16 ಜನವರಿ 2011

ಇವನಿಗೆ ಹಳ್ಳಿ ಇಷ್ಟ ಯಾಕಂತೆ ?

ಮೊನ್ನೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತೆ ಅಂದಾಗಲೂ ಆತ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಮೊನ್ನೆ ಮೊನ್ನೆ ಹಾಲಿನ ದರ ಸ್ವಲ್ಪ ಏರಿಕೆಯಾಗಿತ್ತು , ಈಗ ಇನ್ನೂ ಏರಿಕೆಯಾಗುತ್ತಂತೆ ಅಂದಾಗಲೂ ಆತ ಆ ಬಗ್ಗೆ ಚಕಾರವನ್ನೇ ಎತ್ತಿಲ್ಲ.ಎಲ್ಲದಕ್ಕೂ ಆತ ಹೇಳುತ್ತಿದ್ದುದು, “ನನ್ನ ಹಳ್ಳಿ ನಂಜೊತೆಗಿದೆ” ಅಂತ.

ಇದು ಏರಿಕೆಯ ಕಾಲಘಟ್ಟ. ಮೊನ್ನೆ ಮೊನ್ನೆ ಹಾಲಿನ ದರ ಏರಿಕೆಯಾಗಿತ್ತು , ಈಗ ಮತ್ತೆ ಪೆಟ್ರೋಲ್ ದರ ಏರಿಕೆಯಾಗಿದೆ , ತರಕಾರಿ ಬೆಲೆ ಬಗ್ಗೆ ಮಾತಾಡೋ ಹಾಗಿಲ್ಲ , ನೀರುಳ್ಳಿ ಕಣ್ಣುರಿ ತರಿಸುತ್ತೆ , ಅಕ್ಕಿ ಬೆಲೆಯೂ ಏರು ಹಾದಿಯಲ್ಲಿದೆ.ಎಲ್ಲವೂ ಕೈಗೆಟಕದ ಹಾಗಿದೆ. ನಗರದಲ್ಲಿ ಸಾಮಾನ್ಯ ಸಂಬಳ ಪಡೆಯೋ ನೌಕರನ ತಲೆಯೂ ಇದೆಲ್ಲದರ ಜೊತೆಗೆ ಬಿಸಿಯಾಗುತ್ತಿದೆ.ತಿಂಗಳ ಅಂತ್ಯಕ್ಕೆ ಲೆಕ್ಕ ಹಾಕಿದಾಗ , ಮನೆ ಬಾಡಿಗೆ ,ಗ್ಯಾಸ್‌ಗೆ ,ತರಕಾರಿ , ದಿನಸಿ , ಇದರ ಜೊತೆಗೆ ದೈನಂದಿನ ಖರ್ಚು ಎಲ್ಲಾ ಲೆಕ್ಕ ಹಾಕಿದಾಗ ಈ ಚಳಿಯಲ್ಲೂ ಮೈ ಬೆವರುತ್ತದೆ. ಯೋಚನೆ ಇನ್ನೂ 5 ವರ್ಷಗಳ ನಂತರಕ್ಕೆ ಓಡುತ್ತದೆ.ಅಷ್ಟು ದೂರಕ್ಕೆ ನೆನಪಿಸಿಕೊಳ್ಳಲಾಗುವುದಿಲ್ಲ ಎನ್ನುತ್ತಾನೆ.ಈ ನಡುವೆ ಇನ್ನೊಮ್ಮೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.ಕಚೇರಿಗೆ ದಿನವೂ ಮೋಟಾರ್ ಬೈಕಲ್ಲೋ , ಕಾರಲ್ಲೋ ಹೋಗಿಯೇ ರೂಢಿ.ಈಗ ಪೆಟ್ರೋಲ್ ಬೆಲೆ ಏರಿದೆ ಅಂತ ಅದನ್ನು ನಿಲ್ಲಿಸಲಾಗುತ್ತೆಯೇ?. ಅದು ಇನ್ನೊಂದು ತಲೆ ಬಿಸಿ. ಈ ನಡುವೆ ಹಾಲಿಗೂ ಇನ್ನೂ ಬೆಲೆ ಏರುತ್ತಂತೆ. ರೈತರಿಗೆ ಕೊಡಲು, ಅಂತಾರೆ ಅವರು.ಅದಕ್ಕೂ ಮೊನ್ನೆ ಟಿವಿ ಚಾನೆಲ್ಲಿನಲ್ಲಿ ಚರ್ಚೆಯಾಗುತ್ತಿತ್ತು.ರೈತರ ಹೆಸರಲ್ಲಿ ಕಂಪನಿ ಹಣ ಮಾಡುತ್ತಿದೆ , ಸರಕಾರ ಏದಾರೂ ರೈತರಿಗೆ ಮಾಡಬೇಕು , ಗ್ರಾಹಕ ವಲಯ ದೊಡ್ಡದಿದೆ ಅವರಿಗೂ ಹೊರೆಯಲ್ಲವೇ ಅಂತ ಹೇಳುತ್ತಿದ್ದರು.ಆದರೆ ಅವರಿಗೇನು ಗೊತ್ತು ಈ ರೈತರ ಕಷ್ಠ.ಒಂದು ದಿನ ಹಾಲು ತಡವಾದರೆ ಬೊಬ್ಬಿಟ್ಟು ಗೊತ್ತೇ ವಿನ: ,ಬೆಳಗ್ಗೆ ನಾಲ್ಕೋ ಐದೋ ಗಂಟೆಗೆ ಎದ್ದು ಹಸುಗಳಿಗೆ ತಿನ್ನಲು ಕೊಟ್ಟು ಹಾಲು ಕರೆದು ಎರಡೋ ಮೂರೋ ಕಿಲೋ ಮೀಟರ್ ದೂರ ನಡೆದು ಹೋಗಿ ಸಹಕಾರ ಸಂಘಗಳಿಗೆ ಹಾಲು ಹಾಕಿ ಅಲ್ಲಿನ ಸಿಬ್ಬಂದಿಯ ಕಿರಿ ಕಿರಿ ಕೇಳಿ ಮನೆಗೆ ಬರೋ ಆ ಹೈನುಗಾರನ ಪಾಡು ಅವನಿಗೇ ಗೊತ್ತು.

ಈಗ ಅದಲ್ಲ , ಅಲ್ಲಿ ಬೆಲೆ ಏರಿಕೆಯ ಬಗ್ಗೆ ತಲೆಗೊಬ್ಬರಂತೆ ಮಾತಾಡೋವಾಗ ಆತ ಇಲ್ಲಿ ಹೇಳುತ್ತಾನೆ , ನನಗೇನು ಬೆಲೆ ಏರಿಕೆಯಾಗಲಿ. ಯಾವುದು ಪೆಟ್ರೋಲ್ ಬೆಲೆ ಏರಿಕೆಯಾ ?. ನನಗೇನು ಚಿಂತೆ , ದಿನಕ್ಕೊಮ್ಮೆ ಸ್ವಲ್ಪ ರಿಲ್ಯಾಕ್ಸ್ ಇರಲಿ ಅಂತ ಪೇಟೆಗೆ ಹೋಗುತ್ತಿದ್ದೆ , ಇನ್ನು ಹೋಗೋದಿಲ್ಲ. ಹೊಲಕ್ಕೆ ಒಂದು ಸುತ್ತು ಹೆಚ್ಚು ಹೊಡೀತೇನೆ. ಇನ್ನು ಹಾಲಿನ ಬಗ್ಗೆ ತಲೇನೇ ಕೆಡಿಸಿಕೊಳ್ಳೋದಿಲ್ಲ , ನನ್ನದೇ ಹಸು ಇದೆ. ನಾನೇ ಇರಿಸಿಕೊಳ್ಳುತ್ತೇನೆ. ಗ್ಯಾಸ್ ನಮಗೆ ಬೇಡವೇ ಬೇಡ ಗೋಬರ್ ಗ್ಯಾಸ್ ಇದೆ. ಬೆಳಗ್ಗೆ ಬಿಸಿ ನೀರು ಸ್ನಾನ ಮಾಡಲು ಗ್ಯಾಸ್ , ಕರೆಂಟ್ ನೋಡೋದೇ ಇಲ್ಲ. ನಮ್ಮ ತೋಟದಲ್ಲಿ ಸಿಗೋ ಕಸ ಕಡ್ಡಿಯೇ ಸಾಕು , ಇನ್ನು ತರಕಾರಿ ಬಗ್ಗೆ ಹೇಳೋದಾದ್ರೆ , ಶುದ್ದವಾದದ್ದು , ರಾಸಾಯನಿಕ ಸಿಂಪಡಿಸದೇ ಇದ್ದದ್ದು ನಾನೇ ನನ್ನ
ಹೊಲದಲ್ಲಿ ಬೆಳೆಯುತ್ತೇನೆ ,ಇನ್ನು ಅಕ್ಕಿಯೂ ನಾನೇ ಬೆಳೀತೇನೆ. ಹಣಕ್ಕಾಗಿ , ರಬ್ಬರ್ ಇದೆ , ಅಡಿಕೆ ಇದೆ.ರಬ್ಬರ್ ರೇಟಂತೂ ೨೦೦ ರ ಗಡಿ ದಾಟಿದೆ.ಯಾರದ್ದೂ ಕಿರಿಕಿರಿ ಇಲ್ಲ. ಈಗ ಬೇಕಾದ್ರೂ ನಾನು ಮಲಗಿ ನಿದ್ರಿಸುತ್ತೇನೆ.ಕೇಳೋರು ಯಾರೂ ಇಲ್ಲ.ಅದೆಲ್ಲದಕ್ಕೂ ಮುಖ್ಯವಾಗಿ ಶುದ್ದ ಗಾಳಿ , ನೀರು ಸಿಗುತ್ತೆ ಅನ್ನೋದೇ ಇವನಿಗೆ ಖುಷಿ.




ಆದ್ರೆ ಇವನಿಗೂ ಒಂದು ಸಮಸ್ಯೆ ಇದೆಯಂತೆ, ತೋಟದ ಕೆಲಸ ಮಾಡೋಕೆ ಜನ ಸಿಕ್ತಾ‌ಇಲ್ಲ , ಆದ್ರೆ ಇದಕ್ಕೆ ಈಗ ಯೋಚನೆ ಮಾಡಿದ್ದಾನೆ , ಎಲ್ಲಕ್ಕೂ ಯಂತ್ರ ಬಳಸಿಕೊಳ್ತಾನೆ. ಇನ್ನೊಂದು ಸಮಸ್ಯೆ ಅಂದ್ರೆ ಕಾಡು ಪ್ರಾಣಿಗಳದ್ದು. ತೋಟಕ್ಕೆ ಬಂದ್ರೆ ಎಲ್ಲವನ್ನೂ ನಾಶ ಮಾಡಿ ಹಾಕುತ್ತದೆ. ಅದಕ್ಕಾಗಿ ಸಾಕಷ್ಟು ಎಚ್ಚರ ವಹಿಸಿಕೊಳ್ತಾನೆ , ಆದ್ರೂ ಮಂಗಗಳು ಮಾತ್ರಾ ಬಂದೇ ಬರ್ತಾವೆ ಅಂತಾನೆ ಆತ.

ಇದೇ ಒಂದೆರಡು ಸಮಸ್ಯೆ ಮಾತ್ರಾ ಇದ್ದು ಅಷ್ಟೂ ಒಳ್ಳೆಯ ವಾತಾವರಣ ಇರುವಾಗ ನಾನ್ಯಾಕೆ ನನ್ನ ಹಳ್ಳಿಯನ್ನು ಹೀಯಾಳಿಸಲಿ , ಅದು ಯಾವತ್ತೂ ನಂಜೊತೆನೇ ಇದೆ.ಅದಕ್ಕಾಗಿ ನಾನೇನಾದರೂ ಮಾಡಬೇಕು.ಇಲ್ಲಿರೋ ಜನರಿಗೆ ಏನಾದರೂ ಮಾಡಬೇಕು. ಅಂತ ಆತ ಯಾವಾಗಲೂ ಹೇಳುತ್ತಾ ಇರುತ್ತಾನೆ. ಈ ಬೆಲೆ ಏರಿಕೆಯ ಮಾತು ಬಂದಾಗಲೆಲ್ಲಾ ಆತ ನಿರುಮ್ಮಲವಾಗಿರುತ್ತಾನೆ.

ಕಾಮೆಂಟ್‌ಗಳಿಲ್ಲ: