02 ಫೆಬ್ರವರಿ 2011

ಕಾಡುವ ಜಾತ್ರೆ. . !

ಕನ್ನಡ ಹಬ್ಬ ಈಗ ಆರಂಭವಾಗತೊಡಗಿದೆ.ಪ್ರತೀ ತಾಲೂಕುಗಳಲ್ಲೂ ಕನ್ನಡದ ಜಾತ್ರೆ ನಡೆದಿದೆ , ನಡೆಯುತ್ತಿದೆ. ಈಗ ನಾಡಿನ ದೊಡ್ಡ ಹಬ್ಬಕ್ಕೆ ಸಿದ್ದತೆ ನಡೆಯುತ್ತಲೇ ಇದೆ. ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡದ ಜಾತ್ರೆಯ ವೇಳೆಗೆ ಏನಾದರೊಂದು ಅವಸ್ವರ ಇದ್ದೇ ಇರುತ್ತದೆ ಎಂದು ಮೊನ್ನೆ ನಾವು ಮಾತನಾಡುತ್ತಿದ್ದೆವು. ಇದುವರೆಗಿನ ಒಂದೇ ಒಂದು ಕನ್ನಡ ಜಾತ್ರೆಯಲ್ಲಿ ನೆಗೆಟಿವ್ ಅಂಶಗಳು ಹೆಚ್ಚು ಹೈಲೈಟ್ ಆಗದೇ ಇದ್ದದ್ದು ಇದೆಯಾ?. ಬಹುಶ: ಇಲ್ಲ. ಇದ್ಯಾಕೆ ಹೀಗೆ?. ಯಾಕೆ ಅದೇ ಅಂಶಗಳು ಹೆಚ್ಚು ಫೋಕಸ್ ಆಗುತ್ತೆ?. ಬಹುಶ: ನಮ್ಮ ಮನಸ್ಥಿತಿಯೇ ಇದಕ್ಕೆ ಕಾರಣ ಅನ್ನೋ ದಾರಿಯ ಕಡೆಗೆ ಕೊನೆಗೆ ಹೆಜ್ಜೆ ಹಾಕಿದೆವು.

ತಾಲೂಕು ಮಟ್ಟದ ಕನ್ನಡ ಜಾತ್ರೆಯಲ್ಲೂ ಇದೇ ಕಾಣುತ್ತದೆ. ಇಲ್ಲೂ ವರ್ಗ , ಜಾತಿ , ಅಂತಸ್ತು, ವೈಯಕ್ತಿಕ ವರ್ಚಸ್ಸು ಇದೆಲ್ಲಾ ಪರಿಗಣನೆಯಾಗುವುದರ ಜೊತೆಗೆ ಗ್ರೂಪಿಸಂ ಕೂಡಾ ಇದೆ. ಇಲ್ಲೇ ಇಷ್ಟು ಗುಂಪುಗಾರಿಕೆ ನಡೀತಿರಬೇಕಾದರೆ ರಾಜ್ಯಮಟ್ಟದಲ್ಲಿ ಇದೆಲ್ಲಾ ಇಲ್ಲದೇ ಇರೋದಿಕ್ಕಾಗುತ್ತಾ ಅಂತ ನಮ್ಮಲ್ಲೇ ಇನ್ನೊಂದು ಪ್ರಶ್ನೆ ಎದ್ದಿತು.ಅದೂ ಹೌದು ಬಿಡಿ. ಅದಲ್ಲಾ ಇರಲಿ ಇನ್ನೂ ಇದೆ , ಅಲ್ಲಿ ಊಟ ಸರಿ ಇಲ್ಲ , ಮಲಕ್ಕೊಳ್ಳೋಕೆ ಹಾಸಿಗೆ ಇಲ್ಲ , ಇಂತಹದ್ದೆಲ್ಲಾ ಚಿಕ್ಕ ಚಿಕ್ಕ ವಿಷಯಗಳೂ ಕೆಲವೊಮ್ಮೆ ಫೋಕಸ್ ಆಗುವುದೂ ಇದೆ.ಅದೇ ವೇಳೆ ಅಲ್ಲೇ ಆ ಕಡೆಗಿನ ವೇದಿಕೆಯಲ್ಲಿ ಒಂದೊಳ್ಳೆ ವಿಚಾರ ಇರುತ್ತೆ ಅದಕ್ಕೆ ಬೆಳಕೇ ಬರೋದಿಲ್ಲ. ಒಂದರ್ಥದಲ್ಲಿ ನಮಗೆ ಅದೇ ವಿಚಾರಗಳು ಇಷ್ಟವಾಗುತ್ತೆ.ಅದಕ್ಕಾಗೇ ಅಲ್ಲವೇ ನಮ್ಮಲ್ಲಿ ಬರೋ ಕನ್ನಡ ಧಾರವಾಹಿಗಳ ಪೈಕಿ ಹುಳುಕು , ಹಲ್ಲೆ ,ಮನೆಯೊಳಗಿನ ಕದನ ಇಷ್ಟವಾಗೋದು. ಅಂದರೆ ನಮ್ಮ ಮನಸ್ಥಿತಿ ಅಲ್ಲಿನ ನೆಗೆಟಿವ್ ಅಂಶಗಳತ್ತಲೇ ಸೆಳೆದುಕೊಳ್ಳುತ್ತೆ.ಹಾಗಾಗೇ ಕನ್ನಡ ಜಾತ್ರೆಗಳ ನೆಗೆಟಿವ್ ಅಂಶಗಳೇ ಹೆಚ್ಚು ಪ್ರತಿಫಲನವಾಗುತ್ತೆ.

ಆದರೆ ಇದು ನಮ್ಮಲ್ಲಿ ಮಾತ್ರಾ. ಅದೇ ಪಕ್ಕದ ಕೇರಳದಲ್ಲಿ ಹಾಗಿಲ್ಲ.ಅಲ್ಲಿನ ಜನ ಇಂತಹ ಸಾಂಸ್ಕೃತಿಕ ಉತ್ಸವಗಳು, ಕಲಾಪ್ರಾಕಾರಗಳು, ಸಾಹಿತ್ಯ ವಿವಾರಗಳಲ್ಲಿ ಗುಂಪುಗಾರಿಕೆ ಮಾಡೋಲ್ಲ.ಆತ ಯಾರೇ ಇರಲಿ ರಾಜಕೀಯ ರಹಿತವಾಗಿ ಎಲ್ಲರೂ ದುಡಿಯುತ್ತಾರೆ. ಹೇಗೆ ಬೇಕೋ ಹಾಗೆ ಆ ಕಾರ್ಯಕ್ರಮವನ್ನು ನಡೆಸಿಕೊಂಡು ಹೋಗುತ್ತಾರೆ. ಅದು ಮಾತ್ರಾ ಅಲ್ಲ, ನೋಡಿ ನಮ್ಮಲ್ಲಿ ಎಷ್ಟು ಗಡಿ ಸಮಸ್ಯೆಗಳು ಅತ್ತ ಬೆಳಗಾವಿ , ಇತ್ತ ಕಾಸರಗೋಡು , ಅಲ್ಲಿ ಕಾವೇರಿ ಇಲ್ಲಿ ಕೃಷ್ಣಾ . . . ಹೀಗೇ ಒಂದೇ ದೇಶ , ಹಲವು ರಾಜ್ಯ ನೂರಾರು ಸಮಸ್ಯೆ. ಅದಕ್ಕಾಗಿ ಹೀಗೇ ಭಾಷಾವಾರು ಪ್ರಾಂತ ಮಾಡುವ ಬದಲು ಇಡೀ ದೇಶ ೪ ಭಾಗಗಳಾಗಿ ಆಡಳಿತ ನಡೆಸಿದ್ದರೆ ಚೆನ್ನಾಗಿತ್ತು.ಯಾವುದೇ ಭಾಷೆ , ರಾಜ್ಯಕ್ಕಾಗಿ ಜಗಳವೇ ಇರುತ್ತಿರಲಿಲ್ಲ. ಹಾಗೊಂದು ಅಂಬೋಣ ಬಿಡಿ.

ಅಷ್ಟಕ್ಕೂ ಈ ಬಾರಿಯ ಸಾಹಿತ್ಯ ಜಾತ್ರೆಯಲ್ಲಿ ಏನೇನೆಲ್ಲಾ ಅಸಮಾಧನಗಳು ಹೊರಬರುತ್ತೋ , ಯಾವ್ಯಾವ ಚಾನೆಲ್ಲಿನವರು , ಯಾವ್ಯಾವ ಪೇಪರಿನವರು ಹೇಗೆ ಕವರೇಜ್ ಮಾಡುತ್ತಾರೋ , ಯಾರ್‍ಯಾರು ಬಂಡಾಯ ಏಳೂತ್ತಾರೋ , ಯಾರ್‍ಯಾರ ಅಪಸ್ವರಕ್ಕೆ ಬೆಲೆ ಬರುತ್ತೋ ನೋಡಬೇಕು. ಅಷ್ಟಕ್ಕೂ ಈ ಅಪಸ್ವರ ತೆಗೆಯೋದು ಪ್ರಚಾರಕ್ಕಾಗಿಯೋ ಏನೋ?. ಅದನ್ನು ಪ್ರಚಾರ ಮಾಡೋವವರು ನೋಡಿಕೊಳ್ಳಬೇಕು.

ಯಾಕಂದ್ರೆ ಇತ್ತೀಚೆಗೆ ಮೂಡಬಿದ್ರೆಯ ಸಾಹಿತ್ಯ ಜಾತ್ರೆಯಲ್ಲಿ ಅಂತಹದ್ದೇ ಒಂದು ಇಶ್ಯೂ ಮಾಡಲು ಪ್ರಯತ್ನ ಪಟ್ಟಿದ್ದರು. ಯಾರು ಗೊತ್ತಾ?. ಪ್ರಚಾರ ಮಾಡುವವರೇ..!, ಕಾರಣ ಗೊತ್ತಾ? ಮೂರು ದಿನ ಸುಮ್ಮನೆ ಕುಳಿತುಕೊಳ್ಳಬೇಕಲ್ಲ ಅಂತ, ಮತ್ತೆ ನಾಲ್ಕು ದಿನಕ್ಕೆ ಇದೇ ಇಶ್ಯೂ ಆಗುತ್ತಲ್ಲಾ ಅಂತ . ! ಅನ್ನೋದು ಹಲವರ ಅಭಿಮತ. ಕನ್ನಡಕ್ಕಾಗಿ ಒಂದೇ ಒಂದು ರೀತಿಯಲ್ಲೂ ದುಡಿಯದ ಜನ ಕನ್ನಡಕ್ಕಾಗಿ ದುಡಿಯುವ ಜನರ ಬಗ್ಗೆ ಯಾಕೆ ಹಾಗೆ ಮಾಡುತ್ತಾರೆ ಗೊತ್ತಿಲ್ಲ. ಹುಳುಕುಗಳು ಇರಬಹುದು ಇಲ್ಲಾ ಅಂತಲ್ಲ , ಆದರೆ ಹಾಗೆ ದುಡಿಯುವುದು ಕೂಡಾ ದೊಡ್ಡ ಕೆಲಸವೇ.

ಈ ಬಾರಿ ಒಳ್ಳೆಯದನ್ನೇ ಕೇಳೋಣ , ಒಳ್ಳೆಯದನ್ನೇ ಓದೋಣ. ಸಾಹಿತ್ಯಕ್ಕಾಗಿ , ಕನ್ನಡಕ್ಕಾಗಿ ಈ ಅಕ್ಷರಕ್ಕಾಗಿ.

ಕಾಮೆಂಟ್‌ಗಳಿಲ್ಲ: