಧ್ಯಮ ವಲಯದ ಪ್ರತಿಯೊಬ್ಬನಲ್ಲೂ ಮೋದಿ ಅವರ ಕ್ರಿಯಾಶೀಲತೆ ಬೆಳೆಯಬೇಕಾಗುತ್ತಿದೆ, ಫಾಲೋ ಮಾಡಲೇಬೇಕಾಗಿದೆ.

ನರೇಂದ್ರ ಮೋದಿ ಅವರು ಗೆಲುವು ಕಂಡ ತಕ್ಷಣವೇ ಮೊದಲು  ಆಶೀರ್ವಾದ ಪಡೆಯುವುದು ಮತ್ತು  ಪಡೆದದ್ದು  ಅವರ ತಾಯಿ ಹಿರಾಬೆನ್ ಅವರದ್ದು. ಇದಕ್ಕೆ ಕೂಡಾ ಕೆಲವರು ಟೀಕೆ ಮಾಡಿದರು, ಈ ಹಿಂದೆ ಯಾವಾಗ ಭೇಟಿ ನೀಡಿದ್ದಾರೆ ಮತ್ತು  ಇನ್ನು ಯಾವಾಗ ಭೇಟಿ ನೀಡುತ್ತಾರೆ ಎಂದು  ಚುಚ್ಚಿದರು.ಇರಲಿ, ಟೀಕೆಗೆ ಮೋದಿ ಅವರು  ಉತ್ತರಿಸುವುದಿಲ್ಲ,ಉತ್ತರಿಸಬೇಕಾಗಿಯೂ ಇಲ್ಲ. ಆದರೆ ಇಲ್ಲಿ  ಗಮನಿಸಬೇಕು, ಇಂದಿಗೂ ತಾಯಿಯ ಆಶೀರ್ವಾದ ಪಡೆಯದೇ ಎಷ್ಟೋ ಮಂದಿ ಇದ್ದಾರೆ, ತಾಯಿಯನ್ನು  ಮನೆಯಿಂದ ದೂಡಿದವರು ಸೇರಿದಂತೆ ಅನೇಕರಿಗೆ ಮೋದಿ ಸ್ಫೂರ್ತಿಯಾದರು.ಈ ಆ ಚಿತ್ರ ನೋಡಿದ ಅನೇಕರು  ತಾಯಿಯ ಭೇಟಿಗೆ ಉತ್ಸುಕರಾದರು.ಸ್ವತ: ಪಾಕಿಸ್ತಾನದ ಪ್ರಧಾನಿ ಕೂಡಾ ಭಾವಪರವಶರಾದರು.ಇಂದು ಇದೇ ಒಂದು ಘಟನೆಯಿಂದಾಗಿ  ತಾಯಿಯ ಮಹತ್ವವನ್ನು  ಇಡೀ ಜಗತ್ತಿಗೆ ಸಾರಿದ ಮೊದಲ ಪ್ರಧಾನಿಯಾದರು , ಅನೇಕರ ಮೇಲೂ ಪ್ರಭಾವ ಬೀರಿದರು.ಒಬ್ಬ ಜನನಾಯಕನಿಂದ ಸಮಾಜಕ್ಕೆ ಆಗಬೇಕಾಗಿರುವುದು ಇಂತಹ ಧನಾತ್ಮಕ ಪ್ರಭಾವ ಅಲ್ಲದೇ ಮತ್ತಿನ್ನೇನು.?.

ಪ್ರತಿಯೊಬ್ಬನ ಬದುಕಿಗೂ ,ಪ್ರತೀ ವಿಚಾರದಲ್ಲೂ ಪ್ರಭಾವ ಬೀರುವ, ಸಂದೇಶವನ್ನೂ ನೀಡುವ ಮೋದಿ ನಮಗರಿವಿಲ್ಲದೆಯೇ ನಮ್ಮೊಳಗೆ ಬೆಳೆಯಬೇಕು, ಬೆಳೆಯುತ್ತಿದ್ದಾನೆ. ನರೇಂದ್ರ ಮೋದಿ ಅವರ ದಿನಚರಿ ಅನೇಕರ ಮೇಲೆ ಪ್ರಭಾವ ಬೀರಿದೆ.ಬೆಳಗ್ಗೆ 4.30 ರಿಂದ ರಾತ್ರಿ 11 ಗಂಟೆಯವರೆಗೆ ಬಿಡುವಿಲ್ಲದ ಕೆಲಸ ದಿನಚರಿ  ಪ್ರತೀ ವ್ಯಕ್ತಿಯ ಬದುಕಿನ ಭಾಗವಾಗಬೇಕು, ಮೋದಿ ಬ್ರಾಂಡ್ ಖರೀದಿ ಮಾಡಿದಂತೆಯೇ ಅವರ ಜೀವನ ಕ್ರಮವೂ ಬದುಕಿನ ಜೊತೆ ಸೇರಿಕೊಳ್ಳಬೇಕು. ಸಾಮಾಜಿಕವಾಗಿ ಕೆಲಸ ಮಾಡುವ ಪ್ರಮುಖರು ಹೇಗೆ ಮಾಡೆಲ್ ಆಗಿರಬೇಕು ಎಂಬುದಕ್ಕೆ ನರೇಂದ್ರ ಮೋದಿ ಸಾಕ್ಷಿ.ಸಾರ್ವಜನಿಕ ಬದುಕಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವುದಕ್ಕೆ ಮೋದಿ ಅವರೇ ಆದರ್ಶ. ಗುಜರಾತ್‌ನಿಂದ ದೆಹಲಿಗೆ ತೆರಳುವ ವೇಳೆ ತನ್ನಲ್ಲಿದ್ದ ಹಣವನ್ನು ವಾಹನ ಚಾಲಕರ ಮಕ್ಕಳ ವಿಧ್ಯಾಭ್ಯಾಸಕ್ಕೆ ನೀಡಿದ್ದಾರೆ, ಭ್ರಷ್ಟಾಚಾರದ ಸೋಂಕಿಲ್ಲ, ಇಲ್ಲಿ  ಮೋದಿ ಬಗ್ಗೆ ಭಾಷಣ ಮಾಡುವ ಎಲ್ಲಾ ರಾಜಕಾರಣಿಗಳೂ ಸೇರಿದಂತೆ ಪ್ರತಿಯೊಬ್ಬರ ಬದುಕಿನಲ್ಲೂ ಮೋದಿ ಪ್ರಭಾವ ಅಳವಡಿಸಿಕೊಳ್ಳಬೇಕು, ಆಗ ಭ್ರಷ್ಟಾಚಾರ ರಹಿತ ದೇಶ ನಿರ್ಮಾಣ ಸಾಧ್ಯ.ಇದಕ್ಕಾಗಿ ಇನ್ನೊಂದು ಪಕ್ಷದ ಅಗತ್ಯವೇ ಇಲ್ಲ.ಅಧಿಕಾರಿಗಳಿಗೆ ನಿಜವಾದ ಅಧಿಕಾರ ನೀಡಬೇಕು, ಜನರಿಗೆ ಮತ್ತು  ಅಧಿಕಾರಿಗಳ ನಡುವೆ ಜನಪ್ರತಿನಿಧಿಗಳು ಸಂಪರ್ಕ ಸೇತುವಾಗಬೇಕು. ಅಧಿಕಾರ ಪಡೆದ ನಂತರ ಇತರ ಪಕ್ಷಗಳನ್ನು  ಅನಗತ್ಯವಾಗಿ ಟೀಕೆ ಮಾಡದೆ  ಅಭಿವೃಧ್ಧಿ, ಸೇವೆ ಬಗ್ಗೆಯೇ ಮಾತನಾಡಬೇಕು ಎಂಬ ಮೋದಿ ಅವರ ನಿಲುವು ಎಲ್ಲರಲ್ಲೂ ಬೆಳೆಯಬೇಕು. ಇದೆಲ್ಲಾ ಕನಿಷ್ಟ ಅಂಶಗಳು ನಮ್ಮೊಳಗೆ ಬೆಳೆಯುತ್ತಾ ಸಾಗಿದಂತೆ ನಮ್ಮೊಳಗೇ ಒಬ್ಬ ಮೋದಿ ಬೆಳೆಯುತ್ತಾ ಸಾಗುತ್ತಾನೆ, ದೇಶ 5 ವರ್ಷದಲ್ಲೇ ವಿಶ್ವಮಟ್ಟದಲ್ಲಿ  ಪ್ರಭಾವಿಯಾಗಿ ಬೆಳೆದು ವಿಶ್ವವಂದ್ಯವಾಗಬಹುದು.ಇದಕ್ಕೆ ನಾವು ಸಜ್ಜಾಗೋಣ. ನಮ್ಮೊಳಗೊಬ್ಬ ಮೋದಿಯನ್ನು ಇಲ್ಲಿ ಬೆಳೆಸೋಣ.ಪ್ರಧಾನಿ ನರೇಂದ್ರ ಮೋದಿ ಅಭಿಮಾನದ ಜೊತೆಗೆ ಅವರ ಆಡಳಿತಕ್ಕೆ ಈ ಮೂಲಕ ಸಹಕಾರ ನೀಡೋಣ.

ಇಂತಹ ದೊಡ್ಡ ಸಹಕಾರ ಇಲ್ಲದೇ ಹೋದರೆ ಮೋದಿ ಅವರನ್ನು ಹೊಗಳುತ್ತಾ, ಸಂಸತ್ತಿನಲ್ಲಿ  ಅತ್ಯಂತ ಕನಸಿನ ಭಾರತ , ದೇಶದ ಗುರಿಯ ಬಗ್ಗೆ ಮೋದಿ ಅವರು ಮಾತನಾಡುವ ವೇಳೆ ಹಿಂದಿನ ಸಾಲಿನಲ್ಲಿ  ಮಲಗಿದರೆ ಏನು ಪ್ರಯೋಜನ ?

---------------






16 ಮಾರ್ಚ್ 2014

ಅಲ್ಲೇ ಕೂತು ಇಲ್ಲಿಯ ಮಾತು. .!


ನನಗೆ ಪ್ರತೀ ಬಾರಿಯೂ ಕಾಡುವ ಪ್ರಶ್ನೆ ಮತ್ತು  ಉತ್ತರ ಸಿಗದ ಪ್ರಶ್ನೆಯೂ ಇದೇ.

ದೂರದ ನಗರದಲ್ಲಿ  ಕುಳಿತು ಹಳ್ಳಿಯ ಸುಖವನ್ನು  ವರ್ಣಿಸುವುದರಲ್ಲೇ ಕಾಲವನ್ನು  ಏಕೆ ಕಳೆಯುತ್ತಾರೆ ? ಮೂಲಭೂತವಾಗಿ ಆನನೋ. . ಅವಳೋ. .  ಹಳ್ಳಿಯಿಂದಲೇ ಹೋದವರು.ಹಾಗಿದ್ದರೆ ಮತ್ಯಾಕೆ ಈ ಸುಖವನ್ನು  ಬಿಟ್ಟು ಹೋದ ?.ನನ್ನ ಪ್ರಶ್ನೆಗೆ ಉತ್ತರವೇ ಇಲ್ಲ. .!.



ಅಲ್ಲಿ ನಡೆಯುತ್ತಾ ಇದ್ದದ್ದು ತಾಲೂಕಿನ ಸಾಹಿತ್ಯ ಸಮ್ಮೇಳನ.

ಸಾಹಿತ್ಯದ ಸಮ್ಮೇಳನ ಎಂದಾಗ ವಿವಿಧ ಕಾರ್ಯಕ್ರಮಗಳು ಇದ್ದೇ ಇರುತ್ತದೆ.ನಾನು ಗಮನಿಸಿದ, ಕೇಳಿದ ಅಷ್ಟೂ ಗೋಷ್ಟಿಗಳಲ್ಲಿ  ಈ ಮಣ್ಣಿನ ಸ್ಪರ್ಶ ಇತ್ತು.ಆದರೆ ಕೊನೆಗೆ ಎಲ್ಲೋ ಒಂದು ಕಡೆ ಅದು ಮತ್ತೆ ಬರುತ್ತಿದ್ದದ್ದು ವಾಸ್ತವಿಕತೆಗಿಂತಲೂ ಹೆಚ್ಚಾಗಿ ವೈಭವೀಕರಣದ ಕಡೆಗೇ. ಹಳ್ಳಿಯಿಂದ “ನಗರದ ಕಾಂಕ್ರೀಟು” ಕಾಡಿಗೆ ತೆರಳಿದ ಆತನೋ. .  ಅವಳೋ. . ಇಂದು ಹಳ್ಳಿಯೇ ಅಂದ. .  ಇಲ್ಲಿಯ ಸುಖ ಅಲ್ಲಿಲ್ಲ ಎನ್ನುತ್ತಾನೆ. ಹಾಗೆ  ಹೇಳುವುದರ ಜೊತೆಗೇ ಹಳ್ಳಿಗೇ ಮತ್ತೆ ಬರುತ್ತೇನೆ ಎಂಬ ಮನಸ್ಥಿತಿ ಏಕೆ ಬರುವುದಿಲ್ಲ.ಬದುಕಿಗೆ . ಜೀವನೋಪಾಯಕ್ಕಾಗಿ  ನಗರವೇ ಆಗಬೇಕು ಏಕೆ.ಗ್ರಾಮೀಣ ಭಾರತ ಅಂತ ಒಂದಿಗೆ. .  ಹಳ್ಳಿ ಎಂಬ ಸುಂದರ ನಾಡಿದೆ ಇಲ್ಲಿಯೂ ಕೃಷಿ ಮಾಡಿಯೋ. . ಇತರ ಉದ್ಯೋಗ ಮಾಡಿಯೋ ಏಕೆ ಬದುಕು ಕಟ್ಟಿಕೊಳ್ಳಬಾರದು ?. ಭಾಷಣದಲ್ಲೋ. .  ಗೋಷ್ಟಿಯಲ್ಲೋ ಹೇಳುವ ಹಾಗೆ ಇದು ಸುಂದರ ನಾಡು ಆದರೆ.ಹಳ್ಳಿಯಲ್ಲಿ  ಮತ್ತೊಂದು ಸುಂದರ ಲೋಕ ಸೃಷ್ಟಿ ಮಾಡಬಹುದಲ್ಲಾ ?.

ಮೊನ್ನೆ ನಾನು ಕವಿಗೋಷ್ಟಿ ಕೇಳುತ್ತಿದ್ದೆ, ಅಲ್ಲಿ ನಾಲ್ಕು ಗೋಡೆಯ ನಡುವಿನ ಕುಟುಂಬದ ಕತೆ. .  ಮಕ್ಕಳ ಬದುಕಿನ ಬಗ್ಗೆ ಕೇಳಿದ್ದೆ. ಇಷ್ಟಕ್ಕೂ ಮತ್ತೆ ಮತ್ತೆ ಅದೇ ಮಕ್ಕಳು ಸಣ್ಣ ನಗರದಿಂದ ದೊಡ್ಡ ನಗರಕ್ಕೆ ವಲಸೆ ಹೋಗುತ್ತಾರೆ . ಅವರದೇ ಮಿತ್ರರು  ಹೋಗುತ್ತಾರೆ.ಕನಿಷ್ಟ ಹಳ್ಳಿಯ ಸುಂದರ ಬದುಕನ್ನು ಉಳಿಸಿಕೊಳ್ಳಲು ಒಬ್ಬನನ್ನಾದರೂ ಇಲ್ಲಿಯೇ ಉಳಿಸಿಕೊಳ್ಳಬಹುದಲ್ಲಾ ?, ಉಳಿದುಕೊಳ್ಲಬುದಲ್ಲಾ ?. ಅದು ಯಾಕೆ ಆಗುವುದಿಲ್ಲ. ಅಂದರೆ ಇದು  ಸಾಹಿತ್ಯಕ್ಕಾಗಿ , ತನ್ನ ವೈಭವೀಕರಣಕ್ಕೆ ಮಾತ್ರಾ ಅಂತ ಅರ್ಥವೇ?..

ಇದೆಲ್ಲಾ ಯೋಚಿಸುತ್ತಿದ್ದ ನನಗೆ ಅನಿಸಿದ್ದು,

ಅಲ್ಲಿ ನಿಜವಾದ ಆತ್ಮಾನುಭವ . .ಹಳ್ಳಿಯ , ಕೃಷಿ ಗ್ರಾಮೀಣ ಬದುಕನ್ನು ಉಳಿಸುವುದು, ಕಟ್ಟಿಡುವುದು ಉದ್ದೇಶವೇ ಅಲ್ಲ. ಅದೊಂದು  ಪಾಸಿಂಗ್. .  ಸುಮ್ಮನೇ ಹರಟೆಯ ಹೊತ್ತು  ಮಾತ್ರಾ .ಏಕೆಂದರೆ ಸಾಹಿತ್ಯ ಕಾರ್ಯಕ್ರಮ ಅಂದಾಕ್ಷಣ ಅಲ್ಲಿ ಒಂದಷ್ಟು ವಿವಾದ, ವಿಷಾದಗಳು,ಅನಗತ್ಯ ಸಂಗತಿಗಳು ಬೇಕೇ ಬೇಕು.ಹಾಗಾಗಿ ಹಾಗೇ ಸುಮ್ಮನೆ ಕುಳಿತು ಹೋಗುವುದೇ ಒಳ್ಳೆಯದೋ ಏನೋ ಅಂತ ಅನಿಸುತ್ತಿದೆ ಈಗೀಗ.

18 ಡಿಸೆಂಬರ್ 2013

ಗಿಡ ಮಾತಾಡಿತು. . !


ಅನೇಕ ದಿನಗಳ ಬಳಿಕ ಬ್ಲಾಗಿಲು ತೆಗೆಯಿತು. .!, ಹಾಗೆಯೇ ಒಳಗೆ ಹೋದಾಗ ಖುಷಿಯಾಯಿತು. .!
ಮನಸ್ಸು ಈಗ ನಿರಾಳವಾಗಿದೆ. ಮೌನ ಮಾತಾಗಿದೆ.

ಕಳೆದ ಕೆಲವು ದಿನಗಳಿಂದ ಮನಸ್ಸು ಓಡುತ್ತಲೇ ಇತ್ತು,ಯೋಚಿಸುತ್ತಲೇ ಇತ್ತು.ಆದರೆ ದೇಹ ಇದು ಯಾವುದಕ್ಕೂ ಸ್ಪಂದಿಸುತ್ತಲೇ ಇರಲಿಲ್ಲ.ಹಾಗೆಂದು  ಮನಸ್ಸು ದೇಹ ಎರಡಕ್ಕೂ ತಾಳ-ಮೇಳವೇ ಇಲ್ಲ ಎಂದಲ್ಲ, ಅನಗತ್ಯ ಯೋಚನೆ, ಓಡುವ ಮನಸ್ಸಿನ ಕಡೆಗೆ ಲಕ್ಷ್ಯ ಬೇಡ ಎನ್ನುತ್ತಿತ್ತು ಅಷ್ಟೇ.

ಕಳೆದ ಸುಮಾರು ಒಂದೂವರೆ ವರ್ಷಗಳಿಂದ ಮನೆಯ ಸುತ್ತಲೂ ಇರುವ ತೋಟದ ಕಡೆಗೆ ,ಗಿಡಗಳ ಕಡೆಗೆ ಲಕ್ಷ್ಯ ಕೊಟ್ಟು ಹೋದದ್ದೇ ಕಡಿಮೆ.ಅದೇನೇ ಇದ್ದರೂ ಒಂದಷ್ಟು ಕೆಲಸ ಮಾಡಿ ಕೂಡಲೇ ಬೇರೆ ಕಡೆ ತೆರಳಬೇಕಾಗಿತ್ತು. ಅನಿವಾರ್ಯ ಕೂಡಾ ಆಗಿತ್ತು ಅದು.ಈಗ ಕೊಂಚ ಬಿಡುವು. ಇಡೀ ತೋಟದ ಕಡೆಗೆ ಹೋದಾಗ ಗಿಡಗಳೆಲ್ಲಾ ಸಿಟ್ಟಾಗಿದ್ದುವೋ ಏನೋ , ಮಾತನಾಡುತ್ತಿರಲಿಲ್ಲ , ಎಲ್ಲಾ ಗಿಡಗಳು ಕೂಡಾ ದುರುಗುಟ್ಟಿ ನೋಡಿದಂತೆ ಅನಿಸಿತೊಡಗಿತು.ಪ್ರತೀ ಗಿಡ ನನ್ನನ್ನು ಅಣಕಿಸುತ್ತಿತ್ತು, ಕೊನೆಗೂ ನಮ್ಮ ಪಾದದ ಕಡೆಗೆ ಬಂದೆಯಾ ಎಂಬಂತೆ ಭಾಸವಾಯಿತು. .!.ಮತ್ತೆ ಮತ್ತೆ ತೋಟದ ಕಡೆಗೆ ಹೆಜ್ಜೆ ಹಾಕಿದೆ , ಗಿಡಗಿಗೂ ಖಷಿಯಾಯಿತು , ಈಗ ಪ್ರೀತಿಯಿಂದ ಸ್ವಾಗತಿಸಿದೆ , ಮಾತನಾಡಿತು. . !, ಅಕ್ಕರೆಯಿಂದ ಗಾಳಿಯ ನೀಡಿ ತಂಪು ನೀಡಿತು.


ಈಗ ನನಗನಿಸಿತು ,ಒಳಗೊಳಗೇ ಪ್ರಶ್ನೆ ಮೂಡಿತು ಅಷ್ಟೂ ದಿನಗಳ ಕಾಲ ನಾನು ಓಡಡಿದ ಆ ಊರು , ಆ ಜನ ಈಗ ಎಲ್ಲಿದ್ದಾರೆ ?, ಮಾಡಿದ ಅಷ್ಟೂ ಕೆಲಸಗಳು ಏನಾದವು ?, ಇಲ್ಲ ಉತ್ತರವೇ ಇಲ್ಲ.ಆದರೆ ಒಂದಂತೂ ಸತ್ಯ ,ಒಂದಷ್ಟು ಜನ ಗುರುತಿಸಿದ್ದಾರೆ , ಎಲ್ಲೋ ಒಮ್ಮೊಮ್ಮೆ ನೆನಪಾಗುತ್ತದೆ, ಆದರೆ ಅದೆಲ್ಲಾ ಕ್ಷಣಿಕ. . !.ಹಾಗಿದ್ದರೆ ಏನು ಸಾರ್ಧಕ ? ಎಂಬ ನನ್ನ ಪ್ರಶ್ನೆಗೆ ಉತ್ತರ ಆಳದಲ್ಲಿದೆ. ಹೆಕ್ಕಿ ತೆಗೆಯಬೇಕು.

ಆದರೆ ನಾನು ಆ ನನ್ನ ಗಿಡಗಳ ಬಳಿಗೆ ಹೋಗಿ ಪ್ರೀತಿಯಿಂದ ಮಾತನಾಡಿದೇ ಹೋದರೂ ಕೂಡಾ ಇಂದು ಮತ್ತೆ ನನ್ನನ್ನು ಸ್ವಾಗತಿಸಿದೆ , ಅದೂ ಅಣಕಿಸುತ್ತಾ ಕೇಳಿದೆ ,"ಎಲ್ಲೆಲ್ಲೋ ಸುತ್ತಾಡಿದೆ, ಸುಮಾರು 10 ವರ್ಷಗಳಿಂದ ಊರು ಊರು ಅಲೆದಾಟ ಮಾಡಿದೆ , ಯಾರ್ಯಾರನ್ನೋ ಮಾತನಾಡಿಸಿದೆ , ಸಹಾಯ ಮಾಡಿದೆ, ಈಗ ಏನಾಯಿತು ?" 

ಇದಕ್ಕೆ ಮೌನವೇ ಉತ್ತರ. . !

ಗಿಡದ ಹತ್ತಿರ ಮತ್ತೆ ಮತ್ತೆ ಮಾತಾಡಿದೆ,ಸಂಜೆಯವರೆಗೆ ಗಿಡಗಳ ಬಳಿಯೇ ಓಡಾಡಿದೆ.
ಅದಕ್ಕೂ ಖುಷಿಯಾಯಿತು , ನನಗೂ ಮತ್ತೆ ಹೊಸಹುರುಪು ಬಂತು, ಮನಸ್ಸು ಉಲ್ಲಾಸದಿಂದ ಕುಣಿಯಿತು.
 ಈ ಹಿಂದೆ ಯಾರ್ಯಾರಲ್ಲೋ ನನ್ನ ಬಗ್ಗೆ ವಿಚಾರಿಸುತ್ತಾ, ದಿನವಿಡೀ ಓಡಾಡಿದರೂ ಕಚೇರಿಗೇ ಬಂದೇ ಇಲ್ಲ ಎಂಬ ಮಾತುಗಳು ಈಗ ಕೇಳಲೇ ಬೇಕಿಲ್ಲ , ಏಕೆಂದರೆ ಈಗ ಗಿಡಗಳೇ ನನ್ನ ಹಾಜರಿಯನ್ನು ಖಚಿತ ಪಡಿಸುತ್ತಿವೆ.!.

ಆದರೂ ಮತ್ತೆ ಮತ್ತೆ ಅದೇ ಕಾಡುತ್ತದೆ , 10 ವರ್ಷ ವ್ಯರ್ಥವಾಯಿತಾ ? ,ವ್ಯರ್ಥವಾದ 10 ವರ್ಷಗಳ ನಂತರ ಹೊಸತೊಂದು "ಸೇವೆ"ಗೆ ಅವಕಾಶವಾಯಿತಾ ?. 

ಈಗ ಮತ್ತೆ ಅದೇ ಸುದ್ದಿ ಬಂದಾಗ ಗಿಡಗಳು ನನ್ನನ್ನು ದುರುಗುಟ್ಟಿ ನೋಡುತ್ತಿದೆ. . ! ಏನೆಂದು  ಹೇಳಲಿ ಅವುಗಳಿಗೆ ?.
ಅವುಗಳ ಪ್ರೀತಿಯಿಂದ ಹೊರಬರಲು ಆಗುತ್ತಲೇ ಇಲ್ಲ.



21 ಮಾರ್ಚ್ 2013

ಏಕಾಂಗಿ ವ್ಯಕ್ತಿಗೆ ಹತ್ತು ಮನಸ್ಸು . . .!

ನನ್ನೂರಿನ ದೇವಸ್ಥಾನಕ್ಕೆ ಹೋಗಿದ್ದೆ.

ಅಪರಿಚಿತ ವ್ಯಕ್ತಿ ಅಲ್ಲಿದ್ದರು. ದೇವಸ್ಥಾನದ ಅರ್ಚಕರು ಹೇಳಿದರು , ಇವರು  ಪಾದಯಾತ್ರೆ ಮಾಡುತ್ತಿದ್ದಾರೆ ಕನ್ಯಾಕುಮಾರಿಗೆ ಎಂದರು. ಸಹಜವಾಗಿಯೇ ಅದೊಂದು ಮಾಮೂಲಿ ನಡಿಗೆ ಅಂದುಕೊಂಡಿದ್ದೆ , ಆದರೆ ನಂತರ ಮಾತನಾಡುತ್ತಾ , ಅವರೊಳಗಿನ ಸಂಗತಿ  ಅರಿವಾಯಿತು. .  .

ಅವರು  ಕಿರಣ್. ವಿದೇಶಿ ಕಂಪನಿಯೊಂದರಲ್ಲಿ ಕೈತುಂಬಾ ಸಂಬಳ ಎಣಿಸುತ್ತಿದ್ದರು , ಪ್ರತಿಭಾವಂತ ಎಂಜಿನಿಯರ್ ಕೂಡಾ ಆಗಿದ್ದರು. ಆದರೆ ಆಕಸ್ಮಿಕ ಘಟನೆಯೊಂದು  ಅವರ ಬದುಕಿನಲ್ಲಿ ನಡೆಯಿತು. ಅವರ ಕುಟುಂಬದ ಎಲ್ಲರೂ ಅಪಘಾತದಲ್ಲಿ ತೀರಿಕೊಂಡರು. ಉಳಿದದ್ದು ಏಕಾಂಕಿ. ಅದಾಗಲೇ ವಿವಿಧ ಕಡೆ ಆಸ್ಥಿ ಹೊಂದಿದ್ದ ಅವರಿಗೆ ವಿವಿಧ ಸಂಬಂಧಿಕರು  ಹತ್ತಿರವಾದರು .. ಆಸ್ಥಿ ಪ್ರೀತಿ  ಹೆಚ್ಚಿತು. ಪೀಡೆ ಹೆಚ್ಚಾದಾಗ . . ನೇರವಾಗಿ ಹಿಮಾಲಯದ ಕಡೆಗೆ ತೆರಳಿದರು.ಆಧ್ಯಾತ್ಮದ ಮಾರ್ಗ ಹಿಡಿದರು.

ನಗರದಲ್ಲಿದ್ದ ಸುಮಾರು  ಆರು  ಎಕ್ರೆ ಭೂಮಿಯನ್ನು ಅನಾಥಾಶ್ರಮಕ್ಕೆ ಧಾರೆ ಎರೆದರು.ಸ್ವಂತಕ್ಕೆ ಅಂತ ಒಂಚೂರು  ಇರಿಸಿಕೊಂಡರು.ಬಳಿಕ ಯಾತ್ರೆ ನಡೆಸಿದರು , ಇಡೀ ದೇಶವನ್ನು ಕಾಲು ನಡಿಗೆಯಲ್ಲೇ ಪರಿಕ್ರಮ ಮಾಡುವ ಉದ್ದೇಶ, ಇನ್ನು  ಸುಮಾರು  ೫೦  ದಿನದಲ್ಲಿ ಕನ್ಯಾಕುಮಾರಿ  ತಲುಪುತ್ತಾರೆ. ಅಂದರೆ ಕಾಲುನಡಿಗೆ ಶುರುಮಾಡಿ ಅದಾಗಲೇ ವರ್ಷ  ಅನೇಕ ಉರುಳಿ ಹೋಗಿದೆ. ಅಲ್ಲಿಂದ ಮತ್ತೆ ಮುಂದಿನ ದಾರಿ  ಯೋಚಿಸಬೇಕು ಎನ್ನುತ್ತಾರೆ.

ಇಡೀ ನಡಿಗೆಗೆ ಯಾವ ಪ್ಲಾನೂ ಇಲ್ಲ ಅವರಲ್ಲಿ , ಎಲ್ಲಿ ಇರುತ್ತೇನೆ ಗೊತ್ತಿಲ್ಲ , ಯಾರು ಊಟ ಕೊಡುತ್ತಾರೆ ಗೊತ್ತಿಲ್ಲ , ಎಲ್ಲಿ ಮಲಗುತ್ತೇನೆ ಗೊತ್ತಿಲ್ಲ. . .. !. ಅದೆಲ್ಲಾ ಬಿಡಿ ಕೈಯಲ್ಲಿ ಒಂದು  ರೂಪಾಯಿ ಹಣವೂ ಇಲ್ಲ , ಹಣ ಇದ್ದರೆ ಅದು  ಟೂರ್ ಆಗುತ್ತದೆ , ಯಾತ್ರೆ ಆಗಲ್ಲ ಅಂತಾರೆ ಅವರು. ಇನ್ನು ಮೊಬೈಲ್ ಇದೆ ಉಪಯೋಗಿಸೋದೇ ಇಲ್ಲ.  ಯಾರಿಗೂ ನಂಬರೂ ಕೊಡಲ್ಲ. ಇಡೀ ದಿನದಲ್ಲಿ ರಾತ್ರಿ ಮಾತ್ರಾ ಊಟ. ದಿನಕ್ಕೆ ೬ ರಿಂದ ೭ ಲೀಟರ್ ನೀರು , ಇದಿಷ್ಟೇ ಆಹಾರ.

ಇದೆಲ್ಲಾ ಮಾತನಾಡುವ ಹೊತಿಗೆ ಅವರು  ವೈದ್ಯರ ಬಗ್ಗೆ ಕೇಳಿದರು , ಕಾಲುಗಳ ಮಾಂಸ ಖಂಡ ನೋಡಿದರೆ ತೀರಾ ಗಟ್ಟಿಯಾಗಿತ್ತು , ಇದು  ಸರಿಯಾಗಲು ಇನ್ನು ಒಂದು  ತಿಂಗಳ ಚಿಕಿತ್ಸೆ ಬೇಕಾಗುತ್ತದೆ ಎನ್ನುವ ಮಾನಸಿಕವಾದ ಸಿದ್ದತೆಯೂ ಇದೆ. ಇವರಲ್ಲಿ.

ಇಷ್ಟೆಲ್ಲಾ ದೈಹಿಕ ಶ್ರಮದ ನದುವೆಯೂ ಮಾನಸಿಕವಾದ ಸಂತಸ ಕಾಣುವ ಈ ವ್ಯಕ್ತಿ ಏಕಾಂಕಿ. ಆದರೆ ಬೆಂಬಲಿಸುವ , ಜೊತೆಯಾಗುವ ಮನಸ್ಸುಗಳು ಹತ್ತಾರು. ಇದೆಲ್ಲಾ ಪ್ರಚಾರ ಮಾಡುವುದೇ ಇಲ್ಲ ,ಪ್ರಚಾರಾ ಮಾಡಿದರೆ ಮರುದಿನ ಆ ಶರ್ಟೇ ಹಾಕೋದಿಲ್ಲವಂತೆ , ಏಕೆಂದರೆ ಜನ ಗುರುತಿಸುತ್ತಾರೆ ,ಅದು  ಪ್ರಚಾರ ಪಡೆಯುತ್ತೆ , ಅದೆಲ್ಲಾ ಇಲ್ಲವೇ ಇಲ್ಲ ಎನ್ನುವ ಕಿರಣ್ ಗೆ ಸುಮಾರು ೪೫ ವರ್ಷ ಆಗಬಹುದು.

ಅಂತಿಮವಾಗಿ ಏನು ಎಂದು ಕೇಳಿದರೆ ಮಾನಸಿಕವಾದ ಶಾಂತಿ. .  ಗುರುಗಳ ಮಾರ್ಗದರ್ಶನ.



14 ಜನವರಿ 2013

ತಂತ್ರಜ್ಞಾನ : ಅಂತರ-ಜ್ಞಾನ. . .




ನನ್ನ ಮಿತ್ರನೊಬ್ಬ  ಇಂದು ಸಿಕ್ಕಿದ.  ಆತ ಮಾತನಾಡುತ್ತಾ ಹೇಳುತ್ತಿದ್ದ , ಈ ಮೊಬೈಲ್‌ಗೆ ಈಗ 10 ಸಾವಿರ. ವರ್ಷದ ಹಿಂದೆ ಇದೇ ಸೌಲಭ್ಯ ಇದ್ದ  ಬೇರೆ ಕಂಪನಿಯ ಮೊಬೈಲ್‌ಗೆ 35 ಸಾವಿರ  ಬೆಲೆ ಇತ್ತು. ಈಗ ತೀರಾ ಅಗ್ಗ ಎಂದು  ಹೇಳುತ್ತಿದ್ದ. ಅದು  ನಿಜವೂ ಹೌದು.
ಚಿತ್ರ - ನೆಟ್

ಕಾಲ ಬದಲಾಗಿದೆ.

ಅಂದೆಲ್ಲಾ ಒಂದು  ಮೊಬೈಲ್ ಕೊಳ್ಳುವುದು ಇರಲಿ , ನೋಡಿದರೇ ಅದೊಂದು ಅಚ್ಚರಿ. ನನಗೆ ಈಗಲೂ ನೆನಪಿದೆ , ಮೊಬೈಲ್ ಕೈಯಲ್ಲಿ  ಹಿಡಿಯುವುದಕ್ಕಾಗಿ , ಸಿಮ್ ಪಡೆಯುವುದಕ್ಕಾಗಿ  ಕ್ಯೂನಲ್ಲಿ  ಇಡೀ ದಿನ ನಿಂತು , ಅದಕ್ಕಾಗಿ  ವಿವಿಧ ಅಧಿಕಾರಿಗಳೊಂದಿಗೆ ಮಾತನಾಡಿ , ಅಂತೂ ಸಿಮ್ ಸಿಕ್ಕಾಗ ಮೊಬೈಲ್ ಬಂತು  ಎನ್ನುವ ಸಂದರ್ಭ. . . !. ಈಗ ಹಾಗಿಲ್ಲ , ಸಿಂ ಬೇಕಾ ಸಿಂ . .  ಎಂದು  ಕಂಪನಿಯೇ ಮನೆ ಬಾಗಿಲಿಗೆ ತಂದು ಕೊಡುತ್ತಿದೆ.

ಅದಕ್ಕಿಂತಲೂ ಹಿಂದೆ ನೋಡಿದರೆ. . .  , ಇನ್ನೂ ಅಚ್ಚರಿಯಾಗುತ್ತದೆ.

ಆಗ ಟಿವಿ ಇಲ್ಲವೇ ಇಲ್ಲ. ಎಲ್ಲೋ ಊರಲ್ಲಿ  ಒಂದೂ ಎರಡೋ ಮನೆಯಲ್ಲಿ  ಮಾತ್ರಾ. ಅದಕ್ಕೊಂದು  ಏಂಟೆನಾ. ಅದನ್ನು  ತಿರುಗಿಸಿ  , ನೋಡಬೇಕು, ಸಣ್ಣ ಗಾಳಿ ಬಂದರೆ ಮತ್ತೆ ಮರದ ತುದಿಗೆ ಏರಲೇ ಬೇಕು. ಆ ಬಳಿಕ ದೊಡ್ಡ ಡಿಶ್ ವ್ಯವಸ್ಥೆ ಬಂದಾಗ ಒಟ್ಟು  ಟಿವಿ ಡಿಶ್‌ಗೆ 40  ಸಾವಿರ ರೂಪಾಯಿವರೆಗೆ ಆಗುತ್ತಿತ್ತು. ಆಗ ಸಿನಿಮಾ ನೋಡಲು , ಕ್ರಿಕೆಟ್‌ನೋಡಲು  ಟಿವಿ ಇದ್ದವರ ಮನೆಗೆ ಎಲ್ಲರೂ ಹಾಜರ್. ಕೆಲವು ಕಡೆ ಟಿಕೆಟ್ ನೀಡಿ  ಟಿವಿ ನೋಡಿದ್ದೂ ಇದೆ. ಈಗ ಆ ಕಾಲ ಇಲ್ಲವೇ ಇಲ್ಲ, ಎಲ್ಲಾಮನೆಯಲ್ಲೂ  ಡಿಶ್ ಟಿವಿ.

ಮತ್ತೂ ಹಿಂದಕ್ಕೆ ಹೋದರೆ , ರೇಡಿಯೋ ಕಾಲ ಅದು. ಕ್ರಿಕೆಟ್ ಕಮೆಂಟರಿ ಕೇಳಲು ಪಕ್ಕದ ಮನೆಗೆ ಹೋಗಬೇಕಾದ ಕಾಲ ಅದು. ಊರಲ್ಲಿ  ಒಂದೋ ಎರಡೋ ರೇಡಿಯೋ. ಕ್ರಿಕೆಟ್ ಸಂದರ್ಭದಲ್ಲಿ  ಕಾಮೆಂಟರಿ ಕೇಳಲು ರೇಡಿಯೋ ಮುಂದೆ ಕೂತು  ಹರಟುತ್ತಿದ್ದರು.ಈಗ ಅಂತಹ ರೇಡಿಯೋ ಇಲ್ಲವೇ ಇಲ್ಲ.

ಈಗ ಇದಾವುದೂ ಇಲ್ಲ. ಕಾಲ ಬದಲಾಗಿದೆ.

ತಂತ್ರಜ್ಞಾನಗಳು  ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಲೇ ಹೋಗುತ್ತಿದೆ. ನಾವು ನೋಡುವ ಒಳ್ಳೆಯ  ಸನ್ನಿವೇಶವನ್ನು  ಮನೆಯಲ್ಲಿರುವ ಹೆಂಡತಿಗೋ , ಅಮ್ಮನಿಗೋ , ಮಗುವಿಗೋ ತಕ್ಷಣವೇ ನೇರಪ್ರಸಾರವಾಗಿ ತೋರಿಸಬಹುದು. ಅದಕ್ಕಾಗಿ 3ಜಿ ಸೇವೆ ಇದೆ.  ಈಗ ಅದೂ ಬದಲಾಗಿ 4 ಜಿ ವ್ಯವಸ್ಥೆ ಹತ್ತಿರವಾಗುತ್ತಿದೆ.  ಗ್ರಾಮೀಣ ಪ್ರದೇಶದಲ್ಲಿ  ಇಂಟರ್‌ನೆಟ್ ಇಲ್ಲವೇ ಇಲ್ಲ , ಸಾಧ್ಯವೇ ಇಲ್ಲ  ಎನ್ನುವ ಕಾಲವೇ ಈಗಿಲ್ಲ. ಯಾವುದೇ ಹಳ್ಳಿಯ ಮೂಲೆಯಲ್ಲಿ  ಕೂತು ಕೂಡಾ ಪ್ರಪಂಚವನ್ನು ಇಂಟರ್‌ನೆಟ್ ಮೂಲಕ ಸುತ್ತಾಡುವ ವ್ಯವಸ್ಥೆ ಈಗ ಬರುತ್ತಿದೆ.

ಹೀಗಿದ್ದರೂ ಕೂಡಾ ನಾವು  ಇವುಗಳ ಸರಿಯಾದ ಬಳೆಕೆಯಲ್ಲಿ  ಮಾತ್ರಾ ಇನ್ನೂ  ಮುಂದುವರಿದಿಲ್ಲ ಅಂತ ನನಗನ್ನಿಸುತ್ತದೆ. ಮೊನ್ನೆ ಮೊನ್ನೆ ನಮ್ಮ ದೇಶದ ಸೈನಿಕರನ್ನು  ಪಾಕ್‌ನ ದ್ರೋಹಿಗಳು ಅಮಾನುಷವಾಗಿ ಹತ್ಯೆ ಮಾಡಿದರು. ಇಲ್ಯಾಕೆ ಹೀಗಾಯಿತು. ಇಂದು ಮೊಬೈಲ್ ಕ್ಷೆತ್ರದಲ್ಲಿ  ಆದ ಪ್ರಗತಿಯ ಒಂಚೂರು ಭಾಗವನ್ನಾದರೂ ರಕ್ಷಣಾ ಕ್ಷೇತ್ರದಲ್ಲಿ ಮಾಡುತ್ತಿದ್ದರೆ , ಇದಕ್ಕಾಗಿ  ಯಾವುದಾದರೂ ಕಂಪನಿ ಪೈಪೋಟಿ ಮಾಡುತ್ತಿದ್ದರೆ ಸಾಕಾಗಿತ್ತು.  ದೇಶವನ್ನು  ಕಾಪಾಡುವ ಯೋಧರಿಗೂ  ಉಪಕಾರವಾಗುತ್ತಿತ್ತು  ಅಂತ ನಾನು ಯೋಚಿಸುತ್ತಿದೆ.





13 ಜನವರಿ 2013

ಕೈ ಮೀರಿದ ಆ ಕ್ಷಣ. . .



ಆನೆಯನ್ನೂ ನಿಯಂತ್ರಿಸುವ ಮನುಷ್ಯ ಆ ಕ್ಷಣ ಭಯಭೀತಗೊಂಡಿದ್ದ .ದೂರದಲ್ಲೆಲ್ಲೋ ಅಂದು ನಡೆದ ಘಟನೆ ಈಗ ಇಲ್ಲಿ ನಡೆದಿದೆ.

 ಅಂಗಡಿ ಬಾಗಿಲು ಹಾಕಿ ಮಹಡಿಯ ಮೇಲೆ ನಿಂತು  ಮೂಕಪ್ರೆಕ್ಷಕನಾಗಿ  ನೋಡುವುದು ಅಷ್ಟೇ ಆತನ ಕೆಲಸವಾಗಿತ್ತು ಆಗ. ಹೀಗಾಗಿ ಈ ಸಂಕಟದ ನಡುವೆಯೇ ಅಲ್ಲೊಂದು ಇಲ್ಲೊಂದು ಸಲಹೆ ಹೇಳುವಾಗಲೂ ನಂಬಿಕೆ ಇಲ್ಲ. ಎಲ್ಲೋ ಓದಿದ , ಕೇಳಿದ ಮಾತುಗಳೇ ಆಗ ಸಲಹೆ. ಬೇರೇನೂ ಹೇಳಲಾರ , ಹೇಳುವುದೂ ಇಲ್ಲ. . .!.

ಆನೆಯನ್ನೇ ಪಳಗಿಸಿದ ಮನುಷ್ಯ, ಆನೆ ಸಿಟ್ಟಾದಾಗ ಏನು ಮಾಡಬಹುದು  ಎನ್ನುವುದರ ಸಣ್ಣ ಪರಿಚಯ ಇದು. ಇತ್ತೀಚೆಗೆ ಪುತ್ತೂರಿನಲ್ಲೇ ಅಂತಹ ಘಟನೆಯೊಂದು ನಡೆಯಿತು. ದೂರ ತ್ರಿಶೂರ್ ನಲ್ಲೋ , ಮೈಸೂರಿನಲ್ಲೋ ಆನೆ ದಾಳಿಯ ಘಟನೆ ನಡೆದಾಗ ಇಲ್ಲಿ ಕೂತು , ಹೀಗೆ ಮಾಡಬಹುದಿತ್ತು ಎಂತ ಪ್ರತಿಕ್ರಿಯೆ ನೀಡುವ ಮನುಷ್ಯ, ನಮ್ಮೆದುರೇ ಆನೆ ಬಂದಾಗ ನಿಜಕ್ಕೂ ಉತ್ತರ ನೀಡುವುದು ಬಿಡಿ , ಬದುಕಿಗಾಗಿ , ಜೀವಕ್ಕಾಗಿ  ದಾರಿ ಹುಡುಕುವ ಸಂದರ್ಭವೇ ಹೆಚ್ಚು. ಸೂಕ್ತ ಸ್ಥಳ ಸಿಕ್ಕ ನಂತರವೇ ಉಳಿದ ಸಲಹೆಗಳು.

 ಸುಮಾರು  3 ದಿನಗಳ ಕಾಲ ಆನೆ ರಾದ್ದಾಂತವೇ ಎಬ್ಬಿಸಿತು. ಲಾರಿಯಲ್ಲಿ ಸಾಗಾಟ ಮಾಡುವಾಗ ಆದ ಸಣ್ಣ ನೋವು , ಇಡೀ ನಗರಕ್ಕೆ , ನಗರದ ಜನರಿಗೇ 3 ದಿನಗಳ ಕಾಲ ನೋವು ಕೊಟ್ಟಿತು. ಇದೆಲ್ಲಾ ಒಂದು ಉಲ್ಲೇಖ ಮಾತ್ರಾ.  ಅದರ ಸೂಕ್ಷ್ಮಗಳು , ಹಾಗೂ ಆ ಕ್ಷಣ ಮನುಷ್ಯ ಮಾಡುವ ರೀತಿ ನಿಜಕ್ಕೂ ಒಂದು  ಸ್ಟೋರಿಯೇ ಸರಿ.

ಒಂದು ಕುತೂಹಲ. ಆ ಕುತೂಹಲದೊಳಗೆ ಹಲವಾರು ಪ್ರಶ್ನೆಗಳು , ಅಲ್ಲೇ ಒಂದು ಸಲಹೆ , ಅದಕ್ಕೊಂದು  ಉಪಮೆ. ಇದೆಲ್ಲಾ ಕೇಳುತ್ತಾ ನಿಂತಾಗ ಈ ಬದುಕೇ ಹೀಗಲ್ಲಾ .....! ಅಂತ ಅನಿಸಿಬಿಡುತ್ತದೆ. ಯಾವುದೇ ರೀತಿಯಿಂದಲೂ ಸಂಬಂಧ ಪಡದ ಸಂಗತಿ ಅದು , ಆದರೂ ಒಂದು ಕುತೂಹಲ.  ಅಲ್ಲೇನಾಗಿದೆ ಎಂಬ ಉತ್ಸಾಹ. ಅಲ್ಲಿ ಗೆಲುವಾದರೆ ಅಷ್ಟೇ.. , ಸೋಲಾದರೆ ಮತ್ತಷ್ಟು ಕುತೂಹಲ ,ಆ ಕುತೂಹಲವೇ  ಪ್ರಶ್ನೆಯಾಗಿ ಮತ್ತಷ್ಟು ಜನರಿಗೆ "ಪದ"ಬಂಧ. . .!.

ಇದೇ ಅಲ್ಲವೇ ಬದುಕು. .  , ಕೈಮೀರಿದ ಆ ಹೊತ್ತು ಯಾವುದೂ ನಮ್ಮ ಕೈಯಲ್ಲಿಲ್ಲ , ಆಗಲೇ ಬಳಕೆಯಾಗಬೇಕು ವಿವೇಕ.

28 ಡಿಸೆಂಬರ್ 2012

ಊಟದಲ್ಲಿದೆ ಪ್ರೀತಿಯ ಬೆಸುಗೆ. . .!



 ಅನೇಕ ದಿನಗಳಾಯಿತು , ಈ ಕಡೆ ಬರದೆ. ಅದ್ಯಾಕೋ ಏನೋ ಮನಸ್ಸು ಕಳೆದ ಕೆಲವು ದಿನಗಳಿಂದ ಸುಮ್ಮನೆ ಯೋಚಿಸುತ್ತಲೇ ಇತ್ತು. ಅಬ್ಬಾ ಇಮ್ದು ಬಿಡುವು ಸಿಕ್ಕಿತು.

                 * * * * * *

 ಮೊನ್ನೆ ತಡವಾಗಿತ್ತು ಊಟ ಮಾಡುವಾಗ. ಕಾರಣ ಇಷ್ಟೇ , ನನ್ನ ಬಾಲ್ಯ ಸ್ನೇಹಿತನೊಬ್ಬ ದೂರವಾಣಿಯಲ್ಲಿ  ಈಗ ಬಂದೆ ಜೊತೆಯಲ್ಲೇ ಊಟ ಮಾಡೋಣ ಅಂದಿದ್ದ. ಆಗಲೇ ಸಮಯ ಒಂದೂವರೆ ಕಳೆದಿತ್ತು.ನನಗೆ ಹಸಿವು  ಜೋರಾಗಿದ್ದರೂ , ಆ ಕ್ಷಣಕ್ಕೆ ಹಸಿವು  ನಿಂತೇ ಹೋಗಿತ್ತು , ಬಾಲ್ಯದ ಆ ಕ್ಷಣಗಳು ನೆನೆಪಾಗಿತ್ತು. ಅಂತೂ   ಎರಡು ಗಂಟೆಯ ಹೊತ್ತಿಗೆ ಬಾಲ್ಯದ ದಿನಗಳ ನೆನಪಿಸುತ್ತಾ , ಊಟದ ಹೊತ್ತಲ್ಲಿ  ಕಾಲ ಕಳೆದೆವು. ಅಂದಿನ ಊಟದ ಹೊತ್ತು , ಮಧುರವಾದ ನೆನಪಿಗೆ ನಾಂದಿಯಾಯಿತು.

                             * *

 ಅಂದು  ರಾತ್ರಿ ಮೆನೆಗೆ ಬರುವಾಗ ತಡವಾಗಿತ್ತು , ರಾತ್ರಿ ೧೦ ಕಳೆದಿತ್ತು. ಅಮ್ಮ ಮತ್ತು ಪತ್ನಿ ಆಗಲೂ ಕಾಯುತ್ತಿದ್ದರೂ ಒಂದಷ್ಟು ದೂರವಾಣಿ ಕರೆ ಮಾಡುತ್ತಾ, "ಎಲ್ಲಿದ್ದೀರಿ . . . ಎಷ್ಟೊತ್ತಿಗೆ ಬರುತ್ತೀರಿ " ಎಂದು ಕೇಳುತ್ತಾ , ಕಾದು ಕುಳಿತಿದ್ದರು , ಊಟಕ್ಕೆ. ಅಂತೂ ರಾತ್ರಿ ೧೦.೩೦ ಕ್ಕೆ ಜೊತೆಯಲ್ಲೇ ಊಟ , ಆ ದಿನದ ಖುಷಿಯ ಸಂದರ್ಭ ಮೆಲುಕು ಹಾಕುತ್ತಾ ,  ಆ ಕ್ಷಣಕ್ಕೆ ನಾಂದಿಯಾದ್ದು ಊಟ.

                                 * *

ಇಂದು ಮಧ್ಯಾಹ್ನ ಭಾವ ಪೋನು ಮಾಡಿ, ಎಲ್ಲಿದ್ದೀರಿ , ಊಟ ಮಾಡೋಣವೇ ಅಂತ ಕೇಳಿದರು , ಇಲ್ಲ, ನನಗೆ ಊಟ ಆಯಿತು ಎಂದಾಗ, ಸರಿ  ಹಾಗಾದರೆ ನಾನೂ ಮನೆಗೆ ಹೋಗುತ್ತೇನೆ , ಎನ್ನುವಾಗ , ಅಲ್ಲಿ ಒಂಟಿತನ ಕಂಡಿತ್ತು.

                                         * *

ಅಂತೆಯೇ ಯಾವಾಗಲಾದರೂ ಜೊತೆಯಾಗುವಾಗ , ಅಚಾನಕ್ ಆಗಿ ಸಿಗುವ ಗೆಳೆಯರು , ಆತ್ಮಿಯರೋ ಸಿಕ್ಕಾಗ, ಬನ್ನಿ ಟೀ ಕುಡಿಯೋಣ , ತಿನ್ನೋಣ ಅಂತಲೂ ಹೇಳುವಾಗ ಅಲ್ಲೊಂದು ಸಂಬಂಧ ಇರುತ್ತದೆ. ಅದಕ್ಕೆ ಆಗ ಜೊತೆಯಾಗುವುದು  ಊಟವೋ  . ಚಹಾವೋ , ಕಾಫಿಯೋ. ಹಾಗಾದರೆ ಆ ಊಟಕ್ಕೆ ಎಷ್ಟೊಂದು ಶಕ್ತಿ ಇದೆ. ಸಂಬಂಧವನ್ನು ಉಳಿಸುವ , ಬೆಳೆಸುವ  ಆ ಮಧುರ  ಕ್ಷಣ ನೆನಪಿಸುವ ಸಂದರ್ಭ ಈಗ ಅಪರೂಪವೇ ಅಂತ ಕೆಲವೊಮ್ಮೆ ಅನಿಸಿದ್ದಿದೆ. ಹಾಗೆಯೇ ಕೆಲವೊಮ್ಮೆ ಏಕಾಂಗಿಯಾದಾಗ ಉಪವಾಸ ಇದ್ದ ಸಂದರ್ಭವೂ ಇದೆ. ಇದು  ಅನೇಕರ ಅನುಭವವೂ ಹೌದು.


ಅಂತಹ ಊಟದಲ್ಲಿ ,ಉಣ್ಣುವ ಸಂದರ್ಭದಲ್ಲಿ ನಮಗಾಗಿ  ಅಲ್ಲಿ ಮನೆಯಲ್ಲಿ ಪತ್ನಿಯೋ , ಅಮ್ಮನೋ , ಗೆಳೆಯನೋ ಅಥವಾ ಇನ್ಯಾರೋ ಕಾಯುತ್ತಾರಲ್ಲಾ , ನಾವು ಅಣ್ಣ , ತಮ್ಮ, ಭಾವ, ಗೆಳೆಯ ಅಂತ ಯಾರಿಗೋ ಕಾಯುತ್ತೇವಲ್ಲಾ ಆ ಕಾಯುವಿಕೆಯ ಹಿಂದೆ ನಮಗರಿವಿಲ್ಲದ ಸ್ನೇಹ , ಪ್ರೀತಿ ಇರುತ್ತದೆ. ಅದು ಇಡೀ ಬದುಕಿನುದ್ದಕ್ಕೂ ನಮಗೆ ಸಿಗುತ್ತಲೇ ಇರುತ್ತದೆ.








11 ಅಕ್ಟೋಬರ್ 2012

ಇಲ್ಲಿ ರೇಖೆಯೇ ಚಿತ್ರವಾಗುತ್ತದೆ . . .. . .!




 ‘ಒಮ್ಮೆಯೂ ರಬ್ಬರ್ ಬಳಸದೆ ಮಕ್ಕಳು ಚಿತ್ರ ಬಿಡಿಸುತ್ತಾರೆ’ ಅಂತ  ಕಲಾವಿದ ಮೋಹನ್ ಸೋನಾ, ಮಕ್ಕಳು ಬಿಡಿಸಿದ್ದ ಒಂದಷ್ಟು  ಚಿತ್ರಗಳನ್ನು  ಅತಿಥಿಗಳಿಗೆ ವಿವರಿಸುತ್ತಾ  ಸಾಗುತ್ತಿದ್ದರು. ಒಂದರಿಂದ  ಮತ್ತೊಂದು ಚಿತ್ರ ಅತ್ಯಂತ ವಿಶಿಷ್ಠವಾಗಿತ್ತು. ಇದೆಲ್ಲಾ ಎಳೆಯ ಮಕ್ಕಳು ಬಿಡಿಸಿದ ಚಿತ್ರ, ಎನ್ನುವಾಗ ಆ ಮಕ್ಕಳ ಒಳಗೆ ಇರುವ ಮುಗ್ದತೆ ತರೆದು ಕಾಣುತ್ತಿತ್ತು. ಇದೆಲ್ಲಾ ಕಂಡ್ಡದ್ದು  ಬಾಲವನದಲ್ಲಿ.

ಪುತ್ತೂರಿನ ಬಾಲವನದಲ್ಲಿ  ಡಾ.ಶಿವರಾಮ ಕಾರಂತರ ಜನ್ಮದಿನವನ್ನು  ಆಚರಿಸಲಾಗುತ್ತಿತ್ತು. ಅದೇ ಹೊತ್ತಿಗೆ ಕಾರಂತ ಪ್ರೀತಿಯ ಮಕ್ಕಳಿಗೂ ಚೂರು ಜಾಗ ಕಲ್ಪಿಸಲಾಗಿತ್ತು. ಇದುವರೆಗೆ ಇಲ್ಲದ ಚಿತ್ರಪ್ರದರ್ಶನ ಇಂದು  ಕಂಡುಬಂದಿತು. ನೋಡುವಾಗ ಸಾಮಾನ್ಯ ಎನಿಸಿದರೂ , ಆ ಚಿತ್ರದಲ್ಲಿ ಅಭಿವ್ಯಕ್ತಗೊಳ್ಳುವ ಸಂಗತಿಗಳು  ನಿಜಕ್ಕೂ  ಅಚ್ಚರಿ ಮೂಡಿಸುತ್ತಿತ್ತು. ಕಾರಣ ಅಲ್ಲಿ  ಇದ್ದ ಮಕ್ಕಳು  5 ವರ್ಷದಿಂದ 14 ವಯಸ್ಸಿನ ಪುಟಾಣಿಗಳು.  ಕಳೆದ ಸುಮಾರು  ಎರಡು ವರ್ಷದಿಂದ ಬಾಲವನದಲ್ಲಿ  ಕಲಾವಿದ ಮೋಹನ ಸೋನಾ ಹಾಗೂ  ಚಂದ್ರ ಸೌಗಂಧಿಕಾ ಇವರ ನೇತೃತ್ವದಲ್ಲಿ  ಮಕ್ಕಳಿಗಾಗಿ ಚಿತ್ರ ತರಬೇತಿ ಪ್ರತೀ  ಭಾನುವಾರ    ನಡೆಯುತ್ತಲೇ ಇದೆ. ಕಳೆದ 2 ವರ್ಷದಿಂದ ಭಾನುವಾ ರದಂದು  ಬೆಳಗ್ಗೆ 9 ರಿಂದ ಮಧ್ಯಾಹ್ನದ ವರೆಗೆ   ತರಬೇತಿ ನಡೆಯುತ್ತಿತ್ತು. ಈಗ 26 ಪುಟಾಣಿಗಳು ಇಲ್ಲಿದ್ದಾರೆ.

ಕಾನ್ಸೆಪ್ಟ್ ಮಾತ್ರಾ ; ಚಿತ್ರ ರಚನೆಯೇ ಅಚ್ಚರಿ . .! :

 ಸಾಮಾನ್ಯವಾಗಿ  ಚಿತ್ರ ರಚಿಸುವ ವೇಳೆ ಹತ್ತಾರು ಬಾರಿ ಉಜ್ಜಿ , ತಿದ್ದಿ ತೀಡಿ ಬರೆಯಬೇಕಾಗುತ್ತದೆ. ಆದರೆ ಇಲ್ಲಿ  ಹಾಗಿಲ್ಲ. ಒಮ್ಮೆ ಬರೆದ ಗೆರೆಯನ್ನು  ಅಳಿಸುವ ಹಾಗಿಲ್ಲ,. ಏಕೆಂದರೆ ಪ್ರಕೃತಿಯಲ್ಲಿ ನೇರ ಸರಿಯಾದ ರೇಖ್ಹೆಯೇ ಇಲ್ಲ , ಇನ್ನು ರಬ್ಬರ್ ಬಳಕೆ ಇಲ್ಲವೇ ಇಲ್ಲ , ಏಕೆಂದರೆ ಪರಿಸರ ಎಂದಿಗೂ ತನ್ನ ಸೃಷ್ಠಿಯನ್ನು ಅಳಿಸುವುದಿಲ್ಲ , ನಿಲ್ಲಿಸುವುದಿಲ್ಲ. ಇನ್ನು
ಪ್ರತಿಯೊಂದು ಮಗುವಿನಲ್ಲೂ ಅದರದ್ದೇ   ಆದ ಸಾಮರ್ಥ್ಯ ಇರುತ್ತದೆ , ಮತ್ತು ಅದರ ಮನಸ್ಸಿನ ಒಳಗೆ ಅನೇಕ ವಿಚಾರಗಳೂ   ಇರುತ್ತದೆ , ಇದು  ತಾನಾಗಿಯೇ ಹೊರಬರಬೇಕು ಎಂಬುದು  ಮೋಹನ್ ಸೋನಾ ಹಾಗೂ ತಂಡದ ಉದ್ದೇಶ.  . ಹೀಗಾಗಿ  ಒಂದು ರೇಖೆ ಮತ್ತೊಂದಕ್ಕೆ ಸಹಕಾರಿ ಆಗುತ್ತದೆ.


ಮಕ್ಕಳೇ 57 ಬಗೆಯ ಬಣ್ಣ ತಯಾರಿಸಿದರು.  ..! :



ಇದಂತೂ ಅಚ್ಚರಿಯ ಸಂಗತಿ. ಇಲ್ಲಿ  ಮಕ್ಕಳು ಬಿಡಿಸುವ ಯಾವ ಚಿತ್ರಕ್ಕೂ ಪೇಟೆಯಿಂದ ಬಣ್ಣ ತರುವ ಹಾಗಿಲ್ಲ.ಪರಿಸರದಲ್ಲಿ ಲ‘ವಾಗುವ ಬಣ್ಣಗಳೇ ಚಿತ್ರದ ಬಣ್ಣಗಳು. ಇದಕ್ಕಾಗಿ  ಗ್ರಾಮೀಣ ಪ್ರದೇಶಕ್ಕೆ ವಿದ್ಯಾರ್ಥಿಗಳು ಹೋದಾಗ  ಬೇಂಗ ಮರದ ತೊಗಟೆಯಲ್ಲಿ  ಬರುವ ಕೆಂಪು ಬಣ್ಣ , ತೇಗದ ಮರದ ಎಲೆಯಲ್ಲಿ  ಬರುವ ಕೆಂಪು ಬಣ್ಣ ಇದನ್ನೆಲ್ಲಾ ಪ್ರಾತ್ಯಕ್ಷಿಕೆ ರೂಪದಲ್ಲಿ  ತೋರಿಸಿ ,  ಚಿತ್ರಕ್ಕೆ ಹೊಂದಿಕೆಯಾಗುವ ಬಣ್ಣವನ್ನು  ರಚನೆ ಮಾಡುವಂತೆ ಮಕ್ಕಳಿಗೆ ತಿಳಿಸಲಾಗಿತ್ತು. ಹೀಗಾಗಿ ಮಕ್ಕಳು  ಚಿತ್ರಕ್ಕಾಗಿ ಪೆನ್ನು , ಪೆನ್ಸಿಲ್ ಜೊತೆಗೆ ವಿವಿಧ  ಗಿಡಗಳ ಎಲೆಗಳು , ಸುಣ್ಣ , ಕಾಡಿಗೆ , ಹುಲ್ಲು , ಸೊಪ್ಪು  ಇತ್ಯಾದಿಗಳ ರಸ ತೆಗೆದು ಚಿತ್ರಕ್ಕೆ ಹಚ್ಚುತ್ತಿದ್ದಾರೆ. ಈಗ ಸುಮಾರು  ೫೭ ಬಗೆಯ  ಬಣ್ಣವನ್ನು  ಇದೇ ರೀತಿ  ಗಿಡಗಳ ಎಲೆಗಳಿಂದಲೇ ತಯಾರು ಮಾಡುತ್ತಿದ್ದಾರೆ.ಇದೆಲ್ಲಾ ಮಕ್ಕಳ ಮನಸ್ಸಿನ ಒಳಗೆ ಅಡಗಿರುವ ಸಂಶೋಧಕ ಗುಣ , ಇಡೀ ಚಿತ್ರದ ಮೂಲಕ ಮಕ್ಕಳ ವಯಸ್ಸು  ಹಾಗೂ ಮನಸ್ಸನ್ನು ಅರ್ಥ ಮಾಡಿಕೊಳ್ಳು ಸಾಧ್ಯವಿದೆ ಅಂತಾರೆ ಮೋಹನ ಸೋನಾ.

ಏನೆಲ್ಲಾ ಚಿತ್ರ ಬಿಡಿಸಿದರು ಮಕ್ಕಳು . . :

ಇದು ಇನ್ನೊಂದು ಅಚ್ಚರಿ. ಸಾಮಾನ್ಯವಾಗಿ ಮಕ್ಕಳ ಮನಸ್ಸಿನ ಒಳಗಿನ ಚಿಂತನಾ ಚಟುವಟಿಕೆ ಇಲ್ಲಿ  ಅನಾವರಣಗೊಂಡಿದೆ. ಕಲಾವಿದರ ತಂಡ ಕೇವಲ ಗ್ರಾಮೀಣ ಪ್ರದೇಶಕ್ಕೆ ತೆರಳಿ ಮಕ್ಕಳಿಗೆ ವಿಚಾರ ತಿಳಿಸಿ ನಂತರ ಚಿತ್ರ ಬರೆಯುವುದಕ್ಕೆ ಹೇಳುತ್ತದೆ. ಈ ಸಂದರ್ಭದಲ್ಲಿ  ಮಕ್ಕಳು  ಬಿಡಿಸಿದ ಚಿತ್ರ ಅಚ್ಚರಿಯಾಗುತ್ತದೆ. ಮನೆಯಲ್ಲಿ  ಅಮ್ಮ  ಅಕ್ಕಿ  ಕಡೆಯುವ ಚಿತ್ರ , ಆ ಬೀಸುವ ಕಲ್ಲಿನ ಪಕ್ಕ  ಕುಳಿತಿರುವ ಬೆಕ್ಕು , ಅಲ್ಲೇ ನೀರಿನ ಪಾತ್ರೆ. ಅದಾದ ನಂತರ ಇನ್ನೊಂದು ಚಿತ್ರ ರಬ್ಬರ್ ಟ್ಯಾಪಿಂಗ್ , ತಲೆಯಿಂದ ಹೇನು ಹೆಕ್ಕುವುದು , ಲಗೋರಿ ಆಟ , ಹಟ್ಟಿ , ಸೈಕಲ್ ರಿಪೇರಿ , ಮದುಮಗಳ ಸಿಂಗಾರ , ಅಡುಗೆ. . ಹೀಗೇ ಒಂದಕ್ಕಿಂತ ಮತ್ತೊಂದು ಭಿನ್ನ.

ತಂಡದಲ್ಲಿ  ಯಾರೆಲ್ಲಾ ಇದ್ದಾರೆ :

ಈ ಕಲಾವಿದ ತಂಡದಲ್ಲಿ  ಯಾವುದೇ ಶುಲ್ಕ ಇಲ್ಲದೆ , ಕಲಾವಿದರು ಭಾಗವಹಿಸುತ್ತಾರೆ. ಮೋಹನ್ ಸೋನಾ , ಚಂದ್ರ ಸೌಗಂಧಿಕ , ಎಂ.ಜಿ.ಕಜೆ , ಕುಸುಮಾಧರ ಸೋನಾ , ಗಂಗಾಧರ ನಾಯ್ಕ್  ಕೆಲಸ ಮಾಡುತ್ತಿದ್ದಾರೆ.