17 ಅಕ್ಟೋಬರ್ 2021

ದೇಸೀ ಗೋವಿನ ಪ್ರೀತಿ...! ಪಿಕ್‌ ಅಪ್‌ ಗೆ ಬಾಡಿಗೆ ಸಮರ್ಪಣೆಯೂ....!!



ನನಗ್ಯಾಕೋ ಗೋವು ಎಂದರೆ ಒಂಚೂರು ಪ್ರೀತಿ ಹೆಚ್ಚು. ನಮ್ಮನೆಯಲ್ಲಿ ಒಂದು ಹೋರಿ ಸಹಿತ ಒಂದು ದನ ಎರಡು ಕರು ಸಾಕುತ್ತಿದ್ದೇವೆ. ಹೋರಿ ಸಾಕುವುದು  ಕೂಡಾ ಪ್ರೀತಿಯ ಕಾರಣಕ್ಕೆ. ಅನೇಕರು "ಗಿರಾಕಿ"ಗಳು ಬಂದರು. ಹೋರಿ ಕೊಡಲು ಒತ್ತಾಯ ಮಾಡಿದರೂ, ಈಗಲೂ  ಹೋರಿ ಸಾಕುತ್ತಿದ್ದೇವೆ.
ಎಲ್ಲೇ ಹೋದರೂ ಸಂಜೆ ಬಂದು ಮನೆಯಲ್ಲಿ ಹಟ್ಟಿಯೊಳಗೆ ಹೋಗಲೇಬೇಕು. ಹಾಲು ಕರೆಯುವ ಕೆಲಸ ಇದ್ದೇ ಇದೆ. ಬೆಳಗ್ಗೆ 3.30 ಕ್ಕೆ ಹಾಲು ಕರೆದ ದಿನ ಇದೆ ರಾತ್ರಿ 11 ಕ್ಕೂ ಬಂದು ಹಾಲು ಕರೆದು, ಕರುವಿಗೆ ಹಾಲುಣಿಸಿದ ದಿನವೂ ಇದೆ. ಅದು ದೇಸೀ ದನ. ...!.ಇದಿಷ್ಟು ಬೇಸಿಕ್‌ ಹೇಳಲು ಕಾರಣ ಇದೆ. ಗೋವು ಸಾಕಾಣಿಕೆ ಹಾಗೂ ಆರೈಕೆಯ ಭಾಗವನ್ನು ಹೇಳಿಯೇ  ನಮ್ಮ ಗೋವಿನ ಕತೆಯನ್ನು ದಾಖಲಿಸಬೇಕಿತ್ತು.

ಸುಮಾರು ಹದಿನೈದು ವರ್ಷಗಳ ಹಿಂದಿನ ಕತೆ ಇದೆ. ಭಾರತೀಯ ಗೋ ತಳಿಯ ಬಗ್ಗೆ‌ ಎರಡು ಕಾರಣಗಳಿಂದ ಹೆಚ್ಚು ಇಷ್ಟವಾಯಿತು. ಒಂದು ಗೋವಿನ ಮಹತ್ವ, ಇನ್ನೊಂದು ಭೂಮಿಯ ಫಲವತ್ತತೆಯಲ್ಲಿ ದೇಸೀ ಗೋವಿನ ಪಾತ್ರದ ಬಗ್ಗೆ. ಇಲ್ಲೂ ಎರಡು ವಿಚಾರಗಳ ಕಡೆಗೆ ಆಕರ್ಷಿತನಾಗಿದ್ದೆ. ಮೊದಲನೆಯದು ನಾನು ಪಡೆದ  ದೇಸೀಯತೆಯ ಹಾಗೂ ದೇಶದ ಬಗೆಗಿನ ಶಿಕ್ಷಣ. ಇನ್ನೊಂದು ರಾಮಚಂದ್ರಾಪುರ ಮಠದ ಗೋ ತಳಿ ಸಂರಕ್ಷಣೆಯ ಕಾಳಜಿಗೆ ಸಹಕಾರ ನೀಡುವ ಪ್ರೀತಿ.

ಹೀಗಾಗಿ ರಾಮಚಂದ್ರಾಪುರ ಮಠದ ಕಡೆಯಿಂದ ದೇಸೀ  ಗೋ ತಳಿಯನ್ನು ಮನೆಗೆ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ನಾವೂ ಈ ಯೋಜನೆಯಲ್ಲಿ ಭಾಗಿಯಾದೆವು. ಅದು ಕಾಂಕ್ರೇಜ್‌ ತಳಿಯ ಗೋವು. ನಮ್ಮೂರಿಗೆ ಹೊಸನಗರದಿಂದ ಒಂದು ಲೋಡ್‌ ಅಂದರೆ 13  ಗೋವುಗಳನ್ನು  ತರುವ ಜವಾಬ್ದಾರಿ ನಮ್ಮ ಮೇಲಾಯಿತು. ಗೋವಿನ ತರುವ ಬಗ್ಗೆ ಅದೊಂದು ತಂಡ ಯೋಜನೆ ಸಿದ್ಧ ಮಾಡಿತು. ಲಾರಿಯಲ್ಲಿ  ಗೋವು ತರುವ ಕೆಲಸ ನಮ್ಮದಾಯಿತು. ನನ್ನ ಜೊತೆ ನನ್ನ ಕುಟುಂಬದ ಸಹೋದರನೂ ಜೊತೆಗಿದ್ದರು.

ಅಂದು ನಾವಿಬ್ಬರೂ ಲಾರಿಯಲ್ಲಿ ಸಂಜೆ ಹೊಸನಗರದಿಂದ ಹೊರಟಾಯಿತು. ಸುಮಾರು ಕುಂದಾಪುರದ ಬಳಿ ತಲುಪಿದಾಗ ತಡರಾತ್ರಿಯಾಯಿತು. ಅಷ್ಟರಲ್ಲಿ ಒಂದು ಜೀಪಲ್ಲಿ ಬಂದ ಬಜರಂಗದಳದ ತಂಡ ಲಾರಿಯನ್ನು ತಡೆಯಿತು. ತಡೆದ ಬಳಿಕ ಗಲಾಟೆಯೋ ಗಲಾಟೆ...! ,ಇದು ಕಸಾಯಿಖಾನೆಗೆ ಹೋಗುತ್ತಿದೆ ಎಂದು ಆ ರಾತ್ರಿಯಲ್ಲಿ ಬೊಬ್ಬಿಟ್ಟರು. ಯಾವ ಉತ್ತರ ನೀಡಿದರೂ ಕೇಳಲಿಲ್ಲ. ನಮಗೆಲ್ಲಾದರೂ ಸಮಸ್ಯೆಯಾದರೆ, ತಡೆಯಾದರೆ ತಿಳಿಸಲು ಮೊಬೈಲ್‌ ನಂಬರ್‌ ನೀಡಿದ್ದರು. ಆದರೆ ನಮ್ಮ ಬಳಿ ಮೊಬೈಲ್‌ ಇರಲಿಲ್ಲ. ಹೀಗಾಗಿ ಅಲ್ಲೇ ಪಕ್ಕದ ಯಾರದೋ ಮೊಬೈಲ್‌ ನಿಂದ ಕರೆ ಮಾಡಲು ಹೇಳಿದೆವು. ಆದರೆ ಆ ಕಡೆಯಿಂದ ಕರೆ ಸ್ವೀಕಾರವಾಗಲಿಲ್ಲ...!. ನಾವಂತೂ ಗಲಿಬಿಲಿಯಾದೆವು. ಅಷ್ಟರಲ್ಲಿ ಬೊಬ್ಬೆಯೂ ಹೆಚ್ಚಾಯಿತು, ಇದು ಕಸಾಯಿಖಾನೆಗೇ ಎಂದರು. ನನ್ನ ಜೊತೆಗಿದ್ದ ಅಣ್ಣನೂ ಹಲವು ಉತ್ತರ ನೀಡಿದರೂ ಒಪ್ಪಲಿಲ್ಲ ಆ ತಂಡ. ಕೊನೆಗೆ ಸಮೀಪದ ಪೊಲೀಸ್‌ ಠಾಣೆಗೆ ತೆರಳುವಂತೆ ಲಾರಿ ಚಾಲಕನಿಗೆ ಹೇಳಿದೆವು. ಲಾರಿ ಚಾಲಕ ಪೊಲೀಸ್‌ ಠಾಣೆಗೆ ತಿರುಗಿಸಿದ. ಅಷ್ಟರಲ್ಲಿ ಪೊಲೀಸರೂ ಸ್ಥಳಕ್ಕೆ ಬಂದರು. ಮೊದಲೇ ಮಾಹಿತಿ ಇದ್ದ ಪೊಲೀಸರು ನಮಗೆ ಸುಗಮವಾಗಿ ಹೋಗಲು ಅವಕಾಶ ಮಾಡಿಕೊಟ್ಟರು. ಹಾಗೆ ಊರಿಗೆ ಬಂದಾಗ ಬೆಳಗ್ಗೆ ಆಗಿತ್ತು.ಇಲ್ಲಿ 13 ಮನೆಗಳಿಗೆ ಕಾಂಕ್ರೇಜ್‌ ತಳಿಯ ಗೋವನ್ನು ತಲುಪಿಸಲಾಯಿತು. 

ಕಾಂಕ್ರೇಜ್‌ ತಳಿಯ ಗೋವು ನಮ್ಮ ಹಟ್ಟಿಯೊಳಗೆ ಬಂದ ಬಳಿಕ ನಿಧಾನವಾಗಿ ಇತರ ತಳಿಯ ಗೋವುಗಳನ್ನು ಮಾರಾಟ ಮಾಡಲಾಯಿತು. ಸವಾಲುಗಳು ಇದ್ದದ್ದು ಆಗಲೇ.ನಿಯಮದ ಪ್ರಕಾರ ಹಾಗೂ ದೇಸೀ ತಳಿಯ ಪ್ಯೂರಿಟಿ ಉಳಿಸಿಕೊಳ್ಳಲು ಸಂಕರ ಮಾಡಬಾರದು,  ಬೆದೆಗೆ ಬಂದಾಗ ಹೋರಿಯ ಬಳಿಯೇ ಕೊಂಡೋಗಬೇಕು. ಈ ಕೆಲಸ ಮಾತ್ರಾ ಸದಾ ನೆನಪಿನಲ್ಲಿ ಉಳಿಯಬೇಕಾದ್ದೇ ಆಗಿದೆ.  ನಮ್ಮ ಮನೆಯ ಕಾಂಕ್ರೇಜ್‌ ತಳಿಯ ಗೋವು ಬೆದೆಗೆ ಬಂದಿತು. ಇದನ್ನು ಸಂಕರಕ್ಕಾಗಿ ಹೋರಿಯ ಬಳಿಗೆ ಕೊಂಡೋದೆವು. ಇಬ್ಬರು ಕೆಲಸಗಾರರು ಹಾಗೂ ಪಿಕ್‌ ಅಪ್‌ ನಲ್ಲಿ ಹಾಕಿಕೊಂಡು ಆರಂಭದಲ್ಲಿ ಸಮೀಪದಲ್ಲೇ ಇದ್ದ ಮೊಗ್ರಕ್ಕೆ ಕೊಂಡೋದೆವು, ಅದಾಗಲಿಲ್ಲ, ನಂತರ ಕಾಂಚೋಡು ಕಡೆಗೆ ಹೋದೆವು , ಅದಾದ ಬಳಿಕ ಕಡಬದ ಬಳಿಯ  ಹೊಸಮಠ ಹತ್ತಿರದ ಕೂಡೂರಿಗೆ , ನಂತರ ಬೆಳ್ಳಾರೆ ಬಳಿಯ ನೆಟ್ಟಾರಿನ ಅರುಣ ಶಂಕರ ಅವರ ಮನೆಗೆ ಹಲವು ಬಾರಿ ಹೋಗಿದ್ದೆವು. ಪ್ರತೀ ಬಾರಿ ಪಿಕ್‌ ಅಪ್‌ ಹಾಗೂ ಇಬ್ಬರು ಕೆಲಸಗಾರರು. ಅಂತೂ ನಮ್ಮ ಹಟ್ಟಿಯಲ್ಲಿ ಕಾಂಕ್ರೇಜ್‌ ತಳಿ ಅಭಿವೃದ್ಧಿಯಾದವು. ಅಷ್ಟರವರೆಗೂ ನೀಡಿದ ಪಿಕ್‌ ಅಪ್ ಬಾಡಿಗೆ ಒಂದು ಸಮರ್ಪಣೆಯೇ ಆಯಿತು...!.‌ ಒಂದು ಉದ್ದೇಶಕ್ಕಾಗಿ ಇದ್ಯಾವುದೂ ಆಗ ಲೆಕ್ಕವೇ ಇರಲಿಲ್ಲ...! , ಲಾಭ-ನಷ್ಟದ ಲೆಕ್ಕವೇ ದಾಖಲಾಗಲಿಲ್ಲ..!. ಕಣ್ಣ ಮುಂದೆ ಇದ್ದದ್ದು ಉದ್ದೇಶ, ಒಂದು ಚಿಂತನೆ.. ಒಂದು ವಿಚಾರ ಅಷ್ಟೇ... ಅದು ದೇಸೀಯತೆ....!. 

