15 ಜನವರಿ 2011

ಇವನಿಗಾರು ಗತಿ ?

ಏನು ಕತೆ ಸ್ವಾಮಿ?. ಈ ತೆಂಗಿನ ಕಾಯಿಗೆ ರೇಟು?. ನಿನ್ನೆ ಹತ್ತು ರುಪಾಯಿ ಇತ್ತು ಇವತ್ತು ನೋಡಿದ್ರೆ ಹದಿನೈದಾಗಿದೆ. ! ಏನು ಕತೆ ಇದು ? ಅಂತ ಗ್ರಾಹಕ ಬೊಬ್ಬಿಡುತ್ತಾನೆ.

ಇತ್ತ ರೈತ ಹೇಳ್ತಾನೆ ಏನ್ ಸ್ವಾಮಿ ತೆಂಗಿನ ಕಾಯಿಗೆ ರೇಟು ಏರ್ತಾನೆ ಇದೆ.ಆದ್ರೆ ನಮ್ಮಲ್ಲಿ ತೆಂಗಿನ ಕಾಯಿನೇ ಇಲ್ಲ. ಏನು ಅವಸ್ಥೆನೋ ಏನೋ ಮಂಗಗಳೆಲ್ಲಾ ಎಳೆ ಕಾಯನ್ನೇ ತೆಗೆದು ಹಾಳು ಮಾಡ್ತಾವೆ.ಕಾಯಿನೇ ಸಿಗೋದಿಲ್ಲ ಅಂತ ಆತ ತಲೆ ಮೇಲೆ ಕೈ ಹಿಡ್ಕಳ್ತಾನೆ.

ಆಗ ಅಲ್ಲೊಬ್ಬ ಹೇಳ್ತಾನೆ, ನೋಡಣ್ಣ ನೀನ್ ಹಂಗೆ ಕೂತ್ರೆ ಆಗಾಕಿಲ್ಲ , ಮಂಗ ಬರೋ ಹಾದಿಲಿ ಒಂದು ಬಾಳೆ ಗೊನೆ ಇಡು. ಅದ್ಕೆ ಒಂಚೂರು ವಿಷಾನೂ ಹಾಕಿಡು ಅದು ಮತ್ತೆ ಬರೋದೇ ಇಲ್ಲ ಅಂತಾನೆ ಆತ. ವಿಚಾರ ಇರೋದೇ ಇಲ್ಲಿ. ಮಂಗ ಬರುತ್ತೆ ಅಂತ ಆ ರೈತ ವಿಷ ಇಕ್ಕಿ ಆ ಮಂಗಗಳನ್ನು ಕೊಲ್ತಾನೆ. ಆ ನಂತ್ರ ಬೆಳೆನೂ ಸಿಗುತ್ತೆ , ಬೆಲೆನೂ ಇರುತ್ತೆ.

ಮೊನ್ನೆ ಮೊನ್ನೆ ಅಂತಹದ್ದೇ ಇನ್ನೊಂದು ಘಟನೆ ಇತ್ತು ನೋಡಿ ,ಅಲ್ಲೊಂದು ಆನೆ ಕರೆಂಟ್ ಶಾಕ್‌ನಿಂದ ಸತ್ತೇ ಹೋಯಿತಂತೆ.ಎಂತಾ ದುರಂತ ಮಾರಾಯ್ರೆ. ಹೀಗಾಗಬಾರದಿತ್ತು.

ನಿಜಕ್ಕೂ ಹಾಗಾಗಬಾರದಿತ್ತು.ಅದೊಂದು ಕಾಡುಪ್ರಾಣಿ.ಜೀವಜಾಲದ ಕೊಂಡಿಗಳಲ್ಲಿ ಅದೂ ಒಂದು. ಹೀಗೇ ಒಂದೋಂದೇ ಪ್ರಾಣಿ ಸತ್ತರೆ ಜೀವಜಾಲದ ಕೊಂಡಿ ತಪ್ಪೋದ್ರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಅಲ್ಲಿ ವಿದ್ಯುತ್ ಹರಿಸಿದವನಿಗೆ ಶಿಕ್ಷೆ ಆಗಲೇ ಬೇಕು ಅಂತ ಮನಸ್ಸಿನೊಳಗೇ ಹೇಳಲೇಬೇಕಾಗುತ್ತದೆ.

ಆದರೆ ಇದೆಲ್ಲಾ ಒಂದು ಮುಖ. ಅದರ ಹಿಂದೆ ಇನ್ನೊಂದು ಮುಖ ಇದೆ.

ಅಲ್ಲಿ ಯಾಕಾಗಿ ವಿದ್ಯುತ್ ಹರಿಸಲಾಗಿತ್ತು?.ಅಲ್ಲೂ ಕೂಡಾ ಸಮಸ್ಯೆ ಇದೇ ಆನೆಯದ್ದು. ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡೋವಾಗ ಅಷ್ಟೂ ಪ್ರೀತಿಯಿಂದ ಬೆಳೆದ ಬೆಳೆ ನಾಶವಾಗೋವಾಗ ಯಾರು ತಾನೆ ಸುಮ್ಮನಿರ್ತಾನೆ ಹೇಳಿ. ಹಾಗೆ ಆತ ಅಲ್ಲೂ ಒಂದು ರಕ್ಷಣೆಗೆ ಮುಂದಾದ. ಆನೆ ಜೀವ ತೆತ್ತಿತು.

ಎಲ್ಲಾ ಕಡೆ ರೈತನಿಗೆ ಇರೋ ಸಮಸ್ಯೆ ಇದೆ.ಸರಕಾರ ಏನೋ ರೈತರ ಪರ ಅಂತೆಲ್ಲಾ ಹೇಳುತ್ತಿದ್ದರೂ ಅವನ ಗೋಳು ಮಾತ್ರಾ ಮುಗಿಯೋದೇ ಇಲ್ಲ.ಒಂದು ಕಡೆ ಬೆಳೆ ಬೆಳೆಯಲು ಅದೆಷ್ಟೋ ವಿಘ್ನಗಳು.ಬೆಳೆ ಬಂದರೆ ಮಾರಾಟದ ಸಮಸ್ಯೆ. ಅದೆಲ್ಲಾ ಆಗೋ ಹೊತ್ತಿಗೆ ಆತ ಸುಸ್ತೋ ಸುಸ್ತು. ಹೊಲದಲ್ಲಿ ಹುಲುಸಾಗಿ ಪೈರು ಬಂದಿದೆ ಅಂದ ಕೂಡಲೇ ಆನೆಗಳ ಹಿಂಡು ಕಾಲಿಡುತ್ತದೆ.ಒಮ್ಮೆ ಆನೆ ನುಗ್ಗಿದರೆ ಅದಷ್ಟೂ ಬೆಳೆಯನ್ನು ಆಪೋಶನ ತೆಗೆದುಕೊಳ್ಳಯುತ್ತದೆ. ಹಾಗಾಗಿ ಆ ಬೆಳೆಯ ರಕ್ಷಣೆ ಆಗಲೇಬೇಕು. ಅದು ಹೇಗೆ?, ಆನೆಗೆ ಸರಿಯಾದ ವ್ಯವಸ್ಥೆ ಮಾಡಿ ಅಂತ ಸರಕಾರಕ್ಕೆ ಹೇಳಿದರೂ ಕೇಳಿಸೋದೇ ಇಲ್ಲ. ಹಾಗಾದ್ರೆ ಇನ್ನೇನು ದಾರಿ ಅಂತ ಯೋಚಿಸುವಾಗ ,ಆತನಿಗೆ ಕಾಣುವ ಸುಲಭ ದಾರಿಯನ್ನು ಆತ ಆಯ್ಕೆ ಮಾಡುತ್ತಾನೆ. ಹಾಗಾಗಿ ಸರಕಾರವೇ ರೈತರ ಇಂತಹ ಸಮಸ್ಯೆ ನಿವಾರಣೆ ವ್ಯವಸ್ಥೆ ಮಾಡಬೇಕೇ ವಿನ: ಇನ್ಯಾವುದೇ ಅನ್ಯ ದಾರಿ ಇಲ್ಲ. ಮಂಗಗಳದ್ದೂ ಅದೇ ಕಾಟ. ಕಾಡಿನ ಆಹಾರವನ್ನು ಬಿಟ್ಟು ನಾಡಿಗೆ ಬಂದದ್ದೇ ತಡ , ಎಳ ತೆಂಗಿನಕಾಯಿ , ಅಡಿಕೆ ಹೀಗೇ ಎಲ್ಲವನ್ನೂ ನಾಶ ಮಾಡಿ ಓಡಿ ಬಿಡುತ್ತದೆ. ಅದನ್ನು ತಡೆಯೋದಾದರೂ ಹೇಗೆ?. ಹಾಗಾಗಿ ರೈತರು ಬೆಳೆ ರಕ್ಷಣೆಗೆ ಏನಾದರೊಂದು ದಾರಿ ನೋಡಬೇಕಾಗುವುದು ಅನಿವಾರ್ಯ. ಆಗ ಇಂತಹ ದುರಂತಗಳು ನಡೆಯುತ್ತದೆ.

ಕಾಮೆಂಟ್‌ಗಳಿಲ್ಲ: