10 ಫೆಬ್ರವರಿ 2009

ಭೂಮಿ ಋತುಮತಿಯಾಗಿದ್ದಾಳೆ........

ಸೃಷ್ಠಿಯ ಮೂಲ ಹೆಣ್ಣು. ಹೆಣ್ಣನ್ನು ಭೂಮಿ, ಪ್ರಕೃತಿ ಹೀಗೆ ಎಲ್ಲೆಂದರಲ್ಲಿ ಕಂಡರು ನಮ್ಮ ಪೂರ್ವಜರು.ಕಾರಣ ಒಂದು ಸೃಷ್ಠಿಯು ಹಿಂದೆ ಹೆಣ್ಣು ಇದ್ದೇ ಇರುತ್ತಾಳೆ ಇರಲೇಬೇಕು.ಪ್ರಕೃತಿ, ಭೂಮಿಯೂ ಹಾಗೆಯೇ.ಯಾವುದೇ ಬೆಳೆಗಳ ಸೃಷ್ಠಿಗೆ ಭೂಮಿ ಪ್ರಕೃತಿ ಬೇಕೇ ಬೇಕು.ಹಾಗಾಗಿ ಇಂದಿಗೂ ತುಳುನಾಡಿನಲ್ಲಿ ಕೆಡ್ಡಸದ ಆಚರಣೆಗಳು ಮಹತ್ವ ಪಡೆದಿದೆ. ಭೂಮಿಯನ್ನು ಕೂಡಾ ಹೆಣ್ಣೆಂಬ ಭಾವನೆಯಿಂದ ಕಾಣಲಾಗುತ್ತದೆ. ಈಗ ಅವಳು ಋತುಮತಿಯಾಗಿದ್ದಾಳೆ. ಅಂದರೆ ಸೃಷ್ಠಿಗೆ ಸಿದ್ಧಳಾಗಿದ್ದಾಳೆ ಎಂದರ್ಥ.ಮುಂದಿನ ತಿಂಗಳು ಬೆಳೆಗಳೆಲ್ಲಾ ಕಟಾವಿಗೆ ಸಿದ್ಧವಾಗುತ್ತದೆ. ಈ ಸಂಭ್ರಮವನ್ನು ತುಳು ನಾಡಿನ ಜನ ಕೆಡ್ಡಾಸ ಎಂದು ಕರೆಯುತ್ತಾರೆ. ವರ್ಷ ಪೂರ್ತಿ ಭೂಮಿಯೊಂದಿಗೆ ದುಡಿದು,ಸರಸವಾಡಿ ಈಗ ಭೂಮಿಯನ್ನು ಅರಾಧಿಸುವ ಒಂದು ವಿಶಿಷ್ಠ ಆಚರಣೆ.

ತುಳು ನಾಡು ವಿವಿಧ ಆಚರಣೆಗಳ ಮೂಲಕ ತನ್ನದೇ ಆದ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದೆ.ಇಲ್ಲಿನ ಆಚರಣೆಗಳೆಲ್ಲವೂ ವಿಶಿಷ್ಠವಾಗಿದೆ ಮತು ಅದರ ಹಿಂದೆ ಒಂದು ವೈಜ್ಞಾನಿಕ,ಭಾವನಾತ್ಮಕ ಸಂಬಂಧಗಳೂ ಇರುತ್ತದೆ.ಇಲ್ಲಿ ಸಾಮಾನ್ಯವಾಗಿ ಸಾಮೂಹಿಕವಾದ ಹಬ್ಬಗಳ ಆಚರಣೆಗಳೇ ಹೆಚ್ಚು ಪ್ರತಿಬಿಂಬಿತವಾಗುತ್ತದೆ.ಹೆಚ್ಚ ಆಪ್ಯಾಯಮಾನವಾಗುತ್ತದೆ. ಮಾತ್ರವಲ್ಲ ಎಲ್ಲಾ ಆಚರಣೆಗಳೂ ಕೃಷಿ ಹಾಗೂ ಬೇಸಾಯದ ಮತ್ತು ಪ್ರಕೃತಿ ಮೂಲದಿಂದ ಬಂದ ಆಚರಣೆಗಳೇ ಆಗಿದೆ.ಭೂಮಿಯನ್ನು ಹೆಣ್ಣೆಂದು ಕಂಡು ಅವಳಿಗೆ ಪೂಜೆ ಮಾಡುವ ಸಂಪ್ರದಾಯ ಇಲ್ಲೂ ಇದೆ. ಈಗ ಅವಳು ಋತುಮತಿಯಾಗುತ್ತಾಳೆ ಅದಾದ ಬಳಿಕ 3 ಅಥವಾ 4 ದಿನಗಳ ಕಾಲ ಅವಳು ಮೈಲಿಗೆಯಲ್ಲಿರುತ್ತಾಳೆ ನಂತರ ಪರಿಶುದ್ಧಳಾಗುತ್ತಾಳೆ ಎಂಬುದನ್ನು ಈ ಆಚರಣೆ ಪ್ರತಿಬಿಂಬಿಸುತ್ತದೆ. ಹೆಣ್ಣು ಋತುಮತಿಯಾಗುವುದು ಎಂದರೆ ಸೃಷ್ಠಿ ಕ್ರಿಯೆಗೆ ಅಣಿಯಾಗುವುದು ಎಂದಾದರೆ ಭೂಮಿ ಯಾವ ಸೃಷ್ಠಿ ಕ್ರಿಯೆಗೆ ಅಣಿಯಾಗುತ್ತಾಳೆ ಎಂಬುದು ಕೂಡಾ ಈ ಆಚರಣೆಯಿಂದ ತಿಳಿಯುತ್ತದೆ.ಶರದೃತುವಿನಲ್ಲಿ ಸಸ್ಯಶ್ಯಾಮಲೆಯಾಗಿ ಕಾಣುವ ಇಳೆ ನಂತರ ಮಾಸದಲ್ಲಿ ತನ್ನೆಲ್ಲಾ ಎಲೆಗಳನ್ನು ಉದುರಿಸಿ ಕೊಂಡು ಬೋಳು ಬೋಳಾಗಿ ಪ್ರಕೃತಿ ಕಾಣುತ್ತದೆ ನೋಡುವುದಕ್ಕೆ ಬಂಜೆಯಾಗುತ್ತಾಳೆ. ಮತ್ತೆ ವಸಂತ ಮಾಸ ಬಂದಾಗ ಹಸಿರು ಹಸಿರಾಗಿ ಭೂಮಿ ಸೊಂಪಾಗಿ ಕಾಣುತ್ತದೆ.ಅನೇಕ ಬದಲಾವಣೆಗಳು ಆಗುತ್ತವೆ.ಈ ವೈಜ್ಞಾನಿಕ ಬದಲಾವಣೆಗಳನ್ನು ತನಗೆ ಬದಲಾಯಿಸಲು ಆಗದೆ ,ವಿಚಿತ್ರವನ್ನು ಅರಿಯಲು ಸಾಧ್ಯವಾಗದೇ ಇದ್ದಾಗ ತನ್ನದೇ ಆದ ರೀತಿಯಲ್ಲಿ ಕಲ್ಪಸಿಕೊಂಡ ಮನುಷ್ಯ ಭೂಮಿಗೂ ಕಲ್ಪನೆಗನ್ನು ಮಾಡಿಕೊಂಡ. ಅದಕ್ಕನುಗುಣವಾಗಿ ಋತುಶಾಂತಿ ಇತ್ಯಾದಿಗಳು ನಡೆಯಬೇಕು ಎಂದು ಕಲ್ಪಸಿಕೊಂಡು ಇಂತಹ ಆಚರಣೆಗಳನ್ನು ಬೆಳೆಸಿಕೊಂಡು ಬಂದ.ಇಂದು ಈ ಆಚರಣೆಗೆಳು ಯುವ ಪೀಳೆಗೆಗೆ ಅರಿವಿಲ್ಲದೇ ದೂರ ಸಾಗುತ್ತಿದೆ.ತುಳುವಿನ ಪೊನ್ನಿ ತಿಂಗಳಲ್ಲಿ ಅಂದರೆ ಜನವರಿ - ಫೆಬ್ರವರಿ ತಿಂಗಳಲ್ಲಿ ಗಿಡಮರಗಳು ಎಲೆಗಳನು ಉದುರಿಸಿ ಬೋಳಾಗಿ ಕಾಣುತ್ತದೆ.ಇದು ಭೂಮಿ ತಾಯಿಯ ಮುಟ್ಟಿನ ದಿನ ಎಂದು ನಂಬಿದ ಜನ ಈ ಅವಧಿಯಲ್ಲಿ ಲೆಕ್ಕ ಹಾಕಿ ಸಂಕ್ರಮಣದ ಸಮೀಪದ 3 ಅಥವಾ 4 ದಿನಗಳ ಕಾಲ ಮುಟ್ಟಿನ ದಿನವೆಂದು ತುಳುವರು ಕರೆದರು. ಈ ಕಾಲವನ್ನು ಕೆಡ್ಡಾಸ ಎಂಬುದಾಗಿ ಕರೆದರು.

ಸಾಮಾನ್ಯವಾಗಿ ಈ ಕೆಡ್ಡಸ ಆಚರಣೆಯು 3 ಅಥವಾ 4 ದಿನಗಳ ಕಾಲ ನಡೆಯುತ್ತದೆ. ಈ ದಿನವನ್ನು ಹೇಳಲು ಸ್ಥಳಿಯ ಭೂತನರ್ತಕರು ಮನೆ ಮನೆಗೆ ಹೋಗಿ ಕೆಡ್ಡಾಸದ ಆಚರಣೆಗಳನ್ನು ಹೇಳುತ್ತಾರೆ.ಅವರು ವಿವರಿಸುತ್ತಾ ಭೂಮಿ ಈ ದಿನಗಳಲ್ಲಿ ಅದುರಬಾರದು, ಹಸಿ ಗಿಡಗಳನ್ನು ಕಡಿಯಬಾರದು ಒಣ ಮರಗಳನ್ನು ತುಂಡರಿಸಬಾರದು , ಬೇಟೆಗೆ ಹೋಗಬೇಕು, ಭೂಮಿ ಅದುರಬಾರದು ಎಂದು ವಿವರಿಸುತ್ತಾರೆ ..ಒಟ್ಟಿನಲ್ಲಿ ಭೂಮಿಯನ್ನು ಯಾವುದೇ ರೀತಿಯಿಂದ ಹಾನಿ ಮಾಡಬಾರದು ಎನ್ನವುದು ಇವರ ಸಾರಾಂಶ. ಈ ಸಂದರ್ಭದಲ್ಲಿ ಮನೆಯೊಡತಿ ಆತನಿಗೆ ಎಣ್ಣೆ, ಉಪ್ಪು, ಮೆಣಸು,ಹುಳಿ ಇತ್ಯಾದಿಗಳನ್ನು ನೀಡುತ್ತಾಳೆ. ಭೂತನರ್ತಕ ತನಗೆ ಸಿಕ್ಕ ಎಣ್ಣೆಯಲ್ಲಿ ಒಂದು ಚೂರು ಭೂಮಿಗೆ ಬಿಟ್ಟುಮನೆಯಲ್ಲಿ ನೀಡಿದ ಸಾಮಾಗ್ರಿಗಳನ್ನು ಪಡೆದು ಮುಂದೆ ಸಾಗುತ್ತಾನೆ. ಇದಾದ ಬಳಿಕ ಕೆಡ್ಡಾಸದ ಒಂದನೇ ದಿನದಂದು ಮನೆ ಆವರಣಗಳನು ಸ್ವಚ್ಚಗೊಳಿಸಿ ಅಕ್ಕಿಯಿಂದ ಮಾಡಿದ ತಿಂಡಿಯನ್ನು ತಯಾಯಾರಿಸುತ್ತಾರೆ.ಇದಕ್ಕೆ 7 ಬಗೆಯ ಧಾನ್ಯವನ್ನು ಬೆರೆಸಲಾಗುತ್ತದೆ.ಈ ತಿಂಡಿಯನನು ನನ್ಯರಿ ಅಥವಾ ತಂಬಿಟ್ಟು ಎಂದು ಕೆರೆಯಲಾಗುತ್ತದೆ. ಏಕೆಂದರೆ ಹೆಣ್ಣು ರಜಸ್ವಲೆಯಾದಾಗ ಅವಳಗೆ ಪೌಷ್ಠಿಕಾಂಶವುಳ್ಳ ಆಹಾರ ಬೇಕು ಎನ್ನುವುದರ ಸಂಕೇತವಿದು. ತುಳಸಿ ಕಟ್ಟೆಯ ಬಳಿ ಭೂಮಿತಾಯಿಯ ಆರಾಧನೆಗೆ ಪ್ರತ್ಯೇಕ ಜಾಗವನ್ನು ವರ್ತುಲಾಕಾರದಲ್ಲಿ ನಿಗದಿಗೊಳಿಸುತ್ತಾರೆ.ಇಲ್ಲಿ ಭೂದೇವಿಗೆ ವಸ್ತ್ರ, ಗೆಜ್ಜೆ,ಕತ್ತಿ,ಕಲಶ, ಇತ್ಯಾದಿಗಳ ಸಹಿತ, ಅರಶಿನ, ಕುಂಕುಮಗಳನ್ನೂ ಇರಿಸಲಾಗುತ್ತದೆ.ಆ ಬಳಿಕ ಬಾಳೆ ಎಲೆಯಲ್ಲಿ ಭೂಮಿತಾಯಿಗೆ ತಿಂಡಿಯನು ಇರಿಸಲಾಗುತ್ತದೆ.ನಂತರ 2 ನೇ ದಿನ ಮಹಿಳೆಯರು ಬೇಟೆಗೆ ಹೋಗುವ ಪದ್ಧತಿ ಇದೆ ಎಂಬ ವಾಡಿಕೆಯಿದೆ.ಪುರುಷರು ಕೂಡಾ ಬೇಟೆ ಇನ್ನಿತರ ಕಾರ್ಯಗಳಿಗೆ ಹೋಗುತ್ತಾರೆ.ಇದೇ ದಿನ ಕೋಳಿ ಅಂಕವೂ ನಡೆಯುವ ಸಂಪ್ರದಾಯವಿದೆ.ಕೋಲಿ ಅಂಕಕ್ಕೆ ಹೋಗದೇ ಇರುವವರು ಒಟ್ಟು ಸೇರಿ ಇತರ ಆಟಗಳನ್ನಾಡುವ ನಿಯಮವಿದೆ.ಕೆಡ್ಡಸದ 3 ಅಥವಾ 4 ನೇದಿನ ಭೂಮಿ ತಾಯಿಯ ಆರಾಧನೆಗೆ ಮೀಸಲಿಟ್ಟ ಜಾಗದಲ್ಲಿ ಅಂದರೆ ತುಳಸಿ ಕಟ್ಟೆಯ ಬಳಿಯಲ್ಲಿ ವಿವಿಧ ಜಾತಿಯ ಮರಗಳ ೭ ಎಲೆಗಳನ್ನು ಇರಿಸಿ ಭೂಮಿ ತಾಯಿ ಪರಿಶುದ್ದಳಾಗಲು ಅರಶಿನ , ಕುಂಕುಮ, ಹಾಲು,ಇತ್ಯಾದಿಗಳನ್ನು 5 ಅಥವಾ 7 ಮಂದಿ ಮುತ್ತೈದೆಯರು ಭೂಮಿಗೆ ಪ್ರೋಕ್ಷಣೆ ಮಾಡುತ್ತಾರೆ.ನಂತರ ನಮಸ್ಕರಿಸಿ ಎಲ್ಲರೂ ಒಟ್ಟಿಗೆ ಸೇರಿ ಊಟ ಉಪಹಾರಗಳನ್ನು ಮಾಡುತ್ತಾರೆ.

ಹೀಗೆ ಒಂದು ಸೃಷ್ಠಿ ಕ್ರಿಯೆಯ ಮೊದಲ ಭಾಗವನ್ನು ಭುಮಿಯಲ್ಲೂ ಕಾಣುವ ಈ ಸಂಪ್ರದಾಯವು ಅತ್ಯಂತ ವಿಶಿಷ್ಠವಾಗಿ ಕಾಣುತ್ತದೆ.ತುಳು ನಾಡಿನ ಬಹುತೇಕ ಆಚರಣೆಗಳೆಲ್ಲವೂ ಕೃಷಿಯನ್ನು ಅವಲಂಬಿಸಿಕೊಂಡೇ ಇರುತ್ತದೆ.ಅಂದರೆ ಭೂಮಿ ವರ್ಷಕ್ಕೊಮ್ಮೆ ಋತುಮತಿಯಾದರೆ ಪ್ರಕೃತಿಗೆ ವರ್ಷಕ್ಕೊಮ್ಮೆಹಸಿರು ಜೀವ..ಈಗ ಮತ್ತೆ ಪ್ರಕೃತಿ ಹಸಿರು ಹಸಿರಾಗಿ, ಮುಂಜಾನೆಯ ಮುಂಜಾವಿಗೆ ಮೈಯೊಡ್ಡಿ ನಿಂತಿದ್ದಾಳೆ .ಈ ಸೊಬಗ ಆಸ್ವಾದಿಸಲು , ಅದನ್ನು ಸ್ವಾಗತಿಸಲು ಮಂದಿಯೆಲ್ಲ ಕಾತರರಾಗಿದ್ದಾರೆ ಎನ್ನಬಹುದು. ಇನ್ನೊಂದೆಡ ಮುಂದಿನ ತಿಂಗಳು ರೈತನ ಬೆಳೆಗಳೆಲ್ಲಾ ಕಟಾವಿಗೆ ಸಿದ್ದವಾಗುತ್ತದೆ. ಮಾತ್ರವಲ್ಲ ವರ್ಷಪೂರ್ತಿ ಭೂಮಿಗೆ ನೋವು ಕೊಡುತ್ತಿದ್ದರೆ ಈ ೪ ದಿನಗಳ ಕಾಲ ಭೂಮಿಯನ್ನು ನೆನೆಯಲು ಈ ಆಚರಣೆ ಎನ್ನಬಹುದು. ರಾಜ್ಯದ ವಿವಿದೆಡೆ ಇಂತಹ ಆಚರಣೆಯಿದೆ.. ಇದೆಲ್ಲವೂ ಕೂಡಾ ಪ್ರಕೃತಿ ಮತ್ತು ಕೃಷಿಯನ್ನು ಅವಲಂಬಿಸಿಕೊಂಡಿದೆ ಎಂಬುದು ಗಮನಾರ್ಹ. ಆದರೆ ಇಂದು ಅಂತಹ ಶ್ರೇಷ್ಠವಾದ ಕೃಷಿಯ ಏನಾಗಿದೆ.? ರೈತರ ಸ್ಥಿತಿ ಏನಾಗಿದೆ.? ಬೇಸಾಯ ಇತ್ಯಾದಿಗಳ ಬದಲು ವಾಣಿಜ್ಯ ಬೆಳೆಗಳು ಬಂದಿದೆ. ಹಳ್ಳಿಯ ಒಳ ಹೋದಂತೆ ಇನ್ನೊಂದು ಕೊಟ್ಟಾಯಂಗೆ ಹೋದಂತೆ ಅನಿಸಿದರೂ ತಪ್ಪಲ್ಲ.

4 ಕಾಮೆಂಟ್‌ಗಳು:

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಮಹೇಶ್, ಭೂಮಿ ತಾಯಿ, ಹೆಣ್ಣು, ಪೂಜನೀಯಳು...
ತುಂಬಾ ಚೆನ್ನಾಗಿ ಬರೆದಿರುವಿರಿ. ರೈತರು ಈಗ ಮೊದಲಿನಂತಿಲ್ಲ ಮತ್ತು ಅವರೊಂದು ವಿಷರ್ತುಲದೆಡೆಗೆ ದಾಪುಗಾಲಿಡುತ್ತಿದ್ದಾರೆ. ನೀವು ಸುಂದರವಾಗಿ ವರ್ಣಿಸಿರುವ ಆಚರಣೆಯ ಡಾಕ್ಯುಮೆಂಟ್ ಮಾಡಬೇಕು. ಇವು ಮುಂದಿನ ಜನಾಂಗಕ್ಕೆ ತೋರಿಸಬೇಕು. ಅಲ್ವಾ?

ಹರೀಶ ಮಾಂಬಾಡಿ ಹೇಳಿದರು...

keddasa vivarane chennagide

VENU VINOD ಹೇಳಿದರು...

ಮಹೇಶ್,

ಕೆಡ್ಡಾಸ ಬಗ್ಗೆ ಅರೆಬರೆ ತಿಳಿದಿತ್ತು...ಮಾಹಿತಿ ಪೂರ್ಣವಾದ ಬರಹ ನೀಡಿದ್ದೀರಿ..ಧನ್ಯವಾದ

ಮಹೇಶ್ ಪುಚ್ಚಪ್ಪಾಡಿ ಹೇಳಿದರು...

ಧನ್ಯವಾದಗಳು, ಮಂಜುನಾಥ್, ಮಾಂಬಾಡಿ, ಹಾಗೂ ವೇಣು ವಿನೋದ್ ಅವರಿಗೆ. ಮಂಜುನಾಥ್ ನೀವಂದಂತೆ ಈ ಆಚರಣೆಯ ಒಂದು ಡಾಕ್ಯುಮೆಂಟರಿ ಅಗತ್ಯವಾಗಿದೆ.ಈ ಬಗ್ಗೆ ನನ್ನ ಮಿತ್ರರಲ್ಲಿ ಮಾತನಾಡುವೆ. ವೇಣು ಸರ್ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.