ಕೊನೆಗೆ ಬೆಳ್ಳಾರೆ ಬಳಿಯ ಶೇಣಿಯ ಮನೆಗೆ ದನವನ್ನು ಕೊಂಡೋಗಿದ್ದೆವು. ಆ ದಿನ ಭಾರೀ ಮಳೆಯೂ ಬೇರೆ. ಅಲ್ಲಿನ ಹೋರಿ ಸಂಕರದ ಬಳಿಕ ನಾವೆಲ್ಲರೂ ಮನೆಗೆ ಬಂದಾಗಿತ್ತು. ಮರುದಿನ ಆ ಹೋರಿ ಹೃದಯಾಘಾತದಿಂದ ಮೃತಪಟ್ಟಿತ್ತು. ಅಂದಿಗೇ ನಾವು ತೀರ್ಮಾನಿಸಿದೆವು. ಇನ್ನು ದನವನ್ನು ಹೋರಿಯ ಬಳಿಗೆ ಸಂಕರಕ್ಕೆ ಕೊಂಡೊಯ್ಯಲು ಇಲ್ಲವೆಂದು. ಆ ಹೊತ್ತಿಗೆ  2012. ಅದಾಗಿ ಕಾಂಕ್ರೇಜ್‌ ತಳಿಯ ಹೋರಿ ಇಂಜೆಕ್ಷನ್‌ ಲಭ್ಯವಾಯಿತು. ಎಲ್ಲಾ ನಿಯಮವನ್ನು ಬದಿಗೆ ಸರಿಸಿ ಇಂಜೆಕ್ಷನ್‌ ನೀಡಿದೆವು ಕೂಡಾ. ಆದರೆ ನಿಯಮದ ಉಲ್ಲಂಘನೆಯಾಗುತ್ತದೆ ಎಂದು ಕಾಂಕ್ರೇಜ್‌ ತಳಿಯನ್ನು ವಾಪಾಸು ಮಾಡಲು ಮುಂದಾದೆವು. ಕೊನೆಗೆ ವೇಣೂರಿನ ಗೋಶಾಲೆಗೆ ನಮ್ಮೆಲ್ಲಾ ಕಾಂಕ್ರೇಜ್‌ ತಳಿಯನ್ನು ನೀಡಿದ ದಿನ ಮನಸ್ಸಿಗೆ ಬೇಸರವಾಗಿತ್ತು, ತಿಂಗಳ ಕಾಲ ಅದೇ ನೆನಪು ಕಾಡಿತ್ತು. ಆ ಕರುಗಳು ನನ್ನ ತಂದೆಯವರ ಹಾಸಿಗೆಯಲ್ಲಿ ಬಂದು ಮಲಗುತ್ತಿದ್ದುದು, ಪ್ರೀತಿಯ ಆಟ ಆಡುತ್ತಿದ್ದುದು ಎಲ್ಲವೂ ನೆನಪು.

ಅದರ ಜೊತೆಗೇ, ಹೀಗೆ ಕಾಂಕ್ರೇಜ್‌ ತಳಿ ಸಾಕುವ ವೇಳೆ  ವ್ಯಂಗ್ಯ ಮಾಡಿದವರು, ಅದಾಗದು ಎಂದವರು, ಅದು ಸುಮ್ಮನೆ...  ಎಂದವರು ಸಾಕಷ್ಟು ಮಂದಿ. ಯಾವುದಕ್ಕೂ, ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ. ಇದೊಂದು ಚಿಂತನೆ, ಇದೊಂದು ಬದ್ಧತೆ, ಇದೊಂದು ಸೇವೆ ಎಂದಷ್ಟೆ ನಿರಂತರ ಪ್ರಯತ್ನ ಮಾಡಿದ್ದೆವು. ಅದರ ಪರಿಣಾಮ ಯಶಸ್ಸೂ ಆಗಿತ್ತು, ಹಟ್ಟಿ ತುಂಬಾ ಕಾಂಕ್ರೇಜ್‌ ಗೋವುಗಳು ತುಂಬಿದ್ದವು ಕೂಡಾ.

ಮುಂದೆ, ನಮ್ಮೂರಿನದ್ದೇ ತಳಿ,  ದೇಸೀ ತಳಿ. ಮಲೆನಾಡು ಗಿಡ್ಡ  ಸಾಕಲು ಆರಂಭ ಮಾಡಿದೆವು. ಇಂದಿಗೂ ಆ ತಳಿ ಮುಂದುವರಿದಿದೆ. ಅದರಲ್ಲೂ ಪ್ಯೂರಿಟಿಗಾಗಿ ಹೋರಿಗೇ ಸಂಕರ ಮಾಡಿದೆವು, ಅದಕ್ಕೂ ಪಿಕ್‌ ಅಪ್‌ ಸೇರಿದಂತೆ ಸಾಗಾಟ ಮಾಡಿದೆವು. ಕೊನೆಗೆ ಮನೆಯಲ್ಲಿಯೇ ಹೋರಿ ಕರು ಲಭ್ಯವಾಯಿತು. ಹೋರಿ ದೊಡ್ಡದಾಯಿತು. 

ಅದೊಂದು ದಿನ ಹೋರಿಯ ಸಂಕರಕ್ಕಾಗಿ ಬಿಟ್ಟಿದ್ದೆವು. ನಮ್ಮ ಆಪ್ತ ದನ ಬಿಡುವ ವೇಳೆ ದನ ಕೊಂಬು ಕಣ್ಣಿನ ಬಳಿ ತಾಗಿತು. ಸ್ವಲ್ಪದರಲ್ಲೇ ಕಣ್ಣಿನ ಮೇಲಿನ ಗಾಯ ತಪ್ಪಿತು. ಕಣ್ಣು ವಾರಗಳ ಕಾಲ ಕೆಂಪಾಯಿತು. ಅಪಾಯದಿಂದ ಪಾರಾದರು. ಸೂಕ್ತ ಔಷಧಿ ತೆರಳಿ ವಾರಗಳ ಕಾಲ ವಿಶ್ರಾಂತಿ ಕೂಡಾ ಪಡೆದರು. ಅಂದಿನಿಂದ ಅಗತ್ಯ ಇದ್ದರೆ ಮಾತ್ರಾ ಹೋರಿಯನ್ನು ಸಂಕರಕ್ಕೆ ಬಿಡುತ್ತೇವೆ. ಸಾಧ್ಯವಾಗದೇ ಇದ್ದರೆ ಇಂಜೆಕ್ಷನ್‌ ಗೆ ಬರಲು ಹೇಳುತ್ತೇವೆ. ಹಾಗಿದ್ದರೂ ಹೋರಿಯನ್ನು ಸಾಕುತ್ತಿದ್ದೇನೆ.

ಅನೇಕ ಸಮಯಗಳ ಕಾಲ ನಮ್ಮಲ್ಲಿ ಸ್ಲರಿ ವ್ಯವಸ್ಥೆ, ಕಾಂಪೋಸ್ಟ್‌ ವ್ಯವಸ್ಥೆ ಸರಿ ಇಲ್ಲದ ಕಾರಣದಿಂದ ಗೊಬ್ಬರ ತಯಾರು ಆಗುತ್ತಿರಲಿಲ್ಲ. ಹೊಳೆಗೆ ಸೇರುತ್ತಿತ್ತು. ಈ ಸಮಯದಲ್ಲಿ  ವಳಲಂಬೆ ದೇವಸ್ಥಾನದ ಅರ್ಚಕ ಮಹಾಬಲೇಶ್ವರ ಭಟ್ಟರು ಅದಕ್ಕೊಂದು ಯೋಚನೆ ನೀಡಿದರು. ಅಂದಿನಿಂದ ಉತ್ತಮ ಗೊಬ್ಬರವೂ ಆಗುತ್ತಿದೆ. ಹೀಗಾಗಿ ತೋಟಕ್ಕೂ ಸುಲಭದಲ್ಲಿ ಗೊಬ್ಬರ ತಯಾರಾಗುತ್ತದೆ.

ಸಾದ್ಯವಾದಷ್ಟು ಕಾಲ ಗೋ ತಳಿ ರಕ್ಷಣೆ ಹಾಗೂ ದೇಸೀ ಗೋ ತಳಿಯನ್ನು ಸಾಕಲು ನಿರ್ಧರಿಸಿದ್ದೇನೆ. ಸೆಗಣಿಯಿಂದ ಗೊಬ್ಬರ ಮಾಡುತ್ತೇವೆ. ತೋಟಕ್ಕೂ ಯಥಾ ಸಾಧ್ಯ ಹಾಕುತ್ತೇವೆ. ಎಷ್ಟು ಕಾಲ ಸಾಧ್ಯ ಅಷ್ಟು ಕಾಲ ಗೋ ಸಾಕಾಣಿಗೆ ಇದೆ. 

ನಂಬಿದ ವಿಚಾರ, ಕೃಪಿ ಪ್ರೀತಿ, ಗೋ ಪ್ರೇಮವನ್ನು ಮುಂದುವರಿಸುವುದು. ಗೋವು ಎಂದರೆ ಪ್ರೀತಿಯೇ. ನಮ್ಮ ಮನೆಯ ಹೋರಿ ಈಗಲೂ ಯಾರೇ ಬಂದರೂ ಕೂಗುತ್ತದೆ, ನಮ್ಮನ್ನು ಎಚ್ಚರಿಸುತ್ತದೆ. ಇಂತಹ ಪ್ರೀತಿಯನ್ನು ಹೇಗೆ ಬಿಡಲು ಸಾಧ್ಯವಿದೆ. ದೇಸೀ ಗೋವಿನ ಮಹತ್ವ, ಪ್ರೀತಿ ಅದು ಅನುಭವಿಸಿದವನಿಗೆ ಮಾತ್ರಾ ಗೊತ್ತು. 

ಹಾಗಂತ ನಾವು ದನ ಮಾರಾಟ ಮಾಡಿಲ್ಲ ಅಂತಲೇ ಅಲ್ಲ, ಮಾರಾಟ ಮಾಡಿದ್ದೇವೆ ಕೂಡಾ. ಜರ್ಸಿ ಹೋರಿಯನ್ನು ಮಾರಾಟ ಮಾಡಿದ್ದೇವೆ, ದೇಸೀ ದನವನ್ನೂ ಸಾಕುವವರಿಗೆ ನೀಡಿದ್ದೇವೆ.ಅನೇಕ ಬಾರಿ ಗೋವಿನ ಬಗ್ಗೆ  ಭಯಂಕರ ಚರ್ಚೆ ಮಾಡುವವರನ್ನು ಕಂಡಾಗ ಒಳಗೊಳಗೇ ನಗಬೇಕಾಗುತ್ತದೆ ಕೂಡಾ.... 

ಈಗಲೂ ದೇಸೀ ತಳಿಯ ಗೋವನ್ನು ಸಾಕುತ್ತಿದ್ದೇನೆ. ಮನೆಯಿಂದ ಹೊರಗೆ ಹೋದರೆ ರಾತ್ರಿ 11 ಗಂಟೆಗಾದರೂ ಬಂದು ಹಟ್ಟಿಗೆ  ಹೋಗಲು ಇದೆ. ಬೆಳಗ್ಗೆ ಬೇಗನೆ ಮನೆಯಿಂದ ಹೊರಡುವಾಗಲೂ ಹಟ್ಟಿಗೆ ಹೋಗಲು ಇದೆ. ಈ ಸೇವೆ ಸದ್ಯ ನಡೆಯುತ್ತಿದೆ.