11 ಫೆಬ್ರವರಿ 2011

ಭೂಮಿ ಈಗ ರಜಸ್ವಲೆ. .

ಸೃಷ್ಠಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿ ಹೀಗೆ ವಿವಿದ ರೂಪದಲ್ಲಿ ಕಂಡವರು ನಮ್ಮ ಪೂರ್ವಜರು.ಇದಕ್ಕೂ ಕಾರಣವಿದೆ, ಒಂದು ಸೃಷ್ಠಿಯು ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ. ಇರಲೇಬೇಕು.ಈ ಪ್ರಕೃತಿ, ಭೂಮಿಯೂ ಕೂಡಾ ಹಾಗೆಯೇ.ಯಾವುದೇ ಬೆಳೆಗಳ ಸೃಷ್ಠಿಗೆ ಭೂಮಿ ಮತ್ತು ಈ ಪ್ರಕೃತಿ ಬೇಕೇ ಬೇಕು.ಇಂತಹ ಸೃಷ್ಠಿಯಾಗುವುದಕ್ಕೆ ಮೊದಲು ಅವಳು ಪ್ರಬುದ್ದಳಾಗಬೇಕು , ರಜಸ್ವಲೆಯಾಗಬೇಕು.ಇದು ಪ್ರಕೃತಿ ನಿಯಮವೂ ಹೌದು. ಅದರಂತೆ ಈಗ ಭೂದೇವಿಯು ರಜಸ್ವಲೆಯಾಗಿದ್ದಾಳೆ. ಸೃಷ್ಠಿಗೆ ತಯಾರಾಗಿದ್ದಾಳೆ. ಹಾಗಾಗಿ
ಎಲ್ಲೆಡೆ ಮೌನ ಆವರಿಸಿದೆ. ಭೂಮಿಗೆ ಕಾಲಿಡುವುದಕ್ಕೂ ಈಗ ಹಿಂಜರಿಕೆ.ಎಲ್ಲಿ ಅವಳಿಗೆ ನೋವಾಗುತ್ತದೋ ಅನ್ನೋ ಭಾವ.ಎಂತಹ ಪ್ರೀತಿಯ ಭಾವ ಅದು !.

ಈಗ ಭೂಮಿಯ ಕಡೆಗೆ ಒಮ್ಮೆ ನೋಡಿ. ಮೊನ್ನೆ ಮೊನ್ನೆ ಬರಡು ಬರಡಾಗಿದ್ದ ಮರಗಳೆಲ್ಲಾ ಮತ್ತೆ ಚಿಗುರಿ ನಿಂತಿದೆ.ಮಾಮರವೆಲ್ಲಾ ಹೂ ಬಿಟ್ಟು ಕಾಯಿ ಕಟ್ಟಿಕೊಳ್ಳುವುದಕ್ಕೆ ಸಿದ್ದವಾಗುತ್ತಿದೆ , ಅಂದರೆ ಗರ್ಭವತಿಯಾಗುವುದಕ್ಕೆ ಅಣಿಯಾಗುತ್ತಿದೆ , ಇತ್ತ ಕೃಷಿಯೂ ಹಾಗೇ ಅಡಿಕೆಯಲ್ಲಾದರೆ ಹಿಂಗಾರ ಬಿಟ್ಟು ಸುವಾಸನೆ ಬೀರುತ್ತಿದೆ , ದುಂಬಿಗಳನ್ನು ಪರಾಗಸ್ಪರ್ಶಕ್ಕೆ ಆಕರ್ಷಿಸುತ್ತಿದೆ , ಇಲ್ಲಿ ಗದ್ದೆ ನೋಡಿ ಎಲ್ಲವೂ ಸಿದ್ದವಾಗಿದೆ ಕಟಾವಾಗುವುದಕ್ಕೆ ಕಾದುನಿಂತಿದೆ, ಇದೆಲ್ಲದರ ಜೊತೆಗೆ ಚಳಿಯೂ ಸಾತ್ ನೀಡುತ್ತದೆ. ಈ ನಡುವೆ ಬೀಸುವ ತಂಗಾಳಿ. ಇದನ್ನು ನಮ್ಮೂರ ಜನ ಫಲ ಗಾಳಿ ಅಂತಾನೇ ಕರೀತಾರೆ.ಯಾಕಂದ್ರೆ ಇದರಿಂದಾಗಿಯೇ ಕಾಯಿ ಕಟ್ಟುವುದೂ ಇದೆ.ಹೀಗೇ ಭುವಿಯ ಒಡಲೊಳಗೆ ಅದರದ್ದೇ ಆದ ಸೃಷ್ಠಿಯ ತತ್ವಗಳು ಕಾಣಿಸುತ್ತವೆ. ಆದರೆ ಮಾನವರಾದ ನಾವು ಈ ಪ್ರಕೃತಿಯೊಂದಿಗೆ ಎಷ್ಟೇ ಬಡಿದಾಡಿದರೂ ಅವಳು ಮಾತ್ರಾ ಸಹಿಸಿಕೊಂಡಾದ್ದಾಳೆ. ಯಾಕೆಂದರೆ ಅವಳು ಮಾತೆ. .!. ಈ ಮಾತೆಯೊಂದಿಗೆ ಜಗಳವಾಡುವುದನ್ನು ಕೆಲ ದಿನವಾದರೂ ನಿಲ್ಲಿಸಬೇಡವೇ.ಹಾಗಾದರೆ ಯಾವಾಗ. ಅವಳು ರಜಸ್ವಲೆಯಾದ ದಿನ. ಈಗ ಅವಳು ರಜಸ್ವಲೆ. ತಿಂಗಳ ಮುಟ್ಟು. ಹಾಗಾಗಿ ಅವಳಿಗೆ ವಿಶ್ರಾಂತಿ ಬೇಕು.ನಾವು ಜಗಳವನ್ನು ಈ 3 ದಿನ ನಿಲ್ಲಿಸಲೇಬೇಕು. ಅದಕ್ಕಾಗಿ ನಮ್ಮೂರಿನ ಜನ ಇದನ್ನು ಕೆಡ್ಡಾಸ ಎಂಬ ಆಚರಣೆಯ ಮೂಲಕ ಮೂರು ದಿನ ಭೂಮಾತೆಯ ಪೂಜೆ ಮಾಡುತ್ತಾರೆ.ಯಾವೊಂದು ಕೆಲಸವೂ ಮಾಡುವುದಿಲ್ಲ.

ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆಯೇ ಈ ಕೆಡ್ಡಾಸ.ಈ ತುಳುನಾಡು ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತ್ತು
ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗಳನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದಿದೆ.




ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.ಈ ದಿನಗಳಲ್ಲಿ ಭೂಮಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು. ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು.

ಕೆಡ್ಡಸದ 3 ಅಥವಾ 4ನೇ ದಿನ ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ 7 ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ.

ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುವಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆ ಹಸಿರು ಜೀವ.

ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ.

ಇದರ ಜೊತೆ ಜೊತೆಗೇ ಈ ಬಾರಿ ಕೃಷಿ ಬಜೆಟ್ ಕೂಡಾ ಇದೆಯಂತೆ. ಹಾಗಾಗಿ ಈ ಬಾರಿ ಭುವಿಗೆ ಗರ್ಭಪಾತವಾಗುತ್ತೋ , ಗಂಡು ಮಗುವಾಗುತ್ತೋ , ಹೆಣ್ಣು ಮಗುವಾಗುತ್ತೋ ಅಥವಾ ಬಂಜೆಯಾಗುತ್ತೋ ನೋಡಬೇಕು.

ಕಾಮೆಂಟ್‌ಗಳಿಲ್ಲ: