ವಿಶ್ವಹವ್ಯಕ ಸಮ್ಮೇಳನದ ಗೌಜಿ ಮುಗಿಯಿತು. ಈಗ ಧನ್ಯವಾದ, ಅಭಿನಂದನೆ ಸಮರ್ಪಣೆಯ ಸಮಯದ ನಡುವೆ ಒಂದಿಷ್ಟು ಚರ್ಚೆಗಳು... ಸಮ್ಮೇಳನದಲ್ಲಿ ಅನೇಕ ಗಣ್ಯರು ಮಾತನಾಡಿದರು. ಅದರಲ್ಲಿ ಯುವ ಸಂಸದ ತೇಜಸ್ವಿ ಸೂರ್ಯ ಅವರು ಹೇಳಿರುವುದು ಗಮನಿಸಬೇಕು," ಅತ್ಯಂತ ಸಣ್ಣ ಸಮುದಾಯವೊಂದು ದೇಶದ ಹಲವು ಪ್ರಮುಖ ಸ್ಥಾನಗಳಲ್ಲಿದೆ, ಅದೆಲ್ಲಾ ಅವರ ಸ್ವಂತ ಪರಿಶ್ರಮದಿಂದಲೇ ಹೊಂದಿರುವುದು".
ಈಗ ನಡೆದಿರುವುದು ಹವ್ಯಕ ಭಾಷಾ ಸಮ್ಮೇಳನವಲ್ಲ, ಹವ್ಯಕ ಭಾಷೆಯನ್ನು ಹವ್ಯಕರು ಮಾತ್ರವಲ್ಲ ಇತರ ಅನೇಕರು ಮಾತನಾಡುತ್ತಾರೆ. ಈಗ ನಡೆದಿರುವುದು ಹವ್ಯಕ ಸಮ್ಮೇಳನ. ಅಂದರೆ ಬ್ರಾಹ್ಮಣ ಸಮುದಾಯದ ಒಂದು ಸಣ್ಣ ಪಂಗಡ, ವಿಭಾಗದ ಸಮ್ಮೇಳನ. ಹೀಗಿರುವ ಒಂದು ಸಣ್ಣ ಸಮುದಾಯವು ಹಮ್ಮಿಕೊಂಡಿರುವ ಸಮ್ಮೇಳನವು ಯಶಸ್ವಿಯಾದದ್ದು, ಮಾದರಿ ಆದ್ದು, ಚರ್ಚೆ ಆದ್ದು ಹೇಗೆ?. ಅದೇ ಸಮುದಾಯದವನಾಗಿ ನನ್ನ ಅನಿಸಿಕೆಗಳನ್ನು ಬರೆಯಬೇಕು ಅನಿಸಿತು.
ಬ್ರಾಹ್ಮಣ ಎಂದರೆ ಸಾಕು ಬೇರೆ ಬೇರೆ ಕಾರಣಗಳಿಂದ ಚರ್ಚೆ, ಟೀಕೆ, ವ್ಯಂಗ್ಯ ಕಾಣುತ್ತದೆ. ಆದರೆ ಹವ್ಯಕ ಸಮ್ಮೇಳನವು ಎಲ್ಲಾ ಸಮುದಾಯಗಳನ್ನೂ ಒಳಗೊಳ್ಳುವಂತೆ ಮಾಡಿದ್ದು, ಎಲ್ಲಾ ಸಮುದಾಯದ ಸ್ವಾಮೀಜಿಗಳು ಭಾಗವಹಿಸಿದ್ದು ಒಂದು ಮಾದರಿಯ ನಡೆ. ಬ್ರಾಹ್ಮಣ ಸಮುದಾಯದ ನಡುವೆಯೂ ಹಲವು ಒಳಪಂಗಡ ಇದೆ. ಅವುಗಳ ಒಳಗೆ ಸಂಬಂಧ-ಮಾತುಕತೆ-ಊಟ ಇತ್ಯಾದಿಗಳು ಈಚೆಗಿನವರೆಗೂ ಬೇರೆ ಬೇರೆಯೇ ಇತ್ತು. ಈಚೆಗೆ ಸುಧಾರಣೆ ಕಾಣುತ್ತಿದೆ. ಈಗ ಸಮ್ಮೇಳನದ ಮೂಲಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿರುವುದು ಉತ್ತಮ ಬೆಳವಣಿಗೆ.. ನಾನೂ ಅದೇ ಸಮುದಾಯದವನಾಗಿ ಈ ಬೆಳವಣಿಗೆ ಇಷ್ವವಾಯ್ತು.
ಸಮ್ಮೇಳನದಲ್ಲಿ ಹಲವಾರು ಮಂದಿ ಮಾತನಾಡಿದರು. ಮೌಲಿಕ ವಿಷಯಗಳ ಬಗ್ಗೆ ಚರ್ಚೆ ಆಯ್ತು. ಸಮ್ಮೇಳನದ ಆರಂಭದ ದಿನ ಅಶೋಕ ಹಾರನಹಳ್ಳಿಯವರು ಮಾತನಾಡಿದರು, ಆ ವಿಷಯ ಚರ್ಚೆಯಾಗಬಹುದು ಎನ್ನುವ ನಿರೀಕ್ಷೆ ನನಗಿತ್ತು. ಅವರು ಮಾತನಾಡುತ್ತಾ, ಆರ್ಥಿಕ ಮೀಸಲಾತಿ, ಬ್ರಾಹ್ಮಣ ಹಾಗೂ ಸರ್ಕಾರ ನೀತಿಯ ಬಗ್ಗೆ ಉಲ್ಲೇಖಿಸಿದ್ದರು. ಆರ್ಥಿಕ ಮೀಸಲಾತಿ ಬಗ್ಗೆ ಈಚೆಗೆ ಚರ್ಚೆಯಾಗಿತ್ತು, ಪರ ವಿರೋಧ ಚರ್ಚೆಯೂ ಆಗಿತ್ತು. ಆದರೆ ಬ್ರಾಹ್ಮಣರ ನಿಲುವಿನನ ಬಗ್ಗೆ ಅಶೋಕ ಹಾರನಹಳ್ಳಿ ಅವರ ಮಾತುಗಳು ಈಗ ಚರ್ಚೆಯಾದೀತು ಎಂದು ನಿರೀಕ್ಷೆ ಇತ್ತು. ಆದರೆ ಈ ಅಂಶವು ಸಮ್ಮೇಳನದ ನಿರ್ಣಯದಲ್ಲೂ ಕಂಡಿಲ್ಲ. ಹೀಗಾಗಿ ಹವ್ಯಕ ಸಮುದಾಯವು ಈ ನಿಲುವಿನಲ್ಲಿ ಸ್ಪಷ್ವವಾಗಿರುವುದು ಕಂಡಿತು. ಬಹುಶ: ತೇಜಸ್ವಿಸೂರ್ಯ ಅವರ ಅಭಿಪ್ರಾಯವೂ ಸರಿ ಇದೆ.
ಸಮ್ಮೇಳನದ ಉದ್ಘಾಟಟನೆ ನಂತರ ಹಾಗೂ ಸಮಾರೋಪದ ನಂತರ ಚರ್ಚೆ ಆದ್ದು ಜನಸಂಖ್ಯೆ ಹೆಚ್ಚಳದ ಬಗ್ಗೆ.ಹವ್ಯಕ ಜನಸಂಖ್ಯೆ ಹೆಚ್ಚಾಗಬೇಕು ಅಂದರೆ ಜನಸಂಖ್ಯಾ ನಿಯಂತ್ರಣದ ಮನಸ್ಥಿತಿಯಿಂದ ಹೊರಬರುವಂತೆ ಹವ್ಯಕ ಸಮುದಾಯದ ಇಬ್ಬರು ಯತಿಗಳು ಆಡಿರುವ ಮಾತು. ಅದೇ ಮಾತುಗಳೂ ಸಮ್ಮೇಳನ ನಿರ್ಣಯದಲ್ಲೂ ದಾಖಲಾಗಿದೆ. ಹೀಗಾಗಿ ಸಮ್ಮೇಳನವು ಈ ಮಾತುಗಳನ್ನು ಪುಷ್ಟೀಕರಿಸಿದೆ ಹಾಗೂ ಮಾನ್ಯತೆ ನೀಡಿದೆ. ಜನಸಂಖ್ಯೆ ಹೆಚ್ಚಳ ಮಾತ್ರಾ ಆಗುವುದರಿಂದ ಸಮುದಾಯ ಉಳಿಯಬಹುದು ಆದರೆ ಸಮಾಜಕ್ಕೆ ಪ್ರಯೋಜನ ? ಜನಸಂಖ್ಯೆಯು ಸಮುದಾಯಕ್ಕೆ, ದೇಶಕ್ಕೆ ಕೊಡುಗೆಯಾಗಿ ಬದಲಾಗಬೇಕಾದರೆ ಶಿಕ್ಷಣ, ಆರೋಗ್ಯ, ಉದ್ಯೋಗ ಇದು ಅಗತ್ಯ. ಈಗಾಗಲೇ ಹೇಳಿದಂತೆ ಜನಸಂಖ್ಯೆಯು ಕ್ವಾಂಟಿಟಿಯಲ್ಲಿ ಅಲ್ಲ, ಕ್ವಾಲಿಟಿಯಲ್ಲಿ ಕಾಣಬೇಕು. ದೇಶದ ಪ್ರಮುಖ ಜಾಗದಲ್ಲಿ ಹವ್ಯಕರ ಕೊಡುಗೆ ಈಗ ಇದೆ, ಅದು ಕೂಡಾ ಹೆಚ್ಚಾಗಬೇಕು.
ಹವ್ಯಕರಲ್ಲಿ ಬಹುಪಾಲು ಮಂದಿ ಕೃಷಿ ಹಿನ್ನೆಲೆಯವರೇ ಆಗಿದ್ದಾರೆ. ಈಚೆಗೆ ಉದ್ಯಮ-ಉದ್ಯೋಗ ಎಂದು ಕೃಷಿ ಬಿಟ್ಟಿದ್ದಾರೆ ಅಷ್ಟೇ. ಹಾಗಿದ್ದರೂ ಕೃಷಿ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ.ಹೀಗಾಗಿ ಕೃಷಿ ಬೆಳವಣಿಗೆಗೆ ಏನು ? ಈಗಾಗಲೇ ಹಲವಾರು ಮಂದಿ ಕೃಷಿ ಬಿಟ್ಟಿದ್ದಾರೆ. ಅಡಿಕೆಯೇ ಹವ್ಯಕರ ಪ್ರಮುಖ ಕೃಷಿಯಾಗಿದೆ ಈಗ. ಆದರೆ ಅಡಿಕೆಯೂ ಅತಂತ್ರವಾಗಿದೆ. ಕೃಷಿಯಲ್ಲಿ ಉಳಿದವರು ನಿರಾಶರಾಗಿದ್ದಾರೆ, ಕೃಷಿಯಲ್ಲಿದ್ದರೆ ಮದುವೆಯೇ ಆಗುವುದಿಲ್ಲ, ಹೀಗಿರುವಾಗ ಜನಸಂಖ್ಯೆ ಹೆಚ್ಚಳವಾದರೂ ಹೇಗೆ..? ಈ ಪ್ರಶ್ನೆಗೆ ಉತ್ತರವೇ ಇಲ್ಲ. ಏಕೆಂದರೆ ಈಚೆಗೆ ಕೃಷಿಯಲ್ಲಿ ಉಳಿದವರೇ ಕಣ್ಣಮುಂದಿನ ನಿದರ್ಶನಗಳು. ಆದರೆ, ಸಭೆಗೆ ಬಂದಿರುವ ಎಲ್ಲರೂ ಅಡಿಕೆ ಕೃಷಿಯ ಬೆಳವಣಿಗೆಗೆ ಸಹಾಯ ಮಾಡುತ್ತೇವೆ ಎಂದಿದ್ದಾರೆ ಕೂಡಾ, ಸಮ್ಮೇಳನದ ನಿರ್ಣಯವೂ ಅಡಿಕೆಯನ್ನು ಉಲ್ಲೇಖಿಸಿದೆ. ಇದು ಜನಸಂಖ್ಯೆ ಹೆಚ್ಚಳವಾದರೆ ಉದ್ಯೋಗ, ಆಸರೆ ನೀಡೀತೇ..?. ಸ್ವಾಮೀಜಿಗಳು ಮಕ್ಕಳು ಹೆಚ್ಚಾದರೆ ಮಠಕ್ಕೆ ಬಿಡಿ ಎಂದಿದ್ದಾರೆ, ಅದು ಪ್ರಾಕ್ಟಿಕಲ್ ಅಲ್ಲ, ಅದು ಜನಸಂಖ್ಯೆ ಹೆಚ್ಚಳಕ್ಕೆ ಒಂದು ಬೆಂಬಲದ ಭಾವ ಅಷ್ಟೇ. ಆದರೆ ಚರ್ಚೆ ಆಗಿರುವುದು ಈ ವಿಷಯ..!.
ಒಂದು ಸಮ್ಮೇಳನವಾದ ನಂತರ ಅದು ಚರ್ಚೆಯಾಗಬೇಕು. ಅದರ ನಿರ್ಣಯಗಳು ಚರ್ಚೆಯಾಗಬೇಕು,ಆ ಚರ್ಚೆಯ ಮೂಲಕ ಇನ್ನೊಂದು ಮಜಲಿಗೆ ತಲುಪಬೇಕು. ಏಕೆಂದರೆ ಇದು ಪ್ರಜಾಪ್ರಭುತ್ವ. ಸಮುದಾಯದ ಎಲ್ಲರೂ ಭೇಷ್ ಭೇಷ್ ಎಂದು ಎಲ್ಲದಕ್ಕೂ ಹೇಳಲು ಸಾಧ್ಯವಿಲ್ಲ, ಅದೆಲ್ಲವನ್ನೂ ಒಪ್ಪಬೇಕಿಲ್ಲ.ಒಪ್ಪದೇ ಇದ್ದರೆ ಅವರು ಯಾರೂ ವಿರೋಧಿಗಳೂ ಅಲ್ಲ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಚರ್ಚೆಗಳು ಮೊಂಡು ವಾದಗಳು ಆಗದೆ, ರಚನಾತ್ಮಕವಾದ ಚರ್ಚೆಗಳು ಆಗಬೇಕು, ಅದು ಅಂತಿಮವಾಗಿ ಜಾರಿಯಾಗಬೇಕು. ಹವ್ಯಕ ಸಮ್ಮೇಳನವು ಅಂತದೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಚರ್ಚೆ ಹವ್ಯಕರಿಗೆ ಮಾತ್ರವಲ್ಲ ಎಲ್ಲಾ ಸಮುದಾಯಕ್ಕೂ ಅದು ಸಂದೇಶವೂ ಆಗಿದೆ, ಏಕೆಂದರೆ ಎಲ್ಲರನ್ನೂ ಸೇರಿಸಿಕೊಂಡು ಮಾಡಿರುವ ಸಮ್ಮೇಳನ ಇದು ಎಂದೂ ಯೋಚಿಸಿಕೊಳ್ಳಬೇಕು. ಸಮ್ಮೇಳನಗಳಲ್ಲಿ ಊಟದ ಚರ್ಚೆಯಲ್ಲ, ಆಗಬೇಕಿರುವುದು ಸಮುದಾಯದ ಅಭಿವೃದ್ಧಿಯ ಸಂದೇಶ , ನಾಡಿಗೆ ಕೊಡುಗೆಯನ್ನು ನೀಡುವ ಸಂದೇಶ ಎನ್ನುವುದೂ ಇಲ್ಲಿ ಗಮನಿಸಬೇಕು.
ಹವ್ಯಕ ಸಮುದಾಯ ಸಮಾಜದ ಇನ್ನೂ ಕೆಲವು ಪ್ರಮುಖರು ಸಭೆಯಲ್ಲಿ ಕಾಣಲಿಲ್ಲ. ಎಲ್ಲಾ ಸಮುದಾಯಗಳಂತೆಯೇ ಈ ಸಮುದಾಯದ ಒಳಗೂ ಕಾಲೆಳೆಯು, ವ್ಯಂಗ್ಯ ಮಾಡುವುದು ಇದೆ. ಹೀಗಾಗಿ ಕೆಲವು ಮಂದಿ ಬೆಳೆಯಲಿಲ್ಲ, ಬೆಳೆದವರು ಬಿದ್ದಿದ್ದಾರೆ. ಇನ್ನೂ ಕೆಲವರು ಗುರುತಿಸಿಕೊಳ್ಳಲಿಲ್ಲ. ಸಣ್ಣ ಸಮುದಾಯ, ಜನಸಂಖ್ಯೆ ಹೆಚ್ಚಳವನ್ನು ಬಯಸುವ ವೇಳೆ ಒಟ್ಟಾಗಿ ಬೆಳೆಯಬೇಕಾದರೆ ಕಾಲೆಳೆಯುವುದು, ವ್ಯಂಗ್ಯವೂ ಕಡಿಮೆಯಾಗಬೇಕು. ದೇಶದ ಪ್ರಮುಖ ಜಾಗಗಳಲ್ಲಿ ಹವ್ಯಕರು ಇರುವಂತೆ, ಇನ್ನೂ ಕೆಲವು ಸಮುದಾಯಗಳಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಹವ್ಯಕರು ಇರಬೇಕು, ಅದು ಕೂಡಾ ಇಂದು ಅಗತ್ಯವಾಗಿದೆ.
ನನಗನ್ನಿಸಿತು ಇಷ್ಟು ದೊಡ್ಡ ಸಮ್ಮೇಳನದಲ್ಲಿ ಎಲ್ಲರನ್ನೂ ಗುರುತಿಸಲು ಕಷ್ಟ, ಕೊರತೆಗಳನ್ನು ಹೇಳುವುದು ಸುಲಭ, ಆದರೆ ಕೆಲಸ ಮಾಡುವುದು ಕಷ್ಟ, ಸಂಘಟನೆ ಕಷ್ಟ. ಆದರೆ ಕೃಷಿ ಪ್ರದಾನವಾದ ವ್ಯವಸ್ಥೆಯಲ್ಲೂ ಹವ್ಯಕರು ಗುರುತಿಸಿಕೊಂಡಿರುವ ಕಾರಣದಿಂದ, ಅದರಲ್ಲೂ ಅಡಿಕೆ ಬೆಳೆಗಾರರೇ ಹೆಚ್ಚಿರುವುದರಿಂದ ಅಡಿಕೆಯ ಮೌಲ್ಯವರ್ಧನೆಯಲ್ಲಿ ವಿಶೇಷವಾದ ಸಾಧನೆ ಮಾಡಿರುವ ವಿಟ್ಲದ ಬದನಾಜೆ ಶಂಕರ ಭಟ್ಟರನ್ನು ಗುರುತಿಸಿದ್ದರೆ ಅಡಿಕೆ ಬೆಳೆಗಾರರಿಗೂ ಒಂಚೂರು ಬಲ ಬರುತ್ತಿತ್ತು ಅಂತ ನನಗೆ ಅನಿಸಿತು.
ಏನೇ ಆಗಲಿ, ವಿಶ್ವಹವ್ಯಕ ಸಮ್ಮೇಳನವು ಒಂದು ಸಂಚಲನಕ್ಕೆ ಕಾರಣವಾಯಿತು. ಸಣ್ಣ ಸಮುದಾಯದ ಸಮ್ಮೇಳನದಲ್ಲಿ ಮಂಡಿಸಲಾದ ವಿಷಯವು ಎಲ್ಲರಲ್ಲೂ ಚರ್ಚೆಗೆ ಕಾರಣವಾದ್ದು ಗಮನಿಸಬೇಕಾದ ಅಂಶ. ಯಾರು ಏನೇ ಹೇಳಲಿ, ಹೊಸತನಕ್ಕೆ ತೆರೆದುಕೊಂಡು, ಅಪ್ಡೇಟ್ ಆಗುತ್ತಾ ನಡೆಯುವ ಸಮಾಜವು ಜನಸಂಖ್ಯೆ ಕಡಿಮೆ ಇದ್ದರೂ ಯಾವತ್ತೂ ಉಳಿದುಕೊಳ್ಳುತ್ತದೆ, ಬೆಳೆಯುತ್ತದೆ. ವಿಶ್ವಹವ್ಯಕ ಸಮ್ಮೇಳನವು ಈ ನಿಟ್ಟಿನಲ್ಲಿ ನೀಡಿದ ಸಂದೇಶ ದೊಡ್ಡದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