11 ಅಕ್ಟೋಬರ್ 2010

ಕೆಂಪು ಸಂಕ - 3

ಅಂದು ಬೆಳಗ್ಗೆ ಮೋಡಗಳ ಸಂದಿನಿಂದ ಸೂರ್ಯ ಉದಯಿಸುತ್ತಾ ಇದ್ದ.ದೂರದ ಕುಮಾರಪರ್ವತದಲ್ಲಿ ಅದೇನೋ ಕೆಂಪು ಉಂಡೆಯ ಹಾಗೆ ಸೂರ್ಯ ಹೊಳೆಯುತ್ತಾ ಇದ್ದ. ಹಾಗಾಗಿ ಸೂರ್ಯನ ಬೆಳಕು ಹರಿಯುವಾಗಲೇ ಲೇಟಾಯಿತು.

ಯಾವಾಗಲೂ ನಸುಕಿನ ಹೊತ್ತಲ್ಲೇ ಹಾಸಿಗೆ ಬಿಡುವ ವೆಂಕಪ್ಪನಿಗೆ ಅಂದು ಮಾತ್ರಾ ಸೂರ್ಯರಶ್ಮಿ ಬಂದ್ದದ್ದು ಗೊತ್ತಾಗಲೇ ಇಲ್ಲ.ಹಾಸಿಗೆಯಿಂದ ಹಾಗೇ ಹೊರಗೆ ನೋಡುವಾಗ ಬೆಳಕು ಹರಿದಿತ್ತು. ತುರಾತುರಿಯಲ್ಲಿ ಎದ್ದ ವೆಂಕಪ್ಪನಿಗೆ ತಟ್ಟನೆ ನೆನಪಾದದ್ದು ನಿನ್ನೆ ರಾತ್ರಿ ನಡೆದ ಘಟನೆ. ಅದೇನು. . ? ಅದೇನು . .? ಎಂಬ ಭಯವಿಶ್ರಿತ ಕುತೂಹಲ. ಮತ್ತೊಮ್ಮೆ ಹಣೆ ವರೆಸಿಕೊಂಡ ವೆಂಕಪ್ಪ ಹಾಗೇ ಒಂದು ಬೀಡಿಯನ್ನೂ ಹಚ್ಚಿಕೊಂಡು ಮನೆಯ ಹೊರಗಿನ ಮಣ್ಣಿನ ಕಟ್ಟೆಯಲ್ಲಿ ಕುಳಿತುಕೊಂಡು ದೂರದ ಕಾಡಿನ ಕಡೆಗೆ ದೃಷ್ಠಿ ಹಾಯಿಸಿ ಯೋಚಿಸುತ್ತಾ ಕುಳಿತಿದ್ದ. ಸಮಯ ಹೋದದ್ದೇ ಗೊತ್ತಾಗಲಿಲ್ಲ. ವೆಂಕಪ್ಪನ ಪತ್ನಿ ಪಾರ್ವತಿ ಬಂದು, “ಏನ್ರೀ ಕೆಲಸಕ್ಕೆ ಹೋಗೋದಿಲ್ವಾ” ಅಂತ ಕೇಳಿದಾಲೇ ಸಮಯದ ಕಡೆಗೆ ಕಣ್ಣು ಹಾಯಿಸಿದ್ದು.

ಆಗ ಗಂಟೆ ಎಂಟು ಆಗುತ್ತಾ ಬಂದಿತ್ತು. ಛೆ . . ಇನ್ನು ಕೆಲಸಕ್ಕೆ ಹೋಗೋದು ಬೇಡ ಅಂತ ರಜೆ ಮಾಡಿದ.ಬೆಳಗಿನ ಕಾಫಿ ಕುಡಿದ ಮೇಲೆ ತೋಟದಲ್ಲೊಂದು ಸುತ್ತು ಹಾಕಿದ ವೆಂಕಪ್ಪ ಮನೆಗೆ ಬಂದಾಗ ಗಂಟೆ ಸುಮಾರು 10 ಆಗುತ್ತಾ ಬಂದಿತ್ತು. ಮತ್ತೆ ನಿನ್ನೆ ರಾತ್ರಿಯ ಘಟನೆಯನ್ನೇ ತಲೆಯಲ್ಲಿ ತುಂಬಿಕೊಂಡು ಕಮಿಲದ ಕಡೆಗೆ ಹೋದ.ಕಮಿಲದಲ್ಲಿ ಕೆಲಸವೇನೂ ಇದ್ದಿರಲಿಲ್ಲ.ಆದರೂ ಅತ್ತ ಕಡೆ ಹೆಜ್ಜೆ ಹಾಕಿದ.ಕಮಿಲದ ಪೇಟೆಯಲ್ಲಿ ಪೋಸ್ಟ್ ಆಫೀಸಿಗೆ ಹೋಗಿ , ಚನ್ನಣ್ಣನ ಅಂಗಡಿಯ ಬದಿಯ ಬಸ್ ಸ್ಟ್ಯಾಂಡಿನಲ್ಲಿ ಕುಳಿತಿದ್ದ.ಅಷ್ಟೊತ್ತಿಗೆ ಲಕ್ಷ್ಮಣನೂ ಬಂದ ಇನ್ನು ಸ್ವಲ್ಪ ಹೊತ್ತಿಗೆ ನೀಲಪ್ಪನೂ ಬಂದ. ಹೋ. . , ಕೆಲಸಕ್ಕೆ ಹೋಗಿಲ್ವಾ ಅಂತ ಮಾತನಾಡಿಕೊಂಡರು.ಮೂವರಿಗೂ ನಿನ್ನೆ ರಾತ್ರಿಯ ಘಟನೆಯಿಂದಾಗಿ ಬೆಳಗೆ ಏಳುವಾಗಲೇ ಲೇಟಾಗಿತ್ತು ಹಾಗಾಗಿ ಕೆಲಸಕ್ಕೆ ಹೋಗಿರಲೇ ಇಲ್ಲ.ಕಮಿಲಕ್ಕೆ ಬಂದು ಒಂದು ಪ್ಯಾಕೇಟು ಹಾಕಿ ಹೋಗೋಣ ಅಂತ ಯೋಚಿಸಿಯೇ ಎಲ್ಲರೂ ಕಮಿಲಕ್ಕೆ ಬಂದಿದ್ದರು.ಆದರೆ ಒಬ್ಬರಿಗೊಬ್ಬರು ಮಾತನಾಡಿಕೊಂಡಿರಲಿಲ್ಲ.ಆಗ ಎಲ್ಲಾ ಮನೆಗಳಲ್ಲಿ ಫೋನುಗಳೂ ಇದ್ದಿರಲಿಲ್ಲ, ಊರಲ್ಲಿ ಒಂದೆರಡು ಮನೆಯಲ್ಲಿ ಮಾತ್ರಾ ಫೋನು ಇತ್ತು.ಊರ ಜನ ಬೇಕಾದ್ರೆ ಅರ್ಜೆಂಟ್ ಇದ್ರೆ ಅಲ್ಲಿಗೆ ಹೋಗಿ ಮಾತನಾಡಿ ಬರಬೇಕು.

ಮತ್ತೆ ಕಮಿಲದಲ್ಲಿ ಎಲ್ಲರೂ ಜೊತೆಯಾದ್ರು. ಬಸ್‌ಸ್ಟ್ಯಾಂಡಿನಲ್ಲಿ ಕುಳಿತಿದ್ದಾಗ ಅಂಗಡಿಯ ಚನ್ನಣ್ಣ ವೆಂಕಪ್ಪನಲ್ಲಿ ಕೇಳಿದ , ಏನು ಇವತ್ತು ರಜೆಯಾ ? , ಕೆಲಸಕ್ಕೆ ಹೋಗಿಲ್ವಾ . ? ಅಂತ ಪ್ರಶ್ನೆ ಮಾಡಿದರು.ಇಲ್ಲ ಇವತ್ತು ರಜೆ ಅಂದ ವೆಂಕಪ್ಪ. ಅದಲ್ಲ ಏನು ಮೂರು ಜನಾ ಇದ್ದೀರಲ್ಲ ? ಏನಾದ್ರೂ ಇರಬಹುದು, ಅಂತ ಮಾಮೂಲಿ ತಮಾಷೆ ಭಾಷೆಯಲ್ಲಿ ಕೇಳಿದ ಚನ್ನಣ್ಣ , ಯಾಕೆಂದ್ರೆ ಎಲ್ಲಿಗೇ ಹೋಗಲಿ ಈ ಮೂವರೂ ಜೊತೆಯಾಗೇ ಹೋಗೋದು ಅನ್ನೋ ಮಾತೊಂದು ಕಮಿಲದಾದ್ಯಂತ ಆವತ್ತು ಸುದ್ದಿಯಲ್ಲಿದ್ದ ಸಂಗತಿ.ಹಾಗಾಗಿ ಕುತೂಹಲದಿಂದಲೇ ಕೇಳಿದ್ದ ಚನ್ನಣ್ಣ. ಹಾಗೇನಿಲ್ಲ . . ಹಾಗೇನಿಲ್ಲ. . . ಸುಮ್ಮನೆ . . .ಸುಮ್ಮನೆ . . .ಅಂತ ಹೇಳಿದ್ರು ಈ ಮೂವರು. ಹೀಗೆ ಕುಶಲೋಪರಿ , ತಮಾಷೆ ಎಲ್ಲಾ ಮಾತನಾಡುತ್ತಿದ್ದಂತೆಯೇ ಒಂದೆರಡು ಜನ ಬಸ್ ಸ್ಟ್ಯಾಂಡಿಗೆ ಬಂದ್ರು , ಗುತ್ತಿಗಾರಿಗೆ ಹೋಗುವವರು ಅವ್ರು.ಆಗ ಬಾಳುಗೋಡು ಬಸ್ಸು ಬರುವ ಹೊತ್ತಾಗಿತ್ತು. ಸಮಯ ಇದೆ ಎಂದು ಮಾತನಾಡುತ್ತಾ ಇರುವಂತೆ ಮಾತಿನ ನಡುವೆ ಕೆಂಪುಸಂಕದ ಬಗ್ಗೆಯೂ ಪ್ರಸ್ತಾಪವಾಯಿತು. ಅಲ್ಲಿ ಹೋಗೋದಿಕ್ಕೆ ಎಲ್ಲರೂ ಹೆದರ್ತಾರೆ ಅಂತ ಚನ್ನಣ್ಣ ಹೇಳಿದ. ಅಷ್ಟೊತ್ತಿಗೆ ನಿನ್ನೆ ರಾತ್ರಿ ತಮಗಾದ ಅನುಭವವನ್ನು ಬಿಚ್ಚಿಟ್ಟ ವೆಂಕಪ್ಪ ಅದಕ್ಕೆ ಧ್ವನಿ ಸೇರಿಸಿದ ಲಕ್ಷ್ಮಣ. ನೀಲಪ್ಪ ನಾನು ಬೊಬ್ಬಿಟ್ಟೆ ಅಂತ ಮೊಂಡು ಧೈರ್ಯ ಪ್ರದರ್ಶಿಸಿದ್ದನ್ನು ಚನ್ನಣ್ಣನ ಮುಂದೆ ಹೇಳಿಕೊಂಡ.ಚನ್ನಣ್ಣನಿಗೆ ಇದೆಲ್ಲಾ ಕೇಳುತ್ತಿದ್ದಂತೆ ಹಣೆಯಲ್ಲಿ ನೀರು ಜಿನುಗುವುದಕ್ಕೆ ಶುರುವಾಯಿತು.ಒಮ್ಮೆ ಮುಖ ಒರಸಿಕೊಂಡ ಚನ್ನಣ್ಣ, ಅಲ್ಲಾ ಮೊನ್ನೆ ಗಂಗಾ ಭಟ್ಟರು ಮತ್ತು ಚಂದ್ರ ಭಟ್ಟರು ಹೋಗುವಾಗ ನಡೆದ ಸಂಗತಿಯ ನಂತರ ಹೆದರಿಕೆಯಾಗುತ್ತಿತ್ತು ಈಗ ನಿಮಗೆ ಆದ ಅನುಭವ ಹೌದಾ ?. ಅಂತ ಆತಂಕದಿಂದಲೇ ಕೇಳಿದ. ನಿಜ . ನಿಜ .. ಅಂತ ಹೇಳುವಾಗ ಮೂವರ ಮಾತಿನಲ್ಲೂ ಆತಂಕ ಕಾಣುತ್ತಿತ್ತು. ಹಾಗಾದ್ರೆ ಅದೆಂತ ಮಾರಾಯಾ . ? ಅಂತ ಚನ್ನಣ್ಣ ಪ್ರಶ್ನೆ ಕೇಳುತ್ತಿದ್ದ , ಇದಕ್ಕೆ ಒಬ್ಬರು ಅದು “ಪ್ರೇತ” ಅಂದ್ರೆ ಇನ್ನೊಬ್ಬರು “ರಣ” ಅಂದ್ರು ಮತ್ತೊಬ್ಬರು ಅದು “ಬ್ರಹ್ಮರಾಕ್ಷಸ” ಅಂದ್ರು.ಅಂತೂ ಕೆಂಪು ಸಂಕದ ಬಗ್ಗೆ ಭಯ ಇನ್ನಷ್ಟು ಹೆಚ್ಚಾಯಿತು. ಅಷ್ಟೊತ್ತಿಗೆ ಬಾಳುಗೋಡು ಬಸ್ಸು ಬಂತು. ಬಸ್ ಸ್ಟ್ಯಾಂಡಿನಲ್ಲಿದ್ದವರೆಲ್ಲಾ ಗುತ್ತಿಗಾರಿಗೆ ಹೋದವರು.ಚನ್ನಣ್ಣನಿಗೂ ಅಂಗಡಿಗೆ ಜನ ಬಂದ್ರು. ಈ ಮೂವರು ಆಚೆ ಸೀತಣ್ಣನ ಅಂಗಡಿಗೆ ಹೋಗಿ ತೊಟ್ಟೆ ಬಿಸಿ ಏರಿಸಿ ಮನೆಗೆ ಬಂದರು. ಆದ್ರೆ ಚನ್ನಣ್ಣನಿಗೆ ಇದೊಂದು ಹೊಸ ವಿಷಯವಾಯಿತು.ಅಂಗಡಿಗೆ ಬಂದವರಿಗೆಲ್ಲಾ ಈ ಕೆಂಪುಸಂಕದ ಹೊಸ ವಿಷಯವನ್ನು ಹೇಳಿದ ಮತ್ತು ಅದು ಏನಾಗಿರಬಹುದೆಂಬ ಚರ್ಚೆ ಶುರುವಾಯಿತು.ಒಬ್ಬೊಬ್ಬರು ಒಂದೊಂದು ಉತ್ತರ ಹೇಳುತ್ತಿದ್ದರು.

* * * * * * * * * * * * * * * * * * * * * * * * * * * *

ಕಾಮೆಂಟ್‌ಗಳಿಲ್ಲ: